ವಿಷಯಕ್ಕೆ ಹೋಗು

ಅಬೀಜೋತ್ಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೀಜಗಳನ್ನು ಉಪಯೋಗಿಸದೆ ಹೊಸ ಸಸ್ಯಗಳನ್ನು ಪಡೆಯುವ ವಿಧಾನ. (ಏಸೆಕ್ಚುಯಲ್ ರಿಪ್ರಡಕ್ಷನ್) ಇದನ್ನು ನಿರ್ಲಿಂಗ ರೀತಿಯ ವಂಶಾಭಿವೃದ್ಧಿಯೆನ್ನಬಹುದು. ರೆಂಬೆ ನೆಟ್ಟು ಸಸಿ ಮಾಡುವ ವಿಧಾನ ಇದಕ್ಕೆ ಸರಳವಾದ ಉದಾಹರಣೆ. ಹೀಗೆ ಮಾಡಿದಾಗ ತಾಯಿಗಿಡಕ್ಕೂ ಹೊಸಗಿಡಕ್ಕೂ ಮೂಲ ಗುಣಲಕ್ಷಣಗಳಲ್ಲಿ ಯಾವ ವ್ಯತ್ಯಾಸವೂ ಇರದು. ಆದರೆ ಬೀಜದಿಂದ ಪಡೆದ ಹೊಸಗಿಡ ತಾಯಿಗಿಡಕ್ಕಿಂತ ಭಿನ್ನವಾದ ಗುಣಲಕ್ಷಣಗಳನ್ನು ಪ್ರದರ್ಶಿಸಬಲ್ಲದು. ಆದ್ದರಿಂದ ತಾಯಿಸಸ್ಯಗಳ ಗುಣಲಕ್ಷಣವನ್ನೇ ಸಂತತಿಯಲ್ಲೂ ಬಯಸುವಾಗ ಅಬೀಜೋತ್ಪಾದನೆ ಸರಿಯಾಗ ಬಹುದು. ಬಾಳೆ ಮುಂತಾದ ಅಬೀಜ ಸಸ್ಯಗಳನ್ನು ಹೆಚ್ಚಿಸಿಕೊಳ್ಳಲಂತೂ ತೀರ ನಿಧಾನವಾಗುತ್ತದೆ. ವಿಳಂಬವನ್ನು ತಪ್ಪಿಸುವಾಗಲೂ ಅಬೀಜಸಂತಾನ ಕ್ರಮವನ್ನು ಅನುಸರಿಸಬೇಕು.

ಅಬೀಜೋತ್ಪಾದನೆಯ ಕ್ರಮಗಳು

[ಬದಲಾಯಿಸಿ]

ಈ ವಿಧಾನದಲ್ಲಿ ಅನೇಕ ಕ್ರಮಗಳುಂಟು. ಕೆಲವನ್ನು ಬೇರು, ಕಂದ, ಗೆಡ್ಡೆಗಳಿಂದಲೂ ಮತ್ತೆ ಕೆಲವನ್ನು ಕಣ್ಣು, ಎಲೆ, ಕಾಂಡದ ಭಾಗಗಳಿಂದಲೂ ಉತ್ಪತ್ತಿ ಮಾಡಿಕೊಳ್ಳಬಹುದು. ಪ್ರತಿಯೊಂದು ಸಸ್ಯಜಾತಿಯನ್ನೂ ಪ್ರತಿಯೊಂದು ವಿಧಾನದಿಂದಲೂ ಬೆಳೆಸುವುದಕ್ಕಾಗುವುದಿಲ್ಲ. ಆಯಾ ಜಾತಿಯ ಬೆಳೆಯ ಸ್ವಭಾವ, ಬೆಳೆವಣಿಗೆ ಇತ್ಯಾದಿಗಳಿಗೆ ಅನುಗುಣವಾಗಿ ಸೂಕ್ತ ಕಂಡ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಅಬೀಜ ರೀತಿಯ ಸಂತಾನೋತ್ಪಾದನೆಯ ಕ್ರಮಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು: 1 ಸಸ್ಯ ಭಾಗಗಳಿಂದ ಬೇರು ಬಿಡಿಸುವಿಕೆ; 2 ಸಸ್ಯ ಭಾಗಗಳನ್ನು ಬೇರು ಬಿಟ್ಟಿರುವ ಸಸ್ಯಗಳ ಮೇಲೆ ಜೋಡಿಸುವಿಕೆ.

ಅಬೀಜೋತ್ಪಾದನೆಯ ಬಗೆಗಳು

[ಬದಲಾಯಿಸಿ]

ಬೇರು ಬಿಡಿಸುವಿಕೆಯಲ್ಲಿ ಮೂರು ಬಗೆ: ತಾಯಿಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಸಸ್ಯಭಾಗದಿಂದ ಬೇರು ಬಿಡಿಸುವಿಕೆ; ತಾಯಿಸಸ್ಯದಿಂದ ಬೇರ್ಪಡಿಸಿ ಬೇರು ಬಿಡಿಸುವಿಕೆ; ತಾಯಿಸಸ್ಯದ ಭಾಗಗಳನ್ನು ತುಂಡು ಹಾಕಿ ಬೇರು ಬಿಡಿಸುವಿಕೆ. ಬಾಳೆ, ಜೀಗುಜ್ಜೆ ಇತ್ಯಾದಿಗಳಲ್ಲಿ ಕಾಂಡದ ಬುಡದಿಂದ ಕಂದುಗಳು ಹೊರಡುತ್ತವೆ. ಕೆಲವು ಗಿಡಗಳನ್ನು ತರಿದಾಗ ಕಾಂಡದಿಂದ ಕಂದುಗಳು ಹೇರಳವಾಗಿ ಬರುವುದುಂಟು. ಬಳ್ಳಿ ಜಾತಿಯ ಕೆಲವು ಸಸ್ಯಗಳಲ್ಲಿ, ಕಾಂಡದ ಬುಡದಿಂದ, ನವುರಾದ ಉಪಕಾಂಡಗಳು ಒಡೆದು ನೆಲದ ಮೇಲೆ ಹಾದು ಅಲ್ಲಲ್ಲೆ ಗಿಣ್ಣಿರುವೆಡೆ ಬೇರು ಬಿಡುತ್ತವೆ. ಉದಾ: ಹರಿಯಾಳಿ, ಸ್ಟ್ರಾಬೆರಿ, ರಾಸ್ಪ್‍ಬೆರಿ. ಸಕಾಲದಲ್ಲಿ ಇವನ್ನು ಕತ್ತರಿಸಿ ಬುಡಸಮೇತ ಹೂಳಿ ಸಸ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ತಾಯಿಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಕಾಂಡದ ಭಾಗಗಳಿಂದ ಬೇರು ಬಿಡಿಸುವ ಕ್ರಮವೊಂದಿದೆ. ಪ್ರಕೃತಿಯಲ್ಲಿ, ಗಿಡದ ರೆಂಬೆ ಬೆಲಕ್ಕೆ ಉಜ್ಜಿದಾಗ ಅದರ ತೊಗಟೆಗೆ ಗಾಯವಾಗುತ್ತದೆ. ಈ ಗಾಯದಿಂದಲೇ ಬೇರು ಹೊರಟು ಉಪಸಸ್ಯ ಹುಟ್ಟುತ್ತವೆ. ಇದನ್ನು ಅರಿತು ತೋಟಗಾರರು ತೊಗಟೆಯನ್ನು ಸುಲಿದೋ ಸೀಳಿಯೋ ರೆಂಬಗೆ ಗಾಯಗೊಳಿಸಿ ನೆಲಕ್ಕೆ ಬಗ್ಗಿಸಿ, ಮಣ್ಣು ಪೇರಿಸಿ ಬೇರು ಬಿಡಿಸುತ್ತಾರೆ. ಈ ಕ್ರಮ ನಿಧಾನವಾದರೂ ಯಶಸ್ಸು ಖಂಡಿತ. ಈ ಕ್ರಮದಲ್ಲೂ ಕೆಲವು ವಿಧಗಳಿವೆ. 1 ಬಲಿತ ರೆಂಬೆಯಲ್ಲಿ ಹರಿತವಾದ ಚಾಕುವಿನಿಂದ ಸ್ವಲ್ಪ ಸೀಳಿ ಆ ಭಾಗ ನೆಲಕ್ಕೆ ತಗಲುವಂತೆ ಮಾಡಿ ನೀರು ಗೊಬ್ಬರವನ್ನು ಹಾಕಿ ತೇವ ಆರದಂತೆ ನೋಡಿಕೊಂಡರೆ ಸೀಳಿನಲ್ಲಿ ಬೇರುಗಳು ಕಾಣಿಸಿಕೊಳ್ಳುತ್ತವೆ. 2 ಮಲ್ಲಿಗೆ, ಕಣಗಿಲೆ ಮುಂತಾದ ಗಿಡಗಳಲ್ಲಿ ರೆಂಬೆಯನ್ನು ಅರ್ಧವೃತ್ತಾಕಾರದಲ್ಲಿ ಬಾಗಿಸಿ ಮಣ್ಣಿನಲ್ಲಿ ಹೂತು ಅದರ ಮೇಲೆ ಕಲ್ಲು ಹೇರುತ್ತಾರೆ ಅಥವಾ ಊರುತ್ತಾರೆ. ಕೆಲವು ಬಾರಿ ಹೂಳುವ ಭಾಗವನ್ನು ತಿರುಚುತ್ತಾರೆ ಅಥವಾ ಕಂಬಿಯಿಂದ ಬಿಗಿಯಾಗಿ ಹಿಸುಕುತ್ತಾರೆ. ಈ ಕ್ರಿಯೆಗಳಿಂದ ಸಸ್ಯರಸದ ಚಲನೆಗೆ ತಡೆಯಾಗಿ ಆ ಭಾಗದಿಂದ ಬೇರು ಬರುತ್ತದೆ. 3. ತೊಗಟೆ ಎಬ್ಬಿ ಅಥವಾ ತೊಗಟೆ ಉಂಗುರ ಸುಲಿದು ಬೇರು ಬಿಡಿಸುವಿಕೆ; ಕ್ರೋಟೇನ್, ಡ್ರೆಸೀನ ಮುಂತಾದ ಗಿಡಗಳಲ್ಲಿ ಬೇರು ಬಿಡಿಸುವ ಕಡೆ ಗಿಣ್ಣಿನ ಕೆಳಗೆ ಹರಿತವಾದ ಚಾಕುವನ್ನು ರೆಂಬೆಯ ಸುತ್ತಲೂ ಊರುವುದು. 1 ಸೆಂ.ಮೀ. ಅಥವಾ 2 ಸೆಂ.ಮೀ. ಕೆಳಗೆ ಮತ್ತೊಂದು ಸುತ್ತು ಚಾಕು ಊರಿ ಎರಡು ಕಚ್ಚಿನ ಮಧ್ಯೆ ಇರುವ ತೊಗಟೆ ಉಂಗುರವನ್ನು ಎಬ್ಬಿ ಒಳ ಮೈಯನ್ನು ಬಯಲುಮಾಡಿ ಆ ಭಾಗದ ಸುತ್ತಲೂ ಮಣ್ಣು ಮೆತ್ತುವುದು. ಆಗ ಈ ಉಂಗುರದ ಗಾಯದಿಂದ ಬೇರು ಹೊಮ್ಮುತ್ತದೆ. 4. ಚೆನ್ನಾಗಿ ಬಲಿತು ಆರೋಗ್ಯವಾಗಿರುವ ರೆಂಬೆಯನ್ನು ಕೆಳಗಿಂದ ಮೇಲಕ್ಕೆ ಚಾಕುವಿನಿಂದ ಸೀಳಿ, ಮಧ್ಯೆ ಸಣ್ಣ ಬೆಣೆ ಕೊಟ್ಟು ಸುತ್ತಲೂ ಹಾವಸೆಯನ್ನೊ (ದೊಡ್ಡಪಾಚಿ) ತೆಂಗಿನ ನಾರನ್ನೊ ಅಥವಾ ತೇವ ಉಳಿಸಿಕೊಳ್ಳಬಲ್ಲ ಯಾವುದಾದರೂ ಪದಾರ್ಥವನ್ನೊ (ಪಾಲಿಥೀನ್ ಕಾಗದ) ಕಟ್ಟಿ, (ಇದು ಜಾರದಂತೆ ನಾರಿನಿಂದ ಬಿಗಿಯುವುದು) ಸೀಳಿನಿಂದ ಬೇರು ಹೊರಟು ಈ ಮಧ್ಯಸ್ಥ ಪದಾರ್ಥದಲ್ಲಿ ಇಳಿಯುತ್ತವೆ. ಹಾಗೆ ಇಳಿದ ಮೇಲೆ ಈ ಗೋಟಿಯನ್ನು ತಾಯಿ ಸಸ್ಯದಿಂದ ಬೇರ್ಪಡಿಸಿ ಕುಂಡದಲ್ಲಿ ಹಾಕಿ ಬೆಳೆಸುವುದು.[೧]

ತಾಯಿಸಸ್ಯದಿಂದ ಬೇರ್ಪಟ್ಟ ಭಾಗಗಳು

[ಬದಲಾಯಿಸಿ]

ತಾಯಿಸಸ್ಯದಿಂದ ಬೇರ್ಪಟ್ಟ ಭಾಗಗಳಿಂದ ಹೊಸ ಗಿಡಗಳನ್ನು ಪಡೆಯುವ ವಿಧಾನಗಳು ಬಗೆಬಗೆಯಾಗಿವೆ. ಕೆಲವು ಸಸ್ಯಗಳಲ್ಲಿ ಎಲೆಗಳು ಪೊರೆಗಳಾಗಿ ಮಾರ್ಪಟ್ಟು ಇಲ್ಲವೆ ಒಗ್ಗೂಡಿ ಕಂದುಗಳಾಗುತ್ತವೆ. ಅವನ್ನು ಹೂಳಿ ಗಿಡ ಪಡೆಯಬಹುದು. ಉದಾ: ಈರುಳ್ಳಿ, ಲಿಲ್ಲಿ, ಭೂತಾಳೆ, ಜರೀಗಿಡ ಇತ್ಯಾದಿ. ಮತ್ತೆ ಕೆಲವು ಸಸ್ಯಗಳಲ್ಲಿ ನೆಲದಲ್ಲಿನ ಕಾಂಡ ಭಾಗ ಊದಿ ಗೆಡ್ಡೆಕಟ್ಟಿರುತ್ತದೆ. ಅದನ್ನು ನೆಟ್ಟು ಗಿಡ ಪಡೆಯಬಹುದು. ಉದಾ: ಕೆಲೇಡಿಯಂ, ಶುಂಠಿಯಂಥ ಗಿಡಗಳ ಕಾಂಡಗಳು ನೆಲದಲ್ಲಿದ್ದು ಅವುಗಳಿಂದ ಬೇರು ಹೊಮ್ಮಿರುತ್ತದೆ. ಅದರಿಂದ ಹೊಸಗಿಡ ಪಡೆಯಬಹುದು. ಅನಾನಸ್‍ನಂಥ ಗಿಡದಲ್ಲಿ ಮೇಲಿನ ಎಲೆಗುಚ್ಚಿನ ಕೂಳೆಯನ್ನು ಕತ್ತರಿಸಿ ನೆಟ್ಟಲ್ಲಿ ಹೊಸಗಿಡ ಬರುತ್ತದೆ. ಗ್ಲಾಡಿಯೋಲಸ್, ಡ್ಯಾಫೊಡಿಲ್, ಟ್ಯೂಲಿಪ್ ಮೊದಲಾದುವುಗಳಲ್ಲಿ ಗೆಡ್ಡೆಗಳಿಗೆ ಅಂಟಿದಂತಿರುವ ಮರಿಗೆಡ್ಡೆಗಳನ್ನು ಕಿತ್ತು ನೆಟ್ಟರಿ ಹೊಸಗಿಡ ಬರುತ್ತದೆ. ಆಲೂಗಡ್ಡೆ ಸುವರ್ಣಗೆಡ್ಡೆಗಳಲ್ಲಾದರೋ ಗೆಡ್ಡೆಯೊಳಗಣ ಒಂದೊಂದು ಕಣ್ಣೂ ಒಂದೊಂದು ಹೊಸಗಿಡವನ್ನು ಕೊಡುತ್ತದೆ.

ಅಬೀಜೋತ್ಪಾದನೆಯ ನೆಡುವಿಕೆ

[ಬದಲಾಯಿಸಿ]

ಕೆಲಸಸ್ಯಗಳ ಕಾಂಡ ಎಲೆ ಅಥವಾ ಬೇರುಗಳನ್ನು ತುಂಡರಿಸಿ ನೆಟ್ಟು ಹೊಸಗಿಡ ಪಡೆಯಬಹುದು. ನೆಡುವಾಗ ಮರಳುಮಿಶ್ರಿತ ನೆಲ, ಆರದ ತೇವ, ರಾಸಾಯನಿಕ ಗೊಬ್ಬರ ಅಗತ್ಯ. ಜೀಗುಜ್ಜೆ, ಫ್ಲಾಕ್ಸ್ (ಅಗಸೆನಾರು) ಮೊದಲಾದುವುಗಳ ಬೇರುಗಳ ತುಂಡು, ಬಲಿತ ಗುಲಾಬಿಗಿಡಗಳ ಎಲೆಮೊಗ್ಗಿರುವ ಕಾಂಡದ ತುಂಡು, ಬೆಗೊನಿಯ, ಗ್ಲಾಕ್ಸೀನಿಯ, ಪೆಪೆರೋಮಿಯ ಮೊದಲಾದುವುಗಳಲ್ಲಿ ಬಲಿತ ಪೂರ್ತ ಎಲೆ ಅಥವಾ ಎಲೆಯ ತುಂಡು - ಇವುಗಳಿಂದ ಹೊಸಗಿಡ ಬರುತ್ತದೆ. ಈ ವಿಧಾನಗಳಲ್ಲದೆ ಕಸಿಮಾಡುವಿಕೆಯಿಂದ ವಿವಿಧ ಸಸ್ಯಗಳ ಅಡ್ಡತಳಿ ಎಬ್ಬಿಕೆಯ ತಂತ್ರ ಈಚೆಗೆ ಅನೇಕ ಕಾರಣಗಳಿಂದಾಗೆ ಬಳಕೆಗೆ ಬಂದಿದೆ. ಇದರಿಂದ ಹೊಸ, ಉತ್ತಮ ತಳಿಗಳು ಬೆರೆತಿವೆ. ಇದೂ ಅಬೀಜ ಸಸ್ಯೋತ್ಪಾದನೆಯ ಪ್ರಮುಖ ಭಾಗವೇ. ಮೂಲಗಿಡದ ಕಾಂಡವನ್ನು ಕೊರೆದು ಅಲ್ಲಿಗೆ ಬೇರೊಂದು ಗಿಡದ ರೆಂಬೆಯನ್ನು ಲಗತ್ತಿಸಿ ನೀರು ಗೊಬ್ಬರ ಕೊಟ್ಟು ತುಂಡುಕಾಂಡ ಚಿಗುರಿ ಬೇರುಬಿಡುವಂತೆ ಮಾಡುತ್ತಾರೆ. ವಿಧವಿಧವಾದ ಸೇಬು, ಶಕ್ತಿಮಾನ್ ಜೋಳ, ಚಿತ್ರವಿಚಿತ್ರವರ್ಣದ ಹೂಗಿಡಗಳು - ಇವೆಲ್ಲ ಕಸಿಮಾಡುವಿಕೆಯ ಫಲಗಳೇ ಆಗಿವೆ.

ಉಲ್ಲೇಖಗಳು

[ಬದಲಾಯಿಸಿ]