ಆಂಡರ್ಸ್ ಸೆಲ್ಸಿಯಸ್
ಆಂಡರ್ಸ್ ಸೆಲ್ಸಿಯಸ್ | |
---|---|
ಜನನ | ೧೭೦೧ ನವೆಂಬರ್ ೨೭ ಉಪ್ಸಾಲಾ |
ಮರಣ | ೧೭೪೪ ಏಪ್ರಿಲ್ ೨೫ |
ರಾಷ್ಟ್ರೀಯತೆ | ಸ್ವೀಡನ್ |
ಕಾರ್ಯಕ್ಷೇತ್ರಗಳು | ಖಗೋಳವಿಜ್ಞಾನಿ |
ಸ್ವೀಡನ್ನಿನ ಖಗೋಳವಿಜ್ಞಾನಿಯಾಗಿದ್ದ ಆಂಡರ್ಸ್ ಸೆಲ್ಸಿಯಸ್‌ರವರು ೧೭೦೧ರ ನವೆಂಬರ್ ೨೭ರಂದು ಉಪ್ಸಾಲಾದಲ್ಲಿ ಜನಿಸಿದರು. ೧೭೩೦ಯಲ್ಲಿ ಸೆಲ್ಸಿಯರವರು ಸೂರ್ಯನಿಂದ ನಮ್ಮ ಭೂಮಿ ಎಷ್ಟು ದೂರದಲ್ಲಿದೆ ಎಂಬುದನ್ನು ಕಂಡುಹಿಡಿಯುವ ವಿಧಾನವನ್ನು ತಮ್ಮ ಪ್ರಬಂಧದ ಮೂಲಕ ಪ್ರಕಟಿಸಿದರು. ಅಲ್ಲದೆ ಧ್ರುವಪ್ರಭೆಯ (aurora) ಕೌತುಕವನ್ನು ಅಭ್ಯಸಿಸಿದ ಸೆಲ್ಸಿಯಸ್‌ರವರು ಉತ್ತರ ಧ್ರುವಪ್ರಭೆಗೂ (aurora borealis) ನಮ್ಮ ಭೂಮಿಯ ಕಾಂತಕ್ಷೇತ್ರದಲ್ಲಿ ನಡೆಯುವ ಬದಲಾವಣೆಗಳಿಗೂ ಸಂಬಂಧವಿದೆ ಎಂಬುದನ್ನು ಕಂಡುಹಿಡಿದವರಲ್ಲಿ ಮೊದಲಿಗರಾಗಿದ್ದರು. ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಗಳಿಗೆ ಪ್ರವಾಸ ಮಾಡಿದ ಸೆಲ್ಸಿಯಸ್‌ರವರು ಖಗೋಳವಿಜ್ಞಾನದಲ್ಲಿ ಅನೇಕ ವಿಷಯಗಳನ್ನು ಕಂಡುಹಿಡಿದರು. ಸ್ವೀಡನ್ನಿನ ಸರ್ಕಾರದ ಸಹಕಾರದಿಂದ ಸೆಲ್ಸಿಯಸ್‌ರವರು ೧೭೪೧ರಲ್ಲಿ ಉಪ್ಸಾಲಾ ಖಗೋಳವೀಕ್ಷಣಾಲಯವನ್ನು ಸ್ಥಾಪಿಸಿದರು. ಕೆಲವು ನಕ್ಷತ್ರಗಳ ಕಾಂತಿಯಾನವನ್ನೂ (magnetude – a measure of brightness of stars) ಅವರು ಕಂಡುಹಿಡಿದರು. ಮಾನವನ ಬರಿಗಣ್ಣಿನ ದೃಷ್ಟಿಯ ಹೊರತಾಗಿ ಸಾಧನಗಳ ಮೂಲಕ ನಕ್ಷತ್ರಗಳ ಕಾಂತಿಮಾನವನ್ನು ಕಂಡುಹಿಡಿದ ಪ್ರಯತ್ನ ನಡೆಸಿದವರಲ್ಲಿ ಸೆಲ್ಸಿಯಸ್‌ರವರು ಮೊದಲಿಗರಾಗಿದ್ದಾರೆ. ಅದೂ ಅಲ್ಲದೆ ಅಂತರರಾಷ್ಟ್ರೀಯವಾದ ಉಷ್ಣತಾಮಾನವನ್ನು ವೈಜ್ಞಾನಿಕವಾಗಿ ನಿರ್ಧರಿಸಿ, ಅದನ್ನು ಪ್ರಕಟಿಸುವ ಪ್ರಯತ್ನ ಮಾಡಿದವರಲ್ಲಿಯೂ ಸೆಲ್ಸಿಯಸ್‌ರವರು ಮೊದಲಿಗರಾಗಿದ್ದಾರೆ. ಅವರು ಉಷ್ಣತಾ ಮಾಪನೆಯ ಸಲುವಾಗಿ ಸೆಂಟಿಗ್ರೇಡ್[೧] (ಅಂದರೆ ೧೦೦ ಸಮಭಾಗಗಳು ಎಂಬ ಅರ್ಥದಲ್ಲಿನ) ಮಾನಕವನ್ನು ೧೭೪೨ರಲ್ಲಿ ಬಳಕೆಗೆ ತಂದರು. ಅದರಲ್ಲಿ ನೀರಿನ ಕುದಿಬಿಂದುವನ್ನು (boiling point of water) ’೦ಡಿಗ್ರಿ’ ಎಂದೂ, ಬರ್ಫಬಿಂದುವನ್ನು (freezing point of ice) ’೧೦೦ಡಿಗ್ರಿ’ ಎಂದೂ ಅಂಗೀಕರಿಸಿ, ನಡುವಿನ ಅಂತರವನ್ನು ೧೦೦ ಭಾಗಗಳಾಗಿ ವಿಂಗಡಿಸಿದರು. ಆದರೆ ೧೭೪೫ರಲ್ಲಿ ಅಂದರೆ ಸೆಲ್ಸಿಯಸ್ ರವರ ನಿಧನದ ಒಂದು ವರುಷದ ನಂತರ, ಕಾರ್ಲ್ ಲಿನಾಯಸ್‌ರವರು (೧೭೦೭-೧೭೭೮) ಆ ಉಷ್ಣಮಾನಕವನ್ನು (temperature scale) (ಬರ್ಫಬಿಂದುವನ್ನು 0 ಡಿಗ್ರಿಗಳೆಂತಲೂ, ಕುದಿಯುವ ಬಿಂದುವನ್ನು ೧೦೦ ಡಿಗ್ರಿಗಳೆಂತಲೂ) ಅದಲು ಬದಲಾಗಿಸಿದರು. ಈಗಲೂ ಆ ಮಾನಕವನ್ನೇ ಬಳಸಲಾಗುತ್ತಿದೆ.[೨] ಅನೇಕ ವರುಷಗಳ ಕಾಲ ಅದನ್ನು ಸ್ವೀಡನ್ನಿನ ಉಷ್ಣಮಾಪಕ ಎಂಬುದಾಗಿಯೇ ಕರೆಯಲಾಗುತ್ತಿತ್ತು. ೧೯೪೮ರಿಂದಾಚೆಗೆ ಇದನ್ನು ’ಸೆಂಟಿಗ್ರೇಡ್’ ಬದಲು ’ಸೆಲ್ಸಿಯಸ್’ ಎಂದು ಕರೆಯಲಾಗುತ್ತಿದೆ. ಸೆಲ್ಸಿಯಸ್‌ರವರು ೧೭೪೪ರ ಏಪ್ರಿಲ್ ೨೫ರಂದು ಉಪ್ಸಾಲದಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ http://www.kids.esdb.bg/celsius.html
- ↑ http://inventors.about.com/od/cstartinventors/a/Anders_Celsius.htm[ಶಾಶ್ವತವಾಗಿ ಮಡಿದ ಕೊಂಡಿ]