ಆರಿಯೋಸ್ಟೊ, ಲುಡೋವಿಕೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರಿಯೋಸ್ಟೊ, ಲುಡೋವಿಕೊ
Ariosto, detail of votive painting Madonna with saints Joseph, John, Catherine, Louis of Toulouse and Lodovico Ariosto by Vincenzo Catena, 1512, Berlin
ಜನನ8 September 1474
Reggio Emilia, Italy
ಮರಣ6 July 1533
Ferrara, Italy
ರಾಷ್ಟ್ರೀಯತೆಇಟಾಲಿಯನ್
ಕಾಲRenaissance
ಪ್ರಕಾರ/ಶೈಲಿEpic poetry
ವಿಷಯChivalry
ಪ್ರಮುಖ ಕೆಲಸ(ಗಳು)Orlando Furioso


ಪ್ರಭಾವಿತರು

ಆರಿಯೋಸ್ಟೊ, ಲುಡೋವಿಕೊ(೧೪೭೪-೧೫೩೨). ಎಸ್ತಿ ಎಂಬ ಶ್ರೀಮಂತ ಮನೆತನಕ್ಕೆ ಸೇವೆ ಸಲ್ಲಿಸಿದ ಇಟಲಿಯ ಸುಪ್ರಸಿದ್ಧ ಕವಿ. ಆರ್ಲ್ಯಾಂಡೊ ಫ್ಯೂರಿಯೋಸೊ ಎಂಬ ಅದ್ಭುತಕಾವ್ಯ ಇವನಿಗೆ ಸಾಹಿತ್ಯದಲ್ಲಿ ಸ್ಥಿರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ. ಇದು ಆ ಕಾಲದ ಶ್ರೀಮಂತ, ಸುಸಂಸ್ಕೃತ ವರ್ಗದ ಜನರ ಮನರಂಜನೆಗಾಗಿ ರಚಿಸಿದ ಕೃತಿ. ಈ ಕಾವ್ಯ ಬೊಯಾರ್ಡೊ ಎಂಬ ಕವಿ ಆ ಮೊದಲೇ ರಚಿಸಿದ್ದ ಆರ್ಲಾಂಡೊ ಇನ್ನಮೊರ್ಯಾಟೊ ಎಂಬ ಶೃಂಗಾರಾದ್ಭುತ ರಸಗಳಿಂದ ತುಂಬಿದ, ಆದರೆ ಅಸಂಪುರ್ಣವಾದ ಭವ್ಯಕಾವ್ಯದ ಉತ್ತರಾರ್ಧ. ಆರ್ಥರ್ ದೊರೆ ಮತ್ತು ಷಾರ್ಲಮನ್ ದೊರೆಗಳನ್ನು ಕುರಿತ ಅದ್ಭುತ ಕಥೆಗಳ ರಸ ಸಮ್ಮಿಳನವನ್ನು ಈ ಮಹತ್ತರವಾದ ಕಾವ್ಯದಲ್ಲಿ ಕಾಣಬಹುದು. ತನಗೆ ಪ್ರಿಯವಾದ ಅದ್ಭುತ ಕಥೆಗಳಿಂದ ಆರಿಸಿ ತೆಗೆದ ಸುಂದರ ಕಥೆಗಳನ್ನು ಕುಶಲತೆಯಿಂದ ಈ ಕಾವ್ಯದಲ್ಲಿ ಕವಿ ಹೆಣೆದಿದ್ದಾನೆ. ಡಾಂಟೆ, ಪೆಟ್ರಾರ್ಕ್ ಕವಿಗಳಿಂದಲೂ ಎರವಲು ಪಡೆದು ಕಾವ್ಯ ಸಂಪತ್ತನ್ನು ಹೆಚ್ಚಿಸಿದ್ದಾನೆ. ಬೊಯಾರ್ಡೊನ ಧಾಟಿಯನ್ನೇ ಆರಿಯೋಸ್ಟೊ ಮುಂದುವರಿಸಿದ್ದಾನೆ. ಏಂಜಲಿಕಳ ಮೇಲಣ ಪ್ರೇಮದಿಂದ ಹುಚ್ಚಾದ ಆಲಾರ್್ಲಂಡೊನ ಕಥೆ ಇದು. ಆದರೆ ಅವಳು ಈ ಕಾವ್ಯದಲ್ಲಿ ಕೇವಲ ಗೌಣ ಪಾತ್ರ. ರುಜಿರೋ ಎಂಬವನಲ್ಲಿ ಅನುರಕ್ತಳಾಗಿರುವ ಬ್ರಾದಮಾಂತೆ ಎಂಬ ಯೋಧಸ್ತ್ರೀಯೇ ಈ ಕಥೆಯ ಪ್ರಧಾನಪಾತ್ರ. ಇವರ ಸಂತತಿಯವರೇ ಎಸ್ತಿ ಮನೆತನದ ಮೂಲಪುರುಷರು. ಸ್ತ್ರೀಸಹಜವಾದ ಲಜ್ಜೆ, ಮಾರ್ದವ, ಕರುಣೆ ಮುಂತಾದ ಸದ್ಗುಣಗಳನ್ನೂ ಪುರುಷಸಹಜವಾದ ಧೈರ್ಯ ಸ್ಥೈರ್ಯಗಳನ್ನೂ ಹೊಂದಿರುವ ಬ್ರಾದಮಾಂತೆಯರ ಪ್ರಣಯಾಂಕುರ, ಅದರ ವಿವಿಧ ಅವಸ್ಥೆಗಳು, ಪರ್ಯವಸಾನ ಇವೇ ಕಥೆಯ ಸುಂದರವಾದ ಭಾಗಗಳು.

ಫೆರಾರದಲ್ಲಿರುವ ನೆನಪಿನ ಪುತ್ಥಳಿ ಮತ್ತು ಉದ್ಯಾನವನ.

ಕಥನಕಲೆಯಲ್ಲಿ ಕವಿಯದು ಸಿದ್ಧಹಸ್ತ. ಘಟನೆಗಳಲ್ಲಿ, ಕಥೆಯ ವಿವಿಧ ಹಂತಗಳಲ್ಲಿ, ಗಾಂಭೀರ್ಯವನ್ನೂ, ಕಟಕಿಯನ್ನೂ ಜಾಣ್ಮೆಯಿಂದ ಬೆರಸುತ್ತಾನೆ. ಸೊಗಸಾದ, ನವಿರಾದ ಹಾಸ್ಯದ ಸನ್ನಿವೇಶಗಳನ್ನು ಕಲ್ಪಿಸುತ್ತಾನೆ. ಅನಂತರ ಬಂದ ಸ್ಪೇನಿನ ಕಥೆಗಾರ ಸರ್ವಾಂಟಿಸ್ ಈ ಬಗೆಯ ಹಾಸ್ಯವನ್ನು ಅನ್ಯಾದೃಶವಾಗಿ ಸೃಷ್ಟಿಸಿದ್ದಾನೆ. ಆರ್ಲಾಂಡೊವಿನ ಕಳೆದುಹೋದ ಬುದ್ಧಿಯನ್ನು ಹುಡುಕುವುದಕ್ಕಾಗಿ ಆಸ್ಟೊಲ್ಪೊ ಚಂದ್ರನೊಳಕ್ಕೆ ಪ್ರಯಾಣಮಾಡುವುದು, ರಾಣಿ ಏಂಜಲಿಕ ಮಿಡೋರೋ ಎಂಬ ಸಾಮಾನ್ಯ ಸೈನಿಕರಿಗೆ ಮನಸೋಲುವುದು ಇತ್ಯಾದಿ ಸನ್ನಿವೇಶಗಳಲ್ಲಿ ಈ ಭಾವ ಬೆಳೆದಿದೆ. ಭಾವಾವೇಶದ ಪ್ರಸಂಗಗಳನ್ನು ಚಿತ್ತಾಕರ್ಷಕವಾಗಿ ಚಿತ್ರಿಸಬಲ್ಲನಾದರೂ, ಕಥನಶೈಲಿಯಲ್ಲಿ ವಸ್ತುನಿಷ್ಠೆಯನ್ನು ಈತ ಅನುಸರಿಸುತ್ತಾನೆ. ಘಟನೆಗಳ, ದೃಶ್ಯಗಳ ವರ್ಣನೆಯಲ್ಲಿ ಜೀವಂತ ಶಕ್ತಿಯನ್ನೂ ಮೂರ್ತತೆಯನ್ನೂ ಮೂಡಿಸಬಲ್ಲ. ಕಥೆಯ ಆಖ್ಯಾನಕ್ಕೆ ಮೆರಗು ಕೊಡಲು ರೂಪಕ, ಪ್ರತಿಮೆಗಳಿಗಿಂತಲೂ ಉಪಮೆಯನ್ನೇ ಹೆಚ್ಚು ಬಳಸುತ್ತಾನೆ. ನವಿರಾದ ವಿಡಂಬನೆ, ತಿಳಿಹಾಸ್ಯ ಈ ಕಾವ್ಯದ ಮುಖ್ಯ ಲಕ್ಷಣಗಳು. ಈ ಕಾವ್ಯವಲ್ಲದೆ ಈತ ಹಲವಾರು ಪ್ರೇಮಗೀತೆಗಳನ್ನೂ, ಪ್ರಹಸನ, ವಿಡಂಬನ ಕವನಗಳನ್ನೂ ಬರೆದಿದ್ದಾನೆ. ಕವಿಯದು ಸೌಂದರ್ಯಕ್ಕೆ ಮೀಸಲಾದ ದೃಷ್ಟಿ. ವಿಸ್ತಾರಪ್ರಕೃತಿ ಮತ್ತು ಮಾನವಲೋಕ ದಲ್ಲಿ ಹುದುಗಿರುವ, ಹಬ್ಬಿರುವ ಸೌಂದರ್ಯಸೃಷ್ಟಿಯನ್ನು ಕಾಮನಬಿಲ್ಲಿನಂಥ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾನೆ. ಕಾವ್ಯದುದ್ದಕ್ಕೂ ಅಲ್ಲಲ್ಲಿ ಮಿಂಚಿ ಹೊಳೆಯುವ, ಯುದ್ಧ, ಕಾಳ್ಗಿಚ್ಚು, ಮಹಾಪುರ, ಚಂಡಮಾರುತಗಳ ರೌದ್ರವರ್ಣನೆಯನ್ನು ಓದುವಾಗ ನಮಗೆ ಅವನ ಕಾಲದಲ್ಲಿ ಪ್ರಸಿದ್ಧವಾಗಿ ಮೆರೆದ ಟಿಷಿಯನ್ ಮುಂತಾದ ಚಿತ್ರಕಾರರ ನೆನಪಾಗುತ್ತದೆ. ಈ ಕಥನಕಾವ್ಯ ಅನಂತರ ಬಂದ ನಾನಾ ಭಾಷೆಯ ಕವಿಗಳಿಗೆ, ನಾಟಕಕಾರರಿಗೆ, ಕಾದಂಬರಿಕಾರರಿಗೆ ಸಮೃದ್ಧಭಂಡಾರವಾಗಿದೆ. ಷೇಕ್್ಸಪಿಯರ್, ಸಿಡ್ನಿ, ಗ್ರೀನ್, ಸ್ಪೆನ್ಸರ್, ಮಿಲ್ಟನ್ ಮತ್ತು ೧೯ನೆಯ ಶತಮಾನದ ಇಂಗ್ಲಿಷ್ ಕವಿಗಳೂ ಆರಿಯೋಸ್ಟೊಗೆ ಋಣಿಯಾಗಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]