ಅಸತ್ಕಾರ್ಯವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಯ ಕಾರಣಗಳ ಪರಸ್ಪರ ಸಂಬಂಧವನ್ನು ಕುರಿತ ವಾದಗಳಲ್ಲಿ ಒಂದು. ಕಾರ್ಯ ಮತ್ತು ಕಾರಣಗಳಿಗೆ ಇರುವ ಸಂಬಂಧ ಎಂಥದು ಎಂಬುದು ತತ್ತ್ವಶಾಸ್ತ್ರದ ಒಂದು ಮುಖ್ಯಪ್ರಶ್ನೆ. ಕಾರಣದಲ್ಲಿ ಅವ್ಯಕ್ತವಾಗಿ ಇದ್ದುದೇ ಕಾರ್ಯವಾಗಿ ವ್ಯಕ್ತವಾಗುತ್ತದೆ ಎಂಬುದು ಒಂದು ಉತ್ತರ. ಹೀಗೆ ಉತ್ತರ ಕೊಡುವವರು ಸತ್ಕಾರ್ಯವಾದಿಗಳು. ಸಾಂಖ್ಯರು ಸತ್ಕಾರ್ಯ ವಾದಿಗಳು. ಕಾರಣ ಕಾರ್ಯದಲ್ಲಿಲ್ಲ, ಅದು ಹೊಸದಾಗಿ ಹುಟ್ಟಿದ್ದು. ಆದ್ದರಿಂದ ಕಾರ್ಯ ಕಾರಣದಿಂದ ತೀರಭಿನ್ನ ಎಂಬುದು ಇನ್ನೊಂದು ಉತ್ತರ. ಹೀಗೆ ಉತ್ತರ ಕೊಡುವವರು ಅಸತ್ಕಾರ್ಯ ವಾದಿಗಳು. ವೈಶೇಷಿಕರು ಅಸತ್ಕಾರ್ಯ ವಾದಿಗಳು. ಕಾರ್ಯ ಕಾರಣಾಂತರಗಳಿಂದ ಭಿನ್ನ ಮತ್ತು ಅದು ಹೊಸದಾಗಿ ಉದ್ಭವಿಸಿದ್ದು ಎಂಬುದರಿಂದ ಈ ವಾದವನ್ನು ಆರಂಭವಾದವೆಂದೂ ಕರೆಯುವುದುಂಟು. ವೈಶೇಷಿಕದಾರ್ಶನಿಕರೂ ಅಸತ್ಕಾರ್ಯವಾದಿಗಳು. ಉದಾಹರಣೆಗಾಗಿ, ದಾರ ಮತ್ತು ಬಟ್ಟೆ ಈ ಎರಡು ವಸ್ತುಗಳನ್ನು ತೆಗೆದುಕೊಳ್ಳೋಣ. ದಾರ ಬಟ್ಟೆಗೆ ಕಾರಣ. ಬಟ್ಟೆ ದಾರದಿಂದ ಹುಟ್ಟಿದ ಕಾರ್ಯ. ಏಕೆಂದರೆ ದಾರವಿಲ್ಲದೆ ಬಟ್ಟೆ ಇಲ್ಲ, ಬಟ್ಟೆ ಇದ್ದ ಕಡೆಗಳಲ್ಲೆಲ್ಲ ದಾರವಿದೆ. ದಾರ ಬಟ್ಟೆಗೆ ಕಾರಣ ಎಂಬ ವಿಚಾರದಲ್ಲಿ ಸತ್ಕಾರ್ಯವಾದಿಗಳಿಗೂ ಅಸತ್ಕಾರ್ಯ ವಾದಿಗಳಿಗೂ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಬಟ್ಟೆಗೆ ದಾರ ಕಾರಣವೆಂದು ಒಪ್ಪುತ್ತಾರೆ. ಸತ್ಕಾರ್ಯವಾದಿಗಳು ಬಟ್ಟೆ ದಾರದಿಂದ ಭಿನ್ನವಿಲ್ಲ, ಅದು ದಾರದ ಒಂದು ಪರಿಣಾಮ ಎನ್ನುತ್ತಾರೆ. ಕಾರಣವಾದ ದಾರದಲ್ಲಿ ಬಟ್ಟೆಯಾಗುವ ಪರಿಣಾಮಶಕ್ತಿ ಇಲ್ಲದಿದ್ದರೆ, ಆ ಶಕ್ತಿ ಕಾರಣಕ್ಕೆ ಆಂತರಿಕವಾಗಿಲ್ಲದಿದ್ದರೆ, ಅದು ಬಟ್ಟೆಯಾಗಲಾರದು. ಕಾರ್ಯ ಕಾರಣಕ್ಕೆ ಬಾಹಿರವಾಗಿದ್ದ ಪಕ್ಷದಲ್ಲಿ ಈ ಕಾರ್ಯಕ್ಕೆ ಇದೇ ಕಾರಣವಿರಬೇಕೆಂಬ ಅಗತ್ಯವಿರುವುದಿಲ್ಲ; ಹಾಗಿದ್ದರೆ ಯಾವುದರಿಂದ ಯಾವುದಾದರೂ ಆಗಬಹುದು. ಮರಳಿನಿಂದ ದಾರವೂ ಗಾಳಿಯಿಂದ ಗಡಿಗೆಯೂ ಆಗಬಹುದು. ಇದು ಸಾಧ್ಯವಿಲ್ಲವೆಂಬುದು ಅನುಭವಸಿದ್ಧ. ಆದ್ದರಿಂದ ಕಾರ್ಯ ಕಾರಣಕ್ಕೆ ಬಾಹಿರ ಮತ್ತು ಭಿನ್ನ ಎಂಬುದು ಅನುಭವಕ್ಕೆ ವಿರೋಧವಾಗಿದೆ. ಇದಕ್ಕೆ ಪ್ರತಿಯಾಗಿ ಅಸತ್ಕಾರ್ಯವಾದಿಗಳು ಕಾರ್ಯ ಕಾರಣದಿಂದ ಬೇರೆಯಲ್ಲ ಎಂಬುದೂ ಅನುಭವಸಿದ್ಧವೆಂದು ವಾದಿಸುತ್ತಾರೆ. ಕಾರ್ಯವೂ ಕಾರಣದಲ್ಲಿ ಇದ್ದುದೇ ಆದ ಪಕ್ಷದಲ್ಲಿ, ಕಾರ್ಯ ಕಾರಣದಲ್ಲಿ ಅಡಗಿದ್ದ ಪಕ್ಷದಲ್ಲಿ, ಕಾರ್ಯದಲ್ಲಿರುವ ಗುಣ ಮತ್ತು ಕ್ರಿಯೆಗಳು ಕಾರಣದಲ್ಲೂ ಇದ್ದಿರಬೇಕು. ಬಟ್ಟೆಯನ್ನು ಉಡುತ್ತೇವೆ, ಗಡಿಗೆಯಲ್ಲಿ ನೀರು ತುಂಬಿತರುತ್ತೇವೆ. ಬಟ್ಟೆಗೆ ಕಾರಣವಾದ ದಾರವನ್ನು ಉಡಲಾಗುವುದೋ? ಗಡಿಗೆಗೆ ಕಾರಣವಾದ ಮಣ್ಣಿನಿಂದ ನೀರು ತುಂಬಿ ತರಲು ಸಾಧ್ಯವೋ ? ಆದ್ದರಿಂದ ಕಾರ್ಯ ಕಾರಣದಿಂದ ಬೇರೆಯಾಗಿದ್ದರೇನೆ ಅದು ನಮ್ಮ ಜೀವನದ ಎಲ್ಲ ವ್ಯವಹಾರಗಳಿಗೂ ಸಂಗತವಾಗಿರುವುದು. ಮಾಧ್ವದಾರ್ಶನಿಕರು ಈ ಎರಡು ವಾದಗಳಲ್ಲೂ ಸ್ವಲ್ಪಮಟ್ಟಿಗೆ ಸತ್ಯವಿದೆ, ಸ್ವಲ್ಪಮಟ್ಟಿಗೆ ಮಿಥ್ಯಾಂಶವಿದೆ ಎಂದು ತೋರಿಸಿರುತ್ತಾರೆ. ದಾರದಿಂದ ಬಟ್ಟೆ ಏರ್ಪಟ್ಟಾಗ ದಾರಕ್ಕೂ ಬಟ್ಟೆಗೂ ಭೇದವಿಲ್ಲ. ದಾರ ಬಟ್ಟೆಗೆ ಆಂತರಿಕ, ಬಟ್ಟೆ ದಾರಕ್ಕೆ ಆಂತರಿಕ. ಆದರೆ ಬಟ್ಟೆಯಾಗುವುದಕ್ಕೆ ಮುಂಚೆ ಅಥವಾ ಬಟ್ಟೆಯಿಂದ ಎಲ್ಲ ದಾರದ ಎಳೆಗಳನ್ನೂ ಎಳೆದು ಹಾಕಿದಾಗ ಆ ಅವಸ್ಥೆಯಲ್ಲಿ ದಾರವೇ ಬೇರೆ ಬಟ್ಟೆಯೇ ಬೇರೆ, ಇದು ಭೇದಾಭೇದಿಗಳ ವಾದ.