ಅಳಿಯ ಸಂತಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಳಿಯ ಸಂತಾನ ಆಸ್ತಿಯ ಒಡೆತನದಲ್ಲಿ ಸ್ತ್ರೀಗೆ ಪ್ರಾಧಾನ್ಯ ನೀಡುವ ಒಂದು ಸಾಮಾಜಿಕ ಏರ್ಪಾಡು. ಇದು ದಕ್ಷಿಣ ಕನ್ನಡ ಜಿಲ್ಲೆಯ ಜೈನ ಮತ್ತು ಕೆಲವು ಹಿಂದೂ ಪಂಗಡಗಳಲ್ಲಿ ಬಳಕೆಯಲ್ಲಿರುವ ಪದ್ಧತಿ. ಈ ಪದ್ಧತಿಗೆ ಅನುಗುಣವಾಗಿ ಆಸ್ತಿಯ ಮೇಲಿನ ಹಕ್ಕು ಹೆಣ್ಣುಮಕ್ಕಳ ಸಂತಾನಕ್ಕೇ ಮೀಸಲಾಗಿರುತ್ತದೆ.[೧] ಹೀಗಾಗಿ, ಅಳಿಯ ಸಂತಾನ--ಸ್ತ್ರೀಯ ಮಕ್ಕಳು ಮತ್ತು ಆಕೆಯ ಹೆಣ್ಣುಮಕ್ಕಳ ಮಕ್ಕಳು ಮಾತ್ರವೇ ಆಕೆಯ (ಅಂದರೆ ಅಳಿಯ ಸಂತಾನಸ್ತ್ರೀಯ) ಕುಟುಂಬ ಎನ್ನಿಸಿಕೊಳ್ಳುತ್ತಾರೆ. ಗಂಡು ತನ್ನ ತಾಯಿಯ ಕುಟುಂಬದ ಸದಸ್ಯನಾದರೂ ಆತನ ಹೆಂಡತಿ ಮತ್ತು ಮಕ್ಕಳು ಆ ಕುಟುಂಬದ ಸದಸ್ಯರಲ್ಲ. ಮಲಬಾರ್, ಕೊಚ್ಚಿನ್ ಮತ್ತು ತಿರುವಾಂಕೂರ್ ಪ್ರದೇಶಗಳನ್ನೊಳಗೊಂಡಿರುವ ಕೇರಳ ರಾಜ್ಯದಲ್ಲಿ ಪ್ರಚಲಿತವಾಗಿರುವ ಮರುಮಕ್ಕತ್ತಾಯಮ್ ಎಂಬ ಪದ್ಧತಿಯನ್ನು ಅಳಿಯ ಸಂತಾನ ಬಹುಮಟ್ಟಿಗೆ ಹೋಲುತ್ತದೆ. ಆದರೆ ಅಳಿಯ ಸಂತಾನ ಮತ್ತು ಮರುಮಕ್ಕತ್ತಾಯಮ್ ಪದ್ಧತಿಗಳಲ್ಲಿ ಹಲವಾರು ಭೇದಗಳಿವೆ. ಅಳಿಯ ಸಂತಾನದ ಪದ್ಧತಿಯಲ್ಲಿ ಕುಟುಂಬದ ವ್ಯವಸ್ಥೆ ಮತ್ತು ಕುಟುಂಬದ ಆಸ್ತಿಯ ಮೇಲ್ವಿಚಾರಣೆಯ ಹೊಣೆ ಸಾಮಾನ್ಯವಾಗಿ ಆ ಕುಟುಂಬದ ಹಿರಿಯ ಗಂಡು ಅಥವಾ ಹೆಣ್ಣುಮಗಳದೇ ಆಗಿರುತ್ತದೆ. ಮರುಮಕ್ಕತ್ತಾಯಮ್ ಪದ್ಧತಿಯಲ್ಲಿ ಈ ಹೊಣೆ ಹಿರಿಯ ಗಂಡುವ್ಯಕ್ತಿಯದೇ ಆಗಿರುತ್ತದೆ. ಇನ್ನೊಂದು ಸಣ್ಣ ವ್ಯತ್ಯಾಸವೂ ಉಂಟು. ಅಳಿಯ ಸಂತಾನವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಸ್ವಂತ ದುಡಿಮೆಯಿಂದ ತಾನು ಸಂಪಾದಿಸಿದ ಆಸ್ತಿಗಳನ್ನು ಮರಣಶಾಸನದ ಮೂಲಕ ತನ್ನ ಇಚ್ಛೆ ಬಂದಂತೆ ವಿಲೇವಾರಿ ಮಾಡದೆ ಇದ್ದ ಪಕ್ಷದಲ್ಲಿ ಆ ಆಸ್ತಿಗಳೆಲ್ಲ ಆತನ ವಂಶ ಅಥವಾ ಅವರಿಗೇ ಸೇರುತ್ತದೆ; ಆದರೆ ಮಲಬಾರಿನಲ್ಲಿ ಅದು ಸಂಪೂರ್ಣ ಕುಟುಂಬದ ಆಸ್ತಿಯಾಗುತ್ತದೆ.

ಪದ್ದತಿಯಲ್ಲಿ ಬದಲಾವಣೆಗಳು[ಬದಲಾಯಿಸಿ]

1949ರ ಮದ್ರಾಸ್ ಅಳಿಯ ಸಂತಾನ ಶಾಸನದ ಮೂಲಕ ಅಳಿಯ ಸಂತಾನ ಪದ್ಧತಿಯಲ್ಲಿ ಶಾಸನಬದ್ಧವಾದ ಬದಲಾವಣೆಯನ್ನು ಜಾರಿಗೆ ತರುವವರೆಗೆ, ಕುಟುಂಬದ ಎಲ್ಲ ವಯಸ್ಕ ಸದಸ್ಯರ ಅನುಮತಿ ದೊರೆತ ಹೊರತು, ಕುಟುಂಬದ ಆಸ್ತಿಯನ್ನು ಪಾಲುಮಾಡಲು ಸಾಧ್ಯವಿರಲಿಲ್ಲ. ಎಲ್ಲ ಸಂದರ್ಭಗಳಲ್ಲಿಯೂ ಈ ನಿಯಮವನ್ನು ಪಾಲಿಸಲಾಗುತ್ತಿದ್ದಿತೆಂದು ಹೇಳಲು ಬರುವಂತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದಿರುವ ಸುಮಾರು 1820 ಮೊಕದ್ದಮೆಗಳನ್ನು ಗಮನಿಸಿದರೆ ಮೂಲವ್ಯಕ್ತಿಯ ಸೂತ್ರದ (ಪ್ರಿನ್ಸಿಪಲ್ ಆಫ್ ಪರ್ ಸ್ವಪ್ರ್ಸ್) ಆಧಾರದ ಮೇಲೆ ಆಸ್ತಿಯನ್ನು ಪಾಲು ಮಾಡುತ್ತಿದ್ದುದು ಕಂಡುಬರುತ್ತದೆ. ಅಂದರೆ, ಒಂದು ಕುಟುಂಬದಲ್ಲಿ ನಾಲ್ವರು ಹೆಣ್ಣುಮಕ್ಕಳು ಇದ್ದು, ಪ್ರತಿಯೊಬ್ಬರಿಗೂ ಅವರವರ ಸಂತಾನ ಅಥವಾ ಶಾಖೆ ಅಥವಾ ಕವರು ಇದ್ದರೆ, ಆ ಒಂದೊಂದು ಉಪವಂಶಕ್ಕೂ ಒಂದು ಭಾಗ ಅಥವಾ ಆ ಪ್ರಸಂಗಕ್ಕನುಗುಣವಾಗಿ ಕಾಲುಭಾಗ ಆಸ್ತಿ ದೊರೆಯುತ್ತಿತ್ತು. ಆದರೆ, ಕಾಲಾಂತರದಲ್ಲಿ ಮಲಬಾರ್ ಪ್ರಾಂತ್ಯಕ್ಕೆ ಸಂಬಂಧಿಸಿದ ಒಂದೊಂದು ಮೊಕದ್ದಮೆಗಳ ವಿಚಾರದಲ್ಲಿ ಮದ್ರಾಸ್ ಹೈಕೋರ್ಟಿನ ತೀರ್ಪಿನ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನ್ಯಾಯಾಲಯಗಳೂ ಮಲಬಾರ್ ಪ್ರಾಂತ್ಯದಲ್ಲಿ ಪ್ರಚಲಿತವಾಗಿದ್ದ ನಿಯಮಗಳನ್ನೇ ಅನುಸರಿಸಬೇಕಾಗಿ ಬಂದಿತು. ಹೀಗಾಗಿ, ಅಳಿಯ ಸಂತಾನ ವ್ಯವಸ್ಥೆಯಲ್ಲಿಯೂ ಆಸ್ತಿಯ ಅವಿಭಾಜ್ಯತ್ವದ ಸೂತ್ರ (ಪ್ರಿನ್ಸಿಪಲ್ ಆಫ್ ಇಂಪಾರ್ಟಿಬಿಲಿಟಿ) ರೂಢಮೂಲವಾಯಿತು. ಆದರೆ ಕುಟುಂಬಗಳು ಅಡ್ಡಾದಿಡ್ಡಿಯಾಗಿ ಬೆಳೆದು ಸಾಮೂಹಿಕ ಜೀವನ ಮತ್ತು ಆಸ್ತಿಯ ಉಪಭೋಗ ಅನನುಕೂಲಕರವಾಗಿ ಪರಿಣಮಿಸಿದಾಗ, ಅಂಥ, ಕುಟುಂಬಗಳ ವಯಸ್ಕ ಸದಸ್ಯರು ಕರಾರು ಅಥವಾ ಒಪ್ಪಂದಗಳನ್ನು ಮಾಡಿಕೊಂಡು ಅನುಕೂಲ ಮತ್ತು ಉಪಭೋಗದ ದೃಷ್ಟಿಯಿಂದ ತಮ್ಮ ಆಸ್ತಿಗಳನ್ನು ಪಾಲುಮಾಡಿಕೊಂಡಂಥ ಅನೇಕ ಉದಾಹರಣೆಗಳು ಕಾಣಬರುತ್ತವೆ.

20ನೆಯ ಶತಮಾನದ ಪ್ರಾರಂಭದಲ್ಲಿ ಮತ್ತು ಅದಕ್ಕೆ ಹಿಂದೆ ಈ ಕುಟುಂಬಗಳ ಉಸ್ತುವಾರಿ ಸಮರ್ಪಕವಾಗಿ ನಡಿಯುತ್ತಿದ್ದಿತು. ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವರು ದೂರದೃಷ್ಟಿಯಿಂದ ಕೆಲಸಮಾಡುತ್ತಿದ್ದರು. ಮೇಲ್ವಿಚಾರಕರ ನಿಷ್ಠೆಯಿಂದಾಗಿ ಕುಟುಂಬದ ಆಸ್ತಿ ಹೆಚ್ಚಾಗುತ್ತಾ ಹೋಗುತ್ತಿದ್ದಿತು. ಮೇಲ್ವಿಚಾರಕರು ತಾವೇ ಯಜಮಾನರಾಗಿರುತ್ತಿದ್ದರು. ಅಥವಾ ಆಯಾಕಾಲದಲ್ಲಿ ಯಜಮಾನಿಯರಾಗಿರುತ್ತಿದ್ದ ತಮ್ಮ ತಾಯಂದಿರಿಗೊ ಅಥವಾ ಸೋದರಿಯರಿಗೊ ನೆರವಾಗುತ್ತಿದ್ದರು. ಕುಟುಂಬದ ಕಿರಿಯ ಸದಸ್ಯರು ಕೂಡ ಕುಟುಂಬದ ಆಸ್ತಿಯನ್ನು ರೂಢಿಸುವುದರಲ್ಲಿ ನೆರವಾಗುತ್ತಿದ್ದರು. ಆದರೆ ಕಾಲಕಳೆದಂತೆ ಮೇಲ್ವಿಚಾರಕರು ಆ ಕುಟುಂಬದಲ್ಲಿ ವಾಸಿಸುತ್ತಿದ್ದ ತಮ್ಮ ಹೆಂಡತಿ, ಮಕ್ಕಳ ವಿಚಾರದಲ್ಲಿ ಹೆಚ್ಚು ಪ್ರೀತಿ ಮತ್ತು ನಿಷ್ಠೆಯನ್ನು ತೋರತೊಡಗಿದರು. ತಮ್ಮ ಭಾವಮೈದುನ, ಅತ್ತಿಗೆ, ನಾದಿನಿಯರ ವಿಚಾರದಲ್ಲಿ ಉಪೇಕ್ಷೆಯುಂಟಾದುದರ ಪರಿಣಾಮ ಆ ಕುಟುಂಬದ ಸದಸ್ಯರಲ್ಲಿ ತೀವ್ರವಾದ ಅತೃಪ್ತಿ ಬೆಳೆಯತೊಡಗಿತು. ಕಿರಿಯ ಸದಸ್ಯರ ಹಿತವನ್ನು ಉಪೇಕ್ಷಿಸಲಾಯಿತು. ಇಂಥ ಪ್ರಸಂಗಗಳು ಹೆಚ್ಚಾಗತೊಡಗಿದಾಗ, ಕುಟುಂಬದ ಕಿರಿಯ ಸದಸ್ಯರು ತಮ್ಮ ಜೀವನೋಪಾಯಕ್ಕಾಗಿ ನ್ಯಾಯಾಲಯಗಳಿಗೆ ಶರಣು ಹೋಗಬೇಕಾಯಿತು. ಈ ಶತಮಾನದ ಮೊದಲ ವರ್ಷಗಳಲ್ಲಿ ಕುಟುಂಬದ ಮೇಲ್ವಿಚಾರಕ ತಾನೇ ಸರ್ವಾಧಿಕಾರಿಯಾಗಿ ಪರಿಣಮಿಸಿದ. ಅನ್ನ ಬಟ್ಟೆ ಮತ್ತು ವಸತಿಯನ್ನು ಪಡೆದುಕೊಳ್ಳವುದು ಮಾತ್ರ ಕಿರಿಯ ಸದಸ್ಯರ ಸಾಮಾನ್ಯ ಹಕ್ಕಾಗಿತ್ತು. ತಾವು ಕುಟುಂಬದಿಂದ ಬೇರೆಯಾಗಿ ಜೀವಿಸಲು ಮತ್ತು ಜೀವನೋಪಾಯವನ್ನು ಕೇಳಲು ಕಾರಣಗಳೇನೆಂಬುದನ್ನು ಅವರು ಸರಿಯಾಗಿ ಸಮರ್ಥಿಸಿಕೊಳ್ಳಬೇಕಾಗುತ್ತಿತ್ತು. ಆದರೆ, ಹೆಚ್ಚು ಮುಂದುವರಿದ ಪ್ರಾಂತ್ಯವಾಗಿರುವ ಮಲಬಾರ್ ಪ್ರಾಂತ್ಯಕ್ಕೆ ಸಂಬಂಧಿಸಿದ ಅನೇಕಾನೇಕ ಮೊಕದ್ದಮೆಗಳು ಮದ್ರಾಸ್ ಹೈಕೋರ್ಟಿನ ಮುಂದೆ ಬರತೊಡಗಿದವು. ಮರುಮಕ್ಕತ್ತಾಯಮ್ ನಿಯಮಕ್ಕೊಳಪಟ್ಟಿದ್ದ ಅನೇಕ ನ್ಯಾಯಾಧೀಶರುಗಳೂ ಈ ಮೊಕದ್ದಮೆಗಳಿಗೆ ಹೆಚ್ಚುಹೆಚ್ಚು ಔದಾರ್ಯದಿಂದ ಪುರಸ್ಕರಿಸುತ್ತ ಬಂದರು. ಕುಟುಂಬದ ಯಜಮಾನರಂತೆಯೇ ಕುಟುಂಬದ ಕಿರಿಯ ಸದಸ್ಯರುಗಳೂ ಕುಟುಂಬದ ಆಸ್ತಿಗೆ ಒಡೆಯರು ಎಂಬ ನಿಲುವನ್ನು ನ್ಯಾಯಾಲಯಗಳು ತಳೆದುವು. ಮಲಬಾರ್ ಪ್ರಾಂತ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯಕ್ಕೆ ಸಂಬಂಧಿಸಿದ ಹಾಗೂ ಉಸ್ತುವಾರಿಕೆಯನ್ನು ಸರಿಯಾಗಿ ನೆರವೇರಿಸದೆ ಇರುವಂಥ ಯಜಮಾನನನ್ನು ಅವರ ಸ್ಥಾನದಿಂದ ಕಿತ್ತುಹಾಕಿ, ಆ ಸ್ಥಾನಕ್ಕೆ ಕುಟುಂಬದ ಮತ್ತೊಬ್ಬ ಹಿರಿಯನನ್ನು ಯಜಮಾನನನ್ನಾಗಿ ನೇಮಿಸಬೇಕೆಂಬ ಬೇಡಿಕೆಯ ಮೊಕದ್ದಮೆಗಳು ದಿನನಿತ್ಯದ ಘಟನೆಗಳಾಗಿ ಪರಿಣಮಿಸಿದವು. ಈ ಮೊದಲು ಉಲ್ಲೇಖಿಸಲಾದ 1949ರ ಮದ್ರಾಸ್ ಅಳಿಯ ಸಂತಾನ ಶಾಸನವನ್ನು ಜಾರಿಗೆ ತರುವುದಕ್ಕೆ ಒಂದೆರಡು ದಶಕಗಳ ಹಿಂದೆ ಕುಟುಂಬದ ಆಸ್ತಿಪಾಸ್ತಿ ಮತ್ತು ಮೇಲ್ವಿಚಾರಣೆಯ ವಿಷಯದಲ್ಲಿ ಆ ಕುಟುಂಬಗಳ ಕಿರಿಯ ಸದಸ್ಯರ ಅತೃಪ್ತಿ ಮುಗಿಲು ಮುಟ್ಟಿದುದರ ಪರಿಣಾಮವಾಗಿ ಮದ್ರಾಸ್ ಶಾಸನ ಸಭೆ ಮೇಲ್ಕಂಡ ಶಾಸನವನ್ನು ಜಾರಿಗೆ ತರಬೇಕಾಯಿತು.

ಈ ಶಾಸನ ಮೊಟ್ಟಮೊದಲಬಾರಿಗೆ ಅನಿವಾರ್ಯ ವಿಭಜನೆ ತತ್ವವನ್ನು ಜಾರಿಗೆ ತಂದಿತು. ಈ ಶಾಸನಕ್ಕನುಗುಣವಾಗಿ ಕವರು ಪಾಲು ಅಥವಾ ಉಪವಂಶದ ಪಾಲನ್ನು ನ್ಯಾಯಾಲಯಗಳ ಮುಖಾಂತರ ಪಡೆಯಬಹುದು. ಆದರೆ ಈ ಶಾಸನದ ಮೂಲಕ ವ್ಯಷ್ಟಿಪಾಲನ್ನು ಪಡೆಯಲು ಸಾಧ್ಯವಿಲ್ಲ. 1933ರಲ್ಲಿ ಮದ್ರಾಸ್ ಶಾಸನ ಸಭೆ ಜಾರಿಗೆ ತಂದ ಮರುಮಕ್ಕತ್ತಾಯಮ್ ಶಾಸನ ಮಲಬಾರ್ ಪ್ರಾಂತ್ಯಕ್ಕೆ ಮಾತ್ರ ಅನ್ವಯಿಸುತ್ತಿತ್ತು. ಈ ಶಾಸನಕ್ಕನುಗುಣವಾಗಿ ವ್ಯಷ್ಟಿಪಾಲನ್ನು ಪಡೆದುಕೊಳ್ಳುವುದು ಸಾಧ್ಯವಾಗಿತ್ತು. ಆದರೆ ಅಳಿಯ ಸಂತಾನಶಾಸನದಲ್ಲಿ ಇದನ್ನು ಕವರು ಅಥವಾ ಉಪವಂಶಕ್ಕೆ ಮಾತ್ರ ಅನ್ವಯಿಸಲಾಯಿತು. ಅದರಲ್ಲಿಯೂ ಕವರು ಅಥವಾ ಉಪವಂಶದ ಸದಸ್ಯರಲ್ಲಿ ಬಹು ಪಾಲು ಸದಸ್ಯರು ಒಟ್ಟು ಸೇರಿ ಬೇಡಿಕೆಯನ್ನು ಮುಂದುವರಿಸಿದರೆ ಮಾತ್ರ ಆ ಪಾಲನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಯಾವ ರೀತಿಯಲ್ಲಿ ಈ ಪಾಲನ್ನು ಕೊಡಬೇಕೆಂಬುದನ್ನು ಈ ಶಾಸನ ಸ್ಪಷ್ಟಪಡಿಸಿದೆ. ಪಾಲಿನ ಅರ್ಧಭಾಗ ಉಪವಂಶಾನುಗುಣವಾಗಿಯೂ ಉಳಿದರ್ಧವನ್ನು ತಲಾವಾರು ವ್ಯಕ್ತಿ ಸಂಖ್ಯೆಯ ಆಧಾರದ ಮೇಲೆಯೂ ಕೊಡಲಾಗುತ್ತದೆ. ಈ ಹಂಚಿಕೆ ಮೊದಲ ಹದಿನೈದು ವರ್ಷಗಳಿಗೆ ಅನ್ವಯಿಸುತ್ತದೆ. ಅನಂತರ ಉಪವಂಶಾನುಗುಣವಾಗಿಯೇ ವಿಭಜನೆಯಾಗುತ್ತದೆ.

ಮೈಸೂರು ಶಾಸನಸಭೆ 1961ರಲ್ಲಿ ತಿದ್ದುಪಡಿ ವಿಧೇಯಕವೊಂದನ್ನು ಅಂಗೀಕರಿಸಿ ಅಳಿಯ ಸಂತಾನಶಾಸನದ ಈ ಭಾಗವನ್ನು ಅಂದರೆ ಹಂಚಿಕೆಯ ವಿಧಾನಕ್ಕೆ ಸಂಬಂಧಿಸಿದ ಭಾಗವನ್ನು ತಿದ್ದುಪಡಿಮಾಡಿತು. ಈ ತಿದ್ದುಪಡಿಗನುಗುಣವಾಗಿ ತಲಾವಾರು ವ್ಯಕ್ತಿಸಂಖ್ಯೆಯ ಆಧಾರದ ಮೇಲೆ ಆಸ್ತಿ ವಿಭಾಗಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಶಾಸನ ಸಿಂಧುತ್ವವನ್ನು ಇಂದು ಪ್ರಶ್ನಿಸಲಾಗುತ್ತಿದೆ. ಮೈಸೂರು ಹೈಕೋರ್ಟಿನಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ರಿಟ್-ಅರ್ಜಿಗಳು ವಿಚಾರಣೆಯಲ್ಲಿವೆ.

ಕಾನೂನು[ಬದಲಾಯಿಸಿ]

ಹಳೆಯ ಕಾನೂನಿನ ಮತ್ತೊಂದು ಅಂಶಕ್ಕೆ 1949ರ ಶಾಸನ ತಿದ್ದುಪಡಿಯನ್ನು ತಂದಿತು. ಇದು ಅಳಿಯ ಸಂತಾನವ್ಯಕ್ತಿಗಳ ವಿವಾಹದ ಸಿಂಧುತ್ವಕ್ಕೆ ಸಂಬಂಧಪಟ್ಟಿದ್ದಿತು. 1883ರಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಒಂದು ತೀರ್ಮಾನದ ಆಧಾರದ ಮೇಲೆ ಅಂಥ ವಿವಾಹಗಳಿಗೆ ಸಿಂಧುತ್ವವಿಲ್ಲವೆಂದು ಭಾವಿಸಲಾಗಿತ್ತು. ಇದನ್ನು ಸರಿಪಡಿಸಲು 1896ರಲ್ಲಿ ಮಲಬಾರ್ ವಿವಾಹ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮಸೂದೆಗನುಗುಣವಾಗಿ ವಿವಾಹಗಳನ್ನು ಅಧಿಕೃತವಾಗಿ ದಾಖಲು ಮಾಡಿಸಬಹುದಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೋ ಒಬ್ಬಿಬ್ಬರನ್ನು ಬಿಟ್ಟರೆ ಅಳಿಯಸಂತಾನ ನಿಯಮಕ್ಕೊಳಪಟ್ಟ ಬಹುಮಂದಿ ಈ ವಿಧಾನವನ್ನು ಆಶ್ರಯಿಸಲಾರದೆ ಹೋದರು. ಏಕೆಂದರೆ ಅಳಿಯ ಸಂತಾನ ವ್ಯವಸ್ಥೆಯುಲ್ಲಿನ ಸಾಂಪ್ರದಾಯಿಕ ವೈವಾಹಿಕ ವಿಧಿ ಜನತೆಯ ದೃಷ್ಟಿಯಲ್ಲಿ ಮಿತಾಕ್ಷರ ಅಥವಾ ಸಾಮಾನ್ಯ ಹಿಂದೂ ವಿವಾಹವಷ್ಟೇ ಸಿಂಧುವಾಗಿದ್ದಿತು. 1949ರ ಶಾಸನ ಅಂಥ ವಿವಾಹಗಳೆಲ್ಲವನ್ನೂ ಸಕ್ರಮವಾದುವೆಂದೂ, ಸಿಂಧುತ್ವವುಳ್ಳವೆಂದೂ ಮಾನ್ಯಮಾಡಿತು. ಆದರೆ ಈ ಶಾಸನಕ್ಕನುಗುಣವಾಗಿ ಪತಿ ಅಥವಾ ಪತ್ನಿ ನ್ಯಾಯಾಲಯಕ್ಕೆ ಕೇವಲ ಅರ್ಜಿಯನ್ನು ಸಲ್ಲಿಸಿ ವಿವಾಹವಿಚ್ಛೇದನವನ್ನು ಪಡೆದುಕೊಳ್ಳಬಹುದಾಗಿತ್ತು. ಯಾವುದೇ ಕಾರಣವನ್ನು ಕೊಡಬೇಕಾಗಿರಲಿಲ್ಲ. 1869ರ ಭಾರತೀಯ ವಿವಾಹ ವಿಚ್ಛೇದನ ನಿಯಮ ಅಥವಾ 1955ರ ಹಿಂದೂ ವಿವಾಹ ಶಾಸನದಲ್ಲಿ ಕಾಣದೊರೆಯುವಂತೆ ಕೆಲವು ಸಾಮಾನ್ಯತತ್ವಗಳಿಗೆ ಒಳಪಟ್ಟ ವಿವಾಹ ಶಾಸನದಲ್ಲಿ ವಿಚ್ಛೇದನಕ್ಕೆ ಅನುಮತಿಯನ್ನೀಯಬೇಕೆಂಬ ಸಿದ್ಧಾಂತಕ್ಕೆ ಈ ಭಾಗ ಅನುಗುಣವಾಗಿಲ್ಲವೆಂದು ಹೇಳಬಹುದು. ಅಂದರೆ ಪರಿತ್ಯಾಗ, ಕ್ರೂರತನ ಅಥವಾ ವ್ಯಭಿಚಾರ ಮೊದಲಾದಂಥ ಕಾರಣಗಳನ್ನು ನ್ಯಾಯಾಲಯ ಎತ್ತಿಹಿಡಿದು ವಿಚ್ಛೇದನಕ್ಕೆ ಅನುಮತಿಯನ್ನು ನೀಡಬೇಕು.

1949ರ ಶಾಸನ ಅಪ್ರಾಪ್ತವಯಸ್ಕರ ಪಾಲನೆ ಪೋಷಣೆಗೂ ಅಂತಿಮ ಇಷ್ಟಪತ್ರವನ್ನು ಬರೆದಿಡದಿರುವಂಥ ಸಂದರ್ಭಗಳಲ್ಲಿ ಮೇಲ್ವಿಚಾರಕ ಸ್ಥಾನವನ್ನು ಭರ್ತಿಮಾಡಲೂ ಅವಕಾಶವನ್ನು ಮಾಡಿಕೊಟ್ಟಿತು. ಈ ದೃಷ್ಟಿಯಿಂದಲೂ, ಹಳೆಯ ಸಾಂಪ್ರದಾಯಿಕ ನಿಯಮಕ್ಕೆ ಈ ಶಾಸನ ತಿದ್ದುಪಡಿಯನ್ನು ತಂದಿತು. ಈ ಮೊದಲು ಬಳಕೆಯುಲ್ಲಿದ್ದ ಸಾಂಪ್ರದಾಯಿಕ ನಿಯಮಕ್ಕನುಗುಣವಾಗಿ, ಈ ಮೊದಲೇ ಸ್ಪಷ್ಟಪಡಿಸಿರುವಂತೆ, ಅಳಿಯ ಸಂತಾನ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಆತನ ವಂಶ ಅಥವಾ ಶಾಖೆಗೆ ಸೇರುತ್ತಿತ್ತು. ಆದರೆ ಈ ಶಾಸನದಲ್ಲಿ ಕೆಲವು ನಿಯಮಗಳನ್ನು ರೂಪಿಸಿ ಅಳಿಯ ಸಂತಾನವ್ಯಕ್ತಿಯ ಸ್ವಯಾರ್ಜಿತ ಆಸ್ತಿ ನಿಯಮಗಳಿಗನುಗುಣವಾಗಿ ತಾಯಿ ಪತ್ನಿ ಮತ್ತು ಮಕ್ಕಳಿಗೆ ಸೇರಬೇಕೆಂದು ಗೊತ್ತುಪಡಿಸಲಾಗಿದೆ. ಕೌಟುಂಬಿಕ ವ್ಯವಹಾರಗಳನ್ನು ನೋಡಿಕೊಳ್ಳಲು, ಲೆಕ್ಕಪತ್ರಗಳನ್ನಿಡಲು ಕುಟುಂಬದ ಸದಸ್ಯರಿಗೆ ಜೀವನೋಪಾಯವನ್ನು ಕಲ್ಪಿಸಲು, ಕುಟುಂಬದ ಆಸ್ತಿ ಪರಭಾರಿಯಾಗದಂತೆ ನೋಡಿಕೊಳ್ಳಲು ಮೇಲ್ವಿಚಾರಕನಿಗೆ ಈ ಶಾಸನ ಅವಕಾಶಮಾಡಿಕೊಟ್ಟಿದೆ.

ಅಳಿಯ ಸಂತಾನ ನಿಯಮಕ್ಕೊಳಪಟ್ಟಿರುವ ಜೈನ ಪಂಗಡಗಳ (ಪುರೋಹಿತವರ್ಗಕ್ಕೆ ಸೇರಿದ ಇಂದ್ರರೆಂಬ ವರ್ಗಕ್ಕೆ ಸೇರಿದವರು ಮಿತಾಕ್ಷರ ನಿಯಮಕ್ಕೊಳಪಟ್ಟಿದ್ದಾರೆ) ವಿಚಾರವನ್ನು ತೆಗೆದುಕೊಂಡರೆ, 1929ರಲ್ಲಿ ಅಂಗೀಕರಿಸಲಾದ ಶಾಸನವೊಂದು ಜಾರಿಯಲ್ಲಿದ್ದುದು ಕಂಡುಬರುತ್ತದೆ. ಈ ಶಾಸನಕ್ಕನುಗುಣವಾಗಿ ಕುಟುಂಬದ ಕಟ್ಟಕಡೆಯ ಜೀವಂತ ವ್ಯಕ್ತಿಯ ಅಥವಾ ಅವನ ಕುಟುಂಬದ ಆಸ್ತಿ-ಪಾಸ್ತಿಗಳು, ಮಿತಾಕ್ಷರ ಶಾಸನ ವ್ಯವಸ್ಥೆಯಲ್ಲಾಗುವಂತೆಯೇ ಅವನ ಉತ್ತರಾಧಿಕಾರಿಗಳಿಗೆ ಸೇರುತ್ತವೆ.

1956ರ ಹಿಂದೂ ಉತ್ತರಾಧಿಕಾರ ಶಾಸನ ಅಳಿಯ ಸಂತಾನ ನಿಯಮದಲ್ಲಿ ಮತ್ತೊಂದು ಬದಲಾವಣೆಯನ್ನುಂಟುಮಾಡಿತು. ಅಂತಿಮ ಇಚ್ಛಾಪತ್ರವನ್ನು ಸಿದ್ಧಪಡಿಸದೆ ಅವಿಭಾಜ್ಯ ಅಳಿಯ ಸಂತಾನದ ವ್ಯಕ್ತಿಯೊಬ್ಬ ಸತ್ತರೆ, ಆತನ ಪಾಲು ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಈ ಸಂಬಂಧದಲ್ಲಿ ಅವನು ಮರಣಶಾಸನವನ್ನು ತಯಾರುಮಾಡಬಹುದು.

ಶಾಸನ ರಚನೆಯಿಂದ ತಿದ್ದುಪಡಿಮಾಡಿ ಪರಿಷ್ಕರಿಸಲಾಗಿರುವ ಅಳಿಯಸಂತಾನ ನಿಯಮದ ಕೆಲವು ಪ್ರಮುಖ ಲಕ್ಷಣಗಳು ಹೀಗಿವೆ. ಕಾಲಾನುಕ್ರಮದಲ್ಲಿ ಅವಿಭಕ್ತ ಕುಟುಂಬಗಳು ಮತ್ತೆ ಮತ್ತೆ ಅಸಂಖ್ಯಾತವಾಗಿ ವಿಭಜಿತವಾಗುತ್ತಾ ಬಂದುದರಿಂದಲೂ ಹಾಗೂ ನಿಯಮದ ವ್ಯಾಪ್ತಿಗೊಳಪಟ್ಟ ವ್ಯಕ್ತಿಗಳು ತಮ್ಮ ಆಸ್ತಿಯನ್ನು ತಮ್ಮ ಹೆಂಡಿರು ಮಕ್ಕಳಿಗೆ ಮತ್ತು ಇತರರಿಗೆ ಒಟ್ಟುಕೊಡುವ ಸ್ವಾಭಾವಿಕ ಪ್ರವೃತ್ತಿಯಿಂದಾಗಿಯೂ ಈ ಹಳೆಯ ವ್ಯವಸ್ಥೆ ಶೀಘ್ರವಾಗಿ ಹಿಮ್ಮೆಟ್ಟುತ್ತಿದ್ದು, ಇತರ ಹಿಂದೂವರ್ಗಗಳಿಗೆ ಅನ್ವಯವಾಗುವ ಹಿಂದೂ ಶಾಸನದೊಡನೆ ವಿಲೀನಗೊಳ್ಳುತ್ತಿದೆ. (ಕೆ.ಆರ್.ಕೆ.)

ಉಲ್ಲೇಖಗಳು[ಬದಲಾಯಿಸಿ]