ಅಮೆರಿಕದ ಪ್ರಾಗೈತಿಹಾಸಿಕ ಚರಿತ್ರೆ

ವಿಕಿಪೀಡಿಯ ಇಂದ
Jump to navigation Jump to search

ಪುರಾತನ ಮಾನವ ಅಮೆರಿಕಕ್ಕೆ ವಲಸೆ ಹೋದನೆಂದು ಪ್ರಾಕ್ತನಾಧಾರದ ಮೇಲೆ ಸಂಶೋಧಕರು ನಿರ್ಣಯಿಸಿದ್ದಾರೆ. ಕ್ರಿ.ಪೂ.ಸು. 30,000-10,000 ವರೆಗೆ ಸೈಬೀರಿಯದಿಂದ ಅಲಾಸ್ಕದವರೆಗೆ ನೆಲಸೇತುವೆ ಇತ್ತೆಂದು ಊಹಿಸಲು ಆಧಾರವಿದೆ. ಪುರಾತನ ಮಾನವ ಯುರೇಷಿಯದಿಂದ ಈ ಮಾರ್ಗವಾಗಿ ಅಮೆರಿಕವನ್ನು ಪ್ರವೇಶಿಸಿದ. 10,000 ದಿಂದ ಈಚೆಗೆ ಈ ನೆಲಸೇತುವೆ ಕೊಚ್ಚಿಹೋಯಿತೆಂದು ಪ್ರಾಕ್ತನ ಶಾಸ್ತ್ರಜ್ಞರ ಅಭಿಪ್ರಾಯ. ಅಲಾಸ್ಕದಿಂದ ಹೊರಟ ಇವರು ದಕ್ಷಿಣ ಅಮೆರಿಕದ ತುದಿಯನ್ನು ಸುಮಾರು ಕ್ರಿ..ಪೂ. 6,000 ವೇಳೆಗೆ ತಲುಪಿರಬಹುದು.

ಇತಿಹಾಸ[ಬದಲಾಯಿಸಿ]

ಉತ್ತರ ಅಮೆರಿಕದ ನಿವಾಡ ಭಾಗದ ತುಲೆಸ್ಟ್ರಿಂಗ್ಸ್ ಎಂಬಲ್ಲಿ ಒರಟಾದ ಚಾಪರ್ ಎಂಬ ಕಡಿಗತ್ತಿಗಳು ಆಗ ಜೀವಿಸಿದ್ದ ಮ್ಯಾಮತ್ (ಹಿಮಯುಗದ ಆನೆ), ಕುದುರೆ ಮತ್ತು ಕಾಡುಕೋಣಗಳ ಮೂಳೆಗಳೊಡನೆ ಸಿಕ್ಕಿವೆ. ಇಂಗಾಲ 14ರ ಸಹಾಯದಿಂದ ಇದರ ಕಾಲವನ್ನು 28,000-32,000 ವರ್ಷವೆಂದು ನಿರ್ಣಯಿಸಲಾಗಿದೆ. ಆದರೆ ಅನೇಕ ವಿದ್ವಾಂಸರು ಇಷ್ಟು ಪುರಾತನಕಾಲವನ್ನು ಅಮೆರಿಕದ ಶಿಲಾಯುಗದ ಮಾನವನಿಗೆ ಕೊಡಲು ಒಪ್ಪಿಲ್ಲ.ಅಮೆರಿಕದ ಶಿಲಾಯುಗದ ಮಾನವನನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯ ಗುಂಪಿನವರು ದೊಡ್ಡ ದೊಡ್ಡ ಪ್ರಾಣಿಗಳಾದ ಮ್ಯಾಮತ್, ಕುದುರೆ, ಕಾಡುಕೋಣ, ಸ್ಲಾತ್ ಎಂಬ ಕಾಡುಪ್ರಾಣಿ-ಇವುಗಳನ್ನು ಕಲ್ಲಿನ ಚೂಪು ತುದಿಗಳನ್ನುಳ್ಳ ಭರ್ಜಿಗಳಿಂದ ಬೇಟೆಯಾಡಿ ಜೀವಿಸುತ್ತಿದ್ದರು. ಅಮೆರಿಕದ ಅನೇಕ ಕಡೆ ಇಂಥ ಭರ್ಜಿಗಳು ಸಿಕ್ಕಿವೆ. ಇವುಗಳಲ್ಲಿ ನ್ಯೂ ಮೆಕ್ಸಿಕೋನ ಫುಲ್‍ಸಂ ಎಂಬ ಊರಿನ ಬಳಿ ಸಿಕ್ಕಿದ ಭರ್ಜಿಗಳು ಅತ್ಯಂತ ಮುಖ್ಯವಾದುವು. ಇವು ಬಹು ನಾಜೂಕಾಗಿವೆ. ಚೂಪುತುದಿಯ ಸುತ್ತಮುತ್ತ ಬಹು ಎಚ್ಚರಿಕೆಯಿಂದ ನಯಮಾಡಲಾಗಿದೆ. ಸುತ್ತ ಕಾಡುಕೋಣದ ಪಕ್ಕೆಲುಬುಗಳಲ್ಲಿ ಈ ಕಲ್ಲಿನ ಮೊನೆ ಸಿಕ್ಕಿಕೊಂಡಿದ್ದು ಹಾಗೇ ಉಳಿದುಬಂದಿದೆ. ಉತ್ತರ ಅಮೆರಿಕದಲ್ಲಿ ಪುರಾತನ ಮಾನವ ಜೀವಿಸಿದ್ದನೆನ್ನಲು ಇದು ಉತ್ತಮ ಆಧಾರ. ಇದೇ ತರಹ ಕಲ್ಲಿನ ಆಯುಧಗಳು ಕ್ಲೋವಿಸ್ ಮತ್ತು ಲಿಂಡನ್‍ಮಯರ್ ಎಂಬಲ್ಲಿ ಸಿಕ್ಕಿವೆ. ಇಂಗಾಲ (14)ರ ಪ್ರಕಾರ ಇವುಗಳ ಕಾಲ ಕ್ರಿ..ಪೂ. 9,000-8,000.[೧]

ಊಟಾ ಪ್ರಾಂತ್ಯದ ಡೆಂಜರ್ ಗುಹೆ[ಬದಲಾಯಿಸಿ]

ಊಟಾ ಪ್ರಾಂತ್ಯದ ಡೆಂಜರ್ ಗುಹೆಯಲ್ಲಿ ಮತ್ತೆ ಕೆಲವು ಅಪೂರ್ವ ಆಧಾರಗಳು ಸಿಕ್ಕಿವೆ. ಕ್ರಿ..ಪೂ. 9,000ಕ್ಕೆ ಸೇರಿದ ಈ ಗುಹೆಯ ಜನರಿಗೆ ಬುಟ್ಟಿಯನ್ನು ಹೆಣೆಯುವ ಕುಶಲತೆ ಗೊತ್ತಿತ್ತು. ಇಷ್ಟು ಪುರಾತನಕಾಲದಲ್ಲಿ ಪ್ರಪಂಚದಲ್ಲಿ ಬೇರಾರಿಗೂ ಈ ಕಲೆ ಗೊತ್ತಿರಲಿಲ್ಲ.ಸಾಂಡಿಯ ಸಂಸ್ಕøತಿಗೆ ಸೇರಿದ ಶಿಲಾಯುಗದ ಮಾನವ ಕಲ್ಲಿನಿಂದ ಮಾಡಿದ ಭರ್ಜಿಯ ಮೊನೆಗಳನ್ನು ಉಪಯೋಗಿಸುತ್ತಿದ್ದ. ಆದರೆ ಇವು ಫುಲ್‍ಸಂ ಮೊನೆಗಳಂತಿರದೆ ಬೇರೆ ತರಹದಲ್ಲಿವೆ. 1939ರಲ್ಲಿ ಸಾಂಡಿಯ ಪರ್ವತದ ಗುಹೆಯೊಂದರಲ್ಲಿ ನಡೆದ ಭೂಶೋಧನೆಯಿಂದ ಈ ಕೆಲವು ಅಂಶಗಳು ಗೊತ್ತಾಗಿವೆ : ಅಲ್ಲಿ ಮೂರು ಪದರಗಳಿವೆ, ಮೂರನೆಯ ಪದರ ಪುಬ್ಲೊ ಇಂಡಿಯನ್ ಸಂಸ್ಕøತಿಯದು. ಎರಡನೆಯದು ಫುಲ್ ಸಂಸ್ಕøತಿಗೆ ಸೇರಿದುದು. ಇದಾದ ಅನಂತರ ಸಿಕ್ಕಿದ ಹಳದಿ ಕಾವೀ ಮಣ್ಣಿನ ಪದರದಲ್ಲಿ ಯಾವ ವಸ್ತುವೂ ಸಿಕ್ಕಲಿಲ್ಲ. ಇದರ ಕೆಳಗಿನ ಮೂರನೆಯ ಪದರದಲ್ಲಿ ಸಾಂಡಿಯ ಕಲ್ಲುಮೊನೆಯ ಆಯುಧಗಳು ಸಿಕ್ಕಿದುವು. ಇದರಿಂದ ಸಾಂಡಿಯ ಸಂಸ್ಕøತಿ ಫುಲ್ ಸಂಸ್ಕøತಿಗಿಂತ ಹಿಂದಿನದೆಂದು ಖಚಿತವಾಗುತ್ತದೆ. ಸಾಂಡಿಯ ಭರ್ಜಿಮೊನೆಯಲ್ಲಿ ಕೊಟ್ಟು (ಟ್ಯಾಂಗ್) ಇರುವುದರಿಂದ ಅದನ್ನು ಭರ್ಜಿಗೆ ಸಿಕ್ಕಿಸಿ ಭರ್ಜಿ ಎಸೆಯುವ ಯಂತ್ರದಿಂದ ಗುರಿಯ ಕಡೆ ಎಸೆಯುತ್ತಿದ್ದರು.ಯೂಮ ಸಂಸ್ಕøತಿಗೆ ಇಡನ್, ಪ್ಲೇನ್‍ವ್ಯೂ ಮತ್ತು ಸ್ಕಾಟ್ಸ್ ಬ್ಲಫ್ ಮೊದಲಾದ ಭರ್ಜಿಯ ಅನೇಕ ಕಲ್ಲಿನ ಮೊನೆಗಳು ಸೇರಿವೆ. ಮಧ್ಯಟೆಕ್ಸಾಸ್‍ಗೆ ಸೇರಿದ ಆಬಲೀಸ್ ಎಂಬಲ್ಲಿ ಮತ್ತೊಂದು ಕಲ್ಲಿನ ಮೊನೆಯ ಸಂಸ್ಕøತಿ ಸಿಕ್ಕಿತು. ಹೀಗೆ ಮೇಲೆ ಹೇಳಿದ ಸಂಸ್ಕøತಿಗಳನ್ನೆಲ್ಲ ಶಿಲಾಯುಗದ ಬೇಟೆಗೆ ಸೇರಿದ ಸಂಸ್ಕøತಿಗಳೆಂದು ಪರಿಗಣಿಸಬಹುದು.[೨]

ಕೊಚಿಸ್ ಸಂಸ್ಕøತಿ[ಬದಲಾಯಿಸಿ]

ಎರಡನೆಯ ಗುಂಪಿಗೆ ಸೇರಿದ ಕೊಚಿಸ್ ಸಂಸ್ಕøತಿ ಸುಮಾರು 10,000 ವರ್ಷ ಹಿಂದಿನದು. ಇದರಲ್ಲಿ ಬೇಟೆಗಿಂತ ಹುಲ್ಲಿನ ಬೀಜಗಳ ಶೇಖರಣೆಯೇ ಮುಖ್ಯವಾಗಿತ್ತು. ಬೀಜಗಳನ್ನು ಅರೆಯಲು ಅವರು ಉಪಯೋಗಿಸುತ್ತಿದ್ದ ಕಲ್ಲುಗಳು ಸಿಕ್ಕಿವೆ. ಯೂರೋಪ್ ಮತ್ತು ಏಷ್ಯದಲ್ಲಿ ಈ ತರಹ ಕೃಷಿಸಂಸ್ಕøತಿ ಜರ್ಮೊ ಮುಂತಾದ ಕಡೆ 7,000 ವರ್ಷಗಳಿಗಿಂತ ಹಿಂದೆ ಇತ್ತೆಂಬ ಅಂಶ ಗೊತ್ತಾಗಿದೆ. ಆದರೆ ಅಮೆರಿಕದಲ್ಲಿ ಇದು ಹಳೆಯ ಶಿಲಾಯುಗದಲ್ಲಾಗಲೆ ಬಳಕೆಗೆ ಬಂದಿತ್ತು.

ಅಲಾಸ್ಕ ಪ್ರಾಂತ್ಯದ ಡನ್‍ಬಿಗ್ ಮತ್ತು ಡಾರ್‍ಸೆಟ್ ಸಂಸ್ಕøತಿ[ಬದಲಾಯಿಸಿ]

ಮೂರನೆಯ ಗುಂಪಿಗೆ ಸೇರಿದ ಅಲಾಸ್ಕ ಪ್ರಾಂತ್ಯದ ಡನ್‍ಬಿಗ್ ಮತ್ತು ಡಾರ್‍ಸೆಟ್ ಸಂಸ್ಕøತಿಗಳ ಜನ ಸೈಬೀರಿಯದಿಂದ ಬಂದ ವಲಸೆಗಳ ಕಡೆಯ ಹಂತಕ್ಕೆ ಸೇರಿದವರು. ಡೆನ್‍ಬಿಗ್ ಕಣಿವೆಯಲ್ಲಿ ದೊರಕಿದ ಈ ಸಂಸ್ಕøತಿಯ ಅವಶೇಷಗಳು ಇಂಗಾಲ (14)ರ ಪ್ರಕಾರ ಕ್ರಿ.ಪೂ. (4,000) ವರ್ಷ ಹಳೆಯವೆಂದು ಪರಿಗಣಿಸಲಾಗಿದೆ. ಈ ಜನ ಚಕಮಕಿ ಕಲ್ಲಿನ ಸೂಕ್ಷ್ಮವಾದ ಮೊನೆಗಳನ್ನು ಮತ್ತು ಉಳಿಯಂಥ ಆಯುಧಗಳನ್ನು ಕೈಪಿಡಿಗಳಲ್ಲಿ ಸೇರಿಸಿ ಉಪಯೋಗಿಸುತ್ತಿದ್ದರು. ಈ ಸಂಸ್ಕøತಿಯನ್ನು ಅಂತ್ಯಶಿಲಾಯುಗ ಮತ್ತು ಸೈಬೀರಿಯದ ಲೇನಾ ಕಣಿವೆಯ ನೂತನ ಶಿಲಾಯುಗದ ಆಯುಧಗಳಿಗೆ ಹೋಲಿಸಬಹುದು.

ಉಲ್ಲೇಖಗಳು[ಬದಲಾಯಿಸಿ]