ಆಯ್ಕೆ ಹಕ್ಕು

ವಿಕಿಪೀಡಿಯ ಇಂದ
Jump to navigation Jump to search

ಬಂಡವಾಳ ಪತ್ರಗಳನ್ನು (‍‍‍ಷೇರ್ಸ್) ನಿರ್ದಿಷ್ಟ ಅವಧಿಯಲ್ಲಿ ಗೊತ್ತಾದ ಬೆಲೆಗೆ ಕೊಳ್ಳುವ, ಮಾರುವ ಹಕ್ಕು. ಷೇರು ಪೇಟೆಗಳಲ್ಲಿ (ಇತರ ಪದಾರ್ಥಗಳ ಪೇಟೆಗಳಲ್ಲೂ) ಕೆಲವರು ಈ ಬಗೆಯ ವಿಶಿಷ್ಟವಾದ ವ್ಯಾಪಾರವನ್ನು ಮಾಡಲು ಅವಕಾಶ ಕಲ್ಪಿಸಿಕೊಂಡು ಬೆಲೆಗಳು ಏರಲು ಅಥವಾ ಇಳಿಯಲು ದಾರಿ ಮಾಡುತ್ತಾರೆ. ಇದಕ್ಕೆ ಸಟ್ಟಾ ವ್ಯಾಪಾರವೆಂದು ಹೆಸರು. ತೇಜಿಮಂದಿಗಳು (ಬುಲ್ಸ್ ಅಂಡ್ ಬೇರ್ಸ್) ಈ ಸಟ್ಟಾ ವ್ಯಾಪಾರವನ್ನು ನಡೆಸುತ್ತಾರೆ. ಈ ಬಗೆಯ ಸಾಹಸವನ್ನು ಮಾಡುವುದರಿಂದ ಒದಗಬಹುದಾದ ನಷ್ಟವನ್ನು ಕಡಿಮೆ ಮಾಡುವುದು ಸಾಧ್ಯವಾಗುವುದರೊಂದಿಗೆ ಬುದ್ಧಿಗೊಂದು ಆಹಾರ, ಹೃದಯಕ್ಕೆ ಒಂದು ಬಗೆಯ ಸಂತೋಷ ಲಭಿಸುತ್ತದೆ. ಇದೊಂದು ರೀತಿಯ ಜೂಜು ಆಟ. ಈ ವ್ಯಾಪಾರ ಮೂರು ತೆರನಾಗಿರುತ್ತದೆ: ಮಾರಾಟದ ಆಯ್ಕೆ ಹಕ್ಕು, ಕೊಳ್ಳುವ ಆಯ್ಕೆ ಹಕ್ಕು, ಕೊಳ್ಳುವ ಅಥವಾ ಮಾರುವ ಆಯ್ಕೆ ಹಕ್ಕು (ಎರಡೂ ಆಯ್ಕೆಗಳ ಹಕ್ಕು). ಮಾರಾಟ ಆಯ್ಕೆ ಹಕ್ಕು ಹೆಸರೇ ಸೂಚಿಸುವಂತೆ ಒಂದು ನಿಗದಿಯಾದ ದಿನದೊಳಗೆ ನಿರ್ದಿಷ್ಟವಾದ ಬೆಲೆಗೆ ಇಂತಿಷ್ಟು ಷೇರುಗಳನ್ನು ಮಾರುವ ಹಕ್ಕನ್ನು ಪಡೆಯುವುದು. ಎರಡನೆಯದು ಕೊಳ್ಳುವ ಆಯ್ಕೆ ಹಕ್ಕನ್ನು ಪಡೆದಿರುವಾತ ನಿರ್ದಿಷ್ಟವಾದ ದಿನದೊಳಗೆ ನಿಗದಿಯಾದ ಬೆಲೆಗೆ ಇಂತಿಷ್ಟು ಎಂದು ಷೇರುಗಳನ್ನು ಕೊಳ್ಳುವ ಹಕ್ಕನ್ನು ಪಡೆದಿರುತ್ತಾನೆ. ಮೂರನೆಯದರಲ್ಲಿ ನಿರ್ದಿಷ್ಟವಾದ ಸಂಖ್ಯೆಯ ಷೇರುಗಳನ್ನು ಗೊತ್ತಾದ ದಿನದೊಳಗೆ, ನಿಯಮಿತವಾದ ಬೆಲೆಗೆ ಮಾರುವ ಅಥವಾ ಕೊಳ್ಳುವ ಹಕ್ಕನ್ನು ಪಡೆದಿರುತ್ತಾನೆ. ಈ ಹಕ್ಕನ್ನು ಪಡೆಯಲು ಷೇರಿಗೆ ಇಷ್ಟು ಎಂದು ಒಂದು ಗೊತ್ತಾದ ಶುಲ್ಕವನ್ನು ಸಹ ಕೊಡಬೇಕಾಗುತ್ತದೆ. ಷೇರುಗಳ ಬೆಲೆ ಇಳಿದುಹೋಗುವುದು ಎಂದು ಅಂದಾಜು ಮಾಡಿದಾಗ ಮಾರುವ ಆಯ್ಕೆ ಹಕ್ಕಿನ ಒಪ್ಪಂದವನ್ನು ಷೇರುಗಳ ಬೆಲೆಯಲ್ಲಿ ತುಂಬ ಏರುಪೇರು ಆಗುತ್ತದೆ ಎಂಬ ಅಂಜಿಕೆ ಇರುವಾಗ ಈ ಮೂರನೆಯ ಆಯ್ಕೆಯ ಹಕ್ಕಿನ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಇದು ಕೇವಲ ಜೂಜಿನಂತೆ ಅದೃಷ್ಟವನ್ನು ನಂಬಿ ಮಾಡುವ ಕೆಲಸವಾಗುತ್ತದೆ. ಆಯ್ಕೆ ಹಕ್ಕನ್ನು ಚಲಾಯಿಸುವ ಕಾಲ ಬಂದಾಗ ಅದನ್ನು ಕೊಳ್ಳುವವರು ಮೊದಲೇ ಹಾಗೆಂದು ಘೋಷಿಸಬೇಕು. ಅಥವಾ ಹಕ್ಕನ್ನು ಚಲಾಯಿಸುವುದಿಲ್ಲವೆಂದಾದರೂ ಪ್ರಕಟಿಸ ಬೇಕು. ಕೊಳ್ಳುವ ಆಯ್ಕೆ ಹಕ್ಕನ್ನು ಘೋಷಿಸಿದರೆ, ಹಣವನ್ನು ಪಾವತಿ ಮಾಡಿ ಷೇರುಗಳನ್ನು ಪಡೆಯುವುದಾಗಬೇಕು. ಮಾರುವ ಆಯ್ಕೆ ಹಕ್ಕನ್ನು ಚಲಾಯಿಸುತ್ತೇನೆಂದು ಘೋಷಿಸಿದರೆ, ಷೇರುಗಳನ್ನು ಬಿಟ್ಟುಕೊಟ್ಟು ಹಣವನ್ನು ಪಡೆಯಬೇಕು. ಭಾರತ ದೇಶದಲ್ಲಿ ಈಗ ಈ ಆಯ್ಕೆ ಹಕ್ಕಿನ ವ್ಯಾಪಾರವನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಈ ವ್ಯಾಪಾರದಲ್ಲಿ ತೊಡಗುವವರನ್ನು ಶಿಕ್ಷಿಸುವ ಹಕ್ಕನ್ನೂ ನ್ಯಾಯಾಲಯಗಳು ಹೊಂದಿವೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: