ವಿಷಯಕ್ಕೆ ಹೋಗು

ಅಮೃತೇಶ್ವರೀ, ಕೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟದಲ್ಲಿರುವ ಅಮೃತೇಶ್ವರೀ ದೇವಾಲಯವು ಕುಂದಾಪುರದಿಂದ ಸುಮಾರು ೧೦ಕಿ.ಮೀ ದೂರದಲ್ಲಿದೆ. ತಾಯಿ ಅಮೃತೇಶ್ವರಿಯು ಹಲವು ಮಕ್ಕಳ ತಾಯಿ ಎಂದು ಪ್ರಸಿದ್ದಿ ಪಡೆದಿದ್ದಾಳೆ, ಕಾರಣ ಗರ್ಭ ಗುಡಿಯ ಸುತ್ತಲೂ ಇರುವ ಕಲ್ಲುಗಳೂ ಮತ್ತು ಪ್ರತೀ ಒಂದು ವರ್ಷಕೊಮ್ಮೆ ಹೊಸ ಕಲ್ಲಿನ ಉದ್ಬವ. ಈ ಸ್ಥಳಕ್ಕೆ ಐತಿಹಾಸಿಕ ಪುರಾಣ ಕಥೆಯಿದೆ ಹಾಗೂ ಇಲ್ಲಿ ವಿಶೆಷವಾಗಿ ಸಂತಾನ ಭಾಗ್ಯಕ್ಕಾಗಿ, ಅನಾರೊಗ್ಯದಿಂದ ಚೇತರಿಸಿಕೊಳ್ಳುವುದಕ್ಕೆ ಹಾಗೆ ಇನ್ನಿತರ ಕಾರಣಗಳಿಗೆ ಜನರು ವಿವಿಧ ರೀತಿ ಹರಕೆ ಸಲ್ಲಿಸುತ್ತಾರೆ. ಒಂದಂಶದಿಂದ ದುಷ್ಟರನ್ನು ದಮನ ಮಾಡುವ ಮಾರಿದೇವತೆಯಾಗಿಯೂ, ಇನ್ನೊಂದಂಶದಿಂದ ಮಕ್ಕಳಿಗೆ ಹಾಲನ್ನ ನೀಡುವ ಅಮೃತೇಶ್ವರೀಯಾಗಿಯೂ ಈಕೆ ವಿರಾಜಿಸುತ್ತಾಳೆ. ನಾಥ ಪಂಥದ ಜೋಗಿ ಜನಾಂಗದವರು ದೇವಿಯ ನಿತ್ಯ ಪೂಜೆ ಸಲ್ಲಿಸುವುದು ಈ ಕ್ಷೇತ್ರದ ವೈಶಿಷ್ಟ್ಯ. ಅಮೃತೇಶ್ವರೀ ಅಮ್ಮನವರನ್ನು ನವರಾತ್ರಿ ಸಂದರ್ಭದಲ್ಲಿ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುವುದು ಖಂಡಿತ.

ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ
ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ

ದೇವಾಲಯ

[ಬದಲಾಯಿಸಿ]

ದೇವಾಲಯದಲ್ಲಿ ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರಿಯ ಶಿಲಾಮೂರ್ತಿ ಇದೆ. ಪರಿವಾರ ದೇವತೆಗಳಾದ ವೀರಭದ್ರ, ನಾಗ, ನಂದಿ ಹಾಗೂ ದೈವಗಳಾದ ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು ಹಾಗೂ ಪಂಜುರ್ಲಿಯರು ಸಮೀಪದಲ್ಲಿ ನೆಲೆಸಿದ್ದಾರೆ. ವರುಣ ತೀರ್ಥವು ದಕ್ಷಿಣದಲ್ಲಿದೆ.

ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ, ಕೋಟ
ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ, ಕೋಟ

ಪುರಾಣ

[ಬದಲಾಯಿಸಿ]

ಹಿಂದೆ ರಾವಣನ ಬಂಧುವಾದ ಖರನೆಂಬ ಅಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಪತಿವ್ರತೆ, ಸಾಧು ಸ್ವಭಾವದವಳು ಆಗಿದ್ದು ಸದಾ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು. ಒಮ್ಮೆ ಕುಂಭಮುಖಿಯು ಶೂರ್ಪನಖಿಯ ಜೊತೆ ಸೇರಿಕೊಂಡು ವನವಿಹಾರ ಮಾಡುತ್ತಿದ್ದರು. ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಏಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದ್ದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯಪ್ರಬುದ್ದನೂ, ಸುಂದರನೂ, ವಿದ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು. ಬಾಲವಿಧವೆ ಹಾಗೂ ಅತಿ ಕಾಮುಕಳಾದ ಶೂರ್ಪನಖಿಯು ಅತಿಪ್ರಭೆಯ ಮಗನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲಾತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಏಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ ಈ ಶಬ್ಧವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂದು ತಿಳಿದು ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ ಎಲೈ ಶೂರ್ಪನಖಿಯೇ! ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾಗೆಂದು ಶಾಪಕೊಟ್ಟು ಪ್ರಾಣತ್ಯಾಗ ಮಾಡಿದಳು.[]

ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನು ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಾಸುರನು ಕುಂಭಮುಖಿಯನ್ನು ಸಂತೈಸಿ ಈ ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲಪುರೋಹಿತರಾದ ಶುಕ್ರಾಚಾರ್ಯರ ಮೊರೆಹೋದನು. ಶುಕ್ರಾಚಾರ್ಯರು ಮಾಯಾಸುರನಿಂದ ನಿರ್ಮಿತವಾದ ಜ್ಯೇಷ್ಥ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು ನಿನ್ನ ಪತ್ನಿಯಾದ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಾಂಬಿಕೆಯಾದ ಅಮೃತೇಶ್ವರೀ ದೇವಿಯನ್ನು ಪೂಜಿಸಬೇಕೆಂದು ತಿಳಿಸಿದರು. ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಸಮೀಪದಲ್ಲಿಯೇ ಜಗನ್ಮಾತೆ ಅಮೃತೇಶ್ವರೀ ದೇವಿಯನ್ನು ಪ್ರತಿಷ್ಠಿಸಿ ಪೂಜಿಸುತ್ತಿದ್ದರು. ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಅನುಗ್ರಹಿಸಿದ. ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ಧ ಮಾಡಿ ಮುಕ್ತಿ ಹೊಂದುವಿ ಎಂದು ವರವನ್ನು ಅನುಗ್ರಹಿಸಿದನು. ಅಲ್ಲೇ ಸರ್ವತೀರ್ಥ ಸಾನಿಧ್ಯ ಉಳ್ಳ ಸರೋವರವನ್ನು ನಿರ್ಮಿಸಿ, ಅದನ್ನು ವರುಣ ತೀರ್ಥವೆಂದು ಹೆಸರಿಸಿದನು.ಇದೇ ರೀತಿ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆಗಿ ಪ್ರತ್ಯಕ್ಷಳಾದಳು. ದೇವಿಯ ದಿವ್ಯಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದ ಹಾಗೂ ಋಷಿಪತ್ನಿಯ ಶಾಪ ಪ್ರಭಾವದಿಂದ ಭ್ರಾಂತಳಾಗಿ ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ” ಎಂದು ಬೇಡಿದಳು. ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಎಲೈ ಕುಂಭಮುಖಿಯೇ ! ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ ಆ ಕಾರಣದಿಂದಲೇ ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು ಎಂದು ಕೇಳುವ ಬದಲು ನೀನು ಮಕ್ಕಳನ್ನು ಪಡೆ ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ ನೀನು ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶವಾದ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು ಹಲವು ಮಕ್ಕಳ ತಾಯಿ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನಳಾದಳು.[]

ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ
ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ

ಕೆಲವು ಕಾಲಗಳ ನಂತರ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನನ್ನು ಕೊಂದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸತೊಡಗಿತು. ಅಮೃತೇಶ್ವರೀ ದೇವಿಯನ್ನು ಹಲವು ಮಕ್ಕಳ ತಾಯಿ ಎಂದು ಕರೆಯಲಾರಂಭಿಸಿದರು.ಮುಂದೆ ಶೂರ್ಪನಖಿಯಿಂದ ಅಕಾಲ ಮರಣಕ್ಕೆ ತುತ್ತಾದ ಅತಿಪ್ರಭೆಯ ಮಗನಾದ ಬಹುಶ್ರುತನು ಪೂರ್ವಾರ್ಜಿತ ಪಾಪಶೇಷಗಳಿಂದ ಬ್ರಹ್ಮರಾಕ್ಷಸನಾಗಿ ಇದೇ ಸ್ಥಳದಲ್ಲಿದ್ದು ಇಲ್ಲಿನ ಋಷಿಗಳನ್ನು ಪೀಡಿಸುತ್ತಾ ಇದ್ದನು. ಒಮ್ಮೆ ಶ್ರೀ ಅಮೃತೇಶ್ವರೀ ಸನ್ನಿಧಿಯಲ್ಲಿ ಋಷಿಗಳು ಯಜ್ಞವನ್ನು ನಡೆಸುತ್ತಿರುವಾಗ ಮಾಯಾರೂಪದಿಂದ ಬಂದು ಯಜ್ಞಶಿಷ್ಟವನ್ನು ಅಪಹರಿಸಿಕೊಂಡು ಹೋದನು. ಋಷಿಗಳು ಬ್ರಹ್ಮರಾಕ್ಷಸನನ್ನು ಮಣಿಸುವಂತೆ ಶ್ರೀ ಅಮೃತೇಶ್ವರಿಯನ್ನು ಸ್ತೋತ್ರ ಮಾಡಿದರು. ಋಷಿಗಳ ಭಕ್ತಿಗೆ ಮೆಚ್ಚಿದ ಶ್ರೀ ದೇವಿಯು ಪ್ರತ್ಯಕ್ಷಳಾಗಿ ಋಷಿಗಳಿಗೆ ಅಭಯವನ್ನು ನೀಡಿದಳು.ನಂತರ ಮಹಾಮಾರಿ ಸ್ವರೂಪಿಣಿಯಾಗಿ ಬ್ರಹ್ಮರಾಕ್ಷಸನನ್ನು ನಾಶ ಮಾಡಿ ಅದಕ್ಕೆ ಮುಕ್ತಿಯನ್ನು ಕರುಣಿಸಿದಳು. ನಂತರ ಇನ್ನು ಮುಂದೆ ಮಹಾಮಾರೀ ಸ್ವರೂಪಳಾದ ನನ್ನನ್ನು ಮದ್ಯ ಮಾಂಸಾದಿಗಳಿಂದ ಅರ್ಚಿಸಿರಿ. ನಾನು ಸಾತ್ವಿಕರೂಪಿಣಿಯಾದ ಅಮೃತೇಶ್ವರೀಯಾಗಿಯೂ ತಾಮಸರೂಪಿಣಿಯಾದ ಮಾರಿಯಾಗಿಯೂ ಇಲ್ಲಿ ನೆಲೆಸಿ ಇಲ್ಲಿಯ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಾ ಇರುತ್ತೇನೆಂದು ಅಭಯ ನೀಡಿದಳು.

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]