ವಿಷಯಕ್ಕೆ ಹೋಗು

ಆಂಫಿಟಮೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಫಿಟಮೀನ್[] ಕೇಂದ್ರ ನರಮಂಡಲದ ಮೇಲೆ ಬಹುಮಟ್ಟಿನ ಚೋದಕ ಪ್ರಭಾವವಿರುವ ಕೃತಕವಾಗಿ ತಯಾರಾದವಲ್ಲಿ ಒಂದಾಗಿ ಬೆಂಜೆಡ್ರಿನ್ ಹೆಸರಿನಲ್ಲಿ ಬಳಕೆಗೆ ಬಂದ ಮದ್ದು. ಇದು ಬಣ್ಣವಿರುವ, ನಿಧಾನವಾಗಿ ಆರಿಹೋಗುವ, ಖಾರದ ರುಚಿಯ, ಸುಲಭವಾಗಿ ಹರಿಯುವ, ನೀರಿನಲ್ಲಿ ತುಸು ಕರಗುವ, ದ್ರವ. ಇದರ ಕುದಿಯುವ ಮಟ್ಟ 2000 ಸೆಂ.ಗ್ರೇ. ಬಳಕೆಯಲ್ಲಿರುವ ಇದರ ಉತ್ಪನ್ನ ಆಂಫಿಟಮೀನ್ ಸಲ್ಫೇಟು ವಾಸನೆಯಿರದ ಬಿಳಿ ಪುಡಿ, ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ನಾಲಗೆಗೆ ತಾಕಿಸಿದರೆ ತುಸು ಕಹಿಯಾಗಿ ಮರಗಟ್ಟಿಸುತ್ತದೆ. ಎಡತಿರುವಿನ (ಲೀವೊರೊಟೇಟರಿ) ಆಂಫಿಟಮೀನ್ (ಡೆಕ್ಸೆಡ್ರೀನ್) ಇದೇ ಸರಣಿಯದು. ಮಾತ್ರೆಗಳು, ಚುಚ್ಚುಗೆಗಳಾಗೂ ಇವನ್ನು ಕೊಡಬಹುದು.ಸಾಕಷ್ಟು ಕೊಟ್ಟರೆ ಈ ಮದ್ದುಗಳು ಅರಿವಳಿಕಗಳ, ಮಂಪರಿಕಗಳ, ನಿದ್ದೆಕಾರಿಗಳ, ಮದ್ಯಸಾರದ ಪ್ರಭಾವವನ್ನು ತುಸು ಮಟ್ಟಿಗೆ ಇಳಿಸುತ್ತದೆ. ಬಾರ್ಬಟುರೇಟುಗಳ ವಿಷವೇರಿಕೆ, ಮೊಲ್ಲಾಗರಗಳಲ್ಲೂ ಎಚ್ಚರಗೊಳಿಸಲು ಹುಷಾರಾಗಿ ಬಳಸುವುದರಿಂದ ಅನುಕೂಲವಿದೆ. ಮನೋವ್ಯಾಪಾರಗಳ ಮೇಲೆ ಇವೆಲ್ಲ ಪರಿಣಾಮಕಾರಿಗಳು; ಎಚ್ಚರಗೊಳಿಕೆ, ಚಿತ್ತನೆಡಿಕೆ, ಹೆಚ್ಚಿನ ಮುಂದುವರಿಕೆ, ಮನೋಭಾವದ ಉನ್ನತಿಕೆ, ಆವೇಶ, ಹೆಚ್ಚಿಸಿದ ನೆಚ್ಚಿಕೆ, ಆನಂದ ಹಿಗ್ಗು, ದಣಿವಿನ ಅರಿವು ತಗ್ಗುವಿಕೆ, ಮಾತಾಳಿತನ, ಒಂದೆಡೆ ಮನಸ್ಸಿಡುವುದರ ಹೆಚ್ಚಳ ತೋರುತ್ತದೆ. ಈ ಪರಿಣಾಮಗಳೆಲ್ಲ ರೋಗಿಯ ಮನಸ್ಸು, ಪರಿಸರಗಳನ್ನು ಅನುಸರಿಸುತ್ತವೆ. ಮಕ್ಕಳಲ್ಲಿ ಶಮನಿಕವಾದರೂ ಇವು ದೊಡ್ಡವರಲ್ಲಿ ಚೋದಕ.

ಆಂಫಿಟಮೀನಿನ ಚೋದಕ ಪ್ರಭಾವ ಹಲವಾರು ಚಿಕಿತ್ಸೆಗಳಲ್ಲಿ ನೆರವಾಗುವದು. ಸಣ್ಣಪುಟ್ಟ ನರಮಾಂದ್ಯಗಳು, ಕೆಲವೇಳೆ ಇನ್ನೂ ಬಲವಾಗಿ ಮನಗುಂದಿರುವ ಸ್ಥಿತಿಗಳಲ್ಲೂ ರೋಗ ಲಕ್ಷಣಗಳನ್ನು ಕಳೆವುದು. ಮದ್ಯದ ಚಾಳಿಗರಲ್ಲಿ ಕುಡಿತವನ್ನು ಬಿಟ್ಟುಬಿಡಲು ಮನಸ್ಸಿಗೆ ಧೈರ್ಯಗೊಡುತ್ತವೆ. ತಡೆಯಲಾರದಂತೆ ನಿದ್ದೆಬರಿಸುವ ರೋಗವಾದ ಮಂಪರಸೆಳೆತ (ನಾರ್ಕೊಲೆಪ್ಸಿ) ಚಿಕಿತ್ಸೆಗೂ ಇದು ಅನುಕೂಲಕರ. ಮಿದುಳಿನ ಉರಿತ ಆದ ಮೇಲೆ ಆಗುವ ಬಗೆಯ ಪಾರ್ಕಿನ್ಸನ ಬೇನೆ ಇಲ್ಲವೇ ನಡುಕದ ಜೋಗರಿಕೆಯಲ್ಲಿ (ಪೆರಾಲೆಸಿಸ್ ಅಜಿಟಾನ್ಸ) ಇತರ ಮದ್ದುಗಳೊಂದಿಗೆ ಕೊಟ್ಟು ಸ್ನಾಯುಗಳ ಬಿಗುವನ್ನು ಬಿಡಿಸಬಹುದು. ಊಟದ ಮುಂಚೆ ಆಂಫಿಟಮೀನನ್ನು ನುಂಗಿದರೆ, ಹಸಿವನ್ನು ಪೂರ್ತಿ ಮಂದಗೊಳಿಸಿ ಮೈತೂಕ ತಗ್ಗಿಸುವದೆಂದು 1937ರಲ್ಲಿ ಗೊತ್ತಾಯಿತು. ಇದರಿಂದಲೇ ಬೊಜ್ಜು ಕಳೆವ ಆಹಾರದ ಪಥ್ಯದೊಂದಿಗೆ ಇದು ಹೆಚ್ಚಿನ ಬಳಕೆಯಲ್ಲಿದೆ. ಸೇವಿಸಿದಂತೆಲ್ಲ ಬರಬರುತ್ತ ಮದ್ದಿಗೆ ಜಗ್ಗದಂತಾಗುವುದರಿಂದ ಇನ್ನೂ ಹೆಚ್ಚುಹೆಚ್ಚಾಗಿ ನುಂಗಬೇಕಾಗುತ್ತದೆ.

ಬೇಡದ ಪರಿಣಾಮಗಳು ಆಂಫಿಟಮೀನ್‍ನಿಂದ ಆಗುತ್ತದೆ. ಚೋದನೆ ಮಿತಿಮೀರಿ ಚಡಪಡಿಕೆ, ನಿದ್ದೆಬಾರದಿರುವಿಕೆ, ನಡುಕ, ಬೆಗುಪು, ಕೆರಳು ಇವು ತೀರ ಸಾಮಾನ್ಯ. ಹೊಟ್ಟೆ ನುಲಿದು ಓಕರಿಕೆ, ವಾಂತಿ, ಉಚ್ಚಾಟವೂ ಆಗಬಹುದು, ಕೆಲವೇಳೆ ಪ್ರಾಣ ಕಳೆದುಕೊಳ್ಳಲು ನುಂಗಿದ ಹೆಚ್ಚಿನ ಪ್ರಮಾಣದಿಂದ ಜ್ವರವೇರಿ ಗುಂಡಿಗೆ ಕ್ರಮಗೆಟ್ಟು ಅರಿವು ತಪ್ಪಿ, ಸೆಳವು ಬಂದು ಸುಸ್ತು ಬಿದ್ದು ಸಾಯಬಹುದು.

ಮುಖ್ಯವಾಗಿ ಮೋಟಾರು ಬಂಡಿ ಚಾಲಕರು, ಅಂಗಸಾಧಕರು, ಕಲಿವವರು ದಣಿವು, ನಿದ್ದೆಗಳನ್ನು ಕಳೆಯಲು ಆಂಫಿಟಮೀನನ್ನು ಗೊತ್ತುಗುರಿಯಿರದೆ ಮಿತಿಗೆಟ್ಟು ಬಳಸುವದುಂಟು. ಇದರಿಂದ ಕೆಲಸಗಾರನಿಗೆ ತನ್ನ ಕೆಲಸಗೆಟ್ಟರೂ ಮನಸ್ಸಿಗೆ ತೃಪ್ತಿಯಾಗಿ ಬೇಗನೆ ಮಾಡುವನು. ಹೊತ್ತು ಎನ್ನುವದು ಬೇಗನೆ ಓಡುತ್ತದೆ. ಆದರೆ ನಿದ್ದೆ ದಣಿವುಗಳನ್ನು ದೂರವಿರಿಸಲು ವೈದ್ಯನ ಸಲಹೆ ಇಲ್ಲದೆ ಇದನ್ನು ಬಳಸುವುದು ಒಳ್ಳೆಯದಲ್ಲ. ಇದರ ಒಂದೇ ಸಮನ ಬಳಕೆಯಿಂದ ಚಾಳಿ ಹತ್ತುವುದು. ರಕ್ತ ಸುತ್ತಾಟದ ಕೆಡುಕಿನ ಪರಿಣಾಮಗಳಲ್ಲದೆ ಅತಿಯಾಗಿ ದುಡಿಯುವವರಲ್ಲಿ ದಣಿವೆಂದು ಎಚ್ಚರಿಸುವ ಸೂಚನೆಯನ್ನೂ ಕಳೆವುದೇ ಅಪಾಯಗಳು. ಅಂಥವರೂ ಎಷ್ಟೋ ಮಂದಿ ಸುಸ್ತಾಗಿ ಬಿದ್ದಿದ್ದಾರೆ. ಆದ್ದರಿಂದ ವೈದ್ಯನ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರದೇ ಲವಲವಿಕೆಗಾಗೂ ಹೆಚ್ಚಿನ ಬಲ, ಕೆಲಸಗೇಯುವ ಅಳವು, ಮದ್ಯಸಾರ ಕುಡಿದಾಗ ತತ್ಕಾಲಕ್ಕೆ ಬಲಿಮಿಕವಾಗೂ, ಇದರ ಬಳಕೆ ಒಳ್ಳೆಯದಲ್ಲ. ಮೇಲಾಟದ ಪಂದ್ಯಗಾರರಂತೂ ಇದನ್ನು ಮುಟ್ಟಲೇಕೂಡದು. ನಡುಹಗಲು ಕಳೆದ ಮೇಲೆ ಕೊಟ್ಟರೆ ರಾತ್ರಿ ನಿದ್ದೆಗೆಡುತ್ತದೆ. ವೈದ್ಯಪಟುವಿನ ಸೂಚನೆ ಪತ್ರವಿಲ್ಲದೆ ಈ ಮದ್ದನ್ನು ಎಂದಿಗೂ ಕೊಡಲಾಗದು. ರಾಸಾಯನಿಕ ರಚನೆ, ವರ್ತನೆಗಳಲ್ಲಿ ಎಫಿಡ್ರಿನ್ ಮತ್ತಿತರ ಅಡ್ರಿನಲೀನದಂಥ ಅನುವೇದನಂಕ (ಸಿಂಪತೋಮೀಮಿಟಿಕ್) ಗುಣಗಳು ಆಂಫಿಟಮೀನಿಗೆ ಇದೆ. ರಕ್ತನಾಳಗಳನ್ನು ಕುಗ್ಗಿಸುವುದರಿಂದ, ಗೂರಲೂ ಕೂರಾದ ಬಟವೆಯುರಿತ (ಅಕ್ಯೂಟ್ ಸೈನುಸೈಟಿಸ್) ನೆಗಡಿ ಸುರಿತಗಳಲ್ಲಿ ಮೂಗಿನ ಲೋಳೆಪರೆಗಳನ್ನು ಮುಂದುವರಿಸುವುದಕ್ಕಾಗಿ ಅಡ್ರಿನಲೀನ್ ಹಾಗೇ ಆಂಫಿಟಮೀನ್ ಕೂಡ 1% ಉಸಿರೆಳಕವಾಗಿ (ಇನ್‍ಹೇಲೆಂಟ್) ಇದು ಬಳಕೆಯಲ್ಲಿದೆ. ಬೆಂಜಿಡ್ರೀನ್ ಸೇರಿಸಿದ್ದ ಉಸಿರೆಳೆತಗಳಲ್ಲಿ (ಇನ್‍ಹೇಲರ್ಸ) ಬೆಂಜಿಡ್ರೀನನ್ನು, ಇದರ ಚಟ ಹತ್ತಿದವರು ಹೊಟ್ಟೆಗೆ ತೆಗೆದುಕೊಳ್ಳುತ್ತಿದ್ದರಿಂದ, ಈಗ ಬೆಂಜಿಡ್ರೀನ್ ಇಂಥ ಬಳಕೆಯಲ್ಲಿಲ್ಲ. ರಕ್ತನಾಳ ಕುಗ್ಗಿ, ಗುಂಡಿಗೆಯ ಮತ್ತು ಪಂಗುಸಿರ್ನಾಳದ (ಬ್ರಾಂಕಿಯಲ್) ಮೇಲಿನ ವರ್ತನೆಗಳು ಎಪಿಡ್ರೀನಿನಷ್ಟು ಬಲವಾಗಿಲ್ಲ.[] ಬಹಳಕಾಲದ ಬಳಕೆಯಿಂದ ಆಂಫಿಟಮೀನ್ ಚಾಳಿ ಹತ್ತುವುದಾದರೂ, ಮಂಪರಿಕಾರಿ ಮದ್ದುಗಳಕ್ಕಿಂತ ಕಡಿಮೆ ಮಾರ್ಫಿನ್‍ನಂಥ ಮದ್ದುಗಳ ಸೇವನೆ ನಿಲ್ಲಿಸಿದ ಕೂಡಲೇ ಕಾಣಬರುವ ಕಟ್ಟುನಿಟ್ಟಿನ ರೋಗಲಕ್ಷಣಗಳು ಆಂಫಿಟಮೀನ್ ಸೇವನೆ ನಿಲ್ಲಿಸಿದಾಗ ಕಾಣವು. ಆದರೂ ನಡುಕ, ಮಾಂದ್ಯ, ನಿತ್ರಾಣ, ಹೊಟ್ಟೆ ತೊಳಸು ತೋರಿಸುತ್ತವೆ. ರೋಗಿಯ ತನ್ನ ತನದ ಏರುಪೇರುಗಳು ಇದರ ಚಾಳಿಯಲ್ಲಿ ವಿಶಿಷ್ಟ. ಮತ್ತಾವ ಮದ್ದಿನಿಂದಲೂ ಬಿಕ್ಕಳಿಕೆ ನಿಲ್ಲದಿದ್ದರೆ, ನೋವು, ಮುಟ್ಟು, ಪುಟ್ಟಾಮಾಲೆಗಳಲ್ಲೂ (ಪೆಟಿಟ್‍ಮಾಲ್) ಇದನ್ನು ಕೊಡುವುದುಂಟು.

ಉಲ್ಲೇಖಗಳು

[ಬದಲಾಯಿಸಿ]
  1. www.cesar.umd.edu/cesar/drugs/amphetamines.asp
  2. www.drugwise.org.uk/amphetamines