ಅರ್ನ್‍ಸ್ಟ್ ಟ್ರಾಯಲ್‍ಟ್ಷ್
ಅರ್ನ್‍ಸ್ಟ್ ಟ್ರಾಯಲ್‍ಟ್ಷ್ (1865-1923). ಜರ್ಮನಿಯ ವೇದಾಂತಿ, ಇತಿಹಾಸಕಾರ ಮತ್ತು ಸಮಾಜಶಾಸ್ತ್ರಜ್ಞ.
ಬದುಕು
[ಬದಲಾಯಿಸಿ]ಹುಟ್ಟಿದ್ದು ಆಗ್ಸ್‍ಬರ್ಗಿನ ಸಮೀಪದ ಹಾನ್‍ಸ್ಟೆಟ್ಟನ್‍ನಲ್ಲಿ. ಶ್ರೀಮಂತ ಮನೆತನದ ವೈದ್ಯನೊಬ್ಬನ ಹಿರಿಯ ಮಗ. ತಂದೆಗೆ ಮಗ ಪ್ರಕೃತಿವಿಜ್ಞಾನದಲ್ಲಿ ಪಾರಂಗತನಾಬೇಕೆಂಬ ಆಶೆ ; ಮಗನ ಒಲವು ಧರ್ಮ ಮತ್ತು ತತ್ತ್ವಶಾಸ್ತ್ರಗಳ ಕಡೆಗೆ. ಹೀಗಾಗಿ ಈತ 1883ರಿಂದ 1888ರ ವರೆಗೆ ಎರ್ಲಾಂಗೆನ್ ಗಾಟಿಂಗೆನ್ ಮತ್ತು ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ವೇದಾಂತವನ್ನು ಓದಿದ.
ಅನಂತರ ಗಾಟಿಂಗೆನ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ (1891) ಅಧ್ಯಾಪಕನಾಗಿದ್ದು 1892ರಲ್ಲಿ ಬಾನ್‍ನಲ್ಲಿ ದೇವತಾಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಎರಡು ವರ್ಷಗಳ ಅನಂತರ ಹೈಡಲ್‍ಬರ್ಗ್‍ನಲ್ಲಿ ದೇವತಾಶಾಸ್ತ್ರದ ಪ್ರಾಧ್ಯಾಪಕನಾದ. 1915-1923ರ ವರೆಗೆ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾದ. 1919ರಲ್ಲಿ ಪ್ರಷ್ಯದ ಡಯಟ್‍ಗೆ (ಶಾಸನಸಭೆ) ಚುನಾಯಿತನಾದ. ಅಲ್ಲಿನ ವಿದ್ಯಾಮಂತ್ರಿಯ ಉಪಕಾರ್ಯದರ್ಶಿಯೂ ಆದ. ಈ ಅವಧಿಯಲ್ಲಿ ಈತ ಪ್ರಷ್ಯಾ ಸರ್ಕಾರದ ಶೈಕ್ಷಣಿಕ ನೀತಿ ಹಾಗೂ ಚರ್ಚ್‍ನ ಧೋರಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
ಹೈಡಲ್‍ಬರ್ಗ್‍ನಲ್ಲಿ ಈತನಿಗೆ ಮ್ಯಾಕ್ಸ್ ವೆಬರ್‍ನ ಪರಿಚಯವಾಯಿತು. ಆತನ ಪ್ರಭಾವ ಈತನ ಬರೆವಣಿಗೆಯ ಮೇಲೆ ಬಿದ್ದಿದೆ.
ಗ್ರಂಥಗಳು
[ಬದಲಾಯಿಸಿ]ಈತನ ಗ್ರಂಥವಾದ ಡೀಸೊಟ್ಸಿಯಾಲ್‍ಲೇರನ್ ಡೆರ್ ಕ್ರಿಸ್ಟ್‍ಲಿಷನ್ ಕಿರ್ಷೆನ್ ಉಂಟ್ ಗ್ರುಪೆನ್ ಮಾಕ್ಸ್‍ವೆಬರ್‍ನ ಗ್ರಂಥಗಳಿಗೆ ಅನುಬಂಧದಂತಿದೆ. ಈ ಗ್ರಂಥದಲ್ಲಿ ಕ್ರೈಸ್ತಮತದ ಸ್ಥಾಪನೆ, ಬೆಳವಣಿಗೆ ಮತ್ತು ಮಾರ್ಪಾಡುಗಳು ಎಷ್ಟರಮಟ್ಟಿಗೆ ಸಾಮಾಜಿಕವಾಗಿ ನಿರ್ಧರಿಸಲ್ಪಟ್ಟಿವೆ. ಎಂಬುದನ್ನು ತೋರಿಸಲಾಗಿದೆ.
ಈತನ ಮಹತ್ತ್ವಪೂರ್ಣವಾದ ಡೆರ್ ಹಿಸ್ಟೋರಿಸ್‍ಮುಸ್ ಉಂಟ್ ಸೆóೈನೆವ್ಯೂಬೆರ್-ವಿಂಡುಂಗ್ (ಕ್ರೈಸ್ತ ವಿಚಾರ ಪಂಥ, ಅದರ ಇತಿಹಾಸ ಮತ್ತು ಪ್ರಾಯೋಗಿಕ ಅನ್ವಯ) ಎಂಬ ಗ್ರಂಥ ಜರ್ಮನಿಯ ತಾತ್ತ್ವಿಕ ವಿಚಾರದ ಇತಿಹಾಸದಲ್ಲಿ ಪ್ರಧಾನವಾದ ಕೊಡುಗೆಯಾಗಿದೆ.
ಟ್ರಾಯಲ್‍ಟ್ಷ್ ತನ್ನ ಗ್ರಂಥಗಳಲ್ಲಿ ಮಾಕ್ರ್ಸ್‍ನ ತತ್ತ್ವಮೀಮಾಂಸೆಯ ಮೇಲೆ ಬೆಳಕನ್ನು ಚೆಲ್ಲಿ, ಗುಣದೋಷಗಳನ್ನು ವಿಸ್ತಾರವಾಗಿ ವಿಶ್ಲೇಷಣೆ ಮಾಡಿದ್ದಾನೆ. ಈತ ತನ್ನ ತಾತ್ತ್ವಿಕ ಗ್ರಂಥಗಳಲ್ಲಿ ವೈಚಾರಿಕ ಸಮಸ್ಯೆಗಳಿಗೆ ಸೂಕ್ಷ್ಮ ಗಮನಕೊಟ್ಟಿದ್ದಾನಾದರೂ ಅವು ಪೂರ್ಣದರ್ಶನವಾಗಿ ಬೆಳೆಯಲಿಲ್ಲ. ಇದಕ್ಕೆ ಕಾರಣವಿಲ್ಲದೆ ಇಲ್ಲ. ತನ್ನನ್ನು ಬಹು ನಿಕಟವಾಗಿ ಸುತ್ತುವರಿದಿದ್ದ ಧಾರ್ಮಿಕ ಹಾಗೂ ಸಾಮಾಜಿಕ ಶಕ್ತಿಗಳನ್ನು ಕುರಿತು ಬಹುಮುಖವಾಗಿ ಯೋಚಿಸುತ್ತಿದ್ದುದರಿಂದ ಈತನಿಗೆ ಪರಿಪೂರ್ಣವಾದ ದರ್ಶನವೊಂದನ್ನು ಪ್ರತಿಪಾದಿಸಲು ಸಾಧ್ಯವಾಗಲಿಲ್ಲ.
ಈತ ಯುದ್ಧಕಾಲದ ಮತ್ತು ಯುದ್ಧದ ಅನಂತರದ ಘಟನೆಗಳನ್ನು ಗಮನವಿಟ್ಟು ಅವಲೋಕನ ಮಾಡುತ್ತಿದ್ದನೆಂಬುದಕ್ಕೆ ಈತನ ಸ್ಪೆಕ್ಟೇಟರ್ ಬ್ರೀಫ್ ಎಂಬ ಗ್ರಂಥ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ಈತ ಪ್ರಷ್ಯ ಸರ್ಕಾರದ ಶೈಕ್ಷಣಿಕ ಹಾಗೂ ಚರ್ಚಿನ ಧೋರಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ. ಈತನ ಅನೇಕ ಲೇಖನಗಳು ಗೆಸಾಮೆಲ್ಟೆ ಷ್ರಿಫ್ಟೆನ್ (ನಾಲ್ಕು ಸಂಪುಟಗಳು 1912-25) ಎಂಬ ಗ್ರಂಥದಲ್ಲಿ ಸೇರಿಹೋಗಿವೆ. ಡೀ ಆಬ್ಸೊಲೂಟ್‍ಹೈಟ್‍ಡೆಸ್ ಕ್ರಿಸ್ಟೆಂಟುಮ್ಸ್ ಉಂಟ್ ಡೀ ರಿಲಿಗಿಯೋನ್ಸ್‍ಗೆಷಿಷ್ಟೆ (1902)-ಇದು ಈತನಿಗೆ ಹೆಸರು ತಂದ ಪ್ರಸಿದ್ಧ ಪುಸ್ತಕ. ಡೀ ಬೆಡಾಯ್ಟುಂಗ್ ಡೆಸ್ ಪ್ರಾಟೆಸ್ಟಾಂಟಿಸ್‍ಮುಸ್ ಫ್ಯೂರ್ ಡೀ ಎಂಟ್‍ಷ್ಟೇವುಂಗ್ ಡೆರ್ ಮಾಡರ್‍ನೆನ್ ವೆಲ್ಟ್ ಮತ್ತು ಡೆರ್ ಹಿಸ್ಟೋರಿಸ್‍ಮುಸ್ ಉಂಟ್ ಸೆóೈನ್ ಪ್ರಾಬ್ಲೆಮೆ-ಇವು ಈತನ ಇತರ ಕೆಲವು ಪುಸ್ತಕಗಳು.