ಆರಣಿ ರಾಜರು
ಆರಣಿ ರಾಜ ಮತ್ತು ದೀಪಕ ರಾಜನ ಬಗೆಗಿನ ಶಾಸನ, ಸ್ಮಾರಕ, ಸ್ಥಳ ಪುರಾಣ, ಗಂಟೆಹೆಳವರಿಂದ ಕೇಳಿದ ಕಥೆ - ಈ ಎಲ್ಲಾ ಮಾಹಿತಿಗಳ ಆಧಾರದಿಂದ ಆರಣಿ ಅರಸರ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.
ಅರಣ್ಯ + ಊರು > ಅರಣ್ಯರು > ಆರಣಿಯೂರು ಎಂಬ ನಿಷ್ಪತ್ತಿಯನ್ನು ಆಧರಿಸಿ ಹೊರಡುವ ಅರ್ಥ ಅರಣ್ಯದಿಂದ ಆವೃತ್ತವಾದ ಅಥವಾ ಅರಣ್ಯದ ಸಮೀಪದ ಊರು ಎಂದಾಗುತ್ತದೆ.[೧]
ಆರಣಿಯೂರು ಒಂದು ಕಾಲಕ್ಕೆ ವೈಭವದ ಪಟ್ಟಣವಾಗಿದ್ದು ನಂತರ ಮೇಲಿಂದ ಮೇಲೆ ಜರುಗಿದ ಯುದ್ಧಗಳಲ್ಲಿ ತನ್ನ ಮಹತ್ವದ ಸ್ಥಿತಿಯನ್ನು ಕಳೆದುಕೊಂಡು ಹೊಯ್ಸಳರಿಂದ ಚೋಳರಿಗಾದ ಪರಾಭವದ ನಂತರ ಮೂಲೆಗೆ ಸೇರಿ ಹೋಯಿತು. ಆರಣಿ ಸ್ಥಳದ ಸುತ್ತಮುತ್ತಲ ಪ್ರಾಂತ್ಯಕ್ಕೆ ವಿರೂಪಾಕ್ಷಪುರ ಎಂದು ಹೆಸರಾದುದನ್ನು ಕ್ರಿ.ಶ. ೧೪೮೪ ರ ಸೆಪ್ಟೆಂಬರ್ ೨೩ ನೇ ತೇದಿಯ ಕಠಾರಿ ಸಾಳುವ ನರಸಿಂಹರಾಯರ ಮನೆಯ ಪ್ರಧಾನನಾದ ವಿರೂಪಾಕ್ಷ ದೇವನ ಕಾಲದ ಶಾಸನ ಸ್ಪಷ್ಟಪಡಿಸುತ್ತದೆ.
ಆರಣಿಯೂರಿನಲ್ಲಿ ಈವರೆಗೆ ಮೂರು ಶಾಸನಗಳು ದೊರೆತಿವೆ. ಮೊದಲನೆಯದು - ಗೋಪಾಲಕೃಷ್ಣ ದೇವಾಲಯದ ಹಿಂದಿನ ಹಾಳುಬಾವಿಯ ಕಲ್ಲಿನ ಮೇಲೆ ಕೆತ್ತಲಾದ ಕ್ರಿ.ಶ. ೯೭೨ ರ ಶಾಸನ. ಇದು ನೊಳಂಬಾಂತಕ ಎಂದೇ ಪ್ರಸಿದ್ಧನಾದ ಎರಡನೆ ಮಾರಸಿಂಹನ ಮಂತ್ರಿಯಾದ ಮಹಾಬಲಯ್ಯ ಕೆರೆ ಕಟ್ಟಿಸಲು ಆರಣಿಯೂರಿನ ಬಿಟ್ಟುವಳ್ಳವನ್ನು ನೀಡಿದನೆಂದು ತಿಳಿಸುತ್ತದೆ. ಇದು ಆರಣಿಯೂರು ಗಂಗರ ಆಳ್ವಿಕೆಯಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ.
ಎರಡನೆಯದು - ಕ್ರಿ.ಶ. ೧೧೪೧ ರ ದಾನ ಶಾಸನ ಹಾಗೂ ಮೂರನೆಯದು - ಕೆರೆ ಏರಿಯ ಮೇಲಿನ ಚಾಮುಂಡೇಶ್ವರಿ ವಿಗ್ರಹದ ಪೀಠದಲ್ಲಿ ಕಡೆಯಲಾದಬರಹ. ಸೋಮೇಶ್ವರ ಪಂಡಿತನ ಪತ್ನಿ ಚಾಮವ್ವ ಎಂಬುವಳು ಚಾಮುಂಡೇಶ್ವರಿ ವಿಗ್ರಹದ ಪ್ರತಿಷ್ಠಾಪನೆ ಮಾಡಿಸಿದಳೆಂದು ತಿಳಿಸುವ ಈ ಬರಹ ಚೋಳರಾದ ಆರಣಿ ರಾಜರು ಚಾಮುಂಡೇಶ್ವರಿಯನ್ನು ಪೂಜಿಸುತ್ತಿದ್ದರೆಂಬುದಕ್ಕೆ ಪುರಾವೆಯಂತಿದೆ. ಈ ಎಲ್ಲಾ ಆಧಾರಗಳಿಂದ ಆರಣಿಯೂರು ಪ್ರಸಿದ್ಧಿವತ್ತ ರಾಜಧಾನಿಯಾಗಿದ್ದು ಇಲ್ಲಿನ ಅರಸರು ಧಾರ್ಮಿಕ ಹಾಗೂ ಸಾಮಾಜಿಕ ಸೇವಾಕಾಂಕ್ಷಿಗಳಾಗಿದ್ದರೆಂಬುದನ್ನು ನಿರೂಪಿಸುತ್ತದೆ.
ಒಂದು ನಾಡಿನ ಪ್ರಾಮಾಣಿಕವಾದ ಸಾಂಸ್ಕೃತಿಕ ಚರಿತ್ರೆಗೆ ಬೇಕಾದ ಸಾಮಗ್ರಿಯನ್ನು ಜಾನಪದದಿಂದ ಧಾರಾಳವಾಗಿ ಪಡೆಯಬಹುದಾಗಿದೆ. ಧರ್ಮ ಮತ್ತು ಇತಿಹಾಸದೊಂದಿಗೆ ಭದ್ರ ನಂಟನ್ನಿರಿಸಿಕೊಂಡಿರುವ ಜನಪದ ಸಾಹಿತ್ಯದಲ್ಲಿ ಇತಿಹಾಸದ ಪಳೆಯುಳಿಕೆಗಳನ್ನು ಅರಸಿದಾಗ ಆರಣಿ ಅರಸು ಮನೆತನದ ಆರಣಿ ರಾಜ ಹಾಗೂ ಅವನ ಮಗ ದೀಪಕ ರಾಜ ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಸುಪ್ರಸಿದ್ಧ ಶ್ರೀ ಕಾಲಭೈರವೇಶ್ವರ ಕ್ಷೇತ್ರವೆನಿಸಿದ ಶ್ರೀ ಆದಿಚುಂಚನಗಿರಿಗೆ ನೀಡಿದ ಸಾಂಸ್ಕೃತಿಕ ಕೊಡುಗೆಯನ್ನು ಮನಗಾಣಬಹುದಾಗಿದೆ.
ಆರಣಿ ಅರಸರ ಬಗೆಗಿನ ವಿವಿಧ ವಸ್ತ್ರಗಳು ನೀಡಿದ ವಿವರಗಳಲ್ಲಿ ಹಾಗೂ ಸ್ಥಳ ಪುರಾಣಗಳಲ್ಲಿ ಬಹುತೇಕ ಸಮಾನ ಅಂಶಗಳು ಕಂಡು ಬರುತ್ತವೆ. ಮಶಾವಳಿಯನ್ನು ತಿಳಿಸುವ ಗಂಟೆಹೆಳವರಲ್ಲಿ ಒಬ್ಬರು ಆರಣಿಯ ರಾಜ ಚೋಳ ಎಂದರೆ, ಮತ್ತೊಬ್ಬರು ವಿಜಯನಗರದವರೆಂದು ಹೇಳುತ್ತಾರೆ. ಆದರೆ ಚೋಳೂರಿನವರಾದ ಇವರು ಬಹುಶಃ ಹೊಯ್ಸಳರು ಪ್ರಾಬಲ್ಯಕ್ಕೆ ಬರುವ ಮೊದಲು ಅಸ್ತಿತ್ವದಲ್ಲಿದ್ದರು.
ವಿವಿಧ ಮೂಲಗಳಿಂದ ತಿಳಿದು ಬರುವ ಕಥಾಸಾರಾಂಶ ಈ ರೀತಿ ಇದೆ. ಆದಿ ಚುಂಚನಗಿರಿಯಲ್ಲಿ ಕ್ಷೇತ್ರ ಪಾಲಕನಾದ ಕಾಲಭೈರವೇಶ್ವರನೇ ಅಧಿದೈವವೆನಿಸಿದ್ದಾನೆ. ತಮ್ಮ ಮನೀಷೆಗಳನ್ನು ನೆರವೇರಿಸಿಕೊಳ್ಳಲು ಭಕ್ತರು ಭೈರವನಲ್ಲಿ ನಾನಾ ರೀತಿಯ ಹರಕೆಗಳನ್ನು ಕಟ್ಟಿಕೊಂಡು ಅದನ್ನು ನೆರವೇರಿಸುತ್ತಾ ಬಂದಿರುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದಿವೆ.
ಏಳು ಜನ ಮಡದಿಯರಿದ್ದೂ ಮಕ್ಕಳಿಲ್ಲದ ಆರಣಿಯ ರಾಜ ಸಂತಾನಕ್ಕಾಗಿ ಭೈರವ ಸ್ವಾಮಿಗೆ ಹರಕೆ ಹೊತ್ತಾಗ ಅದು ಫಲಿಸಿ ಅವನ ಪಟ್ಟದ ರಾಣಿ ಗಂಡು ಮಗುವಿನ ತಾಯಿಯಾಗುತ್ತಾಳೆ.
ಗೆಣ್ಣಿಲ್ಲದ ಬಿದಿರಿನಿಂದ ಮಾಡಿದ ತೊಟ್ಟಿಲಲ್ಲಿ ಮಗುವನ್ನು ತೂಗಿದರೆ ಮೂರು ಲೋಕಕ್ಕೆ ಖ್ಯಾತನಾಗುತ್ತಾನೆಂಬ ಜ್ಯೋತಿಷಿಯ ಮಾತು ಕೇಳಿದ ಆರಣಿ ರಾಜ ಗೆಣ್ಣಿಲ್ಲದ ಬಿದಿರನ್ನು ತರಲು ತನ್ನ ಚಾರಕರೊಡನೆ ಮೇದರನ್ನು ಕಳುಹಿಸಿದಾಗ ಅವರು ಆರಣಿಯ ಸಮೀಪದ ಚುಂಚನಗಿರಿಯ ಸುತ್ತಮುತ್ತಲ ಕಾಡಿನಲ್ಲಿ ಹುಡುಕುತ್ತಿರುವಾಗ ಭೈರವ ಸ್ವಾಮಿ ಅವರನ್ನು ತಾನಿದ್ದ ಬೆಟ್ಟಕ್ಕೆ ಬರುವಂತೆ ಮನಸ್ಸು ತಿರುಗಿಸಿ ಅಲ್ಲಿಯೇ ಗೆಣ್ಣಿಲ್ಲದ ಬಿದಿರನ್ನು ಸೃಷ್ಟಿಸುತ್ತಾನೆ. ಅದನ್ನು ಕಂಡ ಮೇದರುಸಂತಸದಿಂದ ಕಡಿಯಲು ಹೋದಾಗ ರಕ್ತ ಚಿಲ್ಲನೆ ಚಿಮ್ಮುತ್ತದೆ ಹೆದರಿದ ಮೇದರಿಗೆ ಅಶರೀರವಾಣಿ ಕೇಳಿಸುತ್ತದೆ. ನಾನು: ಚುಂಚನಗಿರಿ, ಭೈರವ, ಬಿಸಿಲು ತಾಳದ ವಿಶ್ರಾಂತಿಗಾಗಿ ನಾನಿಲ್ಲಿ ಕುಂತಿದ್ರೆ ನನ್ನ ಹಣೆಗೆ ಹೊಡೆದಿರಲ್ಲಪ್ಪಾ, ಈ ವಿಷಯಾನ ಹಿಂದಕ್ಕೆ ತಿರುಗಿ ನೋಡದೆ ನಿಮ್ಮ ರಾಜನಿಗೆ ಹೋಗಿ ತಿಳಿಸಿರಿ. ಇದನ್ನು ಕೇಳಿದ ಮೇದರು ಹೌಹಾರಿ ಹಿಂತಿರುಗಿ ನೋಡದೆ ರಾಜನ ಬಳಿ ಧಾವಿಸುತ್ತಿರುವಾಗ ಕುತೂಹಲ ತಡೆಯಲಾರದೆ ಒಬ್ಬನನ್ನುಳಿದು ಉಳಿದವರು ತಿರುಗಿ ನೋಡಿದೊಡನೆಯೇ ಅವರ ಶಿರಗಳು ಉರುಳಿ ಸಾಯುತ್ತಾರೆ. ಬದುಕುಳಿದ ಚಾರಕನೊಬ್ಬ ಆರಣಿ ರಾಜನಿಗೆ ನಡೆದ ಸಂಗತಿಯನ್ನೆಲ್ಲಾ ತಿಳಿಸುತ್ತಾನೆ.
ಕೂಡಲೆ ರಾಜ ಭೈರವ ಬೆಟ್ಟದ (ಚುಂಚನಗಿರಿಗೆ ಪರಾಯ ಹೆಸರು) ಬಳಿ ಬಂದು ಲಿಂಗದಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿರುವುದನ್ನು ಕಂಡು ಭೈರವ ಸ್ವಾಮಿಯಲ್ಲಿ ಕ್ಷಮೆ ಬೇಡಿ ಪರಿಹಾರ ಏನೆಂದು ಕೇಳುತ್ತಾನೆ. ರಾಜನೆ ನಿನ್ನ ಮಗನನ್ನು ಜೋಗಿಯಾಗಿ ಬಿಡಬೇಕು. ಈ ಗಿರಿಯಲ್ಲಿ ಗುಡಿ ಗೋಪುರ ಕಟ್ಟಿಸಬೇಕು ಇದಕ್ಕೆ ತಪ್ಪಿದಲ್ಲಿ ನಿನ್ನ ತಲೆಯೂ ಉರುಳುತ್ತದೆ ಎಂದು ಭೈರವೇಶ್ವರ ಆರಣಿ ರಾಜನಿಗೆ ಅಪ್ಪಣೆ ಮಾಡುತ್ತಾನೆ.
ಅದಕ್ಕೆ ಒಪ್ಪಿದ ಆರಣಿ ರಾಜ ಚೋಳೂರಿನಲ್ಲಿದ್ದ ತನ್ನ ಬಂಧುಗಳನ್ನೆಲ್ಲಾ ಕರೆಯುತ್ತಾನೆ. ಕಮತಿಗರೆಲ್ಲಾ ಸೇರಿ ದಿನ ಬೆಳಗಾಗುವುದರೊಳಗೆ ಗುಡಿ ಗೋಪುರಗಳನ್ನು ಕಟ್ಟುತ್ತಾರೆ. ಬೆಟ್ಟದ ತುದಿಯಲ್ಲಿ ಸ್ಥಾಪಿಸಬೇಕೆಂದಿದ್ದ ಕಂಬ ಎಷ್ಟು ಜನ ಎತ್ತಲು ಹೋದರೂ ಕದಲದಾದಾಗ ತನ್ನ ಮಗನಿಗೆ ವೃದ್ಧನೊಬ್ಬನಿಂದ ಜೋಗಿ ದೀಕ್ಷೆ ಕೊಡಿಸುತ್ತಾನೆ.
ಸ್ವಾಮಿ ಭೈರವೇಶ್ವರ, ನಿನ್ನೊತ್ತು ಹೊನ್ನೊತ್ತಾಗಿ, ಈ ಕಂದನ ಮೇಲೆ ಸದಾಕಾಲ ನಿನ್ನ ಕೃಪೆಯಿರಲಿ ಎಂದು ಪ್ರಾರ್ಥಿಸಿದಾಗ ಕಂಬ ಕದಲುತ್ತದೆ. ಅದನ್ನೆತ್ತಿ ಚುಂಚನಗಿರಿಯ ನೆತ್ತಿಯಲ್ಲಿ ನಿಲ್ಲಿಸುತ್ತಾರೆ. ತನ್ನ ಮಗನೊಡನೆ ಬೆಟ್ಟದ ತುದಿಯಲ್ಲಿ ನಿಲ್ಲಿಸಿದ ಕಂಬದ ಸಮೀಪ ಬಂದ ಆರಣಿ ರಾಜ ಮಗನ ಕೈಯಿಂದಲೇ ದೀಪ ಬೆಳಗಿಸಿ ಪೂಜೆ ಮಾಡಿಸಿ, ದೀಪಕ ರಾಜ ಎಂದು ಹೆಸರಿಟ್ಟನು.
ಬಿದಿರು ತರಲು ಹೋಗಿ ಬಲಿಯಾದವರ ನೆನಪಿಗೆ ಅವರ ತಲೆಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಗಂಗಾಧರೇಶ್ವರನ ಗುಡಿಗೆ ಹೋಗುವ ದಾರಿಯಲ್ಲಿ ಸ್ಮಾರಕವಾಗಿ ಇರಿಸಿದನು. ಈಗಲೂ ಆ ಶಿಲಾ ಶಿರಸ್ಸುಗಳನ್ನು ಬೆಟ್ಟದ ಹೆಬ್ಬಾಗಿಲ ಬಸವನ ಗೋಪುರದ ಎಡಭಾಗದ ಜಗತಿಯ ಮೇಲೆ ಕಾಣಬಹುದಾಗಿದೆ. ಅದನ್ನು ಮೇದರ ಮಂಟಪ ಎಂತಲೇ ಕರೆಯುತ್ತಾರೆ. ಇದು ಅವರ ಬಲಿದಾನದ ಸಂಕೇತವಾಗಿದೆ ಮತ್ತು ಇತಿಹಾಸಕಾರರ ಗಮನ ಸೆಳೆಯುವಂತಿದೆ.
ಮುಂದೆ ಆರಣಿಯ ದೀಪಕ ರಾಜ ಮಠಕ್ಕೆ ಜೋಗಿಯಾಗಿ ನಾಡಿಗೆ ಪ್ರಭುವಾಗಿ ತನ್ನ ಸನ್ನಡತೆಯಿಂದ ಧರ್ಮ ಬದ್ಧನಾಗಿ ಬಾಳಿದನೆಂದು ಕಥೆ ಮುಗಿಯುತ್ತದೆ. ಇಂದಿಗೂ ಗಂಗಾಧರೇಶ್ವರನ ಉದ್ಭವಲಿಂಗದ ಮೇಲ್ಬಾಗಕ್ಕೆ ಗೆಣ್ಣಿಲ್ಲದ ಬಿದಿರಿನಿಂದ ಚೋಳೂರಿನವರೇ ನಡೆಸಿಕೊಂಡು ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ಚಪ್ಪರ ಹಾಕುವುದನ್ನು
ಆರಣಿಯ ರಾಜನ ಕಥೆಯನ್ನು ಇತರ ಆಧಾರಗಳೊಂದಿಗೆ ಪೂರಕವಾಗಿಟ್ಟು ವಿಶ್ಲೇಷಿಸಿದಾಗ ಕೆಲವಾರು ಅಂಶಗಳು ವಿದಿತವಾಗುತ್ತವೆ - ಹಿಂದೆ ರಾಜರು, ಶ್ರೀಮಂತರು, ಭಕ್ತರು - ದೇವಾಲಯ, ಕೆರೆ ಕಟ್ಟೆಗಳ ನಿರ್ಮಾಣ ಅಥವಾ ಜೀರ್ಣೋದ್ಧಾರಗಳನ್ನು ಸೇವೆಯ ರೂಪದಲ್ಲೋ, ಹರಕೆಯ ರೂಪದಲ್ಲೊ ಸಲ್ಲಿಸುತ್ತಿದ್ದರು. ಆರಣಿಯ ರಾಜನೂ ಸಹ ಆದಿಚುಂಚನಗಿರಿಯ ಗಂಗಾಧರೇಶ್ವರ ದೇವಾಲಯವನ್ನು ಹರಕೆಯ ರೂಪದಲ್ಲಿ ಕಟ್ಟಿಸಿರಬಹುದು.
ಶಿವಾಲಯ ನಿರ್ಮಾಣ, ದೇವತಾಮೂರ್ತಿ ಪ್ರತಿಷ್ಠಾಪನೆ ಮಾಡಿಸಿದರೆ ಮಾಡಿದ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆಂಬ ಮೋಕ್ಷಾಪೇಕ್ಷೆಯೂ ದೇವಾಲಯ ನಿರ್ಮಾಣಕ್ಕೆ ಕಾರಣ', ಶೈವಾರಾಧಕರಾದ ಚೋಳರು ಆದಿಚುಂಚನಗಿರಿಯಲ್ಲಿ ಭೈರವೇಶ್ವರ, ಗಂಗಾಧರೇಶ್ವರ ಗುಡಿಗೋಪುರಗಳ ನಿರ್ಮಾಣದ ಮೂಲಕ ಮಠದ ಸೇವೆಗೆ ತೊಡಗಿಸಿಕೊಂಡು ತಮ್ಮ ಶಿವ ನಿಷ್ಠೆಯನ್ನು ಮೆರೆದಿದ್ದಾರೆ. ದೀಪಕ ರಾಜನದೆಂದು ಹೇಳಲಾಗುವ ಅಂಜಲಿಬದ್ಧ ಪ್ರತಿಮೆ ಇಂದಿಗೂ ನಂದಿ ಮಂಟಪದ ಶಿವಲಿಂಗಕ್ಕೆದುರಾಗಿರುವ ನಂದೀಶ್ವರನ ಪದತಲದಲ್ಲಿ ಕಾಣಬಹುದಾಗಿದೆ.
ಜೋಗಿ ದೀಕ್ಷೆ ನಾಥ ಪಂಥದ ಒಂದು ಪ್ರಮುಖ ಧಾರ್ಮಿಕ ಕ್ರಿಯೆ. ಸಮಾಜಕ್ಕೂ ಧರ್ಮಕ್ಕೂ ಸೇತುವಾದ ಜೋಗಿಗಳು ಮಠದ ಪ್ರತಿನಿಧಿಗಳೆನಿಸಿದ ಧಾರ್ಮಿಕ ವಕ್ತಾರರು. ಜೋಗಿ ದೀಕ್ಷೆ ಹೊಂದುವವರು ಸನ್ಯಾಸಿಗಳೇ ಆಗಬೇಕೆಂದಿಲ್ಲ. ಅವರು ಗೃಹಸ್ಥರಾಗಿದ್ದೇ ಧಾರ್ಮಿಕ ಕೈಂಕರ್ಯ ಸಲ್ಲಿಸಬಹುದಾಗಿದ್ದಿತೆಂಬ ರೂಢಿಗೆ ಸಾಕ್ಷಿಯಾಗಿ ದೀಪಕ ರಾಜ ರಾಜ್ಯ ನಿರ್ವಹಣೆ ಮಾಡಿಕೊಂಡೇ ಆದಿಚುಂಚನಗಿರಿ ಮಠದ ಸೇವೆಯನ್ನು ಮಾಡಿದನೆಂದು ತಿಳಿದು ಬರುತ್ತದೆ.
ಮೇದರು ಗೆಣ್ಣಿಲ್ಲದ ಬಿದಿರನ್ನು ಹುಡುಕಿ ತರಲು ತಮ್ಮ ಊರಿನ ಬಳಿಯೇ ಇದ್ದ ಕಾಡಿಗೆ ಹೋದರೆಂಬ ಮಾತು ಆರಣಿಯೂರಿನ ಸುತ್ತಲೂ ಕಾಡು ಹೆಚ್ಚಾಗಿತ್ತೆಂಬ ಭೌಗೋಳಿಕ ಲಕ್ಷಣವನ್ನು ಸೂಚಿಸುತ್ತದೆ. ಇಂದಿಗೂ ಚುಂಚನಗಿರಿ ಹಾಗೂ ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಬಂಡೆಗಲ್ಲುಗಳಿಂದಾವೃತವಾದ ಕುರುಚಲು ಕಾಡು ಕಂಡುಬರುತ್ತಿದ್ದು ಹಿಂದೊಮ್ಮೆ ಇಲ್ಲಿ ದಟ್ಟ ವನಸಿರಿ ಇದ್ದಿರಬಹುದೆಂಬುದನ್ನು ತಿಳಿಸುತ್ತದೆ.
ಕರ್ನಾಟಕದಲ್ಲಿ ಚೋಳರ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯವನ್ನು ವಿಕ್ರಮ ಚೋಳ ಮಂಡಲ ಎಂದು ಕರೆಯುವ ರೂಢಿಯಿದ್ದಿತು. ಚುಂಚನಗಿರಿಯ ಆಸುಪಾಸಿಗೂ ಈ ಹೆಸರು ಅಂಟಿತ್ತು. ಇಲ್ಲಿದ್ದ ಚೋಳರು ಭೈರವೇಶ್ವರನಿಗೆ ನಡೆದುಕೊಂಡು ಬಂದುದರಿಂದ ಅವರಿಗೆ ಚೋಳ ಒಕ್ಕಲು, ಚೋಳ ಒಕ್ಕಲಿಗರು ಎಂದೇ ಹೆಸರಾಗಿ ಒಕ್ಕಲಿಗರ ಉಪಜಾತಿಗಳಲ್ಲಿ ಒಂದಾಗಿದೆ. ಇವರು ತಮ್ಮದು ಭೈರವ ಸಂಸ್ಕೃತಿ ಎಂದೇ ಹೇಳಿಕೊಳ್ಳುತ್ತಾರೆ, ದೇವಸ್ಥಾನ ನಿರ್ಮಿಸಲು ಆರಣಿಯ ರಾಜ ಚೋಳೂರಿನಲ್ಲಿದ್ದ ತನ್ನ ಸಂಬಂಧಿಗಳನ್ನು ಕರೆಸಿಕೊಂಡ ಎಂಬ ಮಾತು ಚೋಳರ ಪ್ರಾಬಲ್ಯವಿದ್ದುದರಿಂದ ಚೋಳೂರು ಎಂದು ಸ್ಥಳ ನಾಮವಾದುದನ್ನು ಹಾಗೂ ಆರಣಿಯು ರಾಜನು ಚೋಳೊಕ್ಕಲಿಗೆ ಅಡ್ಡವಾ ಮಾಂಡಲಿಕನಾಗಿದ್ದಿರಬಹುದೆಂದು ಜಿಜ್ಞಾಸೆ ಮೂಡಿಸುತ್ತದೆ.
ಕಮ್ಮತಿಗರು ಬಂದು ಗುಡಿ ಕಟ್ಟಿದರು ಎಂಬ ವಾಕ್ಯದಲ್ಲಿನ ಕಮ್ಮತಿಗೆ ಶಬ್ದದ ಬಗೆಗೆ ಹೇಳುವುದಾದರೆ - ಕಮ್ಮತ ಎಂದರೆ ಬೇಸಾಯ, ಕಮ್ಮತ + ಇಗ = ಕಮ್ಮತಿಗೆ ಎಂದರೆ ಬೇಸಾಯಗಾರ ಎಂದು ಅರ್ಥ ಆದಿಚುಂಚನಗಿರಿಯ ಬಂಡೆಯೊಂದರಲ್ಲಿನ ಆರಣಿಯರ ಬೊಮ್ಮಯ್ಯ ಕಮ್ಮತಿಗೆ, ಶಿವನ ಕಮ್ಮತಿಗೆ ರಾಯ ಎಂಬ ಸಾಲುಗಳು ಭೈರವನ ಭಕ್ತರಲ್ಲಿ ಬಹುತೇಕರು ಕೃಷಿಕರೇ ಆಗಿರುವರೆಂಬುದನ್ನು ಸಾರುತ್ತವೆ. ಒಕ್ಕಲಿಗ ಶಬ್ದ ವೃತ್ತಿ ಸೂಚಕವೂ ಹೌದು : ಜಾತಿ ಸೂಚಕವೂ ಹೌದು' ಎಂಬುದರೊಡನೆ ಭೈರವ ಕೃಷಿ ಮೂಲ ದೇವರು ಎಂಬುದು ಮನದಟ್ಟಾಗುತ್ತದೆ.
ಚೋಳೂರ ಕಂಬ ಚುಂಚನಗಿರಿ ಬೆಟ್ಟದ ತುತ್ತತುದಿಯಲ್ಲಿದೆ. ಜಾತ್ರೆಯ ಸಮಯದಲ್ಲಿ ಇಲ್ಲಿ ಹಚ್ಚಿದ ದೀಪ ಚೋಳೂರ ಕಲ್ಯಾಣಿಯಲ್ಲಿ ಅದು ಪ್ರತಿಬಿಂಬಿತಗೊಳ್ಳುತ್ತಿದ್ದು ಅದನ್ನು ಕಂಡನಂತರವೇ ಆ ಊರಿನವರು ಊಟ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.
ಆರಣಿ ರಾಜ, ದೀಪಕ ರಾಜರು ಆರಣಿಯೂರಿನ ದೊರೆಗಳಾಗಿದ್ದರೆಂಬುದು ವಂಶಪಾರಂಪರವಾಗಿ ಅಲ್ಲಿ ಅರಸರ ಆಳ್ವಿಕೆಯಿದ್ದಿತೆಂಬುದನ್ನು ತಿಳಿಸುತ್ತದೆ. ಅಂದಾನಿ ಭೈರವನ ದೃಷ್ಟಿಗೆ ವೈಭವದಿಂದ ಮೆರೆಯುತ್ತಿದ್ದ ಆರಣಿಪಟ್ಟಣ ಕಾಣಿಸಿತೆಂದು, ಕಥೆಯಲ್ಲಿ ಬರುವ ಮಾತು ಇದನ್ನು ಪುಷ್ಟಿಕರಿಸುತ್ತದೆ.
ಅರಣಿ ರಾಜ ನಿರ್ಮಿಸಿದನೆಂದು ಹೇಳಲಾಗುವ ಗಂಗಾಧರೇಶ್ವರ ದೇವಾಲಯ ಕ್ರಮವಾಗಿ ಮುಖಮಂಟಪ, ನವರಂಗ, ನಂದಿ ಮಂಟಪ, ಗರ್ಭಗೃಹಗಳಿಂದ ಕೂಡಿದ್ದು ದ್ವಾರಪಾಲಕರಿರುವ ಪ್ರವೇಶದ್ವಾರ ಉತ್ತರ ದಿಕ್ಕಿಗೆ ಅಭಿಮುಖವಾಗಿದೆ. ಗರ್ಭಗೃಹ ಪೂರ್ವದಿಕ್ಕಿಗೆದುರಾಗಿದೆ. ಒಳಗೆ ಖಡ್ಗದ ಏಟಿನಿಂದ ಕೊಚ್ಚಿ ಹೋದಂತೆ ತಲೆಯಿರುವ ಒಂದು ಉದ್ಭವ ಲಿಂಗವಿದೆ. ಈ ಗಂಗಾಧರೇಶ್ವರ ಲಿಂಗದ ಮೇಲುಭಾಗಕ್ಕೆ ಸ್ವಲ್ಪ ಎತ್ತರದಲ್ಲಿ ಒಂದು ಬಿದುರಿನ ಚಪ್ಪರವನ್ನು ಹಾಕಿದೆ. ಆರಣಿ ರಾಜರ ಕಾಲದಿಂದಲೂ
ಈ ಪದ್ಧತಿ ನಡೆದು ಬಂದಿದೆ. ದೇವಾಲಯದ ವಾಸ್ತುಶೈಲಿ ವೀಕ್ಷಿಸಿದಾಗ ಅದುಹಲವು ಶತಮಾನಗಳ ಪ್ರಾಚೀನತೆಯನ್ನು ತೋರುವಂತಿದೆ. ಕಾಲಕಾಲಕ್ಕೆ ವಿಸ್ತರಿಸುತ್ತಾಬ0ದಿರುವುದರಿಂದ ಮೂಲ ದೇವಾಲಯವನ್ನು ಗುರುತಿಸಲಾಗುವುದಿಲ್ಲ. ಚೋಳರ ಕಾಲದಲ್ಲಿ ನಿರ್ಮಿತವಾಗಿರಬಹುದಾದ ಗಂಗಾಧರೇಶ್ವರ ದೇವಾಲಯ ಕಾಲಕಾಲಕ್ಕೆ ಹೊಯ್ಸಳರ, ವಿಜಯನಗರದವರ, ಯಲಹಂಕ ನಾಡ ಪ್ರಭುಗಳ ಹಾಗೂ ಮೈಸೂರು ಅರಸರ ಕಾಲಕ್ಕೂ ಪುನರ್ನಿಮರ್ಾಣಗೊಳ್ಳುವ ಮೂಲಕ ಅಭಿವೃದ್ಧಿಯನ್ನು ಪಡೆಯುತ್ತಾ ಬಂದಿದೆ. ಆರಣಿ ರಾಜರ ರಾಜಕೀಯ ಚರಿತ್ರೆ ಮರೆಯಾಗಿದ್ದೂರು ಅವರು ಸಲ್ಲಿಸಿದ ಸೇವೆಯಿಂದ ಶತಶತಮಾನಗಳ ನಂತರವೂ ಆದಿಚುಂಚನಗಿರಿಯ ಸಂಸ್ಕೃತಿಯಲ್ಲಿ ಅಮರರಾಗಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ಎo. ವಿ., ಡಾ. ವಸು (2001). ದಕ್ಷಿಣ ಕರ್ನಾಟಕದ ಅರಸು ಮನೆತನಗಳು. ಕನ್ನಡ ವಿಶ್ವವಿದ್ಯಾಲಯ. ಹಂಪಿ ವಿದ್ಯಾರಣ್ಯ: ಪ್ರಸಾರ ರಂಗಕನ್ನಡ ವಿಶ್ವವಿದ್ಯಾಲಯ. p. 378-383.