ವಿಷಯಕ್ಕೆ ಹೋಗು

ಅಶ್ವಘೋಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶ್ವಘೋಷ ಸು. 1ನೆಯ ಶತಮಾನ. ಸಂಸ್ಕೃತ ಸಾಹಿತ್ಯದ ಪ್ರಾಚೀನ ಕವಿ. ಉತ್ತಮ ಕಾವ್ಯಗಳ ಮೂಲಕ ಭಗವಾನ್ ಬುದ್ಧನ ಕರುಣೆ, ಜ್ಞಾನ, ತ್ಯಾಗ ಮತ್ತು ಧರ್ಮವಾಣಿಗಳನ್ನು ಪ್ರಪಂಚಕ್ಕೆ ಸಾರಿದವನು. ಬೌದ್ಧ ದಾರ್ಶನಿಕ ಗ್ರಂಥಕರ್ತೃವಾಗಿ, ನಾಟಕಕಾರನಾಗಿ, ಸಂಸ್ಕೃತ ಮಹಾಕವಿಗಳ ಪರಂಪರೆಯಲ್ಲಿ ಉನ್ನತಸ್ಥಾನವನ್ನು ಪಡೆದಿದ್ದಾನೆ. ಇವರ ರಮಣೀಯ ಕೃತಿಗಳಲ್ಲಿ ಆಕರ್ಷಕ ಶೈಲಿಯನ್ನೂ ಆರ್ಷ ಕಾವ್ಯಗಳ ಸಾಮೀಪ್ಯವನ್ನೂ ಉಕ್ತಿವೈಚಿತ್ಯವನ್ನೂ ಗಾನಯೋಗ್ಯವಾದ ಮನೋಹರವಾದ ಪದ್ಯಗಳ ವಿನ್ಯಾಸವನ್ನೂ ಕಾಣಬಹುದು. ಬೌದ್ಧದರ್ಶನದ ಪ್ರಚಾರಕ್ಕೆ ಹೆಸರಾದ ಈ ಕವಿ ನಾಟಕಕಾರನೂ ಆಗಿದ್ದನೆಂಬುದು 1911ರಲ್ಲಿ ಜರ್ಮನ್ ವಿದ್ವಾಂಸ ಲೂಡರ್ಸ್ ಪ್ರಕಟಿಸಿದ ಕೆಲವು ನಾಟಕ ತುಣುಕುಗಳಿಂದ ಕಂಡುಬರುತ್ತದೆ.

ಗ್ರಂಥಗಳು

[ಬದಲಾಯಿಸಿ]

ಈತನದೆಂದು ಹೇಳಲಾಗುವ ಗ್ರಂಥಗಳಿವು :

  1. ಬುದ್ಧಚರಿತ
  2. ಸೌಂದರನಂದ (ಇವೆರಡೂ ಮಹಾಕಾವ್ಯಗಳು).
  3. ಸೂತ್ರಾಲಂಕಾರ, ಸ್ವಲ್ಪಭಾಗ ಮಾತ್ರ ಸಂಸ್ಕೃತದಲ್ಲಿದೆ.
  4. ಮಹಾಯಾನ ಶ್ರದ್ಧೋತ್ಪಾದ, ಪ್ರಾಚೀನ ಮಹಾಯಾನ ಪಂಥದ ತತ್ತ್ವವಿವರಣೆ.
  5. ಗಂಡೀಸ್ತೋತ್ರಗಾಥಾ. ಛಂದೋಬದ್ದರಚನೆಯಲ್ಲಿ, ಸಂಗೀತಶಾಸ್ತ್ರದಲ್ಲಿ ಈ ಕವಿಯ ಪ್ರಾವೀಣ್ಯ ಕಾಣಬಹುದು.
  6. ವಜ್ರಸೂಚೀ. ವರ್ಣಧರ್ಮದ ಮೇಲಿನ ಕಠಿಣ ಹೋರಾಟವನ್ನು ಸೂಚಿಸುವ ಗ್ರಂಥ
  7. ಶಾರೀಪುತ್ರಪ್ರಕರಣ, ನಾಟಕದ ಕೆಲವು ಭಾಗಗಳು ಮಾತ್ರ ದೊರೆತಿವೆ.

ಇತರ ಪ್ರಾಚೀನ ಸಂಸ್ಕೃತ ಕವಿಗಳಂತೆ ಅಶ್ವಘೋಷನ ಕಾಲದ ವಿಷಯದಲ್ಲೂ ನಿರ್ಣಾಯಕವಾದ ಅಭಿಪ್ರಾಯಕ್ಕೆ ಬರುವುದು ವಿಮರ್ಶಕರಿಗೆ ಸಾಧ್ಯವಾಗಿಲ್ಲ. ಸ್ಥೂಲವಾಗಿ ಮಾತ್ರ ನಾವು ಕೆಲವು ಅಂಶಗಳನ್ನು ಗಮನಿಸಬಹುದಾಗಿದೆ. ಚೀನ ದೇಶದಲ್ಲಿ ಬಳಕೆಯಲ್ಲಿರುವ ಒಂದು ಪ್ರತೀತಿಯಂತೆ ಅಶ್ವಘೋಷ ಕನಿಷ್ಕನಿಗೆ ಗುರುವಾಗಿದ್ದ. ಕನಿಷ್ಕ 125ರ ವೇಳೆಗೆ ಪೆಷಾವರ್ ನಗರದಲ್ಲಿ ಆಳುತ್ತಿದ್ದ ಸಿಥಿಯನ್ ರಾಜ. ಸಾರಾನಾಥದ ಅಶೋಕಸ್ತಂಭ ಶಾಸನದಲ್ಲಿ ಅಶ್ವಘೋಷ ರಾಜನ ನಿರ್ದೇಶನವಿದೆ. ಬಹುಶಃ ಇದು ಈ ಕವಿಯನ್ನೇ ಕುರಿತಿದ್ದಿರಬಹುದು. ಹಿಂದಿನ ಕಾಲದಲ್ಲಿ ಗುರುಗಳು, ಮಠಾಧಿಪತಿಗಳು, ಜ್ಞಾನಿಗಳು, ಕವಿಗಳು ಮೊದಲಾದ ಸಮಾಜದ ಉನ್ನತ ಪುರುಷರನ್ನು ರಾಜರೆಂದು ಕರೆಯುವುದು ವಾಡಿಕೆಯಲ್ಲಿತ್ತು. ಬೌದ್ಧಗುರು ಗಳ ಸಾಲಿನಲ್ಲಿ ಅಶ್ವಘೋಷ ಪಾರ್ಶ್ವನಾದ ಮೇಲೆ ನಾಗಾರ್ಜುನನಿಗಿಂತ ಹಿಂದೆ ಬರುತ್ತಾನೆ. ನಾಗಾರ್ಜುನನ ಕಾಲ 2ನೆಯ ಶತಮಾನದ ಕೊನೆ. ಅಶ್ವಘೋಷನ ನಾಟಕಗಳಲ್ಲಿ ಬರುವ ಪ್ರಾಕೃತದ ಪ್ರಾಚೀನತೆಯಿಂದ ಇವನ ಕಾಲ ಒಂದನೆಯ ಶತಮಾನವೆಂದು ತಿಳಿಯಬಹುದು.

ಇವನ ಗ್ರಂಥಗಳ ಕೊನೆಯಲ್ಲಿ ಬರುವ ಸಮಾಪ್ತಿ ವಾಕ್ಯಗಳಲ್ಲಿ ಕವಿಯ ಜೀವನದ ವಿಷಯ ಪ್ರಸ್ತಾಪಿಸಲ್ಪಟ್ಟಿದೆ. ತಾಯಿ ಸುವರ್ಣಾಕ್ಷೀ. ಸ್ಥಳ ಸಾಕೇತ. ಇವನನ್ನು ಭಿಕ್ಷು, ಆಚಾರ್ಯ, ಭದಂತ, ಮಹಾಕವಿ, ಮಹಾಪಂಡಿತ, ಮಹಾವಾದಿ ಎಂದು ವಿಶೇಷ ಗೌರವದಿಂದ ಜನ ಕರೆಯುತ್ತಿದ್ದರು. ಹಸಿದು ಎದುರಿಗಿದ್ದ ಆಹಾರವನ್ನು ಮುಟ್ಟದೆ ನಿಂತಿದ್ದ ಕುದುರೆಗಳು ಇವನ ಧರ್ಮವಾಣಿಯನ್ನು ಲಾಲಿಸಿ ಆಹಾರ ತಿಂದವಂತೆ. ಅದಕ್ಕೇ ಅವನಿಗೆ ಅಶ್ವಘೋಷನೆಂದು ಹೆಸರಾಯಿತಂತೆ. ಜಾತಿಯಲ್ಲಿ ಹುಟ್ಟು ಬ್ರಾಹ್ಮಣನಾಗಿದ್ದು ಮೊದಲು ಬೌದ್ಧಧರ್ಮದ ಸರ್ವಾಸ್ತಿವಾದಕ್ಕೆ ವಾಲಿ ಅನಂತರ ಬುದ್ಧನ ಮೇಲಿನ ಅವ್ಯಾಜನಂಬಿಕೆ ಯಿಂದಲೇ ಉದ್ಧಾರ ಸಾಧ್ಯವೆಂದರಿತು ಮಹಾಯಾನ ಪಂಥದ ಪ್ರಥಮಾಚಾರ್ಯರಲ್ಲಿ ಒಬ್ಬನಾದ. ವೇದ, ಶಾಸ್ತ್ರ, ಪುರಾಣ, ಇತಿಹಾಸ, ರಾಮಾಯಣ, ಮಹಾಭಾರತ-ಇವುಗಳ ಸೂಕ್ಷ್ಮ ಪರಿಚಯ ಇವನಿಗಿತ್ತೆಂದು ಇವನ ಕಾವ್ಯಗಳಿಂದ ತಿಳಿದುಬರುತ್ತದೆ.

ಬುದ್ಧಚರಿತ

[ಬದಲಾಯಿಸಿ]

ಈ ಕಾವ್ಯ ಮೊದಲು 28 ಸರ್ಗಗಳನ್ನು ಒಳಗೊಂಡಿದ್ದು ಚೀನಿ ಭಾಷೆಗೆ ಸು. 420ರಲ್ಲಿ ಧರ್ಮರಕ್ಷನಿಂದ ಅನುವಾದವಾಯಿತು. 8ನೆಯ ಶತಮಾನದಲ್ಲಿ ಟಿಬೆಟನ್ ಭಾಷೆಗೂ ಭಾಷಾಂತರವಾಯಿತು. ಈಗ ಸಂಸ್ಕೃತದಲ್ಲಿ ಉಪಲಬ್ಧವಿರುವುದು 13 ಸರ್ಗಗಳು ಮಾತ್ರ. ಕಳೆದ ಶತಮಾನದಲ್ಲಿ ಅಮೃತಾನಂದ ಎನ್ನುವ ವಿದ್ವಾಂಸ ಇನ್ನೂ ನಾಲ್ಕು ಸರ್ಗಗಳನ್ನು ಪೂರಕವಾಗಿ ರಚಿಸಿದ. ಈ ಕಾವ್ಯದಲ್ಲಿ ಬುದ್ಧನ ಮನೋಜ್ಞವಾದ ಜೀವನ ಮತ್ತು ಜ್ಞಾನೋಪದೇಶ ರಮಣೀಯವಾಗಿ ಚಿತ್ರಿಸಲ್ಪಟ್ಟಿವೆ.

ಕಥಾಸಾರ

[ಬದಲಾಯಿಸಿ]

ಸರ್ಗಾನುಸಾರ ಕಥೆ ಹೀಗಿದೆ:

ಇಕ್ಷ್ವಾಕು ವಂಶದ, ಶಾಕ್ಯರ ದೊರೆ ಶುದ್ಧೋದನನಿಗೆ ಅಪಗತ ಮಾಯೆಯಾದ ಮಾಯಾದೇವಿ ರಾಣಿ. ಕಪಿಲವಸ್ತು ರಾಜಧಾನಿ. ಒಮ್ಮೆ ಮಾಯಾದೇವಿಗೆ ಸ್ವಪ್ನದಲ್ಲಿ ಶ್ವೇತಗಜವೊಂದು ಹೊಟ್ಟೆಯನ್ನು ಹೊಕ್ಕಂತೆ ಭಾಸವಾಗುತ್ತದೆ. ಇದು ನಿಜವೋ ಎಂಬಂತೆ ಗರ್ಭವತಿಯಾಗುತ್ತಾಳೆ. ಕೆಲವು ದಿನಗಳು ಕಳೆಯಲು, ವನ ವಿಹಾರಕಾಲದಲ್ಲಿ ಲುಂಬಿನೀವನದಲ್ಲಿ ಲತಾವಲಂಬಿನಿಯಾಗಿದ್ದಾಗ ಮಾಯಾದೇವಿಯ ಪಾರ್ಶ್ವದಿಂದಲೇ ವೇದನಾರಹಿತವಾಗಿ ಶಿಶುವಿನ ಜನನವಾಗುತ್ತದೆ. ಜನಿಸಿದ ಕೂಡಲೇ ಮಗು ಎರಡು ಹೆಜ್ಜೆ ನಡೆದು ಸಿಂಹವಾಣಿಯಿಂದ ಹೀಗೆ ನುಡಿಯುತ್ತದೆ: ಜಗತ್ತಿನ ಒಳಿತಿಗಾಗಿ ಜ್ಞಾನಾರ್ಜನೆಗಾಗಿ ಜನ್ಮ ತಳೆದಿದ್ದೇನೆ; ನನಗೆ ಇದೇ ಕಡೆಯ ಜನ್ಮ. ಪ್ರಕೃತಿಮಾತೆ ಅದ್ಭುತವಾಗಿ ಆಶ್ಚರ್ಯಜನಕವಾದ ಸಂಗತಿಗಳಿಂದ ಬುದ್ಧ ಜನನವನ್ನು ಸೂಚಿಸುತ್ತಾಳೆ. ತಾಯಿ ತಂದೆಗಳಿಗೆ ಆನಂದ ಮತ್ತು ಭಯ ಏಕಕಾಲದಲ್ಲುಂಟಾಗುತ್ತದೆ. ಬ್ರಾಹ್ಮಣರು ಈ ಶಿಶು ಮಹಾಜ್ಞಾನಿ ಅಥವಾ ಚಕ್ರವರ್ತಿಯಾಗುವುದು ನಿಜವೆಂದು ಭವಿಷ್ಯ ನುಡಿಯುತ್ತಾರೆ. ಅಷ್ಟರಲ್ಲಿ ತನ್ನ ತಪೋಬಲದಿಂದ ಬುದ್ಧಜನ್ಮವನ್ನರಿತ ಅಸಿತ ಮಹರ್ಷಿ ತನ್ನ ಶೋಕವನ್ನು ನುಂಗಿಕೊಂಡು ಮುದುಕನಾದ ತಾನು ಬುದ್ಧನ ಉಪದೇಶವನ್ನು ಕೇಳುವವರೆಗೆ ಜೀವಿಸಿರುವುದಿಲ್ಲವಲ್ಲ ಎಂದು ಹಲುಬುತ್ತಾನೆ. ಜಗತ್ತಿನ ಮೋಹಾಂಧಕಾರವನ್ನು ನಾಶಗೊಳಿಸುವ ಸೂರ್ಯನೇ ಮಗನಾದರೂ ಮಗ ಎಲ್ಲಿ ಋಷಿಯೇ ಆಗುವನೋ ಎಂದು ಶುದ್ಧೋದನನಿಗೆ ಚಿಂತೆ ಪ್ರಾರಂಭವಾಯಿತು. ಜಾತಕರ್ಮಾದಿಗಳನ್ನು ನೆರವೇರಿಸಿ ಪುರಪ್ರವೇಶ ಮಾಡುತ್ತಾನೆ. ಜನರಿಗೆ ಅತ್ಯುತ್ಸಾಹ ಮತ್ತು ಆನಂದ.

ಕಥೆ ಹೀಗೆ ಮುಂದುವರಿಯುತ್ತದೆ: ದೇಶದಲ್ಲಿ ಸುಭಿಕ್ಷೆ-ರಾಜನ ಸಮೃದ್ಧಿ-ಸರ್ವಾರ್ಥಸಿದ್ಧನೆಂದು ಮಗುವಿಗೆ ನಾಮಕರಣ-ಮಾಯಾದೇವಿಯ ಮರಣ-ಮಾಯಾದೇವಿಯ ತಂಗಿಯಿಂದಲೇ ಶಿಶುಪಾಲನೆ-ಬಾಲಕ ಬೆಳೆಯುವುದು-ಯಶೋಧರೆಯೊಂದಿಗೆ ವಿವಾಹ-ರಾಹುಲನೆಂಬ ಪುತ್ರನ ಜನನ-ರಾಜ ಮಗನಿಗೆ ವನವಾಸದ ಚಿಂತೆ ಬರದೇ ಇರಲೆಂದು ಕೇವಲ ಐಹಿಕ ಸುಖದ ವಾತಾವರಣವನ್ನೇ ಕಲ್ಪಿಸುವುದು.

ವಿಹಾರಯಾತ್ರೆ-ಸ್ವರ್ಣರಥದಲ್ಲಿ ಕುಮಾರನ ಮೆರವಣಿಗೆ-ಶುದ್ಧಾತ್ಮರಾದ ದೇವತೆಗಳ ಪ್ರಭಾವದಿಂದ ವೃದ್ಧ, ರೋಗಿ, ಶವ ಇವುಗಳ ನೋಟದಿಂದ ಕುಮಾರನಿಗೆ ಮನಸ್ಸು ಕದಡುವುದು-ಪದ್ಮವನ ಪ್ರವೇಶ. ಚೆಲುವೆಯರು ತಮ್ಮ ಹಾವ, ಭಾವ, ವಿಲಾಸ, ಲೀಲೆಗಳಿಂದ ಕುಮಾರನನ್ನು ವಶಗೊಳಿಸಲು ಪ್ರಯತ್ನಿಸುವುದು-ಮರಣ ಭಯದಿಂದ ಆವೃತನಾದ ಕುಮಾರನಿಗೆ ಯಾವುದೂ ರುಚಿಸದಿರುವುದು-ಅವರಲ್ಲಿ ಅವನಿಗೆ ಕನಿಕರವೇ ಉಂಟಾಗುವುದು-ಸ್ತ್ರೀಯರೆಲ್ಲ ಮನೋರಥರಾಗುವುದು.

ರಾಜಾಶ್ವ ಕಂಥಕನನ್ನೇರಿ ಮಿತ್ರರೊಡನೆ ಕುಮಾರ ವನಭೂಮಿಯ ದರ್ಶನಕ್ಕಾಗಿ ಹೊರಡುವುದು-ದಾರಿಯಲ್ಲಿ ಒಂದು ನೇರಳೆ ಮರದ ಬುಡದಲ್ಲಿ ವಿಶ್ರಾಂತಿ-ಭಿಕ್ಷುರೂಪದ ಸಂನ್ಯಾಸಿಯ ಆಗಮನ ಮತ್ತು ಸಂಭಾಷಣೆ-ಅವನಂತೆಯೇ ಮೋಕ್ಷಕ್ಕಾಗಿ ಶ್ರಮಿಸಬೇಕೆಂಬ ಇಚ್ಛೆ ಬೇರೂರಿದ್ದು-ತಂದೆಗೆ ವಿಷಯನಿವೇದನೆ-ರಾಜನ ಕಳವಳ-ರಾಜ ಮಗನಿಗೆ ಐಹಿಕ ಭೋಗದ ಆಸೆಯನ್ನು ಹೆಚ್ಚಿಸಲೆತ್ನಿಸಿದುದು-ರಾತ್ರಿ ಛಂದಕನಿಂದ ಕಂಥಕನನ್ನು ತರಿಸಿ ಅದರ ಮೇಲೆ ಪುರದ ಹೊರಕ್ಕೆ ಬಂದು `ಜನನ ಮರಣಗಳ ಕೊನೆಗಾಣುವವರೆಗೆ ಕಪಿಲವಸ್ತುವನ್ನು ಮತ್ತೆ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದು-ಬಲುದೂರ ಪ್ರಯಾಣ.

ಭಾರ್ಗವನ ಆಶ್ರಮ-ಛಂದಕವಿಸರ್ಜನ ರತ್ನಾಭರಣಗಳೊಂದಿಗೆ ತಂದೆಗೆ ಸಂದೇಶ-ಸ್ವರ್ಣಖಡ್ಗದಿಂದ ಕೇಶಪಾಶಗಳನ್ನು ಕತ್ತರಿಸುವುದು-ವ್ಯಾಧನಿಂದ ಕಾಷಾಯ ವಸ್ತ್ರ ಸ್ವೀಕಾರ. ಮುನಿಗಳ ಸತ್ಕಾರ, ಸಂಭಾಷಣೆ-ತಪಸ್ಸಿನ ಪ್ರಕಾರಗಳ ಜ್ಞಾನ - ಅರಾಡ ಮುನಿ ದರ್ಶನಕ್ಕಾಗಿ ವಿಂಧ್ಯಕ್ಕೆ ಪ್ರಯಾಣ.

ಕಪಿಲವಸ್ತುವಿನಲ್ಲಿ ದುಃಖ-ಅಂತಃಪುರ ಜನರ ವಿಲಾಪ-ಅವನ ವಿಷಯದಲ್ಲಿ ಕೇಳಿದ ಅದ್ಭುತ ಸಂಗತಿಗಳ ಶ್ರವಣದಿಂದ ಎಲ್ಲರಿಗೂ ಸಮಾಧಾನ-ಯಶೋಧರೆಯ ಪ್ರಲಾಪ-ಶೋಕವಿಹ್ವಲನಾದ ರಾಜನನ್ನು ಸಂತೈಸುವುದು.

ಮಂತ್ರಿ ಪುರೋಹಿತರಿಂದ ಕುಮಾರಾನ್ವೇಷಣೆ-ಉಪದೇಶ-ಬೋಧಿಸತ್ತ್ವನಾದ ಕುಮಾರನ ಅಚಲ ನಿರ್ಧಾರ, ತತ್ತ್ವದರ್ಶನದ ವೀರಪ್ರತಿಜ್ಞೆ-ಮಂತ್ರಿ ಪುರೋಹಿತರ ನಿರ್ಗಮನ. ರಾಜಗೃಹಕ್ಕೆ ಆಗಮನ, ಶ್ರೇಣ್ಯಕುಮಾರದರ್ಶನಕ್ಕಾಗಿ ಗುಡ್ಡದ ಮೇಲಕ್ಕೆ ಬರುವುದು-ಮಗಧ ರಾಜನ ಉಪದೇಶದಿಂದಲೂ ಕುಮಾರ ಕದಲದಿರುವುದು. ವಿಷಯಗಳ ನಿಂದೆ-ರಾಜ ಕೃತಕೃತ್ಯನಾಗದೆ ಹಿಂತಿರುಗುವುದು.

ಅರಾಡಮುನಿಯಿಂದ ಸಾಂಖ್ಯದರ್ಶನ ತಿಳಿಯುವುದು-ಉದ್ರಕನ ದರ್ಶನಕ್ಕಾಗಿ ಪಯಣ-ಗಯನ ಆಶ್ರಮ-ಪಂಚತಪಸ್ವಿಗಳು-ಆರು ವರ್ಷಗಳ ಸತತ ಯೋಗಾಭ್ಯಾಸ-ದೇಹದಂಡನೆ-ನಂದಳಿಂದ ಅರ್ಪಿಸಲ್ಪಟ್ಟ ಪಾಯಸ ಸ್ವೀಕಾರ-ಬೋಧಿವೃಕ್ಷದ ಕೆಳಗೆ ಮಂಡನ.

ಮಾರನ ಅನೇಕ ಪ್ರಯತ್ನಗಳು ಮತ್ತು ಸೋಲು-ಧ್ಯಾನಮಗ್ನನಾದ ಕುಮಾರ ಬುದ್ಧತ್ವವನ್ನು ಕೊನೆಯ ಯಾಮದಲ್ಲಿ ಪಡೆಯುವುದು-ಬುದ್ಧನಾದಾಗ ಅರುಣೋದಯವಾಗುವುದು.

ಇಲ್ಲಿಂದ ಮುಂದಿನ ಕಥೆಗೆ ಸಂಸ್ಕೃತ ಮೂಲ ದೊರಕಿಲ್ಲ. ಚೀನಿ ಮತ್ತು ಟಿಬೆಟನ್ ಭಾಷಾಂತರಗಳಲ್ಲಿ ಕಥೆ 28 ಸರ್ಗಗಳವರೆಗೂ ಓಡುತ್ತದೆ. ಇದರಲ್ಲಿ ಬುದ್ಧನ ಧರ್ಮಬೋಧೆ ಅವನ ದೈಹಿಕ ಅವಶೇಷಗಳ ವಿಚಾರವಾಗಿ ನಡೆದ ಕಲಹಗಳು ಮತ್ತು ಅಶೋಕ ಚಕ್ರವರ್ತಿಯ ವೃತ್ತಾಂತ ಇವೆಲ್ಲ ಉಕ್ತವಾಗಿವೆ.

ಸೌಂದರನಂದ

[ಬದಲಾಯಿಸಿ]

18 ಸರ್ಗಗಳ ಕಾವ್ಯ. ಬಹುಶಃ ಇದೇ ಅಶ್ವಘೋಷನ ಪ್ರಥಮ ಕೃತಿಯಾಗಿರಬಹುದು. ಏಕೆಂದರೆ ಈ ಗ್ರಂಥದ ಯಾವ ಭಾಗದಲ್ಲೂ ಇತರ ಗ್ರಂಥಗಳನ್ನು ಹೆಸರಿಸಿಲ್ಲ. ಮಹಾವಗ್ಗ ಮತ್ತು ನಿದಾನಕಥಾ ಎಂಬ ಬೌದ್ಧಗ್ರಂಥಗಳಲ್ಲಿ ಬರುವ ಬುದ್ಧನ ಬಲತಮ್ಮನಾದ ನಂದನ ಮನಸ್ಸಿಲ್ಲದ ಬೌದ್ಧಧರ್ಮ ಪ್ರವೇಶವೇ ಕಥಾವಸ್ತು. ಈ ವಸ್ತು ರಮಣೀಯವಾಗಿ ಚಿತ್ರಿತವಾಗಿದೆ. ಕಥಾನಾಯಕ ನಂದನಾದರೆ ನಾಯಕಿ ಸುಂದರಿ. ಹೆಸರಿಗೆ ಅನ್ವರ್ಥವಾದ ಲಾವಣ್ಯವತಿ. ಬುದ್ಧನ ಸಂದೇಶ ಶುದ್ಧೋದನನೇ ಮೊದಲಾದ ಪ್ರಮುಖರೆಲ್ಲರಿಗೂ ಮುಟ್ಟಿದ್ದರೂ ಸುಂದರಿಯ ಸೌಂದರ್ಯ ರಾಶಿಯಲ್ಲಿ ತನ್ನನ್ನೇ ಮರೆತಿದ್ದ ನಂದನಿಗೆ ತಲುಪಲಿಲ್ಲ. ತಮ್ಮನನ್ನೇ ಬುದ್ಧಧರ್ಮಕ್ಕೆ ಒಲಿಯುವಂತೆ ಮಾಡದಿದ್ದರೆ ಇತರರೂ ಅವನಂತೆಯೇ ಸುಕೃತವಿಲ್ಲದವರಾದಾರೆಂದು ಬುದ್ಧ ಸಂನ್ಯಾಸದೀಕ್ಷೆ ಕೊಡಲು ಪ್ರಯತ್ನಪಟ್ಟು ಜಯಶೀಲನಾಗುತ್ತಾನೆ. ಇದು ಕಾವ್ಯದ ಮುಖ್ಯಾಂಶ.

ಕಥಾಸಾರ

[ಬದಲಾಯಿಸಿ]

ಸರ್ಗಾನುಸಾರಿಯಾದ ಕಥೆ ಹೀಗಿದೆ:

ಕಪಿಲವಸ್ತು ನಗರ ವರ್ಣನೆ-ಶುದ್ಧೋದನ ರಾಜನ ವರ್ಣನೆ-ಸರ್ವಾರ್ಥಸಿದ್ಧ ಮತ್ತು ನಂದ ಇವರ ಜನನ ವೃತ್ತಾಂತ-ಬುದ್ಧನ ವಿವರವಾದ ವರ್ಣನೆ-ಸುಂದರಿಯ ಲಾವಣ್ಯ-ನಂದ ಸುಂದರಿಯರ ಮಿಲನ-ರಾತ್ರಿ ಚಂದ್ರರಂತೆ ಅವರ ಪ್ರೇಮಜೀವನ-ಅವರ ಸಲ್ಲಾಪಗಳ ಸಂದರ್ಭದಲ್ಲೇ ಭಿಕ್ಷೆಗಾಗಿ ಬುದ್ಧನ ಆಗಮನ-ಭಿಕ್ಷೆ ಇಲ್ಲದೆ ನಿರ್ಗಮನ-ವಿಷಯ ತಿಳಿದ ಅನಂತರ ಸುಂದರಿಯ ಗಂಧಲೇಪ ಒಣಗುವುದರಲ್ಲಿ ಬುದ್ಧನನ್ನು ಕರೆತರುವೆನೆಂದು ನಂದ ಹೊರಡುವುದು-ಮನಸ್ಸಿಲ್ಲದೆ ಇದ್ದ ನಂದನಿಗೆ ಬುದ್ಧನಿಂದ ಸಂನ್ಯಾಸದೀಕ್ಷೆ-ನಂದ ತನ್ನ ಸುಂದರ ಕೇಶವನ್ನು ಕತ್ತರಿಸಿ ಕಾವಿಧಾರಣೆ ಮಾಡುವುದು.

ಸುಂದರಿಯ ದುಃಖ ಮತ್ತು ವಿರಹತಾಪ-ನಂದನಿಗೂ ಸುಂದರಿಯದೇ ಧ್ಯಾನ-ಸಂನ್ಯಾಸ ತೊರೆದು ಮತ್ತೆ ಗೃಹಸ್ಥಕ್ಕೆ ಬರುವುದು-ಅನೇಕರ ಕಥೆಗಳನ್ನು ನಂದ ಬುದ್ಧನಿಗೆ ಅರುಹುವುದು-ಕಾಮಗಳ ಅನಿತ್ಯತೆ, ವೈರಾಗ್ಯದ ಸುಖ ಮತ್ತು ಸ್ತ್ರೀಯರ ಚಾಂಚಲ್ಯ ಕುರಿತ ಬುದ್ಧವಾಣಿ-ಮದದಿಂದ ಕಷ್ಟಕ್ಕೀಡಾದ ಹಿಂದಿನ ವೀರರ ಕಥೆಗಳು-ಆದರೂ ನಂದನ ಮೋಹದ ಮಂಜು ಕರಗದೇ ಇರುವುದು-ಕಾಮಾಂಧನಾದ ನಂದನನ್ನು ಸ್ವರ್ಗಕ್ಕೆ ಒಯ್ಯುತ್ತ ಬುದ್ಧ ದಾರಿಯಲ್ಲಿ ಒಂದು ಕುರೂಪಿಯಾದ ಹೆಣ್ಣು ಕಪಿಯನ್ನು ತೋರಿಸಿ ಸುಂದರಿಗಿಂತ ಚೆನ್ನಲ್ಲವೆ ಎಂದು ಕೇಳುವುದು ಸುಂದರಿಯ ರೂಪವನ್ನೇ ಹೊಗಳಿದ ಗಂಡನಿಗೆ ಮುಂದೆ ಇಂದ್ರ ನಂದನವನದಲ್ಲಿ ಅಪ್ಸರೆಯರ ದರ್ಶನವಾಗುವುದು-ಅಪ್ಸರೆಯರ ಸೌಂದರ್ಯ ಸುಂದರಿಯ ಸೌಂದರ್ಯಕ್ಕಿಂತ ಸಾವಿರಪಾಲು ಹೆಚ್ಚೆಂದು ನಂದ ಒಪ್ಪಿ ಅವರನ್ನು ಪಡೆಯಲು ಬುದ್ಧವಾಕ್ಯದಂತೆ ತಪಸ್ಸಿಗೆ ಸಿದ್ಧನಾಗುವುದು-ಸುಂದರಿಯನ್ನು ಮರೆಯುವುದು-ಆನಂದ ಸ್ವರ್ಗಸುಖದ ಅನಿತ್ಯತೆಯನ್ನು ತಿಳಿಯುವುದು-ಪುಣ್ಯ ಮುಗಿದ ಮೇಲೆ ಮತ್ತೆ ಭೂಮಿಗೇ ಹಿಂತಿರುಗಬೇಕೆಂಬ ಅಂಶದ ವಿವರಣೆ-ನಂದನಿಗೆ ಸಮ್ಯಕ್ಜ್ಞಾನ ಪ್ರಾಪ್ತಿಯಾಗುವುದು-ಸ್ತ್ರೀಮೋಹ ಪುರ್ಣವಾಗಿ ತೊಲಗಿ ಬುದ್ಧನ ಉಪದೇಶಕ್ಕೆ ಸಿದ್ಧನಾಗುವುದು-ನಂದ ಅರ್ಹಂತನಾಗುವುದಲ್ಲದೆ ಇತರರಿಗೂ ಮೋಕ್ಷೋಪದೇಶ ಮಾಡಲು ಕಾತರನಾಗುವುದು.

ಹೀಗೆ ಸೌಂದರನಂದ ಕಾವ್ಯ ಮುಖ್ಯವಾಗಿ ಧರ್ಮಪ್ರಚಾರಕ್ಕೆ ಉತ್ತಮ ಸಾಧನವಾಗಿ ಬೆಳೆದಿದೆ.

ಕವಿಗೆ ವೈದಿಕ ಗ್ರಂಥಗಳು ಮಾತ್ರವೇ ಅಲ್ಲದೆ ರಾಮಾಯಣ, ಭಾರತಗಳ ಮತ್ತು ಸಾಂಖ್ಯ ವೈಶೇಷಿಕ ದರ್ಶನಗಳ ಪರಿಚಯವೂ ಇದ್ದಂತೆ ಕಾಣಬರುವುದು. ಇವನ ಕೃತಿಗಳನ್ನು ಹಿಂದೆ ಸಕಲ ಮತೀಯರೂ ಓದುತ್ತಿದ್ದರಲ್ಲದೆ ಈತ ಕಾಳಿದಾಸಾದಿ ಮಹಾಕವಿಗಳಂತೆ ಜನಮೆಚ್ಚುಗೆ ಪಡೆದಿದ್ದ.

"https://kn.wikipedia.org/w/index.php?title=ಅಶ್ವಘೋಷ&oldid=856533" ಇಂದ ಪಡೆಯಲ್ಪಟ್ಟಿದೆ