ಆಪರಾಧಿಕ ಆರೋಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪರಾಧಿಕ (ಕ್ರಿಮಿನಲ್) ಮೊಕದ್ದಮೆಯ ವಿಭಾಗದಲ್ಲಿ ನ್ಯಾಯಾಧೀಶರೇ ನಡೆಸಬೇಕಾದ ಅಧಿಪತ್ರ ವ್ಯಾಜ್ಯಗಳಲ್ಲಿ (ವಾರಂಟ್ ಕೇಸಸ್) ಮತ್ತು ಕ್ಷಿಪ್ರ ಮೊಕದ್ದಮೆಗಳಲ್ಲಿ (ಸಮರಿ ಕೇಸಸ್) ಅಪರಾಧಿ ಮಾಡಿರತಕ್ಕ ಅಪರಾಧವನ್ನು ಆತನಿಗೆ ವಿವರಿಸಿ ನ್ಯಾಯಾಧೀಶರು ಅಪರಾಧವನ್ನು ಆತನ ಮೇಲೆ ಹೊರಿಸುವುದಕ್ಕೆ ಈ ಹೆಸರಿದೆ (ಛಾರ್ಜ್). ಇದು ಆಪರಾಧಿಕ ಮೊಕದ್ದಮೆಗಳ ಇನ್ನೊಂದು ಭಾಗವಾದ ಸಮನ್ಸ್ ಮೊಕದ್ದಮೆಗಳಿಗೂ ವ್ಯಾವಹಾರಿಕ ಮೊಕದ್ದಮೆಗಳಿಗೂ ಅನ್ವಯಿಸುವುದಿಲ್ಲ. ಮೊಕದ್ದಮೆಯ ಪ್ರಾರಂಭದಲ್ಲಿ ಆಪಾದಿತನ ಮೇಲಿನ ಆರೋಪವನ್ನು ಆತನಿಗೆ ತಿಳಿಸಿಬಿಡಬೇಕೆಂದು ನಿಯಮವಿದೆ. ಈ ರೀತಿ ಮೊಕದ್ದಮೆಯ ಆರಂಭದಲ್ಲೇ ಆರೋಪವನ್ನು ಹೇಳುವುದರ ಉದ್ದೇಶ ಅಪರಾಧಿ ತನ್ನ ಮೇಲೆ ಬಂದಿರುವ ಆಪಾದನೆಗಳನ್ನು ಎದುರಿಸಲು ತಕ್ಕ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದೇ ಆಗಿದೆ. ಅಪರಾಧಿಯ ಮೇಲೆ ಹೊರಿಸಲಾ ಗುವ ಆಪಾದನೆಗಳು ಸರಿಯಾಗಿ, ಕ್ರಮಬದ್ಧವಾಗಿ, ಕಾನೂನಿಗೆ ಅನುಗುಣವಾಗಿ ಇಲ್ಲದಿದ್ದರೆ ಅಂಥ ಆರೋಪ ದೋಷಯುಕ್ತವಾದದ್ದಾಗುತ್ತದೆ. ಭಾರತ ದೇಶದ ಕ್ರಿಮಿನಲ್ ಕಾನೂನಿನ ೧೯ನೆಯ ಅಧ್ಯಾಯದಲ್ಲಿ ಆರೋಪ ಸಾಧಾರಣವಾಗಿ ವಿವರಿಸಲ್ಪಟ್ಟಿದೆ. ಇದು ಇಂಗ್ಲೆಂಡ್ ದೇಶದಲ್ಲಿನ ಕ್ರಮಬದ್ಧ ಆಪಾದನೆ (ಇನ್ಡೈಟ್ಮೆಂಟ್) ಎಂಬುದಕ್ಕೆ ಸಮನಾಗಿದೆ. ಅಪರಾಧಿ ತನ್ನ ಮೇಲಿನ ಆಪಾದನೆಗಳನ್ನು ಸಕ್ರಮವಾಗಿ ತಿಳಿಯುವ ಹಕ್ಕುಳ್ಳವನಾಗಿರುತ್ತಾನೆ. ಇದು ವಿಶೇಷವಾಗಿ ಅಪರಾಧಿ ಸ್ವತಃ ಅಪರಾಧ ಮಾಡದೆ ಬೇರೆಯವರ ಕಾರ್ಯದಿಂದ ಯಾವುದೇ ಅಪರಾಧದಲ್ಲಿ ಸಿಕ್ಕಿಹಾಕಿ ಕೊಂಡಿರುವಾಗ ಅತ್ಯಗತ್ಯವಾಗುತ್ತದೆ. ಅಪರಾಧಿ ಮಾಡಿರುವ ಅಕೃತ್ಯದ ಆಪಾದನೆಯೇ ಅಲ್ಲದೆ, ಆತ ಯಾವ ಕಾನೂನಿನ, ಎಷ್ಟನೆಯ ಕಲಂ ಪ್ರಕಾರ ಅಪರಾಧ ಮಾಡಿರಬಹುದೆಂಬು ದನ್ನೂ ಆರೋಪದಲ್ಲಿ ಹೇಳಬೇಕು. ಈ ಆರೋಪ ಕ್ರಮಬದ್ಧವಾಗಿಯೂ ವಿವರವಾಗಿಯೂ ಇಲ್ಲದಿದ್ದರೆ ಊರ್ಜಿತವಾಗುವುದಿಲ್ಲ ಮತ್ತು ಅಂಥ ಆರೋಪ ವಿಚಾರಣೆಯನ್ನು ಕಲ್ಮಷಗೊಳಿಸುತ್ತದೆ. ಒಬ್ಬ ಒಂದು ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿದರೆ, ಅದರಿಂದ ಇತರ ಮೆದೆಗಳು ಸಹ ಹೊತ್ತಿಕೊಂಡು ಉರಿದುಹೋದರೆ, ಅದರ ಎಲ್ಲ ವಿವರವೂ ಬೇಕಿಲ್ಲ. ಮೊದಲನೆಯ ಮೆದೆಗೆ ಬೆಂಕಿ ಹಚ್ಚಿದ ಸಮಯ, ತಾರೀಖು ಸ್ಥಳ ಹೇಳಿದರೆ ಸಾಕು. ಅದು ಕ್ರಮಬದ್ಧವಾದ, ಸರಿಯಾದ ಆರೋಪವಾಗುತ್ತದೆ. ಆದರೆ ಬಲಾತ್ಕಾರಪಡಿಸುವುದು (ಎಕ್ಸಟಾರ್ಷನ್), ಅನ್ಯಾಯವಾಗಿ ಇತರರಿಂದ ಹಣವನ್ನು ಕಿತ್ತುಕೊಳ್ಳುವುದು ಮುಂತಾದುವುಗಳಲ್ಲಿ, ಯಾರಿಂದ, ಯಾವಾಗ, ಎಷ್ಟೆಷ್ಟು ಹಣವನ್ನು ಕಿತ್ತುಕೊಂಡಿದ್ದು, ಅಥವಾ ಬಲಾತ್ಕಾರಪಡಿಸಿದ್ದು ಮುಂತಾದುವು ವಿವರವಾಗಿ ಇರಬೇಕು. ಆದ್ದರಿಂದ ಒಳ್ಳೆಯ ಆರೋಪ ಎಂದರೆ ಅದು ಅಪರಾಧದ ವಿವಿಧ ರೀತಿಯ ವಿವರಗಳನ್ನು ಕ್ರಮವಾಗಿ ಒಳಗೊಂಡು ಅಪರಾಧಿಗೆ ಆತನ ಮೇಲಿನ ಅಪರಾಧದ ಬಗ್ಗೆ ತಿಳುವಳಿಕೆಯನ್ನು ಕೊಡುವಂಥದ್ದಾಗಿರಬೇಕು. ಒಟ್ಟಿನಲ್ಲಿ ಆರೋಪ ಮುಖ್ಯವಾಗಿ ಈ ಕೆಳಗೆ ಕಂಡ ಲಕ್ಷಣಗಳನ್ನೊಳಗೊಂಡಿರಬೇಕೆಂದು ಸ್ಥೂಲವಾಗಿ ಹೇಳಬಹುದು:

  • ಅಪರಾಧಿ ಮಾಡಿರುವ ಅಪರಾಧದ ವಿವರಗಳ ಹೇಳಿಕೆ.
  • ಯಾವ ಕಾನೂನು ಮತ್ತು ಯಾವ ಕಲಂನ ಪ್ರಕಾರ ಅಪರಾಧವಾಗಿದೆ ಎಂಬುದರ ಹೇಳಿಕೆ.
  • ಕೃತ್ಯ ನಡೆದ ಸ್ಥಳ, ಸಮಯ ಅಥವಾ ವೇಳೆಯ ವಿವರಣೆ.
  • ನಡೆದಿರುವ ಕೃತ್ಯದ ವಿವರಣೆ.

ಆರೋಪದಲ್ಲಿ ಅನಾವಶ್ಯಕವಾದ ಫಿರ್ಯಾದುದಾರರು (ಪ್ರಾಸೆಕ್ಯೂಷನ್ನಿನವರು) ಸಾಧಾರಗೊಳಿಸಬೇಕಾಗಿಲ್ಲದ ಅಪರಾಧದ ವಿವರಣೆಯೇನೂ ಬೇಕಾಗಿಲ್ಲ. ಆರೋಪ ನ್ಯಾಯಾಧೀಶರಿಂದಲೇ ಅಪರಾಧಿಗೆ, ಆತನಿಗೆ ಗೊತ್ತಿರುವ ಭಾಷೆಯಲ್ಲಿ, ತಿಳಿಸಲ್ಪಡಬೇಕಾದದ್ದು ಇನ್ನೊಂದು ಮುಖ್ಯ ಅಂಶವಾಗಿದೆ. ಒಂದು ಪಕ್ಷ ಇಂಗ್ಲಿಷ್ನಲ್ಲಿ ಆರೋಪಮಾಡಿದರೆ ಅದನ್ನು ಅಪರಾಧಿ ತಿಳಿದಿರುವ ಭಾಷೆಗೆ ತರ್ಜುಮೆ ಮಾಡಿ ಹೇಳಬೇಕು. ಯಾವುದೇ ಅಪರಾಧಿಗೆ ಹಿಂದೆಯೇ ಶಿಕ್ಷೆ ವಿಧಿಸಲ್ಪಟ್ಟಿದ್ದು, ಅದರ ಆಧಾರದ ಮೇಲೆ ಪ್ರಸಕ್ತ ಅಪರಾಧಕ್ಕೆ ಪರಮಾವಧಿ ಶಿಕ್ಷೆ ವಿಧಿಸಬೇಕಾಗಿದ್ದರೆ ನ್ಯಾಯಾಧೀಶರು ಆ ಹಿಂದಿನ ಅಪರಾಧ ಮತ್ತು ಅದಕ್ಕಾದ ಶಿಕ್ಷೆಯ ವಿವರಣೆಯನ್ನೂ ಆರೋಪದಲ್ಲಿ ಕೊಡಬೇಕು, ಮತ್ತು ಅದು ನಡೆದ ಕಾಲ ಮತ್ತು ರೀತಿಯನ್ನು ವಿವರಿಸಬೇಕು. ಆರೋಪ ಆಪರಾಧಿಕ ದಾವಾದ ಅಧಿಪತ್ರವ್ಯಾಜ್ಯಗಳಲ್ಲಿ, ಒಂದು ಬಹು ಮುಖ್ಯವಾದ ಹೆಜ್ಜೆ. ಫಿರ್ಯಾದುದಾರರು ಮತ್ತು ಸೆಷನ್ಸ್ ನ್ಯಾಯಾಧೀಶರೇ ನಡೆಸಬೇಕಾದ ಕೇಸುಗಳಲ್ಲಿ, ದಾವೆಯ ಬಗ್ಗೆ ಎಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಿದ ಮೇಲೆ ನ್ಯಾಯಾಧೀಶರು ಆ ಸಾಕ್ಷಿಗಳ ಆಧಾರದಮೇಲೆ ಅಪರಾಧಿ ಅಪರಾಧ ಮಾಡಿದ್ದಾನೆ ಎಂಬುದಾಗಿ ನಿರ್ಧರಿಸಿದರೆ ಅಪರಾಧಿಯ ಮೇಲೆ ಆರೋಪ ಹೊರಿಸಬಹುದು. ಒಂದು ಪಕ್ಷ ಅಪರಾಧ ಸಾಬೀತಾಗುವು ದಿಲ್ಲ ಎಂದು ನಿರ್ಧರಿಸಿದರೆ ಅಪರಾಧಿಯನ್ನು ಆಗಲೇ ಬಿಟ್ಟುಬಿಡಬಹುದು. ಆರೋಪ ಮಾಡುವಾಗ ನ್ಯಾಯಾಧೀಶರು ಯಾವುದಾದರೂ ಅಪರಾಧಕ್ಕೆ ಕಾನೂನಿನಲ್ಲಿ ಒಂದು ಹೆಸರಿದ್ದರೆ ಆ ಹೆಸರನ್ನು ಉಪಯೋಗಿಸಿ ಆರೋಪ ಮಾಡಬೇಕು. ಉದಾಹರಣೆಗೆ ದೊಂಬಿ ಎಬ್ಬಿಸುವುದು (ರಯಟಿಂಗ್), ಕಳ್ಳತನ (ತೆಫ್ಟ್) ಇವುಗಳನ್ನು ಅವುಗಳಿಗೆ ಕೊಟ್ಟಿರುವ ಹೆಸರಿನಿಂದಲೇ ಉದಾಹರಿಸಿದರೆ ಸಾಕು. ಹಾಗೆಯೇ ಬಲಾತ್ಕಾರ ಮಾಡುವುದು (ಎಕ್ಸಟಾರ್ಷನ್) ಮುಂತಾದವುಗಳನ್ನು ಹೇಳಬೇಕಾಗಿಲ್ಲ. ಒಬ್ಬ ಮನುಷ್ಯನನ್ನು ಎರಡು ಅಪರಾಧಗಳಿಗೆ ಅಂದರೆ ಅದರಲ್ಲಿನ ಒಂದು ಅಧಿಪತ್ರ ವ್ಯಾಜ್ಯದಂತೆಯೂ ಇನ್ನೊಂದು ಸಮನ್್ಸ ವ್ಯಾಜ್ಯದಂತೆಯೂ (ಇದರಲ್ಲಿ ಆರೋಪ ಇರಬೇಕಾಗಿಲ್ಲ) ವಿಚಾರಣೆಗಳಿಗೊಳಪಡಿಸಬೇಕಾದರೆ, ಮೊದಲನೆಯದರ ಅಪರಾಧದ ಜೊತೆಗೆ ಎರಡನೆಯದನ್ನೂ ಹೇಳಬೇಕು. ಒಬ್ಬ ಮನುಷ್ಯ ಒಂದು ಅಪರಾಧದ ಮೇಲೆ ಆಪಾದಿಸಲ್ಪಟ್ಟು ಆ ಅಪರಾಧಕ್ಕೆ, ಒಂದು ಶಿಕ್ಷೆ ಇದ್ದು, ಕೆಲವು ಕಾರಣಗಳಿಗೋಸ್ಕರ, ತೀವ್ರವಾದ ಸಂದರ್ಭಗಳಿದ್ದು, ಅಂಥದಕ್ಕೆ ಹೆಚ್ಚಿನ ಶಿಕ್ಷೆಯನ್ನು ಕೊಡಬೇಕಾದ ಸಂದರ್ಭಗಳಿದ್ದರೆ, ಆ ಸಂದರ್ಭಗಳನ್ನೂ ವಿವರಿಸಬೇಕು. ಉದಾ:

  • ೧೧೭ ನೆಯ ಕಲಂನ ಪ್ರಕಾರದ ವಿಚಾರಣೆ.
  • ಸಮನ್ಸ್ ವ್ಯಾಜ್ಯ.
  • ಅಪೀಲು ಮಾಡಲವಕಾಶವಿಲ್ಲದ ಕ್ಷಿಪ್ರವ್ಯಾಜ್ಯ.

ದಿವಾಳಿ ಮೊಕದ್ದಮೆಗಳಲ್ಲಿ ಆರೋಪ ಹೊರಿಸಬೇಕೆ, ಬೇಡವೆ ಎನ್ನುವುದು ಸ್ಪಷ್ಟವಾಗಿಲ್ಲ. ಆ ಕಾಯಿದೆಯಲ್ಲಿ, ಆಪರಾಧಿಕ ಕಾನೂನಿನಂತೆ ನಡೆಸಬೇಕು ಎಂದು ಮಾತ್ರ ಹೇಳಿದೆ. ಅಪರಾಧಿ ಸತ್ರನ್ಯಾಯಾಲಯಕ್ಕೆ (ಸೆಷನ್ಸ್ ಕೋರ್ಟ್) ಒಪ್ಪಿಸಲ್ಪಟ್ಟ ಸಂದರ್ಭಗಳಲ್ಲಿ ಆಯಾ ನ್ಯಾಯಾಧೀಶರು ಸರಿಯಾಗಿ ಕ್ರಮಬದ್ಧವಾಗಿ ಆರೋಪಮಾಡದೆ ಅಥವಾ ಆರೋಪವನ್ನು ಮಾಡದೆಯೇ ಅಪರಾಧಿಯನ್ನು ವಿಚಾರಣೆಗೆ ಕಳುಹಿಸಿದ್ದರೆ ಜಿಲ್ಲಾ ನ್ಯಾಯಾಧೀಶರು ಬೇರೆ ಆರೋಪವನ್ನು ಮಾಡಬಹುದು (೨೨೬ನೆಯ ಕಲಂ). ಇಂಥ ಸಂದರ್ಭಗಳಲ್ಲಿ ಸತ್ರನ್ಯಾಯಾಲಯಕ್ಕೆ ಒಪ್ಪಿಸಿದ ಅಪ್ಪಣೆ ಇದ್ದರೆ ಸಾಕು (ಒಂದು ಪಕ್ಷ ಆರೋಪವನ್ನು ನ್ಯಾಯಾಧೀಶರು ಕಾನೂನುಬದ್ಧವಾಗಿ ಮೊದಲೇ ಮಾಡದಿದ್ದರೆ, ತಪ್ಪಾಗಿ ಮಾಡಿದ್ದರೆ, ಅವರೇ ಅಂಥ ಆರೋಪವನ್ನು ತೀರ್ಮಾನ ಹೇಳುವುದಕ್ಕೆ ಮೊದಲು ತಿದ್ದುಪಡಿಮಾಡಬಹುದು. ಅಥವಾ ಬೇರೆ ಹೊಸ ಆರೋಪವನ್ನು ಅಪರಾಧಿಯ ಮೇಲೆ ಹೊರಿಸಬಹುದು). ಸತ್ರನ್ಯಾಯಾಧೀಶರು ಆರೋಪ ಮಾಡಬಹುದು ಆರೋಪ ಮಾರ್ಪಾಡು ಮಾಡಬಹುದು, ಅಥವಾ ಸೇರಿಸಬಹುದು. ಆದರೆ ನ್ಯಾಯಾಧೀಶರು (ಮ್ಯಾಜಿಸ್ಟ್ರೇಟರು) ಮಾಡಿರುವ ಆರೋಪವನ್ನು ವಜಾ ಮಾಡುವುದಕ್ಕೆ ಅಥವಾ ಹಿಂತೆಗೆದುಕೊಳ್ಳುವುದಕ್ಕೆ ಅವರಿಗೆ ಆಧಿಕಾರವಿಲ್ಲ. ಆದರೆ ಸತ್ರನ್ಯಾಯಾಧೀಶರು ಮಾಡುವ ಯಾವುದೇ ಮೇಲಿನ ವಿಧಾನಗಳಿಂದ ಅಪರಾಧಿಗಳಿಗೆ ಅನ್ಯಾಯವಾಗದಂತಿರಬೇಕು. ಆದರೆ ಕೆಳ ನ್ಯಾಯಾಧೀಶರು ಆರೋಪವನ್ನು ತಪ್ಪಾಗಿ ಮಾಡಿದ್ದರೆ ಅದನ್ನು ತಿದ್ದುಪಡಿ ಮಾಡಲಾಗದು. ಆದರೆ ಆರೋಪ ಮೂರು ಆರೋಪಗಳ ಮೇಲ್ಪಟ್ಟು ಕೂಡಿದ್ದರೆ, ನ್ಯಾಯಾಧೀಶರು ತಮ್ಮ ಅಂತಿಮ ತೀರ್ಮಾನದ ಮುನ್ನ ಅಪರಾಧಿಗೆ ಸಾಕಷ್ಟು ಕಾಲಾವಕಾಶ ಕೊಟ್ಟು, ಮೂರರ ಮೇಲ್ಪಟ್ಟ ಅಪರಾಧಗಳನ್ನು ಕೈಬಿಡಬಹುದು. ವಿಚಾರಣೆ ನಡೆಯುತ್ತಿರುವಾಗ ಹೀಗೆ ಆರೋಪ ತಿದ್ದುಪಡಿಯಾದರೆ, ಹೊಸ ಆರೋಪ ಸೇರಿದ್ದರೆ ಅಥವಾ ಬದಲಾವಣೆ ಮಾಡಬೇಕಾದರೆ, ಅದಕ್ಕೆ ಸಂಬಂಧಪಟ್ಟಂತೆ ಹಿಂದಿನ ಸಾಕ್ಷಿಗಳನ್ನು ನ್ಯಾಯಾಲಯ ಪುನಃ ಕರೆಸಬೇಕು. ತಪ್ಪು ಆರೋಪದಿಂದ ಯಾರಿಗಾದರೂ ಶಿಕ್ಷೆಯಾಗಿದ್ದರೆ ಉಚ್ಚ ನ್ಯಾಯಾಲಯ ಮರುವಿಚಾರಣೆಗೆ ಆಜ್ಞೆ ಮಾಡಬಹುದು. ಪ್ರತಿಯೊಂದು ಅಪರಾಧಕ್ಕೂ ಪ್ರತ್ಯೇಕವಾದ ಆರೋಪ ಹೊರಿಸಬೇಕು ಮತ್ತು ಪ್ರತಿಯೊಂದು ಆರೋಪಕ್ಕೂ ಬೇರೆ ಬೇರೆ ವಿಚಾರಣೆ ಆಗಲೇಬೇಕು. ಆದರೆ ಒಬ್ಬ ಅಪರಾಧಿ ಒಂದು ವರ್ಷದಲ್ಲಿ ಒಂದೇ ಬಗೆಯ ಅಪರಾಧಗಳನ್ನು ಒಬ್ಬನ ಮೇಲೆ ಅಥವಾ ಅನೇಕರ ಮೇಲೆ ಮಾಡಿದ್ದರೆ, ಮತ್ತು ಅಂಥವು ಮೂರು ಅಪರಾಧಗಳ ಮೇಲಿರದಿದ್ದರೆ, ಅಂಥ ಸಂದರ್ಭಗಳಲ್ಲೂ ಒಂದೇ ಬಗೆಯ ಕೃತ್ಯದ ಸರಣಿಯಲ್ಲಿ ಒಂದೇ ರೀತಿಯ ಅಪರಾಧಗಳು ಒಬ್ಬನಿಂದಲೇ ಆಗಿದ್ದರೆ ಮತ್ತು ಅನೇಕ ಕೃತ್ಯಗಳು ನಡೆದು ಅವೆಲ್ಲವೂ ಸೇರಿ ಒಂದೇ ಅಪರಾಧಕ್ಕೊಳಪಟ್ಟಿದ್ದರೆ ಅಥವಾ ಒಂದು ಕೃತ್ಯ ಅಥವಾ ಅನೇಕ ಕೃತ್ಯಗಳು ನಡೆದು ಅಪರಾಧಿ ಯಾವುದನ್ನು ಮಾಡಿದ್ದಾನೆಂಬುದರಲ್ಲಿ ಸಂದೇಹ ಇದ್ದರೆ ಅಂಥ ವ್ಯಾಜ್ಯಗಳಲ್ಲಿ ಒಂದೇ ಸಾರಿಗೆ ವಿಚಾರಣೆಗೊಳಪಡಿಸಬಹುದು. ಹಾಗೆಯೇ ಒಂದು ಕೆಲಸದಲ್ಲಿ ಒಂದೇ ತೆರನಾದ ಅಪರಾಧ ಮಾಡಿದ್ದ ಎಲ್ಲ ಜನರೂ ಒಂದು ಅಕೃತ್ಯವನ್ನು ಮಾಡಿದವರೂ ಅವರಿಗೆ ಆ ಅಕೃತ್ಯದಲ್ಲಿ ಸಹಾಯಮಾಡಿದ ವರೂ ಅಕೃತ್ಯವನ್ನು ಪ್ರೇರೇಪಿಸಿದವರೂ ಮತ್ತು ಕ್ರಿಮಿನಲ್ ಕೋಡಿನ ೨೩೪ನೆಯ ಕಲಂ ಪ್ರಕಾರ ಒಟ್ಟಿಗೆ ಒಂದು ವರ್ಷದಲ್ಲಿ ಒಂದೇ ಬಗೆಯ ಕೃತ್ಯಗಳನ್ನು ಮಾಡಿದರೂ ಒಂದೇ ಕೆಲಸದ ವಿವಿಧ ಅಕೃತ್ಯಗಳಲ್ಲಿ ಭಾಗವಹಿಸಿದವರೂ ಕಳ್ಳತನ, ಅನ್ಯಾಯದ ಸುಲಿಗೆ, ದುರುಪಯೋಗ ಮಾಡಿರುವುದು ಮತ್ತು ಇಂಥ ಕೃತ್ಯಗಳಿಂದ ಬಂದ ಪದಾರ್ಥಗಳನ್ನು ಮುಚ್ಚಿಡುವುದರಲ್ಲಿ ಅವರಿಗೆ ಸಹಾಯಮಾಡಿದವರೂ ಅವುಗಳನ್ನು ಹೊಂದಿರುವವರೂ ಭಾರತೀಯ ದಂಡ ಸಂಹಿತೆಯ ೪೧೧ಮತ್ತು ೪೧೪ ನೆಯ ಕಲಂ ಪ್ರಕಾರ ಅಪರಾಧ ಮಾಡಿದವರೂ ಒಟ್ಟಿಗೆ ಒಂದೇ ಆರೋಪದ ಕೆಳಗೆ ವಿಚಾರಣೆಗೆ ಒಳಪಡುವರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: