ವಿಷಯಕ್ಕೆ ಹೋಗು

ಆಟಿ ತಿಂಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಪಂಚಾಗದ ಆಷಾಡ ಮಾಸವನ್ನು ತುಳುನಾಡಿನಲ್ಲಿ "ಆಟಿ" ಎಂದು ಕರೆಯುಲಾಗುತ್ತದೆ. ಸಾಮಾನ್ಯವಾಗಿ ಆಂಗ್ಲ ಕ್ಯಾಲೆಂಡರಿನ ಜುಲೈ- ಆಗಸ್ಟ್‌ ನಡುವೆ ಬರುವ ಆಟಿ, ತುಳು ಸಂಪ್ರದಾಯದ ಪ್ರಕಾರ ಇದು ವರ್ಷದ ನಾಲ್ಕನೇ ತಿಂಗಳು.[]

ಹಿನ್ನಲೆ

[ಬದಲಾಯಿಸಿ]

ಆಟಿ ತಿಂಗಳನ್ನು'ಅನಿಷ್ಟದ ತಿಂಗಳು' ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ, ಹಿಂದೆ ತುಳುನಾಡು ಭಾಗದಲ್ಲಿ ಕೃಷಿ ಚಟುವಟಿಕೆಗಳೇ ಹೆಚ್ಚಿದ್ದವು. ಈ ತಿಂಗಳಲ್ಲಿ ಹೆಚ್ಚು ಮಳೆಯಾಗುವುದರಿಂದ ಕೃಷಿ ಚಟುವಟಿಕೆಗಳು ಸಕ್ರಿಯವಾಗಿರಲು ಸಾಧ್ಯವಾಗುತ್ತಿರಲಿಲ್ಲಿ.ಮಳೆಯ ಕಾರಣ ಎಲ್ಲೂ ದೂರ ಹೋಗಲು ಸಾಧ್ಯವಾಗುತ್ತಿರಲಿಲ್ಲಿ. ಈ ತಿಂಗಳಲ್ಲಿ ಮದುವೆ, ಔತಣ, ಹಬ್ಬ, ಉತ್ಸವ ಇತ್ಯಾದಿ ಶುಭ ಕಾರ್ಯಗಳು ನಡೆಯುವುದಿಲ್ಲ. ಇದಕ್ಕೆ ಕಾರಣ, ವಿಪರೀತವಾಗಿ ಸುರಿಯುವ ಮಳೆ. ಸಾರಿಗೆ ಸಂಪರ್ಕ ಸಮರ್ಪಕವಾಗಿ ಇಲ್ಲದ ಸಂದರ್ಭದಲ್ಲಿ, ಸೇತುವೆ ಇತ್ಯಾದಿ ಸೌಲಭ್ಯಗಳಿಲ್ಲದ ಕಾಲಘಟ್ಟದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಾಟ ಅಪಾಯಕಾರಿ ಎಂಬ ದೃಷ್ಟಿಯಲ್ಲಿ ಅಂದಿನ ಕಾಲದಲ್ಲಿ ಮಾಡಿರುವ ಮುಂಜಾಗ್ರತೆಯ ಪರಿಕಲ್ಪನೆ ಎನ್ನಲಾಗಿದೆ.[]

ವಿಶೇಷತೆ

[ಬದಲಾಯಿಸಿ]

ಆಟಿ ತಿಂಗಳಿನಲ್ಲಿ ಅನೇಕ ಆಚರಣೆಗಳು ಆಚರಿಸಲ್ಪಡುತ್ತವೆ. ಅವುಗಳಲ್ಲಿ ಕೆಲವೊಂದು ಆಚರಣೆಗಳನ್ನು ಇಲ್ಲಿ ವಿವರಿಸಲಾಗಿದೆ.[]

ಆಟಿ ಕಳೆಂಜ

[ಬದಲಾಯಿಸಿ]

ಅದರಲ್ಲಿ ಒಂದು ಆಟಿ ಕಳೆಂಜ. ಪರವ ಮತ್ತು ಪಾಣಾರ ಜನಾಂಗದದವರು ಪಾರಂಪರಿಕ ಕಳೆಂಜನ ವೇಷ ಧರಿಸಿ ಬರುತ್ತಾರೆ. ತಮಟೆಯ ಸದ್ದಿನ ಹಿನ್ನೆಲೆಯಲ್ಲಿ ಅಭಯದ ಮಾತುಗಳನ್ನು ನೀಡುತ್ತಾರೆ. ರೋಗ ರುಜಿನಗಳಿಂದ ಜನರನ್ನು ಮುಕ್ತಗೊಳಿಸುವುದಾಗಿ ಹೇಳುತ್ತಾರೆ. ತೆಂಗಿನ ಸೋಗೆಯ ಹಸುರು ಎಲೆಗಳಿಂದ ಮತ್ತು ಹೂವುಗಳಿಂದ ಮಾಡಿದ ಕಳೆಂಜದ ವೇಷ ಭೂಷಣಗಳನ್ನು, ಶಿರಸ್ತ್ರಾಣ ಮತ್ತು ಬಣ್ಣ ಬಣ್ಣದ ಮುಖಗಳನ್ನು ಕಳೆಂಜನಿಗೆ ಕೇಪುಳದ ಕಾಂಡಗಳಿಂದ ತಯಾರಿಸಲಾಗುತ್ತದೆ. ಇವರಿಗೆ ಪ್ರತಿಫಲವಾಗಿ ಅಕ್ಕಿ, ಭತ್ತ, ತೆಂಗು, ಅರಿಶಿಣ ಇತ್ಯಾದಿ ನೀಡುವುದು ತುಳುನಾಡಿನ ಒಂದು ಕ್ರಮ.[]

ತಡ್ಯಗ್‌ ದೀಪಿನಿ

[ಬದಲಾಯಿಸಿ]

ಅಗಲಿದ ಹಿರಿಯರನ್ನು ನೆನಪಿಸುವ ಕೌಟುಂಬಿಕ ಕಾರ್ಯವು ಆಟಿಯಲ್ಲಿಯೇ ನಡೆಯುವುದು. ಆ ಸಮಯದಲ್ಲಿ ತಡ್ಯಗ್‌ ದೀಪಿನಿ ಎನ್ನುವ ಕ್ರಮವಿದೆ. ಅಡುಗೆ ತಯಾರಾದ ತತ್‌ಕ್ಷಣ ಬೇರಾರಿಗೂ ಬಡಿಸದೆ ಹಿರಿಯರಿಗಾಗಿ ಎಂದು ಬಡಿಸಿ ಸ್ವಲ್ಪ ಹೊತ್ತು ಬಿಟ್ಟು ತೆಗೆಯುವ ಪದ್ಧತಿ ಇದಾಗಿದೆ.

ಆಟಿ ಕುಲ್ಲುನು

[ಬದಲಾಯಿಸಿ]

ಆಟಿ ಕುಲ್ಲುನು ಎಂಬುದು ಕೂಡ ತುಳುನಾಡಿನ ಆಟಿ ತಿಂಗಳಲ್ಲಿ ನಡೆದು ಬಂದಿರುವ ಪರಂಪರೆಯಾಗಿದೆ. ನಿರ್ದಿಷ್ಟ ಕುಟುಂಬಕ್ಕೆ ವಿವಾಹವಾಗಿ ಬಂದವಳು ತನ್ನ ತವರು ಮನೆಗೆ ತೆರಳಿ ಅಲ್ಲಿ ಒಂದು ತಿಂಗಳು ಇರುವುದು ಹಿಂದಿನ ಸಂಪ್ರದಾಯ. ಮಳೆಗಾಲ ಆರಂಭದ ಬೇಸಾಯ ಇತ್ಯಾದಿ ಕಾರ್ಯಗಳ ದಣಿವಿನ ಬಳಿಕ ತಾಯಿ ಮನೆಯಲ್ಲಿ ಒಂದಿಷ್ಟು ವಿಶ್ರಾಂತಿ ಇದರ ಆಶಯ ಎಂದು ಹೇಳಲಾಗುತ್ತದೆ.

ಆಟಿ ಅಮಾವಾಸ್ಯೆ

[ಬದಲಾಯಿಸಿ]

ಆಟಿಯ ಅಮಾವಾಸ್ಯೆಯನ್ನು ಕೂಡ ವಿಶೇಷವಾಗಿ ಆಚರಿಸಲಾಗುತ್ತದೆ. ಅಂದು ಕಾಡಿನಲ್ಲಿ ಬೆಳೆಯುವ ಪಾಲೆದ ಮರದ ಕೆತ್ತೆಯನ್ನು ಮುಂಜಾನೆ ಕಲ್ಲಿನಿಂದ ಕೆತ್ತಿ ತಂದು ಅದಕ್ಕೆ ವಿವಿಧ ಔಷಧೀಯ ವಸ್ತು ಬೆರೆಸಿ ಈ ಮದ್ದನ್ನು ಮನೆಯಲ್ಲಿ ತಯಾರಿಸಲಾಗುತ್ತದೆ. ಮನೆ ಮಂದಿ ಬರಿ ಹೊಟ್ಟೆಗೆ ಈ ಕಷಾಯವನ್ನು ಸೇವಿಸುತ್ತಾರೆ. ಬಳಿಕ ಮಕ್ಕಳಿಗೆ ಬೆಲ್ಲ, ಗೋಡಂಬಿ ಇತ್ಯಾದಿ ನೀಡಲಾಗುತ್ತದೆ. ಇದರ ಸೇವನೆಯ ಬಳಿಕ ಮನೆ ಮಂದಿ ಮೆಂತೆಯ ಗಂಜಿಯನ್ನು ಸೇವಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ

ಆಟಿ ತಿಂಗಳ ಖಾದ್ಯಗಳು

[ಬದಲಾಯಿಸಿ]

ಆಟಿ ತಿಂಗಳ ಕೆಲವು ಖಾದ್ಯಗಳ ವಿವರ ಹೀಗಿದೆ, ಹಲಸಿನ ಹಪ್ಪಳ- ಮಾಂಬಳ -ಹಲಸಿನ ತೇಗದೆಲೆಯ ಗಟ್ಟಿ - ದೋಸೆ - ಗಾರಿಗೆ - ಸಾಂತಾಣಿ - ರಚ್ಚೆಯ ಸೋಂಟೆ; ಮಾವಿನ ರಸಾಯನ ಮಾಂಬಳ ಚಟ್ನಿ, ತಿಮರೆ ಚಟ್ನಿ, ತೊಜಂಕಿನ ಅಂಬಡೆ, ನುಗ್ಗೆ, ಹರಿವೆ ಇತ್ಯಾದಿ ಸೊಪ್ಪುಗಳು, ಕಲ ಲಾಂಬು- ಕಣಿಲೆ, ನೆಲ್ಲಿ- ಪೇರಳೆ- ಶುಂಠಿ- ತಂಬುಳಿ, ಕುಡು ಸಾರ್‌, ಕುಲ್ಕೊಟೆ, ಕೆಸುವಿನ ಮತ್ತು ತದ್ರೂಪಿ ಎಲೆಗಳ ಪತ್ರೊಡೆ, ಉದ್ದಿನ ಹಪ್ಪಳ, ಇತ್ಯಾದಿ.[]

ಉಲ್ಲೇಖ

[ಬದಲಾಯಿಸಿ]
  1. http://www.suddi9.com/?p=36729
  2. ""ಸುದ್ಧಿ ನ್ಯೂಸ್‌" ಜಾಲತಾಣದಲ್ಲಿ ಪ್ರಕಟವಾಗಿರುವ ಲೇಖನ".
  3. "ಮಾರಿ ತಡೆವ ಬೇಲಿ: ಮನೆಮನೆಯ ಮಾರಿ ಕಳೆವ 'ಆಟಿ ತಿಂಗಳ ಆಟಿ ಕಳಂಜ'". Retrieved 15 July 2024.
  4. "ಆಟಿ ತಿಂಗಳ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ".
  5. "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.