ಅಲೆಕ್ ಡಗ್ಲಸ್ ಹ್ಯೂಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಕ್ ಡಗ್ಲಸ್ ಹ್ಯೂಮ್ ( ಅಲೆಕ್ಸಾಂಡರ್ ಫ್ರೆಡರಿಕ್ ಡಗ್ಲಸ್ - ಹ್ಯೂಮ್) ಬ್ರಿಟಿಷ್ ರಾಜಕಾರಣಿ, ಪ್ರಧಾನಿ (1963-1964).

ಬದುಕು[ಬದಲಾಯಿಸಿ]

1903ರ ಜುಲೈ 2ರಂದು ಜನಿಸಿದರು. ಈಟನ್ ಮತ್ತು ಆಕ್ಸ್‍ಫರ್ಡ್ ಕ್ರೈಸ್ಟ್ ಚರ್ಚ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, 1929ರಲ್ಲಿ ರಾಜಕೀಯ ರಂಗವನ್ನು ಪ್ರವೇಶಿಸಿದರು. 1931-1945ರಲ್ಲಿ ಸೌತ್ ಲನಾರ್ಕ್ ಕ್ಷೇತ್ರದಿಂದಲೂ 1950-1951ರಲ್ಲಿ ಲನಾರ್ಕ್ ಕ್ಷೇತ್ರದಿಂದಲೂ ಕಾಮನ್ಸ್ ಸಭೆಯ ಸದಸ್ಯರಾಗಿದ್ದರು. 1937-39ರಲ್ಲಿ ಬ್ರಿಟಿಷ್ ಪ್ರಧಾನಿ ನೆವಿಲ್ ಚೇಂಬರ್‍ಲಿನರ ಸಂಸದೀಯ ವ್ಯವಹಾರಗಳ ಆಪ್ತ ಕಾರ್ಯದರ್ಶಿ. 1945ರಲ್ಲಿ ಚರ್ಚಿಲರ ತಾತ್ಕಾಲಿಕ ಸರ್ಕಾರದಲ್ಲಿ ವಿದೇಶಾಂಗ ಖಾತೆಯ ಉಪಕಾರ್ಯದರ್ಶಿ, 1951-55ರಲ್ಲಿ ಸ್ಕಾಟ್ಲೆಂಡ್ ವ್ಯವಹಾರಗಳ ರಾಜ್ಯಮಂತ್ರಿ, 1955-60ರಲ್ಲಿ ಕಾಮನ್ ವೆಲ್ತ್ ವ್ಯವಹಾರಗಳ ಕಾರ್ಯದರ್ಶಿ ಮತ್ತು 1959-60ರಲ್ಲಿ ಲಾರ್ಡ್ ಸಭೆಯ ನಾಯಕರಾಗಿದ್ದ ಡಗ್ಲಸ್-ಹ್ಯೂಮರು 1960-63ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ, ಮಾಸ್ಕೋದಲ್ಲಿ 1963ರಲ್ಲಿ ನಡೆದ ಪರಮಾಣು ಪ್ರಯೋಗ ಪರೀಕ್ಷೆಗಳನ್ನು ನಿಷೇಧಿಸುವ ಕೌಲಿಗೆ ಬ್ರಿಟನ್ನಿನ ಪರವಾಗಿ ಸಹಿ ಹಾಕಿದರು. 1963ರಲ್ಲಿ ಕನ್ಸರ್ವೆಟಿವ್ ಪಕ್ಷದಲ್ಲಿ ಬಿಕ್ಕಟ್ಟು ತಲೆದೋರಿ, ಹೆರಲ್ಡ್ ಮ್ಯಾಕ್‍ಮಿಲನ್ ಪ್ರಧಾನಿ ಪದವಿ ತ್ಯಜಿಸಿದಾಗ ಡಗ್ಲಸ್-ಹ್ಯೂಮನರನ್ನು ಪ್ರಧಾನಿಯಾಗಿ ನೇಮಿಸುವಂತೆ ಇಂಗ್ಲೆಂಡಿನ ರಾಣಿಗೆ ಅವರು ಸಲಹೆ ಮಾಡಿದರು. ಪ್ರಧಾನಿ ಕಾಮನ್ಸ್ ಸಭೆಯ ಸದಸ್ಯನಾಗಿರಬೇಕೆಂಬ ಸಂಪ್ರದಾಯ ವಿಧಿಯನ್ನು ಪಾಲಿಸಲು ಡಗ್ಲಸ್-ಹ್ಯೂಮ್ 1963ರ ಪಿಯರೇಜ್ ಅಧಿನಿಯಮದ ಪ್ರಕಾರ ತಮ್ಮ ಅರ್ಲ್ ಪದವಿಯನ್ನು ತ್ಯಜಿಸಿ ಹೌಸ್ ಆಫ್ ಕಾಮನ್ಸ್ ಸಭೆಗೆ ಚುನಾಯಿತರಾಗಿ 1964ರ ಅಕ್ಟೋಬರ್ ವರೆಗೆ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದರು. 1962ರಲ್ಲಿ ನೈಟ್ ಪದವಿ ಪಡೆದ ಅವರು ಸರ್ ಅಲೆಕ್ ಡಗ್ಲಸ್-ಹ್ಯೂಮ್ ಎನಿಸಿಕೊಂಡರು. ಡಗ್ಲಸ್-ಹ್ಯೂಮರ ಅಧಿಕಾರಾವಧಿಯಲ್ಲಿ ಬ್ರಿಟನ್ನು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. 1964ರ ಜುಲೈನಲ್ಲಿ ನಡೆದ ಕಾಮನ್‍ವೆಲ್ತ್ ಪ್ರಧಾನಿಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿ ವರ್ಣಭೇದ ನೀತಿಯ ಬಗ್ಗೆ ಇವರು ರಾಜಿ ಸಾಧಿಸಿದರು. 1964ರ ಚುನಾವಣೆಯಲ್ಲಿ ಲೇಬರ್ ಪಕ್ಷ ಅಲ್ಪ ಬಹುಮತದಿಂದ ಜನ ಗಳಿಸಿದಾಗ ಡಗ್ಲಸ್ ಹ್ಯೂಮ್ ಪ್ರಧಾನಿ ಪದವಿಗೆ ರಾಜೀನಾಮೆಯಿತ್ತರು. 1964ರಲ್ಲಿ ಇವರು ಕನ್ಸರ್ವೆಟಿವ್ ಪಕ್ಷದ ನಾಯಕತ್ವದನ್ನೂ ತ್ಯಜಿಸಿದರು.

ಅವರು ೧೯೯೫ರಲ್ಲಿ ನಿಧನರಾದರು.