ಆಟದ ಮೈದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಆಧುನಿಕ ಆಟದ ಮೈದಾನ

ಆಟದ ಮೈದಾನವು ನಿರ್ದಿಷ್ಟವಾಗಿ ಮಕ್ಕಳಿಗೆ ಆಟವಾಡಲು ಸಾಧ್ಯವಾಗಿಸಲು ವಿನ್ಯಾಸಗೊಳಿಸಲಾದ ಸ್ಥಳ. ಇದು ಸಾಮಾನ್ಯವಾಗಿ ಹೊರಾಂಗಣದಲ್ಲಿರುತ್ತದೆ. ಸಾಮಾನ್ಯವಾಗಿ ಆಟದ ಮೈದಾನವನ್ನು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿರುತ್ತಾದರೂ, ಕೆಲವು ಆಟದ ಮೈದಾನಗಳು ಇತರ ವಯೋವರ್ಗದವರಿಗೆ ಉದ್ದೇಶಿತವಾಗಿರುತ್ತವೆ. ಉದಾಹರಣೆಗೆ, ಬರ್ಲಿನ್‍ನಲ್ಲಿನ ಒಂದು ಮೈದಾನವನ್ನು ೭೦ ಅಥವಾ ಅದರ ಮೇಲಿನ ವಯಸ್ಸಿನ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಟದ ಮೈದಾನವು ಒಂದು ನಿರ್ದಿಷ್ಟ ವಯಸ್ಸಿಗಿಂತ ಕಡಿಮೆಯಿರುವ ಮಕ್ಕಳನ್ನು ಹೊರಗಿಡಬಹುದು.

ಆಧುನಿಕ ಆಟದ ಮೈದಾನಗಳು ಹಲವುವೇಳೆ ಆಡುಮಣೆ, ರಂಕರಾಟೆ, ಉಯ್ಯಾಲೆ, ಜಾರುಬಂಡೆ, ಕಂಬಿ ಏಣಿ, ಚಿನ್-ಅಪ್ ಸರಳು, ಮರಳಗುಳಿ, ಲಂಘಕ ಸವಾರ, ಟ್ರಪೀಜ಼್ ಚಕ್ರಗಳು, ಆಡುಮನೆಗಳು ಮತ್ತು ಚಕ್ರಭೀಮನ ಕೊಟೆಯಂತಹ ಮನರಂಜನಾ ಉಪಕರಣಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಅನೇಕ ಉಪಕರಣಗಳು ಮಕ್ಕಳಲ್ಲಿ ದೈಹಿಕ ಹೊಂದಾಣಿಕೆ, ಶಕ್ತಿ ಮತ್ತು ನಮ್ಯತೆ ಅಭಿವೃದ್ಧಿಯಾಗಲು ನೆರವಾಗುತ್ತವೆ. ಜೊತೆಗೆ ಮನೊರಂಜನೆ ಮತ್ತು ಸಂತೋಷ ನೀಡುತ್ತವೆ ಮತ್ತು ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ. ಆಧುನಿಕ ಆಟದ ಮೈದಾನಗಳಲ್ಲಿ ಅನೇಕ ಭಿನ್ನ ಉಪಕರಣ ಭಾಗಗಳನ್ನು ಜೋಡಿಸುವ ಆಡು ರಚನೆಗಳು ಸಾಮಾನ್ಯವಾಗಿರುತ್ತವೆ.

ಆಟದ ಮೈದಾನಗಳು ಹಲವುವೇಳೆ ಬೇಸ್‍ಬಾಲ್ ಆಡುಸ್ಥಳ, ಸ್ಕೇಟಿಂಗ್ ಅಖಾಡ, ಬಾಸ್ಕೆಟ್‍ಬಾಲ್ ಆವರಣ ಅಥವಾ ಟೆದರ್‍ಬಾಲ್‍ನಂತಹ ವಯಸ್ಕ ಕ್ರೀಡೆಗಳ ಔಪಚಾರಿಕ ಆಟಗಳನ್ನು ಆಡುವಂತಹ ಸೌಲಭ್ಯಗಳನ್ನೂ ಹೊಂದಿರುತ್ತವೆ. ಸಾರ್ವಜನಿಕ ಆಟದ ಉಪಕರಣವೆಂದರೆ ಉದ್ಯಾನಗಳು, ಶಾಲೆಗಳು, ಶಿಶುಪಾಲನಾ ಸೌಲಭ್ಯಗಳು, ಸಂಸ್ಥೆಗಳು, ಬಹುಕುಟುಂಬ ವಾಸಸ್ಥಾನಗಳು, ರೆಸ್ಟರಾಂಟ್‍ಗಳು, ರೆಸಾರ್ಟ್‌ಗಳು ಮತ್ತು ಇತರ ಸಾರ್ವಜನಿಕ ಬಳಕೆಯ ಪ್ರದೇಶಗಳ ಆಡು ಪ್ರದೇಶಗಳಲ್ಲಿ ಬಳಕೆಗಾಗಿ ಉದ್ದೇಶಿತವಾಗಿರುವ ಉಪಕರಣ.

ಇತಿಹಾಸದಾದ್ಯಂತ, ಮಕ್ಕಳು ತಮ್ಮ ಹಳ್ಳಿಗಳಲ್ಲಿ ಮತ್ತು ನೆರೆಹೊರೆಯಲ್ಲಿ ಆಟವಾಡುತ್ತಿದ್ದರು, ವಿಶೇಷವಾಗಿ ತಮ್ಮ ಮನೆಗಳ ಹತ್ತಿರದ ಬೀದಿಗಳು ಮತ್ತು ರಸ್ತೆಗಳಲ್ಲಿ.[೧] ೧೯ನೇ ಶತಮಾನದಲ್ಲಿ, ಮಕ್ಕಳಲ್ಲಿ ನ್ಯಾಯೋಚಿತ ವರ್ತನೆ ಮತ್ತು ಒಳ್ಳೆಯ ಸ್ವಭಾವದ ಭಾವನೆಯನ್ನು ತುಂಬಲು ಫ಼್ರೀಡ್ರಿಕ್ ಫ಼್ರೋಬಲ್‍ನಂತಹ ಅಭಿವೃದ್ಧಿ ಮನೋವಿಜ್ಞಾನಿಗಳು ಬೆಳವಣಿಗೆಗೆ ನೆರವಾಗಲು ಆಟದ ಮೈದಾನಗಳನ್ನು ಪ್ರಸ್ತಾಪಿಸಿದರು. ಜರ್ಮನಿಯಲ್ಲಿ, ಶಾಲೆಗಳಿಗೆ ಸಂಬಂಧಿಸಿದಂತೆ ಕೆಲವು ಆಟದ ಮೈದಾನಗಳನ್ನು ನಿರ್ಮಿಸಲಾಯಿತು, ಮತ್ತು ಮೊದಲ ಉದ್ದೇಶ-ನಿರ್ಮಿತ ಸಾರ್ವಜನಿಕ ಪ್ರವೇಶದ ಆಟದ ಮೈದಾನವನ್ನು ೧೮೫೯ರಲ್ಲಿ ಇಂಗ್ಲಂಡ್‍ನ ಮ್ಯಾಂಚೆಸ್ಟರ್‍ನಲ್ಲಿ ತೆರೆಯಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. Evolution of American Playgrounds, Joe Frost (2012), Scholarpedia, 7(12):30423