ವಿಷಯಕ್ಕೆ ಹೋಗು

ಅಮರಿಲ್ಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರಿಲ್ಲಿಸ್‍ನ ಹೂವು

ಅಮರಿಲ್ಲಿಸ್ ಹೂಬಿಡುವ ಸುಪ್ರಸಿದ್ಧ ಲಶುನಸಸ್ಯ. ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದೆ. ಇದರ ಹೂ ತುತ್ತೂರಿಯಾಕಾರದಲ್ಲಿದ್ದು, ನೋಡಲು ಚೆನ್ನ. ಗಾತ್ರ ಬಣ್ಣಗಳಲ್ಲಿ ವೈವಿಧ್ಯವಿದೆ. ಮನೆಯಲ್ಲಿ, ಕಳಸದಲ್ಲಿಟ್ಟ ಹೂ ವಾರವಾದರೂ ಬಾಡದು. ಈ ಸಸ್ಯಗಳನ್ನು ಉದ್ಯಾನವನದ ಅಂಚು ಮತ್ತು ಕುಂಡಸಸ್ಯಗಳಾಗಿ ಬೆಳೆಸುತ್ತಾರೆ.

ಪ್ರಭೇದ, ಗಿಡದ ಲಕ್ಷಣ

[ಬದಲಾಯಿಸಿ]

ಇದರಲ್ಲಿ ಸುಮಾರು ೭೦ಕ್ಕೂ ಹೆಚ್ಚು ಪ್ರಭೇದಗಳಿವೆ. ಇವು ಎಲ್ಲವೂ ಏಕವಾರ್ಷಿಕ ಸಸ್ಯಗಳು. ನೀಳಾಕಾರದ ಕೊಳವೆ ಎಲೆಗಳ ನಡುವೆ ತುದಿಯಲ್ಲಿ ಅಂಬೆಲ್ ಮಾದರಿಯ ಹೂಗೊಂಚಲಿದೆ. ಸಾಮಾನ್ಯವಾಗಿ ಒಂದೊಂದು ಹೂಗೊಂಚಲಲ್ಲೂ ೩ ರಿಂದ ೪ ಹೂಗಳು ಅರಳುತ್ತವೆ. ಸಂಖ್ಯೆ ೨ ತಿಂದ ೪. ಕೆಲವು ಪ್ರಭೇದಗಳಲ್ಲಿ ಒಂದು ಅಥವಾ ಎರಡು ಹೂಗಳಿರುವುದುಂಟು. ಸಂಯುಕ್ತರೀತಿಯ ಪುಷ್ಪಪಾತ್ರೆಯೂ ದಳಗಳೂ ಇವೆ. ದಳಗಳು ೬-೩ರ ಎರಡು ವೃತ್ತಗಳಲ್ಲಿ ಜೋಡಣೆಯಾಗಿವೆ. ಒಳವೃತ್ತದ ದಳಗಳ ಗಾತ್ರ ಚಿಕ್ಕದು ಮತ್ತು ಹೊರವೃತ್ತದವು ದೊಡ್ಡವು. ಹೂಗಳು ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು, ಕೆಂಪು, ನಸುಗೆಂಪು, ಕಡುಗೆಂಪು, ಕೇಸರಿ, ಕಿತ್ತಲೆ ಮತ್ತು ಮಿಶ್ರ ಬಣ್ಣಗಳಿಂದ ಕೂಡಿದ್ದು ಕೂಡಿಕೆ ಭಾಗಗಳ ಮೇಲೆ ಕೆಂಪು ಅಥವಾ ಬಿಳಿಯ ಗೆರೆಗಳು ಇರುವುದರಿಂದ ಸೊಗಸಾಗಿ ಕಾಣುತ್ತವೆ. ಹೂಗಂಟಲಿನ ಮೇಲೆ ಕೆಲವು ಜಾತಿಗಳಲ್ಲಿ ಸಣ್ಣ ಬಿಲ್ಲೆಗಳಿರುತ್ತವೆ. ಕೇಸರಗಳು ಕೂಡುಭಾಗಗಳ ಮೇಲಿವೆ. ಮೂರು ಭಾಗವಾಗಿರುವ ಶಲಾಕಾಗ್ರವೂ ಅನೇಕ ಅಂಡಗಳನ್ನೊಳಗೊಂಡ ಅಧಮಸ್ಥಿತಿಯ ಅಂಡಾಶಯವೂ ಇವೆ. ಫಲ ಕ್ಯಾಪ್ ಸೂಲ್ ಮಾದರಿಯದು. ಬೀಜಗಳು ಚಪ್ಪಟೆಯಾಗಿರುತ್ತವೆ. ಕೆಲವು ಮುಖ್ಯ ಜಾತಿಗಳಾದ ವಿಟೇಟ, ಅಮರಿಲ್ಲಿಸ್ ವಿಟ್ಟಾಟ; ರಿಜಿನೆ, ರೆಟಿಕ್ಯೂಲೇಟ, ಮತ್ತು ಬೆಲ್ಲಡೋನ ಎಂಬವು ಈಗ ಬೇಸಾಯದಲ್ಲಿರುವ ಮುಖ್ಯ ಪ್ರಭೇದಗಳು ಮತ್ತು ತಳಿಗಳು. ಇವುಗಳಲ್ಲಿ ಕೆಲವು ಬಹುಪಾಲು ಉತ್ತಮ ಗುಣದ ಸಂಕೀರ್ಣಗಳು. ಬೇಸಾಯದಲ್ಲಿರುವ ಇನ್ನೂ ಕೆಲವು ಜಾತಿಗಳು ಮತ್ತು ತಳಿಗಳು ಶಾಸ್ತ್ರೀಯವಾಗಿ ವರ್ಗೀಕರಣವಾಗಿಲ್ಲ.

ತಳಿಯ ಅಭಿವೃದ್ಧಿ

[ಬದಲಾಯಿಸಿ]

ಬೀಜ ಮತ್ತು ಚಿಕ್ಕ ಲಶುನಗಳಿಂದ ಸಸ್ಯವೃದ್ಧಿ ಮಾಡಬಹುದು. ಮಳೆಗಾಲದ ಪ್ರಾರಂಭದಲ್ಲಿ ಭೂಮಿಯಲ್ಲಿರುವ ಲಶುನಗಳು ವೃದ್ಧಿಯಾಗುತ್ತವೆ. ಒಂದು ಸಾರಿ ಭೂಮಿಗೆ ಹಾಕಿದ ಲಶುನವನ್ನು ಮೂರು ವರ್ಷಗಳ ಕಾಲ ತೆಗೆಯುವ ಆವಶ್ಯಕತೆ ಇರುವುದಿಲ್ಲ. ಕುಂಡಗಳಲ್ಲಿ ಲಶುನಗಳನ್ನು ನೆಡುವಾಗ ಅದರ 1/2 ಅಥವಾ 1/3 ಭಾಗ ಮೇಲೆ ಕಾಣುವಂತೆ ನೆಡಬೇಕು. ನೆಟ್ಟ ಅನಂತರ ಕಾಲಕ್ಕೆ ಸರಿಯಾಗಿ ನೀರು ಕೊಡುತ್ತಿರಬೇಕು. ಅಮರಿಲ್ಲಿಸ್ ಸಸ್ಯ ಮೈದಾನಪ್ರದೇಶಗಳಲ್ಲಿ ಡಿಸೆಂಬರ್ ತಿಂಗಳಿಂದ ಹಿಡಿದು ಏಪ್ರಿಲ್ ತಿಂಗಳವರೆಗೆ ಹೂಬಿಡುತ್ತದೆ. ಹೂಬಿಡುವುದಕ್ಕೆ ಮೊದಲು ವಾರಕ್ಕೆ ಒಂದಾವರ್ತಿ ದ್ರಾವಣಗೊಬ್ಬರವನ್ನು ಕೊಡುತ್ತಿರಬೇಕು. ಬಿಟ್ಟ ಹೂ ಒಂದು ವಾರವಿರುತ್ತದೆ. ಹೂ ಮುಗಿದ ಒಡನೆ ನೀರು ಕೊಡುವುದನ್ನು ನಿಲ್ಲಿಸಬಹುದು. ಪ್ರತಿ ವರ್ಷ ಕುಂಡದ ಬದಲಾವಣೆಯ ಅಗತ್ಯವಿಲ್ಲ. ಆದರೆ ಕುಂಡದ ಮೇಲುಭಾಗದಲ್ಲಿರುವ ಮಣ್ಣನ್ನು ಬದಲಿಸುವುದೂ ಮೇಲುಗೊಬ್ಬರ ಕೊಡವುದೂ ಅಗತ್ಯ.[]

ಉಲ್ಲೇಖ

[ಬದಲಾಯಿಸಿ]
  1. [೧]ಅಮರಿಲ್ಲಿಸ್‍ನನ್ನು ಬೆಳೆಸುವುದು ಹಾಗೂ ಪಾಲನೆ-ಪೋಷಣೆ