ಅವೈದಿಕ ದೈವವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನನ್ನು ಸೃಷ್ಟಿಸಿ ಅವನಿಗೆ ವಿಚಾರಶಕ್ತಿಯನ್ನು ಕೊಟ್ಟು ಸೃಷ್ಟಿಕರ್ತ ಜಗತ್ತಿನ ವ್ಯಾಪಾರಗಳ ಬಗ್ಗೆ ಉದಾಸೀನನಾಗಿ ಅದರಿಂದ ದೂರನಾಗಿರುವ ನೆಂದು ಹೇಳುವ ವಾದ.

ಇತಿಹಾಸ[ಬದಲಾಯಿಸಿ]

ಅರಿಸ್ಟಾಟಲನ ಕಾಲಕ್ಕೆ ಇದು ಅಸ್ಪಷ್ಟವಾಗಿ ರೂಪುಗೊಂಡಿತು. ಅರಿಸ್ಟಾಟಲನ ಅನಂತರ 17-18ನೆಯ ಶತಮಾನಗಳಲ್ಲೂ ಇದು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಾರದಲ್ಲಿತ್ತು. ಆಧ್ಯಾತ್ಮಿಕ ಜೀವನಕ್ಕೆ ಈ ವಾದದಿಂದ ಪ್ರೋತ್ಸಾಹವಿಲ್ಲದೆ ಕ್ರಮೇಣ 19ನೆಯ ಶತಮಾನದ ಹೊತ್ತಿಗೆ ಹಿಂದೆ ಸರಿಯಿತು. ಉದಾಸೀನವಾಗಿ ಜಗತ್ತಿನ ಆಗುಹೋಗುಗಳಲ್ಲಿ ಆಸಕ್ತಿ ವಹಿಸದೆ ಇರುವ ದೈವವನ್ನು ಸ್ಪಿನೋಜ಼ನ ಅನಂತರ ಜರ್ಮನಿಯಲ್ಲಿ ಗಯಟೆ ಮೊದಲಾದವರು ನಿರಾಕರಿಸಿದರು. ಜಗತ್ತಿನ ವಿಕಾಸದ ಅರಿವುಂಟಾದಾಗ ಮಾನವ ಈ ವಿಕಾಸಕ್ಕೆ ದೈವವೇ ಕಾರಣವೆಂದೂ ಸೃಷ್ಟಿಮಾಡಿದ ಅನಂತರ ದೈವ ಸುಮ್ಮನೆ ಕೂಡುವುದಿಲ್ಲವೆಂದೂ ಉದಾಸೀನ ಭಾವವನ್ನು ತಾಳುವುದಿಲ್ಲವೆಂದೂ ಆತ ಭಾವಿಸತೊಡಗಿದ.

ವಾದದ ತಿರುಳು[ಬದಲಾಯಿಸಿ]

ಈ ವಾದದಲ್ಲಿ ಸೃಷ್ಟಿಕರ್ತನಿಗೂ ಜಗತ್ತಿಗೂ ಅಂಥ ನಿಕಟಸಂಬಂಧ ಕಾಣುವುದಿಲ್ಲ. ವಿಚಾರಶಕ್ತಿಗೂ ದೈವಶಕ್ತಿಗೂ ನಿಕಟವಾದ ಸಂಬಂಧವಿದೆಯೆಂದೂ ಪರಮಾತ್ಮನನ್ನು ಅರಿಯುವುದಕ್ಕೆ ತಾರ್ಕಿಕಪದ್ಧತಿ ಅಥವಾ ವಿಚಾರಶಕ್ತಿಯೇ ಪ್ರಧಾನವೆಂದೂ ಧರ್ಮಾಧರ್ಮಗಳ ಪ್ರಶ್ನೆಯನ್ನೂ ಪರಮಾತ್ಮನನ್ನು ಆಧ್ಯಾತ್ಮಿಕವಾಗಿ ಸಾಕ್ಷಾತ್ಕರಿಸಿಕೊಳ್ಳುವ ಅಗತ್ಯವನ್ನೂ ಒಪ್ಪಿಕೊಳ್ಳದೆ ಇದು ದೈವವನ್ನು ಪ್ರತಿಪಾದಿಸುತ್ತದೆ.

ಅವೈದಿಕ ದೈವವಾದದಲ್ಲಿ ಒಂದು ಅಂಶ ಗಮನಾರ್ಹ. ಜಡಜಗತ್ತಿಗೆ ಮೀರಿದ ಅದ್ಭುತ ಶಕ್ತಿ ಒಂದಿದೆ. ಅದಕ್ಕೆ ಮಾನವ ಅಧೀನ ಮತ್ತು ಆರಾಧಕ ಎಂದು ಹೇಳಿ ವಿಶ್ವಾತೀತನಾದ ಸೃಷ್ಟಿಕರ್ತನ ಭಾವನೆ ಬೆಳೆಯಲು ಈ ವಾದ ಸಹಾಯ ಮಾಡಿತು.

ವಾದದ ದೋಷಗಳು[ಬದಲಾಯಿಸಿ]

ಈ ವಾದದ ದೋಷಗಳು ಸ್ಪಷ್ಟವಾಗಿವೆ. ಜೀವನಿಗೆ ಭಗವದನುಗ್ರಹ ಎಷ್ಟು ಅಗತ್ಯ, ಅದು ಯಾವ ರೀತಿ ಆಗುತ್ತದೆ ಎಂಬ ಪ್ರಶ್ನೆಗಳನ್ನು ಇದು ಎತ್ತುವುದೇ ಇಲ್ಲ. ಆಧ್ಯಾತ್ಮಿಕ, ನೈತಿಕ ಮತ್ತು ಧಾರ್ಮಿಕ ಜೀವನಕ್ಕೂ ಸೃಷ್ಟಿಕರ್ತನಿಗೂ ಸಂಬಂಧವನ್ನು ಹೇಳುವುದಿಲ್ಲ. ಮಾನವನ ಆಂತರಿಕ ಜೀವನಕ್ಕಿಂತಲೂ ಅವನ ವಿಚಾರಶಕ್ತಿಗೆ ಅತಿಯಾದ ಪ್ರಾಧಾನ್ಯ ಕೊಡುತ್ತದೆ. ಅದಲ್ಲದೆ ದೈವದ ಸರ್ವಶಕ್ತಿತ್ವ, ಸರ್ವಜ್ಞತ್ವ ಇತ್ಯಾದಿ ಗುಣಗಳಾವುದನ್ನೂ ಹೇಳುವುದಿಲ್ಲ; ಸೃಷ್ಟಿಕರ್ತನ ಹೊಣೆಗಾರಿಕೆಯನ್ನು ಒಪ್ಪುವುದಿಲ್ಲ. ಮಾನವ ವಿಚಾರಶಕ್ತಿಯನ್ನು ಸಂಪುರ್ಣವಾಗಿ ಅಧೀನದಲ್ಲಿಟ್ಟುಕೊಳ್ಳಬಲ್ಲನೇ ಅವನ ಇಚ್ಛಾಶಕ್ತಿಗೆ ತಡೆಗಳಿಲ್ಲವೇ-ಎಂಬ ಪ್ರಶ್ನೆಗಳನ್ನು ಪರಿಶೀಲಿಸುವುದಿಲ್ಲ. ಮುಖ್ಯವಾಗಿ ಈ ವಾದ ತರ್ಕದಿಂದಲೇ ಈಶ್ವರನ ಅಸ್ತಿತ್ವವನ್ನು ಸಾಧಿಸುತ್ತದೆ. ಆಧ್ಯಾತ್ಮಿಕ ಜೀವನ, ಮತಾಚಾರ್ಯರ ಶಾಸ್ತ್ರೀಯ ವಚನಗಳು ಇವುಗಳಿಂದ ಈಶ್ವರನ ಅಸ್ತಿತ್ವವನ್ನು ಸಾಧಿಸಬಹುದೆಂಬ ಪ್ರಶ್ನೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಭಾರತೀಯ ದರ್ಶನದಲ್ಲಿ[ಬದಲಾಯಿಸಿ]

ಭಾರತೀಯ ದರ್ಶನದಲ್ಲಿ ನ್ಯಾಯವೈಶೇಷಿಕ ಸಿದ್ಧಾಂತದಲ್ಲಿ ವೇದವನ್ನು ಒಪ್ಪಿದ್ದರೂ ಭಗವಂತನನ್ನು ತರ್ಕಮಾರ್ಗವೊಂದರಿಂದಲೇ ಅರಿಯಬಹುದೆಂದು ಹೇಳಲಾಗಿರುವುದರಿಂದ ಅದನ್ನು ಅವೈದಿಕ ದೈವವಾದಕ್ಕೆ ಹೋಲಿಸಬಹುದು (ಆದರೆ ಭಾರತೀಯರು ಇದನ್ನು ಅವೈದಿಕದರ್ಶನವೆಂದು ಗಣಿಸುವುದಿಲ್ಲ. ಅವೈದಿಕ ಎಂಬ ಪದಕ್ಕೆ ಅವರು ಬೇರೆ ಅರ್ಥವನ್ನು ಕೊಟ್ಟಿರುತ್ತಾರೆ).

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: