ಅಲ್ಪಸಂಖ್ಯಾತರ ಹಕ್ಕುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾವುದೇ ದೇಶದ ಬಹುಜನರ ಬುಡಕಟ್ಟು, ಮತ, ಭಾಷೆ, ಆಚಾರವ್ಯವಹಾರ ಇತ್ಯಾದಿಗಳು ಒಂದು ತೆರನಾಗಿದ್ದು, ಇವುಗಳಿಂದ ಭಿನ್ನವಿರುವ ಬುಡಕಟ್ಟು, ಧರ್ಮ, ಭಾಷೆ ಇತ್ಯಾದಿಗಳನ್ನನುಸರಿಸುವ ಜನ ಸ್ವಲ್ಪವಿದ್ದರೆ ಅವರನ್ನು ಅಲ್ಪಸಂಖ್ಯಾತರು ಎನ್ನುತ್ತೇವೆ. ಜಾತಿಪದ್ಧತಿ ಇರುವ ಭಾರತ ದೇಶದಲ್ಲಿ ಪ್ರತ್ಯೇಕ ಆಚಾರ ವ್ಯವಹಾರಗಳಿಂದ ಅಲ್ಪಸಂಖ್ಯಾತರಾಗಿರುವ ಅನೇಕ ಪಂಗಡಗಳನ್ನು ಕಾಣಬಹುದು. ಅಲ್ಪಸಂಖ್ಯಾತರ ಹಕ್ಕಿನ ಸಮಸ್ಯೆ ಎಲ್ಲ ದೇಶಗಳಲ್ಲೂ ಇರುವುದೇ ಆಗಿದೆ. ಸ್ಥೂಲವಾಗಿ ಸಮಸ್ಯೆಯ ಸ್ವರೂಪ ಹೀಗಿದೆ: ಬಹುಸಂಖ್ಯಾತರು ಅವಲಂಬಿಸಿರುವ ಧರ್ಮ, ಭಾಷೆ, ಆಚಾರವ್ಯವಹಾರಗಳನ್ನೇ ಅಲ್ಪಸಂಖ್ಯಾತರು ಅನುಸರಿಸಬೇಕೆ ಅಥವಾ ತಮ್ಮ ಮತ, ಭಾಷೆ ಮತ್ತು ಆಚಾರವ್ಯವಹಾರಗಳನ್ನು ಅವಲಂಬಿಸುವ ಹಕ್ಕು ಅವರಿಗಿರಬೇಕೆ? ಒಂದು ಪಕ್ಷ ಈ ಸೌಲಭ್ಯಕ್ಕೆ ಅವಕಾಶ ಕೊಡುವುದಾದರೆ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು? [[ಅಮೆರಿಕ]ದಲ್ಲಿನ ನೀಗ್ರೋಗಳ ಪ್ರಶ್ನೆ ಸಂಪುರ್ಣವಾಗಿ ಇನ್ನೂ ಇತ್ಯರ್ಥವಾಗಿಲ್ಲ. ಪರರಾಜ್ಯಗಳಲ್ಲಿ ವಾಸಿಸುತ್ತಿದ್ದ ಜರ್ಮನ್ ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು ಎಂಬ ಸೋಗಿನಲ್ಲಿ ಹಿಟ್ಲರ್ ನಾಜಿû ಜರ್ಮನಿಯ ವಿಸ್ತರಣೆಯನ್ನು ಕೈಗೊಂಡ. ಅಲ್ಪಸಂಖ್ಯಾತರಿಗೆ ಸಮಾನ ಸ್ಥಾನಮಾನಗಳು ಸಿಗಬೇಕೆಂಬ ಕಾರಣದಿಂದಾಗಿ ದೇಶಗಳ ವಿಭಜನೆ ಆಗಿರುವುದೂ ಉಂಟು. ಕಂಟಕಪ್ರಾಯರೆಂಬ ದೂರು ಹೊರಿಸಿ ಹಿಟ್ಲರ್ ತನ್ನ ದೇಶದಲ್ಲಿದ್ದ ಅಲ್ಪಸಂಖ್ಯಾತ ರಾದ ಯಹೂದಿಯರನ್ನು ನಿರ್ನಾಮ ಮಾಡಲು ಯತ್ನಿಸಿದ. ಶತಮಾನಗಳು ಕಳೆದರೂ ಅಲ್ಪಸಂಖ್ಯಾತರು ಬಹುಸಂಖ್ಯಾತರೊಡನೆ ಬೆರೆಯದೆ ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಳ್ಳಲು ನಿರಂತರ ಯತ್ನ ಮಾಡಿ, ರಾಷ್ಟ್ರಜೀವನದಲ್ಲಿನ ಶಾಂತಿಯನ್ನು ಕಲಕಿರುವ ನಿದರ್ಶನಗಳೂ ಉಂಟು. ಹಲವು ಕಡೆ ದಮನಕ್ಕೆ ಒಳಗಾದವರು ಪ್ರತ್ಯೇಕತಾ ಚಳವಳಿಯನ್ನು ಮುಂದಿಟ್ಟರೆ ಇನ್ನು ಕೆಲವು ಕಡೆ ಚಳವಳಿ ಪ್ರತಿಗಾಮಿ ಸ್ವರೂಪಕ್ಕೆ ತಿರುಗಿದೆ. ಎಲ್ಲ ಅಲ್ಪಸಂಖ್ಯಾತರುಗಳನ್ನೂ ಸ್ಥಳಾಂತರಗೊಳಿಸುವುದು ಇಲ್ಲವೆ ಇವರಿಗಾಗಿಯೆ ಪ್ರತ್ಯೇಕ ರಾಜ್ಯವೊಂದನ್ನು ಏರ್ಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾರಣದಿಂದ ಪ್ರತಿದೇಶದಲ್ಲೂ ಅಲ್ಪಸಂಖ್ಯಾತರ ರಕ್ಷಣೆಗಾಗಿ ಹಲವು ಹಕ್ಕುಗಳನ್ನು ಕಾದಿಡಲಾಗಿದೆ. ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರೇ ಬಹುಸಂಖ್ಯೆಯಲ್ಲಿರುವ ಪ್ರದೇಶಗಳನ್ನು ವಿಂಗಡಿಸಿ ಸ್ವಯಮಾಡಳಿತ ಪ್ರದೇಶಗಳನ್ನಾಗಿ ಅಂಗೀಕರಿಸುವುದೂ ಉಂಟು. ಭಾರತ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಮೂಲಭೂತ ಹಕ್ಕುಗಳಾಗಿ ಪರಿಗಣಿಸಲಾಗಿದೆ (ವಿಧಿ: 25-30). ರಾಷ್ಟ್ರ ಮತ್ತು ಸಮಾಜದ ಹಿತಗಳಿಗೆ ಧಕ್ಕೆ ಬಾರದಂತೆ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಬಂಡಾಯಕ್ಕೆ ಒಳಗಾಗದಂತೆ, ಬಹುಸಂಖ್ಯಾತ ರಾಷ್ಟ್ರೀಯರಂತೆ ಅಲ್ಪಸಂಖ್ಯಾತರೂ ತಮ್ಮ ಧರ್ಮ, ಭಾಷೆ ಮತ್ತು ಆಚಾರ ವ್ಯವಹಾರಗಳನ್ನು ಉಳಿಸಿಕೊಳ್ಳಲು, ಅಭಿವೃದ್ಧಿಪಡಿಸಿಕೊಳ್ಳಲು ಎಲ್ಲ ಅನುಕೂಲತೆಗಳನ್ನೂ ಕಲ್ಪಿಸಿಕೊಡಲಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: