ವಿಷಯಕ್ಕೆ ಹೋಗು

ಆಕ್ನಾಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕ್ನಾಟನ್ ಪ್ರತಿಮೆ

ಆಕ್ನಾಟನ್- ಕ್ರಿ.ಪೂ. 1375 ರಿಂದ 1358 ರವರೆಗೆ ಈಜಿಪ್ಟನ್ನು ಆಳಿದ ಈತ ಮೂರನೆಯ ಅಮೆನ್‍ಹೋತೆಪ್ ಮಗ-ನಾಲ್ಕನೆಯ ಅಮೆನ್‍ಹೋತೆಪ್.

ಸಾಧನೆ

[ಬದಲಾಯಿಸಿ]

ಪರಂಪರಾಗತವಾದ ಈಜಿಪ್ಟಿನ ಧರ್ಮಕ್ಕೆ ವಿರುದ್ಧವಾಗಿ ನಿಂತು, ತನ್ನದೇ ಆದ ಹೊಸ ಮತವನ್ನು ಜಾರಿಗೆ ತಂದುದು ಇವನ ಮುಖ್ಯ ಸಾಧನೆ. ಅದುವರೆಗಿನ ಈಜಿಪ್ಟಿನ ಧರ್ಮದಲ್ಲಿ ಹಲವಾರು ದೇವತೆಗಳು ಪೂಜಿಸಲ್ಪಡುತ್ತಿದ್ದರು. ಈ ನಂಬಿಕೆಯನ್ನು ಎದುರಿಸಿ, ಅಟಾನ್ (ಸೂರ್ಯ) ಒಬ್ಬನೇ ದೇವರು ಎಂಬ ಅದ್ವೈತವಾದವನ್ನು ಪ್ರತಿಷ್ಠಾಪಿಸಿ, ಫ್ಯಾರೋ(ಈಜಿಪ್ಟಿನ ದೊರೆ) ಅಟಾನನ ಅಂಶ ಎಂದು ಸಾರಿದ.

ಧಾರ್ಮಿಕ ನೀತಿಗಳು

[ಬದಲಾಯಿಸಿ]

ದೊರೆಯಿಂದಲೇ ಸ್ಥಾಪಿತವಾದ ಈ ನೂತನ ಮತ ಹಳೆಯ ಧಾರ್ಮಿಕವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಪ್ರಭಾವೀ ಪುರೋಹಿತಗಣದ ಸ್ಥಾನಕ್ಕೆ ಧಕ್ಕೆ ತಂದಿತು. ಸಹಜವಾಗಿ ಅಲ್ಲಲ್ಲಿ ಆಕ್ನಾಟನ್‍ನ ವಿರುದ್ಧ ಸಂಚುಗಳು ಬೆಳೆದರೂ ಎದೆಗೆಡದೆ, ದೇಶದಲ್ಲೆಲ್ಲ ಹಳೆಯ ಧರ್ಮದ, ಅದರಲ್ಲೂ ಅದುವರೆಗೆ ಪ್ರತಿಷ್ಠಿತ ಸ್ಥಾನದಲ್ಲಿದ್ದ ಅಮೆನ್ ದೇವತೆಗೆ ಸಂಬಂಧಪಟ್ಟ ಕುರುಹುಗಳನ್ನೆಲ್ಲ ನಾಶಮಾಡಲು ಪಣತೊಟ್ಟ. ಈ ದೇವತೆಯ ಹೆಸರಿನ ಅಂಶವಿದ್ದ ತನ್ನ ಹೆಸರನ್ನೇ (ಅಮೆನ್ ಹೋತೆಪ್) ಆಕ್ನಾಟನ್ (ಸೂರ್ಯ ನೆಲಸಿರುವವ) ಎಂದು ಬದಲಾಯಿಸಿಕೊಂಡ. ಅಮೆನ್ ದೇವತೆಯ ಪ್ರಮುಖ ಕ್ಷೇತ್ರವಾಗಿದ್ದ ಅದುವರೆಗಿನ ಈಜಿಪ್ಟಿನ ರಾಜಧಾನಿ ಥೀಬ್ಸ್‍ನ್ನು ಬಿಟ್ಟು ಹೊಸ ರಾಜಧಾನಿ ಅಖೆತೆಟಾನ್‍ನನ್ನು (ಈಗಿನ ಟೆಲ್-ಎಲ್-ಅಮರ್ನ) ಕಟ್ಟಿಸಿಕೊಂಡ. ನುಬಿಯ, ಸಿರಿಯ ಪ್ರದೇಶದಲ್ಲೂ ಅಟಾನ್ ದೇವರ ಹೆಸರಿನಲ್ಲಿ ಊರುಗಳನ್ನು ಕಟ್ಟಿಸಿದ. ಧಾರ್ಮಿಕವಿಧಿ ವಿಧಾನಗಳಲ್ಲದೆ, ಆ ಕಾಲದ ಕಟ್ಟಡಗಳು ಮತ್ತು ಶಿಲ್ಪಗಳಲ್ಲೂ ಅಟಾನ್‍ಗೆ ಪ್ರಧಾನತೆಯಿರುವಂತೆ ಹೊಸ ಹೊಸ ಬದಲಾವಣೆಗಳನ್ನು ಬಳಕೆಗೆ ತಂದ. ಇಷ್ಟೆಲ್ಲ ಸಾಹಸದ ಅನಂತರವೂ ಇವನ ಮರಣಾನಂತರ ಕೆಲವೇ ದಿನಗಳಲ್ಲಿ ಇವನ ಮಗನ ಕಾಲದಲ್ಲಿ ಈಜಿಪ್ಟ್ ಪುನಃ ಹಳೆಯ ಪದ್ಧತಿಗೇ ಮೊರೆಹೊಕ್ಕಿತು. ಕಲೆ ದೃಷ್ಠಿಯಿಂದಲೂ ಈತನ ಆಳ್ವಿಕೆ ಗಮನಾರ್ಹವಾದುದಾಗಿದೆ. ಇವನ ರಾಣಿಯ ಎದೆಮಟ್ಟದ ಪ್ರತಿಮೆ ವಿಶ್ವವಿಖ್ಯಾತವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]

[] []

  1. http://www.ancientegyptonline.co.uk/akhenaten.html
  2. http://discoveringegypt.com/ancient-egyptian-kings-queens/akhenaten/