ಅಮೆರಿಕದ ಕಾಯಿದೆ

ವಿಕಿಪೀಡಿಯ ಇಂದ
Jump to navigation Jump to search

'''ಅಮೆರಿಕದ ಕಾಯಿದೆ : ಇತರ ದೇಶಗಳ ಕಾಯಿದೆಗಳಂತೆ ತನ್ನದೇ ಆದ ಅಸ್ತಿತ್ವವನ್ನೂ ಇತಿಹಾಸವನ್ನೂ ಇಲ್ಲಿನ ಕಾಯಿದೆ ಹೊಂದಿದೆ. ಪ್ರಾರಂಭದಲ್ಲಿ ಅಧ್ಯಾತ್ಮಶಾಸ್ರ್ತ ಮತ್ತು ನ್ಯಾಯಶಾಸ್ರ್ತಗಳು ಉತ್ತರ ಅಮೆರಿಕದ ಬ್ರಿಟಿಷ್ ವಸಾಹತುಗಳಲ್ಲಿ ಸಾಮಾಜಿಕಕ್ಷೇತ್ರದ ಕ್ರಿಯಾಶಕ್ತಿಗಳಾಗಿದ್ದುವು. ಅಧ್ಯಾತ್ಮವಿದ್ಯೆ ದೈವಿಕಶಕ್ತಿಗೂ ಮಾನವನಿಗೂ ಸಾಹಚರ್ಯವನ್ನು ಉಂಟುಮಾಡಲು ಮಾನವರ ನಡುವೆ ಬಾಂಧವ್ಯ ನಿರ್ಮಾಣಕ್ಕಾಗಿ ಮಾರ್ಗದರ್ಶನ ಮಾಡುವ ಗುರಿಯನ್ನು ಹೊಂದಿತ್ತು. ಯುರೋಪಿನಲ್ಲಿ ಲೌಕಿಕಾಧಿಕಾರಕ್ಕೆ ಪ್ರಾಶಸ್ತ್ಯ ದೊರೆತ ಅನಂತರ ಮಾನವರ ನಡುವಣ ಬಾಂಧವ್ಯ ದ ನಿರ್ಮಾಣದ ಹೊಣೆ ಕಾನೂನಿಗೆ ಮೀಸಲಾಯಿತು. ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ ಮೆಸಾಚುಸೆಟ್ಸ್ ವಸಾಹತುಕಾರರಲ್ಲಿ ಆಂಶಿಕವಾಗಿ ಅಧ್ಯಾತ್ಮವಿದ್ಯೆ ಪ್ರಾಶಸ್ತ್ಯ ಹೊಂದಿದ್ದರೂ ತಾಂತ್ರಿಕವಾಗಿ ನ್ಯಾಯಶಾಸ್ರ್ತ ರಾಜಕೀಯ ಕ್ಷೇತ್ರದಲ್ಲಿ ಪ್ರಧಾನಸ್ಥಾನವನ್ನುಅಲಂಕರಿಸಿತು. ಚರ್ಚ್ ಅಧಿಕಾರಿಗಳ ಆಡಳಿತದಲ್ಲೂ ಧಾರ್ಮಿಕಶಾಸನಗಳಿಗಿಂತ ಸಾರ್ವತ್ರಿPಶಾಸನ ವಿಧಿಗಳಿಗೇ ವಿಶೇಷಸ್ಥಾನ ದೊರಕುತ್ತಿತ್ತು. ವಸಾಹತುಷಾಹಿಯ ಅವಧಿಯಲ್ಲಿ ನ್ಯಾಯಶಾಸ್ರ್ತದ ಬಗ್ಗೆ ಚರ್ಚ್ ಅಧಿಕಾರಿಗಳು ತಮ್ಮ ಕಾಲದ ನ್ಯಾಯವಾದಿಗಳಿಗಿಂತ ಹೆಚ್ಚಿನ ಪರಿಣತಿಯನ್ನು ಪಡೆದ ಪ್ರಕಾಂಡ ಪಂಡಿತರಾಗಿದ್ದರು. ಇಂಗೆಂಡಿನಲ್ಲಿ ಕೋಕ್ ಮಹಾಶಯ ಸಾರ್ವಜನಿಕ ಕಾನೂನನ್ನು ಬೆಳಕಿಗೆ ತಂದಾಗ ಇಂಗ್ಲಿಷರು ಅಮೆರಿಕದಲ್ಲಿ ತಳವೂರಲು ಆಗಮಿಸಿದರು. ೧೭೫೦-೧೭೭೫ರ ಅವಧಿಯಲ್ಲಿ ರಾಷ್ಟ್ರೀಯಪ್ರಜ್ಞೆ ವಸಾಹತುಕಾರರಲ್ಲಿ ಪುಟಿದೆದ್ದಾಗ ಅದೇ ಸಮಯದಲ್ಲಿ ಬ್ಲಾಕ್‍ಸೋನಿನ ಪಾಂಡಿತ್ಯಪೂರ್ಣ ನ್ಯಾಯಶಾಸ್ರ್ತದ ಗ್ರಂಥ ಕಾಮೆಂಟರೀಸ್ ಹೊರಬಂತು. ಇದು ಫಿಲಡೆಲ್ಫಿಯದಲ್ಲಿ ಮರು ಪ್ರಕಟಣೆಯಾಗಿ ಪಕಾಶಗೂಂಡಾಗ ಜನರಲ್ಲಿ ನವಚೈತನ್ಯ ಮೂಡಿತು. ಈ ಗ್ರಂಥಕ್ಕೆ ಫಿಲಡೆಲ್ಫಿಯದ ವಿಲಿಯಂ ಮತ್ತು ಮೇರಿ, ಕಾಲೇಜಿನ ನ್ಯಾಯಶಾಸ್ರ್ತ ಮತ್ತು ರಾಜ್ಯಶಾಸ್ರ್ತ ಪ್ರಾದ್ಯಾಪಕರಾದ ಸೇಂಟ್ ಜಾರ್ಜ್ ಟಕ್ಕರ್ ಅನುಪಮ ವ್ಯಾಖ್ಯಾನಗಳನ್ನೂ, ವಿಶೇಷ ಟಿಪ್ಪಣಿಗಳನ್ನೂ ಸೇರಿಸಿ ಪ್ರಕಟಿಸಿದರು (೧೮೦೩). ಹದಿನೆಂಟನೆಯ ಶತಮಾನದ ಆಚೀಚಿನಲ್ಲಿ ವಸಾಹತುಗಳ ಕಾನೂನುಸಮಸ್ಯೆಗಳು ಮತ್ತು ಸಮನ್ವಯಸಂಗತಿಗಳು ಇಂಗ್ಲಿಷ್ ಶಾಸನಗಳ ವಸ್ತುವಿಚಾರನಿರೂಪಣೆಗೆ ವಿರೋಧವಾಗಿ ರೂಪುಗೊಂಡ ಫಲವಾಗಿ ಅಮೆರಿಕದಲ್ಲಿ ಕಾನೂನಿನ ಗ್ರಂಥಗಳು, ವ್ಯಾಖ್ಯಾನ, ಟಿಪ್ಪಣಿಗಳು ಅಪಾರಸಂಖ್ಯೆಯಲ್ಲಿ ಪ್ರಕಟಗೊಂಡುವು. ಮಧ್ಯವಸಾಹತು ಮತ್ತು ನ್ಯೂ ಇಂಗ್ಲೆಂಡ್ ಪ್ರದೇಶಗಳಲ್ಲಿ ಈ ಪ್ರಕಟನಕಾರ್ಯ ಭರದಿಂದ ಸಾಗಿತು. ೧೭೯೦ರಲ್ಲಿ ಅಮೆರಿಕದ ಸುಪ್ರೀಂಕೋರ್ಟಿನ ನ್ಯಾಯಾಧೀಶ ಜೇಮ್ಸ್ ವಿಲ್ಸನ್ ಪೆನ್ಸಿಲೇನಿಯ ವಿಶ್ವವಿದ್ಯಾನಿಲಯದಲ್ಲಿ ನ್ಯಾಯಶಾಸ್ರ್ತದ ಬಗ್ಗೆ ನೀಡಿದ ಭಾಷಣಮಾಲೆಯ ಫಲವಾಗಿ ಇಂಗ್ಲಿಷ್ ಕಾನೂನನ್ನು ಕುರಿತು ಅಪಾರಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಪ್ರಕಟಗೊಂಡುವು. ೧೭೯೪ರಲ್ಲಿ ನ್ಯೂಯಾರ್ಕಿನ ಚಾನಲರ್ ಕೆಂಟ್ ಕಾನೂನಿನ ಬಗ್ಗೆ ವಿಶೇಷ ಉಪನ್ಯಾಸಗಳ ನ್ನಿತ್ತ. ಇವು ೧೮೨೬ರಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟವಾದುವು. ಮೊದಲ ಸಂಪುಟ ಸ್ಥಳೀಯ ಕಾನೂನುಗಳನ್ನು ಕುರಿತ ವಿವೇಚನೆಯನ್ನೊಳಗೊಂಡಿದ್ದು ಕಾಲಕ್ರಮೇಣ ಪಠ್ಯಗ್ರಂಥವಾಯಿತು. ಅನಂತರ ಬಂದ ನ್ಯಾಯಶಾಸ್ತ್ರವನ್ನು ಕುರಿತ ಪಠ್ಯಗ್ರಂಥಗಳಲ್ಲಿ ಕೆಂಟ್‍ನ ಗ್ರಂಥದ ಪ್ರಭಾವವನ್ನುಕಾಣಬಹುದು. ಹೀಗೆ ಪ್ರಭಾವಕ್ಕೆ ಒಳಗಾದ ಗ್ರಂಥಗಳಲ್ಲಿ ಸ್ಟೋರಿ, ಕಾಯಟ್, ಗ್ರೀಕ್ ಲೀಫ್, ವೀಟ್ ಮೊದಲಾದವರ ಗ್ರಂಥಗಳು ಉಲೇಖನಾರ್ಹ. ಕಾನೂನು ಸಂಕೀರ್ಣಗೊಂಡಂತೆ ನ್ಯಾಯವಿಷಯಗಳು ಅಧಿಕಗೊಂಡು ಬ್ಲಾಕ್ ಸ್ಟೋನ್ ಮತ್ತು ಕೆಂಟರ ಕೃತಿವ್ಯಾಖ್ಯೆಗಳು ಕಾನೂನಿನ ಅಧ್ಯಯನಾವಶ್ಯಕತೆಯನ್ನು ಪೂರೈಸಲು ಶಕ್ತವಾಗಲಿಲ್ಲ. ಈ ಕಾರಣದಿಂದ ಅನೇಕ ನೂತನ ವ್ಯಾಖ್ಯಾನಗ್ರಂಥಗಳೂ ಪಠ್ಯ ಸಾಹಿತ್ಯವೂ ಪ್ರಕಟವಾದುವು. ೧೮೦೦ಕ್ಕೆ ಮುಂಚೆ ಎಲ್ಲ ಪಠ್ಯಗ್ರಂಥಗಳೂ ಬ್ರಿಟಿಷ್ ಲೇಖಕರ ಕೃತಿಗಳಾಗಿದ್ದುವು. ಮೊದಲ ಅಮೆರಿಕನ್ ಪಠ್ಯ ಗ್ರಂಥವೆಂದರೆ ೧೮೦೨ರಲ್ಲಿ ಪ್ರಕಟಗೊಂಡ ಕೆಯ್ ಕೃತ ಲೆಕ್ಸ್ ಮರ್ಕಟೆರಿಯಾ ಅಮೆರಿಕಾನ ಎಂಬ ಗ್ರಂಥ. ೧೮೦೫ರಲ್ಲಿ ಜೋಸೆಫ್ ಸ್ಟೋರಿಯ ಆನ್ ಪ್ಲೀಡಿಂಗ್ಸ್ ಎಂಬ ಗ್ರಂಥ ಹೊರಬಂತು. ಏಂಜೆಲ್ ನ ಕಾರ್ಪೊರೇಷನ್ಸ್, ವಾಕರ್ ನ ಇಂಟ್ರೊಡಕ್ಷನ್ ಟು ಅಮೆರಿಕನ್ ಲಾ, ಬೊವಿಯರ್ಸ್ ನ ಲಾ ಡಿಕ್ಷನರಿ, ಗ್ರೀನ್ ಲೀವ್ಸ್ ನ ಎವಿಡೆನ್ಸ್, ಸಡ್ಜ್‍ವಿಕ್ ನ ಡ್ಯಾಮೀಜಸ್, ಪಾರ್ಸ್ ನ ಕಾಂಟ್ರಾಕ್ಟ್, ಬ್ರೌನ್ ನ ಸ್ಟಾಚ್ಯೂಟ್ಸ್ ಆಫ್ ಫ್ರಾಡ್ಸ್ ಮತ್ತು ಸ್ಟೋರಿ ಅವರ ಅನೇಕ ಪ್ರಸಿದ್ಧ ಗ್ರಂಥಗಳು ೧೮೩೦ ರಿಂದ ೧೮೬೭ರ ಅವಧಿಯಲ್ಲಿ ಪ್ರಕಾಶನಗೊಂಡುವು. ಇದನ್ನು ನ್ಯಾಯಶಾಸ್ರದ ಬೆಳವಣಿಗೆಯ ಸುಗ್ಗಿಕಾಲವೆಂದು ಹೇಳಬಹುದು. ಈ ಎಲ್ಲ ಗ್ರಂಥಗಳು ಪರಿಷ್ಕೃತರೂಪದಲ್ಲಿ ಇಂದೂ ಬಳಕೆಯಲ್ಲಿವೆ. ೧೮೩೦ರ ಅನಂತರ ಕಾನೂನಿನ ಬಗ್ಗೆ ನಿಯತಕಾಲಿಕಗಳು ಪ್ರಕಟವಾಗತೊಡಗಿದುವು. ಆದರೆ ಇಂದು ೧೮೬೦ರ ಮುಂಚೆ ಪ್ರಕಟಗೊಂಡ ಪತಿಕೆಗಳಾವುವೂ ಉಳಿದುಬಂದಿಲ್ಲ. ೧೭೯೦ಕ್ಕೆ ಮುಂಚಿನ ಅವಧಿಯಲ್ಲಿ ಕೇವಲ ನಾಲ್ಕು ನ್ಯಾಯವರದಿಗಳು ಅಪೂರ್ಣವಾಗಿ ಸಿದ್ಧವಾದವು. ಅವುಗಳಲ್ಲಿ ೧೮೦೦ರ ವೇಳೆಗೆ ಒಂದು ವರದಿ ಮಾತ್ರ ಬೆಳಕಿಗೆ ಬಂತು. ಮುಖ್ಯವಾಗಿ ೧೮೪೦ರ ಅನಂತರ ವೃತ್ತಿವಕೀಲರಿಗೆ ಮತ್ತು ನ್ಯಾಯಾಭ್ಯಾಸಿಗಳಿಗೆ ಅಗತ್ಯವೆನಿಸಿದ ವರದಿಗಳು, ಸಾರಸಂಗ್ರಹಾವಳಿ ಮತ್ತು ಇತರ ಸಹಾಯಕ ಸಾಹಿತ್ಯ ಅಪಾರಪ್ರಮಾಣದಲ್ಲಿ ಹೊರಬಿದ್ದುವು. ೧೮೬೦ರ ಹೊತ್ತಿಗೆ ನ್ಯಾಯಶಾಸ್ರ್ತಕ್ಕೆ ಸಂಬಂಧಿಸಿದ ಸಾಹಿತ್ಯರಾಶಿ ಅಗಾಧ ಪ್ರಮಾಣದಲ್ಲಿ ಸಿದ್ಧವಾಗಿ ಎಲ್ಲೆಲ್ಲೂ ಪ್ರಚಾರವಾಗಿತ್ತು. ರಾಷ್ರ್ಟದ ಆರ್ಥಿಕಪ್ರಗತಿ ನ್ಯಾಯವೃತ್ತಿಗೆ ಉತ್ತೇಜಕ ಶಕ್ತಿಯಾಯಿತು. ತೀವ್ರಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕಪರಿಸ್ಥಿತಿಯ ಕಾಲದಲ್ಲಿ ಅನಿಶ್ಚಿತರೂಪದಲ್ಲಿದ್ದ ಸಾರ್ವತ್ರಿಕನಿಯಮಗಳು ತಾತ್ತ್ವಿಕಕ ನಿರ್ಧಾರಗಳಿಗಿಂತ ಹೆಚ್ಚಾಗಿ ಪರಂಪರಾಗತ ಸಾಂಪ್ರದಾಯಿಕ ತೀರ್ಮಾನಗಳನ್ನು ಅವಲಂಬಿಸುತ್ತಿದ್ದುದರಿಂದ ನ್ಯಾಯವಿಚಾರಣಾ ಪ್ರಸಂಗಗಳು ಅತ್ಯಧಿಕವಾದುವು. ೧೭೫೦ರ ಅನಂತರ ವಕೀಲವೃತ್ತಿಯವರು ಸಾರ್ವಜನಿಕಕ್ಷೇತ್ರದಲ್ಲಿ ಗಣ್ಯಸ್ಥಾನವನ್ನು ಗಳಿಸುವಂತಾಯಿತು. ವಸಾಹತುಗಳಲ್ಲಿದ್ದ ಸಮಸ್ಯೆಗಳು ಸ್ಥಳೀಯ ಲಕ್ಷಣಗಳನ್ನು ತೊರೆದು ವ್ಯಕ್ತಿಗತಮಹತ್ತ್ವವನ್ನು ಪಡೆದುವು. ಈ ಪರಿವರ್ತನೆ ರಾಷ್ಟ್ರೀಯತೆ ಮತ್ತು ಸಾಮಾಜಿಕ ದೃಷ್ಟಿಗಳಿಂದ ಮಹತ್ವಪೂರಿತ ಘಟನೆಯಾಯಿತು. ಇಂಥ ಸನ್ನಿವೇಶದಲ್ಲಿ ತತ್ತ್ವಜ್ಞಾನಿಗಳು ಮತ್ತು ಧರ್ಮೋಪದೇಶಕರು ನಾಯಕಸ್ಥಾನದಲ್ಲಿ ನಿಂತು ಸಮಾಜವನ್ನು ಮುನ್ನಡೆಸಲು ಶಕ್ತರಾಗಲಿಲ್ಲ; ಮತ್ತು ರಾಜ್ಯಶಾಸ್ತ್ರ ಹಾಗೂ ರಾಜ್ಯಾಡಳಿತ ವಿಚಾರಗಳಲ್ಲಿ ಅರಿತ ನುರಿತ ಜನರೂ ಮಾರ್ಗದರ್ಶನಕ್ಕೆ ಇರಲಿಲ್ಲ. ಪರಿಣಾಮವಾಗಿ ಜನತೆಯನ್ನು ಮುನ್ನಡೆಸುವ ಗುರುತರ ಭಾರ ವೃತ್ತಿವಕೀಲರ ಪಾಲಿಗೆ ಬಂತು. ಒಂದು ಕಾಲದಲ್ಲಿ ಅಸತ್ಯ ಕ್ಕೆ ಅಪ್ರಿಯತೆಗೆ ಹೆಸರಾಗಿದ್ದ ವಕೀಲವೃತ್ತಿಯವರು ಇಂದು ಸಮಾಜಕ್ಕೆ ಮಾರ್ಗದರ್ಶಕರಾಗಿ ನಿಂತರು. ೧೭೭೫ರಲ್ಲಿ ವಸಾಹತುಗಳು ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಿಕೊಂಡಾಗ ನ್ಯಾಯವಾದಿಗಳೇ ಜನತೆಯನ್ನು ಮುನ್ನಡೆಸುವ ದಕ್ಷ ಜನರಾಗಿದ್ದರು. ೧೭೫೦ರ ಅನಂತರ ಹೊಸ ಶಿಕ್ಷಣಪದ್ಧತಿಯ ಬಗ್ಗೆ ಅದರಲ್ಲೂವಿಶೇಷವಾಗಿ ಸಾರ್ವತ್ರಿಕಶಿಕ್ಷಣಕ್ಕೆ ವಿಶೇಷಮಹತ್ವ ದೊರೆತುದರ ಫಲವಾಗಿ ನ್ಯಾಯಶಿಕ್ಷಣ ತುಂಬ ಜನಮನ್ನಣೆಯನ್ನು ಗಳಿಸಿತು. ೧೭೭೫ರ ವೇಳೆಗೆ ಬಹುಶಃ ಜಗತಿನ ಬೇರಾವ ದೇಶದಲ್ಲೂ ನ್ಯಾಯಶಿಕ್ಷಣ ಇಷೊಂದು ವ್ಯಾಪಕತೆಯನ್ನು ಪಡೆದಿಲ್ಲ ಎಂದು ಬರ್ಕ್ ಹೇಳಿದ ಮಾತು ಸಮಂಜಸವೆನ್ನಿಸುವಂತಿತ್ತು. ಆ ಕಾಲದಲ್ಲಿ ನ್ಯಾಯಶಿಕ್ಷಣ ವಿಶೇಷವಾಗಿ ನ್ಯಾಯಾಲಯದಲ್ಲಿದ್ದ ಅಭ್ಯಾಸಿವಕೀಲರಲ್ಲಿ ಮತ್ತು ದಕ್ಷ ವೃತ್ತಿವಕೀಲರ ಬಳಿಯಲ್ಲಿದ್ದ ಗುಮಾಸ್ತರಲ್ಲಿ ಮಾತ್ರ ಕಂಡುಬರುತ್ತಿತ್ತು. ೧೭೫೫ರಲ್ಲಿ ನ್ಯೂಯಾರ್ಕಿನ ಕಿಂಗ್ಸ್ ಕಾಲೇಜಿನಲ್ಲಿ ಕಾನೂನಿನ ಬಗ್ಗೆ ಅಧಿಕೃತಶಿಕ್ಷಣ ಪ್ರಾರಂಭವಾಯಿತು. ಶಿಕ್ಷಣದ ಪಠ್ಯಕ್ರಮದಲ್ಲಿ ನಾಲ್ಕನೆಯ ವರ್ಷದ ಅಭ್ಯಾಸದ ಪಟ್ಟಿಯಲ್ಲಿ ಇತರ ವಿಷಯಗಳೊಂದಿಗೆ ಸರ್ಕಾರ ಮತ್ತು ನ್ಯಾಯಶಾಸ್ತ್ರಗಳ ಮೂಲ ತತ್ತ್ವಗಳು ಎಂಬ ವಿಷಯವೂ ಪಠ್ಯವಾಯಿತು. ಇದೇ ರೀತಿಯಲ್ಲಿ ಫಿಲಡೆಲ್ಫಿಯದಲ್ಲಿ ೧೭೫೬ರಲ್ಲಿ ಅಧಿಕೃತ ಕಾನೂನುಶಿಕ್ಷಣಾಭ್ಯಾಸ ಪ್ರಾರಂಭವಾಯಿತು. ೧೭೭೩ರಲ್ಲಿ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಕೃತಿಕನ್ಯಾಯಸಿದ್ಧಾಂತವಿಭಾಗಕ್ಕೆ ಪ್ರಾದ್ಯಾಪಕ ಹುದ್ದೆಯನ್ನು ವ್ಯವಸ್ಥೆ ಮಾಡಲಾಯಿತು. ೧೭೭೯ರಲ್ಲಿ ವಿಲಿಯಂ ಮತ್ತು ಮೇರಿ ಕಾಲೇಜಿನಲ್ಲಿ ಲಾ ಮತ್ತು ಪೋಲೀಸ್ ಅಧ್ಯ ಯನವಿಭಾಗವನ್ನು ತೆರೆಯಲಾಯಿತು. ೧೭೯೦ರಲ್ಲಿ ಪೆನ್ಸಿಲ್ವೇನಿಯ, ೧೭೯೪ರಲ್ಲಿ ಕೊಲಂಬಿಯ, ೧೭೯೯ರಲ್ಲಿ ಟ್ರಾನ್ಸಿಲ್ವೇನಿಯ, ೧೮೦೬ರಲ್ಲಿ ಮಿಡ್ಲ್‍ಬರಿ, ೧೮೨೪ರಲ್ಲಿ ಯೇಲ್, ೧೮೨೬ರಲ್ಲಿ ವರ್ಜಿನಿಯ-ಹೀಗೆ ಅನೇಕ ವಿಶ್ವವಿದ್ಯಾನಿಲಯಗಳು ಸ್ಥಳೀಯ ಕಾನೂನುಶಾಸ್ರ್ತದ ಅಧ್ಯ ಯನಕ್ಕೆ ಪ್ರತ್ಯೇಕ ವಿಭಾಗಗಳನ್ನೂ ಪ್ರಾರಂಭಿಸಿದುವು. ೧೮೬೦ರ ವೇಳೆಗೆ ಮೇಲ್ಕಂಡ ಸಂಸ್ಥೆಗಳಲ್ಲದೆ ಇತರ ಇಪ್ಪತ್ತೆರಡು ವಿಶ್ವವಿದ್ಯಾನಿಲಯಗಳ ಸಂಸ್ಥೆಗಳು ಕಾನೂನಿನ ಬಗ್ಗೆ ವಿಶೇಷ ಶಿಕ್ಷಣವನ್ನು ನೀಡುತ್ತಿದ್ದುವು. ೧೭೮೨ರಲ್ಲಿ ಲಿಚ್ ಫೀಲ್ಡ್ ಮತ್ತು ೧೭೮೪ರಲ್ಲಿ ಕನೆಕ್ಟಿಕಟ್ ಗಳಲ್ಲಿ ಅಲ್ಲದೆ ಇತರ ಕಡೆಗಳ ಖಾಸಗಿ ನ್ಯಾಯಶಾಲೆಗಳು ಅಸಂಖ್ಯಾತವಾಗಿ ಹುಟ್ಟಿಕೊಂಡುವು. ೧೮೬೦ರ ವೇಳೆಗೆ ಇಂಥ ಶಾಲೆಗಳು ಸಾಕಷ್ಟು ಪ್ರಮಾಣದಲ್ಲಿ ಎಂಟಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದುವು. ೧೮೬೫ರ ಅನಂತರ ವಕೀಲಿವೃತ್ತಿಗೆ ಹೋಗುವವರಿಗೆ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ವಿಶೇಷ ಪ್ರಾಶಸ್ತ್ಯವನ್ನುನೀಡಿದ್ದರಿಂದ ಖಾಸಗಿ ನ್ಯಾಯಶಾಲೆಗೆ ಮೊದಲ್ಲಿದ್ದ ಪ್ರಾಧಾನ್ಯ ಕುಗ್ಗತೊಡಗಿತು. ಆದರೂ ಪ್ರಮುಖ ವಾಣಿಜ್ಯನಗರಗಳಲ್ಲಿ ಹಗಲು ಉದ್ಯೋಗನಿರತರಾದವರ ಅನುಕೂಲಕ್ಕಾಗಿ ರಾತ್ರಿಕಾಲದಲ್ಲಿ ಸಂಕ್ಷಿಪ್ತನ್ಯಾಯಶಿಕ್ಷಣವೀಯುವ ಸಂಸ್ಥೆಗಳಾಗಿಖಾಸಗಿನ್ಯಾಯಶಾಲೆಗಳು ಉಳಿದುಕೊಂಡು ಬಂದುವು. ಆದರೆ ಇಂದು ರಾಜಕೀಯಕ್ಷೇತ್ರದಲ್ಲಿ ಮುಂದಾಳುತನಕ್ಕೆ ವ್ಯಕ್ತಿಗಳನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಸಹಾಯಕವಾಗಿ ರೂಪುಗೊಂಡಿರುವ ವಕೀಲಿವೃತ್ತಿ ಶಿಕ್ಷಣಪದ್ಧತಿಯನ್ನು ಉಳಿದ ಕಡೆಗಳಿಗಿಂತ ವಿಶೇಷವಾಗಿ ಅಮೆರಿಕದಲ್ಲಿ ಕಾಣಬಹುದು. ೧೭೫೦ರ ಅನಂತರದ ಕಾಲಕ್ಕೆ ತಕ್ಕ ಆವಶ್ಯಕತೆಗಳನ್ನು ಪೂರೈಸುವುದಲ್ಲಿ ತತ್ವಶಾಸ್ರ್ತ ಮತ್ತು ಧರ್ಮಶಾಸ್ತ್ರಗಳಿಗಿಂತ ಹೆಚ್ಚಾಗಿ ನ್ಯಾಯಶಾಸ್ತ್ರಶಿಕ್ಷಣ ಸಮರ್ಥವಾಗಿ ಪೂರೈಸಿದರೆ, ೧೮೬೦ರ ಅನಂತರ ಅಮೆರಿಕದ ಸಾಮಾಜಿಕಾಭಿವೃದ್ಧಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ನವೀನರೀತಿಯ ಸಾಮಾಜಿಕಶಾಸ್ರಗಳ ಶಿಕ್ಷಣ, ಅಧ್ಯ ಯನಗಳು ಸಮರ್ಥರೀತಿಯಲ್ಲಿ ಆಗಿನ ಆವಶ್ಯಕತೆಗಳನ್ನು ಪೂರೈಸಿದುವು. ಈ ರೀತಿ ಪ್ರಗತಿ ಹೊಂದಿ ಮುನ್ನಡೆಯುತ್ತಿರುವ ಅಮೆರಿಕದ ಕಾನೂನುಪದ್ಧತಿ ಇಂದು ವ್ಯಕ್ತಿ-ವ್ಯಕ್ತಿಗಳ ನಡುವಣ ಮತ್ತು ಆಳುವವರ ಹಾಗೂ ಪ್ರಜೆಗಳ ನಡುವಣ ಸುಸಂಘಟಿತ ಸುಮಧುರಬಾಂಧವ್ಯ ವನ್ನುನಿರ್ಮಿಸುವ ಅಪೂರ್ವಶೇಷ್ಠ ಸಾಧನೆವಾಗಿ ಜಗತ್ತಿನಲ್ಲೆಲ್ಲ ಪ್ರಬುದ್ಧಪರಿಣತ ನ್ಯಾಯ ಪದ್ಧತಿಯಾಗಿ ಬೆಳಗಿದೆ. ಇಂದಿನ ಅಮೆರಿಕದ ನ್ಯಾಯಶಾಸ್ರ್ತ ವನ್ನು ತಜ್ಞರು ಪ್ರದಾನವಾಗಿ ಸಂವಿಧಾನವಿಧಿ, ನಾಗರಿಕವಿಧಿ, ದಂಡವಿಧಿ, ನ್ಯಾಯತೀರ್ಮಾನದತ್ತವಿಧಿ ಎಂಬುದಾಗಿ ನಾಲ್ಕು ವಿಧಗಳಲ್ಲಿ ವರ್ಗೀಕರಿಸುತ್ತಾರೆ. ಅಮೆರಿಕದಲ್ಲಿ ಕಾಯಿದೆ ನಿರ್ಮಾಣವಿಧಾನ ಗಮನಾರ್ಹವಾದ ರೀತಿನೀತಿಗಳನ್ನು ಹೊಂದಿದೆ. ಯಾವುದೇ ಹೊಸಕಾಯಿದೆಯಾದರೂ ಕಾಂಗ್ರೆಸ್ಸಿನ ಉಭಯಸದನಗಳಲ್ಲೂ ಮಂಡಿತವಾಗಿ ಅಂಗೀಕೃತವಾಗಬೇಕು. ಆಗ ಅದನ್ನು ಅಧ್ಯಕ್ಷರ ಸಹಿಗೆ ಮಂಡಿಸಲಾಗುವುದು. ಉಭಯಸದನಗಳ ಅಂಗೀಕಾರ ದೊರೆಯದಿದ್ದಲ್ಲಿ ಆ ಕಾಯಿದೆ ತಿರಸ್ಕೃತವಾಗುತ್ತದೆ. ರಾಷ್ಟ್ರಾದ್ಯಕ್ಷರಿಗೆ ಕಾಯಿದೆಯ ಶಾಸನವನ್ನು ತಡೆಹಿಡಿಯುವ ಅಧಿಕಾರವಿದೆ. ಅಂಥ ಸಂದರ್ಭಗಳಲ್ಲಿ ಮತ್ತೆ ಕಾಂಗ್ರೆಸಿನ ಮರು ಪರಿಶೀಲನೆಗೆ ಕಾಯಿದೆ ಒಳಗಾಗುತ್ತದೆ. ಆಗ ಮೂರನೆಯ ಎರಡು ಭಾಗದಷ್ಟು ಬಹುಮತದಿಂದ ಅಂಗೀಕಾರವಾದರೆ ಅದು ಶಾಸನವಾಗುತ್ತದೆ. ೧೯೨೩ರಲ್ಲಿ ರೂಪುಗೊಂಡ ಅಮೆರಿಕದ ಕಾಯಿದೆಸಂಸ್ಥೆ ಕಾನೂನುಗಳ ಅರ್ಥವಿವರಣೆ, ಸೂತ್ರೀಕರಣ, ಅವುಗಳ ಸಾಮಾಜಿಕ ಅನ್ವಯ, ಪ್ರಬುದ್ಧ ಅಧ್ಯಯನ ಮೊದಲಾದ ವಿಚಾರಗಳ ಬಗ್ಗೆ ಬಹು ಉಪಯುಕ್ತವಾದ ಕೆಲಸಮಾಡಿದೆ. ಇಂದು ಅಮೆರಿಕದ ನ್ಯಾಯಪದ್ಧತಿ ರಾಷ್ಟ್ರೀಯ ಹಾಗೂ ಸಾಮಾಜಿಕ ಜೀವನದ ಸಕಲ ಕಾರ್ಯಕ್ಷೇತ್ರಗಳಲ್ಲೂ ಪ್ರಚೋದಕಶಕ್ತಿಯಾಗಿ ಜನತೆಯನ್ನು ಮುನ್ನಡೆಸುವಷ್ಟು ವಿಶಾಲವ್ಯಾಪ್ತಿಯನ್ನು ಹೊಂದಿ, ನ್ಯಾಯಶಾಸ್ರ್ತದ ವಿಷಯ, ವಿಚಾರಗಳಲ್ಲಿ ನಾನಾ ಶಾಖೆಗಳ ವಿಕಾಸವನ್ನುಹೊಂದಿ, ಅಧ್ಯ ಯನದ ವಿವಿಧ ಅಂಗೋಪಾಂಗಗಳನ್ನು ವಿಸ್ತೃತ ರೂಪದಲ್ಲಿ ಪಡೆದಿದ್ದು, ಬೃಹತ್ ವ್ಯಾಪಿಯ ಶಾಸ್ರ್ತ ಪದ್ಧತಿಯಾಗಿದೆ. (ಎಚ್.ಆರ್.ಡಿ.)