ವಿಷಯಕ್ಕೆ ಹೋಗು

ಅಸಿಟಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸಿಟಾಲ್‍ಗಳ ಸಾಮಾನ್ಯ ರಚನೆ

ಅಸಿಟಾಲ್‌ಗಳು ಆಲ್ಡಿಹೈಡ್‌ಗಳಿಂದ (R−CH=O) ಉತ್ಪತ್ತಿಯಾದ ರಾಸಾಯನಿಕ ಸಂಯುಕ್ತಗಳು. ಅವುಗಳ ಸಾಮಾನ್ಯ ಸೂತ್ರ R2C(OR')2.[] ಚಿತ್ರ ಬದಿಯಲ್ಲಿದೆ. ಈ ಚಿತ್ರದಲ್ಲಿ, R1, R2 ಮತ್ತು R3 ಎಂಬುವು ಆಲ್ಕೈಲ್ ರ‍್ಯಾಡಿಕಲ್‌ಗಳು.

ಶುಷ್ಕ ಆಮ್ಲ ಅಥವಾ ಲವಣಗಳ ಸಂಪರ್ಕದಲ್ಲಿ ಆಲ್ಡಿಹೈಡ್ಗಳು ಆಲ್ಕೋಹಾಲಿನೊಡನೆ ವರ್ತಿಸಿ ಮೊದಲು ಹೆಮಿ ಅಸಿಟಾಲನ್ನು ಆಮೇಲೆ ಅಸಿಟಾಲನ್ನು ಕೊಡುತ್ತದೆ.

ಆಲ್ಡಿಹೈಡ್‍ನಿಂದ ಅಸಿಟಾಲ್ ಉತ್ಪತ್ತಿ

ಪಾದರಸದ ಸಂಯುಕ್ತಗಳ ಸಂಪರ್ಕದಲ್ಲಿ ಆಲ್ಕೋಹಾಲುಗಳು ಅಸಿಟಲೀನ್‌ನೊಡನೆ ಸಂಯೋಜಿಸಿದಾಗ ಅಸಿಟಾಲ್ ಉತ್ಪತ್ತಿಯಾಗುವುದು. ಆಲ್ಕೋಹಾಲ್‌ಗಳನ್ನು ಉತ್ಕರ್ಷಿಸಿದಾಗಲೂ, ಆಲ್ಕೋಹಾಲ್ ಮತ್ತು ಉತ್ಪತ್ತಿಯಾದ ಆಲ್ಡಿಹೈಡ್ ಕೂಡಿ ಅಸಿಟಾಲ್ ಉತ್ಪತ್ತಿಯಾಗುವುದು. ದುರ್ಬಲ ಆಮ್ಲೀಯ ಅಮೋನಿಯಂ ನೈಟ್ರೇಟ್ ಸಂಯುಕ್ತದ ಸಂಪರ್ಕದಲ್ಲಿ ಶುಷ್ಕ ಈಥೈಲ್ ಅರ್ಥೊಫರ‍್ಮೇಟ್ (I) ಶುಷ್ಕ ಅಕ್ರೊಲೀನ್ (II) ನೊಡನೆ ವರ್ತಿಸಿ ಅಕ್ರೊಲೀನ್‌ಡೈ ಈಥೈಲ್ ಅಸಿಟಾಲ್ ೭೩% ರಷ್ಟು ಉತ್ಪತ್ತಿಯಾಗುತ್ತದೆ. ಶುಷ್ಕ ಆಮ್ಲದ ಸಂಪರ್ಕದಲ್ಲಿ ಆಲ್ಡಿಹೈಡ್ (R-CH=O) ಗ್ಲೈಕಾಲ್‌ನೊಡನೆ ವರ್ತಿಸಿ ಸೈಕ್ಲಿಕ್ ಅಸಿಟಾಲ್ ಉತ್ಪತ್ತಿಯಾಗುವುದು.

ಬೆಂಜಾಲ್ಡಿಹೈಡ್ (IV) ಮತ್ತು ಗ್ಲಿಸರಿನ್ (III) ಇವುಗಳ ಮಿಶ್ರಣವನ್ನು ಕಾಯಿಸಿದರೆ ಅಥವಾ ಮಿಶ್ರಣವನ್ನು ತಂಪುಮಾಡಿ ಶುಷ್ಕ ಹೈಡ್ರೊಜನ್ ಕ್ಲೋರೈಡ್‌ನೊಡನೆ ವರ್ತಿಸುವಂತೆ ಮಾಡಿದರೆ ಅಸಿಟಾಲ್ ತರಹ ಸಂಯುಕ್ತ (V)

ಉಂಟಾಗುವುದು. ಇದರಿಂದ ಗ್ಲಿಸರೀನ್ ಅಣುವಿನಲ್ಲಿರುವ α,α1 ಹೈಡ್ರಾಕ್ಸಿಲ್ ರ‍್ಯಾಡಿಕಲ್‌ಗಳಿಗೆ ರಕ್ಷಣೆ ನೀಡಿ β-ಹೈಡ್ರಾಕ್ಸಿಲ್ ರ‍್ಯಾಡಿಕಲ್‌ನಿಂದ ಎಸ್ಟರನ್ನು ಪಡೆಯಬಹುದು.

ನೀರಿನಲ್ಲಿ ವಿಲೀನವಾಗದ, ಆವಿಯಾಗುವ ಅಸಿಟಾಲ್ ದ್ರವ ಕ್ಷಾರಗಳ ಸಂಪರ್ಕದಲ್ಲಿ ಸ್ಥಿರವಾಗಿರುವುದು. ಅಂದರೆ ಯಾವ ಬದಲಾವಣೆಯೂ ಆಗುವುದಿಲ್ಲ.

ಆಲ್ಡಿಹೈಡ್ ಸಂಯಕ್ತದಲ್ಲಿ ಎರಡು ಅಥವಾ ಮೂರು ಪಟುವಾದ ಗುಂಪುಗಳಿದ್ದರೆ ಆಲ್ಡಿಹೈಡ್ (--CHO) ಗುಂಪನ್ನು ಅಸಿಟಾಲನ್ನಾಗಿ ಪರಿವರ್ತಿಸುವುದರಿಂದ ಬೇರೆ ಬೇರೆ ರಾಸಾಯನಿಕ ಕ್ರಿಯೆಗಳಲ್ಲಿ ಅಸಿಟಾಲ್ ರಕ್ಷಣಾ ಕವಚದಲ್ಲಿ ಆಲ್ಡಿಹೈಡ್ ಗುಂಪು ಸುರಕ್ಷಿತವಾಗಿರುವುದು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಸಿಟಾಲ್&oldid=1147374" ಇಂದ ಪಡೆಯಲ್ಪಟ್ಟಿದೆ