ಅನಿಲಗ್ರಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ಲಾಟಿನಂ, ಪೆಲೇಡಿಯಂ ಮೊದಲಾದ ಲೋಹಗಳು ಅಧಿಕ ಪ್ರಮಾಣದಲ್ಲಿ ಜಲಜನಕವನ್ನು ಹೀರಿಕೊಳ್ಳಬಲ್ಲವು. ಈ ಬಗೆಯ ಹೀರುವಿಕೆಯಿಂದ ಪೆಲೇಡಿಯಂ ಲೋಹದ ಗಾತ್ರ ಹೆಚ್ಚುತ್ತದೆ. ಆದರೆ ಸಾಮಾನ್ಯವಾಗಿ ಅದರ ಹೊರ ಲಕ್ಷಣವಾಗಲಿ ಗುಣಗಳಾಗಲಿ ಹೆಚ್ಚು ಮಾರ್ಪಾಡಾಗುವುದಿಲ್ಲ. ಇಂಥ ಕ್ರಿಯೆಗೆ ಅನಿಲಗ್ರಸನ (ಅಕ್ಲೂಷನ್ ಆಫ್ ಗ್ಯಾಸಸ್) ಎಂಬ ಹೆಸರಿದೆ. ಸಾಧಾರಣ ಉಷ್ಣತೆಯಲ್ಲಿ ಪೆಲೇಡಿಯಂ ಲೋಹ ತನ್ನ ಗಾತ್ರದ ೨೭೬ರಷ್ಟು ಮತ್ತು ಸುಮಾರು ೬೦-೮೦ ಸೆಂ. ಉಷ್ಣತೆಯಲ್ಲಿ ೯೩೫ರಷ್ಟು ಜಲಜನಕವನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೆಗೊಂಡ ಅನಿಲಪ್ರಮಾಣ ಲೋಹದ ಭೌತಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಲೋಹವನ್ನು ಕಾಯಿಸಿದಾಗ ಜಲಜನಕ ಬಿಡುಗಡೆಯಾಗುವುದು. ಇದನ್ನು ಮೊದಲು ಗ್ರಹ್ಯಾಂ ಅಧ್ಯಯನ ಮಾಡಿದ.[೧] ಜಲಜನಕವನ್ನು ಶುದ್ಧಿಮಾಡುವಲ್ಲಿ, ಅದನ್ನು ತೂಕ ಮಾಡುವ ವಿಧಾನದಲ್ಲಿ ಪೆಲೇಡಿಯಂ ಲೋಹದ ಈ ಗುಣ ಆಧಾರವಾಗಿದೆ. ಜಲಜನಕ-ಆಮ್ಲಜನಕಗಳ ಸಂಯೋಗ ತೂಕವನ್ನು (ಕಂಬೈನಿಂಗ್‌ವೇಟ್) ಕಂಡುಹಿಡಿಯುವ ಪ್ರಯೋಗದಲ್ಲಿ ಮಾರ್ಲೆ ಎಂಬಾತ ಈ ವಿಧಾನವನ್ನು ಬಳಸಿಕೊಂಡ. ಲೋಹದ ಹರಳುಗಳ ನಡುವಿನ ಜಾಗವನ್ನು ಜಲಜನಕ ವ್ಯಾಪಿಸುವುದೇ ವಸ್ತುವಿನ ಗಾತ್ರದ ಹೆಚ್ಚುವರಿಗೆ ಕಾರಣವೆಂದು ಭಾವಿಸಿ ಪ್ರಯೋಗಗಳನ್ನು ಈ ದಿಶೆಯಲ್ಲಿ ಮುಂದುವರಿಸಲಾಗಿದೆ. ಇದು ಜಲಜನಕ ಮಾತ್ರ ಹೊಂದಿರುವ ವಿಶಿಷ್ಟಗುಣವಲ್ಲ. ಸೂಕ್ತಸನ್ನಿವೇಶಗಳಲ್ಲಿ ಇತರ ಅನಿಲಗಳೂ ಇಂಥ ಗುಣವನ್ನು ಪ್ರದರ್ಶಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: