ಆರ್ಜಿತಗುಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಿ ಹುಟ್ಟಿದ ಮೇಲೆ ತನ್ನ ಪರಿಸರ ಮತ್ತು ಬುದ್ಧಿಶಕ್ತಿಯ ಬಳಕೆಯಿಂದ ಕಲಿಯುವ ಗುಣಗಳಿಗೆ ಈ ಹೆಸರಿದೆ. ಹುಟ್ಟುವಾಗಲೇ ಪಡೆದು ಬಂದವುಗಳಿಗೆ ಆನುವಂಶಿಕ ಗುಣಗಳೆಂದು ಹೆಸರು. ಶ್ರಮ ವಹಿಸಿ ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳುವ ಗುಣಗಳೇ ಆರ್ಜಿತ ಗುಣಗಳು. ಉದಾ: ಸಂಗೀತ, ಅಕ್ಷರಭ್ಯಾಸ, ವಿವಿಧ ಆಟಪಾಠಗಳು ಇತ್ಯಾದಿ. ಅಭ್ಯಾಸದ ಮೂಲಕ ಕಲಿತ ಒಂದು ಹೊಸ ಅಭ್ಯಾಸ ಅಥವಾ ಗುಣ ಕಲಿತ ಪ್ರಾಣಿಯಲ್ಲಿ ಮಾತ್ರ ಇರುವುದೊ ಅಥವಾ ಆ ಪ್ರಾಣಿಯ ಮಕ್ಕಳು, ಮೊಮ್ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವುದೊ ಎಂಬ ವಿಷಯ ಬಹಳ ಮುಖ್ಯವಾದುದು. ಒಬ್ಬ ವ್ಯಕ್ತಿ ವಿದ್ಯಾಭ್ಯಾಸದಲ್ಲಿ ಮುಂದುವರಿದಿದ್ದರೆ ಅವನ ವಿದ್ಯಾಭ್ಯಾಸದ ಫಲ ಆತನ ವಂಶವಾಹಿ ಕಣಗಳಲ್ಲಿ ಬದಲಾವಣೆಯನ್ನುಂಟು ಮಾಡಿ ಆತನ ಮಕ್ಕಳು, ಮೊಮ್ಮಕ್ಕಳು ಸಹ ಬೇಗ ವಿದ್ಯಾವಂತರಾಗುವುದು ಸಾಧ್ಯವಾದರೆ ಅವರಿಗೆ ಅಕ್ಷರಾಭ್ಯಾಸವೇ ಬೇಕಾಗುವುದಿಲ್ಲ. ಅಭ್ಯಾಸವಿಲ್ಲದೆ ಅವರು ಪುಸ್ತಕಗಳನ್ನು ಓದಬಹುದು. ಈ ವಿಧವಾಗಿ ಕಲಿತ ಗುಣಗಳು ಅನುವಂಶೀಯವಾದರೆ ಮಾನವ ಕೋಟಿ ಬಹು ಸುಲಭವಾಗಿ ಸಂಸ್ಕೃತಿಯ ಉನ್ನತಮಟ್ಟವನ್ನು ಪಡೆಯಲು ಸಾಧ್ಯ. ಆದ್ದರಿಂದ ೧೯ನೆಯ ಶತಮಾನದಲ್ಲಿ ಶಿಕ್ಷಣಶಾಸ್ತ್ರಜ್ಞರು ಈ ವಿಷಯವನ್ನು ಕುರಿತು ದೀರ್ಘ ಚರ್ಚೆ ನಡೆಸಿದರು. ಇದಕ್ಕೆ ಕಾರಣ ವಿಕಾಸವಾದದಲ್ಲಿ ಅವರಿಗೆ ಇದ್ದ ವಿಶೇಷ ಆಸಕ್ತಿ. ಫ್ರಾನ್ಸ್ ದೇಶದ ಶ್ರೇಷ್ಠ ಜೀವವಿಜ್ಞಾನಿಯಾದ ಲಾ ಮಾರ್ಕ್ (೧೭೪೪-೧೮೨೯) ೧೮೦೯ರಲ್ಲಿ ಜೀವವಿಕಾಸವನ್ನು ಕುರಿತು ಒಂದು ಆಧಾರಭಾವನೆಯನ್ನು ಮಾಡಿದ. ಈತನ ಪ್ರಕಾರ ಒಂದು ಪ್ರಾಣಿ ಅಭ್ಯಾಸದ ಮೂಲಕ ಒಂದು ಲಕ್ಷಣವನ್ನು ಪಡೆದರೆ ಆ ಲಕ್ಷಣ ಆವರಣಕ್ಕೆ ಅನುಗುಣವಾಗಿ ತನ್ನ ಜೀವನವನ್ನು ಸಾಗಿಸಲು ಸಾಧ್ಯವಾದರೆ ಆಗ ಆ ಲಕ್ಷಣ ಅನುವಂಶೀಯ ವಾಗಿ ಅದರ ಮಕ್ಕಳು, ಮೊಮ್ಮಕ್ಕಳಲ್ಲಿ ಕಾಣಿಸಿಕೊಂಡು ಅವು ಆ ಲಕ್ಷಣಗಳನ್ನು ಅಭ್ಯಾಸವಿಲ್ಲದೆಯೇ ಪ್ರಕೃತಿದತ್ತವಾಗಿ ಪಡೆಯುವದು ಸಾಧ್ಯ. ಈ ಮೂಲಕವೇ ಹೊಸ ಹೊಸ ಪ್ರಾಣಿಗಳು ಲೋಕದಲ್ಲಿ ಉತ್ಪನ್ನವಾಗುವುದಕ್ಕೆ ಸಾಧ್ಯವಾಯಿ ತೆಂದು ಲಾ ಮಾರ್ಕ್ ವಾದಿಸಿದ. ಉದಾಹರಣೆಗೆ, ಒಂದು ಗುಂಪಿನ ಜಿಂಕೆಗಳು ಅರಣ್ಯದಲ್ಲಿ ನೆಲೆದ ಮೇಲೆ ಹುಲ್ಲು ಸಿಕ್ಕದೆ ಕತ್ತೆತ್ತಿ ಮರದ ಎಲೆಗಳನ್ನು ತಿನ್ನುವುದಕ್ಕೆ ಪ್ರಾರಂಭಿಸುವುವು. ಹೀಗೆಯೇ ಕೆಲವು ವರ್ಷಗಳ ಕಾಲ ಸಂತಾನ ಪರಂಪರೆಯಾಗಿ ಮಾಡುತ್ತ ಹೋದುದರಿಂದ ಜಿರಾಫೆ ಪ್ರಾಣಿವರ್ಗ ಉಂಟಾಗಿರಬಹುದೆಂದು ಊಹಿಸಬಹುದು. ಇದೇ ವಿಧವಾಗಿ ಗಿಡ್ಡಾಗಿರುವ ಪಕ್ಷಿಗಳು ಆಳವಿಲ್ಲದ ನೀರಿನಲ್ಲಿ ಮೀನುಗಳನ್ನು ಹಿಡಿದು ತಿನ್ನುತ್ತಿದ್ದು ಆ ಪ್ರದೇಶದಲ್ಲಿ ಮೀನುಗಳು ಕಡಿಮೆಯಾದರೆ ಇನ್ನೂ ಸ್ವಲ್ಪ ಆಳದ ನೀರಿನಲ್ಲಿ ನಿಂತು ಮೀನನ್ನು ಹಿಡಿಯಲು ಪ್ರಯತ್ನಿಸುವುವು. ಹೀಗೆ ಪರಂಪರೆಯಾಗಿ ಮಾಡುತ್ತ ಹೋದರೆ ಗಿಡ್ಡಗಿರುವ ಪಕ್ಷಿ ಉದ್ದ ಕಾಲುಗಳನ್ನು ಪಡೆದು ಕ್ರೌಂಚ್ ಪಕ್ಷಿಯಾಗುವುದು ಸಾಧ್ಯ. ಆದರೆ ಲಾ ಮಾರ್ಕನ ಈ ಊಹೆ ನಿರಾಧಾರವೆಂದು ಅನೇಕ ಪ್ರಯೋಗಗಳ ಮೂಲಕ ವಿಶದವಾಯಿತು. ಚಾಲರ್ಸ್ ಡಾರ್ವಿನ್ (೧೮೦೯-೮೨) ಬೇರೆ ವಿಧವಾಗಿ ಜೀವವಿಕಾಸಕ್ಕೆ ಕಾರಣವನ್ನು ತೋರಿಸಿಕೊಟ್ಟ. ಮುಖ್ಯವಾಗಿ ಜರ್ಮನ್ ದೇಶದ ವೈಮಾನ್ (೧೮೩೪-೧೯೧೪) ತೋರಿಸಿಕೊಟ್ಟಿರುವ ಹಾಗೆ ಅನುವಂಶೀಯ ಜೀವವಾಹಿ ಕಣಗಳು ಬದಲಾವಣೆಯನ್ನು ಹೊಂದಿದರೆ ಮಾತ್ರ ಸಾಧ್ಯ. ಆರ್ಜಿತಗುಣಗಳು ಜೀವವಾಹಿನಿ ಕಣಗಳಲ್ಲಿ ಮಾರ್ಪಾಟನ್ನು ಉಂಟುಮಾಡಲಾರವು. ಆದ್ದರಿಂದ ಅವು ಅನುವಂಶೀಯವಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತ್ಯೇಕ ಅಭ್ಯಾಸಗಳನ್ನು ಸ್ವತಃ ಕಲಿಯಬೇಕಾಗುವುದು. ಹೀಗೆ ಕಲಿಯುವುದರಲ್ಲಿ ತಂದೆ ತಾಯಿಗಳು ವಿದ್ಯಾವಂತರಾದರೆ ಮಗುವಿನ ಪೋಷಣೆಯನ್ನು ಕ್ರಮಬದ್ದವಾಗಿ ಮಾಡಿ ಮಗು ಸ್ವಲ್ಪಕಾಲದಲ್ಲಿಯೇ ನಿಪುಣತೆಯನ್ನು ಪಡೆಯುವ ಹಾಗೆ ಸಹಾಯ ಮಾಡಬಹುದು. ಸ್ವಪ್ರಯತ್ನವಿಲ್ಲದೆ ಮಗು ಹೊಸ ಅಭ್ಯಾಸಗಳನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಆರ್ಜಿತಗುಣಪರಂಪರೆಯನ್ನುಳ್ಳ ವಂಶದಲ್ಲಿ ಮಕ್ಕಳು ಮೊಮ್ಮಕ್ಕಳ ಸಾಮಾನ್ಯ ಗ್ರಹಣ ಶಕ್ತಿ, ಆಸಕ್ತಿಗಳು ಚೆನ್ನಾಗಿ ಬೆಳೆದು ಬಂದಿರುತ್ತವೆ ಎಂಬ ಅಂಶ ಮಾತ್ರ ನಿಜ.