ಅವಧಿ ಮೀರಿದ ಸಾಲ

ವಿಕಿಪೀಡಿಯ ಇಂದ
Jump to navigation Jump to search

ವಿಧಿಸಿರುವ ಅವಧಿ ಮುಕ್ತಾಯಗೊಂಡು ನ್ಯಾಯಾಲಯ ಮತ್ತೊಂದು ಅವಧಿಯನ್ನು ಪುನಃ ವಿಧಿಸಲಾಗದಂತಿರುವ ಸಾಲಕ್ಕೆ ಈ ಹೆಸರಿದೆ (ಬಾರ್ಡ್‌ ಡೆಟ್ಸ್‌). ನ್ಯಾಯರೀತ್ಯ ಸಾಲವನ್ನು ಹಿಂತಿರುಗಿಪಡೆಯಬೇಕಾದಲ್ಲಿ ಹೂಡುವ ಯಾವುದೇ ಮೊಕದ್ದಮೆ ಅಥವಾ ನಡೆವಳಿಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರೂಪುಗೊಳ್ಳಬೇಕಾಗುತ್ತದೆ. ಈ ಅವಧಿ ನಿರ್ಧಾರ 1963ರ ಪರಿಮಿತಿ ಕಾನೂನಿನ (ಲಿಮಿಟೇಷನ್ ಆ್ಯಕ್ಟ್‌) ರೀತ್ಯ ಏರ್ಪಡಿಸುತ್ತದೆ. ಈ ಕಾನೂನು 1908ರ ಭಾರತೀಯ ಪರಿಮಿತಿ ಕಾನೂನಿಗೆ (ಇಂಡಿಯನ್ ಲಿಮಿಟೇಷನ್ ಆ್ಯಕ್ಟ್‌) ಬದಲು ಆದದ್ದು. ಸಾಲಗಳಲ್ಲಿ ಹಲವು ವಿಧ: ಮಾರಾಟಗೊಂಡ ಪದಾರ್ಥಗಳ ಮೇಲಿನ ಹಣವನ್ನು ನೀಡದಿರುವುದು, ಕೂಲಿ ಮತ್ತು ಸಂಬಳದಲ್ಲಿನ ಬಾಕಿ, ನಿಯೋಗಿಮೇಲಿನ ಮೂಲಧನದ ಸಾಲಗಳು, ಹಣದ ಮೇಲಿನ ನಿಯೋಗಿ ಸಾಲಗಳು, ಹಿಂತಿರುಗಿಸದಿರುವ ಸಾಲಗಳು, ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕಾರಣ ಆಗುವ ಕ್ಷತಿಪೂರೈಕೆ, ವಾಯಿದೆಯ ದಿನದಂದು ಹುಂಡಿ ಅಥವಾ ವಾಗ್ದಾನ ಪತ್ರವನ್ನು ಮಾನ್ಯ ಮಾಡದಿರುವುದು-ಇತ್ಯಾದಿ. ಪರಿಮಿತಿಯ ಅವಧಿಯನ್ನು ಪರಿಮಿತಿ ಕಾನೂನು ಸಾಮಾನ್ಯವಾಗಿ 3 ವರ್ಷಗಳೆಂದು ನಿಗದಿ ಮಾಡಿದೆ. ಇಲ್ಲಿ ಕೇವಲ ಅವಧಿ ಮಾತ್ರ ಮುಖ್ಯವಾಗಿರದೆ, 3 ವರ್ಷದ ಅವಧಿ ಪ್ರಾರಂಭವಾಗುವ ವೇಳೆಯೂ ಮುಖ್ಯ. ಅವಧಿ ಪ್ರಾರಂಭವಾಗುವ ವೇಳೆಯ ವಿಚಾರವಾಗಿ ಈ ಕಾನೂನಿನ ಕೊನೆಯಲ್ಲಿ ವಿವರಣೆಯನ್ನೀಯಲಾಗಿದೆ. ಸಾಲಗಾರ ತಾನು ಸಾಲ ತೀರಿಸುವ ಅವಧಿ ಮುಕ್ತಾಯಗೊಳ್ಳುವ ಮೊದಲೇ ಸಾಲ ತೀರಿಸುವ ಅವಧಿಯನ್ನು ನವೀಕರಿಸಿಕೊಂಡಿದ್ದು, ಅಂಥವನು ಸಾಲ ತೆಗೆದುಕೊಂಡಿದ್ದಕ್ಕೆ ಬರೆವಣಿಗೆಯ ರೂಪದಲ್ಲಿ ನೀಡಿರುವ ಸ್ವೀಕಾರ ಪತ್ರವನ್ನು ನ್ಯಾಯಾಲಯದ ಮುಂದೆ ಅವನ ವಿರುದ್ಧ ಮೊಕದ್ದಮೆ ಹೂಡಲು ಹಾಜರುಪಡಿಸಿದರೆ, ಸಾಲಗಾರನಿಗೆ ನವೀಕರಿಸಿಕೊಂಡ ದಿನದಿಂದ ಒಂದು ಹೊಸ ಪರಿಮಿತಿಯ ಅವಧಿಯನ್ನು ನೀಡಲಾಗುತ್ತದೆ. ಇದೇ ರೀತಿ, ನಿಗದಿ ಮಾಡಿರುವ ಅವಧಿ ಮುಗಿಯುವುದರೊಳಗಾಗಿ ಸಾಲಗಾರ ಮೂಲಧನದ ಅಥವಾ ಬಡ್ಡಿ ಪಾವತಿಯನ್ನು ಭಾಗಶಃ ಮಾಡಿದ್ದರೆ, ಒಂದು ಹೊಸ ಪರಿಮಿತಿಯ ಅವಧಿಯನ್ನು ಪಾವತಿ ಮಾಡಿದ ದಿನದಿಂದ ಗೊತ್ತು ಮಾಡಲಾಗುತ್ತದೆ. ಒಟ್ಟಿನಲ್ಲಿ ಬಾಕಿ ಇರುವ ಯಾವುದೇ ಆರ್ಥಿಕ ವ್ಯವಹಾರದಲ್ಲೂ ಸೂಕ್ತ ಕ್ರಮ ಜರುಗಿಸುವುದರಲ್ಲಿ ಎಚ್ಚರಿಕೆ ವಹಿಸಬೇಕಾದುದು ಅವಶ್ಯ. ಹೀಗಾಗದಿದ್ದ ಪಕ್ಷಕ್ಕೆ ಸಾಲ ಅವಧಿಮೀರಿದ ಸಾಲವಾಗಿ ಪರಿಣಮಿಸುತ್ತದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: