ಅಬ್ದುಲ್ಲಾ ಅಬ್ದುಲ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬ್ದುಲ್ಲಾ ಅಬ್ದುಲ್ಲಾ ಪ್ರಸಕ್ತ ಅಫ್ಘಾನಿಸ್ತಾನ ದೇಶದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿದ್ದಾರೆ. ೨೦೦೧ರಿಂದ ೨೦೦೫ರ ಅವಧಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರಾಗಿ, ಅದಕ್ಕೂ ಮುನ್ನ ಅಹ್ಮದ್ ಷಾ ಮಸೂದ್ ರ ಸಲಹೆಗಾರರಾಗಿ ಅಫ್ಘಾನಿಸ್ತಾನದ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ಅಬ್ದುಲ್ಲಾ ವೈದ್ಯರು. ೨೦೧೦ರ ಅಫ್ಘಾನಿಸ್ತಾನ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಯಲ್ಲಿ ಹಮೀದ್ ಕರ್ಜೈರ ಎದುರು ಸೋತ ಅಬ್ದುಲ್ಲಾ, ಅಫ್ಘಾನಿಸ್ತಾನ ರಾಷ್ಟ್ರೀಯ ಒಕ್ಕೂಟವನ್ನು ಸ್ಥಾಪಿಸಿದರು. ೨೦೧೪ರ ಚುನಾವಣೆಯಲ್ಲಿ ಅಶ್ರಫ್ ಘನಿರ ಜೊತೆ ನಡೆದ ತುರುಸಿನ ಪೈಪೋಟಿಯಲ್ಲಿ, ಅಬ್ದುಲ್ಲಾ ಹೊಂದಾಣಿಕೆಯ ಸಮ್ಮಿಶ್ರ ಸರ್ಕಾರ ರಚಿಸಿದರು.[೧][೨]

ಜನನ[ಬದಲಾಯಿಸಿ]

ಕಾಬೂಲ್ ಬಳಿಯ ಕರ್ತೇ ಪರ್ವನ್ ಎಂಬಲ್ಲಿ ೪ ಸೆಪ್ಟೆಂಬರ್ ೧೯೬೦ರಂದು ಜನಿಸಿದ ಅಬ್ದುಲ್ಲಾ, ಸರ್ಕಾರಿ ಅಧಿಕಾರಿಯಾಗಿದ್ದ ತಮ್ಮ ತಂದೆಯೊಂದಿಗೆ ಪಂಜ್ ಶೀರ್, ಕಂದಹಾರ್ ಮತ್ತು ಕಾಬೂಲ್ ಈ ಪ್ರದೇಶಗಳಲ್ಲಿ ಕಳೆದರು. ಭೂಕಂದಾಯ ಇಲಾಖೆ ಅಧಿಕಾರಿಯಾಗಿದ್ದ ಅಬ್ದುಲ್ಲಾರ ತಂದೆ ಅಫ್ಘಾನಿಸ್ತಾನ ದೇಶದ ಪ್ರಧಾನಿ ಕಛೇರಿಯಲ್ಲಿಯೂ ಸೇವೆ ಸಲ್ಲಿಸಿದ್ದರು.

ಓದು[ಬದಲಾಯಿಸಿ]

೧೯೭೬ರಲ್ಲಿ ನಾದೇರಿಯಾ ಪ್ರೌಢಶಾಲೆಯಿಂದ ಎಸ್. ಎಸ್. ಸಿ ಮುಗಿಸಿದ ಅಬ್ದುಲ್ಲಾ, ವೈದ್ಯಕೀಯ ಕಾಲೇಜಿಗೆ ಸೇರಿದರು.೧೯೮೩ರಲ್ಲಿ ನೇತ್ರ ವೈದ್ಯಕೀಯ ಪದವಿ ಪಡೆದರು. ೧೯೮೪-೮೫ರಲ್ಲಿ ಕಾಬೂಲ್ ನ ನೂರ್ ಆಸ್ಪತ್ರೆಯಲ್ಲಿ ನೇತ್ರವೈದ್ಯರಾಗಿದ್ದ ಅಬ್ದುಲ್ಲಾ, ೧೯೮೫-೮೬ರ ಅವಧಿಯಲ್ಲಿ ಪೇಷಾವರದಲ್ಲಿ ಸೇವೆ ಸಲ್ಲಿಸಿದರು.

ರಾಜಕೀಯ[ಬದಲಾಯಿಸಿ]

೧೯೮೫ ಸೆಪ್ಟೆಂಬರ್ ನಲ್ಲಿ ಪಂಜ್ಶೀರ್ ಪ್ರಾಂತ್ಯದಲ್ಲಿ ಆರೋಗ್ಯ ಇಲಾಖೆಯ ಮುಖ್ಯಸ್ಥರಾದ ಅಬ್ದುಲ್ಲಾ, ರಷ್ಯಾ ಆಕ್ರಮಣದ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸಿದರು. ಇವರ ಸೇವೆ ಗಮನಿಸಿದ ಮುಜಾಹಿದ್ದೀನ್ ನೇತಾರ ಅಹ್ಮದ್ ಷಾ ಮಸೂದ್, ಅಬ್ದುಲ್ಲಾರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡರು.

೧೯೯೨ರಲ್ಲಿ ನಜೀಬುಲ್ಲ್ಲಾರ ಕಮ್ಯೂನಿಸ್ಟ್ ಸರ್ಕಾರ ಪತನವಾದ ನಂತರ, ಅಫ್ಘಾನಿಸ್ತಾನದ ಪ್ರಧಾನಿಯಾದ ಬುರ್ಹನುದ್ದೀನ್ ರಬ್ಬಾನಿ, ಅಬ್ದುಲ್ಲಾರನ್ನು ಅಫ್ಘಾನಿಸ್ತಾನದ ಸೇನಾ ವಕ್ತಾರರನ್ನಾಗಿ ನೇಮಿಸಿದರು.

೧೯೯೬ರಲ್ಲಿ ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದಾಗ, ಅಬ್ದುಲ್ಲಾ, ಮುಜಾಹಿದ್ದೀನ್ ನೇತಾರ ಅಹ್ಮದ್ ಷಾ ಮಸೂದ್ ರ ಉತ್ತರ ಅಫ್ಘಾನಿಸ್ತಾನ ಒಕ್ಕೂಟದ ವಿದೇಶಾಂಗ ನಿರ್ವಹಣೆಯಲ್ಲಿ ತೊಡಗಿದರು.

ತಾಲಿಬಾನ್ ಆಡಳಿತವನ್ನು ಒಪ್ಪದ ಪ್ರಮುಖ ರಾಷ್ಟ್ರಗಳ ಪಾಲಿಗೆ ಮಸೂದ್ ರ ಸರ್ಕಾರವೇ ಅಧಿಕೃತ ಸರ್ಕಾರವಾಗಿತ್ತು. ಮಸೂದ್ ರ ದನಿಯಾಗಿ, ವಿಶ್ವದೆಲ್ಲೆಡೆ ಅಫ್ಘಾನಿಸ್ತಾನದ ಅಧಿಕೃತ ಪ್ರತಿನಿಧಿಯಾಗಿ ಸಭೆಗಳಲ್ಲಿ ಅಬ್ದುಲ್ಲಾ ಪ್ರತಿನಿಧಿಸುತ್ತಿದ್ದರು.

೨೦೦೧ರ ನಂತರ ಅಫ್ಘಾನಿಸ್ತಾನ[ಬದಲಾಯಿಸಿ]

ಸೆಪ್ಟೆಂಬರ್ ೨೦೦೧ರ ೧೧ರಂದು, ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಶ್ವ ವಾಣಿಜ್ಯ ಸಂಸ್ಥೆಯ ಕಟ್ಟಡದ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡಿದಾಗ, ಅಮೇರಿಕಾ ಅಫ್ಘಾನಿಸ್ತಾನದ ತಾಲಿಬಾನ್ ಪ್ರಾಂತ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅಕ್ಟೋಬರ್ ೨೦೦೧ರಲ್ಲಿ ತಾಲಿಬಾನ್ ಪಡೆಗಳ ಪತನವಾದಾಗ, ಅನುಭವಿ ಅಬ್ದುಲ್ಲಾರನ್ನು ಅಧಿಕೃತವಾಗಿ ಅಫ್ಘಾನಿಸ್ತಾನದ ರಾಷ್ಟ್ರೀಯ ಸರ್ಕಾರದ ವಿದೇಶಾಂಗ ಸಚಿವರಾಗಿ ನೇಮಿಸಲಾಯಿತು. ೨೦೦೫ರಲ್ಲಿ ಅಬ್ದುಲ್ಲಾ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

೨೦೦೯ ಅಧ್ಯಕ್ಷೀಯ ಚುನಾವಣೆ[ಬದಲಾಯಿಸಿ]

೨೦೦೯ರಲ್ಲಿ ಹಮೀದ್ ಕರ್ಜೈ ಮತ್ತು ಅಬ್ದುಲ್ಲಾ ಅಫ್ಘಾನಿಸ್ತಾನದ ಅಧ್ಯಕ್ಷ ಹುದ್ದೆಗೆ ಚುನಾವಣೆಗೆ ನಿಂತರು.ಎರಡು ಹಂತದ ಚುನಾವಣೆಯಲ್ಲಿ, ಚುನಾವಣಾ ಅಕ್ರಮದ ಆರೋಪ ಕೇಳಿ ಬಂದಿತು. ಅಬ್ದುಲ್ಲಾ, ಹಮೀದರ ಮುಂದಾಳ್ತನದಲ್ಲಿ ನಡೆವ ಚುನಾವಣಾ‌ಪ್ರಕ್ರಿಯೆಯಲ್ಲಿ ವಿಶ್ವಾಸ ಇಲ್ಲವೆಂದೂ, ತಾವು ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಇಅದರ ಪರಿಣಾಮವಾಗಿ ಹಮೀದ್ ಕರ್ಜೈ ಅಫ್ಘಾನಿಸ್ತಾನದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕತ್ವ[ಬದಲಾಯಿಸಿ]

೨೦೧೦ರ ಅಫ್ಘಾನಿಸ್ತಾನದ ಸಂಸತ್ ಚುನಾವಣೆಯಲ್ಲಿ ಅಬ್ದುಲ್ಲಾ "ಅಫ್ಘಾನಿಸ್ತಾನ ರಾಷ್ಟ್ರೀಯ ಒಕ್ಕೂಟ"ದ ಮುಖ್ಯಸ್ಥರಾದರು. ಅಬ್ದುಲ್ಲಾರ ಪಕ್ಷ ವಿರೋಧ ಪಕ್ಷವಾಯಿತು.[೩]

೨೦೧೪ರವರೆಗೆ ಸಂಸತ್ತ್ತಿನ ವಿರೋಧ ಪಕ್ಷದ ನೇತಾರರಾದರು.

೨೦೧೪ರ ಅಧ್ಯಕ್ಷೀಯ ಚುನಾವಣೆ[ಬದಲಾಯಿಸಿ]

೨೦೧೪ರ ಚುನಾವಣೆಯಲ್ಲಿ ಅಶ್ರಪ್ ಘನಿ ಮತ್ತು ಅಬ್ದುಲ್ಲಾ ಸೆಣಸಿದರು. [೪] ಅಂತರ್ ರಾಷ್ಟ್ರೀಯ ವೀಕ್ಷಣೆಗಾರರ ಸುಪರ್ದಿಯಲ್ಲಿ ನಡೆದ ಚುನಾವಣೆಯಲ್ಲಿ ಘನಿರನ್ನು ವಿಜಯಿ ಎಂದು ಘೋಷಿಸಲಾಯಿತು.ಎರಡನೆ ಹಂತದಲ್ಲಿ ಘನಿ ಮತ್ತು ಅಬ್ದುಲ್ಲಾರ ಮಧ್ಯೆ ಒಪ್ಪಂದ ಏರ್ಪಟ್ಟು, ಘನಿ ರಾಷ್ಟ್ರಪತಿಯಾಗಿಯೂ, ಅಬ್ದುಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಪ್ರಧಾನಿ)ಯಾಗಿ ಕಾರ್ಯ ನಿರ್ವಹಿಸುವುದಾಗಿಯೂ ಒಪ್ಪಂದವಾಯಿತು.

ಉಲ್ಲೇಖಗಳು[ಬದಲಾಯಿಸಿ]