ಆರೋಗ್ಯ ತಿಳಿವಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈದ್ಯ ವಿಜ್ಞಾನ ಬೇಗನೆ ಮುಂದುವರಿದಂತೆಲ್ಲ ೧೮೫೦ ರಿಂದೀಚೆಗೆ ನಿರೋಧಕ ವೈದ್ಯದಲ್ಲೂ ಜನಾರೋಗ್ಯದಲ್ಲೂ ಆ ಮುನ್ನಡೆಯ ಅನುಕೂಲತೆಗಳನ್ನು ಪಡೆಯಲು ಜನರಲ್ಲಿ ವೈದ್ಯಕ ವಿಚಾರಗಳ ತಿಳಿವಳಿಕೆ (ಹೆಲ್ತ್ ಎಜುಕೇಷನ್) ಚೆನ್ನಾಗಿ ಪ್ರಚಾರ ಆಗಬೇಕೆನ್ನುವುದು ಮನದಟ್ಟಾಯಿತು. ಎಷ್ಟೊ ದೇಶಗಳಲ್ಲಿ ಚೀಟಿಗಳು, ಪತ್ರಗಳ ರೂಪದಲ್ಲಿ ಆರೋಗ್ಯ ತಿಳಿವಳಿಕೆಯ ಸಾಧನಗಳು ಬಳಕೆಗೆ ಬಂದುವು. ಒಂದನೆಯ ಮಹಾಯುದ್ಧಕ್ಕೂ ಮೊದಲೇ ಕ್ಷಯ ನಿವಾರಣೆ ಸಂಘದ ತೆರನಾದ ವಿಶಿಷ್ಟ ಕ್ಷೇತ್ರಗಳಲ್ಲಿ ಅಮೆರಿಕದಲ್ಲಿ ಜನರ ಸಂಸ್ಥೆಗಳೇ ಹುಟ್ಟಿದ್ದವು. ಯುದ್ಧ ಮುಗಿದ ಮೇಲೆ ರಷ್ಯದಲ್ಲೂ ಒಂದು ಆರೋಗ್ಯ ತಿಳಿವಳಿಕೆಯ ಇಲಾಖೆ ಏರ್ಪಟ್ಟಿತು. ಹಾಗೆಯೇ ಅಮೆರಿಕದಲ್ಲೂ ಒಂದು ಇಲಾಖೆಯೂ (೧೯೧೮) ಆರೋಗ್ಯ ತಿಳಿವಳಿಕೆಯ ಮಂಡಳಿ ಒಂದು ಬ್ರಿಟನ್ನಿನಲ್ಲೂ (೧೯೨೫) ಹುಟ್ಟಿದುವು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಂದು ವಿಭಾಗವನ್ನು ತೆರೆಯಿತು (೧೯೪೮). ಮುಖ್ಯವಾಗಿ ಮುಂದುವರಿಯುತ್ತಿರುವ ದೇಶಗಳ ಜನರಲ್ಲಿ ಆರೋಗ್ಯವನ್ನು ಕುರಿತ ತಿಳಿವಳಿಕೆಯ ಪ್ರಚಾರ ಆಗಬೇಕೆಂದು ಮನದಟ್ಟು ಮಾಡಿ ಕೊಡುವುದೊಂದು ದೊಡ್ಡ ಕಷ್ಟ. ಬಹುಮಟ್ಟಿಗೆ ಎಲ್ಲ ದೇಶಗಳಲ್ಲೂ ಆರೋಗ್ಯದ ವಿಚಾರಗಳಲ್ಲಿ ಜನಪದ ಸಾಹಿತ್ಯ, ಶಾಸ್ತ್ರಗಳು, ಮಾಯಾಮಂತ್ರಗಳಿರುತ್ತವೆ. ಸರಿಯಾಗಿ ಯೋಚಿಸಿದರೆ ತಪ್ಪು ಎನಿಸುವುದಾದರೂ ಆರೋಗ್ಯ ವಿಷಯಗಳಲ್ಲಿ ಜನರು ತಮ್ಮ ಎಂದಿನ ನಂಬಿಕೆ, ಪದ್ಧತಿಗಳನ್ನೇ ಬಹುವಾಗಿ ನೆಚ್ಚಿರುವರು. ಆದ್ದರಿಂದಲೇ ಈ ವಿಚಾರಗಳ ಪ್ರಚಾರಕರು ಜನರಲ್ಲಿರುವ ನಂಬಿಕೆಗಳು, ಪದ್ಧತಿಗಳನ್ನು ಮೊದಲು ಚೆನ್ನಾಗಿ ತಿಳಿದುಕೊಳ್ಳಬೇಕು. ೨0ನೆಯ ಶತಮಾನದಲ್ಲಿ ಎಲ್ಲ ದೇಶಗಳಲ್ಲೂ ಎಳೆಯ ಮಕ್ಕಳ ಆರೋಗ್ಯ ಮುಖ್ಯ ಎನ್ನುವುದು ಚೆನ್ನಾಗಿ ಅರಿವಾಗುತ್ತ ಬಂದು, ಹೆರಿಗೆ ಮುಂಚಿನಿಂದ, ಆಮೇಲೆ ಶಾಲಾ ಕಾಲೇಜುಗಳಲ್ಲೂ ಹೆಚ್ಚಿನ ವೈದ್ಯಕ ಪಾಲನೆಯಲ್ಲೂ ಶಾಲೆಗಳಲ್ಲಿ ಆರೋಗ್ಯ ಪಾಠಗಳನ್ನು ಹೇಳಿಕೊಡುವುದರಲ್ಲೂ ಹೊರದೋರಿದುವು. ಹೆರಿಗೆ ಮುಂಚಿನ, ಹುಟ್ಟಿದ ಮೇಲಿನ ಪಾಲನೆಯಲ್ಲಿ ಕಲಿಕೆ, ವೈದ್ಯಕ ಮೇಲ್ವಿಚಾರಣೆಯೂ ಇರುವುದರಿಂದ, ವಿಶಾಲಾರ್ಥದಲ್ಲಿ ಆರೋಗ್ಯ ಪ್ರಚಾರದ ತಿಳಿವಳಿಕೆಯಲ್ಲಿ ಇವೆರಡು ವಿಚಾರಗಳೂ ಸೇರಿವೆ ತಾಯಿಮಕ್ಕಳ ಆರೋಗ್ಯ.

ಶಾಲೆಯಲ್ಲಿ ಆರೋಗ್ಯದ ತಿಳಿವಳಿಕೆ[ಬದಲಾಯಿಸಿ]

ಹಿಂದಿನ ಕಾಲದಲ್ಲಿ ಅಂಟುರೋಗಗಳು ಹರಡುವುದನ್ನು ತಡೆದ ಶಾಲಾ ಆರೋಗ್ಯ ಕಾರ್ಯಕ್ರಮಗಳು ಮಾತ್ರ ಇದ್ದುವು. ಮೊದಲಿಗೆ ಫ್ರಾನ್ಸಿನಲ್ಲಿ ಶಾಲಾ ಅಧಿಕಾರಿಗಳು ಶಾಲೆಗಳ ಚೊಕ್ಕಟವನ್ನೂ ನೋಡಿಕೊಳ್ಳುವಂತೆ ನೇಮಕವಾದರು (೧೮೩೩). ಶಾಲೆಯ ಮಕ್ಕಳ ಆರೋಗ್ಯಕ್ಕಾಗಿ ಹಲವು ದೇಶಗಳಲ್ಲಿ ಬೇರೆಬೇರೆ ಕಾಯಿದೆಗಳಿವೆ. ಶಾಲಾ ವೈದ್ಯನೊಬ್ಬ ಮೊದಲು ನೇಮಕವಾದದ್ದು ಸ್ವೀಡನ್ನಿನಲ್ಲಿ. ೨0ನೆಯ ಶತಮಾನದಲ್ಲಿ. ಅದಕ್ಕೂ ಹಿಂದಿದ್ದ, ಕೇವಲ ಆರೋಗ್ಯ ಜೀವನದ ಕಟ್ಟುಪಾಡುಗಳು, ಆಚರಣೆಯನ್ನು ಮಾತ್ರ ತಿಳಿಸಿಕೊಡುತ್ತಿದ್ದ ಆರೋಗ್ಯಶಾಸ್ತ್ರ ಎನ್ನುವುದರ ಬದಲು ಆರೋಗ್ಯ ತಿಳಿವಳಿಕೆ ಎನ್ನುವುದು ಜಾರಿಗೆ ಬಂತು. ಎಲ್ಲೆಲ್ಲೂ ಒಳ್ಳೆಯ ಭಾವನೆಯನ್ನು, ಶಾಲೆಗಳಲ್ಲಿ ಆರೋಗ್ಯಕರ ಪರಿಸರವನ್ನು ಒದಗಿಸುವುದರಿಂದ ಒಳ್ಳೆಯ ಶಾಲೆಯ ಆರೋಗ್ಯವನ್ನು ಸಾಧಿಸಬಹುದು. ಎಳೆಗೂಸುಗಳ, ಮೊದಲ ಶಾಲೆಗಳ ಮಟ್ಟಗಳಲ್ಲಿ ನಿಜವಾದ ತಿಳಿವಳಿಕೆ ಕೊಡುವುದೇನೂ ಅಷ್ಟಾಗಿ ಇಲ್ಲವಾದರೂ, ಕಾರ್ಯಕ್ರಮದ ಮೂಲಕ ಇದನ್ನು ಚೆನ್ನಾಗಿ ನೆರವೇರಿಸಬಹುದು. ಮಾಧ್ಯಮಿಕ ಶಾಲೆಯ ಮಟ್ಟದಲ್ಲಿ ಬಳಸಲಾಗಿ, ಜೀವಶಾಸ್ತ್ರ, ಗೃಹ ವಿಜ್ಞಾನ, ನಗರವಾಸ, ಆಟಪಾಟಗಳ ಮೂಲಕ ಆರೋಗ್ಯದ ಶಿಕ್ಷಣವನ್ನು ಕೊಡಲಾಗುವುದು. ಈ ಮಟ್ಟದಲ್ಲಿ ಮುಖ್ಯವಾಗಿ ಶಾಲೆಯ ದಾದಿ, ಆರೋಗ್ಯ ಸಂದರ್ಶಕರ ಮೂಲಕ, ಕೆಲಸಗಾರರನ್ನೂ ಆಯ್ದ ಕೆಲವು ಆರೋಗ್ಯದ ವಿಚಾರಗಳನ್ನು ತಿಳಿಸಿಕೊಡಲು ಕೇಳಿಕೊಳ್ಳಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: