ಅರಳಗುಪ್ಪೆ

ವಿಕಿಪೀಡಿಯ ಇಂದ
Jump to navigation Jump to search

ಅರಳಗುಪ್ಪೆ : ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ಬಾಣಸಂದ್ರ ರೈಲ್ವೆ ನಿಲ್ದಾಣದಿಂದ ಪಶ್ಚಿಮಕ್ಕೆ ಸು.7ಕಿಮೀ ದೂರದಲ್ಲಿರುವ, ಪ್ರಾಚೀನ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾದ ಒಂದು ಹಳ್ಳಿ. ಇಲ್ಲಿ ಚೆನ್ನ ಕೇಶವ, ಕಲ್ಲೇಶ್ವರ ಎಂಬ ಎರಡು ಸುಂದರ ದೇವಾಲಯಗಳಿವೆ. ಚೆನ್ನ ಕೇಶವ ದೇವಾಲಯ ಹೊಯ್ಸಳ ವಾಸುಶೈಲಿಯಲ್ಲಿ ಬಳಪದ ಕಲ್ಲಿನಿಂದ ಕಟ್ಟಲಾದ ಗರ್ಭಗೃಹ, ಸುಕನಾಸಿ, ನವರಂಗಗಳಿಂದ ಕೂಡಿದ ಸುಂದರ ದೇವಾಲಯ. ಚೆನ್ನ ಕೇಶವ ದೇವಾಲಯ ಪೂರ್ವಾಭಿ ಮುಖವಾಗಿದ್ದು ಪ್ರವೇಶದ್ವಾರದ ಒಳಗೆ ಆಚೀಚೆ ಸುಂದರ ಸ್ತಂಭಗಳಿಂದ ಕೂಡಿದ ಜಗಲಿಗಳಿವೆ. ಇದನ್ನು ಹೋನೋಜನೆಂಬ ಶಿಲ್ಪಿ 13ನೆಯ ಶತಮಾನದ ಮಧ್ಯ ಬಾಗದಲ್ಲಿ ಕಟ್ಟಿರಬೇಕು. ಹೊರಪ್ರಾಕಾರದಲ್ಲಿ ಆನೆ, ಕುದುರೆ, ವ್ಯಾಳಿ, ಲತೆ, ಮೂರ್ತಿಗಳ ಮೆರವಣಿಗೆಯ ಶಿಲ್ಪಪಂಕ್ತಿಗಳಿವೆ. ನವರಂಗದ ಕಂಬಗಳು ಬೇಲೂರು ಹಳೇಬೀಡುಗಳಲ್ಲಿಯ ಕಂಬಗಳಿಗಿಂತ ವಿಶಿಷಶಿಲ್ಪಕಲಾ ವಿನ್ಯಾಸದಿಂದ ಕೂಡಿವೆ. ಒಟ್ಟಿಗೆ ಹತ್ತು ಭುವನೇಶ್ವಶರಿಗಳಿವೆ. ಒಂದೊಂದರಲ್ಲೂ ಸ್ವಸ್ತಿಕ, ಬಾಳೆಯ ಮೋತೆಯಂಥ ರಚನೆಗಳು ಚೇತೋಹಾರಿಯಾಗಿವೆ. ಗರ್ಭಗೃಹದ ಪ್ರವೇಶದ್ವಾgದ ಬಲಕ್ಕೆ ಇರುವ ಗಣಪತಿವಿಗ್ರಹ ಮತ್ತು ಎಡಬಾಗದಲ್ಲಿರುವ ಮಹಿಷಾಸುರಮರ್ದಿನಿ ತುಂಬ ಮೋಹಕಭಂಗಿಯಲ್ಲಿ ನಿಂತಿದೆ. ದೇವಾಲಯದ ದಕ್ಷಿಣದ ಗೋಡೆಗೆ ತಾಗಿದಂತೆ ಸಲ್ಪ ಇತ್ತೀಚಿನ ಉಗ್ರನರಸಿಂಹನ ವಿಗ್ರಹವಿದೆ. ಊರಿನ ಈಶಾನ್ಯಭಾಗದಲ್ಲಿ ಸು.10ನೆಯ ಶತಮಾನದ ಕಲ್ಲೇಶ್ವರ ದೇವಾಲಯವಿದೆ. ಸುತ್ತಮುತ್ತಲೂ ಪಂಚಲಿಂಗ ಗುಡಿಗಳಿವೆ. ನವರಂಗದ ಮೇಲ್ಚಾವಣಿಯಲ್ಲಿರುವ ಭುವನೇಶ್ವರಿ ಒಂದು ಅದ್ಭುತರಮ್ಯ ಶಿಲ್ಪಕಲಾಸೃಷ್ಟಿ. ಕೇವಲ 6' ಚಚ್ಚೌಕದ ಕಪ್ಪುಕಲ್ಲಿನಲ್ಲಿ ವಾಹನಾರೂಢರಾಗಿದ್ದು ಮಧ್ಯ ದಲ್ಲಿ ತಾಂಡವೇಶ್ವರ ಮೆರೆಯುತ್ತಿದ್ದಾನೆ. ಅಷ್ಟದಿಕ್ಪಾಲಕರ ಮೂರ್ತಿಯಲ್ಲಿ ಮೂಡಿದ ಬಗೆಬಗೆಯ ಭಾವಗಳನ್ನೂ ತಾಂಡವೇಶ್ವರನ ಪ್ರಳಯ ಕಾಲದ ರುದ್ರನೃತ್ಯಭಂಗಿಯನ್ನೂ ಆ ಶಿಲಾಫಲಕದಲ್ಲಿ ಶಿಲ್ಪಿ ಸೆರೆಹಿಡಿದಿಟ್ಟಿದ್ದಾನೆ. ಎಂಟು ದಿಕ್ಕುಗಳಲ್ಲಿ ಅಷದಿಕ್ಪಾಲಕರು ತಮ್ಮ ಅಂಗನೆಯರನ್ನು ಅಪ್ಪಿ, ವಾಹನಗಳನ್ನೇರಿದ್ದಾರೆ. ತಾಂಡವೇಶ್ವರ ತಾಂಡವ ನೃತ್ಯದಲ್ಲಿ ಮಗ್ನನಾಗಿದ್ದಾನೆ. ಶಿವನ ನಡುವೆ ಸುತ್ತಲೂ ನಾಲ್ಕು ಮೂಲೆಗಳಲ್ಲಿ ಹಗ್ಗದಲ್ಲಿ ಜೋಲಾಡುತ್ತಿರುವ ಭಂಗಿಯಲ್ಲಿರುವ ನಾಲ್ಕು ಗಣಗಳ ಮೂರ್ತಿಗಳಿವೆ. ಇದೊಂದು ಭುವನಮೋಹಕ ಶಿಲ್ಪಸೃಷ್ಟಿ. ಕಲ್ಲೇಶ್ವರನಿಗೆ ಅಭಿಮುಖವಾಗಿ ಸುಮಾರು 10' ಉದ್ದ 6' ಎತ್ತರದ ಕರಿಯ ಕಲ್ಲಿನ ಬಸವವಿಗ್ರಹ ಮುದ್ದಾಗಿದೆ. ಅರಳಗುಪ್ಪೆಯಲ್ಲಿ ಪಾಳೆಯಗಾರರ ಚಾವಡಿ ಎಂಬ ಒಂದು ಮಂಟಪವಿದೆ.