ಆಂಥೊಜೋವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಥೊಜೋವ

ಆಂಥೊಜೋವ ಕುಟುಕುಕಣವಂತ (ಸೀಲೆಂಟರೇಟ) ವಂಶಕ್ಕೆ ಸೇರಿದ ಒಂದು ಮುಖ್ಯವರ್ಗ. ಈ ವರ್ಗಕ್ಕೆ ಸೇರಿದ ಪ್ರಾಣಿಗಳು ಪಾಲಿಪ್ ಅವಸ್ಥೆಯಲ್ಲಿಯೇ ಇರುತ್ತವೆ. ಆಂಥೊಜೋವದ ಗ್ಯಾಸ್ಟ್ರೊವ್ಯಾಸ್‍ಕ್ಯುಲಾರ್ ಅವಕಾಶ ನೀಳ ಗೋಡೆಗಳ ಬೆಳವಣಿಗೆಯಿಂದಾಗಿ ನಾನಾ ಭಾಗಗಳಾಗಿ ವಿಭಾಗವಾಗಿವೆ. ಗೋಡೆಗಳಿಗೆ ಮೀಸೆಂಟರಿಗಳು ಎಂದು ಹೆಸರು. ಈ ಜೀವಿಗಳು ಬಾಹ್ಯ ನೋಟಕ್ಕೆ ತ್ರಿಜ್ಯ ಸೌಷ್ಟವವನ್ನು ಹೊಂದಿದಂತೆ ಕಂಡುಬಂದರೂ ಆಂತರಿಕವಾಗಿ ಸಮಪಾಶ್ರ್ವ ಸೌಷ್ಟವವನ್ನು ಹೊಂದಿದೆ. ಜೀವಿಗಳ ಶರೀರ ಕೊಳವೆಯಂತೆ ದುಂಡಗಿದ್ದು ಎರಡು ತುದಿಗಳನ್ನು ಹೊಂದಿದೆ. ನೆಲಕ್ಕಂಟಿರುವ ಭಾಗವನ್ನು ಬುಡವೆಂದೂ ಮುಂಭಾಗವನ್ನು ತುದಿಯೆಂದೂ ಕರೆಯುತ್ತಾರೆ. ತುದಿ ತಟ್ಟೆಯಂತೆ ದುಂಡಗೆ ಅಗಲವಾಗಿದೆ. ಇದರ ಮಧ್ಯಭಾಗದಲ್ಲಿ ಉದ್ದವಾದ ರಂಧ್ರದಂತಿರುವ ಬಾಯಿ ಇದೆ. ಈ ತಟ್ಟೆಯಂಥ ಮುಂತುದಿಯ ಮೇಲೆ ಟೆಂಟಕಲ್‍ಗಳು ದಳಗಳಂತೆ ಜೋಡಿಸಿಕೊಂಡಿವೆ. ಆದ್ದರಿಂದ ಇವನ್ನು "ಕಡಲ ಕುಸುಮ" ಎಂದು ಕರೆಯುತ್ತಾರೆ. ಟೆಂಟಕಲ್‍ಗಳ ಒಳಗೆ ಟೊಳ್ಳು. ಅವುಗಳ ಒಳ ಅವಕಾಶ ಗ್ಯಾಸ್ಟ್ರೊವ್ಯಾssಸ್‍ಕ್ಯುಲಾರ್ ಅವಕಾಶವನ್ನು ಸಂಧಿಸುತ್ತದೆ. ಈ ಜೀವಿಗಳ ಜನನಾಂಗಗಳು ಮೀಸೆಂಟರಿಯ ಗೋಡೆಗೆ ಅಂಟಿಕೊಂಡಿವೆ. ಬಾಯಿಯಿಂದ ಒಳಭಾಗಕ್ಕಿರುವ ಭಾಗವನ್ನು ಸ್ಟೊಮೋಡಿಯಂ ಎಂದು ಕರೆಯುತ್ತಾರೆ. ಬಾಯಿಯ ಒಂದು ಭಾಗದಲ್ಲಿ ದುಂಡಗಿರುವ ಸೈಫನೋಗ್ಲಿಫ್ ಎಂಬ ಭಾಗವಿದೆ. ಇದು ಶಿಲಿಕೆಗಳಿಂದ ಆವೃತವಾಗಿದೆ. ನೀರು ಇದರಿಂದ ಶರೀರದೊಳಕ್ಕೆ ಪ್ರವಹಿಸುತ್ತದೆ. ಇನ್ನುಳಿದ ಬಾಯಿ ರಂಧ್ರದಿಂದ ನೀರು ಹೊರಹೋಗುತ್ತದೆ. ಇದರಿಂದಾಗಿ ಒಂದೇ ಸಮನೆ ನೀರು ಒಳಕ್ಕೆ ಮತ್ತು ಹೊರಕ್ಕೆ ಪ್ರವಾಹ ರೂಪದಲ್ಲಿ ಹರಿಯುವುದನ್ನು ಕಾಣಬಹುದು. ಆಂಥೊಜೋವ ಜೀವನ ಚಕ್ರದಲ್ಲಿ ಮೆಡುಸಾ ಜೀವಿಗಳಾಗಲಿ ಅಥವಾ ಮೆಡುಸಾ ಹಂತವಾಗಲಿ ಕಂಡುಬರುವುದಿಲ್ಲ. ಆಂಥೊಜೋವಗಳನ್ನು ಬಿಟ್ಟರೆ ಸ್ಟೊಮೋಡಿಯಂ ಅಥವಾ ಫ್ಯಾರಿಂಕ್ಸ್ ಭಾಗವನ್ನು ಹೊಂದಿರುವ ಸೀಲೆಂಟರೇಟಗಳು ಇಲ್ಲವೇ ಇಲ್ಲ.

ಜೀವಶಾಸ್ತ್ರ ಮತ್ತು ಅಂಗರಚನಾಶಾಸ್ತ್ರ[ಬದಲಾಯಿಸಿ]

ಆಂಥೊಜೋವ ವರ್ಗಕ್ಕೆ ಕಡಲ ಅನಿಮೂನ್, ಕಡಲ ಲೇಖನಿ, ಕಡಲದ ಬೀಸಣಿಗೆ, ಹವಳ ಮುಂತಾದ ಪ್ರಾಣಿಗಳನ್ನು ಸೇರಿಸಲಾಗಿದೆ. ಈ ವರ್ಗದ ಪ್ರಾಣಿಗಳೆಲ್ಲವೂ ಸಂಪೂರ್ಣವಾಗಿ ಸಮುದ್ರ ಜೀವಿಗಳು. ಸಸ್ಯಗಳಂತೆ ನೆಲಕ್ಕಾಗಲೀ, ಬಂಡೆಗಳಿಗಾಗಲೀ ಅಂಟಿಕೊಂಡು ಬೆಳೆಯುತ್ತವೆ. ಇವುಗಳಿಗೆ ಚಲನಶಕ್ತಿ ಇಲ್ಲವೆಂದೇ ಹೇಳಬಹುದು. ಒಂಟಿಯಾಗಿ ಅಥವಾ ಗುಂಪು ಜೀವಿಗಳಾಗಿ ವಾಸ. ಕೆಲವು ಯಾವ ಗಟ್ಟಿ ಹೊರಕವಚವಿಲ್ಲದೇ ಮೃದುವಾಗಿ ದಿಗಂಬರವಾಗಿಯೇ ಉಳಿದಿವೆ. ಮತ್ತೆ ಕೆಲವು ಅತ್ಯಂತ ಗಟ್ಟಿಯಾದ ರಕ್ಷಾ ಕವಚಗಳನ್ನು ಹೊಂದಿದ್ದು ಅವುಗಳೊಳಗೆ ವಾಸಿಸುವುವು. ಇಂತ ಕವಚಗಳು ಶರೀರದ ಹೊರಗೆ ಅಥವಾ ಒಳಗೆ ಇರಬಹುದು. ಇವುಗಳಲ್ಲಿರುವ ಮೀಸೊಗ್ಲಿಯ ಎಂಬ ವಸ್ತುವಿನಲ್ಲಿ ಅಮೀಬ ರೀತಿಯ ಜೀವಕೋಶಗಳಿವೆ. ಸ್ನಾಯುಕೋಶಗಳ ಬೆಳವಣಿಗೆಯೂ ಕೂಡ ಇವುಗಳಲ್ಲುಂಟು. ಇದರಿಂದಾಗಿ ಇವು ಹಿಗ್ಗುವ ಮತ್ತು ಕುಗ್ಗುವ ಶಕ್ತಿಯನ್ನು ಹೊಂದಿವೆ. ಇವುಗಳ ಟೆಂಟಕಲ್‍ಗಳಲ್ಲಿ ನೆಮಟೋಸಿಸ್ಟ್‍ಗಳೆಂಬ ಕೋಶಗಳು ತುಂಬಿವೆ. ಇವನ್ನು ಕುಟುಕುಕೋಶಗಳೆಂದು ಕರೆಯುತ್ತಾರೆ. ಈ ಕೋಶಗಳು ಜೀವಿಗಳಿಗೆ ರಕ್ಷಣೆಯನ್ನೊದಗಿಸುತ್ತವೆ, ಮತ್ತು ಆಹಾರ ಗಳಿಕೆಯನ್ನು ಸಾಧ್ಯವಾಗಿಸುತ್ತವೆ.

ರಿವಿಜನ್[ಬದಲಾಯಿಸಿ]

ಆಂಥೊಜೋವವನ್ನು ಅತ್ಯಂತ ವಿಶಾಲವಾದ ಎರಡು ಉಪವರ್ಗಗಳಾಗಿ ವಿಂಗಡಿಸಲಾಗಿದೆ. ಅವೇ 1. ಆಲ್‍ಸಿಯೊನೇರಿಯ ಅಥವಾ ಆಕ್ಟೊಕೊರೇಲಿಯ, 2. ಜುಆಂಥೇರಿಯ ಅಥವಾ ಹೆಕ್ಸಾ ಕೊರೇಲಿಯ.

1. ಆಲ್‍ಸಿಯೊನೇರಿಯ ಅಥವಾ ಆಕ್ಟೊಕೊರೇಲಿಯ: ಉದಾಹರಣೆಗಳು; ಕಡಲ ಕುಸುಮ, ಮಿದುಳು ಹವಳ, ನಾಯಿಕೊಡೆ ಹವಳ, ನಕ್ಷತ್ರ ಹವಳ, ಜಿಂಕೆಕೊಂಬು ಹವಳ.

2. ಜುಆಂಥೇರಿಯ ಅಥವಾ ಹೆಕ್ಸಾ ಕೊರೇಲಿಯ: ಉದಾಹರಣೆಗಳು; ಕಡಲ ಬೀಸಣಿಗೆ, ಕಡಲ ಲೇಖನಿ, ಟ್ಯುಬಿಫೇರಾ, ಆಲ್ಸಿಯೇನಿಯಂ, ಕೇರಾಲಿಯಂ ರುಬ್ರಮ್(ಒಡವೆಗಳಲ್ಲಿ ಬಳಸುವ ಬೆಲೆಬಾಳುವ ಹವಳ.)

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. "ಆರ್ಕೈವ್ ನಕಲು". Archived from the original on 2016-10-02. Retrieved 2016-10-20.
  2. eol.org/pages/1746
"https://kn.wikipedia.org/w/index.php?title=ಆಂಥೊಜೋವ&oldid=1139118" ಇಂದ ಪಡೆಯಲ್ಪಟ್ಟಿದೆ