ವಿಷಯಕ್ಕೆ ಹೋಗು

ಅಸಮತೆ (ಆರ್ಥಿಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಡವ ಬಲ್ಲಿದ ಎಂಬ ವ್ಯಾವಹಾರಿಕ ಭೇದದ ಹಿಂದಿರುವ ಶಾಸ್ತ್ರೀಯ ಅಭಿಪ್ರಾಯ (ಇನ್ಈಕ್ವಾಲಿಟಿ). ಇವೆರಡು ಹಂತಗಳ ನಡುವೆ ಈಚೆಗೆ ಮಧ್ಯಮವರ್ಗವೆಂಬ ಮೂರನೆಯ ಹಂತವನ್ನು ನಿರ್ಮಿಸಲಾಗಿದೆ. ಇರುವ ಆಸ್ತಿ, ಗಳಿಸಿದ ಸಂಪಾದನೆ, ಬರುವ ಸಂಬಳ ಆದಾಯಗಳ ಮೇಲೆ ಈ ಬಗೆಯ ವರ್ಗೀಕರಣ ಮಾಡಲಾಗಿದೆ. ಆರ್ಥಿಕ ಅಸಮತೆಯ ಮೂಲಭೂತ ಕಾರಣಗಳ ಮತ್ತು ಅವುಗಳ ನಿವಾರಣೆಯ ಬಗ್ಗೆ ಶಾಸ್ತ್ರೀಯ ಅಧ್ಯಯನ ನಡೆದಿದೆ. ಇದರ ಪ್ರಕಾರ ಸರ್ಕಾರದ ನೀತಿ ಧೋರಣೆಗಳೇ ಅಸಮತೆಗೆ ಕಾರಣ. ಆದ್ದರಿಂದ ಅವುಗಳನ್ನು ಸಮರ್ಪಕವಾಗಿ ಮಾರ್ಪಡಿಸುವುದರಿಂದ ಅಸಮತೆಯನ್ನು ನಿವಾರಿಸಬಹುದೆಂದು ಒಂದು ಪಕ್ಷದವರ ವಾದ. ದೇಶದಲ್ಲಿ ಖಾಸಗಿ ಉದ್ಯಮಗಳು ಬೆಳೆಯುವಂತೆ ಸರ್ಕಾರ ಪರಿಸ್ಥಿತಿ ನಿರ್ಮಿಸಿದರೆ ಈ ಉದ್ಯಮಗಳನ್ನು ನಿಯಂತ್ರಿಸುವ ಉದ್ದಿಮೆಗಾರರು ಅತಿ ಶ್ರೀಮಂತರಾಗುತ್ತಾರೆ; ಕಾರ್ಮಿಕರು ಮುಂತಾದವರು ಬಡವರಾಗುತ್ತಾರೆ; ಹೀಗೆ ಅಸಮತೆ ತೀವ್ರವಾಗುತ್ತದೆ. ಆದ್ದರಿಂದ ಖಾಸಗಿ ಉದ್ಯಮಗಳೇ ಇರಬಾರದೆಂದು ಕೆಲವರು ವಾದಿಸಿದರೆ ಇತರರು ಅವು ಇರಲಿ, ಆದರೆ ಅವುಗಳ ಒಡೆಯರು ಅತಿ ಶ್ರೀಮಂತರಾಗದಂತೆ ಸಾಕಷ್ಟು ಅಧಿಕ ಪ್ರಮಾಣದ ತೆರಿಗೆ ವಿಧಿಸಬೇಕು, ಕಾರ್ಮಿಕರಿಗೆ ಒಡೆಯರು ಲಾಭದ ಒಂದಂಶವನ್ನು ಬೋನಸ್ ಆಗಿ ಹಂಚಬೇಕು. ಈ ಕ್ರಮದಿಂದ ಅಸಮತೆ ನಿವಾರಿಸಬೇಕು ಎಂದು ತರ್ಕಿಸುತ್ತಾರೆ. ಬಂಡವಾಳಶಾಹಿ ರಾಷ್ಟ್ರದಲ್ಲಿ ಮಧ್ಯಮ ಮತ್ತು ಕೆಳವರ್ಗದ ಜನರ, ಕೂಲಿ ಜನರ, ಕೆಲಸಗಾರರ ಶೋಷಣೆ ನಡೆಯುತ್ತಿದೆ ಎಂದು ಇನ್ನೊಂದು ವಾದವಿದೆ. ಶ್ರೀಮಂತ ವರ್ಗ ವ್ಯವಸಾಯ ಮತ್ತು ವ್ಯಾಪಾರೋದ್ಯಮಗಳನ್ನು ತನ್ನದನ್ನಾಗಿ ಮಾಡಿಕೊಂಡಿರುವುದೇ ಅಧಿಕಪ್ರಮಾಣದಲ್ಲಿ ಜನತೆಯ ಬಡತನಕ್ಕೆ ಕಾರಣವೆನ್ನುವವರೂ ಇದ್ದಾರೆ. ಮಾರ್ಕ್ಸ್‌, ಏಂಜೆಲ್ಸ್‌, ಲೆನಿನ್ ಮೊದಲಾದವರ ಸಮತಾವಾದ ಬಂಡವಾಳಶಾಹಿ ರಾಷ್ಟ್ರಗಳ ವಿರುದ್ಧ ವಾದುದೇ ಆಗಿದೆ. ಆರ್ಥಿಕ ಸಮತೆ ಏರ್ಪಡಬೇಕಾದರೆ ಸರ್ಕಾರ ಜನತಾಮೂಲವಾಗಬೇಕು; ಉದ್ಯಮಗಳು ದುಡಿಯುವ ಜನರ ಕೈಯಲ್ಲಿರಬೇಕು; ಸಾರ್ವಜನಿಕ ಸಂಪತ್ತು ಸರಿಯಾಗಿ ಹಂಚಿಕೆ ಆಗಬೇಕು; ವ್ಯಕ್ತಿಯಾಗಲಿ ಯಾವ ಒಂದು ಪಂಗಡವಾಗಲಿ ಅತಿ ಶ್ರೀಮಂತವಾಗಲು ಅವಕಾಶವಿರಬಾರದು-ಇದು ಮತವಾದಿಗಳ ಮತ್ತು ಕಮ್ಯೂನಿಸ್ಟರ ವಾದ. ವಾದ ಏನೇ ಇರಲಿ, ಅಸಮತೆ ಇರಬಾರದೆಂದು ಎಲ್ಲ ರಾಷ್ಟ್ರಗಳೂ ಘೋಷಿಸುತ್ತಿವೆ; ಇದರ ನಿರ್ಮೂಲನಕ್ಕಾಗಿ ಕಾಯಿದೆ ಸಿದ್ಧಪಡಿಸುತ್ತಿವೆ; ತೆರಿಗೆಗಳನ್ನು ವಿಧಿಸುತ್ತಿವೆ; ಬಡಜನತೆಗೆ ಸೌಕರ್ಯಗಳನ್ನು ಒದಗಿಸುತ್ತಿವೆ. ತಾತ್ವ್ತಿಕವಾಗಿ ಅಸಮತೆಯನ್ನು ವಿವೇಚಿಸಿದರೆ ಸಂಪತ್ತು ಎಂಬ ಪದದ ಮೂಲಕ್ಕೆ ನಾವು ಹೋಗಬೇಕಾಗುತ್ತದೆ. ಹುಟ್ಟಿದ ಸ್ಥಳ ಕಾಲಗಳ ಕಾರಣದಿಂದ, ಬೆಳೆದ ಪರಿಸರದ ಪ್ರಭಾವದಿಂದ, ಒದಗಿದ ಸಂದರ್ಭಗಳಿಂದ, ಮೇಲಾಗಿ ವ್ಯಕ್ತಿಯ ಸ್ವಭಾವದಿಂದ ವ್ಯಕ್ತಿವ್ಯಕ್ತಿಗಳಲ್ಲಿ ಭಿನ್ನತೆ ಬರುವುದು. ಇದರಿಂದ ಅವರಲ್ಲಿ ಕೆಲಸಮಾಡುವ, ತನ್ಮೂಲಕ ಸಂಪತ್ತುಗಳಿಸುವ ಶಕ್ತಿಯಲ್ಲಿ ಭಿನ್ನತೆ ತಲೆದೋರುವುದು. ಹೀಗೆ ಆರ್ಥಿಕ ಅಸಮತೆ ಮನುಷ್ಯನೊಂದಿಗೆ ಸಹಜವಾಗಿ ಹುಟ್ಟಿ ಬೆಳೆದಿರುವ ಗುಣ. ಮಿತಿಯೊಳಗೆ ಇದು ಬೆಳೆದರೆ ವ್ಯಕ್ತಿ ವ್ಯಕ್ತಿ, ರಾಷ್ಟ್ರ ರಾಷ್ಟ್ರಗಳೊಳಗೆ ಆರೋಗ್ಯಕರ ಸ್ಪರ್ಧೆ ಹುಟ್ಟಿ ಸರ್ವರ ಕಲ್ಯಾಣವಾಗುವುದು. ಮಿತಿ ಮೀರದಂತೆ (ತನ್ಮೂಲಕ ಹಿಂದುಳಿದವರ ಶೋಷಣೆ ಆಗದಂತೆ) ಎಚ್ಚರ ವಹಿಸಬೇಕಾದದ್ದು ಸಮಾಜದ ಕರ್ತವ್ಯ. ಶಕ್ತಿಯ ದುಡಿಮೆಗೆ ಸಮಾನಾವಕಾಶಗಳನ್ನೂ ಯೋಗ್ಯ ಪರಿಸರವನ್ನೂ ಕಲ್ಪಿಸಿಕೊಡಬೇಕಾದುದು ಸಮಾಜದ ಕರ್ತವ್ಯ.