ಆಫ್ರಿಕದ ನೀಗ್ರೊ ಸಂಗೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನಲ್ಲಿ ಇಂದು ಜಾಸ್ ಎಂದು ಪ್ರಸಾರವಾಗಿ ಪ್ರಸಿದ್ಧವಾಗಿರುವ ಸಂಗೀತಕ್ಕೆ ಪಶ್ಚಿಮ ಆಫ್ರಿಕದ ನೀಗ್ರೊಗಳ ಸಂಗೀತವೇ ಮೂಲ. ಇಂಥದರಲ್ಲಿ ಆಫ್ರಿಕ ಖಂಡದ ಸಂಗೀತವಾಗಲಿ ಅದರಲ್ಲಿ ಸ್ವದೇಶೀ ನೀಗ್ರೊ ಸಂಗೀತವಾಗಲಿ ಸುವ್ಯವಸ್ಥಿತವಾದ ಅಭ್ಯಾಸಕ್ಕೆ ಒಳಪಡದಿರುವುದು ಸೋಜಿಗವೇ ಸರಿ.

ಇತಿಹಾಸ[ಬದಲಾಯಿಸಿ]

1700-1830ರ ಸುಮಾರಿಗೆ ಬಿಳಿಯರು ಸೆನೆಗಾಂಬಿಯ ಉತ್ತರ ಗಿನಿ ಮತ್ತು ದಕ್ಷಿಣ ಗಿನಿಗಳಿಂದಲೂ ಕಾಂಗೊ ದಹೋಮಿ ಮುಂತಾದ ಪ್ರಾಂತ್ಯಗಳಿಂದಲೂ ನೀಗ್ರೊಗಳನ್ನು ಗುಲಾಮರಾಗಿ ಕೊಂಡೊಯ್ದರು. ಇವರೇ ಜಾಸ್ ಸಂಗೀತದ ಮೂಲಪುರುಷರಾದರು. ನೀಗ್ರೊಗಳಲ್ಲಿ ಶ್ರೀಸಾಮಾನ್ಯನಿಗೆ ಸಹ ಸಂಗೀತ ಕಲೆ ಹುಟ್ಟಿನಿಂದಲೇ ರಕ್ತಗತವಾಗಿರುತ್ತದೆ. ಅದನ್ನು ಆತ ಧಾರ್ಮಿಕ ಆಚಾರ, ಯುದ್ಧ, ಮೂಢನಂಬಿಕೆಯ ಕರ್ಮ, ಮಾಟ, ಮಂತ್ರ, ತಂತ್ರ ಮೊದಲಾದ ಅಭಿಚಾರ ಪ್ರಯೋಗಗಳಲ್ಲೂ ಬಲಿ ಕೊಡುವಾಗಲೂ ಮೈಮೇಲೆ ದೇವರ ಅಥವಾ ಭೂತದ ಆವೇಶ ಬರುವುದು ಮುಂತಾದ ಸನ್ನಿವೇಶಗಳಲ್ಲೂ ಬಳಸಿ ಬೆಳೆಸಿಕೊಂಡಿದ್ದರು. ಪ್ರಧಾನವಾಗಿ ಅವರ ಸಂಗೀತ ಜಾನಪದ ಮಾದರಿಯದು. ಅಲ್ಲದೆ ನೃತ್ಯಪ್ರಧಾನವಾದುದು. ಯಾವುದೋ ಒಂದು ತಾಳಗತಿಯಲ್ಲಿ ಸಣ್ಣದಾಗಿ ಪ್ರಾರಂಭವಾಗುವ ಒಂದು ಹಾಡನ್ನು ಹಾಡುತ್ತ ಹಾಡುತ್ತ ಬೆಳೆಸುವ, ತಾಳ ಕೆಡದಂತೆ ವಿವಿಧಗೀತೆಗಳಲ್ಲಿ ನಡೆಸುವ, ಪುನರಾವರ್ತಿಸುವ ರಸಭಾವಗಳ ಏರಿಳಿತಗಳನ್ನು ತರುವ, ಪರಾಕಾಷ್ಠೆಗೊಯ್ಯುವ ಎಲ್ಲ ತಂತ್ರಗಳನ್ನೂ ಆತ ಅನುಭವದಿಂದ ಕಲಿತ. ಉಪಯೋಗಿಸುತ್ತಿದ್ದ ವಿವಿಧ ವಾದ್ಯಗಳ ನಾದಗಳನ್ನು ಅನುಲಕ್ಷಿಸಿ ಯಾವಾಗ ಎಲ್ಲಿ ಯಾವ ವಾದ್ಯದ ನಾದ ಹೊಂದುತ್ತದೆಂಬುದನ್ನು ಕಲಿತ. ಒಬ್ಬನೇ ಹಾಡುವುದು ಎಷ್ಟನ್ನು ಎಲ್ಲರೊಂದಾಗಿ ಹಾಡುವುದು ಎಷ್ಟನ್ನು ಎಂಬುದನ್ನು ಪ್ರಯೋಗಗಳಿಂದ ತಿಳಿದ. ಹೀಗೆ ಸುಲಭವೂ ಸಹಜವೂ ಆಗಿದ್ದ ಅವನ ಜಾನಪದ ಮಟ್ಟುಗಳು ಬರುಬರುತ್ತ ಸಂಕೀರ್ಣವಾದುವು. ಇದು ಎಲ್ಲ ಜಾನಪದ ಸಂಗೀತಗಳಿಗೂ ಹೊಂದಬಲ್ಲ ಮಾತು. ಜೊತೆಗೆ ಸ್ಥಳೀಯ ಜೀವನಕ್ರಮ, ರೀತಿನೀತಿ, ಆಚಾರವಿಚಾರಗಳ ಪ್ರಭಾವ, ಮನೋಧರ್ಮಗಳ ವಿಚಾರಗಳು ಸೇರಿ ಆಫ್ರಿಕದ ಸಂಗೀತ ತನ್ನ ವೈಶಿಷ್ಟ್ಯವನ್ನು ರೂಪಿಸಿಕೊಂಡಿತು. ಅವರ ಹಾಡುಗಳು ಮೂರು ಬಗೆಯಾಗಿವೆ. 1 ಚಾಕುಸಂಗೀತ; 2 ಭೂತಗೀತೆ; 3 ಕೆಲಸದ ಹಾಡು, ಚಾಕುಗೀತೆಯಲ್ಲಿ ತಂತೀವಾದ್ಯವನ್ನು ನುಡಿಸಲು ಚಾಕುವನ್ನೊ, ಮೂಳೆಯ ತುಂಡನ್ನೊ ಬಳಸುತ್ತಾರೆ. ಧಾರ್ಮಿಕ ಗೀತೆಗಳಂತೆ ಸಾಮಾಜಿಕ ಗೀತೆಗಳೂ ಸ್ವಾರಸ್ಯವಾಗಿರುತ್ತವೆ. ತನ್ನ ಮನೆ, ತಾಯಿತಂದೆಗಳ ಹಂಬಲ ಬಹು ಗೀತೆಗಳ ತಿರುಳು.[೧]

ಜನಪದ ಹಾಡುಗಳು[ಬದಲಾಯಿಸಿ]

ನಾ ಮನೆಯ ಬಿಟ್ಟಾಗ | ತಾಯಮ್ಮಗೆ ಕಾಯಿsಲೆ ಕರೆದೊಯ್ಯೊ ನನಗೆಳೆಯ | ನಮ್ಮೂರಿಗೆ ತಂಗಿ ಅಳುತಿಹಳೇನೋ | ಸಾಯುತ್ತಿರುವಳೊ ತಾಯಿ ಬಾ ಮಗನೆ ಬಾ ಎಂದು | ಕಣ್ಣೀರ ಸುರಿಸುವಳೊ ಬರೆದ ಕಾಗದವೆಲ್ಲ | ಸಾವ ಬಗೆಯನೆ ಸಾರಿ ನಾನೋದಲಾರೆನದ | ಕಣ್ಣೀರು ತುಂಬಿ ಬರೆ ಕರೆದೊಯ್ಯೊ ನನಗೆಳೆಯ | ನಮ್ಮೂರಿಗೆ

ಆಫ್ರಿಕದ ಹಾಡುಗಳು[ಬದಲಾಯಿಸಿ]

ಆಫ್ರಿಕದ ಹಾಡುಗಳು ವಿಶೇಷವಾಗಿ ಜನಪದ ಕಥೆಗಳನ್ನು ಆಧರಿಸಿ ರಚಿಸಿದ ಲಾವಣಿಗಳು. ಧಾರ್ಮಿಕ ಗೀತೆಗಳಲ್ಲಿ ಹೆಚ್ಚಾಗಿ ದೇವತೆಗಳನ್ನು ಕರೆಯುವುದೇ ಹೆಚ್ಚು. ಸ್ಥಳೀಯ ವಿಷಯಗಳಿಗೂ ಸಂಬಂಧಿಸಿದಂತೆ ಹಾಡುಗಳಿರುತ್ತವೆ. ಇತ್ತೀಚಿನ ಘಟನೆಗಳ ಆಧಾರದ ಮೇಲೂ ಹಾಡುಗಳು ಹುಟ್ಟಿಕೊಳ್ಳುತ್ತವೆ. ಹದಿನೆಂಟನೆಯ ಶತಮಾನದ ಯುದ್ಧಗಳ ಮೇಲಿನ ಹಾಡುಗಳೂ ದೊರೆಯುತ್ತವೆ.ಆಫ್ರಿಕನರ ಜಾನಪದ ಸಂಗೀತ ಅಮೆರಿಕದಲ್ಲಿ ಹುಟ್ಟಿದ ಜಾಸ್ ಸಂಗೀತ ಸೃಷ್ಟಿಗೆ ಸ್ಪೂರ್ತಿಯಿತ್ತು ಹೇಗೆ ಅದಕ್ಕೆ ಮಾತೃಕೆಯಾಯಿತು ಎಂಬುದನ್ನು ಜಾಸ್ ಸಂಗೀತವನ್ನು ಕುರಿತ ಲೇಖನದಲ್ಲಿ ವಿವರಿಸಿದೆ. ಪಶ್ಚಿಮ ಆಫ್ರಿಕದ ನೀಗ್ರೊಗಳಲ್ಲಿ ಸಂಗೀತ ಹಲವರಿಗೆ ವೃತ್ತಿಯೇ ಆಗಿತ್ತು. ಚಾರಣಕವಿಗಳಾಗಿ ತಮ್ಮ ಕವಿತೆಗಳನ್ನು ಹಾಡಿಕೊಂಡು ಊರಿಂದೂರಿಗೆ ತಿರುಗುತ್ತಿದ್ದಂಥ ವೃತ್ತಿವಂತರಿಗೆ ಗ್ವಿರಿಯೋಟ್ ಎಂಬ ಹೆಸರಿತ್ತು. ಜನಪದಗಾಯಕವಾದಕರಾಗಿದ್ದ ಕಲೆಗಾರರಿಗೆ ಚೆಲ್ಲೀ ಎಂದೂ ಹೆಸರಿತ್ತು. ಇವರು ಸುಮಾರು ಇನ್ನೂರು ವರ್ಷಗಳಷ್ಟು ಈಚಿನವರೆಗೂ ಪ್ರಸಿದ್ಧರಾಗಿದ್ದರು.[೨]

ನೀಗ್ರೊ ಸಂಗೀತ[ಬದಲಾಯಿಸಿ]

ನೀಗ್ರೊ ಸಂಗೀತ ವಿಶೇಷವಾಗಿ ಲಯಪ್ರಧಾನವಾದುದು. ಸಹಜೋತ್ಸಾಹದ, ಸಮಯಸ್ಪೂರ್ತಿಯ ಛಂದಸ್ಸೂ ಓಜಸ್ಸೂ ಈ ಸಂಗೀತದ ಪ್ರಧಾನ ಲಕ್ಷಣ. ಗೇಯಾಂಶದಲ್ಲೂ ತಾಳಕ್ರಮದಲ್ಲೂ ಸ್ವಚ್ಛಂದ ಸೃಷ್ಟಿಯೇ ಅವರ ವೈಶಿಷ್ಟ್ಯ. ಆದುದರಿಂದ ಪರಂಪರೆ ಮತ್ತು ಸಂಪ್ರದಾಯಗಳ ಮೌಲ್ಯಗಳು ಇಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಒಂದೇ ಹಾಡನ್ನು ಬೇರೆ ಬೇರೆ ನೀಗ್ರೊಗಳು ಬೇರೆ ಬೇರೆ ರೀತಿಯಲ್ಲಿ ಹಾಡುತ್ತಾರೆ. ಅಷ್ಟೇ ಅಲ್ಲ, ಒಬ್ಬನೇ ಒಂದು ಹಾಡನ್ನು ಬೇರೆ ಸಮಯದಲ್ಲಿ ಬೇರೆ ಬೇರೆಯಾಗಿ ಹಾಡುತ್ತಾನೆ. ಸ್ವದೇಶ, ಸ್ವಗೃಹ, ಸ್ವಬಾಂಧವರ ಸಹವಾಸ- ಈ ಸನ್ನಿವೇಶಗಳಲ್ಲಿ ಸ್ವಚ್ಛಂದ ಸಂಗೀತ ಸೃಷ್ಟಿಯ ಹೂ ಅರಳುವುದು ಹೆಚ್ಚಲ್ಲದಿರಬಹುದು. ಆದರೆ ಅಮೆರಿಕದ ಗುಲಾಮಗಿರಿಯು ನರಕವಾದಲ್ಲಿ ಹೃದಯದ ಮಾರ್ದವ, ಆದ್ರ್ರತೆಗಳು ಬತ್ತಿಹೋಗಿ ಬೆಂಗಾಡಾಗಿ ಹೋದಾಗಲೂ ಇದು ಅರಳಿ ಪ್ರಪಂಚದಲ್ಲೆಲ್ಲ ಪರಿಮಳವನ್ನು ಪ್ರಸರಿಸಿದ್ದು ಹೆಚ್ಚಿನ ಮಾತೇ. ಬಹುಶಃ ಕಲೆಗಳ ಒಂದು ಪ್ರಧಾನ ಉದ್ದೇಶ ಇದೇ ಆಗಿದೆ. ಅದು ನೊಂದ ಹೃದಯಕ್ಕೆ ಔಷಧವಾಗಬಲ್ಲುದು. ಗಾಯ ಮಾಯುವಂತೆ, ನೋವನ್ನು ಮರೆಯುವಂತೆ ಮಾಡುವ ಗುಣ ಅದಕ್ಕುಂಟು. ನೀಗ್ರೊ ಹಾಡುಗಳಲ್ಲಿ ಗೇಯಾಂಶ ಸಾಮಾನ್ಯವಾಗಿ ಸರಳವಾಗಿಯೇ ಇರುತ್ತದೆ. ಅದರಲ್ಲಿನ ಸೌಂದರ್ಯ ಪ್ರಜ್ಞೆಯನ್ನೂ ರಸ ಪ್ರತೀತಿಯನ್ನೂ ಗಾಯಕ ತನ್ನ ವೈಯಕ್ತಿಕ ಅಭಿವ್ಯಕ್ತಿಯಿಂದಲೇ ಮಾತುಗಳಲ್ಲಿ ವಿವರಿಸಲು ಕಷ್ಟಸಾಧ್ಯವಾದ ಲಯ-ಛಂದಸ್ಸುಗಳ ಒಂದು ಬಗೆಯ ಸೂಕ್ಷ್ಮ ಮಿಶ್ರಣದಿಂದಲೇ ಮಾಡುತ್ತಾನೆ. ಆದುದರಿಂದ ಈ ಸಂಗೀತ ಮುಖ್ಯವಾಗಿ ವ್ಯಕ್ತಿನಿಷ್ಠವಾದುದು. ಅದೇ ಹಾಡನ್ನು ಅಷ್ಟೇ ನಿಷ್ಕøಷ್ಟವಾಗಿ ಇನ್ನೊಬ್ಬರು ಹಾಡಿದರೂ ಅದೇ ರಸಪ್ರತೀತಿ ಆಗದೆ ಹೋಗಬಹುದು.

ನೀಗ್ರೊ ಸಂಗೀತದ ಇತರ ವೈಶಿಷ್ಟ್[ಬದಲಾಯಿಸಿ]

ನೀಗ್ರೊ ಸಂಗೀತ, ಛಂದೊಪ್ರಧಾನವಾದ ಸಣ್ಣ ಸಣ್ಣ ಸ್ವರಸಮುಚ್ಚಯಗಳನ್ನು ಬಹು ಬಾರಿ ಪುನರಾವರ್ತಿಸಿ ಇವುಗಳನ್ನು ತೀವ್ರವಾದ ವೇಗ, ಉದ್ವೇಗಗಳ ಓಜೋಮಯ ಪರಾಕಾಷ್ಠೆಗೆ ಒಯ್ಯುವುದು. ಹಲವು ಸ್ವರಾರ್ಥಗಳನ್ನು ಅನುಕ್ರಮದಲ್ಲಿಯೇ ಬಳಸಿ ವಿವಾದಿಭಾವಗಳಿಂದ ರಂಜಿಸುವುದು. ಸ್ವರಹುಸಿಯ-ಎಂದರೆ ಘಾತವಿಲ್ಲದ_ಪ್ರದೇಶಗಳಲ್ಲಿ ತೀವ್ರವಾದ ಸ್ವರಭಾರದ ವ್ಯತ್ಯಾಸದಿಂದಲೇ ಲಯದ ಭಾವವನ್ನು ಸ್ಫುರಿಸುವುದು. ತಾಳಕ್ರಮದಲ್ಲಿ ವಿಚಿತ್ರ ಛಂದೋ ವಿನ್ಯಾಸಗಳನ್ನು ಸೃಷ್ಟಿಸುವುದು, ಇತ್ಯಾದಿ. ಆಫ್ರಿಕದಲ್ಲಿ ನೀಗ್ರೊ ಸಂಗೀತ ತನ್ನದೇ ಆದ ಪ್ರೌಢಿಮೆಯನ್ನು ಈಚಿನವರೆಗೂ ಉಳಿಸಿಕೊಂಡಿತ್ತು. ಉದಾಹರಣೆಗೆ, 1820ರ ಸುಮಾರಿನಲ್ಲಿ ಸುಲಿಮ ಪ್ರಾಂತ್ಯದ ಪ್ರಭು ಯರ್ರದಿ ನೂರಕ್ಕಿಂತ ಹೆಚ್ಚು ವಾದ್ಯಗಾರರಿದ್ದ ಸಂಗೀತಗೋಷ್ಠಿಯೊಂದನ್ನು ತನ್ನ ಆಸ್ಥಾನದಲ್ಲಿ ನೇಮಿಸಿಕೊಂಡಿದ್ದ. ಗಾನದಂತೆ ವಾದ್ಯದಲ್ಲೂ ನೀಗ್ರೊಗಳು ಪ್ರೌಢರಾಗಿದ್ದರು. ಹೀಗೆ, ಸೆನೆಗಾಂಬಿಯದ ನೀಗ್ರೊಗಳು ಆನೆಯ ದಂತದ ಕಾಳೆ, ಕಾಷ್ಠತರಂಗ (ಜóಂಜಿóೀ=ಮರಿಂಬ+ಇಬೆಕ) ಬೌಲೋ (ಒಂಬಿ) ಎಂಬ ಸ್ವರಮಂಡಲ, ಬುಲಾಫೊ, ಬಲೊಂಡ ಎಂಬ ರೀತಿಯ ರಾಗಮಾಲಿಕೆಗಳು (ಮೌತ್ ಆರ್ಗನ್), ವಲ್ಗ (ವಾಂಬೀ, ಕಿಸ್ಸುಂಬ)ಮತ್ತು ಸ್ಯಾಂಚೋ ಎಂಬ ತಂತೀವಾದ್ಯಗಳು ಅನೇಕ ವಿಧದ ಆಕಾರಗಳ ಮದ್ದಳೆಗಳು, ಕೊಳಲುಗಳು, ಪಿಟೀಲಿನಂಥ ವಾದ್ಯ ಮೊದಲಾದುವನ್ನು ಉಪಯೋಗಿಸುತ್ತಿದ್ದರು. ಅಪೊನೊ ನೀಗ್ರೊಗಳು ಹಂಜ ಎಂಬ ರಾಗಮಾಲಿಕೆಯನ್ನು ಅಶಂತೀ ನೀಗ್ರೊಗಳು ಉಪ್ಪಂಗವನ್ನೂ ಅನೇಕ ಮದ್ದಳೆಗಳನ್ನೂ (ಚಿರತೆಯ ಚರ್ಮದಿಂದ ಮುಚ್ಚಿದುದೇ ಇವುಗಳಲ್ಲಿ ಶ್ರೇಷ್ಠತಮವೆನಿಸಿತ್ತು). ಕಂಜಿರ, ಕೊಂಬು, ಕಾಳೆಗಳನ್ನೂ ಘಾಂತೀ ನೀಗ್ರೊಗಳು ಇವುಗಳ ಜೊತೆಗೆ ಅನೇಕ ಜಾಗಟೆಗಳು, ಚಿಟಿಕೆಗಳು ಮೊದಲಾದುವನ್ನೂ; ದಹೋಮಿಯ ಬೆನಿನ್ ನೀಗ್ರೊಗಳು ಮದ್ದಳೆ, ಸ್ವರಮಂಡಲಗಳನ್ನೂ ಕಾಂಗೊ ನೀಗ್ರೊಗಳು ಗಿಟಾರ್‍ನಂಥ ವಾದ್ಯ, ವಿಸ್ಸಂದಿ ಎಂಬ ಕಾಷ್ಠತರಂಗ ಉಪ್ಪಂಗ, ಇತ್ಯಾದಿಗಳನ್ನೂ ಬಳಸುತ್ತಿದ್ದರು.ಆಫ್ರಿಕದಲ್ಲಿ ಈಗ ಪಾಶ್ಚಾತ್ಯ ಸಂಸ್ಕøತಿ ಪ್ರಬಲವಾಗಿ ದೇಶೀಯ ಸಂಗೀತದ ನೈಜ ಮೌಲ್ಯಗಳು ಮಸುಕಾಗುತ್ತಿವೆ.

ಉಲ್ಲೇಖಗಳು[ಬದಲಾಯಿಸಿ]