ವಿಷಯಕ್ಕೆ ಹೋಗು

ಅಮ್ಮೆಂಬಳ ಸುಬ್ಬರಾವ್ ಪೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ಮೆಂಬಳ ಸುಬ್ಬರಾವ್ ಪೈ
ಜನನನವೆಂಬರ್ ೧೯, ೧೮೫೨
ಮಂಗಳೂರಿನ ಬಳಿಯ ಮುಲ್ಕಿ
ಮರಣಜುಲೈ ೨೫, ೧೯೦೯
ಗಮನಾರ್ಹ ಕೆಲಸಗಳುಕೆನರಾ ಬ್ಯಾಂಕ್ ಸಂಸ್ಥಾಪಕರು, ಕೆನರಾ ವಿದ್ಯಾಸಂಸ್ಥೆಗಳ ಸಂಸ್ಥಾಪಕರು

ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಕೆನರಾಬ್ಯಾಂಕ್ ಅಂತಹ ಕೊಡುಗೆ ನೀಡಿದ, ಶಿಕ್ಷಣ ಕ್ಷೇತ್ರದಲ್ಲಿ ಇಂದು ಪ್ರಸಿದ್ಧವೆನಿಸಿರುವ ಕೆನರಾ ವಿದ್ಯಾಸಂಸ್ಥೆಗಳನ್ನು ನೀಡಿದ ಮಹನೀಯರು ಅಮ್ಮೆಂಬಳ ಸುಬ್ಬರಾವ್ ಪೈ (ನವೆಂಬರ್ ೧೯, ೧೮೫೨ - ಜುಲೈ ೨೫,೧೯೦೯).

ಅಮ್ಮೆಂಬಳ ಸುಬ್ಬರಾವ್ ಪೈ ಅವರು ನವೆಂಬರ್ ೧೯, ೧೮೫೨ರಲ್ಲಿ ಮಂಗಳೂರಿನ ಬಳಿಯ ಮುಲ್ಕಿಯಲ್ಲಿ ಜನಿಸಿದರು. ಅವರ ತಂದೆ ಮುನ್ಸೀಫ್ ಕೋರ್ಟ್ ವಕೀಲರಾದ ಉಪೇಂದ್ರ ಪೈ ಅವರು. ಮಂಗಳೂರಿನ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಅವರ ಮಾರ್ಗದರ್ಶನ ಅವರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿತು.

ಸಹೃದಯ ವಕೀಲರು

[ಬದಲಾಯಿಸಿ]

೧೮೭೬ರಲ್ಲಿ ತಮ್ಮ ತಂದೆಯವರ ನಿಧನದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈ ಅವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ಹಣಕಾಸು ಬರದಿದ್ದರೂ ಚಿಂತೆಯಿಲ್ಲ ಎಂದು ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು.

ಹೆಣ್ಣುಮಕ್ಕಳ ಶಾಲೆ

[ಬದಲಾಯಿಸಿ]

೧೮೯೧ರ ವರ್ಷದಲ್ಲಿ ಕೆಲವೊಂದು ಶಿಕ್ಷಕರು ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕೆನರಾ ಶಾಲೆಯನ್ನು ಪ್ರಾರಂಭಿಸಿದರು. ಅದಾದ ನಂತರದಲ್ಲಿ ಹೆಣ್ಣುಮಕ್ಕಳಿಗೆ ಉಪಯೋಗವಾಗುವಂತೆ ೧೮೯೪ರ ವರ್ಷದಲ್ಲಿ ಕೆನರಾ ಹೆಣ್ಣುಮಕ್ಕಳ ಹೈಸ್ಕೂಲ್ ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬಗೆಗೆ ಸಮಾಜದಲ್ಲಿ ಅಷ್ಟೊಂದು ಅನುಕೂಲಕರವಾದ ವಾತಾವರಣವಿಲ್ಲದಿದ್ದ ಸಂದರ್ಭದಲ್ಲಿ ಇಂತಹ ಶಾಲೆಯ ನಿರ್ಮಾಣವಾಗಿದ್ದು ಮಹತ್ವದ ಹೆಜ್ಜೆ ಎನಿಸಿದೆ. ಮುಂದೆ ಕೆನರಾ ವಿದ್ಯಾಸಂಸ್ಥೆ ಹೆಮ್ಮರವಾಗಿ ಬೆಳೆದು ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿದೆ.

ಜನಸಾಮಾನ್ಯರಿಗಾಗಿ ಬ್ಯಾಂಕ್

[ಬದಲಾಯಿಸಿ]

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ಊರಿನಲ್ಲಿ ಮೂಡಿದ್ದ ನಿಸ್ತೇಜದ ವಾತಾವರಣ ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರಿಗೆ ಕಂಡ ದಾರಿ ‘ಉಳಿತಾಯ’. ಹೆಣ್ಣು ಮಕ್ಕಳಿಗೂ ಓದು-ಬರಹ ಬೇಕು ಎಂಬ ತಾಯಿಯರು ಪ್ರತಿ ದಿನ ‘ಹಿಡಿ ಅಕ್ಕಿ ಉಳಿಸಿ’ ಎಂದು ಪೈ ಜಾಗೃತಿ ಮೂಡಿಸಿದರು. ಮುಂದೆ ಶಾಲೆ ಯಶಸ್ವಿಯಾದಾಗ ಇದೇ ಉಳಿತಾಯದ ಚಿಂತನೆ ಅವರಿಂದ ‘ಹಿಂದೂ ಪರ್ಮನೆಂಟ್ ಫಂಡ್’ ಸ್ಥಾಪನೆಗೆ ಪ್ರೇರಕವಾಯಿತು. ಇದೇ ಮುಂದೆ ಕೆನರಾ ಬ್ಯಾಂಕ್ ಎನಿಸಿತು. ಬ್ಯಾಂಕುಗಳ ರಾಷ್ಟ್ರೀಕರಣವಾದಾಗ ಅದು ಸರ್ಕಾರದ ಒಡೆತನಕ್ಕೆ ಸೇರಿಕೊಂಡಿತು. “ಉತ್ತಮ ಬ್ಯಾಂಕ್ ಎಂಬುದು ಸಮಾಜದ ಆರ್ಥಿಕ ಕೇಂದ್ರ ಮಾತ್ರವಲ್ಲ, ಅದು ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ” ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರ ಧ್ಯೇಯ ವಾಕ್ಯ. ಲಾಭ ಗಳಿಕೆಗಿಂತ ಜನ ಸಾಮಾನ್ಯರನ್ನು ಹಣ ಉಳಿತಾಯ ಮಾಡುವತ್ತ ಪ್ರೋತ್ಸಾಹಿಸುವುದು ಅವರ ಉದ್ದೇಶವಾಗಿತ್ತು. ಅದು ೨೦ನೇ ಶತಮಾನದ ಆರಂಭದ ಕಾಲ. ಭಾರತದಲ್ಲಿನ್ನೂ ಬ್ರಿಟನ್‌ ರಾಣಿ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದುದು ಬ್ರಿಟಿಷರಿಗೆ ಸೇರಿದ ಮದ್ರಾಸ್‌ ಬ್ಯಾಂಕ್‌ನ ಶಾಖೆಯೊಂದೇ. ಸಂಪೂರ್ಣ ಬ್ರಿಟಿಷ್‌ ಅಧಿಕಾರಿಗಳೇ ಇದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನ ಮತ್ತು ಜವಾನ ಕೆಲಸಕ್ಕೆ ಮಾತ್ರ ನೇಮಕಗೊಂಡಿದ್ದರು. ಅದರಲ್ಲೂ ಈ ಬ್ಯಾಂಕ್‌ ಕೇವಲ ಶ್ರೀಮಂತರತ್ತ ಮಾತ್ರ ನೋಡುತ್ತಿತ್ತು. ಆದರೆ ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಜನ ಸಾಮಾನ್ಯರು ತಮ್ಮ ಕಷ್ಟದ ದುಡಿಮೆ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಪಡಿಪಾಟಲು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಪರಿ ಸುಬ್ಬರಾವ್ ಪೈ ಅವರನ್ನು ಚಿಂತಿಸುವಂತೆ ಮಾಡಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯ- ಸಾಲ ಬೇಡಿಕೆ ಈ ಎರಡಕ್ಕೂ ಅನುಕೂಲ ಒದಗಿಸುವಂತೆ ಅವರಲ್ಲಿ ಪ್ರೇರಣೆ ಮೂಡಿತು. ಇದು ಅಂದು ಮೂಡಿದ ‘ಕೆನರಾ ಹಿಂದೂ ಪರ್ಮನೆಂಟ್‌ ಫಂಡ್‌’ ಮತ್ತು ಇಂದು ಬೆಳೆದು ಹೆಮ್ಮರವಾಗಿರುವ ಕೆನರಾ ಬ್ಯಾಂಕಿನ ಆರಂಭದ ಮಹತ್ವದ ಬೀಜ ಮೊಳಕೆ. ಬ್ಯಾಂಕ್ ಉಗಮಕ್ಕಾಗಿ ಸುಬ್ಬರಾವ್ ಪೈ ಅವರು ಅಂದಿನ ದಿನದಲ್ಲಿ ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ ೫೦ರೂ. ಬೆಲೆಯ ೨ ಸಾವಿರ ಷೇರುಪತ್ರಗಳನ್ನು ಮಾರಿ ನಿಧಿ ಸಂಗ್ರಹಿಸಿದರು. ಹೀಗೆ ‘ಕೆನರಾ ಪರ್ಮನೆಂಟ್‌ ಫಂಡ್‌’ ಆರಂಭಗೊಂಡಿತು. ಪೈಯವರ ಅಧ್ಯಕ್ಷತೆಯಲ್ಲಿ ಅಂದು ಆರಂಭಗೊಂಡ ಈ ಸಂಸ್ಥೆ ಕೆನರಾ ಬ್ಯಾಂಕ್‌ ಎಂಬ ವಟವೃಕ್ಷವಾಗಿ ಬೆಳೆದಿದೆ. ೧೯೦೬ರಲ್ಲಿ ಮೂಡಿಬಂದ ಈ ಬ್ಯಾಂಕು ನೂರ ಐದು ವರ್ಷಗಳನ್ನು ದಾಟಿ ಇಂದು ದೇಶ ವಿದೇಶಗಳಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಮಾಡಿದ ಮಹತ್ವದ ಕಾಯಕವನ್ನು ಸಾರುತ್ತಿವೆ.

ವಿದಾಯ

[ಬದಲಾಯಿಸಿ]

ಅಮ್ಮೆಂಬಳ ಸುಬ್ಬರಾವ್ ಪೈ ಅವರು ೨೫ ಜುಲೈ ೧೯೦೯ರ ವರ್ಷದಲ್ಲಿ ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಅವರು ನಿರ್ಮಿಸಿದ ಸಂಸ್ಥೆಗಳು ಮತ್ತು ಸಾಮಾಜಿಕ ಕೊಡುಗೆಗಳು, ಹಗಲಿರುಳು ಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಅಮರರನ್ನಾಗಿಸಿವೆ.

ಆಕರಗಳು

[ಬದಲಾಯಿಸಿ]
  1. ಅಮ್ಮೆಂಬಳ ಸುಬ್ಬರಾವ್ ಪೈ ಮೆಮೋರಿಯಲ್ ಫಂಡ್
  2. ಇಂಗ್ಲಿಷ್ ವಿಕಿಪೀಡಿಯಾ ಲೇಖನ
  3. ಶತಮಾನೋತ್ಸವ ಆಚರಿಸಿದ ಕೆನರಾ ಬ್ಯಾಂಕ್ - 'ದಿ ಹಿಂದೂ' ಪತ್ರಿಕೆಯಲ್ಲಿನ ಲೇಖನ Archived 2007-03-16 ವೇಬ್ಯಾಕ್ ಮೆಷಿನ್ ನಲ್ಲಿ.
  4. ಕೆನರಾ ಬ್ಯಾಂಕ್ - ಸಂಸ್ಥಾಪಕರ ಕುರಿತಾದ ಮಾಹಿತಿ Archived 2011-03-07 ವೇಬ್ಯಾಕ್ ಮೆಷಿನ್ ನಲ್ಲಿ.