ವಿಷಯಕ್ಕೆ ಹೋಗು

ಅಲಾಉದ್ದೀನ್ ಅಹ್ಮದ್ II

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹಮನೀ ರಾಜ್ಯದ ಹತ್ತನೆಯ ಸುಲ್ತಾನ 1436-58. ಪಟ್ಟಕ್ಕೆ ಬಂದ ಅನಂತರ ವಿಜಯನಗರ ಮತ್ತು ಖಾನ್‌ ದೇಶಗಳ ವಿರುದ್ಧ ಅನೇಕ ಯುದ್ಧಗಳನ್ನು ಕೈಗೊಂಡ. ವಿಜಯನಗರದಿಂದ ಸಲ್ಲಬೇಕಾಗಿದ್ದ ಪೊಗದಿಯ ವಸೂಲಿ ಗೋಸ್ಕರ ತನ್ನ ಸೋದರ ಮಹಮ್ಮದನನ್ನು ಕಳುಹಿಸಿಕೊಟ್ಟ. ಪೊಗದಿಯನ್ನು ವಸೂಲಿ ಮಾಡುವುದರಲ್ಲಿ ಯಶಸ್ವಿಯಾದರೂ ಮಹಮ್ಮದ್ ತನ್ನ ಹಿಂಬಾಲಕರಿಂದ ಮತ್ತು ವಿಜಯನಗರದ ಇಮ್ಮಡಿ ದೇವರಾಯನಿಂದ ಪ್ರೇರಿತನಾಗಿ ರಾಜ್ಯದಲ್ಲಿ ಅರ್ಧಭಾಗವನ್ನು ತನಗೆ ಕೊಡಬೇಕೆಂದು ಅಲಾಉದ್ದೀನನ ವಿರುದ್ಧ ದಂಗೆ ಎದ್ದ. ರಾಯಚೂರು, ಮುದ್ಗಲ್, ನಲ್ದುರ್ಗಗಳನ್ನು ಆಕ್ರಮಿಸಿದ. ಸುಲ್ತಾನ ಮಹಮ್ಮದನನ್ನು ಯುದ್ಧದಲ್ಲಿ ಸೋಲಿಸಿದ. ಅಲಾಉದ್ದೀನ್ ಅನಂತರ ಅವನನ್ನು ಕ್ಷಮಿಸಿ ರಾಯಚೂರಿನ ಜಹಗೀರುದಾರನನ್ನಾಗಿ ನೇಮಿಸಿದ. ಸುಲ್ತಾನನ ಪ್ರಧಾನಮಂತ್ರಿಯಾಗಿದ್ದ ದಿಲಾವರ್ ಖಾನ್ ಕೊಂಕಣದ ಮೇಲೆ ದಂಡೆತ್ತಿ ಹೋಗಿ ಸಂಗಮೇಶ್ವರದ ರಾಜನನ್ನು ಸೋಲಿಸಿದ. ಸಂಗಮೇಶ್ವರದ ರಾಜ ತನ್ನ ಮಗಳನ್ನು ಅಲಾಉದ್ದೀನನಿಗೆ ಕೊಟ್ಟು ವಿವಾಹಮಾಡಿದ. ಈ ವಿವಾಹದಿಂದಾಗಿ ಸುಲ್ತಾನನ ಹಿರಿಯ ರಾಣಿಯ ತಂದೆ ಖಾನ್ ದೇಶದ ಸುಲ್ತಾನ ನಾಸಿರ್ ಖಾನ್ ಕುಪಿತನಾಗಿ ಗುಜರಾತಿನ ಸುಲ್ತಾನನ ಸಹಾಯ ಪಡೆದು ಅಲಾಉದ್ದೀನನ ರಾಜ್ಯವನ್ನು ಮುತ್ತಿ ಕೆಲವು ಪ್ರಾಂತ್ಯಗಳನ್ನು ಗೆದ್ದುಕೊಂಡನಾದರೂ ಸುಲ್ತಾನನ ಸೈನ್ಯ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿತು. ಇತ್ತ ಇಮ್ಮಡಿ ದೇವರಾಯ ಅನೇಕ ಮಹಮ್ಮದೀಯರನ್ನು ತನ್ನ ಸೈನ್ಯದಲ್ಲಿ ಸೇರಿಸಿಕೊಂಡು ಬಲಯುತನಾಗಿ ಬಹಮನೀ ರಾಜ್ಯವನ್ನು ಮುತ್ತಿ ಮುದ್ಗಲನ್ನು ಗೆದ್ದು ಬಿಜಾಪುರ ಮತ್ತು ಅದರ ಸುತ್ತ ಮುತ್ತಣ ಪ್ರದೇಶಗಳನ್ನು ಕೊಳ್ಳೆಹೊಡೆದ. ಇಬ್ಬರಲ್ಲಿ ಭೀಕರ ಹೋರಾಟವಾಗಿ ದೇವರಾಯ ಸೋತ. ಅವನು ಬಾಕಿ ಇದ್ದ ಕಪ್ಪಕಾಣಿಕೆಗಳನ್ನೆಲ್ಲಾ ಸಲ್ಲಿಸಿ ತುಂಗಭದ್ರಾನದಿ ಯನ್ನು ತನ್ನ ರಾಜ್ಯದ ಗಡಿಯಾಗಿ ಒಪ್ಪಿಕೊಂಡ. ಅಲಾಉದ್ದೀನನ ಕಾಲದಲ್ಲಿ ಸುನ್ನಿ ಪಂಗಡದ ದಖನ್ನಿನ ಅಮೀರರಿಗೂ ಷಿಯಾಪಂಥದ ಅರಬ್, ತುರ್ಕಿ, ಪರ್ಷಿಯ ಮತ್ತು ಮುಗಲ್-ಈ ವಿದೇಶಿ ಅಮೀರರಿಗೂ ಒಳಜಗಳಗಳು ಸರ್ವೇ ಸಾಮಾನ್ಯವಾಗಿದ್ದುವು. ದಖನ್ನಿನ ಅಮೀರರು ಒಳಸಂಚು ನಡೆಸಿ ಚಾಕಣದಲ್ಲಿ ಸು.2,000 ವಿದೇಶಿ ಅಮೀರರನ್ನು ಕೊಲೆಮಾಡಿದರು. ಬಹಮನೀ ರಾಜ್ಯದ ಇತಿಹಾಸದಲ್ಲಿ ಈ ಘಟನೆ ಚಾಕಣ ಘಟನೆ ಎಂದು ಪ್ರಸಿದ್ಧಿಯಾಗಿದೆ. ಅಲಾಉದ್ದೀನನ ಆಳ್ವಿಕೆಯ ಕೊನೆಗಾಲದಲ್ಲಿ ಸುಲ್ತಾನನ ಸಂಬಂದಿ ಜಲಾಲ್ ಖಾನ್ ದಂಗೆ ಎದ್ದು ನಲಗೊಂಡಾದಲ್ಲಿ ಸುಲ್ತಾನನೆಂದು ಘೂೕಷಿಸಿಕೊಂಡಾಗ ಸುಲ್ತಾನನ ಮಂತ್ರಿ ಮಹ್ಮೂದ್ ಗಾವಾನನು ಜಲಾಲ್ ಮತ್ತು ಅವನ ಮಗ ಸಿಕಂದರ್ ಇವರನ್ನು ಬಂಧಿಸಿದ. ಆದರೆ ಗವಾನನ ಮಾತಿನಂತೆ ಸುಲ್ತಾನ್ ಅವರನ್ನು ಕ್ಷಮಿಸಿ ಪುನಃ ನಲಗೊಂಡಾದ ಜಹಗೀರನ್ನು ವಹಿಸಿಕೊಟ್ಟ. ಅಲಾಉದ್ದೀನ್ ಅನೇಕ ಮಸೀದಿ, ಶಾಲೆ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ. ಬಿದರೆಯಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿಸಿ ನುರಿತ ವೈದ್ಯರನ್ನು ನೇಮಿಸಿದ. ದರೋಡೆಕೋರರನ್ನೂ ಕಳ್ಳಕಾಕರನ್ನೂ ಕ್ರೂರವಾಗಿ ಶಿಕ್ಷಿಸಿ ಶಾಂತಿ ನೆಲಸುವಂತೆ ಮಾಡಿದ. ಈತ 1458ರಲ್ಲಿ ಮೃತನಾದ. ಅನಂತರ ಇವನ ಮಗ ಹುಮಾಯೂನ್ ಪಟ್ಟಕ್ಕೆ ಬಂದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: