ವಿಷಯಕ್ಕೆ ಹೋಗು

ಅಸಹಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ಕಾರದ ವಿರುದ್ಧ ಜನತೆ ತನ್ನ ಅಸಮ್ಮತಿ, ವಿರೋಧ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಇದು ಸಕ್ರಮವಿರಬಹುದು; ಅಕ್ರಮವೆನಿಸಿಕೊಳ್ಳಬಹುದು. ಒಂದು ಶಾಸನಕ್ಕೆ, ಒಂದು ಕ್ಷೇತ್ರಕ್ಕೆ ಮೀಸಲಾಗಿರಬಹುದು ಅಥವಾ ಸರ್ಕಾರವನ್ನಷ್ಟೇ ಮಾರ್ಪಡಿಸುವ ಕ್ರಮವಾಗಿಯೂ ಇದನ್ನು ಬಳಸಿಕೊಳ್ಳಬಹುದು. ಜನ ತಮ್ಮ ಸಹಕಾರವನ್ನು ನಿರಾಕರಿಸಿ, ಸರ್ಕಾರವನ್ನು ದಾರಿಗೆ ತರಬಹುದು ಎಂಬ ತತ್ತ್ವವನ್ನು ಥೋರೋ, ಟಾಲ್ಸ್ಟಾಯ್, ರಸ್ಕಿನ್ ಮೊದಲಾದವರು ಪ್ರತಿಪಾದಿಸಿದರು. ಈ ಸಿದ್ಧಾಂತವನ್ನೇ ಆಧಾರವಾಗಿಟ್ಟುಕೊಂಡು ಭಾರತದಲ್ಲಿ ಮಹಾತ್ಮಾ ಗಾಂಧಿ ಅದನ್ನು ಅನೇಕ ಸನ್ನಿವೇಶಗಳಲ್ಲಿ ಬೃಹತ್ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತಂದರು. ಸತ್ಯಯುತ, ಅಹಿಂಸಾತ್ಮಕ ಪ್ರತಿಭಟನೆ ಸತ್ಯಾಗ್ರಹ ಎನಿಸಿಕೊಂಡಿತು. ಅಮೆರಿಕದ ಅರಾಜಕತಾವಾದಿ ಬೆಂಜಮಿನ್ ಟಕರ್ ಅಸಹಕಾರದ ಹೋರಾಟವನ್ನು ಈ ರೀತಿ ಸಮರ್ಥಿಸುತ್ತಾನೆ. ಒಂದು ರಾಜ್ಯದ ಐದನೆಯ ಒಂದು ಭಾಗದ ಜನ ತೆರಿಗೆ ಕೊಡಲು ನಿರಾಕರಿಸಿದರೆ ಉಳಿದ ನಾಲ್ಕುಭಾಗದ ಪ್ರಜೆಗಳು ತೆರಿಗೆ ಕೊಡಲು ಸಮ್ಮತಿಸಿ ತೆರಿಗೆ ತೆತ್ತರೂ ಆ ಹಣವೆಲ್ಲ ತೆರಿಗೆ ವಸೂಲಿಗಾಗಿಯೇ ವೆಚ್ಚವಾಗಿ ಹೋಗುತ್ತದೆ. ಹಿಂಸಾತ್ಮಕ ಚಳವಳಿಯನ್ನು ಸರ್ಕಾರ ಸದೆಬಡಿಯಬಲ್ಲದು. ಆದರೆ ಅಹಿಂಸಾತ್ಮಕ ಹೋರಾಟವನ್ನು ತುಳಿದುಹಾಕುವುದು ಅಸಾಧ್ಯ. ಪ್ಯಾಸಿಫಿಸಂ ಅಥವಾ ಯುದ್ಧವಿರೋಧ, ಶಾಂತಿಯುತ ಕಾನೂನುಭಂಗ (ಸಿವಿಲ್ ಡಿಸ್ಒಬೀಡಿಯನ್ಸ್‌) ಕಾನೂನು ಕಟ್ಟಳೆಗಳನ್ನು ವಿಧಿಪುರ್ವಕ ವಿರೋಧಿಸುವುದು; ಸಾತ್ತ್ವಿಕ ವಿರೋಧ (ಪ್ಯಾಸಿವ್ ರೆಸಿಸ್ಟೆನ್ಸ್‌), ಅಸಹಕಾರ (ನಾನ್-ಕೋಆಪರೇಷನ್) ಇವು ಅಸಹಕಾರ ಚಳವಳಿಯ ವಿವಿಧ ರೂಪಾಂತರಗಳು. ನೈತಿಕ ಕಾರಣಗಳಿಗಾಗಿ ಯುದ್ಧವನ್ನು ವಿರೋಧಿಸುವುದು ಯುದ್ಧವಿರೋಧಿಯ ಮುಖ್ಯಧ್ಯೇಯ. ಆತ ತನಗೆ ಏನೇ ವಿಪತ್ತು ಬಂದರೂ ಯುದ್ಧೋದ್ಯಮದಲ್ಲಿ ಸಹಕರಿಸನು; ಸಿಪಾಯಿಯಾಗಿ ದುಡಿಯನು. ಕೇವಲ ತಟಸ್ಥನಾಗಿರುವುದರಲ್ಲಿ ಆತ ಸಮಾಧಾನ ಪಡೆಯುವನು; ಇಲ್ಲವೆ ಯುದ್ಧವನ್ನು ಹೂಡುವನು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸುಮಾರು 16,000 ಯುದ್ಧ ವಿರೋಧಿಗಳಿದ್ದರು. ಎರಡನೆಯ ಮಹಾಯುದ್ಧ ದಲ್ಲಿ ಮಾರ್ಚ್ 1940ರವರೆಗೆ ಇವರ ಸಂಖ್ಯೆ 26,681 ಇದ್ದಿತು. ತತ್ತ್ವಜ್ಞಾನಿ ಬರ್ಟ್ರಂರಂಡ್ ರಸಲ್, ವಿಜ್ಞಾನಿ ಹಕ್ಸ್‌ಲಿ, ರಾಜಕಾರಣಿ ಫೆನ್ನರ್ ಬ್ರಾಕ್ವೆ ಮೊದಲಾದ ಮೇಧಾವಿಗಳು ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿ ಸೆರೆಮನೆ ಸೇರಿದರು. ಈಗ ಅನೇಕ ದೇಶಗಳಲ್ಲಿ ಯುದ್ಧವಿರೋಧಿ ಸಂಸ್ಥೆಗಳಿವೆ. ಧರ್ಮವಿರುದ್ಧ, ನೀತಿವಿರುದ್ಧ, ಅಪ್ರಿಯವಾದ ಅಥವಾ ಸ್ವಾತಂತ್ರ್ಯವನ್ನು ಮೊಟಕುಗೊಳಿ ಸುವ ಶಾಸನವನ್ನು ಶಾಂತಿಯುತ ಕ್ರಮಗಳಿಂದ ವಿರೋಧಿಸುವುದೇ ಶಾಂತಿಯುತ ಕಾನೂನುಭಂಗ ಚಳವಳಿ. ಅಪ್ರಿಯವಾದ ಶಾಸನವನ್ನು ಉದ್ದೇಶ ಪೂರ್ವಕವಾಗಿ ಧಿಕ್ಕರಿಸಿ ನ್ಯಾಯಾಲಯದ ವಿಚಾರಣೆಗೆ ಅದನ್ನು ಒಳಪಡಿಸುವುದೂ ಒಂದು ಕ್ರಮ. ಅಪ್ರಿಯ ಶಾಸನವನ್ನು ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟಿಸಿ, ನ್ಯಾಯಾಲಯ ವಿಧಿಸುವ ಶಿಕ್ಷೆಯನ್ನು ಸ್ವಾಗತಿಸಿ ಅನುಭವಿಸುವುದು ಮತ್ತೊಂದು ಕ್ರಮ. 1902ರಲ್ಲಿ ಇಂಗ್ಲೆಂಡಿನಲ್ಲಿ ಶಿಕ್ಷಣಶುಲ್ಕವನ್ನು ಪ್ರತಿಭಟಿಸಲು ನಡೆದ ಸಾತ್ತ್ವಿಕ ವಿರೋಧಚಳವಳಿಯಲ್ಲಿ ಭಾಗವಹಿಸಲು 60,000 ಜನ ಸಿದ್ಧರಾಗಿದ್ದು 254 ಜನ ಸೆರೆಮನೆ ಸೇರಿದರು. 18ನೆಯ ಶತಮಾನದಲ್ಲಿ ಹಂಗರಿಯ ಜನ ಡೀಕನ ಮುಂದಾಳತ್ವದಲ್ಲಿ ಆಸ್ಟ್ರಿಯ ಚಕ್ರವರ್ತಿ ಹಂಗರಿಯಲ್ಲಿ ಮಂತ್ರಿಮಂಡಲ ಸ್ಥಾಪಿಸಲು ಕೈಗೊಂಡ ಕ್ರಮವನ್ನು ಸಾತ್ತ್ವಿಕವಿರೋಧದಿಂದ ಪ್ರತಿಭಟಿಸಿದರು. 1857ರಲ್ಲಿ ಹಂಗರಿ ಪೂರ್ಣಸ್ವಾತಂತ್ರ್ಯ ಪಡೆಯಿತು. 1919ರಲ್ಲಿ ಈಜಿಪ್ಟ್‌ ಜಗಲೂಲ್‌ಪಾಷಾನ ನೇತೃತ್ವದಲ್ಲಿ ಬ್ರಿಟನ್ ವಿರುದ್ಧ ಅಸಹಕಾರ ಚಳವಳಿಹೂಡಿ ಸ್ವಾತಂತ್ರ್ಯ ಗಳಿಸಿತು. 1910ರಿಂದ ಒಂಬತ್ತು ವರ್ಷಗಳ ಕಾಲ ಕೊರಿಯ ಸಾತ್ತ್ವಿಕ ವಿರೋಧಚಳವಳಿ ಹೂಡಿ ಜಪಾನಿನಿಂದ ಸ್ವಾತಂತ್ರ್ಯವನ್ನು ಗಳಿಸಿತು. 1923ರಲ್ಲಿ ಮಹಾಯುದ್ಧದ ತರುವಾಯ ಫ್ರೆಂಚರು ಜರ್ಮನಿಗೆ ಸೇರಿದ ರ್ಹೂರ್ ಕೈಗಾರಿಕಾ ಪ್ರದೇಶವನ್ನು ವಶಪಡಿಸಿಕೊಂಡರು. ಇದರಿಂದ ಕೋಪಗೊಂಡ ಜರ್ಮನ್ಸರ್ಕಾರ ಫ್ರೆಂಚ್ಸರ್ಕಾರದ ವಿರುದ್ಧ ಸಾತ್ತ್ವಿಕ ವಿರೋಧ ಚಳವಳಿ ಹೂಡಿ ಫ್ರೆಂಚರಿಗೆ ಒಂದು ಟನ್ ಕಲ್ಲಿದ್ದಲು ಸಹ ದೊರೆಯದಂತೆ ಮಾಡಿತು. 1925ರಲ್ಲಿ ಚಳವಳಿಯಿಂದ ಬೇಸತ್ತ ಫ್ರೆಂಚ್ ಸರ್ಕಾರ ತನ್ನ ಸೇನಾಬಲವನ್ನು ಹಿಂದಕ್ಕೆ ಕರೆಸಿಕೊಂಡು ಜರ್ಮನಿಯೊಡನೆ ಒಪ್ಪಂದಮಾಡಿಕೊಂಡಿತು. ಒಂದು ಸರ್ಕಾರ ಮತ್ತೊಂದು ಸರ್ಕಾರವನ್ನು ಸಾತ್ತ್ವಿಕ ವಿರೋಧ ಚಳವಳಿ ನಡೆಸಿ ತಮ್ಮ ಗುರಿ ಸಾಧಿಸಿಕೊಂಡಿತು. ಇವು ಚರಿತ್ರಾರ್ಹವಾದ ಕೆಲವು ನಿದರ್ಶನಗಳು. ಈ ವಿಧಾನಗಳೆಲ್ಲ ಒಂದಾಗಿ ತೋರಿದರೂ ಸತ್ಯ, ಶಾಂತಿ, ಅಹಿಂಸೆ, ಆತ್ಮಬಲ-ಇವುಗಳ ಆಧಾರವಾದ ಮಹಾತ್ಮಾ ಗಾಂಧಿಯವರ ಸತ್ಯಾಗ್ರಹ ತತ್ವಶಃ ಪ್ರತ್ಯೇಕವಾದುದು.

"https://kn.wikipedia.org/w/index.php?title=ಅಸಹಕಾರ&oldid=714705" ಇಂದ ಪಡೆಯಲ್ಪಟ್ಟಿದೆ