ಅರಳುಮಲ್ಲಿಗೆ ಪಾರ್ಥಸಾರಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಳುಮಲ್ಲಿಗೆ ಪಾರ್ಥಸಾರಥಿ
ಜನನಮಾರ್ಚ್ ೨೨, ೧೯೪೮
ದೊಡ್ಡಬಳ್ಳಾಪುರದ ಅರಳುಮಲ್ಲಿಗೆ
ವೃತ್ತಿಬರಹಗಾರರು ಮತ್ತು ಪ್ರವಚನಕಾರರು
ವಿಷಯಹರಿದಾಸ ಸಾಹಿತ್ಯ

‘’’ಅರಳುಮಲ್ಲಿಗೆ ಪಾರ್ಥಸಾರಥಿ’’’ ( ಮಾರ್ಚ್ ೨೨, ೧೯೪೮) ಹರಿದಾಸ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ.

ಜೀವನ[ಬದಲಾಯಿಸಿ]

ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೨, ೧೯೪೮ರಂದು ಜನಿಸಿದರು. ಅವರ ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮನವರು. ಪಾರ್ಥಸಾರಥಿಯವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಅರಳು ಮಲ್ಲಿಗೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ದೊಡ್ಡಬಳ್ಳಾಪುರದ ಹೈಸ್ಕೂಲಿಗೆ. ಮುಂದೆ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿಗಳಲ್ಲದೆ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವವನ್ನು ಗಳಿಸಿದರು.

ಅಧ್ಯಾಪನ[ಬದಲಾಯಿಸಿ]

ತಮ್ಮ ಓದು ಮುಗಿಸಿದ ನಂತರ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನ ಪ್ರಾಧ್ಯಾಪಕರಾಗಿ ೧೯೭೧ರಿಂದ ೨೮ ವರ್ಷಕಾಲ ಸುದೀರ್ಘ ಸೇವೆ ಸಲ್ಲಿಸಿ ನಂತರ ಸ್ವಯಂ ನಿವೃತ್ತಿ ಪಡೆದರು. ಇಂದೂ ಸಹಾ ಅವರು ಹಲವಾರು ಪ್ರತಿಷ್ಠಿತ ಮ್ಯಾನೇಜ್ ಮೆಂಟ್ ಇನ್ಸ್ಟಿಟ್ಯೂಟುಗಳಂತಹ ಅನೇಕ ಸಂಸ್ಥೆಗಳಿಗೆ ಸಲಹೆಗಾರರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಆಹ್ವಾನಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹರಿದಾಸ ಸಾಹಿತ್ಯದಲ್ಲಿ[ಬದಲಾಯಿಸಿ]

ಹರಿದಾಸ ಮನೆತನದಿಂದ ಬಂದ ಬಳುವಳಿಯಾಗಿ ಪಾರ್ಥಸಾರಥಿಯವರ ರಕ್ತದಲ್ಲೂ ಹರಿದದ್ದು ಹರಿದಾಸ ಸಾಹಿತ್ಯವೇ. ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನವ್ಯ ಸಾಹಿತ್ಯದ ಸುಳಿಗೆ ಸಿಕ್ಕಿ, ನವ್ಯರಂತೆ ತಾವೂ ಸಾಹಿತ್ಯ ರಚಿಸದಿದ್ದರೆ ಸ್ಥಾನವಿಲ್ಲವೆಂಬ ಭ್ರಮೆಯಿಂದ, ೧೯೭೧ರಲ್ಲಿ ‘ಹೂವು ಹಾವು ತೀರ್ಥ’ ಎಂಬ ಕಾದಂಬರಿಯೊಂದನ್ನು ಬರೆದಿದ್ದರಂತೆ. ಸ್ವಾಮೀಜಿಯೊಬ್ಬರು ಲೌಕಿಕ ಸೆಳೆತಕ್ಕೆ ಸಿಕ್ಕಿ ಪೀಠ ತ್ಯಜಿಸಿದ ಕಥಾವಸ್ತುವನ್ನು ಆ ಕಾದಂಬರಿ ಒಳಗೊಂಡಿತ್ತು. ಆದರೆ ಹರಿದಾಸ ಸಾಹಿತ್ಯದತ್ತ ಹರಿದ ಮನಸ್ಸು ‘ಹರಿದಾಸ ಅಕಾಡೆಮಿ’ ಹುಟ್ಟುಹಾಕಲು ಪ್ರೇರಣೆ ಒದಗಿಸಿತು. ಇದರಿಂದ ಹರಿದಾಸ ಸಾಹಿತ್ಯದ ಪ್ರಚಾರ ಕೈಗೊಂಡು, ಆ ಸಲುವಾಗಿ ದೇಶದೆಲ್ಲೆಡೆ ಪರ್ಯಟನೆ ಕೈಗೊಂಡದ್ದೇ ಅಲ್ಲದೆ, ವಿಶ್ವದಾದ್ಯಂತ ಪ್ರವಾಸ ಕೈಗೊಂಡು ಬಳಲಿದ್ದ ಮನಗಳಿಗೆ ಸಾಂತ್ವನ ನೀಡುವಂತಹ ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡುತ್ತಾ ಬಂದರು. ಹೀಗೆ ಅವರು ವಿಶ್ವದಾದ್ಯಂತ ನೀಡಿರುವ ಒಟ್ಟಾರೆ ಪ್ರವಚನಗಳ ಸಂಖ್ಯೆ 4000ವನ್ನು ಮೀರಿವೆ.

ಗ್ರಂಥ ರಚನೆ[ಬದಲಾಯಿಸಿ]

ಅರಳುಮಲ್ಲಿಗೆ ಪಾರ್ಥಸಾರಥಿಯವರು ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವಿಷ್ಣುಸಹಸ್ರನಾಮ, ಅರಳು ಮಲ್ಲಿಗೆ ಅಮೃತ ನುಡಿಗಳು, ಹರಿದಾಸರ 4500 ಹಾಡುಗಳು, ವಾದಿರಾಜ ಸಂಪುಟ, ಶ್ರೀಪಾದರಾಜ ಸಂಪುಟ, ಶ್ರೀ ವ್ಯಾಸರಾಜ ಸಂಪುಟ, ಹರಿದಾಸ ಝೇಂಕಾರ ತರಂಗಿಣಿ, ಪುರಂದರ ಸಂಪುಟ, ದಾಸ ಸಾಹಿತ್ಯ ವೈಭವ, ಜನಪ್ರಿಯ ಭಜನ ಸಂಪುಟ, ರಂಗ ವಿಠ್ಠಲ, ದಾಸ ಸಾಹಿತ್ಯ ವಾಹಿನಿ, ಸಿರಿ ಕೃಷ್ಣ, ಮಧ್ವಾಚಾರ್ಯರು, ಸಂಸ್ಕೃತಿ ಪುರುಷರು, ಕಲಾ ತಪಸ್ವಿ, ಮಹತ್ತಾಗಿ ಚಿಂತಿಸು, ಆಡಳಿತ ಮೂಲ ತತ್ವಗಳು ಮುಂತಾದ ವೈವಿಧ್ಯಮಯ ಮತ್ತು ವಿದ್ವತ್ ಪೂರ್ಣ ಸಂಗತಿಗಳಿವೆ. ಇದಲ್ಲದೆ ಧ್ವನಿ ಸುರುಳಿ, ಮತ್ತು ಸಿ.ಡಿ.ಗಳ ಮೂಲಕವೂ ಹರಿದಾಸ ಸಾಹಿತ್ಯವೇ ಅಲ್ಲದೆ ಭಾಗವತ, ಭಗವದ್ಗೀತೆ, ರಾಮಾಯಣ ವಿಷ್ಣುಸಹಸ್ರನಾಮ, ಚಕ್ರ ಶಾಸ್ತ್ರ ಮುಂತಾದ ಮೌಲ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಶ್ರದ್ಧಾಪೂರ್ವಕವಾದ ಕಾಯಕ ಮಾಡುತ್ತಾ ಬಂದಿದ್ದಾರೆ.

ಕೃತಿಗಳು[ಬದಲಾಯಿಸಿ]

 1. ವಿಷ್ಣು ಸಹಸ್ರನಾಮ (ಇಂಗ್ಲಿಷ್)
 2. ವಿಷ್ಣುಸಹಸ್ರನಾಮ (ಕನ್ನಡ)
 3. ಅರಳುಮಲ್ಲಿಗೆ ಅಮೃತ ನುಡಿಗಳು
 4. ಹರಿದಾಸರ ೪೫೦೦ ಹಾಡುಗಳು
 5. ವಾದಿರಾಜ ಸಂಪುಟ
 6. ಶ್ರೀಪಾದರಾಜ ಸಂಪುಟ
 7. ವ್ಯಾಸರಾಜ ಸಂಪುಟ
 8. ಹರಿದಾಸ ಝೇಂಕಾರ ತರಂಗಿಣಿ
 9. ಪುರಂದರ ಸಂಪುಟ - ೧
 10. ಪುರಂದರ ಸಂಪುಟ - ೨
 11. ದಾಸ ಸಾಹಿತ್ಯ ವೈಭವ
 12. ಜನಪ್ರಿಯ ಭಜನ ಸಂಪುಟ
 13. ರಂಗ ವಿಠ್ಠಲ
 14. ದಾಸ ಸಾಹಿತ್ಯ ವಾಹಿನಿ
 15. ಸಿರಿ ಕೃಷ್ಣ
 16. ವೈಕುಂಠ ವರ್ಣನೆ
 17. ಮಧ್ವಾಚಾರ್ಯರು
 18. ಸಂಸ್ಕೃತಿ ಪುರುಷರು
 19. ಕಲಾ ಪುರುಷರು
 20. ಪ್ರಚಲಿತ
 21. ಕೃತಿ ವಿಮರ್ಶೆ
 22. ಸರ್ವಮೂಲ
 23. Principles of Management
 24. Principles of Marketing
 25. ಹೂವು ಹಾವು ತೀರ್ಥ
 26. ಯತಿಕುಲ ಚಕ್ರವರ್ತಿ ವಿಜ್ಞಾನನಿಧಿ ತೀರ್ಥರು
 27. ದಾಸ ಸಾಹಿತ್ಯ ವಾಹಿನಿ - ಸಂಭಾವನಾ ಗ್ರಂಥ
 28. ಮಹತ್ತಾಗಿ ಚಿಂತಿಸು - ಬೃಹತ್ತಾಗಿ ಸಾಧಿಸು (ಆತ್ಮಚರಿತ್ರೆ)

ಧ್ವನಿ ಸುರುಳಿಗಳು[ಬದಲಾಯಿಸಿ]

 1. ಭಗವದ್ಗೀತ
 2. ಭಾಗವತ
 3. ರಾಮಾಯಣ
 4. ಗುರುರಾಘವೇಂದ್ರ ನಮನ
 5. ವಾದಿರಾಜ ನಮನ
 6. ಕನಕದಾಸ ನಮನ
 7. ವಿಜಯದಾಸ ನಮನ
 8. ಉಗಾಭೋಗಗಳು
 9. ತುಳಸಿ ಮಹಾತ್ಮೆ
 10. ಗಾಯತ್ರಿ ಮಹಾತ್ಮೆ
 11. ಪುರಂದರ ನಮನ
 12. Powerful Personality Development
 13. Values and Meditation: Secrets of Super Success
 14. Vishnusahasranama (English)
 15. ವಿಷ್ಣುಸಹಸ್ರನಾಮ (ಕನ್ನಡ)

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಅರಳು ಮಲ್ಲಿಗೆ ಪಾರ್ಥಸಾರಥಿಯವರು 'ವಿದ್ಯಾವಾಚಸ್ಪತಿ', 'ದಾಸ ಸಾಹಿತ್ಯ ಪ್ರದ್ಯುಮ್ನ' ಮುಂತಾದ ಅನೇಕ ಬಿರುದು ಗೌರವಗಳನ್ನು ಪಡೆದಿದ್ದಾರೆ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ಕರ್ನಾಟಕ ಸರ್ಕಾರದ ರಾಜ್ಯ, ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೇ ಅಲ್ಲದೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಅವುಗಳಲ್ಲಿ ಕೆಲವೊಂದು ಅಂತರರಾಷ್ಟ್ರೀಯ ಪ್ರಶಸ್ತಿಗಳು ಇಂತಿವೆ.

 • ಅಮೆರಿಕಾದ ಹ್ಯೂಮನ್ ಸ್ಪಿರಿಚುಅಲ್ ವ್ಯಾಲ್ಯೂಸ್ ಗೌರವ
 • ಅಮೆರಿಕಾದ ವಿಜನರಿ ಆಫ್ ಏಶಿಯಾ ಗೌರವ
 • ಅಮೆರಿಕಾದ ಗ್ಲೋಬಲ್ ಹೆರಿಟೇಜ್ ಗೌರವ
 • ಲಿವರ್ಪೂಲ್ ಇನ್ಸ್ಟಿಟ್ಯೂಟ್ ಆಫ್ ಓರಿಎಂಟಲ್ ಸ್ಟಡೀಜ್ (ಇಂಗ್ಲಂಡ)ದ ಗೌರವ
 • ವಿಶ್ವದಾದ್ಯಂತ ಕನ್ನಡ ಸಂಘಗಳ ಪ್ರಶಸ್ತಿಗಳು