ವಿಷಯಕ್ಕೆ ಹೋಗು

ಆರ್ಡ್ವುಲ್ಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಡ್ವುಲ್ಫ್

ಮಾಂಸಾಹಾರಿ ಸ್ತನಿ (ಪ್ರೊಟಿಲಿಸ್ ಕ್ರಿಸ್ಟೇಟಸ್). ನೆಲತೋಳ; ಇಳಾವ್ನಕ್ ದಕ್ಷಿಣ ಮತ್ತು ಪೂರ್ವ ಆಫ್ರಿಕ ದೇಶಗಳಲ್ಲಿ ವಾಸಿಸುತ್ತದೆ. ಆಕಾರದಲ್ಲಿ ಕತ್ತೆಕಿರುಬವನ್ನು ಹೋಲುತ್ತದೆ. ಆದರೆ ಹಿಂಗಾಲುಗಳು ಎತ್ತರವಾಗಿರುವುದರಿಂದ ತೋಳಕ್ಕಿಂತ ಎತ್ತರವಾಗಿ ನಿಲ್ಲುತ್ತದೆ. ಅದರ ಕೂದಲು ಹಳದಿ ಅಥವಾ ಕೆಂಪುಮಿಶ್ರ ಕಂದುಬಣ್ಣದಿಂದ ಕೂಡಿದ್ದು, ಒರಟಾಗಿ ಉಣ್ಣೆಯಂತಿರುತ್ತದೆ. ಎರಡು ಪಕ್ಕದಲ್ಲೂ ಆರು ಪಟ್ಟೆಗಳಿವೆ. ಬಾಲ ಸುಮಾರು ಉದ್ದವಾಗಿ ದಪ್ಪವಾಗಿರುತ್ತದೆ. ಕತ್ತಿನ ಮತ್ತು ಬೆನ್ನಿನ ಬಳಿ ಕೇಸರಿ ಕೂದಲು ಇದೆ. ಕತ್ತೆ ಕಿರುಬಕ್ಕಿಂತ ಇದರ ದವಡೆಗಳು ಬಲಹೀನವಾಗಿವೆ; ಮುಸುಡಿ ಮೊನಚಾಗಿದೆ; ಕಿವಿಗಳು ಇನ್ನೂ ಉದ್ದವಾಗಿವೆ. ಮಾಂಸಾಹಾರಿ ಮತ್ತು ಕೀಟಾಹಾರಿ; ಇದರ ಮುಖ್ಯ ಆಹಾರ ಗೆದ್ದಲು ಹುಳು, ನೊಣಗಳು, ಮರಿಹುಳುಗಳು ಮತ್ತು ಹಣ್ಣು. ನೆಲದಲ್ಲಿ ಹಳ್ಳತೋಡಿ ಅದರಲ್ಲಿ ವಾಸಿಸುತ್ತದೆ. ಇತರ ಹಳ್ಳವಾಸಿಗಳಂತೆ ಆರ್ಡ್ವುಲ್ಫ್ ತುಂಬ ಭಯಪಡುವ ಮತ್ತು ಹೇಡಿಯಾದ ಪ್ರಾಣಿ. ರಾತ್ರಿಸಂಚಾರಿಯಾದುದರಿಂದ ಇದು ಸಾಧಾರಣವಾಗಿ ಕಣ್ಣಿಗೆ ಬೀಳುವುದಿಲ್ಲ.