ಅಪ್ಸರೆಕೀಟ
ಅಪ್ಸರೆಕೀಟ ಮೊಟ್ಟೆಯಿಂದ ಹೊರಕ್ಕೆ ಬಂದು ಅಪೂರ್ಣ ರೂಪಾಂತರ ಹೊಂದಿ, ಕೊನೆಯ ಸಲ ಪೊರೆ ಬಿಟ್ಟು, ಪ್ರಾಯಕ್ಕೆ ಬರುವ ಕೀಟದ ಮರಿಯ ಹೆಸರು (ನಿಂಫ್)[೧]. ಮಿಡತೆ, ತಗಣಿ, ಕೊಡತಿ ಹುಳು (ಡ್ರೇಗನ್ ಫ್ಲೈ) ಮುಂತಾದ ಕೀಟಗಳ ಮರಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ.
ಅಪೂರ್ಣ ಬೆಳವಣಿಗೆ
[ಬದಲಾಯಿಸಿ]ಈ ಮರಿಗಳು ಮೊಟ್ಟೆಗಳಿಂದ ಹೊರಕ್ಕೆ ಬಂದಾಗ ಅವುಗಳ ಶರೀರ ರಚನೆ ಸ್ವಲ್ಪಮಟ್ಟಿಗೆ ಪ್ರಾಯದ ಅವಸ್ಥೆಯಲ್ಲಿದ್ದಂತೆಯೆ ಇರುತ್ತದೆ; ಆದರೆ ರೆಕ್ಕೆಗಳು ಮತ್ತು ಬಾಹ್ಯಜನನೇಂದ್ರಿಯ ಪೂರ್ತಿ ಬೆಳೆದಿರುವುದಿಲ್ಲ; ಬಾಯಿ ಭಾಗಗಳು, ಸಂಯುಕ್ತ ನೇತ್ರಗಳು ಪ್ರಾಯದ ಕೀಟಗಳಲ್ಲಿದ್ದಂತೆಯೇ ಇರುತ್ತವೆ. ಮರಿ ಪ್ರಾಯಕ್ಕೆ ಬರುವವರೆಗಿನ ಬೆಳೆವಣಿಗೆ ಸರಳವಾಗಿದ್ದು ಕೋಶಾವಸ್ಥೆ ಇರುವುದಿಲ್ಲ. ಮರಿ ಮತ್ತು ಪ್ರಾಯದ ಕೀಟಗಳ ನಡತೆ ಒಂದೇ; ಅವು ಒಟ್ಟಿಗೆ ಸೇರಿ ತಿನ್ನುತ್ತವೆ. ಮರಿಗಳು ಬೆಳೆದಂತೆಲ್ಲ ಪ್ರಾಯದ ಕೀಟಗಳನ್ನು ಹೆಚ್ಚುಹೆಚ್ಚಾಗಿ ಹೋಲುತ್ತವೆ.
ಮಿಡತೆ
[ಬದಲಾಯಿಸಿ]ಮಿಡತೆಯ ಅಪ್ಸರೆ ಹುಟ್ಟಿದಾಗ ಸಾಮಾನ್ಯರೂಪಿನಲ್ಲಿ ತಾಯಿ ಮಿಡತೆಯನ್ನು ಹೋಲುತ್ತದೆ. ಆದರೆ ದವಡೆ, ಕಣ್ಣು, ಕಾಲು, ರೆಕ್ಕೆ ಇವು ತಾಯಿಗಿರುವಂತೆ ಇರುವುದಿಲ್ಲ. ಮೈಮೇಲಿನ ಗುರುತುಗಳೂ ಬೇರೆಯಾಗಿರಬಹುದು. ಕುಡಿಮೀಸೆ ಸರಳ ರೀತಿಯದು; ೪-೭ ಸಾರಿ ಪೊರೆಬಿಟ್ಟು ಹಂತಗಳಲ್ಲಿ ಬೆಳೆದು ಕೊನೆಯ ಸಲ ಪ್ರಾಯಕ್ಕೆ ಬರುತ್ತದೆ. ೨-೩ನೆಯ ಹಂತಗಳಲ್ಲಿ ಎದೆಯ ೨ ಮತ್ತು 3ನೆಯ ಖಂಡಗಳಮೇಲೆ ರೆಕ್ಕೆಗಳು ಕಾಣಿಸಿಕೊಂಡು ಅಪ್ಸರೆ ಬೆಳೆದಂತೆಲ್ಲ ರೆಕ್ಕೆಗಳು ದೊಡ್ಡವಾಗುತ್ತವೆ. ಹೆಣ್ಣು ಗಂಡಿನ ವ್ಯತ್ಯಾಸಗಳು ಸಹ ಮೊದಲೇ ಕಂಡುಬಂದು ಅಪ್ಸರೆ ಬೆಳೆದಂತೆಲ್ಲ ವ್ಯಕ್ತವಾಗುತ್ತವೆ.
ತಗಣೆ
[ಬದಲಾಯಿಸಿ]ಮಿಡತೆಯ ಅಪ್ಸರೆಯಂತೆಯೆ, ಬಣ್ಣದಲ್ಲಿ ಬದಲಾವಣೆ ತೋರುತ್ತದೆ. ಬೆಳೆದ ಹಾಗೆ ಕುಡಿಮೇಸೆ ಮತ್ತು ಕಾಲಿನ ಕೊನೆಯ ತುಂಡುಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಆ ತುಂಡುಗಳೆಲ್ಲ ಮೂಡಬೇಕಾದರೆ ಅಪ್ಸರೆ ಪ್ರಾಯಕ್ಕೆ ಬರಬೇಕು. ತಲೆ ಮತ್ತು ಎದೆಯ ಆಕಾರ ಪ್ರತಿ ಹಂತದಲ್ಲೂ ಬದಲಾಯಿಸುತ್ತದೆ. 3ನೆಯ ಹಂತದಲ್ಲಿ ರೆಕ್ಕೆಗಳ ಮೊಗ್ಗುಗಳು ಸ್ವಲ್ಪ ಕಂಡು 4ನೆಯ ಹಂತದಲ್ಲಿ ಚೆನ್ನಾಗಿ ವ್ಯಕ್ತವಾಗುತ್ತವೆ. ಅದರ ಬೆಳೆವಣಿಗೆಯ ಹಂತಗಳ ಸಂಖ್ಯೆಯಲ್ಲಿ ವ್ಯತ್ಯಾಸವುಂಟು; ಹೆಚ್ಚೆಂದರೆ ಏಳು ಹಂತಗಳಿವೆ. ತಾಯಿ ಮತ್ತು ಅಪ್ಸರೆಗಳು ಜೊತೆಯಲ್ಲೆ ಇದ್ದು ಆಹಾರ ಸೇವಿಸುತ್ತವೆ.
ಕೊಡತಿ ಹುಳು
[ಬದಲಾಯಿಸಿ]ಮರಿ ಮೊಟ್ಟೆಯಿಂದ ಹೊರಕ್ಕೆ ಬಂದಾಗ ಪೂರ್ವಅಪ್ಸರೆ ಸ್ಥಿತಿಯಲ್ಲಿದ್ದು (ಪ್ರೊನಿಂಫ್.), ಪೊರೆ ಬಿಟ್ಟು 2ನೆಯ ಹಂತದಲ್ಲಿ ಅಪ್ಸರೆಯಾಗುತ್ತದೆ. ಇದು ಜಲವಾಸಿ; ಕೀಟಾಹಾರಿ. ಉಸಿರಾಡುವ ವಿಧಾನದ ಮೇಲೆ ಅವುಗಳಲ್ಲಿ ಎರಡು ಬಗೆಯವನ್ನು ಕಾಣಬಹುದು: ಒಂದರ ಶರೀರದ ಕೊನೆಯಲ್ಲಿ 3 ಭಾಗಗಳಿದ್ದು ಅವು ಮುಚ್ಚಿಕೊಂಡಾಗ ಗೋಪುರಾಕೃತಿಯಾಗುತ್ತದೆ; ಅಸನದ್ವಾರ ಗೋಪ್ಯವಾಗುತ್ತದೆ. ಗುದನಾಳದಲ್ಲಿರುವ ಕಿವಿರುಗಳಿಂದ ಉಸಿರಾಟ ನಡೆಯುತ್ತದೆ. ಇನ್ನೊಂದರಲ್ಲಿ ಶರೀರದ ಕೊನೆಯ 3 ಭಾಗಗಳು ದೊಡ್ಡವಾಗಿದ್ದು, ವಿಶೇಷ ರೀತಿಯ ಆಸನಕಿವಿರುಗಳಾಗಿ (ಆ್ಯನಲ್ ಗಿಲ್ಸ್) ಉಸಿರಾಟದ ಅಂಗಗಳಾಗುತ್ತವೆ. ಗುದನಾಳದ ಕಿವಿರುಗಳಿರುವುದಿಲ್ಲ. 11-15 ಸಾರಿ ಪೊರೆ ಬಿಡುತ್ತದೆ. ಪೂರ್ತಿ ಬೆಳೆಯಲು 1-2 ವರ್ಷಗಳು ಬೇಕು. ಪ್ರಾಯದ ರೆಕ್ಕೆ ಕೊಡತಿ ಹುಳುವಾಗುವುದಕ್ಕೆ ಮುಂಚೆಯೆ ಪೂರ್ತಿ ಬೆಳೆದ ಅಪ್ಸರೆ ನೀರಿನಿಂದ ಹೊರಕ್ಕೆ ಬರುತ್ತದೆ. ಇದರ ಬಾಯ ಭಾಗಗಳಲ್ಲಿ ಒಂದು ಮುಸುಕಿದೆ. ಇದೇ ಮಾರ್ಪಾಟಾದ ಕೆಳದುಟಿ. ಕೀಟಗಳನ್ನು ಹಿಡಿದುಕೊಳ್ಳುವ ಈ ಅಂಗವನ್ನು ಮಿಂಚಿನಂತೆ ಚಾಚಿ ಕೀಟವನ್ನು ಹಿಡಿದು, ಹಿಂದಕ್ಕೆ ಎಳೆದುಕೊಳ್ಳುತ್ತದೆ. ಅಪ್ಸರೆಯ ಮುನ್ನೆದೆ ಉದ್ದ. ಎದೆಯ ಉಳಿದೆರಡು ಭಾಗಗಳು ಒಂದುಗೂಡಿವೆ. ಕಾಲುಗಳು ಬಹಳ ಉದ್ದ. ಫೆಮರೆ-ಟ್ರೊಕಾಂಟರ್ ಸಂಧಿ ಸುಲಭವಾಗಿ ಬಗ್ಗುತ್ತದೆ. ಈ ಉಪಾಯದಿಂದ ಅದು ಶತ್ರುವಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತದೆ. ದೇಹದಲ್ಲಿ 10 ಖಂಡಗಳಿವೆ, ಕೊನೆಯಲ್ಲಿ 3 ದೊಡ್ಡ ಬಿರುಗೂದಲುಗಳಿವೆ. ಕೆಲವು ಜಾತಿಗಳಲ್ಲಿ ಇವು ಕಿವಿರುಗಳಾಗುತ್ತವೆ. 4-5ನೆಯ ಹಂತದಲ್ಲಿ ಜನನಾಂಗಗಳು ಕಾಣಿಸಿಕೊಳ್ಳುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Encyclopedia of Entomology Ed. John L. Capinera. Dordrecht, London, Springer. 2008, 2nd Ed. ISBN 978-1-4020-6242-1 (Print) 978-1-4020-6359-6 (Online)