ಅಸ್ಸಾಂ ಖನಿಜತೈಲ ಕ್ಷೇತ್ರಗಳು

ವಿಕಿಪೀಡಿಯ ಇಂದ
Jump to navigation Jump to search

ಅಸ್ಸಾಂ ಖನಿಜತೈಲ ಕ್ಷೇತ್ರಗಳು

ಅಸ್ಸಾಂ ಪ್ರಾಂತ್ಯದ ನಾಗಾ ಬೆಟ್ಟಗಳ ಮತ್ತು ಸುರ್ಮಕಣಿವೆಯ ಕೆಲವು ಸ್ಥಳಗಳಲ್ಲಿ ಖನಿಜತೈಲ ದೊರೆಯುತ್ತದೆ. ೧೮೬೬ರಲ್ಲಿ ಮಾಕುಂನಾಮ್‍ಡಂಗ್ ಬಳಿ ತೈಲ ದೊರೆಯುವ ಸ್ಥಳದಲ್ಲಿ ಬಾವಿ ಕೊರೆಯಲು ಪ್ರಾರಂಭವಾಯಿತು (ಖನಿಜತೈಲವನ್ನು ಪಡೆಯಲು ಬಾವಿಗಳನ್ನು ಬೋರ್‍ವೆಲ್‍ಗಳಂತೆ ಯಂತ್ರದಿಂದ ಕೊರೆಯುತ್ತಾರೆ.) ಇಲ್ಲಿ ಒಂದೆರಡು ಬಾವಿಗಳಲ್ಲಿ ಸ್ವಲ್ಪಮಟ್ಟಿಗೆ ತೈಲಸಿಕ್ಕಿದರೂ ಉತ್ಪತ್ತಿ ಅಷ್ಟು ಆಶಾದಾಯಕವಾಗಿರಲಿಲ್ಲ. ಅನಂತರ ಡಿಗ್‍ಬಾಯ್ ಬಳಿ ೧೮೮೯ರಲ್ಲಿ ಬಾವಿ ಕೊರೆಯಲು ಪ್ರಾರಂಭವಾಗಿ, ೧೮೯೦ರಲ್ಲಿ ಮೊಟ್ಟ ಮೊದಲಿಗೆ ತೈಲ ಸಿಕ್ಕಿತು. ಇಲ್ಲಿಯೂ ಮೊದಲು ಉತ್ಪತ್ತಿ ಆಶಾದಾಯಕವಾಗದಿದ್ದರೂ, ಕ್ರಮೇಣ ಈ ಕ್ಷೇತ್ರದ ಭೂರಚನೆಯನ್ನು ಚೆನ್ನಾಗಿ ಪರಿಶೀಲಿಸಿ ಅನೇಕ ಹೊಸ ಬಾವಿಗಳನ್ನು ತೆಗೆದಮೇಲೆ ತೈಲ ದೊರೆವ ಪ್ರಮಾಣ ಹೆಚ್ಚಾಗುತ್ತ ಬಂತು. ಅನಂತರ ಈ ಕ್ಷೇತ್ರದ ಅಭಿವೃದ್ಧಿಯಾಗಿ ಡಿಗ್‍ಬಾಯ್‍ನಲ್ಲಿ ಒಂದು ತೈಲಶೋಧನಾಗಾರದ (ಆಯ್ಲ್‍ರಿ¥sóÉೈನರಿ) ಸ್ಥಾಪನೆಯಾಗಿ ಸುಮಾರು ೬೦ ವರ್ಷಗಳಿಂದಲೂ ಲಾಭದಾಯಕವಾಗಿ ಕಾರ್ಯ ನಡೆದು ಬರುತ್ತಿದೆ.

ನಾಗಾಬೆಟ್ಟಗಳ ಮತ್ತು ಸುರ್ವಕಣಿವೆಯ ಇತರಭಾಗಗಳಲ್ಲೆಲ್ಲ ಅನೇಕ ವರ್ಷ ಪರ್ಯಂತ ತಪಸೀಲಾಗಿ ಭೌತಶಾಸ್ತ್ರದ ರೀತ್ಯಾ ಸರ್ವೆ ನಡೆಸಿ ಹಲವು ಸ್ಥಳಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಅನೇಕಾನೇಕ ಬಾವಿಗಳನ್ನು ತೋಡಿದರೂ ಸರಿಯಾದ ಪ್ರತಿಫಲ ದೊರೆಯಲಿಲ್ಲ. ೧೯೧೫ರಲ್ಲಿ ಬದರ್‍ಪುರ್ ಬಳಿ ಹಾಕಿದ ಬಾವಿಯಲ್ಲಿ ತೈಲವಿರುವ ಸೂಚನೆಗಳು ಕಂಡುಬಂದು ಈ ಕ್ಷೇತ್ರದಲ್ಲಿ ೬೦ ಬಾವಿಗಳನ್ನು ಕೊರೆಯಲಾಯಿತು. ಆದರೆ ಬಾವಿಗಳಲ್ಲಿ ತೈಲ ಕ್ರಮೇಣ ಬತ್ತಿಹೋಗಿ, ೧೯೩೩ರಲ್ಲಿ ಈ ಕ್ಷೇತ್ರವನ್ನು ತ್ಯಜಿಸಬೇಕಾಯಿತು. ಈ ಕ್ಷೇತ್ರದ ೧೮ ವರ್ಷಗಳ ಅವಧಿಯಲ್ಲಿ ಒಟ್ಟು ೩,೨೦,೦೦೦ ಟನ್ ಮಾತ್ರ ತೈಲ ಉತ್ಪತ್ತಿಯಾಗಿ, ಈ ಯೋಜನೆ ಅಷ್ಟಾಗಿ ಲಾಭದಾಯಕವಾಗಿರಲಿಲ್ಲ.

ಅನಂತರ ನಾಗಾಬೆಟ್ಟಗಳ ಉತ್ತರದಲ್ಲಿರುವ ಬ್ರಹ್ಮಪುತ್ರ ನದಿಯ ಬಯಲು ಪ್ರದೇಶದಲ್ಲಿ ಭೂಭೌತಶಾಸ್ತ್ರ ರೀತ್ಯಾ (ಜಿಯೊಫಿûಸಿಕಲ್) ಪರಿಶೀಲನೆ ನಡೆಸಲಾಯಿತು. ಈ ಪ್ರದೇಶದಲ್ಲಿ ಮೆಕ್ಕಲುಮಣ್ಣು ಬಹಳ ಮಂದವಾಗಿದ್ದು ತೈಲ ಸಂಯೋಜಿತ ಶಿಲೆಗಳು ಬಹು ಆಳದಲ್ಲಿ ಅಡಕವಾಗಿದ್ದುವು. ಆದುದರಿಂದ ಇಲ್ಲಿಯೂ ನಾಗಾಬೆಟ್ಟ ಪ್ರದೇಶಗಳಂತೆ ಭೂಮೇಲ್ಮಟ್ಟದ ಶಿಲೆಗಳಲ್ಲಿ, ತೈಲದ ಸೂಚನೆಗಳು ಕಂಡುಬರಲಿಲ್ಲ. ಆಳದಲ್ಲಿ ಗುಪ್ತವಾಗಿರುವ ಶಿಲಾಪ್ರಸ್ತರ ರಚನೆಯನ್ನು ಕಂಡುಹಿಡಿಯಲು ಮತ್ತೆ ಭೂಭೌತಶಾಸ್ತ್ರ ರೀತ್ಯಾ ಪರಶೀಲನೆ ಮಾಡಲಾಗಿ, ಅದರಲ್ಲಿ ಕಂಡುಬಂದ ಸೂಚನೆಗಳನ್ನನುಸರಿಸಿ ಬಾವಿಗಳನ್ನು ಕೊರೆದುದರ ಫಲವಾಗಿ ನಾಹರ್‍ಕಟಿಯಾ, ಮೊರಾನ್, ರುದ್ರಸಾಗರ್ ಮತ್ತು ಲಾಕ್ವಾ ಎಂಬ ಸ್ಥಳಗಳಲ್ಲಿ ತೈಲ ಸಿಕ್ಕಿ, ಈ ಕ್ಷೇತ್ರಗಳು ಈಗ ಹೆಸರುವಾಸಿಯಾಗಿವೆ.

ಅಸ್ಸಾಂ ಪ್ರಾಂತ್ಯದಲ್ಲಿ ತೈಲ ಮುಖ್ಯವಾಗಿ ಮಯೋಸೀನ್ ಕಾಲದ ಟಿಪಂ ಶ್ರೇಣಿಯ ಮರಳು ಶಿಲಾಪ್ರಸ್ತರಗಳಲ್ಲೂ ಮತ್ತು ಒಲಿಗೋಸೀನ್ ಕಾಲದ ಬರೈಲ್ ಶ್ರೇಣಿಯ ಮರಳು ಶಿಲೆಗಳಲ್ಲೂ ಸಿಕ್ಕುತ್ತದೆ. ಈ ಶಿಲಾಪದರಗಳು ಮಡಿಕೆಯಾಗಿ, ಎರಡು ಪಾಶ್ರ್ವಗಳಲ್ಲೂ ಪರಸ್ಪರ ವ್ಯತಿರಿಕ್ತವಾದ ಇಳಿಜಾರು ಹೊಂದಿರುವ ಶಿಲಾ ರಚನೆಯಲ್ಲಿ ತೈಲ ಸಂಗ್ರಹವಾಗಿರುತ್ತದೆ. ಈ ಶಿಲಾರಚನೆಯಿರುವ ಪ್ರದೇಶಗಳಲ್ಲಿ ಬಾವಿಯನ್ನು ಕೊರೆದಾಗ ತೈಲ ಇದ್ದಲ್ಲಿ ತನ್ನಷ್ಟಕ್ಕೆ ತಾನೇ ಮೇಲಕ್ಕೆ ಹರಿದು ಬರುತ್ತದೆ; ಕೆಲವು ಸ್ಥಳಗಳಲ್ಲಿ ಒತ್ತಡ ಕಡಿವೆಯಾಗಿದ್ದು ತೈಲವನ್ನು ಪಂಪುಮಾಡಿ ಮೇಲಕ್ಕೆ ಎತ್ತಬೇಕು. ತೈಲದ ಜತೆ ಅನಿಲವೂ ಸಾಮಾನ್ಯವಾಗಿ ಸೇರಿರುತ್ತದೆ. ಇದನ್ನು ಅನಂತರ ಯಂತ್ರೋಪಕರಣದಿಂದ ಬೇರ್ಪಡಿಸುತ್ತಾರೆ.

ತೈಲಕ್ಷೇತ್ರಗಳ ವಿವರ[ಬದಲಾಯಿಸಿ]

ಡಿಗ್‍ಬಾಯ್[೧] : ಈ ಸ್ಥಳ ಭಾರತದ ಅತ್ಯಂತ ಈಶಾನ್ಯ ಮೂಲೆಯಲ್ಲಿ ನಾಗಾಬೆಟ್ಟಗಳ ಬುಡದಲ್ಲಿರುವ ಟಿಪಂಗುಡ್ಡಸಾಲಿನ ಕೊನೆಯುಲ್ಲಿದೆ. ಪ್ರಪಂಚದ ಅತ್ಯಂತ ಹಳೇ ತೈಲಕ್ಷೇತ್ರಗಳ ಪೈಕಿ ಡಿಗ್‍ಬಾಯ್ ಕ್ಷೇತ್ರವೂ ಒಂದು. ಇದು ಅಸ್ಸಾಂ ಆಯಿಲ್ ಕಂಪನಿ ಲಿಮಿಟೆಡ್‍ಗೆ ಸೇರಿದೆ. ಭೂವಿಜ್ಞಾನ ರೀತ್ಯಾ ಈ ಕ್ಷೇತ್ರ ಒಂದು ಉದ್ದವಾದ ಆಂಟಿಕ್ಲೈನ್ ಮೇಲಿದೆ. ಈ ಆಂಟಿಕ್ಲೈನ್ ಸುಮಾರು ೧೩ ಕಿ.ಮೀ. ಉದ್ದ ಪ್ರಸರಿಸಿ ಗುಂಭದಂತಿದೆ. ಶಿಲಾಪದರಗಳು ಚೂಪಾಗಿ ಮಡಿಸಲ್ಪಟ್ಟು ಪಾಶ್ರ್ವಗಳು ಅಸಮಾನವಾದ ಇಳಿಜಾರನ್ನು ಹೊಂದಿವೆ. ಉತ್ತರಪಾಶ್ರ್ವ ಕಡಿದಾಗಿ, ನಾಗಾಥ್ರಸ್ಟ್‍ನಿಂದ ಭಂಗವಾಗಿಯೂ ದಕ್ಷಿಣಪಾಶ್ರ್ವ ಸುಮಾರು ೨೦೦ — ೨೫೦ ಇಳಿಜಾರಾಗಿಯೂ ಇವೆ. ತೈಲ ಸುಮಾರು ೧೦೦೦ ಮೀಟರ್ ಮಂದವಾದ ಮರಳುಶಿಲೆಗಳಲ್ಲಿ ಅಡಕವಾಗಿದೆ. ಇಲ್ಲಿನ ಶಿಲೆಗಳು ಟಿಪಂ ಶ್ರೇಣಿಗೆ ಸೇರಿದವು. ಈ ಕ್ಷೇತ್ರದಲ್ಲಿ ೧೮೯೦ರಲ್ಲೇ ತೈಲ ಸಿಕ್ಕಿದರೂ ಮೊದಲು ೩೦ ವರ್ಷಗಳಲ್ಲಿ ಉತ್ಪತ್ತಿ ಕಡಿಮೆ ಪ್ರಮಾಣದಲ್ಲಿತ್ತು. ೧೯೧೭ರಲ್ಲಿ ಉತ್ಪತ್ತಿಯಾದ ೨೪೦೦೦ ಟನ್ ತೈಲ ಈ ವರ್ಷಗಳಲ್ಲಿ ಪಡೆದ ಪರಮಾವಧಿ ವಾರ್ಷಿಕ ಉತ್ಪತ್ತಿಯಾಗಿತ್ತು. ಆಗಿನ ಬಾವಿಗಳು ಹೆಚ್ಚು ಆಳವಿರಲಿಲ್ಲ. ಆಂಟಿಕ್ಲೈನ್‍ನ ಶಿಖರದ ಮೇಲೆ ಎದ್ದು ಕಾಣುವ ಶಿಲಾಪ್ರಸ್ತರಗಳಲ್ಲಿ ಬಾವಿಗಳು ಕೊರೆಯಲ್ಪಟ್ಟಿದ್ದವು. ಅನಂತರ ಭೂರಚನೆಯನ್ನು ಚೆನ್ನಾಗಿ ತಿಳಿದು ಆಳವಾಗಿ ಕೊರೆದಾಗ ತೈಲವುಳ್ಳ ಇತರ ಮರಳು ಶಿಲೆಗಳು ಕಂಡುಬಂದುವು. ಅನಂತರ ನೂರಾರು ಬಾವಿಗಳನ್ನು ಹಾಕಲು ಈ ಕ್ಷೇತ್ರದಲ್ಲಿ ಉತ್ಪತ್ತಿ ಅಧಿಕವಾಗಿ ವರ್ಷೇ ವರ್ಷೇ ೨,೦೦,೦೦೦ - ೨,೫೦,೦೦೦ ಟನ್ ತೈಲ ಬಂದಿತು. ಸುಮಾರು ೪೦ ವರ್ಷಗಳಿಂದಲೂ ಈ ವಾರ್ಷಿಕ ಉತ್ಪತ್ತಿ ಬರುತ್ತಿದೆ; ೧೯೬೪ ರವರೆಗೆ ಒಟ್ಟು ೯೦,೦೦,೦೦೦ ಟನ್ ತೈಲ ಉತ್ಪತ್ತಿಯಾಗಿದೆ. ಇದುವರೆಗೂ ಹೆಚ್ಚುಕಡಿಮೆ ೧೦೦೦ ಬಾವಿಗಳು ಕೊರೆಯಲ್ಪಟ್ಟಿವೆ. ಆದರೆ ಬಹುಸಂಖ್ಯಾತ ಬಾವಿಗಳಲ್ಲಿ ತೈಲ ಮುಗಿದು, ಈಗ ಸುಮಾರು ೪೦೦ ಬಾವಿಗಳಲ್ಲಿ ಮಾತ್ರ ತೈಲಬರುತ್ತಿದೆ; ಅವುಗಳ ಪೈಕಿ ೩೦ ಬಾವಿಗಳಲ್ಲೇ ಈಚಿನ ಉತ್ಪತ್ತಿಯ ಬಹುಭಾಗ ದೊರೆಯುತ್ತಿದೆ. ಶಿಲಾ ಪ್ರಸ್ತರಗಳಲ್ಲಿನ ಅನಿಲಗಳ ಒತ್ತಡದಿಂದ ತೈಲ ಬಾವಿಗಳಲ್ಲಿ ನೆಲದಮೇಲಕ್ಕೆ ತಾನಾಗಿ ಉಕ್ಕಿಬರುತ್ತದೆ. ಹಾಗೆ ತಾನಾಗಿ ಉಕ್ಕಿಬರದಿರುವ ಬಾವಿಗಳಿಗೆ ಹೊರಗಿನಿಂದ ಅನಿಲವನ್ನು ಯಂತ್ರಗಳ ಮೂಲಕ ಅಧಿಕ ಸಂಮರ್ದದಲ್ಲಿ ಶಿಲಾಪ್ರಸ್ತರದೊಳಕ್ಕೆ ಕಳುಹಿಸಿದಾಗ ತೈಲ ಮೇಲೆ ಬರುತ್ತದೆ. ಕೆಲವು ಬಾವಿಗಳಲ್ಲಿ ಪಂಪ್ ಮಾಡಿಯೇ ತೈಲವನ್ನು ಮೇಲಕ್ಕೆ ಎತ್ತಬೇಕು. ಒಳ್ಳೆ ಬಾವಿಗಳಲ್ಲಿ ದಿನಕ್ಕೆ ೧೦೦ — ೧೫೦ ಕಿಲೋಲೀಟರ್‍ಗಳಷ್ಟು ತೈಲ ಬರುತ್ತದೆ; ಆದರೆ ಬಹುಸಂಖ್ಯಾತ ಬಾವಿಗಳಲ್ಲಿ ದೈನಿಕ ಉತ್ಪತ್ತಿ ೪೦ ಕಿ. ಲೀ. ನಷ್ಟು ಇರುತ್ತದೆ.

ಬಾವಿಗಳಿಂದ ಬರುವ ಅಶುದ್ಧ ತೈಲವನ್ನು ಸ್ವಚ್ಛಮಾಡಲು ಅಸ್ಸಾಂ ಆಯಿಲ್ ಕಂಪೆನಿಯವರು ಡಿಗ್‍ಬಾಯ್‍ನಲ್ಲೇ ಒಂದು ರಿ¥sóÉೈನರಿಯನ್ನು ಸ್ಥಾಪಿಸಿದ್ದಾರೆ. ಮೊದಲು ಈ ರಿ¥sóÉೈನರಿಯಲ್ಲಿ ವರ್ಷಕ್ಕೆ ೨೮೦೦೦ ಟನ್‍ಗಳಷ್ಟು ತೈಲವನ್ನು ಸ್ವಚ್ಛಮಾಡುವುದಕ್ಕಾಗುತ್ತಿತ್ತು. ಆಗ ಇಷ್ಟು ಪ್ರಮಾಣದಲ್ಲಿ ಸಹ ತೈಲ ಸಿಕ್ಕುತ್ತಿರಲಿಲ್ಲ. ಅನಂತರ ತೈಲ ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾದಂತೆ ರಿ¥sóÉೈನರಿಯ ಪರಿಮಾಣವನ್ನು ಹೆಚ್ಚಿಸಲಾಯಿತು. ಮತ್ತು ಸುಮಾರು ೧೦ ವರ್ಷಗಳಿಂದ ನಾಹರ್‍ಕಟಿಯಾ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ತೈಲದಲ್ಲಿ ಸ್ವಲ್ಪಭಾಗವನ್ನು ಕೊಳವೆ ಮೂಲಕ ಸಾಗಿಸಿ ಡಿಗ್‍ಬಾಯ್ ಶೋಧನಾಗಾರದಲ್ಲಿ ಸ್ವಚ್ಛಮಾಡಲಾಗುತ್ತಿದೆ. ಅಂತೂ ಈಗ ಈ ಶೋಧನಾಗಾರದಲ್ಲಿ ವರ್ಷಕ್ಕೆ ೫೦೦೦೦೦ ಟನ್‍ಗಳಷ್ಟು ತೈಲ ಶುದ್ಧಿ ಮಾಡುತ್ತಿದ್ದಾರೆ.

ಡಿಗ್‍ಬಾಯ್ ಕ್ಷೇತ್ರದ ಅಶುದ್ಧ ತೈಲದ ಸಾಪೇಕ್ಷಸಾಂದ್ರತೆ ಸುಮಾರು ೦.೮೫ ಇದೆ. ರಿಫ಼ೈನರಿಯಲ್ಲಿ ಈ ಅಶುದ್ಧ ತೈಲದಿಂದ ೨೩% ಮೋಟಾರ್ ಸ್ಪಿರಿಟ್, ೨೨% ಸೀಮೆ ಎಣ್ಣೆ[೨], ೧೩% ಡೀಸಲ್ ಆಯಿಲ್, ೧೧% ಫ್ಯೂಯಲ್ ಆಯಿಲ್ ಮತ್ತು ೧೦% ಮೇಣ, ೧೯% ಇತರ ವಿವಿಧ ಸಾಮಾಗ್ರಿಗಳು ತೆಗೆಯಲ್ಪಡುತ್ತವೆ; ಉಳಿದ ೨% ಮಾತ್ರ ನಷ್ಟವಾಗುತ್ತದೆ. ಈಗ ಸುಮಾರು ೬೦ ವರ್ಷಗಳಿಂದಲೂ ಡಿಗ್‍ಬಾಯ್ ಕ್ಷೇತ್ರ ಮತ್ತು ರಿಫ಼ೈನರಿಯಲ್ಲಿ ಅವಿಚ್ಛಿನ್ನವಾಗಿ ಕಾರ್ಯಕ್ರಮ ನಡೆದು ಬಂದು ಡಿಗ್‍ಬಾಯ್ ಒಂದು ಹೆಸರುವಾಸಿಯಾದ ಪಟ್ಟಣವಾಗಿದೆ. ಅನೇಕ ಬಾವಿಗಳಲ್ಲಿ ಹಿಂದೆ ತೈಲಬತ್ತಿದಂತೆ ಕಂಡುಬಂದಿದ್ದರೂ ಇತ್ತೀಚೆಗೆ ಶಿಲೆಗಳಲ್ಲಿ ಬಿರುಕುಬಿಡಿಸುವುದು (ಫಾರ್‍ಮೇಷನ್ ಫ್ರ್ಯಾಕ್‍ಚರಿಂಗ್) ಅಥವಾ ಅಗ್ನಿಪ್ರವಹಿಸುವುದು (ಫೈರ್‍ಫ್ಲಡಿಂಗ್) ಮುಂತಾದ ನೂತನವಿಧಾನಗಳನ್ನು ಪ್ರಯೋಗಿಸಿ ಕೆಲವು ಬಾವಿಗಳನ್ನು ಸಜೀವಗೊಳಿಸಿ ತೈಲಪಡೆಯುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಉತ್ಪತ್ತಿ ಇನ್ನೂ ಅನೇಕ ವರ್ಷಗಳು ಲಾಭದಾಯಕವಾಗಿ ನಡೆದು ಬರುವ ನಿರೀಕ್ಷೆಯಿದೆ.[೩] [೪]

ನಾಹರ್‍ಕಟಿಯಾ[೫] : ಅಸ್ಸಾಂನಲ್ಲಿ ಈಗ ಇದು ಮುಖ್ಯ ಕ್ಷೇತ್ರವಾಗಿದೆ. ಇದು ಡಿಗ್‍ಬಾಯ್‍ಗೆ ೪೦ ಕಿ.ಮೀ. ನೈಋತ್ಯಕ್ಕೆ ಬ್ರಹ್ಮಪುತ್ರ ಬಯಲಿನಲ್ಲಿ ದಿಹಿಂಗ್‍ ನದಿಯ ದಡದಲ್ಲಿದೆ. ಈ ಕ್ಷೇತ್ರ ಅಸ್ಸಾಂ ಆಯಿಲ್ ಕಂಪನಿ ಮತ್ತು ಇಂಡಿಯ ಸರ್ಕಾರಗಳ ಸಮಭಾಗವುಳ್ಳ ಆಯಿಲ್ ಇಂಡಿಯಾ ಲಿಮಿಟೆಡ್ ಕಂಪನಿಗೆ ಸೇರಿದೆ.

ಹಿಮಾಲಯಪರ್ವತ ಮತ್ತು ನಾಗಾಬೆಟ್ಟಗಳ ಮಧ್ಯೆ ಇರುವ ಬ್ರಹ್ಮಪುತ್ರ ಬಯಲಿನಲ್ಲಿ ಮೆಕ್ಕಲುಮಣ್ಣು ಸುಮಾರು ೧೦೦೦ — ೧೫೦೦ ಮೀಟರ್‍ಗಳಷ್ಟು ಮಂದವಾಗಿದೆ. ಶಿಲೆಗಳೆಲ್ಲಾ ಈ ಮೆಕ್ಕಲುಮಣ್ಣಿನಿಂದ ಮುಚ್ಚಿಹೋಗಿ ಆಳದಲ್ಲಿ ಗುಪ್ತವಾಗಿವೆ. ಅಸ್ಸಾಂ ಆಯಿಲ್ ಕಂಪನಿಯವರು ೧೯೨೫ರಲ್ಲಿ ಭೂಮ್ಯಾಕರ್ಷಣ ವಿಧಾನ(ಗ್ರ್ಯಾವಿಟೇಷನಲ್ ಸರ್ವೆ) ಪರಿಶೀಲನೆ ನಡೆಸಿದಾಗ ನಾಹರ್‍ಕಟಿಯಾ ಬಳಿ ಶಿಲಾ ರಚನೆ ಉಬ್ಬಾಗಿರುವ ಸೂಚನೆ ಕಂಡುಬಂದಿತು. ಆಗ ಇನ್ನೂ ಭೂಭೌತಶಾಸ್ತ್ರದ ಪರಿಶೋಧನೆಗಳು ಬಾಲ್ಯಾವಸ್ಥೆಯಲ್ಲಿದ್ದವು. ಅನಂತರ ೧೯೩೭ರಲ್ಲಿ ಭೂಕಂಪನವಿಧಾನ ಸಮೀಕ್ಷೆ (ಸೈಸ್ಮಿಕ್ ಸರ್ವೆ) ನಡೆಸಿದಾಗ ನಾಹರ್‍ಕಟಿಯಾ ಬಳಿ ಶಿಲಾರಚನೆ ಆಂಟಿಕ್ಲೈನ್‍ನಂತೆ ಇರುವ ಸೂಚನೆ ದೊರಕಿತು. ಈ ರಚನೆ ಸುಮಾರು ೩೦೦೦ ವಿೂಟರ್ ಆಳದಲ್ಲಿದೆಯೆಂದು ಅಂದಾಜಾಗಿತ್ತು. ಇಷ್ಟು ಆಳದ ಬಾವಿಯನ್ನು ಕೊರೆಯಲು ಯೋಜನೆ ತಯಾರಿಸುವ ವೇಳೆಗೆ, ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿ, ಕಾರ್ಯ ಕೈಗೊಳ್ಳಲಾಗಲಿಲ್ಲ. ಅನಂತರ ೧೯೫೨ರಲ್ಲಿ ನಾಹರ್‍ಕಟಿಯಾದಲ್ಲಿ ಮೊದಲನೆಯ ಬಾವಿಯನ್ನು ಕೊರೆಯಲು ಪ್ರಾರಂಭವಾಯಿತು; ೧೯೫೩ರಲ್ಲಿ ಈ ಬಾವಿಯಲ್ಲಿ ಸುಮಾರು ೯೦೦೦' ಆಳದಲ್ಲಿ ತೈಲಸಿಕ್ಕಿತು. ತೈಲ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗಿ ಲಾಭದಾಯಕವಾಗಿ ಕಂಡುಬಂದು ಈ ಕ್ಷೇತ್ರದಲ್ಲಿ ಕಾರ್ಯಕ್ರಮ ವಿಸ್ತಾರಗೊಂಡಿತ್ತು. ಇದುವರೆಗೂ ೧೪೦ ಬಾವಿಗಳನ್ನು ಕೊರೆಯಲಾಗಿದೆ. ೮ — ೧೦ ಬಾವಿಗಳ ವಿನಾ ಬಾಕಿಯವುಗಳಲ್ಲೆಲ್ಲ ತೈಲ ಸಿಕ್ಕಿದೆ; ಕೆಲವು ಬಾವಿಗಳಲ್ಲಿ ಅನಿಲಮಾತ್ರ ಸಿಕ್ಕಿದೆ. ಎಲ್ಲ ಬಾವಿಗಳ ತೈಲ ಮತ್ತು ಅನಿಲ ತಾನಾಗಿಯೇ ಮೇಲಕ್ಕೆ ಹರಿದುಬರುತ್ತದೆ.

ನಾಹರ್‍ಕಟಿಯಾ ಶಿಲಾರಚನೆ ಡಿಗ್‍ಬಾಯ್ ಕ್ಷೇತ್ರದ ಆಂಟಿಕ್ಲೈನ್‍ನಂತೆ ಚೂಪಾಗಿ ಮಡಿಸಲ್ಪಟ್ಟಿಲ್ಲ; ನಾಹರ್‍ಕಟಿಯಾ ಆಂಟಿಕ್ಲೈನ್ ವಿಶಾಲವಾಗಿ, ಹೆಚ್ಚು ಇಳಿಜಾರಿಲ್ಲದೆ ಸಾಮಾನ್ಯವಾಗಿ ಮಟ್ಟಸವಾಗಿದೆ. ತೈಲ ಮುಖ್ಯವಾಗಿ ಬರೈಲ್ ಶ್ರೇಣಿಯ ಶಿಲೆಗಳಲ್ಲಿದೆ. ಈ ಕ್ಷೇತ್ರದ ಶಿಲೆಗಳಲ್ಲಿ ವ್ಯಾಸ್ಯತೆ (ಪರ್ಮಿಯೆಬಿಲಿಟಿ) ಡಿಗ್‍ಬಾಯ್ ಕ್ಷೇತ್ರದ ಶಿಲೆಗಳಲ್ಲಿರುವುದಕ್ಕಿಂತ ಉತ್ತಮವಾಗಿದೆ; ತೈಲವೂ ಅಲ್ಲಿನಷ್ಟು ಮಂದವಾಗಿಲ್ಲ. ಇಲ್ಲಿನ ಕೆಲವು ಬಾವಿಗಳಲ್ಲಿ ದಿನವಹಿ ೨೦೦೦ ಬ್ಯಾರಲ್ ತೈಲ ಉತ್ಪತ್ತಿಯಾಗುತ್ತದೆ. ಆದರೆ ಬಹುಸಂಖ್ಯಾತ ಬಾವಿಗಳಲ್ಲಿ ದಿನವಹಿ ೩೦೦ರಿಂದ ೭೦೦ ಬ್ಯಾರಲ್ ಮಾತ್ರ ಪಡೆಯಬಹುದು. ಬಾವಿಗಳಿಂದ ಉತ್ಪತ್ತಿಯಾದ ತೈಲ ಒಂದೇತರಹ ಸಂಯೋಜನೆಯದಲ್ಲ—ಕೊಂಚಭಾಗ ಹೆಚ್ಚು ಮೇಣಂಶದಿಂದ ಕೂಡಿ ಸಾಪೇಕ್ಷಸಾಂದ್ರತೆ ೦.೮೬ ಉಳ್ಳದ್ದಾಗಿರುವುದು. ಇತರಭಾಗ ಕಡಿಮೆಮೇಣಂಶದ್ದಾಗಿ, ಸಾಪೇಕ್ಷಸಾಂದ್ರತೆ ೦.೯೩ ಇರುತ್ತದೆ. ಒಟ್ಟಿನಲ್ಲಿ ತೈಲದ ಸಂಯೋಜನೆ ಹೆಚ್ಚುಕಡಿಮೆ ಡಿಗ್‍ಬಾಯ್‍ನ ತೈಲದಂತೆಯೆ ಇದೆ. ನಾಹರ್‍ಕಟಿಯಾ ಕ್ಷೇತ್ರದಲ್ಲಿ ಸಾಲಿಯಾನ ೨೫೦೦೦೦೦ — ೩೦೦೦೦೦೦ ಟನ್‍ನಷ್ಟು ತೈಲವನ್ನು, ಕನಿಷ್ಠ ಪಕ್ಷ ೨೦ ವರ್ಷ ಪರ್ಯಂತರ ಪಡೆಯಬಹುದೆಂದು ಅಂದಾಜಾಗಿದೆ. ಇದರ ಜೊತೆಗೆ ದಿನವಹಿ ೧೫೦೦೦೦೦ ಘನವಿೂಟರ್‍ಗಳು ಅನಿಲವನ್ನೂ ಪಡೆಯಬಹುದು. ಈ ಕ್ಷೇತ್ರದ ಆಡಳಿತಗಳನ್ನು ನಿರ್ವಹಿಸಲು ಸವಿೂಪದಲ್ಲಿರುವ ದೂಲಿಯಜಾನ್ ರೈಲು ನಿಲ್ದಾಣದ ಬಳಿ ಒಂದು ಶಿಬಿರ (ಕಾಲೊನಿ) ಸ್ಥಾಪಿತವಾಗಿ ದೂಲಿಯಜಾನ್ ಈಗ ಒಂದು ನವೀನಪಟ್ಟಣವಾಗಿದೆ.

Petroleum field at Moreni.jpg

ಮೊರಾನ್ : ಈ ಕ್ಷೇತ್ರ ನಾಹರ್‍ಕಟಿಯಾಕ್ಕೆ ೪೦ ಕಿ.ಮೀ. ಪಶ್ಚಿಮ-ನೈಋತ್ಯ ಮಧ್ಯಕೋಣದಲ್ಲಿದೆ. ಇಲ್ಲಿ ೧೯೫೬ರಲ್ಲಿ ತೈಲಸಿಕ್ಕಿತು. ಇಲ್ಲಿನ ಆಂಟಿಕ್ಲೈನ್ ನಾಹರ್‍ಕಟಿಯಾದ್ದಕ್ಕಿಂತ 500 ಮೀ. ಹೆಚ್ಚು ಆಳದಲ್ಲಿದೆ. ತೈಲ ನಾಮಸಾಂಗ್ ಶ್ರೇಣಿಯ—ಅಂದರೆ ಟಿಪಂ ಶಿಲೆಗಳ ಕಾಲದ ಅನಂತರ ಸಂಗ್ರಹವಾದ ಮರಳುಶಿಲೆಗಳಲ್ಲಿದೆ. ಇಲ್ಲಿಯೂ ಪ್ರಸ್ತರಭಂಗಗಳು ಹೆಚ್ಚಾಗಿದ್ದು ಶಿಲಾರಚನೆ ಕ್ಲಿಷ್ಟತರವಾಗಿದೆ. ಇದುವರೆಗೆ ೨೯ ಬಾವಿಗಳನ್ನು ತೋಡಲಾಗಿದೆ. ಅವುಗಳ ಪೈಕಿ ೭ ಖಾಲಿ; ಬಾಕಿಯವುಗಳಲ್ಲೂ ತೈಲ ಉತ್ಪತ್ತಿ ನಾಹರ್‍ಕಟಿಯಾಕ್ಕಿಂತ ಕಡಿಮೆ ಪರಿಮಾಣ. ಇಲ್ಲಿಯೂ ತೈಲ ಎಲ್ಲ ಬಾವಿಗಳಲ್ಲೂ ಮೇಲಕ್ಕೆ ತಾನಾಗಿಯೆ ಉಕ್ಕಿ ಬರುತ್ತಿದೆ. ತೈಲದ ವಸ್ತುರಚನೆ ಹೆಚ್ಚುಕಡಿಮೆ ನಾಹರ್‍ಕಟಿಯಾ ತೈಲದಂತೇ ಇದೆ. ಸಾಪೇಕ್ಷಸಾಂದ್ರತೆ ೦.೮೫. ನಾಹರ್‍ಕಟಿಯಾ ಮತ್ತು ಮೊರಾನ್ ಕ್ಷೇತ್ರಗಳಲ್ಲಿ ಉತ್ಪತ್ತಿಯಾದ ತೈಲವನ್ನು ೧೦ ವ್ಯಾಸವುಳ್ಳ ನಲ್ಲಿಗಳ ಮೂಲಕ ಗೌಹತಿ ಬಳಿ ಸ್ಥಾಪಿಸಿರುವ ನೂನಮತಿ ಶೋಧನಾಗಾರಕ್ಕೂ ಬಿಹಾರ್‍ ಪ್ರಾಂತ್ಯದಲ್ಲಿ ಸ್ಥಾಪಿಸಿರುವ ಶೋಧನಾಗಾರಕ್ಕೂ ರವಾನಿಸಲ್ಪಟ್ಟು ಪರಿಶುದ್ಧಗೊಳಿಸಿಸಲ್ಪಡುತ್ತದೆ. ಈ ಶೋಧನಾಗಾರಗಳನ್ನು ಭಾರತ ಸರ್ಕಾರ ಸ್ಥಾಪಿಸಿದೆ. ನಾಹರ್‍ಕಟಿಯಾದಿಂದ ಮೊರಾನ್ ಮತ್ತು ನೂನಮತಿ ಮಾರ್ಗವಾಗಿ ಬ್ರಹ್ಮಪುತ್ರ ನದಿ ದಾಟಿ ಬರೌನಿವರೆಗೂ ಸುಮಾರು ೧೨೦೦ ಕಿ.ಮೀ. ಉದ್ದದ ಕೊಳವೆಗಳನ್ನು ೪೫ ಕೋಟಿ ರೂಪಾಯಿ ಖರ್ಚಿನಲ್ಲಿ ಹಾಕಲಾಗಿದೆ. ಬಾವಿಗಳಿಂದ ಬಂದ ತೈಲಗಳನ್ನು ಬೆರೆಸಿ ಅವುಗಳಲ್ಲಿ ಸಮ್ಮಿಳಿತವಾಗಿರುವ ಅನಿಲವನ್ನು ಬೇರ್ಪಡಿಸಿ, ಅನಂತರ ಸ್ವಲ್ಪ ಮಟ್ಟಿಗೆ ಶಾಖಮಾಡಿ ನಲ್ಲಿಯಲ್ಲಿ ಸುಲಭವಾಗಿ ಪ್ರವಹಿಸುಂತೆ ದ್ರವರೂಪಮಾಡಲು ಯಂತ್ರಗಳನ್ನು ನಾಹರ್‍ಕಟಿಯಾ ಮತ್ತು ಮೊರಾನ್ ಕ್ಷೇತ್ರಗಳಲ್ಲಿ ಸ್ಥಾಪಿಸಿದ್ದಾರೆ. ಇದಲ್ಲದೆ ಈ ಕೊಳವೆಗಳಲ್ಲಿ ಕೆಲವುಕಡೆ ಯಂತ್ರೋಪಕರಣಗಳಿಂದ ಒತ್ತಡಮಾಡಿ ತೈಲ ಅಷ್ಟು ಅಪಾರದೂರ ಸುಸೂತ್ರವಾಗಿ ಸಾಗಿಬರುವಂತೆ ಏರ್ಪಾಡು ಮಾಡಿದ್ದಾರೆ. ಈ ಕ್ಷೇತ್ರಗಳಲ್ಲಿ ಕೆಲವು ಬಾವಿಗಳಲ್ಲಿ ಉತ್ಪತ್ತಿಯಾಗುವ ಅನಿಲ ಮತ್ತು ತೈಲಗಳಲ್ಲಿ ಸಮ್ಮಿಳಿತವಾಗಿದ್ದು ಬೇರ್ಪಡಿಸಿದ ಅನಿಲ-ಇವನ್ನು ಅಸ್ಸಾಂ ಪ್ರಾಂತ್ಯದಲ್ಲೇ ಉಪಯೋಗಿಸುವ ಏರ್ಪಾಡು ಮಾಡಿದ್ದಾರೆ. ಇದರಿಂದ ನಾಮ್‍ರೂಪ್ ಬಳಿ ವಿದ್ಯುಚ್ಛಕ್ತಿ ಪಡೆಯುವ ಕಾರ್ಯಾಗಾರ ಹಾಗೂ ರಾಸಾಯನಿಕ ಗೊಬ್ಬರ ಮತ್ತಿತರ ಸಾಮಗ್ರಿಗಳ ತಯಾರಿಕೆಯಲ್ಲಿ ಕಾರ್ಖಾನೆಗಳು ಸ್ಥಾಪಿತವಾಗಿವೆ.

ರುದ್ರಸಾಗರ್ : ಈ ಕ್ಷೇತ್ರ ಮತ್ತು ಈ ಕೆಳಗೆ ನಮೂದಿಸಿರುವ ಲಾಕ್ವಾಕ್ಷೇತ್ರ ಭಾರತ ಸರ್ಕಾರದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್‍ಗೆ ಸೇರಿವೆ. ರುದ್ರಸಾಗರ್ ಮೊರಾನ್ ಕ್ಷೇತ್ರಕ್ಕೆ ೪೦ ಕಿ.ಮೀ . ನೈಋತ್ಯದಲ್ಲಿ, ಶಿಬ್‍ಸಾಗರ್ ಸಮೀಪದಲ್ಲಿದೆ. ಇಲ್ಲಿ ಹಾಕಿದ ಮೊದಲನೆಯ ಬಾವಿಯಲ್ಲಿ ೧೯೬೧ರಲ್ಲಿ ತೈಲ ಸಿಕ್ಕಿತು. ತೈಲ ಮುಖ್ಯವಾಗಿ ಬರೈಲ್‍ಶ್ರೇಣಿ ಶಿಲೆಗಳಲ್ಲೂ ಕೊಂಚ ಭಾಗ ಟಿಪಂಶ್ರೇಣಿಯ ಶಿಲೆಗಳಲ್ಲೂ ಸಿಕ್ಕುತ್ತದೆ. ಇಲ್ಲಿನ ಶಿಲಾರಚನೆ ಹೆಚ್ಚು ಇಳಿಜಾರುಗಳಿಲ್ಲದ ಗುಂಭಾಕಾರವಾಗಿದೆ. ಬಾವಿಗಳು ಸುಮಾರು ೩೫೦೦ ಮೀ ಆಳದವರೆಗೂ ಕೊರೆಯಲ್ಪಟ್ಟಿವೆ. ಇದುವರೆವಿಗೂ 8 ಬಾವಿಗಳು ಹಾಕಲ್ಪಟ್ಟಿವೆ; ಅವುಗಳಲ್ಲಿ ನಾಲ್ಕರಲ್ಲಿ ತೈಲ ಉತ್ಪತ್ತಿ ನಿಗದಿಯಾಗಿದೆ. ತೈಲ ಸಾಮಾನ್ಯವಾಗಿ ಮೊರಾನ್ ಕ್ಷೇತ್ರದಂತೆ ಇದೆ.

ಭಾರತ ಸರ್ಕಾರದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್ ಭೂಭೌತಶಾಸ್ತ್ರ ರೀತ್ಯಾ ಪರಿಶೀಲನೆ ನಡೆಸಿ ರುದ್ರಸಾಗರ್ ಅಲ್ಲದೆ ಇತರ ಕೆಲವು ಸ್ಥಳಗಳಲ್ಲಿ ಆಂಟಿಕ್ಲೈನ್ ಶಿಲಾರಚನೆಗಳನ್ನು ಕಂಡುಹಿಡಿದಿದ್ದಾರೆ. ಈ ರಚನೆಗಳ ಪೈಕಿ ಲಾಕ್ವಾ ಎಂಬ ಸ್ಥಳದಲ್ಲಿ ತೈಲ ಸಿಕ್ಕಿದೆ.

ಲಾಕ್ವಾ : ಇದು ಮೊರಾನ್‍ಗೆ ೨೦ ಕಿ.ವಿೂ. ದಕ್ಷಿಣ ನೈಋತ್ಯ ಮೂಲೆಯಲ್ಲಿದೆ. ಇಲ್ಲಿನ ಆಂಟಿಕ್ಲೈನ್ ಮೊರಾನ್ ಮತ್ತು ರುದ್ರಸಾಗರ್‍ಗಳ ಶಿಲಾರಚನೆಗಿಂತ ವಿಸ್ತಾರವಾಗಿಯೂ ಹೆಚ್ಚು ಎತ್ತರವುಳ್ಳದ್ದಾಗಿಯೂ ಇದೆ. ೧೯೬೩ರಲ್ಲಿ ಹಾಕಿದ ಮೊದಲನೆ ಬಾವಿಯಲ್ಲಿ ತೈಲ ಸಿಕ್ಕಿದೆ. ಟಿಪಂಶ್ರೇಣಿಯ ಅನೇಕ ಮರಳುಶಿಲಾ ಪ್ರಸ್ತರಗಳಿಂದಲೂ ಬರೈಲ್‍ಶ್ರೇಣಿಯ ಅನೇಕ ಮರಳು ಶಿಲಾಪ್ರಸ್ತರಗಳಿಂದಲೂ ತೈಲ ಪಡೆಯಬಹುದೆಂದು ಗೊತ್ತಾಗಿದೆ.

ರುದ್ರಸಾಗರ್ ಮತ್ತು ಲಾಕ್ವಾ ಕ್ಷೇತ್ರಗಳಲ್ಲಿ ಅಭಿವೃದ್ಧಿಕಾರ್ಯ ಇನ್ನೂ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ತೈಲ ಉತ್ಪತ್ತಿ ಪ್ರಮಾಣ ನಿಗದಿಮಾಡಲು ಕಾರ್ಯಕ್ರಮಗಳು ಮುಂದುವರಿಯುತ್ತಿವೆ.

ಈ ಮೇಲೆ ವಿವರಿಸಲ್ಪಟ್ಟ ಕ್ಷೇತ್ರಗಳಲೆಲ್ಲ ಬ್ರಹ್ಮಪುತ್ರಾ ನದಿಯ ಎಡಪಾಶ್ರ್ವದಲ್ಲಿವೆ. ಬಲಭಾಗದ ಮೆಕ್ಕಲು ಬಯಲಿನಲ್ಲಿ ತೈಲಾನ್ವೇಷಣಕಾರ್ಯ ಇನ್ನೂ ನಡೆದಿಲ್ಲ.

ಆಯಿಲ್‍ಏಷ್ಯಾ ೧೯೯೩ರಲ್ಲಿ ವರದಿಮಾಡಿದಂತೆ ಲಕ್ವಾದಲ್ಲಿ ೬೭೦ ಮಿಲಿಯನ್‍ಬ್ಯಾರೆಲ್ ತೈಲ, ರುದ್ರಸಾಗರ ೩೩೫ ಬ್ತಾರೆಲ್ ತೈಲ, ನಹೋರ್‍ಕಾಟಿಯಾ ೨೦೦ ಮಿಲಿಯನ್ ಬ್ಯಾರೆಲ್ ತೈಲ ಜೋರಜನ್ ೧೦೦ ಮಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪ ಪ್ರಮಾಣವನ್ನು ಹೊಂದಿವೆ. [೬]

(ಎಂ.ಬಿ.ಆರ್.)

ಉಲ್ಲೇಖಗಳು[ಬದಲಾಯಿಸಿ]