ಆಂಡ್ರ್ಯೂ ಜ್ಯಾಕ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಡ್ರ್ಯೂ ಜ್ಯಾಕ್ಸನ್ (1767-1845). ಅಮೆರಿಕ ಸಂಯಕ್ತ ಸಂಸ್ಥಾನಗಳ 7ನೆಯ ಅಧ್ಯಕ್ಷ (1829-1837).

ಬದುಕು ಮತ್ತು ರಾಜಕಾರಣ[ಬದಲಾಯಿಸಿ]

ಜನನ ಮಾರ್ಚ್ 15, 1767ರಂದು. ಉತ್ತರ ಹಾಗೂ ದಕ್ಷಿಣ ಕ್ಯಾರಲೈನ ರಾಜ್ಯಗಳ ಗಡಿಭಾಗದಲ್ಲಿದ್ದ ವಾಕ್ಸ್‍ಹಾ ಎಂಬಲ್ಲಿ. ಅಮೆರಿಕನ್ ಕ್ರಾಂತಿಯುದ್ಧ ಕಾಲದಲ್ಲಿ ಹುಡುಗನಾಗಿದ್ದರೂ ಸಮರದಲ್ಲಿ ಸೇವೆ ಸಲ್ಲಿಸಿ 1871ರಲ್ಲಿ ಬ್ರಿಟಿಷರಿಗೆ ಸೆರೆಸಿಕ್ಕಿದ. ಯುದ್ಧಕೈದಿಯಾಗಿದ್ದಾಗ ಬ್ರಿಟಿಷರು ಇವನಿಗೆ ತುಂಬ ಹಿಂಸೆ ಕೊಟ್ಟರು.

ಜ್ಯಾಕ್ಸನ್ ಉತ್ತರ ಕ್ಯಾರಲೈನದ ಸಾಲ್ಸಬರೀ ನಗರದಲ್ಲಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿ 1787ರಲ್ಲಿ ವಕೀಲಿ ಪ್ರಾರಂಭಿಸಿದ. ಮರುವರ್ಷ ಆ ರಾಜ್ಯದ ಪಶ್ಚಿಮ ಜಿಲ್ಲಾ ಪಟ್ಟಣವಾದ ನ್ಯಾಷ್‍ವಿಲ್‍ನಲ್ಲಿ ಸರ್ಕಾರದ ಪರ ವಕೀಲನಾಗಿ ನೇಮಕ ಹೊಂದಿದ. ವಕೀಲವೃತ್ತಿ ಇವನಿಗೆ ಪ್ರಸಿದ್ಧಿ ತಂದಿತು. ನ್ಯಾಷ್‍ವಿಲ್ ನಗರ ಸ್ಥಾಪಕರಲ್ಲಿ ಒಬ್ಬನಾದ ಜಾನ್ ಡಾನೆಲ್ಸನನ ಮಗಳು ರಾಷೆಲಳನ್ನು ಮದುವೆಯಾದ (1791).

1796ರಲ್ಲಿ ಅಮೇರಿಕ ಒಕ್ಕೂಟಕ್ಕೆ ಟೆನೆಸೀ ಸೇರಿದಾಗ ಜ್ಯಾಕ್ಸನ್ ಅದರ ಸಂವಿಧಾನರಚನಾ ಸಭೆಯ ಸದಸ್ಯರಲ್ಲೊಬ್ಬನಾಗಿದ್ದ. ಆ ವರ್ಷ ಅಮೆರಿಕ ಒಕ್ಕೂಟದ ಪ್ರತಿನಿಧಿಗಳ ಸಭೆಗೆ ಟೆನೆಸೀಯ ಪ್ರತಿನಿಧಿಯಾಗಿ ಚುನಾಯಿತನಾದ. 1797ರಲ್ಲಿ ಕೇಂದ್ರ ಸೆನೆಟ್ ಸಭೆಯ ಸದಸ್ಯತ್ವ ದೊರಕಿತು. ಜ್ಯಾಕ್ಸನ್ ಈ ಸ್ಥಾನಕ್ಕೆ 1798ರಲ್ಲಿ ರಾಜೀನಾಮೆ ನೀಡಿದ. 1798-1804 ರಲ್ಲಿ ಟನೆಸೀರಾಜ್ಯದ ಉಚ್ಚನ್ಯಾಲಾಲಯವಾದ ಸುಪೀರಿಯರ್ ಕೋರ್ಟಿನ ನ್ಯಾಯಾಧೀಶನಾದ.

ಇಂಗ್ಲೆಂಡಿನ ವಿರುದ್ಧ ಅಮೆರಿಕ ನಡೆಸಿದ ಯುದ್ಧದಲ್ಲಿ (1812-14) ಯೋಧನಾಗಿ ಭಾಗವಹಿಸಿದ ಜ್ಯಾಕ್ಸನ್ ರಾಷ್ಟ್ರವೀರನೆಂದು ಹೆಸರಾದ. 1813ರಲ್ಲಿ ಕ್ರೀಕ್ ಇಂಡಿಯನರ ಮೇಲೆ ಯುದ್ಧಮಾಡಿ ಆಲಬಾಮ ಬಳಿ ಅವರನ್ನು ಸೋಲಿಸಿದ. ಇದಕ್ಕಾಗಿ ಅಮೆರಿಕನ್ ಸೈನ್ಯದ ದಕ್ಷಿಣ ವಿಭಾಗದ ಮೇಜರ್ ಜನರಲ್ ಆಗಿ ಇವನ ನೇಮಕವಾಯಿತು (1814). ನ್ಯೂ ಆರ್ಲೀಯನ್ಸ್ ಕದನದಲ್ಲಿ ಬ್ರಿಟಿಷ್ ಜನರಲ್ ಪಕೆನ್‍ಹ್ಯಾಮ್ ಇವನಿಂದ ಸಂಪೂರ್ಣವಾಗಿ ಸೋಲನ್ನನುಭವಿಸಿದ. ಅಮೆರಿಕದ ಇತಿಹಾಸದಲ್ಲಿ ನಿರ್ಣಾಯಕವಾದ ಕದನಗಳಲ್ಲಿ ಇದೊಂದು. ಇದರಿಂದ ಅಮೆರಿಕದ ರಾಜಕೀಯದಲ್ಲಿ ಬ್ರಿಟಿಷರ ಕೈವಾಡ ಪೂರ್ಣವಾಗಿ ತಪ್ಪಿತು. ತರುವಾಯ ಫ್ಲಾರಿಡಾ ಭಾಗದಲ್ಲಿ ಬಂಡಾಯ ಹೂಡಿದ ಸೆಮಿನೋಲ್ ಇಂಡಿಯನರನ್ನು ಅಡಗಿಸಿದ (1818). ಆಗ ಫ್ಲರಿಡಾ ಸ್ಪೇನಿಗೆ ಸೇರಿತ್ತು. ಸ್ಪೇನಿಗೆ ಸೇರಿದ್ದ ಸೈಂಟ್ ಮಾಕ್ರ್ಸ್ ಕೋಟೆ ಹಾಗೂ ಪೆನ್ಸಕೋಲವನ್ನು ಜ್ಯಾಕ್ಸನ್ ವಶಪಡಿಸಿಕೊಂಡ. ತರುವಾಯ ಫ್ಲಾರಿಡಾ ಭಾಗವನ್ನು ಅಮೆರಿಕ ಸ್ಪೇನಿನಿಂದ ಪಡೆದುಕೊಂಡಿತು. ಆ ಪ್ರದೇಶಕ್ಕೆ ಜ್ಯಾಕ್ಸನ್ ರಾಜ್ಯಪಾಲನಾಗಿ ನೇಮಕಗೊಂಡ (1821). ಆದರೆ ಈ ಕೆಲಸ ಒಗ್ಗಲಿಲ್ಲವಾದ್ದರಿಂದ ಕೆಲವು ತಿಂಗಳ ಅನಂತರ ಇದನ್ನು ಬಿಟ್ಟ. 1823ರಲ್ಲಿ ಟೆನೆಸೀ ವಿಧಾನಮಂಡಲ ಜಾಕ್ಸನನನ್ನು ಅಮೆರಿಕದ ಸೆನೆಟ್ ಸಭೆಗೆ ಸದಸ್ಯನನ್ನಾಗಿ ಆರಿಸಿ ಕಳುಹಿಸಿತು. ಅದರೊಂದಿಗೆ ಒಕ್ಕೂಟದ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಯಾಗಿ ಅವನ ನಾಮನಿರ್ದೇಶನ ಮಾಡಿತು. ಆದರೆ ಜ್ಯಾಕ್ಸನ್ ಚುನಾವಣೆಯಲ್ಲಿ ಗೆಲ್ಲಲಿಲ್ಲ (1824). ಅವನು ಸೆನೆಟ್ ಸದಸ್ಯಸ್ಥಾನಕ್ಕೆ ರಾಜೀನಾಮೆ ನೀಡಿದ. ಟೆನೆಸೀ ವಿಧಾನಮಂಡಲ ಮತ್ತೆ ಅವನನ್ನು 1828ರ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯನ್ನಾಗಿ ನಿಲ್ಲಿಸಿತು. ಆ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದ. ಆದರೆ ಆ ಸಮಯಕ್ಕೆ ಸರಿಯಾಗಿ ಅವನಿಗೆ ಪತ್ನೀವಿಯೋಗವಾಯಿತು. ಈ ದುಃಖದ ನಡುವೆಯೇ ಅವನು ವಾಷಿಂಗ್ಟನ್ ನಗರಕ್ಕೆ ಹೋಗಿ ಶ್ವೇತಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ (1829).

ಜ್ಯಾಕ್ಸನ್ ಅಧ್ಯಕ್ಷನಾದ ವರ್ಷ ಸರ್ಕಾರದ ಮುಖ್ಯ ಹುದ್ದೆಗಳಿಗೆ ಆಡಳಿತ ಪಕ್ಷದವರನ್ನು ತುಂಬುವ ಪದ್ಧತಿಯನ್ನು ಜಾರಿಗೆ ತಂದ. ಈಗ ಈ ಪದ್ದತಿ ಅನೇಕ ರಾಷ್ಟ್ರಗಳಲ್ಲಿ ರೂಢಿಯಲ್ಲಿದೆ.

1832ರಲ್ಲಿ ಅಧ್ಯಕ್ಷಸ್ಥಾನಕ್ಕೆ ಮತ್ತೆ ಚುನಾವಣೆ ಆಗಬೇಕಿತ್ತು. ಚುನಾವಣೆಯ ವರ್ಷದಲ್ಲಿ ಜ್ಯಾಕ್ಸನನನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಪ್ರಿಯವಾದ ಕ್ರಮಗಳನ್ನು ಅವನು ಕೈಗೊಳ್ಳುವಂತೆ ಮಾಡಿ ಅವನು ಚುನಾವಣೆಯಲ್ಲಿ ಸೋಲುವಂತೆ ಮಾಡಲು ಅವನ ರಾಜಕೀಯ ವಿರೋಧಿಗಳು ಯತ್ನಿಸಿದರು. ಬ್ಯಾಂಕ್ ಆಫ್ ಯುನೈಟೆಡ್ ಸ್ಟೇಟ್ಸ್ ಎಂಬ ಬ್ಯಾಂಕಿಂಗ್ ಸಂಸ್ಥೆಗೆ ನೀಡಲಾಗಿದ್ದ ಸನ್ನದಿನ ಅವಧಿ 1936ರಲ್ಲಿ ಪೂರೈಸಲಿತ್ತು. ಆ ಬ್ಯಾಂಕು ಆಗ ಸಂಘಟಿತವಾಗಿದ್ದ ರೀತಿಯಲ್ಲಿ ಆರ್ಥಿಕವಾಗಿ ಅಪಾಯಕಾರಿಯೆಂಬುದು ಜ್ಯಾಕ್ಸನನಿಗೆ ಮನವರಿಕೆಯಾಗಿತ್ತು. ಆದರೆ ಆ ಬ್ಯಾಂಕಿನ ಸನ್ನದನ್ನು ನವೀಕರಿಸುವ ವಿಧೇಯಕವೊಂದನ್ನು ಅವನ ವಿರೋಧಿಗಳು ಕಾಂಗ್ರೆಸಿನಲ್ಲಿ ತಂದರು. ಜ್ಯಾಕ್ಸನ್ ಬಹಳ ದೀರ್ಘವಾದ ವಿವೇಚನೆಯ ಅನಂತರ ಅದಕ್ಕೆ ವೀಟೊ ಚಲಾಯಿಸಿದ. ಧನಿಕರೂ ಬಲಿಷ್ಠರೂ ಸರ್ಕರದ ಕಲಾಪಗಳನ್ನು ತಮ್ಮ ಸ್ವಾರ್ಥೋದ್ದೇಶಕ್ಕಾಗಿ ಹಲವೊಮ್ಮೆ ಬಗ್ಗಿಸಿಕೊಳ್ಳುತ್ತಾರೆ - ಎಂಬುದು ಆ ವೀಟೊ ಪತ್ರದಲ್ಲಿ ಜ್ಯಾಕ್ಸನ್ ಬರೆದ ಒಂದು ಪ್ರಸಿದ್ಧ ವಾಕ್ಯ. ಜ್ಯಾಕ್ಸನನ ಕ್ರಮಕ್ಕೆ ಸೆನೆಟಿನ ಬಹುಮತದ ಬೆಂಬಲ ದೊರಕಿತು. ಅವನ ರಾಜಕೀಯ ವಿರೋಧಿಗಳು ಚುನಾವಣೆಯ ಸಮಯದಲ್ಲಿ ಅವನ ವಿರುದ್ಧ ಪ್ರಚಾರ ಮಾಡಲು ಒಂದು ಕಾರಣ ಸಿಕ್ಕಿತು. ಆದರೆ ಜ್ಯಾಕ್ಸನನ ಜನಪ್ರಿಯತೆ ಅಗಾಧವಾಗಿತ್ತು. ಅವನು ಎರಡನೆಯ ಬಾರಿಗೆ ಚುನಾವಣೆಯಲ್ಲಿ ಗೆದ್ದ.

ಜೆಫರ್ಸನನಂತೆ ಜ್ಯಾಕ್ಸನ್ ರಾಜ್ಯಶಾಸ್ತ್ರಜ್ಞನಲ್ಲ. ಆದಾಗ್ಯೂ ಅಮೆರಿಕದ ರಾಷ್ಟ್ರಾಧ್ಯಕ್ಷನಾಗಿ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ದುಡಿದ. ಜ್ಯಾಕ್ಸನ್ ಪ್ರಜಾತಂತ್ರ ಅವನ ಕಾಲದ ಆರ್ಥಿಕ ಬದಲಾವಣೆಗೆ ಅನುಗುಣವಾಗಿತ್ತು. ಎರಡನೆಯ ಅವಧಿಯ ಅನಂತರ ಅವನು ಅಧ್ಯಕ್ಷತೆಯಿಂದ ನಿವೃತ್ತಿಹೊಂದುವ ಸಮಯದಲ್ಲಿ ಅವನ ಜನಪ್ರಿಯತೆ ವಿಶೇಷವಾಗಿ ಬೆಳೆದಿತ್ತು. ಅನಂತರ ಅವನು ಎಂಟು ವರ್ಷಗಳ ಕಾಲ ಬದುಕಿದ್ದ. 1845ರ ಜುಲೈ 8ರಂದು ಆಂಡ್ರ್ಯೂ ಜ್ಯಾಕ್ಸನ್ ತೀರಿಕೊಂಡ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: