ಆರ್ಕಿಕ್ಲ್ಯಾಮಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ವಿದಳ ಸಸ್ಯಗಳ ಗುಂಪಿನ ಒಂದು ವಿಶಾಲ ಶಾಖೆ. ಜರ್ಮನ್ ಸಸ್ಯವಿಜ್ಞಾನಿ ಎಂಗ್ಲರ್ ಎಂಬವನ ಪ್ರಕಾರ ಎಂಬ್ರಿಯೋಫೈಟಾ ಸೈಫೋನೋಗ್ಯಾಮ ಎಂಬ ಬೀಜಯುಕ್ತ ಸಸ್ಯ ವಿಭಾಗಕ್ಕೂ ಆಂಜಿಯೋಸ್ಪರ್ಮ್ ಎಂಬ ಆಚ್ಛಾದಿತ ಬೀಜಯುಕ್ತ ಸಸ್ಯಗಳ ಉಪವಿಭಾಗಕ್ಕೂ ಸೇರಿದೆ. ಈ ಪಂಗಡದ ಪುಷ್ಪಗಳಲ್ಲಿ ದಳಗಳು ಬಿಡಿಯಾಗಿವೆ. ಈ ಉಪ ತರಗತಿಗೆ ಸಮನಾದ ಮತ್ತೊಂದು ಉಪತರಗತಿ ಮೆಟಕ್ಲ್ಯಾಮಿಡೀ; ಆದರೆ ಈ ಎರಡನೆಯ ಉಪತರಗತಿಯಲ್ಲಿ ಪುಷ್ಪದಳಗಳು ಕೂಡಿಕೊಂಡಿವೆ. ಆರ್ಕಿಕ್ಲ್ಯಾಮಿೖಡೀ ಗುಂಪಿನಲ್ಲಿ ೩೩ ವರ್ಗಗಳೂ ೨೦೧ ಕುಟುಂಬಗಳೂ ಸೇರಿವೆ. ಈ ಸಮುದಾಯದಲ್ಲಿ ಮೂಲರೂಪದ ಆಚ್ಛಾದಿತ ಬೀಜಯುಕ್ತ ಸಸ್ಯಗಳನ್ನು ಸೇರಿಸಲಾಗಿದೆ. ಅವುಗಳಲ್ಲಿ ಮರಗಳೇ ಹೆಚ್ಚು; ವಿಕಾಸವಾದಂತೆಲ್ಲ ಮರಗಳು ಕಡಿಮೆ; ಮೇಲ್ತರದ ಕುಲಗಳಲ್ಲಿ ಮೂಲಿಕೆಗಳೇ ಹೆಚ್ಚು; ಕೆಳವರ್ಗದವುಗಳಲ್ಲಿ ಪುಷ್ಪಾಂಗಗಳು ಸುರುಳಿ ಕ್ರಮದಲ್ಲಿಯೂ ಮೇಲ್ತರದ ಕುಲಗಳಲ್ಲಿ ವೃತ್ತಕ್ರಮದಲ್ಲಿಯೂ ಜೋಡಿಸಿವೆ. ಆದಿಕುಲಗಳಲ್ಲಿ ಪುಷ್ಪಾಂಗಗಳು ಅನಿರ್ದಿಷ್ಟವಾಗಿಯೂ ಮುಂದುವರಿದ ಕುಲಗಳಲ್ಲಿ ನಿರ್ದಿಷ್ಟವಾಗಿಯೂ ಇವೆ. ಪುಷ್ಪಗಳು ಆವರಣರಹಿತವಾಗಿಯೊ ಏಕಾವರಣಸಹಿತವಾಗಿಯೊ ಅಥವಾ ದ್ವಯಾವರಣಸಹಿತವಾಗಿಯೊ ಇರುತ್ತವೆ; ಕೆಲವು ಕುಲಗಳಲ್ಲಿ ದಳರಹಿತವಾಗಿರುತ್ತವೆ. ಆದಿ ಕುಲಗಳಲ್ಲಿ ಉಚ್ಚ ಸ್ಥಿತಿಯ ಅಂಡಾಶಯ, ಬಹಳ ಮುಂದುವರಿದ ಕುಲಗಳಲ್ಲಿ ಅಧೋಸ್ಥಿತಿಯ ಅಂಡಾಶಯ ಇರುವುದು. ಈ ಕೆಳಗೆ ಆರ್ಕಿಕ್ಲ್ಯಾಮಿಡೀಯಲ್ಲಿ ಕಂಡುಬರುವ ವರ್ಗಗಳ ಅಥವಾ ವರ್ಗಸಮೂಹಗಳ ಮುಖ್ಯ ಗುಣವಿಶೇಷಗಳನ್ನು ತಿಳಿಸಲಾಗಿದೆ.

ವರ್ಗಗಳು ೧ ರಿಂದ ೧೪[ಬದಲಾಯಿಸಿ]

(ವರ್ಟಿಸಿಲೇಟಿ, ಪೈಪರೇಲೀಸ್, ಹೈಡ್ರೊಸ್ಟಾಕಿಯೇಲೀಸ್, ಸ್ಯಾಲಿಕೇಲೀಸ್, ಗ್ಯಾರಿಯೇಲೀಸ್, ಬೆಲನಾಪ್ಸಿಡೇಲೀಸ್, ಮಿರಿಕೇಲೀಸ್, ಲೈಟ್ನೆರಿಯೇಲೀಸ್, ಜೂಗ್ಲಾಂಡೇಲೀಸ್, ಜೂಲಿಯನೇಲೀಸ್, ಬ್ಯಾಟಿಡೇಲೀಸ್, ಫ್ಯಾಗೇಲೀಸ್, ಆರ್ಟಿಕೇಲೀಸ್ ಮತ್ತು ಪೋಡಾಸ್ಟಿಮೇಲೀಸ್-೨೦ ಕುಟುಂಬಗಳು). ಈ ಸಮೂಹದ ವರ್ಗಗಳನ್ನು ಆದಿರೂಪದ ಅಥವಾ ಕೀಳ್ತೆರದ (ಪ್ರಿಮಿಟಿವ್) ವರ್ಗಗಳೆಂದು ಪರಿಗಣಿಸಲಾಗಿದೆ. ಈ ವರ್ಗಗಳಲ್ಲಿ ಸಾಮಾನ್ಯವಾಗಿ ಮರಗಳೇ ಹೆಚ್ಚು. (ಉದಾ: ಓಕ್, ಬೀಚ್, ವಾಲ್ನಟ್, ನೀರಂಜಿಮರ ಇತ್ಯಾದಿ). ಹಿಂದೆ ಈ ಸಮೂಹವನ್ನು ಅಮೆಂಟಿಫೆರಿ (ಕುಚ್ಚುತೆನೆ ಸಸ್ಯಗಳು) ಎಂದು ಕರೆಯಲಾಗುತ್ತಿತ್ತು. ಪುಷ್ಪಗಳ ನಗ್ನ ಪುಷ್ಪಾವರಣ ಕ್ಷೀಣಪತ್ರದ ತರಹದ್ದು. ಪುಷ್ಪಾಂಗಗಳ ಸಂಖ್ಯೆ ಸಾಮಾನ್ಯವಾಗಿ ಅನಿರ್ದಿಷ್ಟ. ಪರಾಗಸ್ಪರ್ಶ ಗಾಳಿಯಿಂದ ನಡೆಯುವುದು. ಈ ವರ್ಗಗಳಿಗೂ ಇತರ ವರ್ಗಗಳಿಗೂ ಇರುವ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ.

ವರ್ಗಗಳು ೧೫ ರಿಂದ ೨೦[ಬದಲಾಯಿಸಿ]

(ಪ್ರೋಟಿಯೇಲೀಸ್, ಸ್ಯಾಂಟಲೇಲೀಸ್, ಅರಿಸ್ಟೊಲೋಕಿಯೇಲೀಸ್, ಬೆಲೆನೋಫೋರೇಲೀಸ್, ಪಾಲಿಗೊನೇಲೀಸ್ ಮತ್ತು ಸೆಂಟ್ರೋಸ್ಪರ್ಮಿ-೨೩ ಕುಟುಂಬಗಳು). ಈ ವರ್ಗಸಮೂಹ ಸ್ಥೂಲವಾಗಿ ನೋಡಿದರೆ ಪ್ರತ್ಯೇಕವಾಗಿ ಉಳಿದಿರುವಂತೆ ಕಾಣುತ್ತದೆ. ಇದರಲ್ಲಿ ಗಂಧದ ಮರದ ಕುಟುಂಬ, ದಂಟು ಕುಟುಂಬ, (ಅಮರಾಂತೇಸೀ), ಚಕ್ಕೋತ ಸೊಪ್ಪು ಕುಟುಂಬ ಮುಂತಾದುವು ಅಡಕವಾಗಿವೆ. ಪುಷ್ಪಪತ್ರಗಳು ಒಂದೇ ತರಹದ್ದಾಗಿ ದಳಕಲ್ಪವಾಗಿವೆ. ಮುಂದುವರಿದ ಕುಟುಂಬಗಳಲ್ಲಿ ಪುಷ್ಪಪತ್ರಕ್ಕೂ ದಳಸಮೂಹಕ್ಕೂ ವ್ಯತ್ಯಾಸ ಕಂಡಿದೆ. ಪುಷ್ಪವಲಯಗಳು ವೃತ್ತಕ್ರಮದಲ್ಲಿ ಕಾಣುತ್ತವೆ; ಪ್ರತಿ ಸುತ್ತಿನಲ್ಲೂ ೩ ರಿಂದ ೫ ರವರೆಗೆ ಬಿಡಿ ಭಾಗಗಳಿವೆ. ಕೆಲವು ಕುಟುಂಬಗಳಲ್ಲಿ ಕೀಟದಿಂದ ಪರಾಗಸ್ಪರ್ಶ ನಡೆಯುತ್ತದೆ.

ವರ್ಗ ೨೧[ಬದಲಾಯಿಸಿ]

(ರ್ಯಾನೇಲೀಸ್ ೧೯ ಕುಟುಂಬಗಳು) ಇತ್ತೀಚಿಗೆ ಈ ವರ್ಗಕ್ಕೆ ಇತರ ೬ ಕುಟುಂಬಗಳನ್ನು ಸೇರಿಸಿಕೊಳ್ಳಲಾಗಿದೆ. ಈ ವರ್ಗ ಆರ್ಕಿಕ್ಲ್ಯಾಮಿಡೀ ಉಪತರಗತಿಯಲ್ಲಿ ಬಹು ವಿಶಾಲವಾದ ಮತ್ತು ಮುಖ್ಯವಾದ ವರ್ಗವೆಂದು ಪರಿಗಣಿಸಲಾಗಿದೆ. ಇದರಲ್ಲಿ ಸಾಮಾನ್ಯವಾದ ರ್ಯಾನನ್ಕ್ಯುಲೇಸೀ, ನಿಂಫಿಯೇಸೀ, ಅನೋನೇಸೀ, ಮ್ಯಾಗ್ನೋಲಿಯೇಸೀ (ತಾವರೆ, ಸೀತಾಫಲ, ಸಂಪಿಗೆ) ಮುಂತಾದ ಕುಲಗಳು ಸೇರಿವೆ. ಪುಷ್ಪಗಳು, ಪುಷ್ಪಪತ್ರ ಮತ್ತು ದಳಸಮೂಹಗಳು ಸ್ಪಷ್ಟವಾದ ವ್ಯತ್ಯಾಸವನ್ನು ತೋರಿಸುವುದಿಲ್ಲ. ಪುಷ್ಪಾಂಗಗಳು ಅಧಿಕ ಸಂಖ್ಯೆಯಲ್ಲಿದ್ದು ಕೀಳ್ತೆರದ ಕುಟುಂಬಗಳಲ್ಲಿ ಸುರುಳಿ ಕ್ರಮದಲ್ಲಿಯೂ ಮೇಲ್ತರದ ಕುಟುಂಬಗಳಲ್ಲಿ ವೃತ್ತ ಕ್ರಮದಲ್ಲಿಯೂ ಜೋಡಿಸಲ್ಪಟ್ಟಿವೆ. ಅಂಡಕೋಶ ಅಧಿಕ ಶಲಾಕಾಗ್ರಗಳನ್ನೂ ವಿಭಕ್ತ ಆಂಡಕೋಶವನ್ನೂ ಹೊಂದಿದೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಕೆಲವು ವರ್ಗೀಕರಣಶಾಸ್ತ್ರಜ್ಞರು ಈ ರ್ಯಾನೇಲೀಸ್ ವರ್ಗವನ್ನು ಆರ್ಕಿಕ್ಲ್ಯಾಮಿಡೀಯಲ್ಲಿ ಆದಿರೂಪದ ಜೀವಂತ ವರ್ಗ ಎಂದೂ ಈ ವರ್ಗದಿಂದ ಏಕದಳ ಮತ್ತು ದ್ವಿದಳ ಸಸ್ಯಪಂಗಡಗಳು ಉದ್ಭವಿಸಿವೆಯೆಂದೂ ಹೇಳುತ್ತಾರೆ.

ವರ್ಗಗಳು ೨೨ ರಿಂದ ೨೩[ಬದಲಾಯಿಸಿ]

(ರ್ಹಿಯಡೇಲೀಸ್ ಮತ್ತು ಸ್ಯಾರಾಸಿನಿಯೇಲೀಸ್ ೧೦ ಕುಟುಂಬಗಳು). ಈ ವರ್ಗಗಳ ಕೆಲವು ಕುಟುಂಬಗಳು ರ್ಯಾನೇಲೀಸ್ ವರ್ಗದ ವಿಶೇಷ ಶಾಖೆಗಳಾಗಿ ಉದ್ಭವಿಸಿದಂತೆ ಕಾಣುತ್ತವೆ. ಈ ವರ್ಗಗಳಲ್ಲಿ ಕ್ರೂಸಿಫೆರಿ (ಮೂಲಂಗಿ) ಸ್ಯಾರಾಸಿನಿಯೇಸೀ ಮುಂತಾದ ಕುಟುಂಬಗಳು ಸೇರಿವೆ. ಪುಷ್ಪಗಳು ಆರೀಯ ಸಮಾಂಗತೆಯುಳ್ಳ (ಆಕ್ಟಿನೋಮಾರ್ಫಿಕ್) ಪುಷ್ಪಭಾಗಗಳು ವೃತ್ತ ಕ್ರಮದಲ್ಲಿಯೂ ಇವೆ. ಸಂಯುಕ್ತಾಂಡಕೋಶ ಮತ್ತು ಉಚ್ಚಸ್ಥಿತಿಯ ಅಂಡಾಶಯ ಈ ಕುಲಗಳ ಮುಖ್ಯ ಗುಣಗಳು.

ವರ್ಗ ೨೪[ಬದಲಾಯಿಸಿ]

(ರೊಸೇಲೀಸ್ ೧೭ ಕುಟುಂಬಗಳು) . ಈ ವರ್ಗ ಆರ್ಕಿಕ್ಲ್ಯಾಮಿಡೀಯ ಒಂದು ವಿಶಾಲ ಪಂಗಡ. ಇದರಲ್ಲಿ ಹಿರಿದಾದ ೧೨,೦೦೦ ಪ್ರಭೇದಗಳಿರುವ ಲೆಗ್ಯುಮಿನೋಸೀ (ಹುರುಳಿ ಇತ್ಯಾದಿ ಜಾತಿಗಳ) ಕುಟುಂಬವೂ ಪ್ರಮುಖವಾದ (ಗುಲಾಬಿ) ಕುಟುಂಬವೂ ಸೇರಿವೆ. ಈ ಎರಡು ಕುಟುಂಬಗಳೂ ರ್ಯಾನೇಲೀಸ್ ರೊಸೇಸಿವರ್ಗದಿಂದ ಜನಿಸಿದ ಶಾಖೆಗಳಾಗಿ ಕಾಣುತ್ತವೆ. ಪುಷ್ಪಾಂಗಗಳು ವೃತ್ತ ಕ್ರಮದಲ್ಲಿಯೂ ಪಂಚಾಪವರ್ತ್ಯವಾಗಿಯೂ ಇವೆ. ಅಂಡಾಶಯ ಉಚ್ಚ, ಮಧ್ಯ ಅಥವಾ ಅಧೋಸ್ಥಿತಿಯಲ್ಲಿ ಕಂಡುಬರುತ್ತದೆ. ಲೆಗ್ಯುಮಿನೋಸೀ ಕುಟುಂಬದಲ್ಲಿ ಪುಷ್ಪಗಳು ದ್ವಿಪಾಸರ್ಶ್ವ ಸಮಾಂಗತೆ ಪಡೆದು ಕೀಟಪರಾಗ ಸ್ಪರ್ಶಕ್ಕಿರುವ ಹೊಂದಾಣಿಕೆಯನ್ನು ತೋರಿಸುತ್ತವೆ.

ವರ್ಗಗಳು ೨೫ ರಿಂದ ೩೨[ಬದಲಾಯಿಸಿ]

(ಪ್ಯಾಂಡೇಲೀಸ್, ಜಿರೇನಿಯೇಲೀಸ್, ಸಪಿಂಡೇಲೀಸ್ ರ್ಯಾಮ್ನೇಲೀಸ್, ಮಾಲ್ವೇಲೀಸ್ ಪೆರೈಟೇಲೀಸ್, ಒಪನ್ಷಿಯೇಲೀಸ್, ಮತ್ತು ಮಿರ್ಟಿಸೊರೀ ೮೯ ಕುಟುಂಬಗಳು). ಈ ವರ್ಗಗಳು ಹಿಂದಿನ ಕೆಲವು ವರ್ಗಗಳಿಂದ ಶಾಖೆಗಳಾಗಿ ಬೇರ್ಪಟ್ಟು ಪ್ರತಿಯೊಂದೂ ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿದೆ. ಎಲಚಿ, ದಾಸವಾಳ, ಪಾಪಾಸುಕಳ್ಳಿ, ಸೀಬೆ ಮುಂತಾದ ಜಾತಿಗಳು ಇದರಲ್ಲಿ ಸೇರಿವೆ. ಪುಷ್ಪಗಳು ಖಚಿತ ವೃತ್ತ ಕ್ರಮವನ್ನು ತೋರಿಸುತ್ತವೆ. ಮುಂದುವರಿದ ವರ್ಗಗಳಲ್ಲಿ ಅಂಡಾಶಯ ಅಧೋಸ್ಥಿತಿಯಲ್ಲಿರುತ್ತದೆ.

ವರ್ಗ ೩೩[ಬದಲಾಯಿಸಿ]

(ಅಂಬೆಲಿಫ್ಲೋರೀ ೩ ಕುಟುಂಬಗಳು). ಆರ್ಕಿಕ್ಲ್ಯಾಮಿಡೀಯಲ್ಲಿ ಈ ವರ್ಗ ಅತ್ಯಂತ ಮುಂದುವರಿದ ವರ್ಗ. ಇದರಲ್ಲಿ ಅಂಬೆಲಿಫ್ಲೋರೀ (ಕೊತ್ತಂಬರಿ) ಕುಟುಂಬ ಪ್ರಮುಖ. ಛತ್ರಮಂಜರಿ, ಪುಷ್ಪಾಂಗಗಳ ಸಂಖ್ಯೆ ಕನಿಷ್ಠವಾಗಿರುವಿಕೆ, ಮತ್ತು ಅವುಗಳಲ್ಲಿ ಗಿಣ್ಣಿರುವಿಕೆ, ಅಧೋಸ್ಥಿತಿಯ ಅಂಡಾಶಯ , ಅಂಡಕೋಶ ಸಂಖ್ಯೆ ೨ ಮತ್ತು ಪ್ರತಿ ಅಂಡಕೋಶದಲ್ಲಿಯೂ ಒಂದೇ ಅಂಡಕವಿರುವಿಕೆ; ಛತ್ರಮಂಜರಿಯ ಸುತ್ತಲೂ ಇನ್ವಲ್ಯೂಕರ್ ಎಂಬ ಕ್ಷೀಣಪತ್ರಗಳಿವೆ; ಹೂ ಗೊಂಚಲಿನ ಹೊರಾವರಣದ ಹೂಗಳು ಆಕರ್ಷಕ, ಮಧ್ಯದ ಹೂಗಳು ಹೆಚ್ಚು ಫಲಕಾರಿ-ಇವು ಈ ವರ್ಗದ ಮುಖ್ಯ ಗುಣಗಳು.