ಆಯುರ್ವೇದದ ವಿಭಾಗಕ್ರಮ ಮತ್ತು ವಿಶೇಷ ಅಭ್ಯಾಸ-ಅದರ ಅಷ್ಟಾಂಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಪುರ್ಣ ಆಯುರ್ವೇದವನ್ನು ಪ್ರತಿಯೊಬ್ಬನೂ ಕಲಿತು, ಕರ್ಮಾಭ್ಯಾಸ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಆ ಶಾಸ್ತ್ರವನ್ನು ಎಂಟು ವಿಭಾಗಗಳನ್ನಾಗಿ ಮಾಡಿದ್ದಾರೆ. ಅವು ಹೀಗಿವೆ:

ಕಾಯಚಿಕಿತ್ಸಾ[ಬದಲಾಯಿಸಿ]

ಸಮಸ್ತಶರೀರವ್ಯಾಪಿಯಾಗಿರುವ ಜ್ವರ, ಕ್ಷಯ, ಉದರರೋಗ ಮುಂತಾದುವುಗಳ ವರ್ಣನೆ, ಕಾರಣ, ಲಕ್ಷಣ, ಸಾಧ್ಯಾಸಾಧ್ಯ ವಿಚಾರ, ಚಿಕಿತ್ಸಾ ಕ್ರಮ, ಉಪದ್ರವಗಳು, ಪಥ್ಯಾಪಥ್ಯವಿಚಾರ, ಆಹಾರ ವಿಹಾರ, ಉಪಯುಕ್ತ ದ್ರವ್ಯಗಳು, ಔಷಧಗಳನ್ನು ತಯಾರುಮಾಡುವ ಕ್ರಮ ಮತ್ತು ಸೇವನಾವಿಧಿ-ಮುಂತಾದುವುಗಳನ್ನೆಲ್ಲ ವಿವರಿಸುವ ಆಯುರ್ವೇದದ ಭಾಗ (ಮೆಡಿಸಿನ್). ರೋಗಗಳು ಬಾರದಂತೆ ಇರಲು ಮಾಡಬೇಕಾದ ಕ್ರಮವೂ ಇಲ್ಲಿ ಹೇಳಲ್ಪಟ್ಟಿದೆ. ಕಾಯಚಿಕಿತ್ಸೆಯಲ್ಲಿಯೇ ಅನೇಕರು ಹೆಚ್ಚು ಜ್ಞಾನಪಡೆದು, ಅನುಭವಹೊಂದಿ ಗ್ರಂಥಗಳನ್ನು ಬರೆದರು. ಇವುಗಳಲ್ಲಿ ಚರಕಸಂಹಿತಾ, ಭೇಲಸಂಹಿತಾ, ಜತೂಕರ್ಣತಿಸಂಹಿತಾ, ಪರಾಶರಸಂಹಿತಾ, ಹಾರೀತಸಂಹಿತಾ, ಅಗಸ್ತ್ಯಸಂಹಿತಾ, ಅತ್ರಿಸಂಹಿತಾ-ಮುಂತಾದುವು ಪ್ರಸಿದ್ಧವಾಗಿವೆ. ಈಗ ಕೆಲವು ಗ್ರಂಥಗಳು ಮಾತ್ರ ಪ್ರಕಟಿತವಾಗಿ, ಉಳಿದವು ಹಸ್ತಪ್ರತಿಗಳಲ್ಲಿಯೇ ಇವೆ. ಆಯುರ್ವೇದ ವೈದ್ಯರೆಲ್ಲರೂ ಕಾಯಚಿಕಿತ್ಸಾಗ್ರಂಥಗಳನ್ನು ಅಧ್ಯಯನ ಮಾಡಿ ಕೇವಲ ಈ ಒಂದು ಭಾಗವನ್ನೇ ರೂಢಿಯಲ್ಲಿಟ್ಟಿರುತ್ತಾರೆ. ಉಳಿದ ಏಳು ಭಾಗಗಳನ್ನು ಅನುಭವದಲ್ಲಿಟ್ಟಿರುವ ವೈದ್ಯರು ಬಹಳ ವಿರಳ.

ಬಾಲರೋಗ[ಬದಲಾಯಿಸಿ]

ಈ ಭಾಗಕ್ಕೆ ಕೌಮಾರಭೃತ್ಯವೆಂದೂ ಹೆಸರು (ಪೀಡಿಯಾಟ್ರಿಕ್ಸ್). ಹುಟ್ಟಿದಾರಭ್ಯ ಹದಿನಾರು ವರ್ಷಗಳ ತನಕ ಆಯಾ ವಯಸ್ಸಿಗೆ ಅನುಗುಣವಾಗಿ ಬರುವ ರೋಗಗಳ ವರ್ಣನೆ, ಚಿಕಿತ್ಸಾಕ್ರಮ, ರೋಗಗಳು ಬರದಂತೆ ನೋಡಿಕೊಳ್ಳುವ ವಿಧಾನಗಳು, ವಾಯೋನುಗುಣವಾಗಿ ಕೊಡಬೇಕಾದ ಆಹಾರ, ಸ್ತನ್ಯಪರೀಕ್ಷೆ, ದುಷ್ಟಸ್ತನ್ಯ ಶುದ್ಧಮಾಡುವ ಔಷಧಿಗಳು, ಸ್ತನ್ಯಾಭಾವದಲ್ಲಿ ಮಾಡಬೇಕಾದ ಇತರ ಏರ್ಪಾಟುಗಳು, ಧಾತ್ರಿ ಲಕ್ಷಣ, ಮಕ್ಕಳಿಗೆ ಬರುವ ಗ್ರಹಗಳ ಪೀಡೆಗಳ ವಿವರಣೆ-ಮುಂತಾದ ವಿಷಯಗಳನ್ನು ತಿಳಿಸುವ ಭಾಗ. ಗ್ರಂಥಗಳಲ್ಲಿ ಜೀವಿತತಂತ್ರ, ಪಾರ್ವತಕತಂತ್ರ, ಬಂಧಕತಂತ್ರ, ಬಾಲಗ್ರಹತಂತ್ರ ಮೊದಲಾದುವು ಹೇಳಲ್ಪಟ್ಟಿವೆ.

ಗ್ರಹಚಿಕಿತ್ಸಾ[ಬದಲಾಯಿಸಿ]

ಇದಕ್ಕೆ ಮಾನಸರೋಗವಿಜ್ಞಾನ, ಭೂತವಿದ್ಯಾ ಎಂಬ ಹೆಸರುಗಳುಂಟು. ಮನಸ್ಸಿಗೆ ರಜೋಗುಣ ಮತ್ತು ತಮೋಗುಣಗಳೆಂಬ ಎರಡು ದೋಷಗಳುಂಟು. ಸತ್ತ್ವಗುಣವೇ ಮನಸ್ಸಿನ ಆರೋಗ್ಯ ಸಾಧನೆ. ರಜೋಗುಣ ತಮೋಗುಣಗಳಿಂದ ಮನಸ್ಸು ಆವೃತವಾದರೆ ಉನ್ಮಾದ (ಹುಚ್ಚು), ಅಪಸ್ಮಾರ (ಮೂರ್ಛೆ), ಅತತ್ವಾಭಿನಿವೇಶ (ಹಿಸ್ಟೀರಿಯ)-ಮುಂತಾದ ರೋಗಗಳು ಬರುತ್ತವೆ. ಈ ರೋಗಗಳಲ್ಲದೆ, ಪಿಶಾಚಾದಿ ಅನೇಕ ದೇವ, ರಾಕ್ಷಸ ಮತ್ತು ಪಿತೃಗ್ರಹಗಳೂ ಮನಸ್ಸನ್ನು ಆವರಿಸುವುದುಂಟು. ಈ ರೋಗಗಳ ಕಾರಣ, ಲಕ್ಷಣ, ಚಿಕಿತ್ಸಾಕ್ರಮಗಳನ್ನು ವಿವರಿಸುವ ಮತ್ತು ಯಂತ್ರ ಮಂತ್ರಾದಿ ಪ್ರಯೋಗಗಳನ್ನು ಹೇಳುವ ಶಾಸ್ತ್ರವಿದು. ಈ ಭಾಗವನ್ನು ವಿವರಿಸುವ ಗ್ರಂಥಗಳನೇಕವಿವೆ. ಅವುಗಳಲ್ಲಿ ಅಥರ್ವಣ ತಂತ್ರ ಮುಖ್ಯವಾದದ್ದು.

ಊರ್ಧ್ಪಾಂಗರೋಗವಿಜ್ಞಾನ[ಬದಲಾಯಿಸಿ]

ತಲೆಯಲ್ಲಿರುವ ಕಣ್ಣು, ಮೂಗು, ಕಿವಿ, ಗಂಟಲು, ಹಲ್ಲು ಮುಂತಾದ ಅವಯವಗಳಿಗೆ ಬರುವ ರೋಗಗಳನ್ನು ವಿವರಿಸುವ ಭಾಗ. ಇದನ್ನು ಶಾಲಾಕ್ಯತಂತ್ರವೆಂದು ಕರೆಯುವುದುಂಟು. ಈ ವಿಭಾಗದಲ್ಲೂ ತಜ್ಞರಾದ ವೈದ್ಯರುಗಳು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅವುಗಳಲ್ಲಿ ವಿದೇಹಸಂಹಿತಾ, ನಿಮಿತಂತ್ರ, ಶೌಕತಂತ್ರ, ಚಕ್ಷುಷ್ಯತಂತ್ರ, ಕೃಪಾತ್ರೇಯ ತಂತ್ರ-ಮುಂತಾದವು ಮುಖ್ಯವಾಗಿವೆ. ನೇತ್ರರೋಗಗಳಲ್ಲಿ ಬರುವ ಪೊರೆಯ (ಕ್ಯಾಟ ) ವರ್ಣನೆ ಮತ್ತು ಅದನ್ನು ಶಸ್ತ್ರದಿಂದ ತೆಗೆಯುವ ವರ್ಣನೆ ಈಗಲೂ ಆಧುನಿಕರಿಂದಲೂ ಸ್ಮರಿಸಲ್ಪಡುತ್ತಿದೆ. ಸುಶ್ರುತನೇ ಮೊದಲ ಶಸ್ತ್ರವೈದ್ಯ ನೆಂಬುದು ನಿರ್ವಿವಾದ. ಕತ್ತರಿಸಲ್ಪಟ್ಟ ಮೂಗು ಮತ್ತು ಕಿವಿಗಳ ಮರುಜೋಡಣೆ (ಪ್ಲಾಸ್ಟಿಕ್ ಸರ್ಜರಿ) ಮುಂತಾದ ವಿಶೇಷ ಶಸ್ತ್ರಕರ್ಮಗಳ ವರ್ಣನೆ ಮತ್ತು ಶಸ್ತ್ರಕರ್ಮ ವಿಧಾನಗಳು ಬಹು ವಿಸ್ತಾರವಾಗಿ ವರ್ಣಿತವಾಗಿರುವುದಲ್ಲದೆ ತೊಂಬತ್ತಾರು ವಿಧ ನೇತ್ರರೋಗಗಳ ಕಾರಣ, ಲಕ್ಷಣ, ಚಿಕಿತ್ಸೆ ಮತ್ತು ಅವು ಬಾರದಂತೆ ತಡೆಯುವ ಕ್ರಮಗಳೂ ವಿವರಿಸಲ್ಪಟ್ಟಿವೆ. ಜನಗಳಿಗಿರುವ ಮಹತ್ತರವಾದ ಭಾವನೆ ಆಯುರ್ವೇದ ಪಂಡಿತರು ಕಣ್ಣು, ಕಿವಿ ಮುಂತಾದ ಸೂಕ್ಷ್ಮೇಂದ್ರಿಯಗಳ ಚಿಕಿತ್ಸೆ ಮಾಡಲಾರರೆಂಬುದು. ಶಾಸ್ತ್ರ ತಿಳಿದಿರುವ ವೈದ್ಯ ಈ ಅವಯವಗಳ ವಿಷಯದಲ್ಲಿ ಆಧುನಿಕ ನೇತ್ರವೈದ್ಯರುಗಳಷ್ಟೇ ಉತ್ತಮ ತರದ ಚಿಕಿತ್ಸೆಯನ್ನು ಮಾಡಬಲ್ಲ.

ಶಲ್ಯತಂತ್ರ[ಬದಲಾಯಿಸಿ]

ಈ ಭಾಗವನ್ನು ಶಸ್ತ್ರಚಿಕಿತ್ಸೆಯೆಂದೂ ಕರೆಯುವರು. ಈ ಭಾಗವೂ ಆಯುರ್ವೇದದಲ್ಲಿ ಸಂಪುರ್ಣವಾಗಿ ವಿವರಿಸಲ್ಪಟ್ಟಿದೆ. ತಲೆಬುರುಡೆಯೊಳಗೆ ಕಪ್ಪೆಯ ಆಕಾರದಲ್ಲಿದ್ದ ಗ್ರಂಥಿಯನ್ನು ವೈದ್ಯರು ಶಸ್ತ್ರದಿಂದ ತೆಗೆದು ರೋಗಿಯನ್ನು ಬದುಕಿಸಿದ ವಿಷಯ ಭೋಜಪ್ರಬಂಧದಿಂದ ತಿಳಿಯುತ್ತದೆ. ಕಠಿಣತರವಾದ ಅವಯವಗಳ ಜೋಡಣೆ ಮಾಡಿದ ಅಂಶಗಳು ವೇದದ ಕಾಲದಿಂದಲೂ ಇತ್ತೆಂದು, ಇಂದ್ರನ ವೃಷಣಗಳು ಕೆಟ್ಟಿರಲಾಗಿ ಅಜ ವೃಷಣವನ್ನು ಇಂದ್ರನಿಗೆ ಜೋಡಿಸಿದರೆಂಬುದೂ ಉಲ್ಲೇಖಿತವಾಗಿದೆ. ಶಲ್ಯತಂತ್ರ ಪ್ರಧಾನವಾದ ಗ್ರಂಥಗಳಲ್ಲಿ ಸುಶ್ರುತ ಸಂಹಿತೆ, ಪೌಷ್ಕಲಾವತಸಂಹಿತೆ, ವತರಣ ತಂತ್ರ, ಭೋಜನ ಸಂಹಿತಾ, ಕರವೀರ್ಯ ತಂತ್ರ, ಕಪಿಲತಂತ್ರ, ಗೌತಮತಂತ್ರ ಮುಂತಾದುವು ಪ್ರಸಿದ್ಧವಾಗಿವೆ. ಶಸ್ತ್ರಶಾಸ್ತ್ರಕ್ಕೆ ಅಂಗವಾದ ಶಾರೀರಿಕ ರಚನಾ ವಿಜ್ಞಾನದಲ್ಲಿ ಗರ್ಭಸ್ಥಭ್ರೂಣದ ಬೆಳೆವಣಿಗೆ ಯಿಂದ ಹಿಡಿದು ಸಕಲವೂ ವರ್ಣಿತವಾಗಿದ್ದು, ಮೃತದೇಹವನ್ನು ಛೇದಿಸಿ, ಸಿರಾ, ಸ್ನಾಯು, ಧಮನಿ, ಅಸ್ಥಿ, ಸಂಧಿ ಮುಂತಾದುವುಗಳ ಜ್ಞಾನವನ್ನು ಪಡೆಯುವ ಪುರ್ಣ ವರ್ಣನೆಯಿದೆ (ನೋಡಿ - ಅಂಗರಚನಾಶಾಸ್ತ್ರ ಆಯುರ್ವೇದದಲ್ಲಿ) ಶಸ್ತ್ರಕರ್ಮದಲ್ಲಿ ಪುರ್ವಕರ್ಮ, ಪ್ರಧಾನಕರ್ಮ, ಪಶ್ಚಾತ್ಕರ್ಮಗಳನ್ನು ಪ್ರತಿಯೊಂದ ರಲ್ಲೂ ವಿವರಿಸಿದ್ದಾರೆ. ಸದ್ಯೋವ್ರಣ (ಆ್ಯಕ್ಸಿಡೆಂಟಲ್ ವೂಂಡ್್ಸ), ಅಸ್ಥಿಭಗ್ನ (ಫ್ರ್ಯಾಕ್ಚರ್), ಸಂಧಿಭಗ್ನ (ಡಿಸ್ಲೊಕೇಷನ್) ಮುಂತಾದುವುಗಳೂ ಪ್ರಮುಖ ಸ್ಥಾನವನ್ನು ಪಡೆದಿವೆ. ಆಧುನಿಕರಲ್ಲಿ ಇನ್ನೂ ಅಸಾಧ್ಯವೆನಿಸಿರುವ ವ್ರಣದ ಉಪದ್ರವಗಳಿಂದ, ಬಣ್ಣ ಬದಲಾವಣೆ ಮತ್ತು ರೋಮ ಬೆಳೆಯದಿರುವಿಕೆ ಮುಂತಾದುವುಗಳಿಗೂ ಉತ್ತಮ ಔಷಧಗಳು ಹೇಳಲ್ಪಟ್ಟಿವೆ. ಈ ಚಿಕಿತ್ಸೆಗಳಿಗೆ ರೋಮಸಂಜನನ ಚರ್ಮಸವರ್ಣೀಕರಣ ಚಿಕಿತ್ಸೆಗಳೆಂದು ಹೆಸರು. ಈ ಭಾಗದಲ್ಲಿಯೇ ಪ್ರಸೂತಿ ತಂತ್ರವೂ ಸೇರಿಸಲ್ಪಟ್ಟಿದೆ. ಗರ್ಭಿಣಿಗೆ ಮತ್ತು ಗರ್ಭಕ್ಕೆ ಬರುವ ವಿಪತ್ತುಗಳೂ ಪ್ರಸವಕಾಲದಲ್ಲಿ ಆಗುವ ತೊಂದರೆಗಳ ಚಿಕಿತ್ಸೆ, ಶಸ್ತ್ರದಿಂದ ಗರ್ಭಸ್ಥಶಿಶುವನ್ನು ಕತ್ತರಿಸಿ ತೆಗೆದು ತಾಯಿಯನ್ನು ಬದುಕಿಸುವ ರೀತಿ ಮುಂತಾದುವುಗಳೆಲ್ಲ ವಿವರವಾಗಿ ಬಂದಿದೆ. ಹೊಟ್ಟೆಯನ್ನು ಸೀಳಿ, ಮಗುವನ್ನು ಹೊರತೆಗೆದು ಬದುಕಿಸುವ ಶಸ್ತ್ರಕರ್ಮ ಪ್ರಾಯಃ ಸುಶ್ರುತಸಂಹಿತೆಯಲ್ಲಿಯೇ ಮೊದಲು ವರ್ಣಿತವಾಗಿದೆ.

ವಿಷತಂತ್ರ (ಟಾಕ್ಸಿಕಾಲಜಿ)[ಬದಲಾಯಿಸಿ]

ಈ ಭಾಗದಲ್ಲಿ ವಿಷೋತ್ಪತ್ತಿ, ಸ್ಥಾವರ-ಜಂಗಮ ವಿಷಭೇದಗಳು, ವಿಷ ಸೇವಿಸಿದರೆ ಆಗುವ ಲಕ್ಷಣ, ಮಾಡಬೇಕಾದ ಚಿಕಿತ್ಸೆ, ಇವುಗಳಲ್ಲದೆ, ವಿಷವನ್ನು ಕೊಟ್ಟವನನ್ನು ಕಂಡುಹಿಡಿಯುವ ವಿಧಾನಗಳೂ ವರ್ಣಿತವಾಗಿವೆ. ಈ ಭಾಗವನ್ನು ಬೋಧಿಸುವ ಗ್ರಂಥಗಳಲ್ಲಿ ಕಾಶ್ಯಪಸಂಹಿತಾ ಮತ್ತು ಶೌನಕಸಂಹಿತಾ ಮುಖ್ಯವಾದುವು. ಇದನ್ನು ಅಗ್ಗದ ತಂತ್ರವೆಂದೂ ಕರೆಯುವರು.

ರಸಾಯನ ಚಿಕಿತ್ಸೆ[ಬದಲಾಯಿಸಿ]

ಇದಕ್ಕೆ ಕಾಯಕಲ್ಪವೆಂದೂ ಹೆಸರು. ಆಯುಸ್ಸನ್ನು ಹೆಚ್ಚಿಸಿ, ಮುಪ್ಪನ್ನು ಹೋಗಲಾಡಿಸಿ, ಬುದ್ಧಿಶಕ್ತಿ, ಜ್ಞಾಪಕಶಕ್ತಿ, ಮೇಧಾಶಕ್ತಿಗಳನ್ನು ಕೊಟ್ಟು ಶಾರೀರಿಕ ಬಲವನ್ನು ಕುಗ್ಗಿಸದೆ ಸದಾ ಯೌವನ ಸ್ಥಿತಿಯಲ್ಲಿಯೇ ಇರಲು ಆಗಾಗ್ಗೆ ಮಾಡಿಕೊಳ್ಳುವ ಚಿಕಿತ್ಸಾವಿಧಾನ. ಇದರಲ್ಲಿ-ಕುಟೀ ಪ್ರವೇಶ, ಕುಟೀರದಲ್ಲಿದ್ದುಕೊಂಡು ಸೇವಿಸುವ ವಿಧ; ಮತ್ತು ವಾತಾತಪಗಳಲ್ಲಿಯೇ ಸಂಚರಿಸುತ್ತ ಸೇವಿಸುವ ವಿಧಗಳು ವರ್ಣಿತವಾಗಿವೆ. ರಸಾಯನ ಅನೇಕ ನಿಯಮಗಳಿಂದ ಕೂಡಿದ ಆಹಾರ, ವಿಹಾರ ಮತ್ತು ಔಷಧಗಳ ಸೇವನಾಕ್ರಮ. ಈ ಭಾಗದ ಗ್ರಂಥಗಳಲ್ಲಿ ವ್ಯಾಡಿತಂತ್ರ, ಮಾಂಡವ್ಯತಂತ್ರ, ನಾಗಾರ್ಜುನತಂತ್ರ ಮೊದಲಾದುವು ಹೇಳಲ್ಪಟ್ಟಿವೆ.

ವಾಜೀಕರಣ[ಬದಲಾಯಿಸಿ]

ಸತ್ಸಂತಾನವನ್ನು ಪಡೆಯಲು ದಂಪತಿಗಳು ಅನುಸರಿಸಬೇಕಾದ ವಿಧಿ, ಸೇವಿಸಬೇಕಾದ ಔಷಧಿಗಳನ್ನು ವರ್ಣಿಸುವ ಭಾಗ. ಶುಕ್ರಧಾತುವಿನ ದೋಷಗಳನ್ನು ಹೋಗಲಾಡಿಸಿ, ಶುಕ್ರವೃದ್ಧಿಮಾಡಿ ಪ್ರಹರ್ಷಣವಾಗಿ ಕೊಡುವ ವಿಧಾನವನ್ನೂ ತಿಳಿಸುತ್ತದೆ. ಕುಚುಮಾರುತಂತ್ರ, ಶಾಲಿಹೋತ್ರಸಂಹಿತಾ, ಗೌತಮ ಸಂಹಿತಾ ಮುಂತಾದ ಗ್ರಂಥಗಳು ವಾಜೀಕರಣ ಭಾಗದಲ್ಲಿ ಹೇಳಲ್ಪಟ್ಟಿವೆ. ಈ ಎಂಟು ಭಾಗಗಳಿಗೆ ಸಹಕಾರಿಯಾಗಿರುವ ಪಂಚಭೂತಗಳು, ತ್ರಿದೋಷಗಳು, ಸಪ್ತಧಾತುಗಳು, ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಮನಸ್ಸು, ಆತ್ಮ, ಇವುಗಳ ವಿವರಣೆ ಮತ್ತು ದ್ರವ್ಯಗುಣ ವಿಜ್ಞಾನ, ರೋಗಿ ಪರೀಕ್ಷಾ ವಿಧಾನ, ರಸಶಾಸ್ತ್ರ, ನಾಡೀಪರೀಕ್ಷಾ, ಮಲಮೂತ್ರಾದಿಗಳ ಪರೀಕ್ಷಾಕ್ರಮಗಳೆಲ್ಲವೂ ಆಯುರ್ವೇದ ಶಾಸ್ತ್ರಕ್ಕೆ ಸೇರಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: