ಅನ್ನನಾಳದ ರೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನ್ನನಾಳದ ಕಾಯಿಲೆಗಳು ಜನ್ಮಜಾತ ಪರಿಸ್ಥಿತಿಗಳಿಂದ ಹುಟ್ಟಿಕೊಳ್ಳಬಹುದು ಅಥವಾ ನಂತರದ ದಿನಗಳಲ್ಲಿ ಅವುಗಳು ಕಾಣಿಸಿಕೊಳ್ಳಬಹುದು. ಹೊಟ್ಟೆಯ ಆಮ್ಲಗಳು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವುದರಿಂದ ಸಾಮಾನ್ಯವಾಗಿ ಎದೆಯಲ್ಲಿ ಸುಡುವ ಸಂವೇದನೆಯನ್ನು ಅನೇಕ ಜನರು ಅನುಭವಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಎದೆಯುರಿ ಎಂದು ಕರೆಯಲಾಗುತ್ತದೆ.

ಕಷ್ಟನುಂಗಣೆ[ಬದಲಾಯಿಸಿ]

ಗಂಟಲಿನ ಬಳಿ ಅನ್ನನಾಳದಿಂದ ಹೊರಪಕ್ಕಕ್ಕೆ ಚೀಲಗಳಂತೆ ಚಾಚಿಕೊಂಡಿರುವ ತಿರುಚೀಲ (diverticulum) ಕಷ್ಟನುಂಗಣೆಗೆ (dysphagia) ಒಂದು ಕಾರಣ. ಈ ತಿರುಚೀಲ ಕೆಲವೇಳೆ ಅರೆಲೀಟರಿನಷ್ಟು ಆಹಾರ ತುಂಬಿಕೊಳ್ಳುವಷ್ಟು ಹಿಗ್ಗಿ, ಮುಖ್ಯವಾಗಿ ಕೊರಳಿನ ಎಡಪಕ್ಕದಲ್ಲಿ ಉಬ್ಬಿದಂತೆ ಇರುತ್ತದೆ. ಶಸ್ತ್ರಕ್ರಿಯೆಯಿಂದ ಇದನ್ನು ಅಪಾಯವಿಲ್ಲದ ಹಾಗೆ ತೆಗೆದುಹಾಕಬಹುದು. ಹುಟ್ಟುತ್ತ ಬರುವ ಕುಂದಾಗಿ ಅನ್ನನಾಳ ಪೂರ್ತಿ ಮುಚ್ಚಿಹೋಗಿರಬಹುದು. ದೊಡ್ಡವರು ಹಸಿವು ನೀಗಲು ಕುದಿವ ಇಲ್ಲವೇ ಸುಟ್ಟಅರಗಿಸುವ ದ್ರವಗಳನ್ನೋ ಬಲವಾದ ಆಮ್ಲಗಳನ್ನೊ ಕುಡಿದಮೇಲೆ ಅನ್ನನಾಳವೆಲ್ಲ ಹುಣ್ಣಾಗಿ ಕಲೆಗಟ್ಟಿ ಅಡಚಣೆಯಾಗಿ ನುಂಗುವುದು ಕಷ್ಟವಾಗಬಹುದು. ಒಳಗಣ ತೂತು ಅಡಕವಾದಂತಿರುವ ಈ ತೊಡಕನ್ನೂ (ಸ್ಟ್ರಿಕ್ಚರ್) ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು.[೧]

ಅನ್ನನಾಳಕ್ಕೂ ಉಸಿರ್ನಾಳಕ್ಕೂ ಇರುವ ಸಂಬಂಧ[ಬದಲಾಯಿಸಿ]

ಬಲು ಅಪೂರ್ವವಾಗಿ, ಅನ್ನನಾಳಕ್ಕೂ ಉಸಿರ್ನಾಳಕ್ಕೂ ನಡುವೆ ಹುಟ್ಟಿನಿಂದಲೇ ಅಸಹಜ ತೂತಿರಬಹುದು. ಇಂಥ ಕೂಸು ಕುಡಿದುದೆಲ್ಲ ವಾಂತಿಮಾಡಿ, ಕೆಲವೇಳೆ ಕೆಮ್ಮುತ್ತ ಉಸಿರು ಸಿಕ್ಕಿಕೊಂಡಂತಾಗಿ ಮೈಯೆಲ್ಲ ನೀಲಿಗಟ್ಟುತ್ತದೆ. ಇದಕ್ಕೆ ಶಸ್ತ್ರಕ್ರಿಯೆ ಸಾಧ್ಯವಾದರೂ ಕೂಸು ಬದುಕುವುದು ಕಷ್ಟ. ವಿಶೇಷವಾಗಿ ವಪೆಯಲ್ಲಿನ ಅನ್ನನಾಳದ ಕಂಡಿ ಹಿರಿಹಿಗ್ಗಿ ಜಠರವೂ ಎದೆಗೂಡಿನೊಳಕ್ಕೆ ತೂರಿಕೊಂಡಿರುವಾಗ ಆಗುವಂತೆ, ಜಠರದಲ್ಲಿನ ಆಮ್ಲದ ಅನ್ನರಸ ಅನ್ನನಾಳದೊಳಕ್ಕೆ ಹಿಂಗಾರಿದರೆ (ರೆಗರ್ಜಿಟೇಟ್) ಅನ್ನನಾಳದ ಉರಿತವಾಗಿ, ಎದೆ ಉರಿ, ನೋವು, ಕಷ್ಟನುಂಗಣೆ ಆಗುತ್ತದೆ. ಆಗ ಆಮ್ಲರೋಧಕ ಮದ್ದುಗಳಿಂದ ಅನುಕೂಲವಿದೆ. ಹೆರವಸ್ತುಗಳು: ಬಾಯಿಯಿಂದ ಒಳಗೆ ಬಿದ್ದ ಹೆರವಸ್ತುಗಳು ಅನ್ನನಾಳದ ಒಳಗೆ ಸೇರಿಕೊಂಡು ಅಲ್ಲೇ ಇದ್ದು ಆತಂಕ ಒಡ್ಡಬಹುದು. ಆದರೂ ಅನ್ನನಾಳ ಎಷ್ಟೊಂದು ಹಿಗ್ಗುವುದೆಂದರೆ ಎಲ್ಲಿ ಏನಾದರೂ ಸಿಗಹಾಕಿಕೊಳ್ಳಲು ಏನೋ ಹೆಚ್ಚಿನ ಕಾರಣಗಳು ಇರಬೇಕು. ಕಟ್ಟಿಸಿಕೊಂಡಿರುವ ಹಲ್ಲುಗಳಿಗೆ ಚಾಚಿಕೊಂಡಿರುವ ಕೊಕ್ಕೆಗಳು ಇರುವುದರಿಂದ ಸುಲಭವಾಗಿ ಮುಂದೆ ಸಾಗದಾಗುತ್ತವೆ.[೨]

ಹೆರವಸ್ತುಗಳು ವಿಶೇಷವಾಗಿ ಆತಂಕವಾಗುವ ಜಾಗಗಳು ಎರಡಿವೆ[ಬದಲಾಯಿಸಿ]

ಅನ್ನನಾಳದ ಮೇಲ್ಬಾಗದಲ್ಲಿ, ಉಸಿರ್ನಾಳದ ಕೆಳಗಿನ ಕೊನೆ ಅನ್ನನಾಳವನ್ನು ತುಸು ಹಿಂದಕ್ಕೆ ಒತ್ತುವುದೊಂದು, ಕೆಳಭಾಗ ವಪೆಯ ಮೂಲಕ ಹೊಟ್ಟೆಗೆ ತೂರುವೆಡೆ ಇನ್ನೊಂದು. ಚೆನ್ನಾಗಿ ಅಗಿಯದಿರುವ, ಮೂಳೆಸಮೇತ ಇರುವ ಮಾಂಸದ ತುಂಡು ಅನ್ನನಾಳದ ಮೊದಲಲ್ಲಿ, ಗಂಟಲಲ್ಲಿ ಸಿಕ್ಕಿಕೊಳ್ಳುವುದುಂಟು. ಅನ್ನನಾಳದಲ್ಲಿ ಸಿಕ್ಕಿಕೊಂಡ ಹೆರವಸ್ತುವನ್ನು ಅದರ ಲೋಳೆ ಪೊರೆಗೆ ಅಪಾಯವಾಗದಂತೆ ಕೆಳಗಡೆಗೆ ನೂಕಲು ಆಗುವುದಾದರೆ, ತುದಿಯಲ್ಲಿ ಬೆಳಕಿರುವ ಕೊಳವೆಯ ಮೂಲಕ ಕಣ್ಣಿಂದ ನೋಡುತ್ತ ಕಡ್ಡಿಯಿಂದ ನೂಕಿಬಿಡಬಹುದು. ಹೀಗಾಗದಿದ್ದರೆ, ಅದನ್ನು ಹಿಡಿದು ಹೊರದೆಗೆಯಬಹುದು. ಕೆಳಕ್ಕೆ ಜಠರದೊಳಕ್ಕೆ ನೂಕಿದ ಮೇಲೆ ಆ ವಸ್ತು ಅರಗದಿದ್ದರೆ ಕೊನೆಗೆ ಮಲದಲ್ಲಿ ಹೊರಬೀಳುತ್ತದೆ. ಹಾಗೆ ಬಿದ್ದುದನ್ನು ಮಲಪರೀಕ್ಷೆಯಿಂದ ಖಚಿತಪಡಿಸಿಕೊಳ್ಳಬೇಕು.

ಏಡಿಗಂತಿ[ಬದಲಾಯಿಸಿ]

ಅನ್ನನಾಳದಲ್ಲಿ ಏಳುವ ಊತ, ಗಂತಿಗಳಿಂದಲೂ ಆತಂಕ ಆಗಬಹುದು. ಇಂಥ ರೋಗಗಳಲ್ಲಿ ಏಡಿಗಂತಿಯೇ (ಕ್ಯಾನ್ಸರ್) ತೀರ ಸಾಮಾನ್ಯ. ಮದ್ಯ ವಯಸ್ಸು ದಾಟಿದ ಗಂಡಸರಿಗೆ ಮೀಸಲಿದು. ಬರಬರುತ್ತ ಗಟ್ಟಿ ಪದಾರ್ಥಗಳನ್ನು ನುಂಗುವುದು ಕಷ್ಟವಾಗಿ ನೀರಂಥವು ನುಂಗಿದಾಗ ಮಾತ್ರ ಸರಾಗವಾಗಿ ಅನ್ನನಾಳದಲ್ಲಿ ಇಳಿಯುತ್ತವೆ. ಕೊನೆಗೆ ನೀರೂ ಇಳಿಯದಂತೆ ಅನ್ನನಾಳದ ತೊಡಕು ಆಗಿರುತ್ತದೆ. ಏಡಿಗಂತಿ ಎದ್ದಿರುವುದರ ತೀರ ಮೊದಲಿನ ಲಕ್ಷಣವಿದು. ಆದ್ದರಿಂದ ನೀರು ಕುಡಿವಂತಿದ್ದು ಗಟ್ಟಿ ಆಹಾರ ನುಂಗುವುದು ಕಷ್ಟವೆನಿಸಿದ ಕೂಡಲೇ ವೈದ್ಯಪರೀಕ್ಷೆ ಮಾಡಿಸಿಕೊಳ್ಳಬೇಕು. ಅನ್ನನಾಳದ ಒಂದು ಭಾಗವನ್ನೋ ಪೂರ್ತಿಯಾಗೋ ಶಸ್ತ್ರಕ್ರಿಯೆಯಿಂದ ಕೊಯ್ತೆಗೆದು ಹಾಕಬಹುದು. ಆಮೇಲೆ ಜಠರವನ್ನು ಎದೆಯೊಳಕ್ಕೆ ಜರುಗಿಸಿ ಉಳಿದಿರುವ ಅನ್ನನಾಳದ ತುಂಡಿಗೆ ಕೂಡಿಸಬಹುದು. ಕೆಳಗಿನ ಮೂರರಲ್ಲೊಂದು ಭಾಗದಲ್ಲಿ ಎದ್ದಿರುವ ಏಡಿಗಂತಿಯನ್ನು ಕೊಯ್ತೆಗೆದು ವಾಸಿಮಾಡಬಹುದು. ಆದರೆ ಏಡಿಗಂತಿ ಬದಿಯ ಅಂಗಗಳಿಗೆ ಪಸರಿಸಿಕೊಂಡಿರಬಾರದು. ಮೇಲ್ಭಾಗದಲ್ಲಿ ಆಗುವಂತೆ, ಏಡಿಗಂತಿ ಬಲು ದೊಡ್ಡದಾಗಿ, ಸುತ್ತಲೂ ಇರುವ ಅಂಗಗಳಿಗೆ ಅಂಟಿಕೊಂಡಿದ್ದರೆ, ಕೊಯ್ತೆಗೆತ ಅಪಾಯಕರ. ತೆಗೆವುದು ಆಗದಿದ್ದಲ್ಲಿ ಸಣ್ಣ ತೂತಿನಲ್ಲಿ ಕಿರಿಯ ರಬ್ಬರ್ ಕೊಳವೆಯನ್ನು ತೂರಿಸಿಬಿಟ್ಟು ಆಗಾಗ್ಗೆ ಬದಲಿಸುತ್ತಿದ್ದರೆ ಕಂಡಿ ಹಾಗೇ ಉಳಿಯುತ್ತದೆ. ಅಷ್ಟೂ ಇಷ್ಟೂ ದ್ರವ ವಸ್ತುಗಳಾದರೂ ಹೊಟ್ಟೆಗೆ ಸೇರುತ್ತವೆ. ಇದೂ ಆಗದಿರಲು ಹೊಟ್ಟೆ ಮುಗುಳಿನಲ್ಲಿ ಶಸ್ತ್ರಕ್ರಿಯೆಯಿಂದ ಜಠರದೊಳಕ್ಕೆ ಶಾಶ್ವತ ಕಂಡಿಮಾಡಿದರೆ ಅನ್ನಾಹಾರಗಳನ್ನು ನೇರವಾಗಿ ಹೊತ್ತೊತ್ತಿಗೆ ಹಾಕುತ್ತಿರಬಹುದು.ಅನ್ನನಾಳದ ಏಡಿಗಂತಿ ಗೊತ್ತಾಗುವ ಹೊತ್ತಿಗೆ ಬಹುಮಟ್ಟಿಗೆ ಕೈಮೀರಿರುವುದೇ ಸಾಮಾನ್ಯ. ಶಸ್ತ್ರಕ್ರಿಯೆ ಆದವರೂ ಹೆಚ್ಚು ವರ್ಷ ಬದುಕುವುದು ಅಪರೂಪ. ಅನ್ನನಾಳದ ಮೇಲಿನ ಮೂರರಲ್ಲೊಂದು ಭಾಗದ ಏಡಿಗಂತಿಯನ್ನು ಆಳದ ಕ್ಷ-ಕಿರಣಗಳಿಂದ ಅಣಗಿಸಬಹುದು.

ಸೆಡೆತ[ಬದಲಾಯಿಸಿ]

ವಪೆಯಲ್ಲಿ ಅನ್ನನಾಳ ತೂರುವೆಡೆಯಲ್ಲಿ ಮೇಲುಗಡೆ ಇರುವ ಭಾಗ ಹಿರಿಹಿಗ್ಗಿ ಉದ್ದಸಾಗುತ್ತದೆ. ಅನ್ನ ನೀರು ಎರಡೂ ಸೇರದಾಗುತ್ತದೆ. ತೆಗೆದುಕೊಂಡ ಆಹಾರ ಅಲ್ಲೇ ಉಳಿದು, ಆಮೇಲೆ ವಾಂತಿ ಆಗುವುದು. ರೋಗಿ ಸೊರಗುವನು. ಹೀಗೆ ಸೆಡೆತುಕೊಂಡ ಅನ್ನನಾಳವನ್ನು ಬೇರೆ ಬೇರೆ ಗಾತ್ರದ ಸರಳುಗಳಿಂದ ಹಿಗ್ಗಲಿಸಬಹುದು. ಅನ್ನನಾಳದ ಕೆಳಭಾಗದ ಸುತ್ತಿನ ಸ್ನಾಯುಗಳನ್ನು ಕತ್ತರಿಸಿ ಬಿಡಿಸಬಹುದು. ಇಲ್ಲವೇ ಜಠರವನ್ನು ಶಸ್ತ್ರಕ್ರಿಯೆಯಿಂದ ಮುಂಗಡೆಯಿಂದ ಕೊಯ್ದು ಕೆಳಗಡೆಯಿಂದ ಸರಿಪಡಿಸಲೂಬಹುದು.ಎದೆಯಲ್ಲಿ ಏನೋ ಚೆಂಡು ಸಿಕ್ಕಿಕೊಂಡಿರುವಂತೆ ಇರುವುದೆಂದು, ಉನ್ಮಾದದ ರೋಗಿಗಳು ನುಂಗಲಾಗದೆನ್ನುವರು. ಇದು ತತ್ಕಾಲದಲ್ಲಿ ಮಾತ್ರ ಹೀಗಿರುವುದರಿಂದ ಇದನ್ನು ಗುರುತಿಸಬಹುದು. ರೋಗಿಯಲ್ಲಿ ಕಬ್ಬಿಣಾಂಶದ ಕೊರತೆಯಿಂದಲೂ ಹೀಗಾಗಬಹುದು.ಕೊನೆಯದಾಗಿ, ಅದರ ಸುತ್ತಮುತ್ತಣ ಅಂಗಗಳೂ ಅನ್ನನಾಳವನ್ನು ಒತ್ತರಿಸಬಹುದು. ಇಂಥವು ಹಲವಾರಿದೆ. ಅನ್ನನಾಳದ ಸದ್ಯ ಹತ್ತಿರವಿರುವ, ಮಹಾಧಮನಿಯ ಅಗಲುಬ್ಬು (aorticaneurysm) ಒಂದು, ಕೊರಳಲ್ಲಿ ಏಳುವ ಗಂತಿಗಳು ಇನ್ನೊಂದು ಕಾರಣ. ಈಲಿ (ಯಕೃತ್ತು) ಊದಿಕೊಂಡು ಅರಿಶಿನಾರಿಗೆ (cirrhosis) ಆಗಿದ್ದರೆ, ಇಲ್ಲವೆ ಈಲಿಯಿಂದ ಹೊರಬೀಳುವ ತೂರೊಗೊಂದಿಯ (portal) ಸಿರಗಳಿಗೆ ಆತಂಕವಾಗಿದ್ದರೆ, ಅನ್ನನಾಳದ ಕೆಳಗಿನ ಮೂರರಲ್ಲೊಂದು ಭಾಗದ ಒಳಗಡೆ ಸಿರಗಳು ಕೊಂಕಿ ಊದಿಕೊಳ್ಳುತ್ತವೆ. ಇವು ಒಡೆಬಿರಿದಾಗ ವಾಂತಿಯಲ್ಲಿ ರಕ್ತಕಾರಬಹುದು. ರಕ್ತಕಾರುವುದು ಹೆಚ್ಚಾದರೆ ಪ್ರಾಣಾಪಾಯ.

ಉಲ್ಲೇಖಗಳು[ಬದಲಾಯಿಸಿ]

  1. http://arogyavani.blogspot.in/search?updated-max=2013-01-19T06:17:00-08:00&max-results=37&reverse-paginate=true[ಶಾಶ್ವತವಾಗಿ ಮಡಿದ ಕೊಂಡಿ]
  2. http://ecowoman.ru/kannada/articles.php?id=21456[ಶಾಶ್ವತವಾಗಿ ಮಡಿದ ಕೊಂಡಿ]