ವಿಷಯಕ್ಕೆ ಹೋಗು

ಅಸ್ಥಿಕವಚದ ಮೀನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸ್ಥಿಕವಚದ ಮೀನು

ಅಸ್ಥಿಕವಚದ ಮೀನುಗಳು ಆದಿ ಮೀನುಗಳ ಗುಂಪಿಗೆ ಸೇರಿದ ಜಲಚರಗಳು (ಆಸ್‍ಟ್ರಾಕೊಡರ್ಮ). ಇವುಗಳ ಪಳೆಯುಳಿಕೆಗಳು ಜೀವಿಗಳ ಇತಿಹಾಸದ ಪ್ರಾಚೀನ ಜೀವಕಲ್ಪದ ಸೈಲೂರಿಯನ್ ಮತ್ತು ಡೆವೋನಿಯನ್ ಯುಗಗಳ ವೈಶಿಷ್ಟ್ಯಗಳಾಗಿವೆ. ಪ್ರಾಚೀನ ಕಶೇರುಕ ಪ್ರಾಣಿಗಳಲ್ಲೆಲ್ಲ ಈ ಜೀವಿಗಳ ಪಳೆಯುಳಿಕೆಗಳು ಉತ್ತಮಸ್ಥಿತಿಯಲ್ಲಿ ಉಳಿದುಕೊಂಡು ಬಂದಿವೆ. ನಿರ್ದಿಷ್ಟವಾದ ಬೆನ್ನು ಹುರಿಗಳು ಇಲ್ಲದಿದ್ದ ಈ ಜಲಚರಗಳ ರಚನೆಯ ಆಧಾರದ ಮೇಲೆ ಅವನ್ನು ಅಸ್ಥಿಕವಚದ ಮೀನುಗಳೆಂದು ಕರೆಯುತ್ತಾರೆ. ಆದರೆ ಆ ಮೀನುಗಳು ಈಗಿನವುಗಳಂತೆ ಇರಲಿಲ್ಲ. ಮೀನಿನಾಕಾರದ ಶರೀರ, ಬಾಲ ಮತ್ತು ಜಡವಾದ ಎಲುಬಿನ ಕವಚವುಳ್ಳ ತಲೆಯ ಭಾಗಗಳನ್ನು ಹೊಂದಿರುವ ವಿಜಾತೀಯ ಪ್ರಾಣಿಗಳಾಗಿದ್ದವು. ಕೆಲವು ಮೀನುಗಳಲ್ಲಿ ಸಾಕಷ್ಟು ಸ್ಪಷ್ಟವಾದ ಬೆನ್ನುಹುರಿ ರೂಪುಗೊಂಡಿತ್ತು. ಈ ಗುಂಪಿಗೆ ಸೇರಿದ ಮತ್ತೆ ಕೆಲವು ಮೀನುಗಳಲ್ಲಿ ತಲೆಯ ಮೇಲ್ಭಾಗ ಮಾತ್ರ ಎಲುಬಿನ ಕವಚವನ್ನು ಹೊಂದಿ, ಒಳದೇಹದಲ್ಲಿ ಮೃದ್ವಸ್ಥಿ ಇತ್ತು. ಪಕ್ಕೆಯ ಮತ್ತು ಕೆಳಬದಿಯ ಈಜುರೆಕ್ಕೆಗಳ ಬದಲು ವಿಚಿತ್ರಾಕಾರದ ಜೋಡಿಮುಳ್ಳಿನಂಥ ಅಥವಾ ರೆಕ್ಕೆಯಂಥ ಪದರುಗಳು ಕಿವಿರುಗಳ ಹಿಂಭಾಗದಲ್ಲಿದ್ದುವು. ದವಡೆರಹಿತವಾದ ಬಾಯಿ ತಲೆಯ ಮುಂತುದಿಯುಲ್ಲಿತ್ತು. ತಲೆಯ ಮೇಲ್ಭಾಗದ ನಡುವಿನಲ್ಲಿ ಒಂಟಿ ಮೂಗಿನ ಹೊಳ್ಳೆ ಇತ್ತು. ದೇಹದ ಮೇಲೆ ಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ತಗಡು ಪಟ್ಟಿಯಾಕಾರದ (ಪ್ಲಕಾಯಿಡ್) ಹುರುಪೆಗಳಿದ್ದವು. ಈ ರೀತಿಯ ಅಸ್ಥಿಕವಚದಿಂದಾವೃತವಾದ ದೇಹ ಸಂಶೋಧಕರಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಇದಕ್ಕೆ ವಿಜ್ಞಾನಿಗಳ ಊಹೆಯೇನೆಂದರೆ ಅಂದಿನ ಕಾಲದಲ್ಲಿ ಈ ಮೀನುಗಳೋಮದಿಗೆ ಜೀವಿಸಿದ್ದ ಚೇಳಿನಂತಿದ್ದ ಯುಪ್ಟೆರಿಡ್ ಜಾತಿಯ ಜಂಟಿ ಪದಿಗಳಿಂದ ರಕ್ಷಣೆಗಾಗಿ ಈ ರೀತಿ ಅಸ್ಥಿಕವಚಗಳನ್ನು ಹೊಂದಿರಬಹುದೆಂಬುದು.

ವಾಸ ಸ್ಥಾನ

[ಬದಲಾಯಿಸಿ]

ಸಮುದ್ರದ ಕೊಲ್ಲಿ ಅಥವಾ ತಿಳಿನೀರಿನ ನದೀಮುಖಗಳೇ ಇವುಗಳ ವಾಸಸ್ಥಾನಗಳಾಗಿದ್ದುವೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ವೈವಿಧ್ಯದಿಂದಕೂಡಿ ವಿಕಾಸ ಹೊಂದಿದ್ದ ಈ ಮೀನುಗಳ ಸಮುದಾಯಗಳು ಡೆವೋಯಿನ್ ಯುಗದಲ್ಲಿ ಹೇರಳವಾಗಿದ್ದುವು.

ಸಂತತಿಯ ಕ್ಷೀಣತೆ

[ಬದಲಾಯಿಸಿ]

ಈ ವಿಚಿತ್ರ ಮೀನುಗಳ ಸಂತತಿ ಕ್ರಮೇಣ ಕ್ಷೀಣಿಸಿ ಡೆವೋನಿಯನ್ ಯುಗದ ಅಂತ್ಯದಲ್ಲಿ ಪೂರ್ಣವಾಗಿ ಅಳಿದು ಹೋದುದು ಮೀನುಗಳ ಇತಿಹಾಸದಲ್ಲೇ ಒಂದು ಮುಖ್ಯ ಘಟನೆ. ಈ ವಿಚಿತ್ರ ಜಲಚರಗಳ ಪಳೆಯುಳಿಕೆಗಳು ಮೀನುಗಳ ಇತಿಹಾಸದ ಕುರುಹುಗಳನ್ನು ತೋರಿಸುವುದೇ ಅಲ್ಲದೆ ಇವು ಕಶೇರುಕ ಪ್ರಾಣಿವರ್ಗದ ಪೂರ್ವಜರ ಹತ್ತಿರ ಸಂಬಂಧಿಗಳೆಂದು ಸೂಚಿಸುತ್ತವೆ. ಸೆಫಲಾಸ್ಪಿಡಿಸ್ ಎಂಬುದು ಈ ಮೀನುಗಳಲೆಲ್ಲ ಉತ್ತಮ ಉದಾಹರಣೆ. ಇದರ ಪಳೆಯುಳಿಕೆಗಳು ಈಗಿನ ಮೀನಿನ ವಿಶೇಷ ಗುಣಗಳನ್ನು ತೋರಿಸುತ್ತವೆ. ಇದರ ಬಾಲದ ಮತ್ತು ಬೆನ್ನಿನ ರೆಕ್ಕೆಗಳು ಸೊರ ಮೀನಿನಲ್ಲಿರುವಂತೆ ಇದ್ದುವು; ತಲೆಯ ಮೇಲೆ ಮಂದವಾದ ಅಸ್ಥಿಕವಚವಿತ್ತು. ದೇಹದ ಮುಂಭಾಗದಲ್ಲಿ ಅಡ್ಡಲಾಗಿ ಹುರುಪೆಗಳು ಪಟ್ಟೆಗಳಂತಿದ್ದುವು. ಟೆರಾಸ್‍ಪಿಸ್ ಮತ್ತು ಸೆಫಾಲಾಸ್‍ಪಿಸ್ ಎಂಬುವು ತಿಳಿನೀರಿನ ಸರೋವರ ಅಥವಾ ಸಮುದ್ರದ ತಳಭಾಗದ ಶಾಂತ ವಾತಾವರಣಕ್ಕೆ ಹೊಂದಿಕೊಂಡಿದ್ದುವು. ಬಾತ್ರಿಯೊಲೆಪಿಸ್ ಎಂಬುದು ಡೆವೋನಿಯನ್ ಯುಗದ ಅಂತ್ಯದಲ್ಲಿದ್ದು ಸಾಮಾನ್ಯ ಮೀನಿನ ಅನೇಕ ಗುಣಗಳನ್ನು ಹೊಂದಿತ್ತು. ದೇಹದ ಮೇಲ್ಭಾಗದಲ್ಲಿ ಸಾಲು ಸಾಲಾಗಿ ಎಲುಬಿನ ಡಟ್ಟೆಗಳಂತಿರುವ ಹರುಪೆಗಳಿದ್ದುವು. ಈ ಮೀನು ತಿಳಿನೀರಿನ ಸರೋವರ ಅಥವಾ ಕೆರೆಗಳಲ್ಲಿ ವಾಸಿಸುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]


[] []

  1. http://www.newworldencyclopedia.org/entry/Ostracoderm
  2. "ಆರ್ಕೈವ್ ನಕಲು". Archived from the original on 2021-10-25. Retrieved 2023-03-17.