ಅಷ್ಟಛಾಪ ಕವಿಗಳು

ವಿಕಿಪೀಡಿಯ ಇಂದ
Jump to navigation Jump to search

ಹಿಂದಿ ಸಾಹಿತ್ಯದಲ್ಲಿ ಎಂಟು ಜನ ಕೃಷ್ಣಭಕ್ತರು ಈ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಕುಂಭನದಾಸ, ಸೂರದಾಸ, ಪರಮಾನಂದದಾಸ, ಕೃಷ್ಣದಾಸ ಅಧಿಕಾರಿ, ನಂದದಾಸ, ಚತುರ್ಭುಜದಾಸ, ಗೋವಿಂದಸ್ವಾಮಿ, ಛೀತಸ್ವಾಮಿ. ಇವರಲ್ಲಿ ಮೊದಲಿನ ನಾಲ್ಕು ಕವಿಗಳು ಶ್ರೀವಲ್ಲಭಾಚಾ ರ್ಯರ (೧೫೩೨-೮೭) ಶಿಷ್ಯರಾಗಿದ್ದರು. ಕೊನೆಯ ನಾಲ್ವರು ಆಚಾರ್ಯ ವಲ್ಲಭರ ಉತ್ತರಾಧಿಕಾರಿ ಗೋಸ್ವಾಮಿ ವಿಠ್ಠಲನಾಥರ (೧೫೨೭-೧೬೯೨) ಶಿಷ್ಯರು. ಈ ಎಂಟು ಭಕ್ತ ಕವಿಗಳು ಗೋಸ್ವಾಮಿ ವಿಠ್ಠಲನಾಥರ ಸಾನ್ನಿಧ್ಯದಲ್ಲಿ (೧೬೦೬) ಗೋವರ್ಧನಗಿರಿಯ ಮೇಲಿರುವ ಶ್ರೀನಾಥ ಮಂದಿರದಲ್ಲಿ ಕಥಾಕಾಲಕ್ಷೇಪ ಮಾಡುತ್ತಿದ್ದರು. ಅಲ್ಲದೆ ಭಗವದ್ಭಕ್ತಿ ವಿಷಯವಾಗಿ ಪದ್ಯ ರಚಿಸುತ್ತಿದ್ದರು. ತಮ್ಮ ಸಂಪ್ರದಾಯದ ಭಕ್ತರೂ ಉತ್ಕೃಷ್ಟ ಕವಿಯೂ ಸಂಗೀತಜ್ಞರೂ ಆಗಿದ್ದ ಗೋಸ್ವಾಮಿವಿಠ್ಠಲನಾಥರು ಈ ಎಂಟು ಕವಿಗಳನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ವ್ರಜಭಾಷೆಗೆ ಸಮೃದ್ಧ ಕಾವ್ಯಭಾಷೆಯ ರೂಪವನ್ನು ಕೊಟ್ಟ ಶ್ರೇಯಸ್ಸು ಈ ಅಷ್ಟಛಾಪಕವಿಗಳಿಗೇ ಸಲ್ಲಬೇಕು. ಈ ಕವಿಗಳ ಕಾವ್ಯದ ಮುಖ್ಯ ವಿಷಯ-ಶ್ರೀಕೃಷ್ಣನ ಭಾವಪುರ್ಣಲೀಲೆಯ ಚಿತ್ರಣ.

ಶ್ರೀಕೃಷ್ಣನ ಚರಿತ್ರೆಯ ತನ್ಮಯತೆ[ಬದಲಾಯಿಸಿ]

 • ಸೂರದಾಸರು ಭಾಗವತದ ಕಥೆಯನ್ನು ಸಂಪೂರ್ಣವಾಗಿ ಅನುಕರಿಸಿದ್ದರೂ ಶ್ರೀಕೃಷ್ಣನ ಚರಿತ್ರೆಯನ್ನು ತನ್ಮಯತೆಯಿಂದ ಚಿತ್ರಿಸಿದ್ದಾರೆ. ಮಾನವ ಜೀವನದಲ್ಲಿ ಬಾಲ್ಯ ಮತ್ತು ತಾರುಣ್ಯಾವಸ್ಥೆ ಮಾತ್ರ ಆನಂದ ಮತ್ತು ಉಲ್ಲಾಸದ ಕಾಲ. ಆದ್ದರಿಂದ ಈ ಅಷ್ಟಭಕ್ತರು ಶ್ರೀ ಕೃಷ್ಣಜೀವನವನ್ನಾಧ ರಿಸಿ, ಈ ಎರಡು ಕಾಲಗಳ ಮೇಲೆ ಹೆಚ್ಚು ಬರೆದಿದ್ದಾರೆ. ಸೌಂದರ್ಯ ಮತ್ತು ಪ್ರೇಮದ ರಸಮಯ ಧಾರೆ ಈ ಕವಿಗಳ ಕಾವ್ಯದಲ್ಲಿ ಸಮಾನ ರೂಪದಲ್ಲಿ ಹರಿದಿದೆ. ಆದರೆ ಸೂರದಾಸರ ಕಾವ್ಯದಲ್ಲಿ ಹೃದಯವನ್ನು ಸೆರೆಹಿಡಿಯುವ ಶಕ್ತಿ ಹೆಚ್ಚು.
 • ಅದರಲ್ಲಿ ಸಾರ್ವಜನಿಕ ಪ್ರೇಮಾನುಭೂತಿಯ ಸಜೀವ ಮತ್ತು ರಸಪುರ್ಣ ಚಿತ್ರಣ ಉಂಟು. ದಾಸ್ಯ, ವಾತ್ಸಲ್ಯ, ಸಖ್ಯ, ಮಾಧುರ್ಯ ಈ ನಾಲ್ಕು ಭಾವಗಳಿಂದ ಅವರು ಶ್ರೀ ಕೃಷ್ಣನನ್ನು ಆರಾಧಿಸಿದ್ದಾರೆ. ಸೂರದಾಸರು ಈ ನಾಲ್ಕು ಭಾವಗಳಿಗೆ ತಮ್ಮ ಪ್ರೇಮ-ಭಕ್ತಿ ಕಾವ್ಯದಲ್ಲಿ ಪ್ರಾಮುಖ್ಯವನ್ನು ನೀಡಿದ್ದಾರೆ. ಪರಮಾನಂದದಾಸರು ವಾತ್ಸಲ್ಯ, ಸಖ್ಯ ಮತ್ತು ಶಾಂತಭಾವಕ್ಕೆ ಪ್ರಾಶಸ್ತ್ಯವನ್ನಿತ್ತಿದ್ದಾರೆ.

ಅಷ್ಟಛಾಪ ಕವಿಗಳ ಸಂಗೀತ ಸಾಧನೆ[ಬದಲಾಯಿಸಿ]

 • ಅಷ್ಟಛಾಪ ಕವಿಗಳು ಕೇವಲ ಕವಿಗಳಾಗಿರದೆ ಶ್ರೇಷ್ಠ ಸಂಗೀತಗಾರರೂ ಆಗಿದ್ದರು. ಸಂಗೀತ ಅವರ ಆಧ್ಯಾತ್ಮಿಕ ಸಾಧನೆ. ಕೀರ್ತನೆ (ಕಥಾಕಾಲಕ್ಷೇಪ) ಭಕ್ತಿಯ ಒಂದು ಭಾಗ. ಅಷ್ಟಛಾಪ ಕವಿಗಳ ರಚನೆಗಳಲ್ಲಿ ಸಂಗೀತದೊಂದಿಗೆ ಸಾಹಿತ್ಯ ಮತ್ತು ಅಧ್ಯಾತ್ಮ ಇವೆರಡರ ಸಮನ್ವಯವನ್ನು ಕಾಣಬಹುದು. ಅಕ್ಬರ್ ಬಾದಷಹನ ಆಸ್ಥಾನದಲ್ಲಿದ್ದ ಪ್ರಸಿದ್ಧ ಸಂಗೀತಗಾರನಾದ ತಾನ್‌ಸೇನ್‌, ಬೈಜೂ, ರಾಮದಾಸ, ಮಾನಸಿಂಹ ಇವರು ಅಷ್ಟಛಾಪ ಕವಿಗಳ ಸಮಕಾಲೀನರು.
 • ಆ ಕಾಲದಲ್ಲಿ ಕುಂಭನದಾಸ ಧ್ರುಪದ್ವನ್ನೂ ಗೋವಿಂದಸ್ವಾಮಿ ಧಮಾರ್ ರಾಗಗಳನ್ನೂ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ತಾನ್‌ಸೇನ್‌ ಧಮಾರ್ ರಾಗವನ್ನು ಗೋವಿಂದಸ್ವಾಮಿಯಿಂದಲೇ ಕಲಿತನೆಂದು ೨೫೨-ವೈಷ್ಣವೋಂಕಿ ವಾರ್ತಾ ಎಂಬ ಪುಸ್ತಕದಿಂದ ತಿಳಿಯುತ್ತದೆ. ಸೂರದಾಸ ಮತ್ತು ಪರಮಾನಂದದಾಸರ ಕಾವ್ಯಗಳಲ್ಲಿ ಪ್ರೇಮ ಸತ್ಯ ಮತ್ತು ಸೌಂದರ್ಯ ಚರಮ ಸೀಮೆಯನ್ನು ತಲುಪಿವೆ. ಬಾಲ ಮನೋವಿಜ್ಞಾನ ಮತ್ತು ಮಾತೃಹೃದಯದ ನೈಜಭಾವನೆಯನ್ನು ಚಿತ್ರಿಸಿದವರಲ್ಲಿ ಸೂರದಾಸರು ಅಗ್ರಗಣ್ಯರೆಂದರೆ ಅತಿಶಯೋಕ್ತಿಯಲ್ಲ.
 • ಸೂರದಾಸರ ವಾತ್ಸಲ್ಯ ಮತ್ತು ವಿರಹ ಶಬ್ದಗಳು ಅನುಪಮವಾಗಿವೆ. ಅಷ್ಟಛಾಪ ಕವಿಗಳು ವ್ರಜಭಾಷೆಯಲ್ಲಿ ರಚಿಸಿದ ಕಾವ್ಯಗಳಲ್ಲಿ ಭಾವನೆ, ಸಜೀವತೆ ಮತ್ತು ನೈಜತೆಗಳಿವೆ. ನೈಜ ಶಬ್ದಚಿತ್ರಣ ಸೂರದಾಸ, ಪರಮಾನಂದದಾಸ, ನಂದದಾಸರ ಕಾವ್ಯಗಳಲ್ಲಿ ಅಧಿಕ. ಅದರೊಂದಿಗೆ ಪ್ರಭಾವಶಾಲಿ ಸಂಗೀತದ ಲಯವೂ ಇದೆ. ಭಾವನಾಪುರ್ಣಶಬ್ದಗಳನ್ನು ಪ್ರಯೋಗಿಸಿದವರಲ್ಲಿ ನಂದದಾಸ ತುಂಬ ಪ್ರಸಿದ್ಧರು. ಎಲ್ಲ ಅಷ್ಟಛಾಪ ಕವಿಗಳೂ ಭಕ್ತಿಪದ್ಧತಿಯ ದೃಷ್ಟಿಯಲ್ಲಿ ಮತ್ತು ದಾರ್ಶನಿಕ ವಿಚಾರ ಧಾರೆಯ ದೃಷ್ಟಿಯಿಂದ ಶುದ್ಧಾದ್ವೈತವಾದಿಗಳಾಗಿದ್ದರು. ಅವರು ರಚಿಸಿದ ಕೆಲವು

ಪ್ರಮುಖ ಕೃತಿಗಳೆಂದರೆ-

ಪ್ರಮುಖ ಕೃತಿಗಳು[ಬದಲಾಯಿಸಿ]

 1. ಸೂರದಾಸ : ಸೂರಸಾಗರ ಸೂರಸಾರಾವಳಿ, ಸಾಹಿತ್ಯಲಹರಿ;
 2. ಪರಮಾನಂದ ದಾಸ: ಪರಮಾನಂದಸಾಗರ;
 3. ಕುಂಭನದಾಸ: ಪದಸಂಗ್ರಹ.
 4. ಕೃಷ್ಣದಾಸ: ಪದಸಂಗ್ರಹ
 5. ನಂದದಾಸ: ರಸಮಂಜರಿ, ಅನೇಕಾರ್ಥಮಂಜರಿ, ಮಾನಮಂಜರಿ (ಅಥವಾ ನಾಮಮಾಲಾ), ರೂಪಮಂಜರಿ, ವಿರಹಮಂಜರಿ, ಶ್ಯಾಮಸಗಾಯಿ, ದಶಮಸ್ಕಂಧಭಾಷಾ, ಗೋವರ್ಧನಲೀಲಾ, ಸುದಾಮ ಚರಿತ, ರುಕ್ಮಿಣೀಮಂಗಲ, ರಾಸ ಪಂಚಾಧ್ಯಾಯಿ, ಸಿದ್ಧಾಂತ ಪಂಚಾಧ್ಯಾ ಯಿ, ಭ್ರಮರಗೀತ, ಪದಾವಲಿ
 6. ಚತುರ್ಭುಜದಾಸ: ಪದಸಂಗ್ರಹ
 7. ಗೋವಿಂದಸ್ವಾಮಿ: ಪದಸಂಗ್ರಹ
 8. ಛೀತಸ್ವಾಮಿ: ಪದಸಂಗ್ರಹ.