ಆರೋಗ್ಯ ಸುರಕ್ಷಣಾ ಕಾಯಿದೆಗಳು

ವಿಕಿಪೀಡಿಯ ಇಂದ
Jump to navigation Jump to search

ಜನತೆಯ ಆರೋಗ್ಯ, ನೆಮ್ಮದಿಗಳನ್ನು ಪಾಲಿಸುವುದು ಒಳ್ಳೆಯ ಸರ್ಕಾರದ, ಕಾನೂನುಗಳ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಹಿಂದಿನ ಕಾಲದಲ್ಲಿ ಒಬ್ಬನಿಂದ ಅಪಾಯದ ಸುಳಿವು ಕಂಡುಬಂದ ಕೂಡಲೇ ಜನತೆಗೆ ಕೆಡುಕಾಗದಿರಲೆಂದು ಅವನನ್ನು ದೂರವಿರಿಸಿ ಅಥವಾ ಕೊಂದು ಅಪಾಯದಿಂದ ಪಾರಾಗುತ್ತಿದ್ದರು. ಕುಷ್ಠರೋಗಿಗಳನ್ನು ಬದುಕಿರುವಾಗಲೇ ಹೂಳುತ್ತಿದ್ದರಂತೆ. ಆಧುನಿಕ ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಸಮಾಜ ಶಾಸನಗಳು ಮತ್ತು ರೋಗನಿವಾರಕ ಉಪಾಯಗಳು ೧೯ನೆಯ ಶತಮಾನದಿಂದೀಚಿನ ವಿಜ್ಞಾನದ ಮುನ್ನಡೆಯಿಂದ ಹುಟ್ಟಿ ಬೆಳೆದು ಸ್ಥಾಪಿತವಾಗುತ್ತಿವೆ. ಭಾರತದ ಸಂಸ್ಕೃತಿಯ ಇತಿಹಾಸದಲ್ಲಂತೂ ಜನಾರೋಗ್ಯ, ನೆಮ್ಮದಿ ಮುಖ್ಯಸ್ಥಾನ ಗಳಿಸಿದ್ದುವು. ೨೫ ಶತಮಾನಗಳ ಹಿಂದೆಯೇ ಹರಪ್ಪ ಮತ್ತು ಮೊಹೆಂಜೋದಾರೊಗಳ ಪಂಡಿತರಿಗೆ ಚರಂಡಿಯ ವ್ಯವಸ್ಥೆಯು ಜನಾರೋಗ್ಯ ರಕ್ಷಣೆಗೆ ಮುಖ್ಯವೆಂಬುದು ತಿಳಿದಿತ್ತು. ಆಧುನಿಕ ವೈದ್ಯವಿಜ್ಞಾನ ಪಿತಾಮಹ ಹಿಪೊಕ್ರೆಟಿಸ್ ಹುಟ್ಟುವ ಎಷ್ಟೋ ಕಾಲದ ಮೊದಲೇ, ಅಂದರೆ ವೇದಗಳ ಕಾಲದಲ್ಲಿಯೇ, ಹಿಂದುಗಳು ನೈರ್ಮಲ್ಯದ ಮಹತ್ವ ಅರಿತಿದ್ದರು. ಆಯುರ್ವೇದದ ಚರಕಸಂಹಿತೆ ಸುಶ್ರುತಸಂಹಿತೆಗಳಲ್ಲಿ ಆರೋಗ್ಯಶಾಸ್ತ್ರಕ್ಕೆ ಬೇರೆ ಅಧ್ಯಾಯವೇ ಮುಡಿಪಾಗಿದೆ. ಸುಶ್ರುತ ಸಂಹಿತೆಯಲ್ಲಿ ಆರೋಗ್ಯರಕ್ಷಣೆಯಲ್ಲಿ ನೀರು ಆಹಾರಗಳ ಪಾತ್ರ ಉಲ್ಲೇಖಿಸಿದೆ. ಮಹಾಭಾರತದ ಏಳನೆಯ ಅಧ್ಯಾಯದಲ್ಲಿ (ಪ್ರ.ಶ.ಪು. ೬೦೦) ನೊಣ, ಕಾಗೆ, ಹದ್ದುಗಳ ಉಪದ್ರವ ಮುಂಬರುವ ವಾಂತಿ, ಭೇದಿ ಸಾಂಕ್ರಾಮಿಕದ ಸೂಚನೆ ಎಂದಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಪ್ರ.ಶ.ಪು. ೩೫೦), ಸೈನ್ಯಗಳು ಬೀಡು ಬಿಡುವ ಜಾಗಗಳನ್ನು ತಜ್ಞರು ಪರೀಶೀಲಿಸಿದ ಮೇಲೆ ನೆಲೆಸತಕ್ಕದ್ದೆಂದು ಹೇಳಿದೆ. ಭೂಮಿಯ ಏರುಪೇರು, ನೆಲದ ಗುಣ, ಹವೆ ಹಾಗೂ ಗಾಳಿ ಬಲವಾಗಿ ಬೀಸಿದರೆ ಬಿಸಿಲು ವಿಪರೀತವಾದರೆ ರಕ್ಷಣೆಗೆ ನೆರಳಿನ ಮರ, ಇವನ್ನೆಲ್ಲ ಗಮನಿಸಬೇಕೆಂದಿದೆ. ನೀರು ಸಿಗದ ಕಡೆಗಳಲ್ಲಿ, ಶುಭ್ರವಾದ ನೀರನ್ನು ಗಾಡಿಗಳಲ್ಲಿ ಸಾಕಷ್ಟು ಒಯ್ಯಬೇಕು. ಇಲ್ಲದಿದ್ದರೆ ಕೊಳಕು ನೀರಿನಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದಿದೆ. ರೋಮಿನ ಜೂಲಿಯಸ್ ಸೀಸರ್ ತನ್ನ ಸೈನ್ಯದ ದೈಹಿಕ ಪುಷ್ಟಿ ಅದರಲ್ಲೂ ದಿನವೂ ಸ್ನಾನ, ಬೀಡಿನ ನೈರ್ಮಲ್ಯದ ಕಡೆ ಗಮನಕೊಡುತ್ತಿದ್ದನಂತೆ. ಇಂಗ್ಲೆಂಡಿನ ಮಾರ್ಲ್ಬರೋ ಡ್ಯೂಕ್ ತನ್ನ ಸೈನಿಕರ ಉಡುಪು ಆಹಾರಗಳಿಗೆ ಬಹಳ ಮಹತ್ತ್ವ ಕೊಡುತ್ತಿದ್ದ; ಕಾಯಿಲೆ ಬರದಂತೆ ನೋಡಿಕೊಳ್ಳುತ್ತಿದ್ದ. ಹೀಗೆ ಯಾವುದಾದರೂ ಒಂದು ನಡವಳಿಕೆ ಆರೋಗ್ಯ ದೃಷ್ಟಿಯಿಂದ ಅತ್ಯಗತ್ಯವೆಂದೆನಿಸಿದರೆ ಅದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನಾಗಿ ಆಚರಣೆಗೆ ತರುವುದು ಸಮಾಜದ ಹೊಣೆ, ಕೇವಲ ರೋಗಿಗಳ ಬೇರ್ಪಡಿಕೆ, ಆರೋಗ್ಯ. ನೈರ್ಮಲ್ಯದ ನಿಯಮಗಳ ಪಾಲನೆ ಹಿಂದಿನಿಂದಲೂ ಬಂದಿದೆ. ಈ ನಿಯಮಗಳು ಸಮಾಜದ ಒಳಿತಿಗೆ ಬೇಕೇಬೇಕೆನಿಸಿದಾಗ ಕಾಯಿದೆಗಳಾಗುತ್ತಿದ್ದುವು. ಹಲವುವೇಳೆ ಕಾಯಿದೆಯಾಗಿ ಅಲ್ಲದಿದ್ದರೂ ನಿಯಮಗಳು ಸಂಪ್ರದಾಯವಾಗೋ ಧರ್ಮನಿಷ್ಠೆಯಾಗೋ ಆಚರಣೆಗೆ ಬರುತ್ತಿದ್ದುವು. ಆರೋಗ್ಯ, ಸುರಕ್ಷಣಾ ಕಾಯಿದೆಗಳ ಮೂಲ ಉದ್ದೇಶಗಳಲ್ಲಿ ಸಮಾಜದ ವ್ಯವಸ್ಥೆ, ಶಾಂತಿ ನೆಲೆಸಿಕೆ, ಜನಬಲದ ಸಂಘಟನೆ, ಹೊಲಸು ಕೆಲಸಗಳಿಗೆ ಎಡೆಗೊಡದಿರು ವುದು ಮುಖ್ಯವಾದುವು. ಈ ಕಾಯಿದೆಗಳು ಆಧುನಿಕ ಪೋಲೀಸ್ ಇಲಾಖೆಯ ಕಾರ್ಯಾಚರಣೆಯ ಮುನ್ಸೂಚಕಗಳೆಂದು ಹೇಳಬಹುದು. ಆರೋಗ್ಯ ಮತ್ತು ಕ್ಷೇಮರಕ್ಷಣಾ ಕಾಯಿದೆಗಳ ಚರಿತ್ರೆ ಮುಖ್ಯವಾಗಿ ಜಾತಿ, ಧರ್ಮಗಳ, ರಾಜಕೀಯ, ಆರ್ಥಿಕ ವಿಜ್ಞಾನದ ಪ್ರಭಾವಗಳಿಗೆ ಈಡಾಗಿದೆ. ಸಮಾಜ ಜೀವನದ ಆರೋಗ್ಯ ಸಮಸ್ಯೆಗಳನ್ನು ಅಂದರೆ ಸಾಂಕ್ರಾಮಿಕ ಜಾಡ್ಯಗಳ ಹತೋಟಿ, ನೈರ್ಮಲ್ಯ, ಒಳ್ಳೆಯ ಆಹಾರ, ನೀರಿನ ಪುರೈಕೆ, ಮಲಮೂತ್ರ ಮತ್ತಿತರ ಕಚರ ಪಾಕೀಜ, ಚರಂಡಿ ವ್ಯವಸ್ಥೆ, ರೋಗಿಗಳ ಚಿಕಿತ್ಸೆ ಇವನ್ನೆಲ್ಲ ನೋಡಿಕೊಳ್ಳಲು, ಆಧುನಿಕ ರೀತಿಯಲ್ಲಿ ಅಲ್ಲದಿದ್ದರೂ, ಆಗಿನ ಕಾಲದ ತಿಳಿವಳಿಗೆ ತಕ್ಕಂತೆ ವ್ಯವಸ್ಥೆ ಮಾಡಲು ಸಾರ್ವಜನಿಕ ಸಂಸ್ಥೆ ಇತ್ತು. ಆರೋಗ್ಯ ನಿಯಮಗಳು ಧಾರ್ಮಿಕ ಸಂಪ್ರದಾಯಗಳೊಂದಿಗೆ ಬೆರೆತಿದ್ದುವು. ಉದಾಹರಣೆಗೆ, ಮನೆಯಲ್ಲಿ ಯಾರಾದರೂ ಸತ್ತರೆ ಹತ್ತು ದಿವಸಗಳ ಸೂತಕವೆಂದು ಹೊರಗಿನವರೊಡನೆ ಸಂಪರ್ಕವಿಲ್ಲ. ಸಾಂಕ್ರಾಮಿಕ ಜಾಡ್ಯದಿಂದಾಗಿ ಸತ್ತಿದ್ದರೆ, ಈ ಸಂಪ್ರದಾಯದಿಂದ ಮತ್ತೊಬ್ಬರಿಗೆ ರೋಗ ಹರಡುವ ಸಂಭವ ಕಡಿಮೆ. ೧೫ ದಿವಸಗಳಿಗೊಂದಾವರ್ತಿ ಏಕಾದಶಿ ಉಪವಾಸ. ಹಬ್ಬ ಹುಣ್ಣಿಮೆಗಳಲ್ಲಿ ಊಟಕ್ಕೆ ಬಡಿಸಬೇಕಾದ ಸಮತೂಕದ ಆಹಾರ, ದಿನಂಪ್ರತಿ ಸ್ನಾನ, ಶುಭ್ರವಾದ ಬಟ್ಟೆ ಹಾಕಿಕೊಳ್ಳುವುದು ಇವೆಲ್ಲ ನಿತ್ಯಕರ್ಮಗಳು. ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ ತಂಗಿಯರ ಮಕ್ಕಳು, ಸ್ವಗೋತ್ರದವರು, ಹತ್ತಿರ ಸಂಬಂಧಿಗಳ ನಡುವೆ ವಿವಾಹಗಳು ನಿಷಿದ್ಧ. ಇವುಗಳ ನಡುವೆ ಆನುವಂಶಿಕವಾಗಿ ಬರುವ ಕುಂದುಗಳು, ದುರ್ಬಲತೆ, ರೋಗಗಳನ್ನು ತಡೆಗಟ್ಟುವ ಮುಂಜಾಗ್ರತೆಯ ಕ್ರಮಗಳು. ಹೀಗೆ ಇನ್ನೂ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಪಾಶ್ಚಿಮಾತ್ಯರಲ್ಲಿಯೂ ಬಹಳ ಹಿಂದಿನ ಕಾಲದಲ್ಲಿ ಚರ್ಚಿಗೂ, ರಾಜ್ಯಾಡಳಿತ ಕಾರುಬಾರುಗಳಿಗೂ ನಿಕಟ ಸಂಬಂಧವಿದ್ದೇ ಇತ್ತು. ಅನೇಕ ಶತಮಾನಗಳ ತನಕ ವಿದ್ಯಾವಂತರೆಲ್ಲರೂ ಚರ್ಚಿಗೆ ಸಂಬಂಧಿಸಿದವರೇ ಆಗಿದ್ದರು; ಅಂದರೆ ಜ್ಞಾನ, ವಿಜ್ಞಾನ ಚರ್ಚಿನ ಹತೋಟಿಯಲ್ಲಿತ್ತು. ಯುರೋಪಿನಲ್ಲಿ ನಡೆದ ಸುಧಾರಣೆಯ ಅನಂತರವೇ ಚರ್ಚಿನ ನಿಕಟ ಸಂಬಂಧ ದೂರವಾದುದು. ಕಾಲರ, ಪ್ಲೇಗು, ಸಿಡುಬುಗಳ ಉಪದ್ರವಗಳು ದೇವರ ಶಾಪವೆಂಬ ನಂಬಿಕೆಗಳು ಜನಾರೋಗ್ಯ, ಸಾಮಾಜಿಕ ಸುಧಾರಣೆಗಳಿಗೆ ಅಡಚಣೆಗಳು. ೧೯-೨೦ನೆಯ ಶತಮಾನದ ಕೈಗಾರಿಕಾ ಆಂದೋಲನ ಆದಮೇಲೆ ಜನಾರೋಗ್ಯ, ನೈರ್ಮಲ್ಯಗಳಿಗೆ ಅಧಿಕೃತ ಮನ್ನಣೆ ದೊರೆತಿದೆ. ಪ್ರ.ಶ.ಪು.೫00೧-೫00ರ ಕಾಲದಲ್ಲಿ ಆರೋಗ್ಯ, ನೈರ್ಮಲ್ಯಗಳ ಮಟ್ಟ ಇಳಿಯಿತು. ಗ್ರೀಕ್ ಜನರ ನೈರ್ಮಲ್ಯ ರೋಮ್ ಜನಾರೋಗ್ಯ ನೈರ್ಮಲ್ಯ ಆಧುನಿಕ ಕಾನೂನುಗಳಿಗೆ ತಳಹದಿ. ಗ್ರೀಸಿನಲ್ಲಿ ಪ್ರ.ಶ.ಪು. ೨೧೦೦-೧೭೦೦ರ ಹೊತ್ತಿಗೆ ಸ್ನಾನದಮನೆ ಹಾಗೂ ಸಾರ್ವಜನಿಕ ಕಚರ ವಿಲೇವಾರಿ ವ್ಯವಸ್ಥೆ ಇತ್ತು. ಗ್ರೀಕರು ಆರೋಗ್ಯ ನಿಯಮಗಳನ್ನೂ ಸೂತ್ರಗಳನ್ನೂ ಜಾರಿಗೆ ತಂದರಲ್ಲದೆ, ವಾತಾವರಣಕ್ಕೂ ರೋಗೋತ್ಪತ್ತಿಗೂ ಇರುವ ನಿಕಟಸಂಬಂಧ ಅರಿತಿದ್ದರು. ಗಾಳಿ, ನೀರು ಮತ್ತು ಸ್ಥಳ ಮಹಾತ್ಮೆ ಎಂಬ ಹಿಪ್ಪೊಕ್ರೆಟಿಸ್ನ ಗ್ರಂಥವನ್ನು ಇಲ್ಲಿ ಉಲ್ಲೇಖಿಸಬಹುದು. ರೋಮ್ ದೇಶದವರು ಮಲೇರಿಯ ರೋಗ ಜೌಗುಪ್ರದೇಶದ ಕೆಟ್ಟ ಗಾಳಿಯಿಂದ ಬರುತ್ತದೆಂದುಕೊಂಡಿದ್ದರು. ರೋಗಕಾರಕ ಧೂಳನ್ನು ಕೆಲಸಗಾರರಿಗೆ ಸೇರದಂತೆ ಉಸಿರಾಟಿಕಗಳನ್ನು ಅಣಿಮಾಡಿದ್ದರು. ೨ನೆಯ ಶತಮಾನದಲ್ಲಿ ಸಾರ್ವಜನಿಕ ವೈದ್ಯಸೇವಾ ವ್ಯವಸ್ಥೆ ಇತ್ತು. ಒಳಚರಂಡಿ, ಕುಡಿಯುವ ನೀರನ್ನು ಸಾಗಿಸಲು ನೀರ್ಗಾಲುವೆ ಗಳನ್ನು ಕಟ್ಟಿದ್ದರು. ಆಸ್ಪತ್ರೆಗಳು ಸ್ಥಾಪಿತವಾದುವು. ಟೈಬರ್ ನದಿಯ ಕಾಲುವೆಗಳ ನೀರನ್ನು ಕೊಳಕು ಮಾಡದಂತೆ ಕಾಯಲು, ಒಳಚರಂಡಿಗಳನ್ನೂ ಮಲಮೂತ್ರ ವಿಲೇವಾರಿಯನ್ನೂ ಯಶಸ್ವಿಯಾಗಿ ಆಗುವಂತೆ ಮೇಲ್ವಿಚಾರಣೆ, ಹೊಲಸು ಆಹಾರ ಪದಾರ್ಥಗಳನ್ನು ಮಾರದಂತೆ ಹಾಗೂ ಅವುಗಳನ್ನು ನಾಶಮಾಡಲು ಸಿಬ್ಬಂದಿ, ಅಳತೆ ತೂಕದಲ್ಲಿ ಮೋಸ ನಡೆಯದಂತೆ ಮೇಲ್ವಿಚಾರಣೆ, ಸಾರ್ವಜನಿಕ ಸ್ನಾನಗೃಹಗಳಲ್ಲಿ, ವೇಶ್ಯಾಗೃಹಗಳಲ್ಲಿ, ಸ್ಮಶಾನಗಳಲ್ಲಿ ಮೇಲ್ವಿಚಾರಕರು ಇರುತ್ತಿದ್ದರು. ಬಿಜಾ಼ರಿಯಮ್ನಲ್ಲಿ ೫೩೨ರಲ್ಲಿ ಬಂದ ಅತಿ ಭೀಕರ ಪ್ಲೇಗ್ ಸಾಂಕ್ರಾಮಿಕ ಕಾಲದಲ್ಲಿ ಒಂದನೆಯ ಜಸ್ಟಿನಿಯನ್ ಪ್ಲೇಗ್ ರೋಗಿಯನ್ನು ಮುಟ್ಟಿಕೊಂಡಿದ್ದವರನ್ನು ಬಲಾತ್ಕಾರವಾಗಿ ಹೊರಗಿಟ್ಟಿರುತ್ತಿದ್ದ. ನಗರದೊಳಗೆ ಕಾನೂನುಬದ್ಧ ಪರವಾನಗಿ ಉಳ್ಳವರಿಗೆ ಮಾತ್ರ ಪ್ರವೇಶವಿತ್ತು. ರೋಮ್ ಮತ್ತು ಗ್ರೀಸ್ ಸಂಸ್ಕೃತಿಗಳು ನಾಶವಾದಂತೆಲ್ಲ ಜನಾರೋಗ್ಯ ಸುರಕ್ಷಣೆ ಸೂತ್ರಗಳು ಸಡಿಲವಾಗಿ ಹೋದುವು. ಆಮೇಲೆ ಬಿಜಾಂಟಿಯಮ್ ಸಾಂಸ್ಕೃತಿಕ ಕೇಂದ್ರವಾ ಯಿತು. ಗ್ರೀಸ್, ರೋಮ್ ದೇಶಗಳ ವೈದ್ಯವಿಜ್ಞಾನ ಭಂಡಾರ ಅರಬ್ಬೀ ದೇಶಕ್ಕೆ ಬಂದಿತು. ಪಾಶ್ಚಿಮಾತ್ಯರಲ್ಲಿ ಆ ಕಾಲದಲ್ಲಿ ವೈದ್ಯ ಇನ್ನೂ ಮೋಡಿ, ಮಂತ್ರ, ತಂತ್ರಗಳ ಮಟ್ಟದಲ್ಲೇ ಇತ್ತು. ಅಲ್ಲಲ್ಲಿ ಕೆಲವೆಡೆಗಳಲ್ಲಿ ಶುದ್ಧ ನೀರಿನ ಸರಬರಾಜು, ಒಳ್ಳೆ ಗಾಳಿ ಬೆಳಕಿರುವ ವಸತಿಗಳು. ಅವನ್ನು ಬೆಚ್ಚಗಿಡುವ ವ್ಯವಸ್ಥೆಗಳಿದ್ದುವು. ಇದು ಎಲ್ಲರಿಗೂ ನಿಲುಕದ ಸೌಲಭ್ಯ. ಜನರನ್ನು ರೋಗದಿಂದ ರಕ್ಷಿಸುವುದೂ ಅವರಿಗೆ ಸಾಕಷ್ಟು ಕುಡಿಯುವ ನೀರನ್ನು ಒದಗಿಸುವುದೂ ಕಷ್ಟವಾಗಿದ್ದುವು. ಚರ್ಮ ಹದಮಾಡುವ, ಬಣ್ಣದ ಕಾರ್ಖಾನೆಗಳಿಂದ ಬರುವ ಕೆಟ್ಟ ನೀರನ್ನು ಕುಡಿಯುವ ನೀರೊದಗಿಸುವ ನದಿಗಳಿಗೆ ಬಿಡಲು ಅವಕಾಶವಿರಲಿಲ್ಲ.೧೫ನೆಯ ಶತಮಾನದ ಪುರ್ವಾರ್ಧದಲ್ಲಿ ಆರೋಗ್ಯ. ವೈದ್ಯಕೀಯ ಸುಧಾರಣೆಯ ಶಾಸನಗಳು ಬಂದುವು. ಆದರೆ, ಅನೇಕವು ಕೇವಲ ಶಾಸನಗಳಾಗಿದ್ದುವೇ ಹೊರತು ಅವನ್ನು ಕಡ್ಡಾಯವಾಗಿ ಆಚರಣೆಗೆ ತಂದಿರಲಿಲ್ಲ. ಬೇಕೆಂದಾಗ ಮಾತ್ರ ಈ ಶಾಸನಗಳು ಜಾರಿಯಾಗುತ್ತಿದ್ದುವು. ಆಹಾರಕಲಬೆರಕೆಗೆ ವಿರುದ್ಧವಾದ ಶಾಸನಗಳು ಸಾಂಕ್ರಾಮಿಕ ರೋಗ ತಲೆದೋರಿದಾಗ ರೋಗಿ ಮತ್ತವನ ಸಂಬಂಧಿಕರನ್ನು, ಹತ್ತಿರ ಇದ್ದವರನ್ನು ಬೇರೆಡೆ ಪ್ರತ್ಯೇಕಿಸುವ ಕಾಯಿದೆಗಳು ಕಡ್ಡಾಯವಾಗಿದ್ದುವು. ರೋಗಗಳ ವಿಚಾರದಲ್ಲಿ ಕುರುಡು ನಂಬಿಕೆಗಳು ಇದ್ದರೂ ಕೆಲವು ಹರಡುವ ವಿಧಾನಗಳೂ ಆಗ ತಿಳಿದಿದ್ದುವು. ಜಸ್ಟಿನಿಯನ್, ಕಾಲದ ಪ್ಲೇಗ್ನಿಂದ ಹಿಡಿದು ೧೩೪೮ರಲ್ಲಿ ಬಂದ ಕರಾಳ ಮೃತ್ಯುವಿನ (ಬ್ಲ್ಯಾಕ್ ಡೆತ್) ಕಾಲದತನಕ ಅನೇಕ ಭೀಕರ ಸಾಂಕ್ರಾಮಿಕಗಳು ತಲೆಹಾಕಿದ್ದುವು. ಕುಷ್ಠ, ಸಿಡುಬು, ಪ್ಲೇಗು, ದಡಾರ, ಗಂಟಲಮಾರಿ, ಉರಿಶೀತ (ಇನ್ಫ್ಲುಯನ್ಜ) ಮುಂತಾದುವು ಜನಗಳಲ್ಲಿ ಭೀತಿ ಹುಟ್ಟಿಸಿದ್ದುವು. ಅದರಲ್ಲೂ ಕುಷ್ಠರೋಗವನ್ನು ಕಂಡರೆ ಸಾಮಾನ್ಯರಿಗಿದ್ದ ಭೀತಿ ವರ್ಣಿಸಲಸಾಧ್ಯ. ೧೩ನೆಯ ಶತಮಾನದ ಪುರ್ವಾರ್ಧದಲ್ಲಿ ಫ್ರಾನ್ಸ್ ದೇಶ ಒಂದರಲ್ಲೇ ಸುಮಾರು ೨,೦೦೦ ಕುಷ್ಠರೋಗಿಗಳ ಚಿಕಿತ್ಸಾವಸಾಹತು ಆಸ್ಪತ್ರೆಗಳಿದ್ದುವಂತೆ. ೧೧೭೯ರಲ್ಲಿ ಮೂರನೆಯ ಲ್ಯಾಟಿರಾನ್ ಮಂಡಲ ಸಭೆ ಕುಷ್ಠರೋಗಿಗಳನ್ನು ಶಾಸನಕ್ಕೊಳಪಡಿಸುವ ವಿವರವಾದ ಕಾಯಿದೆ ಜಾರಿಗೆ ತಂದಿತು. ಇದರ ಅನುಭವವೇ ಮುಂದೆ ಸಹಸ್ರಾರು ಜನ ಅಸುನೀಗಿದ ೧೪ನೆಯ ಶತಮಾನದ ಪ್ಲೇಗು ಸಾಂಕ್ರಾಮಿಕದಲ್ಲಿ ಬಳಕೆಯಾಯಿತು. ಸೋಂಕಿನ ಅನುಮಾನವಿದ್ದವರು ಸ್ಥಳೀಯ ಅಧಿಕಾರಿಗಳ ಹತ್ತಿರ ಹೋಗಿ ಪರೀಕ್ಷೆಗೊಳಪಡಬೇಕು. ಸೋಂಕು ಇದ್ದರೆ ಕಡ್ಡಾಯವಾಗಿ ಅವರನ್ನು ಬೇರ್ಪಡಿಸುವುದೊಂದೇ ಅಲ್ಲದೆ ಅವರೊಂದಿಗಿದ್ದವರನ್ನೂ ಬೇರ್ಪಡಿಸಲಾಗುತ್ತಿತ್ತು. ಆಹಾರ ಇತ್ಯಾದಿ ಆವಶ್ಯಕ ವಸ್ತುಗಳನ್ನು ಒದಗಿಸಲಾಗುತ್ತಿತ್ತು. ರೋಗಿಯ ಶವವನ್ನೂ ಅದಕ್ಕೆ ಸೇರಿದ ವಸ್ತುಗಳನ್ನೂ ಊರ ಹೊರಗಡೆ ಹೂಳಲಾಗುತ್ತಿತ್ತು. ರೋಗಿ ಸತ್ತ ಸ್ಥಳವನ್ನು ಕ್ರಿಮಿನಾಶಕ ಹೊಗೆಯಿಂದ ಶುದ್ಧಿಗೊಳಿಸುತ್ತಿದ್ದರು. ಮುಖ್ಯವಾಗಿ ವ್ಯಾಪಾರ, ಕೇಂದ್ರವಾಗಿ ವೆನಿಸ್ ನಗರದಲ್ಲಿ ಈ ಕ್ರಮಗಳೆಲ್ಲ ಮೊದಲು ಜಾರಿಗೆ ಬಂದು, ಉಳಿದ ರೇವು ಪಟ್ಟಣಗಳಲ್ಲೂ ಕ್ರಮೇಣ ಅವಲೋಕನಾ ಕೇಂದ್ರಗಳೂ ಸೋಂಕು ರೋಗಿಗಳಿಗೆ ಬೇರೆಯಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳೂ ಆರಂಭವಾದುವು. ಇಂಗ್ಲೆಂಡ್ ದೇಶ ಒಂದರಲ್ಲೇ ೧೨-೧೫ ಶತಮಾನಗಳ ನಡುವೆ ಇಂಥ ಆಸ್ಪತ್ರೆಗಳು ೭೨೦ಕ್ಕೂ ಮೀರಿದ್ದುವು. ಇವುಗಳಲ್ಲಿ ೨೧೭ ಕುಷ್ಠರೋಗಿಗಳ ಕೇಂದ್ರಗಳು. ಮಧ್ಯಯುಗದ ಉತ್ತರಾರ್ಧದಲ್ಲಿ ನಗರಗಳೂ ಸರ್ಕಾರಗಳೂ ಆಸ್ಪತ್ರೆಗಳನ್ನು ಸ್ಥಾಪಿಸಿ ಅವನ್ನು ನಡೆಸಿಕೊಂಡು ಬರುವುದು ಹೆಚ್ಚಿತು. ಮಧ್ಯಯುಗ ಮುಗಿಯುವ ವೇಳೆಗೆ ವೈದ್ಯಕೀಯ ಮತ್ತು ಜನಾರೋಗ್ಯ ಚಟುವಟಿಕೆಗಳು ಯುರೋಪ್ನಲ್ಲಿ ಸ್ಥಳೀಯ ಸರ್ಕಾರದ ಹತೋಟಿಯಲ್ಲಿದ್ದುವು. ಕುಡಿಯುವ ನೀರನ್ನು ಕೆಡಿಸುವುದನ್ನು ತಡೆಯುವ ಕಾಯಿದೆಯೊಂದಿಗೆ, ರಸ್ತೆಗಳ ನೈರ್ಮಲ್ಯ. ಕಚರದ ವಿಲೇವಾರಿಗಳಿಗೂ ಕಾನೂನುಗಳಾದುವು. ವೈದ್ಯರು ಕೆಲವು ವಿಧಿಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕಾಯಿತು. ಪೌಷ್ಟಿಕ ಆಹಾರವಸ್ತುಗಳ ಮೇಲೆ ಲೇಖನಗಳು ಬರಹತ್ತಿದುವು. ಸಾರ್ವಜನಿಕ ಸ್ನಾನಗೃಹಗಳು ನಿಯಮಗಳಿಗನುಸಾರವಾಗಿರಬೇಕಾದದ್ದಲ್ಲದೆ ಸನ್ನದು ಪಡೆಯಬೇಕಾಗಿತು. ೧೬ನೆಯ ಶತಮಾನದ ಮೊದಲಲ್ಲಿ ಮೇಹರೋಗಗಳು ಹರಡಿದಾಗ ಮೊದಲು ವೇಶ್ಯೆಯರ ಮೇಲೆ ಕಟ್ಟಳೆಗಳನ್ನು ವಿಧಿಸಲಾಯಿತು. ಪೌರಸಭೆಯ ಅಧಿಕಾರಕ್ಕೊಳಪಡಿಸಿದ ಸಾರ್ವಜನಿಕ ಆರೋಗ್ಯ ಪಾಲನೆ ಯಶಸ್ವಿಯಾಗಲಿಲ್ಲ. ಹೊರಗಿನಿಂದ ಹಾಗೂ ರೇವುಗಳಿಂದ ಬರುತ್ತಿದ್ದ ಭೀಕರ ಸಾಂಕ್ರಾಮಿಕ ಜಾಡ್ಯಗಳನ್ನೆದುರಿಸಿ ತಮ್ಮನ್ನು ತಾವು ಕಾಪಾಡಿಕೊಳ್ಳಲಾಗಲಿಲ್ಲ. ದೊಡ್ಡ ನಗರಗಳಲ್ಲಿ ಆರೋಗ್ಯಾಡಳಿತ ಮತ್ತು ಶಾಸನಗಳನ್ನು ಜಾರಿ ಮಾಡುವ ಅಧಿಕಾರ ಸಮಿತಿಗಳು, ಮಂಡಲಿಗಳು, ನಿಯೋಜಿತ ಜನಸಭೆಗಳ ಸದಸ್ಯರು ಮುಂತಾದವರಿಗೆ ನಿಬಂಧನೆಗಳನ್ನು ಕಾರ್ಯಗತ ಮಾಡಲಾಗಲಿಲ್ಲ. ವಸಾಹತು ಅಮೆರಿಕ ದೇಶದಲ್ಲೂ ಸಾಂಕ್ರಾಮಿಕ ಜಾಡ್ಯಗಳನ್ನೆದುರಿಸಲು ರೋಗಿಗಳನ್ನೂ ಅವರೊಂದಿಗೆ ಇದ್ದವರನ್ನೂ ಬೇರೆ ಇರಿಸಲು ಶಾಸನಗಳನ್ನು ವಿಧಿಸಲಾಯಿತು. ೧೬೨೦ ಡಿಸೆಂಬರ್ನಲ್ಲಿ ಪ್ಲಿಮತ್ಗೆ ಬಂದ ೧00 ಯಾತ್ರಿಕರಲ್ಲಿ ಅರ್ಧಜನ ೩ ತಿಂಗಳಲ್ಲೇ, ಸತ್ತರು. ನ್ಯೂ ಇಂಗ್ಲೆಂಡ್ನ ೯೦೦೦ ಸೈನಿಕರಲ್ಲಿ ಭೀಕರ ಸಾಂಕ್ರಾಮಿಕದಿಂದ ಬಹುಮಂದಿ ಸತ್ತು ಕೇವಲ ಕೆಲವೇ ನೂರು ಜನ ಉಳಿದರು. ರೋಗನಿರೋಧ ಚುಚ್ಚುಮದ್ದು ನೀಡುವುದು ಕೆಲವು ವಸಾಹತುಗಳಲ್ಲಿ ಆರಂಭವಾಯಿತು. ಆಮೇಲೆ ಇದು ಶಾಸನವಾಯಿತು. ಅಮೆರಿಕ ದೇಶದಲ್ಲೇ ಮೊದಲಿನ ಆರೋಗ್ಯಸಮಿತಿ ೧೭೯೩ ರಲ್ಲಿ ಮೇರಿಲ್ಯಾಂಡ್ನ ಬಾಲ್ಟಿಮೋರ್ ನಗರದಲ್ಲಿ ಸ್ಥಾಪನೆ ಆಯಿತು. ಇದೇ ತೆರನ ಸಮಿತಿಗಳು ನ್ಯೂಯಾರ್ಕ್, ಮ್ಯಾಸಚುಸೆಟ್ಸಗಳಲ್ಲೂ ಆರಂಭವಾದುವು.

ಕೈಗಾರಿಕೋದ್ಯಮಗಳ ಕ್ರಾಂತಿಯಿಂದಾಗಿ ನಗರಗಳ ಜನನಿಬಿಡತೆ ಒಮ್ಮೆಲೇ ಹೆಚ್ಚಿ ಕಾರ್ಖಾನೆಗಳ ಸುತ್ತಲೂ ಕೊಳಚೆ ಪ್ರದೇಶಗಳು ಹುಟ್ಟಿಕೊಂಡು ಭಯಂಕರ ಅನಾರೋಗ್ಯ ವಾಯಿತು. ಲಂಡನ್ ನಗರದಲ್ಲಿ ಕೊಳಚೆ ಪ್ರದೇಶಗಳ ನಿರ್ಮಲೀಕರಣ ಚಟುವಟಿಕೆ ಆರಂಭವಾಯಿತು (೧೭೬೦). ಕೊಳಚೆ, ರೋಗಗಳ ಜತೆಗೆ ಬಡತನ, ನಿರುದ್ಯೋಗ ತಲೆಹಾಕಿದ್ದುವು. ಎಲಿಜಬೆತ್ ಬಡತನ ನಿವಾರಣಾ ಕಾನೂನು ಆಯಾ ಪ್ಯಾರಿಷ್ಗಳಿಗೆ (ಜಿಲ್ಲೆ) ವೈದ್ಯಕೀಯ ನೆರವು ಹಾಗೂ ಇತರ ಉಪಶಮನಗಳಿಗೆ ಜವಾಬ್ದಾರಿ ವಹಿಸಿತು.

ಸಾಮಾಜಿಕ ಸುಧಾರಣೆಗಳು[ಬದಲಾಯಿಸಿ]

ಬಡತನದಿಂದ ರೋಗ, ರೋಗದಿಂದ ಬಡತನ. ಕೊಳಚೆ ಎಡೆಗಳಲ್ಲಿ ಹೆಚ್ಚು ರೋಗ. ರೋಗ ಹೆಚ್ಚಿದ್ದಲ್ಲಿ ಕೊಳಚೆ, ಹೊಲಸು, ಬಡತನದೊಂದಿಗೆ ಕೆಟ್ಟ ಕೆಲಸ, ಅಪರಾಧ ಇವೇ ಮೊದಲಾದ ಸಂಗತಿಗಳು ೧೯ನೆಯ ಶತಮಾನದ ಮೊದಲಲ್ಲೇ ಮನದಟ್ಟಾಗಿದ್ದುವು. ಈ ಪರಿಸ್ಥಿತಿ ಪ್ರಾರಬ್ಧಕರ್ಮವೇನೂ ಅಲ್ಲ. ಪರಿಹಾರವಿಲ್ಲದಂಥ ಸಮಸ್ಯೆಯೂ ಅಲ್ಲವೆಂಬುದು ಗೋಚರವಾಗತೊಡಗಿತು. ಇಂಗ್ಲೆಂಡಿನಲ್ಲಿ ಸುಪ್ರಸಿದ್ಧ ಸಮಾಜಸುಧಾರಕರು ಜರೆಮೀಬೆಂತ್ಯಾಮ್, ಎಡ್ವಿನ್ ಚಾಡ್ವಿಕ್ ಮುಂದಾಳುತನದಲ್ಲಿ ಸುಧಾರಣೆಗಳನ್ನು ತರಲು ತೀವ್ರ ಆಸಕ್ತಿ ವಹಿಸಲಾಯಿತು. ಈ ಸಮಸ್ಯೆಗಳನ್ನು ಬಿಡಿಸಿ ಮುಂದಿನ ಕ್ರಮಗಳನ್ನು ಸೂಚಿಸಲು ಚಕ್ರವರ್ತಿ ಆಯೋಗ ನೇಮಕವಾಯಿತು. ಈ ಸಮಿತಿ ವರದಿ ಒಪ್ಪಿಸಿತು. ಇತರ ಸಂಶೋಧನೆಗಳೂ ನಡೆದುವು. ಅಂಕಿಅಂಶಗಳೂ ಸಂಗ್ರಹವಾಗಿ ಲಂಡನ್ ನಗರದ ಸಮಾಜ ಸುಧಾರಣಾ ಶಾಸನ (೧೮೩೦) ಜಾರಿಗೆ ಬಂದಿತು.

ಅಂಕಿ ಅಂಶ ಸಂಗ್ರಹಣ[ಬದಲಾಯಿಸಿ]

ಈ ಸಮಾಜ ಸುಧಾರಣಾ ಚಳವಳಿಯಿಂದ ಆರಂಭವಾದ ಅಂಕಿಅಂಶಗಳ ಸಂಕಲನ ಶಾಸನಗಳ ಪ್ರತಿಪಾದನೆಗೆ ಮಾರ್ಗದರ್ಶಕವಾದದ್ದಲ್ಲದೆ ಜನಸಾಮಾನ್ಯರಿಗೆ ಅರಿವು ಜಾಗೃತಿ ಮೂಡಿ ಅವರು ಸುಧಾರಣೆಗಳಿಗೆ ಒತ್ತಾಯಪಡಿಸಿದರು. ಈ ಚಳವಳಿಯಲ್ಲಿ ಹೆಸರಾಂತ ವ್ಯಕ್ತಿ ೧೯ನೆಯ ಶತಮಾನದ ಜೀವಸಂಖ್ಯಾಶಾಸ್ತ್ರಜ್ಞ ವಿಲಿಯಮ್ ಫಾರ್ (೧೮೭೫). ಇವನು ವಿಮರ್ಶಿಸಿದ ಅಂಕಿಅಂಶಗಳು ನಮ್ಮ ಸಮಾಜದ ಜೀವನ, ಆಹಾರ, ಆರ್ಥಿಕಸ್ಥಿತಿ ಇತ್ಯಾದಿಗಳಿಗೂ ಸಮಾಜದ ಜನರ ಆರೋಗ್ಯ ಅನಾರೋಗ್ಯಕ್ಕೂ ಇರುವ ನಿಕಟ ಸಂಬಂಧವನ್ನು ಎಲ್ಲರಿಗೂ ಎತ್ತಿ ತೋರಿದಂತಾಯಿತು. ಮಾನವಕುಲದ ಕಷ್ಟಕಾರ್ಪಣ್ಯಗಳಿಗೆ ಮಿತಿ ಮೀರಿದ ಜನಸಂಖ್ಯೆ ಕಾರಣವಲ್ಲ, ಒಬ್ಬೊಬ್ಬನಲ್ಲೂ ಇದ್ದೇ ಇರುವ ನ್ಯೂನತೆಗಳೇ ಕಾರಣ ಎಂದ. ಜೀವನ ಗಣತಿಯನ್ನು ಇವನು ವಿಜ್ಞಾನದ ಮಟ್ಟಕ್ಕೇರಿಸಿದ. ಇದಕ್ಕೂ ಮುಂಚೆ ಸರ್ ವಿಲಿಯಮ್ ಪೆಟ್ಟಿ ದೇಶದ ಆಡಳಿತದಲ್ಲಿ ಜನಗಳ ಆರೋಗ್ಯ, ಅನಾರೋಗ್ಯಗಳ ಪ್ರಭಾವವನ್ನು ತೋರಿಸಿದ. ರೋಗಬಾರದಂತೆ ತಡೆಗಟ್ಟುವ ಸ್ವಲ್ಪವೇ ಹಣ ದೇಶದ ಹಣಕಾಸಿನ ಹೆಚ್ಚಳಕ್ಕೆ ಬಹಳ ಸಹಾಯಕ. ರೋಗಕ್ಕೀಡಾಗದ ರೋಗದಿಂದ ಸಾಯದೆ ಉಳಿದ ಜನರಿಂದ ಕೈಗಾರಿಕೆ, ಉದ್ಯಮ ಇತ್ಯಾದಿಗಳಲ್ಲಿ ಹೆಚ್ಚು ಉತ್ಪಾದನೆಯೇ ಇದಕ್ಕೆ ಕಾರಣ. ೧೭ನೆಯ ಶತಮಾನದಲ್ಲಿ, ಜಾನ್ ಗ್ರಾಂಟ್ (೧೬೬೨) ಜನಾರೋಗ್ಯದ ವಿಚಾರವಾಗಿ ಅಂಕಿಅಂಶಗಳನ್ನು ಸಂಗ್ರಹಿಸಿ ಅವುಗಳ ಮಹತ್ತ್ವವನ್ನು ತೋರಿಸಿದ. ಜರ್ಮನಿಯ ಇನ್ನೂ ಹೆಸರಾದವರ ಪರಿಶೋಧನೆ, ವರದಿಗಳೇ ಮುಂದೆ ಬಿಸ್ಮಾರ್ಕ್ ಜಾರಿಗೆ ತಂದ ಶಾಸನಗಳಿಗೆ ಆಧಾರ. ಮೊದಲು (೧೭೪೮) ಜನನ, ಮರಣ ಇತ್ಯಾದಿಯ ಜೀವನಗಣತಿಯನ್ನು ಕಡ್ಡಾಯಮಾಡಿದ ಶಾಸನ ಜಾರಿಗೆ ತಂದ ಹೆಸರು ಸ್ವೀಡನ್ ದೇಶದ್ದು. ಮೊಟ್ಟಮೊದಲನೆಯ ಜನಗಣತಿ ೧೮೦೧ರಲ್ಲಿ ಇಂಗ್ಲೆಂಡ್ದಲ್ಲೂ, ಭಾರತದಲ್ಲಿ ೧೮೬೭-೧೮೭೨ ರಲ್ಲೂ, ಆಮೇಲೆ ೧೮೮೧ ರಲ್ಲೂ ಜರುಗಿತು. ಅಲ್ಲಿಂದೀಚೆಗೆ ಇದು ದಶಕಗಳಿಗೊಮ್ಮೆ ತಪ್ಪದೆ ನಡೆದುಕೊಂಡು ಬಂದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಮೊದಲು ಮ್ಯಾಸಚುಸೆಟ್ಸ್ ಸಂಸ್ಥಾನ ಕಾರ್ಮಿಕರ ಅಂಕಿಅಂಶ ಸಂಗ್ರಹದ ಖಾತೆಯನ್ನು ಪ್ರಾರಂಭಿಸಿತು. ನ್ಯೂಯಾರ್ಕ್ ಜನಗಳ ಆರೋಗ್ಯ, ಅನಾರೋಗ್ಯದ ವಿಚಾರವಾಗಿ ಜಾನ್ ಗ್ರಿಸ್ಕೋಮ್ ಅಧ್ಯಯನ ಮಾಡಿ ೧೮೪೫ ರಲ್ಲಿ ವರದಿ ಒಪ್ಪಿಸಿದ. ಬಾಸ್ಟನ್ ನಗರದಲ್ಲಿ ಹೊರಬಿದ್ದ ಶ್ಯಾಟಕ್ನ ವರದಿಯಿಂದ (೧೮೫೦) ಆರೋಗ್ಯಶಾಸನ ರೂಪುಗೊಂಡಿತು. ಮುಂದಿನ ಶಾಸನಗಳಿಗೆ ಇದೇ ಮಾದರಿಯಾಯಿತು. ಬರಬರುತ್ತಾ ಜೀವನಗಣತಿಗಾಗಿನ ಅಂಕಿಅಂಶಗಳ ಸಂಗ್ರಹಣೆಯ ಮಹತ್ತ್ವದ ಅರಿವು ಜನಸಾಮಾನ್ಯರಿಗೂ ತಿಳಿದುಬಂತು. ಶಾಸನಗಳಲ್ಲಿನ ಕಟ್ಟಳೆಗಳನ್ನು ಜಾರಿಮಾಡಲು ಸುಸಜ್ಜಿತ ಪೊಲೀಸ್ ಖಾತೆ ಸಿದ್ಧವಾಯಿತು. ಮೊದಲು ಸಮಸ್ಯೆಗಳ ಅಂಕಿಅಂಶಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿದ ಮೇಲೆ ಈ ಶಾಸನಗಳೆಲ್ಲವೂ ರೂಪುಗೊಂಡುವು. ಹಿಂದೆಂದೂ ನಡೆಯದ ಈ ಬಗೆಗಳ ರಾಷ್ಟ್ರೀಯ ಮಟ್ಟದ ದಿಸೆಯಲ್ಲಿ ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಬಹಳ ಮುಂದುವರಿದುವು. ಯುರೋಪ್ ದೇಶಗಳಲ್ಲಿ ಶಿಶುಮರಣಗಳು (ಹುಟ್ಟಿದ ಆಮೇಲೆ ಮೊದಲನೆಯ ಹುಟ್ಟಿದ ಹಬ್ಬವನ್ನೂ ಕಾಣದೆ ಸತ್ತ ಹಸುಳೆಗಳ ಸಂಖ್ಯೆ) ಅತಿಯಾಗಿತ್ತು. ಈ ಮಿತಿಮೀರಿದ ಸಾವುಗಳನ್ನು ತಡೆಗಟ್ಟಲೂ ಜನರಲ್ಲಿ ನೈತಿಕ ಮಟ್ಟವನ್ನು ಸುಧಾರಿಸಲೂ ಪಾರ್ಲಿಮೆಂಟಿನಲ್ಲಿ ಕೆಲವು ಕಾಯಿದೆಗಳಾದುವು. ಮ್ಯಾಜಿಸ್ಟ್ರೇಟರುಗಳಿಗೆ ಅನೇಕ ವಿಧದ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಾಚರಣೆಗಳು ಮೇಲ್ವಿಚಾರಣೆಗಾಗಿ ಅನುಜ್ಞೆ ಅಧಿಕಾರವೀವ ಕಾನೂನು (೧೭೫೧) ಜಾರಿಗೆ ಬಂತು. ಮೊಟ್ಟಮೊದಲಿನ ಸಮಾಜ ಸುಧಾರಣಾ ವಿಮಾ ಎನ್ನಬಹುದಾದ ಶಾಸನ ಮಂಡಿತವಾಯಿತು (೧೭೫೭). ಇದರಿಂದ ಥೇಮ್್ಸ ನದಿಯಲ್ಲಿ ಓಡಾಡುವ ಹಡಗು ಇತ್ಯಾದಿಗಳಿಗೆ ಕಲ್ಲಿದ್ದಲನ್ನು ಹೊರುವ ಕಾರ್ಮಿಕರಿಗೆ ಒಂದು ರೀತಿಯ ಪರಿಹಾರಕ್ಕೆ ಏರ್ಪಾಡಾಯಿತು. ಯಜಮಾನ ಕಾರ್ಮಿಕನ ಕೂಲಿಯ ಹಣದ ಸ್ವಲ್ಪ ಭಾಗವನ್ನು ಮುರಿದುಕೊಂಡು ಕೂಡಿಟ್ಟ ಹಣದಿಂದ ಕಾರ್ಮಿಕನಿಗೆ ಕಾಯಿಲೆಯಾದಾಗ, ಅಂಗ ಊನವಾದಾಗ, ಮುಪ್ಪಾದಾಗ, ಸತ್ತಾಗ ಪರಿಹಾರ ಹಣ ನೀಡಲು ಕಾನೂನಾಯಿತು. ಈ ಶಾಸನದಲ್ಲಿ ಷರತ್ತುಗಳನ್ನು ಪಾಲಿಸುವಾಗ ಮಾಲೀಕರು ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರಿಂದ, ಈ ಶಾಸನ ರದ್ದಾಯಿತಾದರೂ (೧೭೭೦), ಅದು ಮತ್ತೆ ೧೭೯೨ ರಲ್ಲಿ ಪುನರುದ್ಧಾರವಾಯಿತು. ಈ ನಿಧಿಯ ಮೇಲ್ವಿಚಾರಣೆ, ಆಡಳಿತಗಳು ನ್ಯಾಸಧಾರಿಗಳ (ಟ್ರಸ್ಟಿಗಳ) ವಶಕ್ಕೆ ಹೋಯಿತು. ಸರ್ ರಾಬರ್ಟ್ ಪೀಲ್ ಮಂಡಿಸಿದ ಉಮೇದುವಾರರ ಆರೋಗ್ಯ ಮತ್ತು ನೈತಿಕ ಸುಧಾರಣಾ ಕಾಯಿದೆ ೧೮೦೨ ರಲ್ಲಿ ಜಾರಿಗೆ ಬಂತು. ಇದರಿಂದ ಹತ್ತಿಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕರ ಪರಿಸ್ಥಿತಿಯನ್ನು ಉತ್ತಮಪಡಿಸಲು ಅನುಕೂಲವಾಯಿತು. ಆದರೂ ಈ ಶಾಸನದಿಂದ ಏನೂ ಅನುಕೂಲ ಆಗದಿದ್ದರೂ ಸರ್ಕಾರಕ್ಕೆ ಕಾರ್ಮಿಕರಲ್ಲಿ ಇರುವ ಶ್ರದ್ಧೆಯನ್ನು ತೋರಿದಂತಾಯಿತು. ಬೇರೆ ದೇಶಗಳಲ್ಲೂ ಕೈಗಾರಿಕೋದ್ಯೋಮ ಗಳಲ್ಲೂ ಬಾಲ ಕಾರ್ಮಿಕರಿಗೆ ಅನ್ವಯಿಸುವ ಕಾಯಿದೆಗಳಿಗಾಗಿ ಒತ್ತಾಯ ಆರಂಭವಾಯಿತು. ಬಡತನ ಪರಿಹಾರ ಕಾನೂನನ್ನೂ (೧೮೩೪) ಜನಾರೋಗ್ಯಪಾಲನೆಯ ಕಾನೂನುಗಳನ್ನೂ (೧೮೪೪-೪೫) ತರಲು ಪ್ರಮುಖ ಪಾತ್ರ ವಹಿಸಿದವ ಎಡ್ವಿನ್ ಚಾಡ್ವಿಕ್. ರೋಗವೇ ಬಡತನಕ್ಕೆ ಕಾರಣವೆಂದು ಇವನಿಗೆ ಚೆನ್ನಾಗಿ ಮನದಟ್ಟಾಗಿತ್ತು. ಬ್ರಿಟನ್ ದೇಶದ ಕಾರ್ಮಿಕ ಜನತೆಯ ನೈರ್ಮಲ್ಯ ಸ್ಥಿತಿಗತಿಗಳ ಪರಿಶೀಲನಾ ಸಮಿತಿಯ ವರದಿ ಹೊರಬಿತ್ತು (೧೮೪೨). ಈ ಸಮಿತಿಯ ಕಾರ್ಯದರ್ಶಿ ಎಡ್ವಿನ್ ಚಾಡ್ವಿಕ್. ಈ ವರದಿಯ ಮೇಲೆ ರಚಿಸಿದ ಶಾಸನಗಳು ಆರೋಗ್ಯ, ಸುರಕ್ಷಣೆ, ಸಮಾಜ ಸಮಸ್ಯೆಗಳ ಮೇಲೆ ರಾಷ್ಟ್ರೀಯಮಟ್ಟದ ಮೇಲ್ವಿಚಾರಣೆ ಮತ್ತು ಹತೋಟಿಗೆ ಆಧಾರವಾದುವು. ೧೮೩೩ರ ಕಾರ್ಖಾನೆ ಕಾಯಿದೆ ಅನಂತರ ಬಂದ ಆಧುನಿಕ ಕೈಗಾರಿಕಾ ಉದ್ಯಮಗಳ ಶಾಸನಕ್ಕೆ ಹಿನ್ನೆಲೆಯಾಯಿತು. ಲಿವರ್ಪುಲಿನ ನೈರ್ಮಲ್ಯ ಕಾಯಿದೆಯಿಂದಾಗಿ (೧೮೪೬) ನಗರಕ್ಕೆ ಆರೋಗ್ಯಾಧಿಕಾರಿ ಹಾಗೂ ಎಂಜಿನಿಯರ್ಗಳು ಬರುವಂತಾಯಿತು. ಅದೇ ವರ್ಷ ಜಾರಿಯಾದ ಉಪದ್ರವ ಕಳೆವ ಶಾಸನ, ರೋಗನಿರೋಧಕ ಶಾಸನ ಇವೇ ಮೊದಲಾದವು (೧೮೪೮) ಜಾರಿಗೆಬಂದ ಜನಾರೋಗ್ಯ ಶಾಸನದ ಪೀಠಿಕೆಯಾದವು.

ಯುರೋಪಿನಲ್ಲಿ[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ಈ ಸಮಾಜ ಸುಧಾರಣ ಶಾಸನಗಳು ಆಗುತ್ತಿದ್ದಂತೆಯೇ ಜರ್ಮನಿ, ಫ್ರಾನ್ಸ್ ಗಳಲ್ಲೂ ಚಳುವಳಿ ರಭಸದಿಂದ ಮುಂದುವರಿಯಿತು. ಜರ್ಮನಿಯ ಜೋಹಾನ್ ಪೀಟರ್ ಫ್ರಾಂಕ್ ಆರೋಗ್ಯ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಿಸಲೂ ಅದರ ಆಡಳಿತಕ್ಕೆ ರಾಷ್ಟ್ರೀಯ ಮಟ್ಟದ ಆರೋಗ್ಯ ಇಲಾಖೆಗಳಿರ ಬೇಕೆಂತಲೂ ಮೊಟ್ಟ ಮೊದಲು ಪ್ರತಿಪಾದಿಸಿದ. ಅದನ್ನು ಕಡ್ಡಾಯವಾಗಿ ಆಚರಣೆಗೆ ತರಲು ವೈದ್ಯಕೀಯ ಪೊಲೀಸ್ ಇಲಾಖೆ ನಿರ್ಮಾಣವಾಗಬೇಕೆಂದು ಶಿಫಾರಸ್ಸಾಯಿತು. ಇದೇ ರೀತಿ ಫ್ರಾನ್ಸಿನಲ್ಲೂ ಕಾರ್ಮಿಕರ ಆರೋಗ್ಯ ಸುರಕ್ಷಣೆ ಸರ್ಕಾರದ ಜವಾಬ್ದಾರಿ ಎಂದಾಯಿತು. ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಿಗೆ ಉಂಟಾಗುವ ಅಪಘಾತಗಳಲ್ಲಿ ರಕ್ಷಣೆ, ಪರಿಹಾರ ಕೊಡುವುದಲ್ಲದೆ ಗರ್ಭಿಣಿಯರು ಹಡೆದಾಗ ಅವರ ಆರೈಕೆ, ವೇತನ, ರೋಗ ಬಂದಾಗ ವಿಶ್ರಾಂತಿವೇತನ, ಮುಪ್ಪು, ನಿರ್ಬಲತೆ, ಊನ ಹಾಗೂ ಸಾವು ಒದಗಿದಾಗ ನೀಡುವ ಪರಿಹಾರಗಳಿಗೆ ಶಾಸನಗಳಾದವು (೧೮೮೪). ಈ ವಿಷಯದಲ್ಲಿ ಮುಂಬರುವ ಸಮಾಜ ಸುಧಾರಣಾ ಕಾಯಿದೆಗಳಿಗೆಲ್ಲಾ ಅಡಿಗಲ್ಲನ್ನು ಹಾಕಿ, ಜರ್ಮನಿ ಮುಂದಾಳತ್ವ ವಹಿಸಿತು.

ಅಮೆರಿಕದಲ್ಲಿ[ಬದಲಾಯಿಸಿ]

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಈ ಶಾಸನಗಳು ಹೆಚ್ಚು ಕಡಿಮೆ ಇಂಗ್ಲೆಂಡಿನಲ್ಲಿ ಆದ ಹಾಗೇ ರೂಪುಗೊಂಡಿತಾದರೂ ಸಾಮಾನ್ಯವಾಗಿ ಹೇಳುವುದಾ ದರೆ, ಶಾಸನಗಳು ಜಾರಿಗೆ ಬರಲು ಸಾವಕಾಶವಾಯಿತು. ೧೯ನೆಯ ಶತಮಾನದ ಮೊದಲಲ್ಲಿ, ಹೆಂಗಸರು, ಮಕ್ಕಳು ಕೂಲಿ ಮಾಡುವ ಕಾಲ ನಿರ್ಧರಿಸುವ, ಅವರಿಗೆ ಸಾಕಷ್ಟು ರಕ್ಷಣೆ ಕೊಡುವ ಶಾಸನಗಳು ಮೊದಲು ಜಾರಿಗೆ ಬಂದುವು. ಹೀಗೆ ಶಾಸನಗಳಾದರೂ ಅವನ್ನು ಆಚರಣೆಗೆ ತರಲೂ ಆಚರಿಸದವರ ಮೇಲೆ ಕ್ರಮ ಜರುಗಿಸಲೂ ವ್ಯವಸ್ಥೆ ಇರಲಿಲ್ಲ. ಕ್ರಮ ಜರುಗಿಸಿದರೂ ನುಣುಚಿಕೊಳ್ಳಲು ಸಾಕಷ್ಟು ನ್ಯೂನತೆಗಳು ಇದ್ದುವು. ಅಮೆರಿಕದ ಒಳಕಲಹವಾದ ಮೇಲೂ ಸಂಸ್ಥಾನಗಳಲ್ಲಿನ ಶಾಸನಗಳು ಕ್ರಮಬದ್ಧವೆಂದೇ ಎಲ್ಲರೂ ತಿಳಿದಿದ್ದರು. ಸಮಾಜ ಸುಧಾರಣಾ ಶಾಸನಗಳು, ಕರಾರುಗಳಲ್ಲಡಗಿರುವ ನಿಬಂಧನೆಗಳನ್ನು ಕಡ್ಡಾಯ ಮಾಡಬೇಕೆಂದು ಹಾಕಿರುವ ಶರತ್ತುಗಳು, ಸರ್ಕಾರ, ವ್ಯಾಪಾರ, ಕೈಗಾರಿಕೆ ಇತ್ಯಾದಿ ವ್ಯಕ್ತಿ ಪ್ರಯತ್ನಗಳಲ್ಲಿ ಪ್ರವೇಶಿಸಕೂಡದು ಎಂಬ ನ್ಯಾಯಸಮ್ಮತವಾದ ತತ್ತ್ವಕ್ಕೆ ಧಕ್ಕೆ ಎನ್ನುವ ಭಾವನೆ, ೧೮೯೦ರ ವರೆಗೆ ಜನಗಳಲ್ಲಿ ಮೂಡಲಿಲ್ಲ. ೨೦ನೆಯ ಶತಮಾನಕ್ಕೆ ಮುಂಚೆ ಅಮೆರಿಕದ ಕಾಂಗ್ರೆಸ್ ಕೆಲವೇ ಸಮಾಜ ಸುಧಾರಣಾ ಶಾಸನಗಳನ್ನು ಮಂಡಿಸಿತು. ೧೭೯೮ರಲ್ಲಿ ನಾವಿಕರ ಕೂಲಿ ಹಣದಿಂದ ೨0%ನ್ನು ಹಿಡಿದು ರಾಜ್ಯವಿಮಾ ನಿಧಿಗೆ ಜಮಾಮಾಡಿ, ಅವರು ಅಂಗವಿಕಲರಾದಲ್ಲಿ, ನಿರ್ಬಲರಾದಲ್ಲಿ ಆ ನಿಧಿಯಿಂದ ಪರಿಹಾರ ಕೊಡುವ ಯೋಜನೆಯನ್ನು ಸಂಯುಕ್ತರಾಷ್ಟ್ರ ಸರ್ಕಾರ ಜಾರಿಗೆ ತಂದಿತು. ೧೮೭೦ರಲ್ಲಿ ಸಂಪರ್ಕನಿಷೇಧ ದತ್ತಾಂಶ ಶೇ.೨೦ ಇದ್ದದ್ದು ಶೇ.೪೦ಕ್ಕೆ ಹೆಚ್ಚಿತು. ೧೮೭೮ರಲ್ಲಿ ರಾಷ್ಟ್ರೀಯ ಸಂಪರ್ಕ ನಿಷೇಧ (ಕ್ವಾರಂಟೀನ್) ಶಾಸನ ವಿಧಾಯಕವಾಯಿತು. ಈ ಶಾಸನ ಅಮೆರಿಕದ ಸರ್ಜನ್ ಜನರಲ್ನಿಗೆ ಸಂಯುಕ್ತ ಸಂಸ್ಥಾನದ ಬಂದರುಗಳಿಗೆ ಬರುವ ಜನರ ಜಹಜುಗಳಲ್ಲಿ ಸಾಕಷ್ಟು ಕಾಲ ಬೇರೆಯಾಗಿ ಇರಿಸಲು ಅಧಿಕಾರ ದೊರಕಿತು. ಇದಾದ ಮರುವರ್ಷ ರಾಷ್ಟೀಯ ಆರೋಗ್ಯ ಸಮಿತಿ ಸ್ಥಾಪಿತವಾಯಿತು.

ಭಾರತದಲ್ಲಿ[ಬದಲಾಯಿಸಿ]

ಭಾರತದಲ್ಲೂ ಸುಮಾರು ೧೮೬೦ ರಿಂದೀಚೆಗೆ ಜನಾರೋಗ್ಯದ ಆಡಳಿತ ಸುಧಾರಿಸಿತೆನ್ನಬಹುದು. ಈಸ್ಟ್ ಇಂಡಿಯಾ ಕಂಪೆನಿ ೧೮೫೯ರಲ್ಲಿ ಜನಾರೋಗ್ಯ ಆಡಳಿತವನ್ನು ವಹಿಸಿಕೊಂಡಿತು. ಅದಕ್ಕೆ ಮುಂಚೆ ಬೇರೆಬೇರೆ ರಾಜ್ಯಗಳಲ್ಲಿ ತಮ್ಮವೇ ನಿಬಂಧನೆಗಳಿದ್ದರೂ ಆಚರಣೆಗೆ ಬಂದವು ಕೇವಲ ಅಲ್ಪ. ಆಂಗ್ಲ ಸೈನಿಕರ ಮರಣ ಪ್ರಮಾಣ ಮಿತಿಮೀರಿ ಇಂಗ್ಲೆಂಡ್ನ ಪಾರ್ಲಿಮೆಂಟಿನ ಗಮನಕ್ಕೆ ಬಂದದ್ದು ಈಸ್ಟ್ ಇಂಡಿಯಾ ಕಂಪನಿ ಬಂದ ಅನಂತರ. ಕೂಡಲೇ ರಾಜಸನ್ನದಿನ ಪ್ರಕಾರ ರಚಿತವಾದ ಒಂದು ಆಯೋಗ ಭಾರತದ ಸೈನ್ಯದಳ ಹಾಗೂ ನಾಗರಿಕರ ಅಪಾರ ಸಾವುಗಳಿಗೆ ಕಾರಣಗಳನ್ನು ತನಿಖೆ ಮಾಡಿ ಶಿಫಾರಸುಗಳೊಂದಿಗೆ ವರದಿ ಕೊಡಬೇಕೆಂದು ನೇಮಕವಾಯಿತು. ೧೮೬೧ರಲ್ಲಿ ಆಂಗ್ಲಸೈನಿಕರ ಸಾವುಗಳು ೧00ಕ್ಕೆ ೬೯, ಭಾರತದ ಸೈನಿಕರಲ್ಲಿ ಸಾವಿರಕ್ಕೆ ೨0 ಇದ್ದುವು. ಜೈಲುಗಳಲ್ಲಿ ಮರಣಸಂಖ್ಯಾಪ್ರಮಾಣ ಸಾವಿರಕ್ಕೆ ೮೪-೧೨೦ ರವರೆಗೆ ಇದ್ದುವು. ಈ ಅಂಕಿ ಅಂಶಗಳು ೧೯೧೦-೧೯೧೪ರ ಹೊತ್ತಿಗೆ ಕ್ರಮವಾಗಿ ೪.೩೬, ೪.೩೯, ೨೧-೫0ಕ್ಕೆ ಇಳಿದಿದ್ದುವು. ಸಮಿತಿ ೧೮೬೩ರ ವರದಿಯಲ್ಲಿ ಆರೋಗ್ಯ ನೈರ್ಮಲ್ಯಗಳ ಮೇಲ್ವಿಚಾರಣೆಗೆ ಬೇರೊಂದು ನಿಯೋಜಿತ ಮಂಡಳಿ ಆಗಬೇಕೆಂದು ಸೂಚಿಸಿತು. ಆ ಪ್ರಕಾರ ಬಂಗಾಲ, ಮುಂಬಯಿ, ಮದರಾಸು ಪ್ರಾಂತ್ಯಗಳಲ್ಲಿ ಮೊದಲಿನ ಮಂಡಳಿಗಳು ಸ್ಥಾಪನೆಯಾದುವು. ಈ ಮಂಡಳಿ ಕೂಡಲೇ ಆರೋಗ್ಯ, ನೈರ್ಮಲ್ಯಗಳನ್ನು ನೋಡಿಕೊಳ್ಳಲು ಜನಾರೋಗ್ಯ ಇಲಾಖೆಗಳು ಏರ್ಪಡಬೇಕೆಂದು ಸಲಹೆಕೊಟ್ಟಿತು. ಈ ಸಲಹೆ ಬಹಳ ವರ್ಷಗಳವರೆಗೆ ಹಾಗೇ ಇತ್ತು. ಮದ್ರಾಸಿನಲ್ಲಿ ಸ್ಥಾಪಿತವಾದ ಮಂಡಳಿ ಮಾತ್ರ ಯಶಸ್ವಿಯಾಗಿ ಕೆಲಸಮಾಡಿ ಮರಣಪ್ರಮಾಣವನ್ನು ಬಹಳಮಟ್ಟಿಗೆ ಕಡಿಮೆ ಮಾಡಲು ಕಾರಣವಾಯಿತು. ೧೮೬೯ರ ಹೊತ್ತಿಗೆ ಈ ಮಂಡಳಿಗಳು ನಿರ್ಬಲವಾಗಿದ್ದುವು. ಆ ಮಂಡಳಿಯ ಸದಸ್ಯ ವೈದ್ಯಾಧಿಕಾರಿ ಮಾತ್ರ ಆರೋಗ್ಯ ಮತ್ತು ನೈರ್ಮಲ್ಯಾಧಿಕಾರಿ (ಸ್ಯಾನಿಟರಿ ಕಮಿಷನರ್) ಎನಿಸಿಕೊಂಡು ಉಳಿದಿದ್ದ.

ಕೈಗಾರಿಕಾ ಕ್ರಾಂತಿ, ವೈದ್ಯದ ಮುನ್ನಡೆ[ಬದಲಾಯಿಸಿ]

೧೮ನೆಯ ಶತಮಾನದ ಕೊನೆಯಲ್ಲೂ ೧೯ನೆಯ ಶತಮಾನದ ಮೊದಲಲ್ಲೂ ಯಂತ್ರಸಾಧನಗಳನ್ನು ಕಂಡುಹಿಡಿದುದರ ಫಲವಾಗಿ ಅನೇಕರು ನಿರುದ್ಯೋಗಿಗಳಾಗಿ ಧಣಿಗಳಿಗೂ ಕೂಲಿ ಕೆಲಸಗಾರರಿಗೂ ಇದ್ದ ಪರಸ್ಪರ ಸಂಬಂಧ ವಿರಸಗೊಂಡು ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇದಕ್ಕೂ ಹಿಂದೆ ಕೆಲಸಗಾರರಿಗೆ ಅನ್ವಯಿಸುವ ಕಾಯಿದೆಗಳೆಲ್ಲ ಕುಲಧರ್ಮ, ಜಾತಿಧರ್ಮ ಇತ್ಯಾದಿಗಳ ಮೇಲೆ ರೂಪಿತವಾಗಿದ್ದುವು. ಪ್ರಜಾಪಾಲನೆ ಮಾಡುತ್ತಿದ್ದ ರಾಜ ಪ್ರಜೆಗಳ ತಂದೆ ಎಂಬ ಭಾವನೆ ಬೆಳೆದಿತ್ತು. ಪ್ರ.ಶ. ೬೪೩ರಲ್ಲಿ ರೊಟಾರಿ ಲೊಂಬಾರ್ಡ್ಸ ರಾಜ ಕಟ್ಟಡಗಳನ್ನು ಕಟ್ಟುವಾಗ ಕೂಲಿಯಾಳಿಗೆ ಅಪಘಾತವಾದಲ್ಲಿ ಅವನಿಗೆ ಪರಿಹಾರ ಕೊಡಬೇಕೆಂದು ಆಜ್ಞೆ ಮಾಡಿದ್ದ. ಇವಕ್ಕೆ ಹಿನ್ನೆಲೆಯಾಗಿ ಕೇವಲ ಮಾನವ ಹಿತಸಾಧನೆ ಇತ್ತೇ ಹೊರತು ಬೇರೇನೂ ಇಲ್ಲ. ಕೈಗಾರಿಕಾ ಕ್ರಾಂತಿಯಿಂದೀಚೆಗೆ, ಕೆಲಸಗಾರನ ಆರೋಗ್ಯದ ಕಡೆ ಗಮನ ತೀವ್ರವಾಯಿತು. ಅವನ ಕೆಲಸದ ಸ್ಥಳ, ಕೆಲಸ ಹಾಗೂ ಹುದ್ದೆಯಿಂದಾಗಿ ಬಂದ ರೋಗಗಳ ಅರಿವು ಕ್ರಮವಾಗಿ ಅನುಭವದಿಂದ ತಿಳಿದು ಬಂತು. ಉದಾಹರಣೆಗೆ, ಗಣಿಯ ಆಳದ ಕೆಲಸಗಾರನಿಗೆ ಶ್ವಾಸಕೋಶದ ಸಿಲಿಕಬೇನೆ (ಸಿಲಿಕೋಸಿಸ್), ಸೀಸ, ರೇಡಿಯಮ್ ಮತ್ತಿತರ ರಾಸಾಯನಿಕಗ ಳೊಂದಿಗಿನ ಕೆಲಸಗಾರರಿಗೆ ದೇಹದೊಳಕ್ಕೆ ರಾಸಾಯನಿಕ ಹೊಕ್ಕು ವಿಷವಾಗುವುದು ಇವೇ ಮೊದಲಾದ ಉದ್ಯೋಗಿಕ ರೋಗಗಳೆಂದು ಪರಿಗಣಿಸಲಾಯಿತು. ಈ ಕೈಗಾರಿಕೆ, ಉದ್ಯೋಗಗಳಿಂದಾಗಿ ಬರುವ ರೋಗದ ತನಿಖೆ, ನಿದಾನ ಮತ್ತು ಚಿಕಿತ್ಸೆ ಬಹಳಮಟ್ಟಿಗೆ ಮುಂದುವರಿದುದೇ ಈ ವಿಷಯಗಳಲ್ಲಿ ಶಾಸನಗಳಾಗಲು ಕಾರಣವಾದುವು. ಕಾರ್ಖಾನೆ ಗಳಿಗೂ ಅಲ್ಲಿನ ಕೆಲಸಗಾರರಿಗೂ ಅನ್ವಯಿಸುವ ಕಾಯಿದೆಗಳು, ಇತರ ಕೆಲಸಗಾರರ ಸುರಕ್ಷಣೆ ಕಾಯಿದೆ, ನೊಂದ ಕೆಲಸಗಾರರ ಪರಿಹಾರ ಕಾಯಿದೆ, ಹಾಗೂ ಉದ್ಯೋಗದಿಂದಲೇ ಬರುವ ರೋಗಗಳ ಪರಿಹಾರಕ್ಕಾಗಿ ಕಾಯಿದೆಗಳೇ ಮೊದಲು ಕೈಗಾರಿಕಾ ವಿಪ್ಲವದಿಂದಾಗಿ ಬಂದ ಮುಖ್ಯ ಶಾಸನಗಳು. ಕೈಗಾರಿಕೆಯ ವೈದ್ಯ ತಳಹದಿ ಹಾಕಿದವ ಬರ್ನಾರ್ಡಿನೊ ರಾಮಜ್ಜಿನಿ. ಈತ ಹೊರಡಿಸಿದ ಒಂದು ಗ್ರಂಥದಲ್ಲಿ (೧೭೧೩) ರೋಗಕ್ಕೂ ದಾರಿದ್ರ್ಯಕ್ಕೂ ಇರುವ ಸಂಬಂಧವನ್ನು ಚೆನ್ನಾಗಿ ತೋರಿದ್ದಾನೆ. ರಾಮಜ್ಜಿನಿಗೆ ಮೊದಲು ಹಾಗೂ ಅನಂತರ ಆಮೂಲಾಗ್ರ ಅಧ್ಯಯನ, ಕೈಗಾರಿಕೋದ್ಯಮಗಳಿಗನ್ವಯಿಸುವ ವೈದ್ಯವಿಜ್ಞಾನವನ್ನು ಎತ್ತಿ ಹಿಡಿವ ಅನೇಕ ಪ್ರಕಟಣೆಗಳು ಹೊರಬಿದ್ದುವು. ಅವುಗಳಲ್ಲಿ ಮಹತ್ತ್ವಪುರಿತವಾದುವು, ೧೪೭೩ರಲ್ಲಿ ಉಲ್ರಿಕ್ ಎಲೆನ್ಬರ್ಗ್ ಬರೆದ ಕೆಲಸಮಾಡುವ ಕಡೆ ಹುಟ್ಟುವ ವಿಷಪುರಿತ ಹಾಗೂ ಕೆಡುಕಿನ ಧೂಮದ ಪರಿಣಾಮವಾಗಿ ಅಕ್ಕಸಾಲಿಗರನ್ನು ಕಾಡುವ ರೋಗಗಳು, ೧೫೫೬ರಲ್ಲಿ ಜೆಯಾರ್ಜಿಯಸ್ ಅಗ್ರಿಕೋಲನ ಗಣಿ ಕೆಲಸಗಾರರ ರೋಗಗಳು, ೧೭೭೫ರಲ್ಲಿ ಪರ್ಸಿವಾಲ್ ಪಾಟ್ ಬರೆದ ಕುಲುಮೆಗಾರರ ರೋಗಗಳು ಹಾಗೂ ೧೮೩೧ರಲ್ಲಿ ಚಾರಲ್ಸ್ ಟರ್ನರ್ ಥಾಕ್ರಾರವರು ಬರೆದ ಕೈಗಾರಿಕೆಗಳಿಂದೇಳುವ ರೋಗಗಳು, ಬಡತನದ ಆಮೂಲಾಗ್ರ ಅಧ್ಯಯನ --ಇವು ಮುಖ್ಯ. ಎಡ್ವಿನ್ ಚಾಡ್ವಿಕ್ ಮೊದಲಾದ ಸಮಾಜಸುಧಾರಕರು ಕಡೆಯ ವರದಿಗೆ ಬಹಳ ಮಹತ್ತ್ವ ಕೊಟ್ಟು ಅದನ್ನು ಆಧಾರವಾಗಿಟ್ಟುಕೊಂಡಿದ್ದರು.

ಆಕಸ್ಮಿಕಗಳು[ಬದಲಾಯಿಸಿ]

ಅನೇಕರಿಗೆ ಕೆಲಸಮಾಡುವಾಗ ಚಿಕ್ಕಪುಟ್ಟ ಗಾಯಗಳು, ತೀವ್ರತರ ಗಾಯ, ಕೈ ಕಾಲು ಯಂತ್ರದಲ್ಲಿ ಸಿಕ್ಕಿಯೋ ಗಣಿಗಳಲ್ಲಿ ಮೇಲಿನಿಂದ ಒಮ್ಮೆಲೇ ಬೀಳುವ ಕಲ್ಲು ಇತ್ಯಾದಿಗಳಿಂದಲೋ ಅಂಗ ಊನವಾಗುವುದು, ಕುರುಡಾಗುವುದು, ಕಿವುಡಾಗುವುದು ಸಾಮಾನ್ಯ. ಸುರಕ್ಷಣೆಗಾಗಿ ತಕ್ಕ ಸೌಲಭ್ಯಗಳನ್ನು ಧಣಿಗಳು ಒದಗಿಸಿದ್ದರೂ ಅಪಘಾತಗಳಾಗು ತ್ತವೆ. ಈ ರೀತಿಯ ಅಪಘಾತಗಳಿಗೆ ಹಣವನ್ನು ಪರಿಹಾರವಾಗಿ ಕೊಡಲು ತೀರ್ಮಾನ ವಾಯಿತು. ಇದಕ್ಕೆ ಮೊದಲು ಒಬ್ಬ ಕೆಲಸಗಾರ ಪರಿಹಾರ ಪಡೆಯಲು, ನ್ಯಾಯಸ್ಥಾನದಲ್ಲಿ ಅಪಘಾತಕ್ಕೆ ಧಣಿಯ ನಿರ್ಲಕ್ಷ್ಯವನ್ನು ಸಾಬೀತು ಮಾಡಿದ ಹೊರತು ಯಾವ ಪರಿಹಾರವೂ ದೊರಕುತ್ತಿರಲಿಲ್ಲ. ಅಪಾಯವೆಂಬುದು ತಿಳಿದೂ ಕೆಲಸಗಾರನ ಅಲಕ್ಷ್ಯದಿಂದಾದ ಅಪಘಾತಕ್ಕೆ ಯಾವ ತರಹದ ಪರಿಹಾರವೂ ಇರಲಿಲ್ಲ. ಮಾಲೀಕನೇನೋ ಯಂತ್ರೋಪಕರಣಗಳನ್ನು ಸುಸಜ್ಜಿತವಾಗಿ ನ್ಯೂನತೆಗಳಿಲ್ಲದಂತೆ, ನೋಡಿಕೊಳ್ಳಬೇಕೆಂದು ನಮೂದಿಸಿತ್ತಾದರೂ ಹಾಗೆ ಅವನು ನೋಡಿಕೊಳ್ಳದೇ ಆದ ಅಪಘಾತಕ್ಕೆ ಕೆಲಸಗಾರನಿಗೆ ಪರಿಹಾರವಿರಲಿಲ್ಲ. ಮಾಲೀಕ ಸುರಕ್ಷಣೆಗೆ ಸಂಬಂಧಿಸಿದ ಕಟ್ಟಳೆಯನ್ನು ಮೀರಿದ್ದರೂ ಅವನ ಮೇಲೆ ಯಾವ ರೀತಿಯ ಹೊಣೆಯನ್ನೂ ಹೊರಿಸುತ್ತಿರಲಿಲ್ಲ. ಇಂಗ್ಲೆಂಡಿನಲ್ಲಿ ೧೮೮೦ ಪಾರ್ಲಿಮೆಂಟು ಮಾಲೀಕರ ಹೊಣೆಗಾರಿಕೆ ಶಾಸನ ಮಂಡಿಸಿತಾದರೂ ಈ ಶಾಸನ ಕಡತದಲ್ಲೇ ಉಳಿಯಿತು. ಏಕೆಂದರೆ ಇಂಗ್ಲೆಂಡ್ನ ನ್ಯಾಯಸ್ಥಾನಗಳು-ಈ ಶಾಸನದಲ್ಲಿ ಮಾಲೀಕರು ತಮ್ಮ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುಂಚೆ ಶಾಸನದಲ್ಲಿ ಅಡಕವಾಗಿರುವ ಕಟ್ಟಳೆಗಳು ತಮಗೆ ಅನ್ವಯಿಸದೆಂದು ಒಪ್ಪಂದ ಮಾಡಿಕೊಂಡು ಕೆಲಸ ಕೊಡಲು ಅಡಚಣೆಗಳಿಲ್ಲವೆಂದೂ, ಹಾಗೆ ಮಾಡುವುದು ನ್ಯಾಯಬಾಹಿರವಲ್ಲವೆಂದೂ ಪರಿಗಣಿಸಿತು. ಜರ್ಮನಿಯಲ್ಲಿ ಬಿಸ್ಮಾರ್ಕ್ (೧೮೮೪) ಜಾರಿಗೆ ತಂದ ಪರಿಹಾರ ವಿಮಾಶಾಸನ ಮುಂಚೆ ಬಂದ ಶಾಸನಗಳಿಗೆ ಮೂಲಾಧಾರ, ಮಾದರಿ ಆಯಿತು. ಇಂಗ್ಲೆಂಡಿನ ಕೆಲಸಗಾರರ ಪರಿಹಾರ ಶಾಸನ (೧೮೯೭), ಆಮೇಲೆ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಜಾರಿಗೆ ಬಂದ ಶಾಸನ ಇವೆರಡೂ ಬಿಸ್ಮಾರ್ಕ್ ಮಾಡಿದ ಶಾಸನದ ಮಾದರಿಯನ್ನು ಅನುಸರಿಸಿದ್ದುವು. ೧೮೮೦ರಿಂದ ೧೯೧೦ ರೊಳಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಎಲ್ಲ ಸಂಸ್ಥಾನಗಳೂ ಕೈಗಾರಿಕೋದ್ಯಮಗಳಲ್ಲಿ ಉಂಟಾಗುವ ಅಪಘಾತಗಳಿಗೆ, ಒಂದಲ್ಲೊಂದು ರೀತಿಯಲ್ಲಿ ಮಾಲೀಕರು ಜವಾಬ್ದಾರರೆಂಬ ತತ್ತ್ವ ಮನದಟ್ಟಾಗಿ ಶಾಸನಗಳಾ ದುವು. ೧೯೦೬-೧೯೦೮ರಲ್ಲಿ ರೈಲ್ ರಸ್ತೆ ಕೆಲಸಗಾರರಿಗೆ ಪರಿಹಾರ ದೊರಕುವಂತೆ ಮಾಡಿದ ಶಾಸನಗಳೇ ಮುಖ್ಯ. ಈ ಶಾಸನಗಳೂ ಏರುಪೇರುಗಳಿಗೊಳಗಾದರೂ ಕೊನೆಗೆ ಶಾಸನ ಬದ್ಧವೆಂದು ಪರಿಗಣಿಸಲಾಯಿತು.

ಜನತೆಯ ಸುರಕ್ಷಣೆ[ಬದಲಾಯಿಸಿ]

೧೭ನೆಯ ಶತಮಾನದಲ್ಲಿ ಹೊರಬಿದ್ದ ದಾರಿದ್ರ್ಯ ನಿವಾರಣೆ ಶಾಸನ ಜಾರಿಗೆ ಬರುವ ಮುನ್ನ ದರಿದ್ರರನ್ನು ನೋಡಿಕೊಳ್ಳುವ ಜವಾಬ್ದಾರಿ ಪಾಶ್ಚಿಮಾತ್ಯ ದೇಶಗಳಲ್ಲಿ ಚರ್ಚಿನ ಹೊಣೆಯಾಗಿತ್ತು. ಭಾರತದಲ್ಲಂತೂ ದಾರಿದ್ರ್ಯ ನಿವಾರಣೆ ಎಂದರೆ ಎರಡು ಹೊತ್ತು ಊಟಕ್ಕೆ ಭಿಕ್ಷೆ ಬೇಡುವುದೇ ರೂಢಿಯಾಗಿ ಬಿಟ್ಟಿತ್ತು. ಜೊತೆಗೆ ಭಿಕ್ಷೆ ಹಾಕುವುದು ಒಂದು ಧರ್ಮಕಾರ್ಯವೆಂದು ನಂಬಿಕೆ ಇತ್ತು. ಭಾರತದಲ್ಲೆಲ್ಲ, ಅದರಲ್ಲೂ ಯಾತ್ರಾಸ್ಥಳಗಳಲ್ಲಿ ಧರ್ಮಛತ್ರಗಳು ಉಚಿತವಾಗಿ ಊಟ ವಸತಿಗಳನ್ನು ಯಾತ್ರಿಕರಿಗೆ ಒದಗಿಸುವುದು ಮಾತ್ರವಲ್ಲದೆ; ನಿರ್ಗತಿಕರು, ದೀನರು, ದರಿದ್ರರಿಗೆ ದಿನವೂ ಉಚಿತವಾಗಿ ಆಹಾರ ಒದಗಿಸುವುದು ಒಂದು ಸುಯೋಗವೆಂಬ ಭಾವನೆಯಿದೆ. ಹಳ್ಳಿಯಲ್ಲೂ ಮನೆಯಲ್ಲೂ ಊಟಮಾಡುವ ಸಮಯಕ್ಕೆ ಬಂದ ಅತಿಥಿ ಅಭ್ಯಾಗತರಿಗೇ ಅಲ್ಲದೆ ದೀನದರಿದ್ರರಿಗೂ ಆಹಾರ ನೀಡುವುದು ಯಜಮಾನನ ಕರ್ತವ್ಯವೆಂದು ತಿಳಿಯಲಾಗಿತ್ತು. ಇದರಿಂದ ಇಹಲೋಕ ಪರಲೋಕಗಳಲ್ಲಿ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇತ್ತು. ಈಗಲೂ ಅನೇಕ ಸಾಂಪ್ರದಾಯಿಕ ಕುಟುಂಬಗಳಲ್ಲಿ ಇದು ಆನುವಂಶಿಕವಾಗಿ ನಡೆದುಕೊಂಡು ಬರುತ್ತಿದೆ. ಯೆಹೂದಿಯರಲ್ಲೂ ಇದೇ ರೀತಿಯ ಭಾವನೆಗಳನ್ನು ಕಾಣಬಹುದು. ರಾಜರು ಕೆಲವರು, ತಮ್ಮ ಅಧೀನಕ್ಕೊಳಪಟ್ಟ ಸಾಮಂತರಲ್ಲಿ ಹಾಗೂ ಶ್ರೀಮಂತರಲ್ಲಿ ಅವರವರ ಆಡಳಿತ ಕ್ಷೇತ್ರದಲ್ಲಿರುವ ದೀನದರಿದ್ರರಿಗೆ ನೆರವುಕೊಟ್ಟು ಕಾಪಾಡುವ ಜವಾಬ್ದಾರಿಯನ್ನು ಹೊರಿಸಿದ್ದರು. ಹಿಂದಿನ ಕಾಲದಿಂದಲೂ, ಸಮಾಜದಲ್ಲಿ ತಮ್ಮ ತಮ್ಮಲ್ಲೇ ಸಂಘಗಳನ್ನು ಕಟ್ಟಿಕೊಂಡು ಅನೇಕ ರೀತಿಯ ಸಾರ್ವಜನಿಕ ಹಿತದೃಷ್ಟಿಯ ಧ್ಯೇಯಗಳನ್ನು ಸಾಧಿಸುವುದು ತಿಳಿದ ವಿಚಾರ. ಉದಾಹರಣೆಗೆ ದಾರಿದ್ರ್ಯ ನೀಗಲು ಉದ್ಯೋಗ ಒದಗಿಸುವುದು. ಧರ್ಮಪಾಲನೆಗೆ ಶವಸಂಸ್ಕಾರದ ಏರ್ಪಾಟು, ವಿಧವೆ ಆದವಳು ಮತ್ತೊಬ್ಬರಿಗೆ ಹೊರೆಯಾಗದ ರೀತಿ ಅವಳಿಗೆ ಕೆಲಸದ ಹವಣಿಕೆ ಇತ್ಯಾದಿ. ಈ ರೀತಿಯ ಧರ್ಮಕಾರ್ಯಗಳು ಎಷ್ಟೇ ನಡೆಯುತ್ತಿದ್ದರೂ ಸಮಸ್ಯೆ ಬೃಹದಾಕಾರವಾದ್ದರಿಂದ ಖಾಸಗಿ ಸಂಸ್ಥೆಗಳಿಗೆ ಪರಿಹಾರ ಏರ್ಪಾಡು ಮಾಡುವುದೂ, ಆಗದ ಕೆಲಸವಾಯಿತು. ಅದರಲ್ಲಿ ಕ್ಷಾಮ ಡಾಮರ, ಆರ್ಥಿಕ ಮುಗ್ಗಟ್ಟುಗಳೇ ಮುಂತಾದ ಕಾಲಗಳಲ್ಲಿ ನಿರುದ್ಯೋಗ ಭೀಕರ ರೂಪವನ್ನು ತಾಳಿ ದಾರಿದ್ರ್ಯ, ಹಸಿವು, ರೋಗರುಜಿನಾದಿಗಳು ತಾಂಡವವಾಡುತ್ತಿದ್ದಾಗ ಸರ್ಕಾರ ಸುಮ್ಮನೆ ಕೂಡಲಾಗಲಿಲ್ಲ. ಸಾರ್ವಜನಿಕರಿಂದ ಮೇಲಿಂದ ಮೇಲೆ ಒತ್ತಾಯ ಆರಂಭವಾಯಿತು. ೧೬ನೆಯ ಶತಮಾನದ ಮೊದಲಲ್ಲೇ ಸರ್ ಥಾಮಸ್ ಮೋರ್ ತಮ್ಮ ಯೂಟೋಪಿಯಾ ಗ್ರಂಥದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮಗಳು, ಸಮಾಜಾರೋಗ್ಯ ವಿಮಾ, ಸಾಮಾಜಿಕ ಭದ್ರತೆ ಕಾಪಾಡಲು ಕ್ರಮಗಳು ಹಾಗೂ ಸಾರ್ವಜನಿಕ ವಸತಿನಿರ್ಮಾಣ ಇವೇ ಮೊದಲಾದ ಯೋಜನೆಗಳನ್ನು ಸೂಚಿಸಿದ್ದ. ಇದೇ ರೀತಿ ಡೇನಿಯಲ್ ಡೀಫೊ ಕೂಡ ಸುಧಾರಣೆಗಳನ್ನು ಸೂಚಿಸಿದ್ದ. ಡೆನಿಸ್ ಡೈಡೆರೋ ಬರೆದ ವಿಶ್ವಕೋಶದಲ್ಲಿ ಆಸ್ಪತ್ರೆಗಳ ವಿಚಾರದಲ್ಲಿ ಬರೆಯುತ್ತ ಮುಪ್ಪಿನಕಾಲದ ವಿಮೆ, ವೈದ್ಯಕೀಯ ನೆರವು ಮುಂತಾದ ಸಾರ್ವಜನಿಕ ನೆರವುಗಳ ಯೋಜನೆಗಳ ವಿಚಾರವಾಗಿ ಸ್ಥೂಲವಾಗಿ ವಿವರಿಸಿದ್ದಾನೆ. ಇಂಗ್ಲೆಂಡಿನಲ್ಲಿ ೧೯೪೮ರ ಹೊತ್ತಿಗೆ ಎಲಿಜಬೆತ್ ಕಾಲದಿಂದಿದ್ದ ದಾರಿದ್ರ್ಯ ನಿವಾರಣ ಶಾಸನ ಮೂಲೆಗೆ ಬಿತ್ತು. ರಾಷ್ಟ್ರೀಯ ನೆರವು ಶಾಸನ ಜಾರಿಗೆಬಂದು, ಮೊದಲಿದ್ದ ಅನೇಕ ಪುರಾತನ ಕಲ್ಪನೆಗಳು ದೂರವಾದುವು. ಒಂದನೆಯ ಮಹಾಯುದ್ಧಕ್ಕೆ ಮೊದಲೇ, ೧೯೧೧ರ ರಾಷ್ಟ್ರೀಯ ಆರೋಗ್ಯ ವಿಮಾ ಶಾಸನ ಮಂಡಿತವಾಗಿತ್ತು. ಇದರಿಂದ ಕೆಲಸಗಾರ ರೋಗಿಯಾದರೆ ವೈದ್ಯಕೀಯ ನೆರವು ಬೇಕಾದರೆ, ಪರಿಹಾರ ಒದಗಿಸಬೇಕೆಂಬ ಮೂಲತತ್ತ್ವ ಅಂಗೀಕೃತವಾಗಿತ್ತು. ಆದರೆ ಈ ಪರಿಹಾರವನ್ನು ಬಳಸಲು ಕೆಲಸಗಾರರು ವಿಮಾ ಯೋಜನೆಗೆ ಒಳಪಟ್ಟಿರುವುದು ಕಡ್ಡಾಯವಾಗಿತ್ತು. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ರಾಷ್ಟ್ರೀಯ ವಿಮಾ ಶಾಸನ (೧೯೪೪), ಕುಟುಂಬ ಸಂಭಾವನಾ ಶಾಸನ(೧೯೪೫), ರಾಷ್ಟ್ರೀಯ ಜನಾರೋಗ್ಯ ಸೇವಾ ಶಾಸನ (೧೯೪೬), ರಾಷ್ಟ್ರೀಯ ವಿಮಾ ಶಾಸನಗಳನ್ನು (೧೯೪೬) ಪಾರ್ಲಿಮೆಂಟ್ ಅಂಗೀಕರಿಸಿತು. ಇವೆಲ್ಲದರಿಂದ ಸಾರ್ವಜನಿಕ ನೆಮ್ಮದಿಯ ವಿಚಾರದಲ್ಲಿ ಸರ್ವವ್ಯಾಪಕ ಯೋಜನೆಗೆ ವಾತಾವರಣ ಚೆನ್ನಾಗಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ೧೯೫೩ರ ಹೊತ್ತಿಗೆ ಆರೋಗ್ಯ, ವಿದ್ಯೆ, ಸುರಕ್ಷಣೆಯ ಬೇರೆ ಇಲಾಖೆಯೇ ರೂಪುಗೊಂಡರೂ, ಅನೇಕ ಸಮಾಜಶಾಸನಗಳು ಸಂಯುಕ್ತ ರಾಷ್ಟ್ರ ಸರ್ಕಾರ ಹಾಗೂ ಸಂಸ್ಥಾನಗಳ ಪರಸ್ಪರ ಸಹಕಾರದ ಮೇಲೆ ನಿಂತಿತ್ತು. ಇವು ಪುರ್ಣ ರಾಷ್ಟ್ರೀಯ ಸ್ವತ್ತಾಗಿರಲಿಲ್ಲ. ಮುಖ್ಯವಾಗಿ ಸಂಯುಕ್ತ ರಾಷ್ಟ್ರ ಸರ್ಕಾರ ಸಂಸ್ಥಾನಗಳಿಗೆ ಸಹಾಯದ್ರವ್ಯವನ್ನು ಒದಗಿಸುತ್ತಿತ್ತು. ಉದಾಹರಣೆಗೆ ಬಾಣಂತಿ, ಶಿಶುಶಾಸನ (೧೯೨೧), ರಾಷ್ಟ್ರೀಯ ಶಾಲಾ ಉಪಾಹಾರ ಶಾಸನ (೧೯೪೬) ಇವು ಪರಸ್ಪರ ಸಹಕಾರದಿಂದ ಬದ್ಧವಾದ ಶಾಸನಗಳು. ಇಂಗ್ಲೆಂಡ್, ಸ್ಕ್ಯಾಂಡಿನೇವಿಯ ದೇಶಗಳಷ್ಟು ಕಲ್ಯಾಣರಾಜ್ಯ ಸ್ಥಾಪನೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮುಂದುವರಿದಿಲ್ಲವೆಂದು ಹೇಳಬಹುದು. ಆದರೂ ಎಲ್ಲ ಸಮಾಜ ಶಾಸನಕ್ಕೂ ವಿಮಾ ತತ್ತ್ವವನ್ನು ಅನ್ವಯಿಸಬೇಕೆಂಬ ಅಭಿಪ್ರಾಯ ರೂಪುಗೊಳ್ಳುತ್ತಿರುವ ಹಾಗೆ ಕಂಡುಬರುತ್ತದೆ. ೧೯೩೦ರ ಆರ್ಥಿಕ ಮುಗ್ಗಟ್ಟು, ಸಾರ್ವಜನಿಕರಿಗೆ ನೆರವು, ನಿರುದ್ಯೋಗ ಪರಿಹಾರ, ಸಾಮಾಜಿಕ ಭದ್ರತಾ ವೇತನ ಕೆಲವು ಸಾರ್ವಜನಿಕ ನೆಮ್ಮದಿಯ ರಕ್ಷಣಾ ಕಾಯಿದೆಗಳಿಗೆ ದಾರಿಮಾಡಿ ಕೊಟ್ಟಿತು. ಈ ಕಾಯಿದೆಗಳು ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕಾಯಿದೆಗಳು. ಸಮಾಜ ಸುಧಾರಣಾ ಕಾಯಿದೆಗಳ ಪೈಕಿ ಸಮಾಜದ ಭದ್ರತೆ ಕಾಪಾಡಲು ಹಾಗೂ ನ್ಯಾಯಸಮ್ಮತವಾದ ಕಾರ್ಮಿಕರ ಸೇವಾಸ್ಥಿತಿಗಳನ್ನು ನಿಗದಿ ಮಾಡುವ ಶಾಸನಗಳೂ ಮುಖ್ಯವಾದುವು. ೧೯೩೭ರ ಆರಂಭದಲ್ಲಿ ಅಮೆರಿಕ ವರಿಷ್ಠ ನ್ಯಾಯಾಲಯ ಕಾಂಗ್ರೆಸ್ಸಿಗೆ ಶಾಸನಗಳನ್ನು ಮಾಡುವ ಪುರ್ಣಹಕ್ಕು ಇದೆ ಎಂದು ಸಾರಿತು. ಆದರೂ ಈ ಶಾಸನಗಳ ಸತ್ವದಲ್ಲೂ ಕಾರ್ಯಕ್ರಮಗಳಲ್ಲೂ ನ್ಯೂನತೆಗಳೂ ಲೋಪದೋಷಗಳು ಇದ್ದೇ ಇದ್ದುವು. ಸಂಸ್ಥಾನಗಳ ರಾಜ್ಯಾಂಗಗಳಲ್ಲಿ ಅಡಕವಾಗಿರುವ ಹಕ್ಕು ಬಾಧ್ಯತೆಗಳ ಮೇಲೆ ಸಂಸ್ಥಾನಗಳಲ್ಲಿರುವ ನ್ಯಾಯಾಂಗ- ಶಾಸನಗಳು ನ್ಯಾಯಸಮ್ಮತ ಅಥವಾ ಅಸಮ್ಮತವೆಂದು ನಿರ್ಧಾರ ಮಾಡುತ್ತವೆ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಶಾಸನಗಳನ್ನು ಆಚರಣೆಗೆ ತರುವಾಗ ಮಾತ್ರ ಅನೇಕ ನ್ಯೂನತೆಗಳು ಕಂಡುಬಂದಿವೆ. ಶಾಸನದ ವಿಧಿಗಳನ್ನು ಚಲಾಯಿಸಲು ಆಧಿಕಾರವನ್ನು ನ್ಯಾಯಾಂಗದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ವಹಿಸಿಕೊಡುವುದು, ಪ್ರತಿಯೊಂದಕ್ಕೂ ನಿಗದಿಯಾದ ಪ್ರಮಾಣ, ದರ್ಜೆಯನ್ನು ನಿರ್ಧರಿಸಿ ಆಡಳಿತ ವ್ಯವಹಾರಗಳಲ್ಲಿ ತಾವೇತಾವಾಗಿ ವರ್ತಿಸಲು ಎಡೆಯಿಲ್ಲದಂತೆ ಮಾಡುವುದೂ ಇನ್ನೂ ಅನೇಕ ವಿಧದ ಲೋಪದೋಷಗಳ ಪರಿಹಾರ ಅಗತ್ಯವೆಂದೂ ಕಂಡುಬಂದಿತು. ಸಂಸ್ಥಾನದ ಶಾಸನಗಳನ್ನು ಉಲ್ಲಂಘಿಸಿದಾಗ ಆರೋಗ್ಯಾಧಿಕಾರಿಗಳು ಅನೇಕ ವಿಧದ ಕಾರ್ಯಕ್ರಮ ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗೆ, ತನಿಖೆ, ಕೆಡುಕಾಗಿಸುವ ವಸ್ತುಗಳ, ಜಾಡ್ಯವನ್ನು ಇತರರಿಗೆ ಹರಡಬಲ್ಲ ಪದಾರ್ಥಗಳ ನಾಶ, ಸಾರ್ವಜನಿಕ ಸ್ಥಳಗಳನ್ನು (ಸಿನಿಮಾ, ಹೋಟೆಲ್ ಇತ್ಯಾದಿ) ಮುಚ್ಚುವುದು, ನಿವೇಶನ, ವಸ್ತು ಮುಂತಾದುವಲ್ಲಿ ಸೋಂಕುಕಳೆತ, ಪ್ರತಿಬಂಧಕ ಚುಚ್ಚುಮದ್ದನ್ನು ಹಾಕುವುದು, ರೋಗಿಯೊಡನೆ ಇದ್ದವರನ್ನು ಬೇರೆಯಾಗಿ ಇರಿಸುವುದು, ಇವೇ ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಕ್ರಮಗಳಿಂದ ನೊಂದವನಿಗೆ ಪರಿಹಾರ ಕೊಟ್ಟರೆ ಸಾಕೇ? ನೊಂದವನ ದೃಷ್ಟಿಯಿಂದ ತೆಗೆದುಕೊಂಡ ಕಾರ್ಯಕ್ರಮ ಅನುಚಿತ, ಅಸಂಬದ್ಧ ಎಂದಿದ್ದರೆ ಅವನು ನ್ಯಾಯಾಲಯದ ಮೊರೆ ಹೋಗಬಹುದೇ? ಹಾಗೆ ಹೋದರೆ ಅದುವರೆಗೆ ಕ್ರಮ ತೆಗೆದುಕೊಳ್ಳುವುದನ್ನು ಮುಂದೂಡಿ ನ್ಯಾಯಾಲಯದ ತೀರ್ಮಾನಕ್ಕೆ ಕಾದಿರಬಹುದೇ? ಇದು ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವೇ? ಒಂದು ಸಾಂಕ್ರಾಮಿಕ ಜಾಡ್ಯವಿದ್ದಾಗ ಆ ಮನೆಯ ಯಜಮಾನ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸದಿದ್ದರೆ, ಅದರಿಂದ ಆಗುವ ಅನಾಹುತ ಎಲ್ಲರಿಗೂ ತಿಳಿದ ವಿಷಯ. ಹೀಗಿದ್ದೂ ಯಜಮಾನ ವರದಿ ಮಾಡದಿದ್ದರೆ ಶಿಕ್ಷೆ ಕೇವಲ ಜುಲ್ಮಾನೆಯೇ ಅಥವಾ ಇನ್ನೂ ಕಠಿಣತರವಾದ ಕ್ರಮವೋ? ಇಷ್ಟೆಲ್ಲ ಶಿಕ್ಷೆಗೆ, ಅನಾನುಕೂಲತೆಗಳಿಗೆ, ಒಳಪಡಿಸಿದ ಅನಂತರ ಕಾರ್ಯಕ್ರಮ ಬೇಕಿರಲಿಲ್ಲವೆಂದು ಗೊತ್ತಾದಲ್ಲಿ ಅದಕ್ಕೆ ಯಾರು ಹೊಣೆ? ಈ ವಿಚಾರಗಳನ್ನೆಲ್ಲಾ ಬಹಳ ಯೋಚಿಸಿ ಹಿಂದು ಮುಂದು ತಿಳಿದು, ಸಾರ್ವಜನಿಕ ಹಿತದೃಷ್ಟಿಯಿಂದ ಏನೇನು ಕ್ರಮ ಅತ್ಯಗತ್ಯವೋ ಅದನ್ನೆಲ್ಲ ತೆಗೆದುಕೊಳ್ಳದೆ ಬೇರೆ ಮಾರ್ಗವೇ ಇಲ್ಲ.

ಆಹಾರ, ಔಷಧಿಗಳ ಕೀಳ್ಬೆರಕೆ[ಬದಲಾಯಿಸಿ]

ಇಡೀ ಆರೋಗ್ಯಕ್ಷೇತ್ರದಲ್ಲೇ, ಆಹಾರ, ಔಷಧಗಳ ಕೀಳ್ಬೆರಕೆಗೆ ಅಥವಾ ಕಲಬೆರಕೆಗೆ (ಅಡಲ್ಟರೇಷನ್) ಸಂಬಂಧಿಸಿದ ಶಾಸನಗಳು ಅತಿ ಮುಖ್ಯ. ಪ್ರಾಚೀನ ಭಾರತದಲ್ಲಿ, ಕೀಳ್ಬೆರಕೆಯನ್ನು ತಪ್ಪಿಸಲು ರೂಪಿತವಾದ ಶಾಸನಗಳಿಲ್ಲದಿದ್ದರೂ, ರಾಜಮಹಾರಾಜರ ಆಡಳಿತದಲ್ಲಿ ಆಹಾರ ಕೀಳ್ಬೆರಕೆ ಮಾಡಿದರೆ ಅತ್ಯುಗ್ರದಂಡವನ್ನು ವಿಧಿಸಲಾಗುತ್ತಿತ್ತು. ತಪ್ಪಿತಸ್ಥನ ಕೈಗಳನ್ನೂ ಕತ್ತರಿಸಲು ಆಜ್ಞೆ ಹೊರಡುತ್ತಿತ್ತಂತೆ. ರೋಮ್, ಅಥೆನ್ಸಗಳಲ್ಲಿ ಹಿಂದೆ ಮಾದಕ ಪದಾರ್ಥಗಳಿಗೆ ಕೀಳ್ಬೆರಸುವುದನ್ನು ನಿಷೇಧಿಸುವ ಶಾಸನಗಳಿದ್ದುವು. ಇಂಗ್ಲೆಂಡಿನಲ್ಲಿ ಮೂರನೆಯ ಹೆನ್ರಿ ರಾಜನಾಗಿದ್ದಾಗಿನಿಂದಲೂ ಕೆಲವು ಆಹಾರಗಳ ಕೀಳ್ಬೆರಕೆ ನಿಷೇಧಿಸಲಾಗಿತ್ತು. ಟೀ, ಕಾಫಿ, ಬಿಯರ್ ಮಾದಕಗಳ ಕೀಳ್ಬೆರಕೆ ನಿರ್ಬಂಧಿಸಲು ಪಾರ್ಲಿಮೆಂಟ್ ಆಗಾಗ್ಗೆ ಶಾಸನಗಳನ್ನು ಮಂಡಿಸುತ್ತಿತ್ತು. ಆಹಾರ ಕೀಳ್ಬೆರಕೆ ಶಾಸನ (೧೮೭೨) ಜಾರಿಗೆ ಬಂತು. ಇದರಿಂದ ಆಹಾರಪದಾರ್ಥಗಳನ್ನು ವಶಪಡಿಸಿಕೊಂಡು ಅವನ್ನು ತಜ್ಞರಿಂದ ಪರೀಕ್ಷೆ ಮಾಡಿಸಿ ಅವು ಕೀಳ್ಬೆರಕೆ ಎಂದು ರುಜುವಾತಾದಲ್ಲಿ ೫೦ ಪೌಂಡುಗಳ ದಂಡ ವಿಧಿಸಲು ಸಾಧ್ಯವಾಯಿತು. ಹಾಗೂ ಎರಡನೆಯ ಸಲ ಕೀಳ್ಬೆರಕೆ ಮಾಡಿ ಸಿಕ್ಕಿ ಬಿದ್ದಾಗ ೬ ತಿಂಗಳ ಕಾರಾಗೃಹವಾಸ, ಕಠಿಣ ಸಜ ವಿಧಿಸಲು ಅವಕಾಶವಿತ್ತು. ಈ ಶಾಸನದ ವ್ಯಾವಹಾರಿಕ ಲೋಪದೋಷಗಳನ್ನು ಸರಿಪಡಿಸಿ ಒಂದು ಸರ್ವವ್ಯಾಪಕ ಆಹಾರ ಮತ್ತು ಔಷಧಿಗಳ ಕೀಳ್ಬೆರಕೆ, ಪ್ರತಿಬಂಧಕ ಶಾಸನ (೧೯೫೫) ಜಾರಿಗೆ ಬಂತು. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾಂಗ್ರೆಸ್ಸು ಔಷಧಿಗಳ ಕೀಳ್ಬೆರಕೆ ನಿಷೇಧ ಶಾಸನಗಳನ್ನು (೧೮೪೮) ಜಾರಿಗೆ ತಂದು, ೧೮೯೦ರಲ್ಲಿ ಆಹಾರ ಕೀಳ್ಬೆರಕೆ ವಿರುದ್ಧ ಶಾಸನವನ್ನು ಮಂಡಿಸಿತು. ೧೮೮೦ರಿಂದ ೧೯೦೬ರಲ್ಲಿ ೧೦೩ ಮಸೂದೆಗಳು ಕೇವಲ, ಅಂತರರಾಜ್ಯದ ಆಹಾರ, ಔಷಧಗಳ ಸಾಗಾಣಿಕೆಗೆ ಅನ್ವಯಿಸುವ ಕಾಯಿದೆಗಳೇ ಆಗಿದ್ದುವು. ಆದರೆ 1906ರಲ್ಲಿ ಅಧ್ಯಕ್ಷ ರೂಸ್ವೆಲ್ಟ್ ಶುದ್ಧ ಆಹಾರ, ಔಷಧಿಗಳ ಶಾಸನಕ್ಕೆ ಸಹಿ ಹಾಕಿ ಅದು ಅಂಗೀಕಾರ ಆಗುವವರೆಗೆ ಈ ಮಸೂದೆಗಳು ಯಾವುವೂ ಸ್ವೀಕೃತವಾಗಲಿಲ್ಲ. ಈ ಶಾಸನ ಅಂಗೀಕಾರವಾದ ಮೇಲೂ ಅದರಲ್ಲಿ ನಿಯಮಿತವಾದ ವಿಧಿಗಳನ್ನು ಜಾರಿಗೆ ತರಲು ಅನೇಕ ತೊಡಕುಗಳು ಕಂಡು ಬಂದುವು. ಕೀಳ್ಬೆರಕೆ ಎಂಬ ಪದದ ಅರ್ಥ ಸಾಕಷ್ಟು ವ್ಯಾಪಕವಾಗದಿರುವುದು ಒಂದು ಕಾರಣ. ವಿಧಿಸುತ್ತಿದ್ದ ಶಿಕ್ಷೆ ಅಂದರೆ ಮೊದಲ ಉಲ್ಲಂಘನೆಗೆ ೨೦ಪೌಂಡುಗಳ ದಂಡ, ಎರಡನೆಯದಕ್ಕೆ ೩೦೦ ಪೌಂಡುಗಳ ದಂಡ ಅಥವಾ ಒಂದು ವರ್ಷ ಸಜಾ, ವ್ಯಾಪಾರಿಗಳಲ್ಲಿ ಸಾಕಷ್ಟು ಭಯ ಹುಟ್ಟಿಸುವಂತಿರಲಿಲ್ಲವೆಂಬುದು ಎರಡನೆಯ ಕಾರಣ. ೧೯೩೭ರಲ್ಲಿ ಒಂದು ವಿಷಾದಕರ ಪ್ರಸಂಗ ಗಮನಕ್ಕೆ ಬಂತು. ಎಲಿಕ್ಸರ್ ಸಲ್ಫೊನಮೈಡ್ ಮದ್ದನ್ನು ಹಂಚಿಕೆ ಹಾಗೂ ಮಾರಾಟವನ್ನು ನಿಯಂತ್ರಿಸುವ ಕಾಯಿದೆ ಯಾವುದೂ ಇರಲಿಲ್ಲ. ೧೯೩೮ರಲ್ಲಿ ಸಂಯುಕ್ತ ರಾಷ್ಟ್ರ ಸರ್ಕಾರದ ಆಹಾರ, ಔಷಧ ಮತ್ತು ಕಾಂತಿವರ್ಧಕಗಳ ಶಾಸನ (ಫೆಡರಲ್ ಫುಡ್, ಡ್ರಗ್ ಅಂಡ್ ಕಾಸ್ಮೆಟಿಕ್ ಆ್ಯಕ್ಟ್, ೧೯೩೮) ಜಾರಿಗೆ ಬಂತು. ಇದರಿಂದ ಆರೋಗ್ಯಕ್ಕೆ ಧಕ್ಕೆ ಬರುವ ಆಹಾರ ಹಾಗೂ ಮದ್ದನ್ನು ಕೊಳಕು ಅಥವಾ ಸೋಂಕಿನಿಂದ ಕೂಡಿರುವ ಸೀಸೆ, ಪಾತ್ರೆ, ಪೆಟ್ಟಿಗೆ ಇತ್ಯಾದಿಗಳಲ್ಲಿ ಹಾಕಿ ಮಾರುವುದನ್ನು ನಿಷೇಧಿಸಲಾಯಿತು. ಈ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ ೧೦೦೦ ಪೌಂಡು ಅಥವಾ ಒಂದು ವರ್ಷ ಕಠಿಣ ಸಜಾ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಮೋಸಕ್ಕೆ ಅಥವಾ ಎರಡನೆಯ ಸಲ ಕಾಯಿದೆ ವಿರುದ್ಧ ನಡೆದರೆ ೧೦,೦೦೦ ಪೌಂಡುಗಳ ದಂಡ ಇಲ್ಲದಿದ್ದಲ್ಲಿ ೩ ವರ್ಷ ಕಠಿಣ ಸಜೆಗೆ ಅವಕಾಶವಿತ್ತು. ಈ ಶಾಸನವನ್ನು ಜಾರಿಗೆ ತಂದದ್ದೇ ಅಲ್ಲದೆ ಕಟ್ಟುನಿಟ್ಟಾಗಿ ಆಚರಣೆಗೆ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.

ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳು[ಬದಲಾಯಿಸಿ]

ಸಾರ್ವಜನಿಕ ಆರೋಗ್ಯ ರಕ್ಷಣಾ ಕಾಯಿದೆಗಳು ಹಾಗೂ ನೊಂದ ಕೆಲಸಗಾರರಿಗೆ ಪರಿಹಾರ ನೀಡುವ ಕಾಯಿದೆಗಳ ಜೊತೆಗೇ ಸಾರ್ವಜನಿಕ ಕ್ಷೇಮರಕ್ಷಣಾ ಕಾಯಿದೆಗಳೂ ಜಾರಿಗೆ ಬಂದವೆಂದು ಹೇಳಬಹುದು. ಅಪ್ರೇರಿತ ಸ್ವಯಂಸೇವಕ ಮಂಡಳಿಗಳು ಹೆಚ್ಚು ಆಸಕ್ತಿವಹಿಸಿ ಜನಗಳಿಗೆ ತಿಳಿವಳಿಕೆ ಕೊಟ್ಟು ತಾವೇ ಚಟುವಟಿಕೆಗಳನ್ನು ವ್ಯವಸ್ಥೆ ಮಾಡಿದುವು. ೨೦ನೆಯ ಶತಮಾನದಲ್ಲಂತೂ ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಇಂಜಿನಿಯರು ಅನೇಕ ವಿಧದ ರಕ್ಷಣೆಗಳನ್ನು ನಿರೂಪಿಸಿ ಆಚರಣೆಗೆ ತಂದಿದ್ದಾರೆ. ಹಾಗೂ ಕೆಲಸಗಾರ ಆದಷ್ಟು ಸುರಕ್ಷಿತವಾಗಿರಲು ಸೂತ್ರಗಳನ್ನು ವಿಧಿಸಿದ್ದಾರೆ. ಈ ಸೂತ್ರಗಳನ್ನು ಪಾಲಿಸಿದ್ದೇ ಆದರೆ ಕೆಲಸಗಾರ ಬಹುಮಟ್ಟಿಗೆ ಅಪಾಯವೇ ಇಲ್ಲದಂತಿರಬಹುದು. ಇದರಿಂದ ಮಾಲೀಕರೂ ತಮ್ಮ ನುರಿತ ಕೆಲಸಗಾರರಿಂದ ಪುರ್ಣ ಪ್ರಯೋಜನ ಪಡೆಯುವಂತಾಯಿತು. ಈ ಉದ್ದೇಶದಿಂದಲೇ ಕಾರ್ಖಾನೆಗಳಲ್ಲಿ ಆವಿಯ ಕುದಿಪಾತ್ರೆಗಳನ್ನು ಪರಿಶೀಲಿಸುವುದು ಮೊದಮೊದಲಲ್ಲಿ ರೂಢಿಗೆ ಬಂತು. ಅನಂತರ ಮನೆ ಕಟ್ಟುವ ಮುನ್ನ, ಗಿರಣಿಗಳನ್ನು ಸ್ಥಾಪಿಸುವ ಮೊದಲು ಪೌರಸಭೆಯ ಅಧಿಕಾರಿ ಬಂದು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಕಾರ್ಯ ಪ್ರಾರಂಭ ಮಾಡಲು ಅಪ್ಪಣೆ ದೊರೆಯುತ್ತಿತ್ತು. ಗಣಿಗಳಲ್ಲಿ ಕೆಲಸ ಮಾಡುವವರ ಸಂರಕ್ಷಣೆ, ರೈಲುದಾರಿಗಳನ್ನು ನಿರ್ಮಿಸುವ ಕೆಲಸಗಾರರ ಸಂರಕ್ಷಣೆ ಕಡ್ಡಾಯ ಮಾಡುವ ಕಾನೂನುಗಳು ೧೮೮೭ರಲ್ಲಿ ಜಾರಿಗೆ ಬಂದು ಕ್ರಮೇಣ ೧೮೯೩, ೧೯೦೩, ೧೯೧೦ ಮತ್ತು ೧೯೨೦ರಲ್ಲಿ ವಿಸ್ತಾರವಾಗಿ ತಿದ್ದುಪಡಿಗಳಾಗಿ ಸಂಯುಕ್ತ ರಾಷ್ಟ್ರ ಸರ್ಕಾರದ ಮೊದಲಿನ ಮಹತ್ತ್ವದ ಶಾಸನವಾದುವು. ೧೯೩೬ರ ವಾಲ್ಷಿ ಹೀಲಿ ಸಾರ್ವಜನಿಕ ಗುತ್ತಿಗೆದಾರರಿಗೆ ಅನ್ವಯಿಸುವ ಶಾಸನದ ಪ್ರಕಾರ, ಸರ್ಕಾರದ ಕೆಲಸವನ್ನೊಪ್ಪಿಕೊಂಡಿರುವ ಪ್ರತಿಯೊಬ್ಬ ಗುತ್ತಿಗೆದಾರನೂ ಆಯಾ ಸಂಸ್ಥಾನದಲ್ಲಿ ಜಾರಿಯಲ್ಲಿ ರುವ ಆರೋಗ್ಯ ರಕ್ಷಣಾ ಮತ್ತು ಕ್ಷೇಮ ರಕ್ಷಣಾ ಕಾಯಿದೆಗೆ ಒಳಪಟ್ಟು ಕೆಲಸ ಮಾಡಬೇಕು ಎಂದು ತೀರ್ಮಾನವಾಯಿತು. ಈ ಕಾನೂನುಗಳ ಮಹತ್ತ್ವವನ್ನು ಮಾಲೀಕರು ಅರಿತಿದ್ದಾರೆ; ಅದರಲ್ಲಿ ಅಡಕವಾಗಿರುವ ಸೂತ್ರಗಳ ಪಾಲನೆಯನ್ನು ಈ ಆಧುನಿಕ ಮಾಲೀಕರು ತಮ್ಮ ಕರ್ತವ್ಯವೆಂದು ಪರಿಗಣಿಸಿ ಕೆಲಸಗಾರರಿಗೆ ಪುರ್ಣ ರಕ್ಷಣೆ ಕೊಡುವುದರಲ್ಲಿ ಸಫಲರಾಗಿದ್ದಾರೆ. ಅಮೆರಿಕದ ಕೈಗಾರಿಕೋದ್ಯಮಗಳಲ್ಲಿ ಅಪಘಾತಗಳಿಗೆ ಎಡೆ ಇಲ್ಲದಂತೆ ಸೂತ್ರಗಳನ್ನು ನಿಯಮಿಸುವುದರಲ್ಲಿ ಅಮೆರಿಕ ಸ್ಟ್ಯಾಂಡರ್ಡ್ ಸಂಘ ಬಹಳ ಆಸಕ್ತಿ ವಹಿಸಿತು. ಅಪಘಾತವನ್ನು ತಡೆಗಟ್ಟಲು ಚಳವಳಿ ಎಲ್ಲೆಲ್ಲಿಯೂ ಕಂಡುಬಂತು. ಅಂತಾರಾಷ್ಟ್ರೀಯ ಕೈಗಾರಿಕಾ ಅಪಘಾತ ನಿರ್ಬಂಧ ಸಂಘ ಹಾಗೂ ನಿಯೋಜಿತ ಆಯೋಗ ಈ ಚಳವಳಿಯ ಮೇಲೆ ಪ್ರಭಾವ ಬೀರಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಕಾರ್ಮಿಕ ಇಲಾಖೆ ಹಾಗೂ ೧೯೫೩ರಿಂದ ಆರೋಗ್ಯ, ವಿದ್ಯಾ ಮತ್ತು ನೆಮ್ಮದಿ ಇಲಾಖೆ ಕೈಗಾರಿಕೋದ್ಯಮಗಳಿಗೊಳಪಟ್ಟ ಕೆಲವು ಕ್ಷೇಮರಕ್ಷಣೆಗೆ ಹೊಣೆಯಾಗಿವೆ. ಗಣಿಗಳಲ್ಲಿ ಅಪಘಾತವಾಗದಂತೆ ಆಗಾಗ್ಗೆ ಅಧಿಕೃತ ಪರಿಶೀಲನೆ ನಡೆಸಬೇಕು ಹಾಗೂ ಸುರಂಗದ ಮೇಲ್ಭಾಗ ಕುಸಿಯದಿರಲು, ಸ್ವಚ್ಛ ಗಾಳಿ, ಉಪಯೋಗ ಮಾಡುವ ಸಲಕರಣೆಗಳ ಸ್ಥಿತಿ, ಬೆಂಕಿಯಿಂದ ರಕ್ಷಣೆ ಮೊದಲಾದವು ಯಾವ ರೀತಿ ಇರಬೇಕೆಂಬುದನ್ನು ಕಾನೂನು ನಿರ್ದಿಷ್ಟ ರೀತಿಯಲ್ಲಿ ನಿಗದಿಮಾಡಿದೆ. ೧೯೨೦ಕ್ಕೆ ಮುಂಚೆ ನೊಂದ ಕೆಲಸಗಾರ ನ್ಯಾಯಾಲಯಕ್ಕೆ ಹೋಗಿ ತನಗೆ ಸಂಭವಿಸಿದ ಅಪಘಾತಕ್ಕೆ ಪರಿಹಾರವನ್ನು ಬೇಡಿಕೊಳ್ಳಬೇಕಾಗಿತ್ತು. ಅನಂತರ ಈ ಪರಿಹಾರವನ್ನು ಕೊಡಲು ಆಯಾ ಕೈಗಾರಿಕೆಗೆ ಸಂಬಂಧಪಟ್ಟ ಅಧಿಕೃತ ಮಂಡಳಿಗಳೇ ಕಾನೂನುರೀತ್ಯಾ ಅರ್ಹತೆ ಪಡೆದವು. ಕೇವಲ ಕೈಗಾರಿಕೋದ್ಯಮಗಳಲ್ಲಿ ಒದಗಬಹುದಾದ ಅಪಘಾತಗಳನ್ನು ತಡೆಗಟ್ಟುವ ನಿಬಂಧನೆಗಳೇ ಅಲ್ಲದೆ ಇನ್ನೂ ಅನೇಕ ರೀತಿಯ ಸುರಕ್ಷಣಾ ಕಾನೂನುಗಳು ಜಾರಿಗೆ ಬಂದುವು. ಉದಾಹರಣೆಗೆ ಜನವಾಹನ ಸಂಚಾರಗಳನ್ನು ನಿಯಂತ್ರಿಸುವ, ಸಿನಿಮಾ ಮಂದಿರಗಳಿಗೆ ಅನ್ವಯಿಸುವ, ಶಾಲೆಗಳಿಗೆ ಅನ್ವಯಿಸುವ ಹೆದ್ದಾರಿ, ಪಕ್ಕದಾರಿ, ಸಾರ್ವಜನಿಕ ವಾಹನ, ಸ್ನಾನಮಾಡುವ ತೀರಪ್ರದೇಶ, ಬೆಂಕಿ ಅನಾಹುತ ಮುಂತಾದವುಗಳಿಗೆ ಅನ್ವಯಿಸುವ ಕಾಯಿದೆಗಳೂ ಬಂದುವು. ಭಾರತದಲ್ಲಿಯೂ ಆರೋಗ್ಯ ಮತ್ತು ಸಮಾಜ ಕಲ್ಯಾಣ ಹಾಗೂ ಜನತೆಯ ಕ್ಷೇಮರಕ್ಷಣಾ ಶಾಸನಗಳು ಅನೇಕವಿವೆ. ಭಾರತದ ರಾಜ್ಯಾಂಗ ೧೯೩೫ರ ಭಾರತ ಸರ್ಕಾರ ಶಾಸನವನ್ನು ಅಂಗೀಕಾರ ಮಾಡಿದೆ. ಈ ಶಾಸನದಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಗಳನ್ನು ಮತ್ತು ಶಾಸನಗಳ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ನಿರ್ದೇಶಿಸಿದೆ. ಅದೂ ಅಲ್ಲದೆ ಕೆಲವು ಸಮಾನ ಅಧಿಕಾರವುಳ್ಳ ವಿಷಯಗಳ ಪಟ್ಟಿಯನ್ನೂ ನಮೂದಿಸಲಾಗಿದೆ. ಅಂದರೆ ಯಾವುದಾದರೂ ಒಂದು ಶಾಸನ ಅಂಗೀಕಾರವಾದರೆ ಆ ಶಾಸನ ಕಡ್ಡಾಯವಾಗಿದ್ದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಆ ಶಾಸನವನ್ನು ಆಚರಣೆಗೆ ತರುತ್ತವೆ. ಕಡ್ಡಾಯವಲ್ಲದಿದ್ದರೆ, ರಾಜ್ಯಸರ್ಕಾರಗಳು ಆ ಶಾಸನವನ್ನು ಸ್ವೀಕಾರ ಮಾಡುವ ಅಥವಾ ಮಾಡದಿರುವ ಅಧಿಕಾರವನ್ನು ಹೊಂದಿವೆ. ಈ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ, ಶಾಸನವನ್ನು ಆಚರಣೆಗೆ ತರಬಹುದು, ಅಥವಾ ತರದೆ ಇರಬಹುದು, ಉದಾಹರಣೆಗೆ ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ (೧೯೫೪) ಭಾರತದ ಎಲ್ಲ ಭಾಗಗಳಿಗೂ ಕಡ್ಡಾಯವಾಗಿ ಅನ್ವಯಿಸುವ ಶಾಸನ. ಆದರೆ ಭಾರತದ ಸಾಂಕ್ರಾಮಿಕ ಜಾಡ್ಯ ಹತೋಟಿ ಶಾಸನ (೧೮೫೭) ಕಡ್ಡಾಯ ಶಾಸನವಲ್ಲ. ಅದು ಕೇವಲ ಸ್ವೀಕಾರಾರ್ಹ ಶಾಸನವಷ್ಟೆ. ಭಾರತ ಸರ್ಕಾರ ಹಾಗೂ ರಾಜ್ಯಸರ್ಕಾರಗಳು ಜಾರಿಗೆ ತಂದಿರುವ ಕೆಲವು ಮುಖ್ಯ ಆರೋಗ್ಯ ಮತ್ತು ಸಮಾಜಕಲ್ಯಾಣ ಶಾಸನಗಳನ್ನು ಈ ಕೆಳಗೆ ಕೊಡಲಾಗಿದೆ:

 • ರೋಗಿಗಳ ಮತ್ತು ರೋಗಿಗಳೊಂದಿಗೆ ಸಂಪರ್ಕ ಹೊಂದಿದವರನ್ನು ಪ್ರತ್ಯೇಕ ಮಾಡಿ ಅವರ ಚಲನವಲನಗಳ ಮೇಲೆ ಹತೋಟಿ ಇಡಲು ೧೮೨೫ರಲ್ಲಿ ಮಂಡಿಸಿದ ಶಾಸನ (ಕ್ವಾರಂಟೀನ್ ಆ್ಯಕ್ಟ್ ೧೮೨೫).
 • ಭಾರತ ಸಾಂಕ್ರಾಮಿಕ ಜಾಡ್ಯಗಳ ಹತೋಟಿ ಶಾಸನ ೧೮೫೭
 • ಭಾರತದ ನೌಕಾವ್ಯಾಪಾರಿಗಳ ಶಾಸನ ೧೮೫೯
 • ಭಾರತೀಯ ದಂಡ ಸಂಹಿತೆ ೧೮೬೦ (ಇಂಡಿಯನ್ ಪೀನಲ್ ಕೋಡ್)
 • ಜನನ ಮರಣಗಳ ದಾಖಲೆ ಶಾಸನ ೧೮೭೩
 • ಸಿಡುಬು ನಿರೋಧ ಚುಚ್ಚುಮದ್ದಿನ ಶಾಸನ ೧೮೮೦
 • ವೈದ್ಯಕೀಯ ಶಾಸನ ೧೮೮೬
 • ಕುಷ್ಠರೋಗಿಗಳಿಗನ್ವಯಿಸುವ ಶಾಸನ ೧೮೯೮
 • ಭಾರತದ ಹುಚ್ಚು ಹಿಡಿದವರಿಗೆ ಅನ್ವಯಿಸುವ ಶಾಸನ ೧೯೧೨
 • ಭಾರತ ರೆಡ್ಕ್ರಾಸ್ ಶಾಸನ ೧೯೨೨
 • ಭಾರತ ಗಣಿಗಳ ಶಾಸನ ೧೯೨೩
 • ಕಾರ್ಮಿಕರ ಪರಿಹಾರ ನೀಡುವ ಕಾಯಿದೆ ೧೯೨೩
 • ಕೇಂದ್ರ ಸರ್ಕಾರದ ಆಹಾರ ಶಾಸನ ೧೯೪೦
 • ಭಾರತದ ಗಿರಣಿಗಳ ಶಾಸನ ೧೯೪೮
 • ಕಾರ್ಮಿಕರ ರಾಜ್ಯವಿಮಾ ಶಾಸನ ೧೯೪೮
 • ಕಲ್ಲಿದ್ದಲು ಗಣಿ ಕೆಲಸಗಾರರ ಮಿತವ್ಯಯ ಮತ್ತು ಲಾಭಾಂಶ ಸಂಗ್ರಹ ನಿಧಿ ಯೋಜನೆ ೧೯೪೮
 • ಕೆಲಸಗಾರರ ಮಿತವ್ಯಯ ಸಂಗ್ರಹ ನಿಧಿ ಶಾಸನ ೨೯೫೨
 • ಆಹಾರದ ಕೀಳ್ಬೆರಕೆ ತಡೆಗಟ್ಟುವ ಶಾಸನ ೧೯೫೪
 • ವಿಶೇಷ ರೀತ್ಯಾ ವಿವಾಹಗಳಿಗೆ ಅನ್ವಯಿಸುವ ಶಾಸನ ೧೯೫೪
 • ಹಿಂದೂ ವಿವಾಹ ಶಾಸನ ೧೯೫೫
 • ವರದಕ್ಷಿಣೆ ಮತ್ತು ಕನ್ಯಾದಕ್ಷಿಣೆ ಸ್ವೀಕಾರ ರದ್ದುಗೊಳಿಸಿದ ಶಾಸನ
 • ಕೊಳಚೆ ಪ್ರದೇಶ ನಿರ್ಮೂಲನ ಶಾಸನ
 • ಹೆರಿಗೆ ಸಹಾಯಾರ್ಥ ಪರಿಹಾರ ಶಾಸನ
 • ಅಶಕ್ತರ ಸಹಾಯ ನಿಧಿ ಶಾಸನ
 • ಆಶ್ರಿತರ ಸಹಾಯ ನಿಧಿ ಶಾಸನ
 • ಸ್ತ್ರೀಯರ ಮತ್ತು ಹೆಣ್ಣುಮಕ್ಕಳ ಅನೈತಿಕ ವ್ಯಾಪಾರನಿಗ್ರಹ ಶಾಸನ ಇತ್ಯಾದಿ

ಇವಿಷ್ಟೇ ಅಲ್ಲದೆ ಇನ್ನೂ ಅನೇಕ ಶಾಸನಗಳು ಜಾರಿಯಲ್ಲಿವೆ. ಉದಾಹರಣೆಗೆ, ಪೌರಸಭಾ ಶಾಸನ, ಗ್ರಾಮಪಂಚಾಯತಿ ಶಾಸನ-ಇವು ತಮ್ಮ ತಮ್ಮ ಕ್ಷೇತ್ರಗಳಿಗೆ ಅನ್ವಯಿಸು ವಂತೆ ಜನಾರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರು, ಕಕ್ಕಸು ನಿವೇಶನಗಳ ನಿರ್ಮಾಣ, ಕೊಳಚೆ ಪ್ರದೇಶಗಳ ನಿರ್ಮೂಲನ, ಸಾಂಕ್ರಾಮಿಕ ಜಾಡ್ಯಗಳ ಹತೋಟಿ, ವಸತಿ ಸೌಕರ್ಯ, ವೇಶ್ಯಾಗೃಹಗಳ ಹತೋಟಿ ಇತ್ಯಾದಿ ವಿಷಯಗಳಿಗೆ ಅನ್ವಯಿಸುವ ನಿಯಮಗಳನ್ನು ಅಡಕಮಾಡಿ ಜಾರಿಗೆ ತಂದಿವೆ. ಕೆಲವು ರಾಜ್ಯಗಳಲ್ಲಿ ಜನಾರೋಗ್ಯ ಮತ್ತು ನೈರ್ಮಲ್ಯ ಹಾಗೂ ಸಮಾಜ ಕಲ್ಯಾಣಕ್ಕೆ ಅನ್ವಯಿಸುವ ಹಲವಾರು ನಿಯಮಗಳನ್ನು ಕ್ರೋಡೀಕರಿಸಿ ಜನಾರೋಗ್ಯ ಶಾಸನ ಎಂಬ ಸರ್ವವ್ಯಾಪಿ ಶಾಸನವನ್ನೂ ಜಾರಿಗೆ ತಂದಿದ್ದಾರೆ. ಈ ವಿಷಯದ ಉಪಸಂಹಾರಕ್ಕೆ ಮೊದಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಟುವಟಿಕೆಗಳನ್ನು ಸ್ಥೂಲವಾಗಿ ಪರಿಶೀಲಿಸಬಹುದು. ಆರೋಗ್ಯ ಮತ್ತು ಕ್ಷೇಮರಕ್ಷಣೆಯ ವಿಚಾರ ಅಂತಾರಾಷ್ಟ್ರೀಯ ಹೊಣೆ ಎಂಬುದನ್ನು ಅನೇಕ ಮಹನೀಯರು ೧೭-೧೮ನೆಯ ಶತಮಾನಗಳಲ್ಲಿ ತಾವು ಬರೆದ ಗ್ರಂಥಗಳಲ್ಲಿ ಹಾಗೂ ವರದಿಗಳಲ್ಲಿ ನಮೂದಿಸಿದ್ದಾರೆ. ಈ ವಿಚಾರದಲ್ಲಿ ಲೀಗ್ ಆಫ್ ನೇಷನ್ಸ್, ಸಂಯುಕ್ತ ರಾಷ್ಟ್ರಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳ ಉದ್ದೇಶವನ್ನು ತಮ್ಮ ತಮ್ಮ ರಾಜ್ಯಾಂಗಗಳಲ್ಲಿ ಅಡಕ ಮಾಡಿವೆ ಹಾಗೂ ಸಾಕಷ್ಟು ಪ್ರಾಮುಖ್ಯವನ್ನೂ ಕೊಟ್ಟಿವೆ. ತಿಳಿವಳಿಕೆಯಿಂದ ಪ್ರೇರಿತವಾದ ಜನಾಭಿಪ್ರಾಯ ಹಾಗೂ ಜನತೆಯ ಸಂಪುರ್ಣ ಸಹಕಾರ ಜನಾರೋಗ್ಯವನ್ನು ಕಾಪಾಡಲು ಅತ್ಯಂತ ಮುಖ್ಯ ಮತ್ತು ಅಗತ್ಯವೆಂದು ಈ ಅಂತಾರಾಷ್ಟ್ರೀಯ ಸಂಸ್ಥೆಗಳು ಒತ್ತಿ ಹೇಳಿವೆ. ಪ್ರತಿಯೊಬ್ಬ ಮಾನವನೂ ತನ್ನ ಆರೋಗ್ಯವನ್ನು ಉನ್ನತ ಮಟ್ಟದಲ್ಲಿಟ್ಟು ಕಾಪಾಡಿ ಪರಸ್ಪರ ನೆರವು ನೀಡುವುದು ತನ್ನ ಕರ್ತವ್ಯ ಎಂದು ತಿಳಿದಿದೆ. ಸಂಯುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ, ಆಹಾರ ಮತ್ತು ಕೃಷಿಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಈ ಶಾಖೆಗಳೆಲ್ಲವೂ ಇದೇ ಧ್ಯೇಯವನ್ನೊಳಗೊಂಡು ಕಾರ್ಯಮಾಡುತ್ತಿವೆ. ಖಾಸಗಿ ಸಂಸ್ಥೆಗಳ ಪಾತ್ರ ಏನೂ ಕಡಿಮೆ ಇಲ್ಲ. ಉದಾಹರಣೆಗೆ, ಅಮೆರಿಕದ ರಾಕ್‌ಫಲ್ಲರ್ ಫೌಂಡೇಷನ್, ಅಂತಾರಾಷ್ಟ್ರೀಯ ರೆಡ್ಕ್ರಾಸ್ ಮುಂತಾದವು ಅತ್ಯಂತ ದಕ್ಷತೆಯಿಂದ ಮಾನವ ಕುಲಕೋಟಿಗೆ ಸೇವೆ ಸಲ್ಲಿಸುತ್ತಿವೆ. ಮುಂದೆ ಬರುವ ಶಾಸನಗಳು ಮಾನವಕೋಟಿಯನ್ನು ಪರಮಾಣುಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ವಿಕಿರಣ ಕ್ರಿಯಾಶಕ್ತಿಯಿಂದ ಕಾಪಾಡಲು, ಆಧುನಿಕ ಕೈಗಾರಿಕೆ ಉದ್ಯಮಗಳು ಹಾಗೂ ಸ್ವಯಂಚಾಲಿತ ಯಂತ್ರಗಳಿಂದ ವಾತಾವರಣ ಮಲಿನವಾಗದಂತೆ ರಕ್ಷಣೆಕೊಡಲು, ಕೃತಕ ಗರ್ಭಧಾರಣೆಯಿಂದ ಉದ್ಭವವಾಗುವ ವೈಯಕ್ತಿಕ ಸಮಸ್ಯೆಗಳ ಪರಿಹಾರ ಮಾಡಲು, ಬದಲಿ ಅಂಗಗಳ ಜೋಡಣೆಯಿಂದ ಮಾನವ ಅಮರನಾದಲ್ಲಿ ಯಾವ ರೀತಿ ಸಮಾಜ ನಡೆದುಕೊಳ್ಳಬೇಕು, ಯಾರಿಗೆ ಬದಲಿ ಜೋಡಣೆಯ ಅಗತ್ಯ, ಅಂತರಿಕ್ಷದಲ್ಲಿ ಯಾನ ಮಾಡುವವರ ಆರೋಗ್ಯ ಸಂರಕ್ಷಣೆಗೆ ನಿಯಮಗಳಾವುವು-ಇವೇ ಮುಂತಾದ ಗಂಭೀರ ಪ್ರಶ್ನೆಗಳನ್ನು ಎದುರಿಸಿ ಶಾಸನಗಳನ್ನು ರೂಪಿಸಲೇಬೇಕಾಗುತ್ತ ದೆಂಬುದರಲ್ಲಿ ಅನುಮಾನವೇ ಇರಲಾರದು.