ಆರ್ಟಾಸಕ್ರೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರ್ಷಿಯದ ಅಕೇಮೆನಿಡೇ ರಾಜವಂಶದ ಮೂರು ದೊರೆಗಳ ಹೆಸರು. ಈ ಹೆಸರು ಆರ್ತಕ್ಷತ್ರ ಎಂಬ ಪರ್ಷಿಯನ್ ನಾಮಪದದ ಅಪಭ್ರಂಶ.

ಮೊದಲನೆಯ ಆರ್ಟಾಸಕ್ರೀಸ್[ಬದಲಾಯಿಸಿ]

ಪ್ರ.ಶ.ಪು. ೪೬೫-೪೨೪ರವರೆಗೆ ಪರ್ಷಿಯ ಸಾಮ್ರಾಜ್ಯವನ್ನಾಳಿದ. ತಂದೆ ಸಕ್ರೀಸ್; ತಂದೆಯನ್ನು ಕೊಂದ ಆರ್ಟಬಾಸಸ್ ಎಂಬ ಸೇನಾಧಿಪತಿಯನ್ನು ಕೊಲ್ಲಿಸಿ ಸೇಡು ತೀರಿಸಿಕೊಂಡ. ಅಕೇಮೆನಿಡೇ ಸಾಮ್ರಾಜ್ಯದ ಅವನತಿ ಇವನ ಕಾಲದಲ್ಲಿ ಪ್ರಾರಂಭವಾಯಿತೆಂದು ಕೆಲವರ ಅಭಿಪ್ರಾಯ. ಈಜಿಪ್ಟ್, ಬ್ಯಾಕ್ಟ್ರಿಯ ಮುಂತಾದ ಪ್ರಾಂತ್ಯಗಳಲ್ಲಿ ಪ್ರಾರಂಭವಾದ ದಂಗೆಗಳನ್ನಡಗಿಸುವುದು ಇವನಿಗೆ ಕಷ್ಟವಾಯಿತು. ಗ್ರೀಕರೊಂದಿಗೂ ನೌಕಾಯುದ್ಧ ನಡೆದು ಒಪ್ಪಂದದಲ್ಲಿ ಪರ್ಯವಸಾನಗೊಂಡಿತು. ರಾಜ್ಯಭಾರದಲ್ಲಿ ಅವನ ತಾಯಿಯ ಕೈವಾಡ ಹೆಚ್ಚಾಗಿ ಆಡಳಿತ ಸಡಿಲವಾಯಿತು.

ಎರಡನೆಯ ಆರ್ಟಾಸಕ್ರೀಸ್[ಬದಲಾಯಿಸಿ]

ಎರಡನೆಯ ಡೇರಿಯಸ್ಸನ ಮಗ. ಪ್ರ.ಶ.ಪು. ೪೦೪-೩೫೮ ರವರೆಗೆ ರಾಜ್ಯವನ್ನಾಳಿದ. ಆ ಪರ್ಷಿಯನ್ ಹೆಸರು ಆರ್ಡಾಷೇರ್. ಸಿಂಹಾಸನಕ್ಕೆ ಬಂದ ಕೆಲವೇ ದಿನಗಳಲ್ಲಿ ಕೈರಸ್ ದಂಗೆಯೆದ್ದು ಕುನಾಸ ಕದನದಲ್ಲಿ ಸೋತು ಮಡಿದ. ಆರ್ಟಾಸಕ್ರೀಸ್ ಆಡಳಿತ ಭಾರವನ್ನೆಲ್ಲ ಮುಖ್ಯಾಧಿಕಾರಿಗಳಿಗೆ ವಹಿಸಿದ್ದ. ಅಧಿಕಾರವೆಲ್ಲ ಮಾಂಡಲಿಕರಾಗಿದ್ದ ಫಾರ್ನಬಾಸಸ್ ಮತ್ತು ಟಿಸ್ಸಾಫರ್ನೆಸ್ರ ಕೈಯ್ಯಲ್ಲಿತ್ತು. ಅವರು ಗ್ರೀಕರಿಗೆ ಅಪಾರ ಹಣಕೊಟ್ಟು ಅವರ ನಗರರಾಜ್ಯಗಳನ್ನೆಲ್ಲ ತಮ್ಮ ಹತೋಟಿಯಲ್ಲಿಟ್ಟು ಕೊಂಡರು. ಆದರೆ ಸಾಮ್ರಾಜ್ಯದಲ್ಲೇ ಅಲ್ಲಲ್ಲಿ ಅಶಾಂತಿಯುಂಟಾಗಿ ಅವುಗಳನ್ನಡಗಿಸುವುದು ಕಷ್ಟವಾಯಿತು. ಆರ್ಟಾಸಕ್ರೀಸ್ ಕಾಲದಲ್ಲಿ ಪರ್ಷಿಯನ್ ಸೂರ್ಯದೇವತಾರಾಧನೆ ಹೆಚ್ಚಾಗಿ ಹರಡಿತು.

ಮೂರನೆಯ ಆರ್ಟಾಸಕ್ರೀಸ್[ಬದಲಾಯಿಸಿ]

ಎರಡನೆಯ ಆರ್ಟಾಸಕ್ರೀಸ್ ಮಗ. ಪ್ರ.ಶ.ಪು. ೩೫೮-೩೩೮ರವರೆಗೆ ಆಳಿದ. ಪರ್ಷಿಯನ್ ಹೆಸರು ಆರ್ಡಾಪೇರ್. ಸಿಂಹಾಸನಕ್ಕೆ ಬಂದಕೂಡಲೆ ತನಗೆ ವಿರೋಧಿಗಳಾಗಿದ್ದವರನ್ನೂ ಬಂಧುಬಳಗದವರನ್ನೂ ಕೊಲ್ಲಿಸಿದ. ರಾಜ್ಯಭಾರದಲ್ಲೂ ಕ್ರೂರಿ, ನಿರ್ದಯಿ. ತನ್ನ ಇಚ್ಛೆಗೆ ವಿರೋಧವಾಗಿ ವರ್ತಿಸಿದವರನ್ನು ಉಗ್ರವಾಗಿ ದಂಡಿಸುತ್ತಿದ್ದ. ಈಜಿಪ್ಟಿನ ಮೇಲೆ ನಡೆಸಿದ ದಂಡಯಾತ್ರೆಯಲ್ಲಿ ಅನೇಕ ನಗರಗಳನ್ನು ನೆಲಸಮ ಮಾಡಿ ಅಸಂಖ್ಯಾತ ಜನರನ್ನು ಕೊಲ್ಲಿಸಿದ. ಪುಂಡಾಟದ ಮಾಂಡಲಿಕರನ್ನು ತುಂಬ ಕ್ರೌರ್ಯದಿಂದ ಅಡಗಿಸಿದ. ಮಂತ್ರಿಗಳಲ್ಲೊಬ್ಬನಾದ ನಪುಂಸಕ ಬಗೋಅಸ್ ಕೊನೆಗೆ ಇವನಿಗೆ ವಿಷವಿಟ್ಟು ಕೊಂದ.