ಆಫ್ರಿಕದ ಜನಾಂಗಗಳು
ಜನಾಂಗಗಳ ಅಧ್ಯಯನ ದೃಷ್ಟಿಯಿಂದ ಆಫ್ರಿಕವನ್ನು ಸಹರ ಮರುಭೂಮಿಯ ಉತ್ತರ ಮತ್ತು ದಕ್ಷಿಣ ಎರಡು ವಲಯಗಳಾಗಿ ವಿಂಗಡಿಸಬಹುದು. ಇಲ್ಲಿರುವ ಜನಾಂಗಗಳಲ್ಲಿ ಅತಿ ಮುಖ್ಯವಾದುವು ಎರಡು: ನೀಗ್ರೊ ಮತ್ತು ಕಾಕಸಾಯಿಡ್. ಈ ಎರಡು ಜನಾಂಗಗಳನ್ನು ಸಹರ ಮರುಭೂಮಿ ಪ್ರತ್ಯೇಕಿಸಿದ್ದರೂ ಎರಡು ಜನಾಂಗಗಳೂ ಅನೇಕ ವಿಧವಾದ ಸಂಪರ್ಕಗಳಿಂದ ಒಂದರ ಮೇಲೊಂದು ಪ್ರಭಾವ ಬೀರಿವೆ.
ಮರುಭೂಮಿಯ ದಕ್ಷಿಣದಲ್ಲಿ ವಾಸಿಸುವ ನೀಗ್ರೊ
[ಬದಲಾಯಿಸಿ]ಮರುಭೂಮಿಯ ದಕ್ಷಿಣದಲ್ಲಿ ವಾಸಿಸುವ ನೀಗ್ರೊಗಳ ಚರ್ಮ ಮತ್ತು ಕಣ್ಣು ಕಪ್ಪು. ಗುಂಗುರು ಕೂದಲು, ಗೆಡ್ಡೆಮೂಗು, ಉದ್ದನೆಯ ತಲೆ, ಚಾಚುದವಡೆ, ಮಧ್ಯಮ ವರ್ಗದ ಎತ್ತರ ಮುಂತಾದುವು ಅವರ ಇತರ ಲಕ್ಷಣಗಳು. ಭಾಷಾ ದೃಷ್ಟಿಯಿಂದ ನಿಗ್ರೋಗಳನ್ನು ಬಂಟು ಮತ್ತು ಸೂಡಾನಿಗಳು ಎಂದು ವಿಭಾಗಿಸಬಹುದು. ಬಂಟು ಭಾಷೆಯಾಡುವವರು ನೀಗ್ರೊ ಆಫ್ರಿಕಾದ ಮೂರನೆ ಎರಡು ಭಾಗ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಇವರನ್ನು ಉಗಾಂಡ, ಟ್ಯಾಂಗನೀಕ, ಉತ್ತರ ರೊಡೀಷಿಯ, ಉತ್ತರ ಮೊಜಾಂಬಿಕ್ ಪ್ರದೇಶಗಳ ಪೂರ್ವಬಂಟು ಜನ ಎಂದೂ ಅಂಗೋಲ, ಬೆಲ್ಜಿಯನ್ ಕಾಂಗೊ, ಫ್ರೆಂಚ್ ಈಕ್ವೆಟೋರಿಯಲ್ ಆಫ್ರಿಕ ಪ್ರದೇಶಗಳ ಪಶ್ಚಿಮ ಬಂಟು ಜನ ಎಂದು ಜಾಂಬೆಸಿ ನದಿಯ ಕೆಳ ತೀರಪ್ರದೇಶಗಳ ದಕ್ಷಿಣ ಬಂಟು ಜನ ಎಂದೂ ಮೂರು ಭಾಗಗಳಾಗಿ ವಿಂಗಡಿಸಬಹುದು. ಸಂಸ್ಕøತಿಯ ದೃಷ್ಟಿಯಿಂದ ನಿಗ್ರೋಗಳನ್ನು ಐದು ಭಾಗಗಳಾಗಿ ವಿಂಗಡಿಸಬಹುದು. ಪೂರ್ವದ ಪಶುಪಾಲನಾ ಕ್ಷೇತ್ರ, ಕಾಂಗೊ, ಗಿನಿ ತೀರಪ್ರದೇಶ, ಪಶ್ಚಿಮ ಸೂಡಾನ್ ಮತ್ತು ಪೂರ್ವ ಸೂಡಾನ್. ಪೂರ್ವದ ಪಶುಪಾಲನಾ ಕ್ಷೇತ್ರದಲ್ಲಿ ವಿಶೇಷವಾಗಿ ಪಶುಪಾಲನೆಯೇ ಮುಖ್ಯ ವೃತ್ತಿ. ಅಲ್ಲಿ ವ್ಯವಸ್ಥಿತ ಸಣ್ಣ ರಾಜ್ಯಗಳು ಕಡಿಮೆ. ಕಾಂಗೊ ಮತ್ತು ಗಿನಿತೀರ ಪ್ರದೇಶಗಳ ಸಂಸ್ಕøತಿಯಲ್ಲಿ ಸುವ್ಯವಸ್ಥಿತವಾದ ಮತ್ತು ಬಲಯುತವಾದ ರಾಜ್ಯಗಳು ವಿಶೇಷವಾಗಿವೆ. ಅದರ ಜೊತೆಗೆ ನಗರೀಕರಣ ಸಂಸ್ಕøತಿ, ಧಾರ್ಮಿಕ ಮತ್ತು ಮತೀಯ ಆಡಳಿತ ವ್ಯವಸ್ಥೆ, ಗುಪ್ತ ಧಾರ್ಮಿಕ ಸಂಘಗಳು, ಶಿಲ್ಪ ವರ್ಣಚಿತ್ರ ಮುಂತಾದ ಕಲೆಗಳು ಮುಂತಾದುವನ್ನು ನೋಡಬಹುದು. ಸೂಡಾನಿನಲ್ಲಿ ಮುಸ್ಲಿಮರ ಪ್ರಭಾವವನ್ನು ವಿಶೇಷವಾಗಿ ಕಾಣಬಹುದು. ಆದರೆ ಇದು ಕೆಲವು ಮುಖ್ಯ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದು, ಹಳ್ಳಿಗಳಲ್ಲಿ ಅವರ ಮುಂಚಿನ ಸಂಸ್ಕøತಿಯೇ ಉಳಿದು ಬಂದಿದೆ. ಪಿತೃ ದೇವತಾಪೂಜೆ, ಮಡಿಕೆಗಳನ್ನು ಮಾಡುವುದು, ಕಬ್ಬಿಣದ ಕೆಲಸ, ವ್ಯವಸಾಯ ಇವರ ಮುಖ್ಯ ಲಕ್ಷಣಗಳು. ಇಲ್ಲಿ ಪಶುಪಾಲನೆ ಬಹಳ ಕಡಿಮೆ. ನಾಯಿ, ಕುರಿ, ಹಂದಿ, ಕೋಳಿಗಳೇ ಇವರ ಸಾಕು ಪ್ರಾಣಿಗಳು. ಸೂಡಾನಿನ ಸ್ಟೆಪ್ಟಿಸ್ ಪ್ರದೇಶಗಳಲ್ಲಿ ಪಶುಪಾಲನೆಯೇ ಮುಖ್ಯ ವೃತ್ತಿ.[೧]
ಹಾಟೆನ್‍ಟೊ, ಪಿಗ್ಮಿ ಮತ್ತು ಬುಷ್‍ಮೆನ್ ಜನಾಂಗ
[ಬದಲಾಯಿಸಿ]ಸಹರ ಮರುಭೂಮಿಯ ದಕ್ಷಿಣದಲ್ಲಿ ನೀಗ್ರೊಗಳಿಗಿಂತ ಸ್ವಲ್ಪ ಭಿನ್ನವಾದ ಹಾಟೆನ್‍ಟೊ, ಪಿಗ್ಮಿ ಮತ್ತು ಬುಷ್‍ಮೆನ್ ಜನಾಂಗದವರು ವಾಸಿಸುತ್ತಾರೆ. ಇವರು ನೀಗ್ರೊಗಳಂತೆಯೇ ಕಂಡರೂ ಅವರಿಗಿಂತ ಭಿನ್ನವಾದ ಭಾಷೆ ಮತ್ತು ಲಕ್ಷಣಗಳನ್ನು ಹೊಂದಿದ್ದಾರೆ. ಇವರನ್ನು ನೀಗ್ರಾಯಿಡ್ ಎಂದು ಕರೆಯುತ್ತಾರೆ. ಕಲಹರಿ ಮರುಭೂಮಿ ಮತ್ತು ಕಾಂಗೊ ಪ್ರದೇಶಗಳ ದುರ್ಗಮವಾದ ಒಳನಾಡಿನಲ್ಲಿ ಇವರು ವಾಸಿಸುತ್ತಾರೆ. ಬಹುಶಃ ಇವರು ಆಫ್ರಿಕದ ಮೂಲನಿವಾಸಿಗಳಾಗಿದ್ದು, ನೀಗ್ರೊಗಳ ದಾಳಿಯಿಂದ ಒಳನಾಡಿನಲ್ಲಿ ಹೋಗಿ ನೆಲೆಸಿದವರಿರಬೇಕೆಂದು ಹೇಳಬಹುದು.ನೀಗ್ರೊ ಆಫ್ರಿಕದಲ್ಲಿ ವಾಸಮಾಡುವ ನೀಗ್ರೊ ಅಥವಾ ನೀಗ್ರಾಯಿಡ್ ಜನಾಂಗದಲ್ಲಿ ಅನೇಕ ಪ್ರಭೇದಗಳಿವೆ. ನೀಗ್ರೊಗಳಿಗಿರುವ ಮುಖ್ಯ ಲಕ್ಷಣಗಳೇ ಇವರಲ್ಲೂ ಇದ್ದರೂ ಸಾಂಸ್ಕøತಿಕ ಮತ್ತು ಭಾಷಾಬೇಧಗಳನ್ನು ಈ ವಿವಿಧ ಜನಾಂಗಗಳಲ್ಲಿ ಕಾಣಬಹುದು. ಮುಖ್ಯವಾದ ನೀಗ್ರೊ ಪ್ರಭೇದಗಳನ್ನು ಇಲ್ಲಿ ಗಮನಿಸಲಾಗಿದೆ. ಅಕನ್ ಎಂಬ ಜನಾಂಗದವರು ಟ್ವಿ ಅಥವಾ ಟ್ಷಿ ಎಂಬ ಭಾಷೆಯನ್ನು ಮಾತನಾಡುತ್ತಾರೆ. ಸುಮಾರು ಮೂವತ್ತು ಲಕ್ಷಕ್ಕೂ ಮೀರಿದ ಜನಸಂಖ್ಯೆ ಇವರದು. ಇವರಲ್ಲಿ ಜನನಾಂಗದ ಮುಂದೊಗಲ ಭಾಗವನ್ನು ಕತ್ತರಿಸಿ ಹಾಕುವ ಮತೀಯ ಸಂಸ್ಕಾರ ಇಲ್ಲ. ಸುವ್ಯವಸ್ಥಿತ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಮತೀಯ ಸಂಸ್ಥೆಗಳಿವೆ. ಕುಶಲಕಲೆಗಳಲ್ಲಿ ಬಟ್ಟೆ ನೇಯುವುದು ಮತ್ತು ಹಿತ್ತಾಳೆಯ ಕೆಲಸ ಮುಖ್ಯವಾದುದು. ಆಷಂಟಿ ಎಂಬ ಜನಾಂಗದ ಸುಮಾರು ಆರು ಲಕ್ಷ ಜನ ಗೋಲ್ಡ್ ಕೋಸ್ಟ್‍ನಲ್ಲಿ ವಾಸಿಸುತ್ತಾರೆ. ಇವರ ರಾಜ್ಯ ಅನೇಕ ಯುದ್ಧಗಳ ಅನಂತರ ಬ್ರಿಟಿಷರ ವಶವಾಯಿತು. ಇವರ ರಾಜಧಾನಿಯಾಗಿದ್ದ ಕುಮಸಿ ಪೂರ್ಣವಾಗಿ ನಾಶಮಾಡಲ್ಪಟ್ಟಿತು.[೨]
ಎಡೊ ಜನಾಂಗ
[ಬದಲಾಯಿಸಿ]ಸುಮಾರು ಐದು ಲಕ್ಷವಿರುವ ಎಡೊ ಜನಾಂಗದವರು ದಕ್ಷಿಣ ನೈಜೀರಿಯದಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಬಿನಿ, ಎಸ, ಸೋಬೊ ಮುಂತಾದ ಹದಿನೈದು ಒಳಪಂಗಡಗಳು ಇದ್ದುವು. ಮೊಟ್ಟಮೊದಲನೆಯದಾಗಿ ಹದಿನೈದನೆಯ ಶತಮಾನದಲ್ಲಿ ಪೋರ್ಚುಗೀಸರು ಇಲ್ಲಿಗೆ ಬಂದಾಗ ಇವರ ರಾಜಧಾನಿಯಾದ ಬೆನಿನ್ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಸುವ್ಯವಸ್ಥಿತ ಆಡಳಿತ ಪದ್ಧತಿ, ಬಹು ಉತ್ತಮವಾದ ಕಂಚಿನ ಕೆಲಸ, ದಂತದ ಕೆತ್ತನೆ ಮುಂತಾದುವು ಇವರ ವೈಶಿಷ್ಟ್ಯ. ಬ್ರಿಟಿಷ್ ಅಧಿಕಾರಿಯೊಬ್ಬ ಇವರ ನರಬಲಿಯನ್ನು ನೋಡಲು ಹೋಗಿ ತಾನೇ ಬಲಿಯಾದ. ಇದರಿಂದ ಕೋಪಗೊಂಡ ಬ್ರಿಟಿಷರು ಬೆನಿನ್ ನಗರವನ್ನು ನಾಶಮಾಡಿ ಅಲ್ಲಿಯ ಕಲಾವೈಶಿಷ್ಟ್ಯಗಳೆಲ್ಲವನ್ನೂ ಯೂರೋಪಿಗೆ ಸಾಗಿಸಿದರು. ರಾಜ ಹತನಾದ. 1914ರಲ್ಲಿ ರಾಜನ ಮಗ ಸಿಂಹಾಸನಕ್ಕೆ ಬಂದ.ಪುಲನಿ ಅಥವಾ ಪಿಲಸಿ ಎಂದು ಪ್ರಖ್ಯಾತವಾಗಿರುವ ನೀಗ್ರೊ ಜನಗಳು ಚಾಡ್ ಸರೋವರ ಮತ್ತು ಸೆನೆಗಲ್ ನದಿಯ ತೀರಪ್ರದೇಶಗಳಲ್ಲಿ ವಾಸವಾಗಿದ್ದರು. ಅವರ ಜನಸಂಖ್ಯೆ ಅರವತ್ತು ಲಕ್ಷ. ಮುಖ್ಯ ವೃತ್ತಿ ಪಶುಪಾಲನೆ. ಅಕ್ಕಪಕ್ಕದ ಜನಾಂಗಗಳ ಮೇಲೆ ದಂಡೆತ್ತಿ ಹೋಗಿ ಬಲಯುತವಾದ ರಾಜ್ಯವನ್ನು ಕಟ್ಟಿದರು. 1903ರಲ್ಲಿ ಫ್ರೆಂಚರು ಇವರನ್ನು ಪೂರ್ಣವಾಗಿ ಸೋಲಿಸಿದರು.
ಹೌಸ್ ಜನಾಂಗ
[ಬದಲಾಯಿಸಿ]ಉತ್ತರ ನೈಜೀರಿಯಾದಲ್ಲಿ ವಾಸಿಸುವ ಹೌಸ್ ಎಂಬ ಜನಾಂಗದವರು ಸುಮಾರು ಐದು ಲಕ್ಷ ಇರಬಹುದು. ಇವರು ಅರಬ್ಬೀ ಲಿಪಿಯನ್ನು ಉಪಯೋಗಿಸುತ್ತಿದ್ದರೂ ಪುಲನಿಯಿಂದ ಸೋಲಿಸಲ್ಪಡುವ ಮುಂಚೆ ಇವರಲ್ಲಿ ಮಹಮ್ಮದೀಯ ಧರ್ಮ ಪ್ರಚಲಿತವಾಗಿದ್ದಿತು. ಇವರು ಅಂಥ ಸುಸಂಸ್ಕøತ ಜನಾಂಗದವರೇನೂ ಅಲ್ಲ.ಬಂಟರ ಅಥವಾ ಜನ್ಮನ ಎಂದು ಪ್ರಸಿದ್ಧವಾಗಿರುವ ಸುಮಾರು ಹನ್ನೆರಡು ಲಕ್ಷ ಜನ ಫ್ರೆಂಚ್ ಸೂಡಾನಿನ ಕೆಲವು ಭಾಗಗಳಲ್ಲಿದ್ದಾರೆ. ಇವರಲ್ಲಿ ಹಲವರು ಇಸ್ಲಾಂ ಮತಾವಲಂಬಿಗಳು. ವ್ಯವಸಾಯ, ಮೀನು ಹಿಡಿಯುವುದು ಮತ್ತು ಪಶುಪಾಲನೆ ಇವರ ಮುಖ್ಯವೃತ್ತಿಗಳು. ಇವರು ಕರ್ತ ಮತ್ತು ಸೆಗು ಎಂಬ ಬಲಯುತ ರಾಜ್ಯಗಳನ್ನು ಹದಿನೇಳನೆಯ ಶತಮಾನದಲ್ಲಿ ಸ್ಥಾಪಿಸಿದ್ದರು.
ಕ್ಷಿಣ ಟೋಗೋಲ್ಯಾಂಡ್ ಮತ್ತು ಗೋಲ್ಡ್ ಕೋಸ್ಟ್
[ಬದಲಾಯಿಸಿ]ಎ ಹೊವೆ ಜನಾಂಗದ ಹತ್ತು ಲಕ್ಷ ಜನ ದಕ್ಷಿಣ ಟೋಗೋಲ್ಯಾಂಡ್ ಮತ್ತು ಗೋಲ್ಡ್ ಕೋಸ್ಟ್‍ನ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದರು. ಸುವ್ಯವಸ್ಥಿತ ಆಡಳಿತ ವ್ಯವಸ್ಥೆಯನ್ನು ಇವರು ಹೊಂದಿದ್ದರು. ದಕ್ಷಿಣ ನೈಜೀರಿಯಾದ ಐಬೋ ಜನಾಂಗದವರು ಸುಸಂಸ್ಕøತರು. ಇವರು ಮರದ ಕೆತ್ತನೆ ಕೆಲಸಗಳಲ್ಲಿ ನಿಷ್ಣಾತರು. 1948ರಲ್ಲಿ ನೈಜೀರಿಯಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಇವರು ಪಾಶ್ಚಾತ್ಯ ಪ್ರಭಾವಕ್ಕೊಳಗಾಗುತ್ತಿದ್ದಾರೆ. ಫ್ರೆಂಚ್, ಸೂಡಾನ್, ಸೆನೆಗಲ್, ಮತ್ತು ಗಿನಿಗಳಲ್ಲಿ ವಾಸಿಸುವ ಮಲಿಂಕೆ ಜನಾಂಗದ ಜನಸಂಖ್ಯೆ ಆರು ಲಕ್ಷ. ಭಾಷೆ ಮತ್ತು ಸಂಸ್ಕøತಿಯಲ್ಲಿ ಅವರು ಬಂಬರರನ್ನು ಹೋಲುತ್ತಾರೆ. ಹನ್ನೊಂದರಿಂದ ಹದಿನೇಳನೆಯ ಶತಮಾನದವರೆಗೆ ಇವರು ಮಾಲಿ ಎಂಬ ಸುಭದ್ರ ರಾಜ್ಯವನ್ನು ಸ್ಥಾಪಿಸಿದ್ದರು. ಕನುರಿ ಜನಾಂಗದವರು ನೈಜೀರಿಯಾದ ಕೆಲವು ಭಾಗಗಳಲ್ಲಿದ್ದರು. ಪುಲನಿ ರಾಜ್ಯ ಬಲವಾದ ಮೇಲೆ ಇವರ ಪ್ರಾಬಲ್ಯ ಕಡಿಮೆಯಾಯಿತು. ಸಂಸ್ಕøತಿಯಲ್ಲಿ ಇವರು ಹೌಸ್ ಜನಾಂಗವನ್ನು ವಿಶೇಷವಾಗಿ ಹೋಲುತ್ತಾರೆ. ನೈಜೀರಿಯಾದಲ್ಲಿರುವ ಮತ್ತೊಂದು ಜನಾಂಗವೆಂದರೆ ನ್ಯೂಪೆ. ಅವರ ರಾಜಧಾನಿ ಬಿಡ, ಪುಲನಿಗೆ ವಶವಾಯಿತು. ಇವರಲ್ಲಿ ಭಿನ್ನಗೋತ್ರ ವಿವಾಹ, ಪಿತೃಯಾಜಮಾನ್ಯ ಪದ್ಧತಿ ಮುಖ್ಯವಾದುದು. ಇವರ ಕುಶಲಕಲೆಗಳಲ್ಲಿ ಗಾಜಿನ ಮಣಿಗಳು, ಬಳೆಗಳು ಮುಖ್ಯವಾದುವು.
ನ್ಯೂಬ ಜನಾಂಗ
[ಬದಲಾಯಿಸಿ]ಮೊಸ್ಸಿ, ಮಂಡೆ, ಮಂಗ್ಬೆಟ್ಟು, ಮಂಡೆ, ನ್ಯೂಬ ಜನಾಂಗಗಳು ಸೂಡಾನ್, ಐವರಿ ಕೋಸ್ಟ್, ಕಾಂಗೊ ಪ್ರದೇಶಗಳಲ್ಲಿ ವಿಶೇಷವಾಗಿ ಕಾಣಬರುತ್ತವೆ. ಮಂಡೆ ಸೂಡಾನಿನ ಭಾಷೆಯ ಮುಖ್ಯ ಪ್ರಭೇದ. ಮಂಗ್ಬೆಟ್ಟು ರಾಜ್ಯ ಹತ್ತೊಂಬತ್ತನೆಯ ಶತಮಾನದವರೆಗೂ ಒಬ್ಬ ರಾಜನ ಆಳ್ವಿಕೆಯಲ್ಲಿತ್ತು. ಇವರ ಮುಖ್ಯ ಆಹಾರ ಬಾಳೆಯಹಣ್ಣು. ಮೊಸ್ಸಿ ಜನಾಂಗದವರ ಸಂಸ್ಕøತಿ ಬಂಬರ ಸಂಸ್ಕøತಿಯನ್ನು ಹೋಲುತ್ತದೆ. ಇಸ್ಲಾಂ ಧರ್ಮವನ್ನು ಪ್ರತಿಭಟಿಸಿ ನಿಂತವರಲ್ಲಿ ಮೊಸ್ಸಿ ರಾಜ್ಯ ಬಹು ಮುಖ್ಯವಾದುದು. ಈ ರಾಜ್ಯ ಬಲಯುತವಾಗಿದ್ದವರೆಗೂ ಸೂಡಾನಿನಲ್ಲಿ ಇಸ್ಲಾಂ ಮುಖ್ಯಧರ್ಮವಾಗಲು ಸಾಧ್ಯವಾಗಲಿಲ್ಲ. ನ್ಯೂಬ ಜನಾಂಗದವರು ವಿಶೇಷವಾಗಿ ಅರಬ್ಬೀ ಸಂಸ್ಕøತಿಯ ಪ್ರಭಾವಕ್ಕೊಳಗಾಗಿದ್ದಾರೆ. ವ್ಯವಸಾಯ ಮತ್ತು ಪಶುಪಾಲನೆ ಇವರ ಮುಖ್ಯ ಕಸುಬು. ಪ್ರಾಚೀನ ಕಾಲದಲ್ಲಿ ನ್ಯೂಬ ಹೆಂಗಸರು ಎಲೆಗಳಿಂದ ತಮ್ಮ ಶರೀರ ಭಾಗಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಪುರುಷರು ಬೆತ್ತಲೆಯಾಗಿ ಓಡಾಡುತ್ತಿದ್ದರು. ಇವರಲ್ಲಿ ಮಾತೃಯಾಜಮಾನ್ಯ ಪದ್ಧತಿಯಿತ್ತು. ಹಳ್ಳಿಹಳ್ಳಿಗೂ ಭಿನ್ನಭಾಷೆಗಳಿದ್ದುವು. ಅನೇಕಸಾರಿ ಒಂದು ಹಳ್ಳಿಯವರಿಗೆ ಮತ್ತೊಂದು ಹಳ್ಳಿಯ ಭಾಷೆ ಅರ್ಥವಾಗುತ್ತಿರಲಿಲ್ಲ.
ಯಾರುಬ ಜನಾಂಗ
[ಬದಲಾಯಿಸಿ]ಯಾರುಬ ಜನಾಂಗ ನೀಗ್ರೊ ಆಫ್ರಿಕಾದ ಮುಖ್ಯ ಜನಾಂಗ. ಸುಮಾರು ಮೂವತ್ತೈದು ಲಕ್ಷ ಜನಸಂಖ್ಯೆಯ ಯಾರುಬರು ನೈಜೀರಿಯರ ಕೆಲವು ಭಾಗಗಳಲ್ಲಿದ್ದರು. ಇವರಲ್ಲಿ ಅನೇಕ ಸ್ವತಂತ್ರ ರಾಜ್ಯಗಳಿದ್ದು, ಪ್ರತಿಯೊಬ್ಬ ರಾಜನಿಗೂ ಮಣಿಗಳಿಂದ ಮಾಡಿದ ಕಿರೀಟವಿರುತ್ತಿತ್ತು. ಈ ರಾಜರ ಕೈಕೆಳಗೆ ಪಿಕೆಟು, ಅಹೊರಿ, ಎಗ್ಬ, ಎಕಿಟಿ, ಓಂಡೊ ಮುಂತಾದ ಸಣ್ಣ ಸಣ್ಣ ಜನಾಂಗದವರು ಇದ್ದರು. ಸಾಮಾನ್ಯವಾಗಿ ಇವರು ನಗರದಲ್ಲಿ ವಾಸಿಸುತ್ತಿದ್ದರು. ಇವರ ನಗರಗಳಲ್ಲಿ ದೊಡ್ಡ ಕೋಟೆಗಳೂ ಅದರ ಮಧ್ಯದಲ್ಲಿ ರಾಜನ ಅರಮನೆಯೂ ಇರುತ್ತಿತ್ತು. ರಾಜರಿಗೆ ಅನೇಕ ವರ್ಗದ ಅಧಿಕಾರಿಗಳಿರುತ್ತಿದ್ದರು. ಭಿನ್ನಗೋತ್ರ ವಿವಾಹ ಮತ್ತು ಪಿತೃ ಯಾಜಮಾನ್ಯ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಕೆಲವು ಅನಾಗರಿಕ ಜನಾಂಗದವರು ಗುಲಾಮರಾಗಿದ್ದರು. ಮೆಕ್ಕೆಜೋಳದ ವ್ಯವಸಾಯ, ಮೀನುಗಾರಿಕೆ ಮತ್ತು ಬೇಟೆ ಇವರ ಮುಖ್ಯ ಕಸುಬು. ಇವರಲ್ಲಿ ನಾಲ್ಕು ನೂರಕ್ಕೂ ಹೆಚ್ಚು ದೇವತೆಗಳಿದ್ದರು ಮಾಯ, ಮಾಟ, ಪಿತೃಪೂಜೆ, ನರಬಲಿ ಮುಂತಾದವು ಇವರ ಮುಖ್ಯ ಮತೀಯ ಭಾವನೆಗಳು. ಇವರು ಕುಶಲಕಲೆಗಳಲ್ಲಿ ವಿಶೇಷ ಪ್ರಾವೀಣ್ಯವನ್ನು ಪಡೆದಿದ್ದರು. ಇವರ ಮರದ ಕೆತ್ತನೆಯ ಕೆಲಸ ಮತ್ತು ಕಂಚಿನ ಶಿಲ್ಪಗಳು ಅತ್ಯುತ್ತಮ ಮಟ್ಟವನ್ನು ಮುಟ್ಟಿದುವು. ಒಟ್ಟಿನಲ್ಲಿ ಹೇಳುವುದಾದರೆ ಯಾರುಬರು ನೀಗ್ರೊ ಜನಾಂಗದಲ್ಲಿ ಬಹು ಮುಖ್ಯರಾದವರು. ಸರಕೊಲ್ಲೆ, ಸೆನುಪೂ ಮತ್ತು ಸೊಂಘೈ ಜನಾಂಗಗಳು ಫ್ರೆಂಚ್ ಸೂಡಾನ್ ಮತ್ತು ಐವರಿ ಕೋಸ್ಟ್‍ನಲ್ಲಿದ್ದ ಮುಖ್ಯ ಜನಾಂಗ. ಭಾಷೆ ಮತ್ತು ಸಂಸ್ಕøತಿಯ ದೃಷ್ಟಿಯಿಂದ ಸರಕೊಲ್ಲೆ ಜನಾಂಗ ಬಂಬರರನ್ನು ವಿಶೇಷವಾಗಿ ಹೋಲುತ್ತದೆ. ಇವರಲ್ಲಿ ಇಸ್ಲಾಂ ಧರ್ಮವೇ ವಿಶೇಷವಾಗಿದೆ. ಇವರ ಮುಖ್ಯ ರಾಜ್ಯವಾದ ಘಾನ, ಪಶ್ಚಿಮ ಸೂಡಾನನ್ನು ಎಂಟರಿಂದ ಹತ್ತನೆಯ ಶತಮಾನದವರೆಗೆ ಆಕ್ರಮಿಸಿಕೊಂಡಿತ್ತು. ಹನ್ನೊಂದನೆಯ ಶತಮಾನದಲ್ಲಿ ಘಾನ ಮಹಮ್ಮದೀಯರ ಆಳ್ವಿಕೆಗೆ ಸೇರಿ ಹೋಯಿತು. ಇದು ಬಹಳ ಸಂಪದ್ಯುಕ್ತವಾದ ರಾಜ್ಯವಾಗಿದ್ದಿತು. ಸರಕೊಲ್ಲೆಯ ಮುಖ್ಯ ನಗರವಾದ ಜೆನ್ನ ಟಿಂಬಕ್ಟುವನ್ನೂ ವ್ಯಾಪಾರದಲ್ಲಿ ಮೀರಿಸಿದ್ದಿತು. ಹದಿನೈದನೆಯ ಶತಮಾನದಲ್ಲಿ ಸರಕೊಲ್ಲೆ ಅವನತಿಯನ್ನು ಹೊಂದಿತು ಮತ್ತು ಸೊಂಘೈ ಪ್ರಬುದ್ಧಮಾನಕ್ಕೆ ಬಂದಿತು. ಸೊಂಘೈ ರಾಜ್ಯ ಸರಕೊಲ್ಲೆಯನ್ನು ವಶಮಾಡಿಕೊಂಡು ಹದಿನೇಳನೆಯ ಶತಮಾನದವರೆಗೆ ಚೆನ್ನಾಗಿ ಅಭಿವೃದ್ಧಿ ಹೊಂದಿತು. ಇದರ ಮುಖ್ಯ ನಗರವಾದ ಟಿಂಬಕ್ಟು ವ್ಯಾಪಾರ ಮತ್ತು ವಿದ್ಯಾಭ್ಯಾಸದಲ್ಲಿ ವಿಶೇಷ ಪಾತ್ರವನ್ನು ವಹಿಸಿ ಸಮಕಾಲೀನ ಮಹಮ್ಮದೀಯ ನಗರಗಳಲ್ಲಿ ಪ್ರಮುಖವೆನಿಸಿಕೊಂಡಿದ್ದಿತು. ಐವರಿಕೋಸ್ಟಿನ ಸೆನುಪೊ ಬಂಬರ ಸಂಸ್ಕøತಿಯ ಲಕ್ಷಣಗಳನ್ನೇ ಹೊಂದಿದ್ದು, ಮರದ ಕೆತ್ತನೆಯ ಕೆಲಸಕ್ಕೆ ಬಹಳ ಪ್ರಸಿದ್ಧವಾಗಿತ್ತು.
ವೈ ಎಂಬ ಜನಾಂಗ
[ಬದಲಾಯಿಸಿ]ವೈ ಎಂಬ ಜನಾಂಗ ಪಶ್ಚಿಮ ಲೈಬೀರಿಯದಲ್ಲಿ ಮುಖ್ಯವಾಗಿದ್ದಿತು. ಇವರು ಬತ್ತವನ್ನು ವಿಶೇಷವಾಗಿ ಬೆಳೆಯುತ್ತಿದ್ದರು. ಇವರು ಭಿನ್ನಗೋತ್ರ ವಿವಾಹ, ಪಿತೃ ಯಾಜಮಾನ್ಯ ಪದ್ಧತಿಗಳನ್ನು ರೂಢಿಸಿಕೊಂಡಿದ್ದರು. ಇವರು ಗಂಡು ಮಕ್ಕಳಿಗೆ ಬೆರಿ ಎಂಬ ಗುಪ್ತ ಶಾಲೆಯಲ್ಲಿಯೂ ಮತ್ತು ಹೆಣ್ಣುಮಕ್ಕಳಿಗೆ ಸಂಡೆ ಎಂಬ ಗುಪ್ತಶಾಲೆಯಲ್ಲಿಯೂ ಅನೇಕ ಧಾರ್ಮಿಕ ವಿಚಾರಗಳನ್ನು ಮೂರು-ನಾಲ್ಕು ವರ್ಷ ಕಲಿಸುತ್ತಿದ್ದರು. ವೈಜನಗಳ ವೈಶಿಷ್ಟ್ಯವೆಂದರೆ, ಅವರು ತಮ್ಮದೇ ಆದ ಒಂದು ಲಿಪಿಯನ್ನು ಸಿದ್ದಪಡಿಸಿಕೊಂಡಿದ್ದರು. ಈ ಮೇಲೆ ಹೇಳಿದ ಜನಾಂಗಗಳಲ್ಲದೆ ಟೀವ್, ಟೆಮ್ನೆ, ಟೆಲೆನ್ಸಿ, ಕ್ರು, ಕ್ಪೆಲ್ಲೆ, ಐಬಿಬಿಯೊ, ಗ್ರೆಬೊ ಗಾ, ಬೌಲೆ, ಬಸ, ಅಕಿಮ್ ಎಂಬ ಇತರ ಜನಾಂಗಗಳು ನೀಗ್ರೊ ಆಫ್ರಿಕಾದಲ್ಲಿ ವಾಸಿಸುತ್ತಿದ್ದರು. ಸಾಂಸ್ಕøತಿಕ ದೃಷ್ಟಿಯಿಂದ ಅವರು ಒಂದಲ್ಲ ಒಂದು ಪ್ರಸಿದ್ಧ ಜನಾಂಗದವರನ್ನೇ ಹೋಲುತ್ತಿದ್ದರು.
ನೈಲೋಟಿಕ್ ಎಂಬ ಭಾಷಾ ವರ್ಗ
[ಬದಲಾಯಿಸಿ]ನೈಲೋಟಿಕ್ ಎಂಬ ಭಾಷಾ ವರ್ಗಕ್ಕೆ ಸೇರಿದ ಅನೇಕ ಜನಾಂಗಗಳು ನೀಗ್ರೊ ಆಫ್ರಿಕಾದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಮಸೈ, ಸುಕ್, ಶಿಲ್ಲುಕ್ ನಂದಿ ಮುಖ್ಯರಾದವರು. ಮಸೈ ಜನಾಂಗಕ್ಕೆ ಸೇರಿದವರು ಟ್ಯಾಂಗನೀಕ, ಕೆನ್ಯ, ನೈರೋಬಿಯ ಪಶ್ಚಿಮ ಭಾಗಗಳಲ್ಲಿ ವಿಶೇಷವಾಗಿದ್ದಾರೆ. ಇವರಲ್ಲಿ ಒಂದು ಗುಂಪು ವ್ಯವಸಾಯ ಮಾಡಿದರೆ, ಇನ್ನೊಂದು ಗುಂಪಿನ ಜನಗಳು ಅಲೆಮಾರಿಯಾಗಿ ಜೀವಿಸುತ್ತಾರೆ. ಇವರಲ್ಲಿ ಚೆನ್ನಾಗಿ ತರಬೇತು ಕೊಡಲ್ಪಟ್ಟ ಯೋಧರು ವಿಶೇಷವಾಗಿದ್ದು ಅಕ್ಕಪಕ್ಕದ ರಾಜ್ಯಗಳ ಮೇಲೆ ಯುದ್ಧಮಾಡಿ ಕಾಣಿಕೆಗಳನ್ನು ವಸೂಲು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅರಬ್ಬೀ ಮತ್ತು ಯೂರೋಪಿಯನ್ ವರ್ತಕರಿಂದಲೂ ಕಪ್ಪಗಳನ್ನು ತೆಗೆದುಕೊಳ್ಳುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಕ್ಷಾಮ ಡಾಮರಗಳಿಂದ ಇವರ ಅವನತಿಯುಂಟಾಯಿತು. ಪಶ್ಚಿಮ ಕೆನ್ಯಾದಲ್ಲಿ ವಾಸಮಾಡುವ ಸುಕ್ ಜನಾಂಗದವರಲ್ಲಿಯೂ ಎರಡು ಗುಂಪು, ಒಂದು ಅನಾಗರಿಕರದು ಮತ್ತೊಂದು ವ್ಯವಸಾಯಗಾರರದು. ಇವರಲ್ಲಿ ಕೇಶಶೃಂಗಾರಕ್ಕೆ ವಿಶೇಷ ಗಮನ ಕೊಡುತ್ತಾರೆ. ಪುರುಷರು ಬೆತ್ತಲೆಯಾಗಿಯೇ ಓಡಾಡುತ್ತಾರೆ. ಆಂಗ್ಲೋ ಈಜಿಪ್ಟಿಯನ್ ಸೂಡಾನಿನ ದಕ್ಷಿಣ ಭಾಗಗಳಲ್ಲಿ ಶಿಲ್ಲುಕ್ ಎಂಬ ಜನಾಂಗದವರು ವಾಸಿಸುತ್ತಾರೆ. ವ್ಯವಸಾಯ ಮೀನುಗಾರಿಕೆ, ಬೇಟೆ ಇವರ ಮುಖ್ಯ ಕಸುಬು. ಸ್ತ್ರೀಯರು ಚರ್ಮವನ್ನು ಧರಿಸಿದರೆ, ಪುರುಷರು ಬೆತ್ತಲೆಯಾಗಿಯೇ ಇರುತ್ತಾರೆ. ಕೆನ್ಯದಲ್ಲಿ ವಾಸಮಾಡುವ ನಂದಿ ಜನಾಂಗದವರು ಪಶುಪಾಲನೆ ಮತ್ತು ವ್ಯವಸಾಯಗಳನ್ನು ಮುಖ್ಯ ವೃತ್ತಿಯಾಗಿ ಉಳ್ಳವರು. ವೈದ್ಯನೇ ಸಾಮಾನ್ಯವಾಗಿ ಇವರ ಮುಖಂಡನಾಗಿರುತ್ತಾನೆ. ಅವನ ಜೊತೆಗೆ ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳೂ ಇರುತ್ತಾರೆ.
ಬಂಟು ಭಾಷಾವರ್ಗ
[ಬದಲಾಯಿಸಿ]ಬಂಟು ಭಾಷಾವರ್ಗಕ್ಕೆ ಸೇರಿದ ಅನೇಕ ಜನಾಂಗಗಳು ನೀಗ್ರೊ ಆಫ್ರಿಕಾದ ಮೂರನೆಯ ಎರಡರಷ್ಟು ಭಾಗ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಈ ವರ್ಗಕ್ಕೆ ಸೇರಿದ ಮುಖ್ಯ ಜನಾಂಗಗಳ ಪರಿಚಯವನ್ನು ಕೆಳಗೆ ಮಾಡಿಕೊಡಲಾಗಿದೆ. ಗಂಡ ಅಥವಾ ಬಗಂಡ ಅನ್ನುವ ಜನಾಂಗ ಉಗಾಂಡದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದಾರೆ. ಇವರ ರಾಜ್ಯ ಬಹಳ ಬಲಯುತವಾಗಿದ್ದಿತು. ರಾಜನೇ ಸರ್ವಾಧಿಕಾರಿಯಾದರೂ, ಅವನಿಗೆ ಸಹಾಯಕವಾಗಿ ಒಂದು ಸಭೆ ಇರುತ್ತಿದ್ದಿತು. ರಾಜನ ತಾಯಿಗೆ ವಿಶೇಷ ಗೌರವವಿದ್ದಿತು. ರಾಜನಿಂದ ನಿಯಮಿಸಲ್ಪಟ್ಟ ಅಧಿಕಾರಿಗಳು ರಾಜಧಾನಿಯ ಹೊರಗೆ ಆಳುತ್ತಿದ್ದರು. ರಾಜಧಾನಿಯಲ್ಲಿ ರಾಜನದೇ ವಿಶಿಷ್ಟ ಅಧಿಕಾರ. ತೆರಿಗೆಗಳನ್ನು ಧಾನ್ಯದ ರೂಪದಲ್ಲಿ ಇಲ್ಲವೇ ಪ್ರಾಣಿಗಳ ರೂಪದಲ್ಲಿ ವಸೂಲು ಮಾಡುತ್ತಿದ್ದರು. ಬಾಲಕ, ಬಾಲಕಿಯರನ್ನು ಅರಮನೆಯಲ್ಲಿ ಗುಲಾಮರನ್ನಾಗಿ ನಿಯಮಿಸಿಕೊಳ್ಳುತ್ತಿದ್ದರು. ಇವರಲ್ಲಿ ಗೋತ್ರ ಪದ್ಧತಿ ಬಳಕೆಯಲ್ಲಿದ್ದಿತು. ಎಲ್ಲ ಗೋತ್ರದವರಿಗೂ ರಾಜನಾಗುವ ಹಕ್ಕು ಇರುತ್ತಿರಲಿಲ್ಲ. ಅಂಥ ರಾಣಿಗೆ ಹುಟ್ಟಿದ ಮಕ್ಕಳನ್ನು ಕೂಡಲೇ ಕೊಲ್ಲಿಸುತ್ತಿದ್ದರು. ಪ್ರಜೆಗಳಲ್ಲಿ ಪಿತೃ ಯಾಜಮಾನ್ಯ ಪದ್ಧತಿ ರೂಢಿಯಲ್ಲಿದ್ದರೂ, ರಾಜ ಮಾತ್ರ ಮಾತೃ ಯಾಜಮಾನ್ಯ ಪದ್ಧತಿಗೆ ಸೇರಿದವನು. ರಾಜನ ಶವವನ್ನು ಹೂಳುವಾಗ ನೂರಾರು ಮಂದಿ ಸೇವಕರನ್ನು ಮತ್ತು ನೂರಾರು ಹೆಂಡತಿಯರಲ್ಲಿ ನಾಲ್ವರನ್ನು ಕೊಂದು ಹೂಳುವ ಪದ್ಧತಿಯೂ ಪ್ರಚಾರದಲ್ಲಿದ್ದಿತು.
ಬನ್ಯನ್ಕೋಲ್ ಎನ್ನುವ ಜನಾಂಗ
[ಬದಲಾಯಿಸಿ]ಬನ್ಯನ್ಕೋಲ್ ಎನ್ನುವ ಜನಾಂಗ ಉಗಾಂಡದ ಅಂಕೋಲ್ ಜಿಲ್ಲೆಯಲ್ಲಿ ವಿಶೇಷವಾಗಿದ್ದಿತು. ಪ್ರಜೆಗಳಲ್ಲಿ ಭಿನ್ನಗೋತ್ರ ವಿವಾಹ ಪದ್ಧತಿ ರೂಢಿಯಲ್ಲಿದ್ದರೂ, ರಾಜನು ತನ್ನ ತಂಗಿಯನ್ನು ಮದುವೆಯಾಗಲು ಅವಕಾಶವಿದ್ದಿತು. ಇವರಲ್ಲಿ ವ್ಯವಸಾಯ, ವ್ಯಾಪಾರ, ಕುಶಲಕಲೆಗಳು ವಿಶೇಷವಾಗಿದ್ದ ಕಸುಬುಗಳು. ಆಗತಾನೇ ಬಾಣದಿಂದ ಕೊಂದ ಪ್ರಾಣಿಯ ರಕ್ತವನ್ನು ಹಾಲಿಗೆ ಬೆರೆಸಿ ಕುಡಿಯುವುದು ವಿಶೇಷವಾಗಿ ರೂಢಿಯಲ್ಲಿದ್ದಿತು.ದನಗಳನ್ನು ಮಾತ್ರ ಆಹಾರಕ್ಕಾಗಿ ಇವರು ಕೊಲ್ಲುತ್ತಿರಲಿಲ್ಲ. ಆದರೆ ತಾವಾಗಿಯೇ ಸತ್ತುಹೋದ ದನದ ಮಾಂಸವನ್ನು ತಿನ್ನುತ್ತಿದ್ದರು. ಪಶುಬಲಿ ರೂಢಿಯಲ್ಲಿದ್ದಿತು. ಎತ್ತುಗಳನ್ನು ಆಹಾರಕ್ಕಾಗಿ ಕೊಲ್ಲುತ್ತಿದ್ದರು. ದನದ ಗಂಜಲವನ್ನು ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದರು. ಪ್ರಾಣಿಗಳ ಚರ್ಮಗಳನ್ನು ಬಟ್ಟೆಯಾಗಿ ಉಪಯೋಗಿಸುತ್ತಿದ್ದರು. ಸ್ತ್ರೀಯರು ತಮ್ಮ ಕಣ್ಣುಗಳನ್ನು ಬಿಟ್ಟು, ದೇಹದ ಎಲ್ಲ ಭಾಗಗಳನ್ನೂ ಪ್ರಾಣಿಯ ಚರ್ಮದಿಂದ ಮುಚ್ಚಿಕೊಳ್ಳುತ್ತಿದ್ದರು. ಇವರಲ್ಲಿದ್ದ ಅನೇಕ ನಿಷಿದ್ಧ ಪದ್ಧತಿಗಳಲ್ಲಿ ಹಾಲನ್ನು ಕಾಯಿಸದೇ ಇರುವುದು, ಹಾಲನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕದಿರುವುದು ಮುಖ್ಯವಾದುವು. ಬೆಳಗ್ಗೆ ಹತ್ತು ಘಂಟೆಯಿಂದ ಮಧ್ಯಾಹ್ನ ನಾಲ್ಕು ಘಂಟೆಯವರೆಗೆ ಸ್ತ್ರೀಯರು ಬೆಣ್ಣೆಯನ್ನು ಮುಟ್ಟುವುದು, ರಜಸ್ವಲಾ ಸ್ತ್ರೀಯರು ನಾಲ್ಕು ದಿವಸಗಳು ಹಸುವಿನ ಹಾಲು ಕುಡಿಯುವುದು ನಿಷಿದ್ಧವಾಗಿದ್ದುವು. ಹಸು ಮರಣಹೊಂದಿದ ಐದು ದಿವಸಗಳವರೆಗೆ ಅದರ ಒಡೆಯ ದುಃಖ ಸೂಚಕವಾಗಿ ಅನೇಕ ಕರ್ಮಗಳನ್ನು ಮಾಡುವುದೇ ಅಲ್ಲದೆ ಸ್ತ್ರೀಸಂಗವನ್ನೂ ಬಯಸುತ್ತಿರಲಿಲ್ಲ. ಹಸುಗಳ ಆರೋಗ್ಯ ವಿಚಾರದಲ್ಲಿ ವಿಶೇಷ ಗಮನವನ್ನು ಕೊಟ್ಟಿದ್ದರು. ಅದಕ್ಕಾಗಿ ವೈದ್ಯರಿರುತ್ತಿದ್ದರು.
ಜುಲು ಎಂಬ ಜನಾಂಗ
[ಬದಲಾಯಿಸಿ]ನೇಟಾಲ್ ಮತ್ತು ಟ್ರಾನ್ಸ್‍ವಾಲ್ ಪ್ರದೇಶಗಳಲ್ಲಿ ಜುಲು ಎಂಬ ಜನಾಂಗದವರಿದ್ದರು. ಇವರು ಸುವ್ಯವಸ್ಥಿತ ರಾಜ್ಯ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಶತ್ರುಗಳನ್ನು ಕೊಂದು ಅವರ ಪತ್ನಿಯರನ್ನು ಅಪಹರಿಸಿಕೊಂಡು ಬರುತ್ತಿದ್ದರು. ಇವರು ಸ್ಥಾಪಿಸಿದ್ದ ರಾಜ್ಯ ಬಲಯುತವಾಗಿದ್ದು 1880ರಲ್ಲಿ ಬ್ರಿಟಿಷರಿಂದ ನಾಶಮಾಡಲ್ಪಟ್ಟಿತು. ಬಂಟು ವರ್ಗಕ್ಕೆ ಸೇರಿದ ಇತರ ಜನಾಂಗಗಳೆಂದರೆ ಬೇನ, ಚಾಗ, ಜೋಪಿ, ಅಂಗೊ, ಹೇಹೆ, ಕಂಬ, ಕಿಕುಯು, ಮ್ಬುನ್ಡ, ನ್ಗುನಿ, ನೈರೋ, ರುವಾಂಡ, ಶೋನ, ಸುಟೋ, ಟೊಂಗ, ಟ್ಸ್ವಾನ, ವೆಂಡ, ನೀಕೆ ಮುಂತಾದುವು. ಈ ಜನಾಂಗಗಳಲ್ಲಿ ಸಣ್ಣಪುಟ್ಟ ಭೇದಗಳಿದ್ದರೂ, ಸಾಮಾನ್ಯವಾಗಿ ಮೇಲೆ ಹೇಳಿದ ಸಾಂಸ್ಕøತಿಕ ಚೌಕಟ್ಟಿನೊಳಗೇ ಇವು ಬರುತ್ತವೆ. ಹೋಟೆನಟೋ ಎಂಬ ಜನಾಂಗದವರು ನೈಋತ್ಯ ಆಫ್ರಿಕದಲ್ಲಿ ವಿಶೇಷವಾಗಿ ವಾಸಿಸುತ್ತಾರೆ. ಇವರಿಗೂ ಬುಷ್‍ಮನ್ ಜನಗಳಿಗೂ ವಿಶೇಷ ಹೋಲಿಕೆಗಳಿದ್ದರೂ, ಸಾಂಸ್ಕøತಿಕ ಭೇದಗಳು ಬೇಕಾದಷ್ಟಿವೆ. ಪಶುಪಾಲನೆ, ಬೇಟೆ, ಮೀನುಗಾರಿಕೆ ಇವರ ಮುಖ್ಯ ಕಸುಬುಗಳು.ನೆಗ್ರಿಗೋ ಅಥವಾ ನೆಗ್ರಿಲ್ಲಾ ಎಂದು ಕರೆಯಲ್ಪಡುವ ಕುಳ್ಳರು ಬೆಲ್ಜಿಯಮ್, ಕಾಂಗೊ ಮತ್ತು ಈಕ್ವೆಟೋರಿಯಲ್ ಆಫ್ರಿಕದ ಕೆಲವು ಭಾಗಗಳಲ್ಲಿ ವಿಶೇಷವಾಗಿದ್ದಾರೆ. ಸಾಮಾನ್ಯವಾಗಿ ಇವರು ನೀಗ್ರೊ ಬಂಟುಗಳ ಗುಲಾಮರು. ಬಂಟು ಭಾಷೆಯನ್ನೇ ಆಡುತ್ತಾರೆ. ಮೀನುಗಾರಿಕೆ ಮತ್ತು ಬೇಟೆಯಾಡುವುದು ಇವರ ಮುಖ್ಯ ಕಸಬು. ಒಟ್ಟಿನಲ್ಲಿ ಬಹಳ ಹಿಂದುಳಿದವರು.ಬುಷ್‍ಮನ್ ಎಂದು ಪ್ರಸಿದ್ಧರಾಗಿರುವ ಜನಾಂಗದವರು ಕಲಹರಿ ಮರುಭೂಮಿ, ಬಿಚುವಾನ ಲ್ಯಾಂಡ್, ದಕ್ಷಿಣ ಅಂಗೋಲಗಳಲ್ಲಿ ವಿಶೇಷವಾಗಿದ್ದಾರೆ. ಈ ಭಾಗದ ಅತ್ಯಂತ ಪುರಾತನ ಜನಾಂಗದವರೇ ಇವರು. ಇವರು ಬಂಟುಗಳಿಗಿಂತ ಭಾಷೆ, ರೂಪ, ಸಂಸ್ಕøತಿಯಲ್ಲಿ ಭಿನ್ನರು. ಹಳದಿಯ ಬಣ್ಣದ ಸುಕ್ಕುಗಟ್ಟಿದ ಚರ್ಮದ, ಸುಮಾರಾಗಿ ಕುಳ್ಳರಾಗಿರುವ ಇವರು ಮುಖ್ಯವಾಗಿ ಬೇಟೆಯಿಂದ ಜೀವಿಸುತ್ತಾರೆ. ಅಸಂಸ್ಕøತರಾದರೂ ಇವರು ಗುಹೆಗಳ ಕಲ್ಲಿನಲ್ಲಿ ಮಾಡಿರುವ ವರ್ಣಚಿತ್ರಗಳು ವಿಶ್ವದಲ್ಲೇ ಖ್ಯಾತಿ ಪಡೆದಿವೆ.
ಉತ್ತರ ಆಫ್ರಿಕ
[ಬದಲಾಯಿಸಿ]ಇದುವರೆಗೂ ವರ್ಣಿಸಿದ ನೀಗ್ರೊಗಳಿಗಿಂತ ಪೂರ್ಣವಾಗಿ ಭಿನ್ನರಾದ ಜನರು ಉತ್ತರ ಆಫ್ರಿಕದಲ್ಲಿ ವಾಸಿಸುತ್ತಾರೆ. ಉತ್ತರ ಆಫ್ರಿಕದ ಈ ಜನಗಳು ಸಂಸ್ಕøತಿ, ಭಾಷೆ ಮತ್ತು ಶರೀರ ಲಕ್ಷಣಗಳಲ್ಲಿ ಯೂರೋಪ್ ಮತ್ತು ಮಧ್ಯಪ್ರಾಚ್ಯದ ಜನಗಳನ್ನು ಹೋಲುತ್ತಾರೆ. ಮೆಡಿಟರೇನಿಯನ್ ಕಾಕಸಾಯಿಡ್ ಎಂದು ಕರೆಯಲ್ಪಡುವ ಈ ಜನಗಳು ಕುಳ್ಳರು. ಕರಿಯ ಕೂದಲುಳ್ಳವರು ಕಪ್ಪುಬಣ್ಣದ ಕಣ್ಣುಗಳುಳ್ಳವರು ಮತ್ತು ತಿಳಿಯ ಬಣ್ಣದವರು. ಸ್ಥಳೀಯ ಆದಿವಾಸಿಗಳೊಡನೆ ಮತ್ತು ಅರಬ್ಬರೊಡನೆ ಉಂಟಾದ ಸಂಪರ್ಕಗಳಿಂದ, ಉತ್ತರ ಆಫ್ರಿಕ ಜನರನ್ನು ಹೆಮೈಟ್ ಮತ್ತು ಸೈಮೈಟ್ ಎಂದು ವಿಭಾಗಿಸಿದ್ದಾರೆ. ಹೇಮೈಟಿಕ್ ಜನಾಂಗದವರು ಉತ್ತರ ಆಫ್ರಿಕ ಪಶ್ಚಿಮ ಸಹರಾದಿಂದ ಎಥಿಯೋಪಿಯದವರೆಗೂ ವಾಸಿಸುತ್ತಾರೆ. ಅವರನ್ನು ಭಾಷಾದೃಷ್ಟಿಯಿಂದ ಬರ್ಬರು ಮತ್ತು ಕುಷಿಟಿಗಳು ಎಂದು ವಿಭಾಗಿಸಬಹುದು. ಬರ್ಬರರು ನೀಗ್ರೊ ಮಿಶ್ರಣ ಹೊಂದಿದ ಕಾಕಾಸಾಯಿಡ್ ಜನಗಳು. ಇಸ್ಲಾಂ, ಯೂರೋಪ್ ಮತ್ತು ಆದಿವಾಸಿಗಳಿಂದ ಪ್ರಭಾವಿತರಾದ ಇವರಲ್ಲಿ ಎಲ್ಲ ಬಗೆಯ ಸಂಸ್ಕøತಿಯ ಲಕ್ಷಣಗಳೂ ಕಾಣಬರುತ್ತವೆ. ಬರ್ಬರರಲ್ಲಿ ಮುಖ್ಯರಾದವರು ಕಬೈಲ್, ಸಿವಾನ್, ಟೆಬು ಮತ್ತು ಟುವಾರೆ.
ಕುಷಿಟಿಕ್ ಭಾಷೆ
[ಬದಲಾಯಿಸಿ]ಕುಷಿಟಿಕ್ ಭಾಷೆಯನ್ನಾಡುವ ಜನಾಂಗಗಳಲ್ಲಿ ಬೇಜ, ಡಂಕಿಲ್, ಗಲ್ಲ, ಸೊಮಾಲಿ ಮುಖ್ಯರಾದವರು. ಇವರು ಎಥಿಯೋಪಿಯ, ಸೊಮಾಲಿಲ್ಯಾಂಡ್, ಉತ್ತರ ಕೆನ್ಯಾ, ಆಗ್ನೇಯ ಈಜಿಪ್ಟ್ ಮತ್ತು ಆಗ್ನೇಯ ಆಂಗ್ಲೊ ಈಜಿಪ್ಟಿಯನ್ ಸೂಡಾನ್‍ಗಳಲ್ಲಿ ವಾಸಿಸುತ್ತಾರೆ.ಸೆಮಿಟಿಕ್ ಭಾಷೆಯನ್ನಾಡುವ ಆಫ್ರಿಕದ ಜನಗಳು ಎಥಿಯೋಪಿಯನ್ನರು ಮತ್ತು ಅರಬ್ಬೀ ವಲಸೆಗಾರರು. ಈ ವಲಸೆಗಾರರಿಗೆ ಕಲಾಬಿಷ್ ಎಂದೂ ಹೆಸರು. ಇವರು ಸೂಡಾನಿನಲ್ಲಿ ಅತ್ಯಂತ ಪ್ರಭಾವಿತ ಜನಾಂಗ. ಇವರು ಇಸ್ಲಾಂ ಮತಾವಲಂಬಿಗಳು.
ಉಲ್ಲೇಖಗಳು
[ಬದಲಾಯಿಸಿ]