ವಿಷಯಕ್ಕೆ ಹೋಗು

ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನತೆಯ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ದೇಶದ ಆರ್ಥಿಕವ್ಯವಸ್ಥೆ ಅನಿರ್ಬಂಧವಾಗಿರಬೇಕು, ಎನ್ನುವುದೇ ಈ ವ್ಯವಸ್ಥೆಯ (ಅಬಂಧನೀತಿ, ಅನಿರ್ಬದ್ಧ ವ್ಯವಹಾರ, ಕಾರ್ಯಸ್ವಾತಂತ್ರ್ಯ, ಲೇಸೇ ಪೇರ್) ಮುಖ್ಯಾಂಶ. ಐತಿಹಾಸಿಕವಾಗಿ ಈ ವಿಚಾರಸರಣಿ ನೈಸರ್ಗಿಕ ಆರ್ಥಿಕವ್ಯವಸ್ಥೆಯಲ್ಲಿ ನಂಬುಗೆಯನ್ನಿರಿಸಿದ ಫಿಸಿಯೊಕ್ರ್ಯಾಟ್ ಪಂಥದ ಅರ್ಥಶಾಸ್ತ್ರಜ್ಞರ ಕಾಲದಿಂದ ಅಂದರೆ 18ನೆಯ ಶತಮಾನದ ಮಧ್ಯಕಾಲದಿಂದ 19ನೆಯ ಶತಮಾನದ ಮಧ್ಯಕಾಲದವರೆಗೆ ಪ್ರಚಲಿತವಾಗಿತ್ತು. ಈ ಅವಧಿಯಲ್ಲಿ ಬ್ರಿಟನ್ನಿನಲ್ಲಿ ಆಡಂಸ್ಮಿತ್ ಎಂಬ ಅರ್ಥಶಾಸ್ತ್ರಜ್ಞನ ವಿಚಾರಗಳ ಪ್ರಭಾವಕ್ಕೊಳಪಟ್ಟು ಬೆಳೆದುಬಂದ ಕ್ಲಾಸಿಕಲ್ ಅರ್ಥಶಾಸ್ತ್ರ. ಜನಜೀವನದಲ್ಲಿ ಸರ್ಕಾರದ ಪಾತ್ರವೇನೆಂಬುದರ ಮೇಲೆ ಸಾಕಷ್ಟು ಬೆಳಕು ಚೆಲ್ಲುವಂಥದಾಗಿತ್ತು. ಸರ್ಕಾರವಾಗಲೀ ಬಲಾತ್ಕಾರಮಾಡಲು ಅಧಿಕಾರವುಳ್ಳ ಯಾವುದೇ ಮಂಡಲಿಯಾಗಲೀ ಜನತೆಯ ಆರ್ಥಿಕ ವ್ಯವಹಾರಗಳಲ್ಲಿ ಕೈಹಾಕದೆ. ಅವುಗಳನ್ನು ಸಂಬಂಧಪಟ್ಟ ವ್ಯಕ್ತಿಗಳ ಸ್ವಯಂನಿರ್ಣಯಕ್ಕೆ ಬಿಟ್ಟುಕೊಟ್ಟರೆ. ಅವರು ತಮ್ಮ ಹಿತ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾರೆ ಎಂದು ಈ ಅರ್ಥಶಾಸ್ತ್ರ ಸಾರಿ ಹೇಳುತ್ತದೆ. ಆಶಾದಾಯಕವಾದ ವಿಶ್ವದ ಸ್ವರೂಪ, ನೈಸರ್ಗಿಕ ಪದ್ಧತಿಯ ಭಾವನೆ, ಸಮನ್ವಯಗಳಿಂದೊಡಗೂಡಿದ ಆರ್ಥಿಕವ್ಯವಸ್ಥೆ ಇವೆಲ್ಲವೂ ನಿರ್ದಿಷ್ಟ ನಿಯಂತ್ರಣದಿಂದ ವಿಮುಕ್ತವಾದಾಗ, ಮಾನವನ ಹಿತಗಳನ್ನು ಅಧಿಕಗೊಳಿಸುವುವೆಂಬ ನಂಬುಗೆ ಆಗ್ಗೆ ಪ್ರಬಲವಾಗಿದ್ದು ಅದೇ ಅರ್ಥಶಾಸ್ತ್ರದ ಮೂಲಾಧಾರವಾಗಿತ್ತು. ಆ್ಯಡಂಸ್ಮಿತ್ ಈ ಮೂಲ ವಿಚಾರವನ್ನು ಫಿಸಿಯೋಕ್ರ್ಯಾಟ್ ಪಂಥದವರಿಂದ ತೆಗೆದುಕೊಂಡ. ಆದರ ಲೇಸೇ ಪೆóೀರ್ ಎಂಬ ಮಾತು ಮಾತ್ರ, ಜೆ. ಎಸ್. ಮಿಲ್ ತನ್ನ ಅರ್ಥಶಾಸ್ತ್ರದಲ್ಲಿ ಉಪಯೋಗಿಸುವವರೆಗೆ (1848) ಅಷ್ಟೊಂದು ಬಳಕೆಗೆ ಬರಲಿಲ್ಲ. ಇಂಗ್ಲೆಂಡಿನಲ್ಲಿ ಕಾಬ್ಡೆನ್ ತತ್ತ್ವ ಎಂಬ ಮಾತನ್ನು ಇದಕ್ಕೆ ಪ್ರತಿಯಾಗಿ ಉಪಯೋಗಿಸಲಾಗುತ್ತಿತ್ತು.[]

ಆ್ಯಡಂ ಸ್ಮಿತ್ ರ ವಿಚಾರ

[ಬದಲಾಯಿಸಿ]

ಈ ವಿಚಾರಗಳನ್ನು ಸಾರಿ ಹೇಳುವಲ್ಲಿ ಆ್ಯಡಂ ಸ್ಮಿತ್ ಪ್ರಮುಖ ಪಾತ್ರವಹಿಸಿದ. ಅಲ್ಲದೆ 18ನೆಯ ಶತಮಾನದ ಕೊನೆಯಭಾಗದಿಂದ 19ನೆಯ ಶತಮಾನದ ಪೂರ್ವ ಕಾಲದವರೆಗೆ ಇತರ ಎಲ್ಲ ಶ್ರೇಷ್ಠತರಗತಿಯ ಅರ್ಥಶಾಸ್ತ್ರಜ್ಞರೂ ಈ ವಿಚಾರವನ್ನು ಎತ್ತಿ ಹಿಡಿದಿದ್ದಾರೆ. ಅನಿರ್ಬಂಧ ಸ್ಪರ್ಧೆ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಕೈವಾಡದ ಅಭಾವ-ಇವು ರಾಷ್ಟ್ರವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಹಾಗೂ ಜನತೆಯ ಬೇಡಿಕೆಗಳನ್ನು ಪೂರೈಸಲು ಇರಬೇಕಾದ ಪ್ರಥಮ ಅವಶ್ಯಕತೆಗಳೆಂದು ಇವರು ಹೇಳುತ್ತಾರೆ. ಇಂಗ್ಲೆಂಡಿನಲ್ಲಿಯ ಸಮಕಾಲೀನ ಔದ್ಯಮಿಕ ಕ್ರಾಂತಿಯೇ ಈ ವಿಚಾರಗಳ ಹಿನ್ನೆಲೆಯಾಗಿತ್ತು. ಆ್ಯಡಂ ಸ್ಮಿತ್ ಕೂಡ ಔದ್ಯಮಿಕ ಬಂಡವಾಳಗಾರರ ಪ್ರಭಾವಕ್ಕೆ ಒಳಗಾಗಿದ್ದ. ತಮ್ಮ ಸ್ವಾರ್ಥಕ್ಕಾಗಿ ಅವನ ವಿಚಾರಗಳನ್ನು ಎತ್ತಿಹಿಡಿಯುತ್ತಿದ್ದ ಈ ಬಂಡವಾಳಗಾರರಿಂದಲೇ ಅವನಿಗೆ ಪ್ರೋತ್ಸಾಹ ದೊರೆಯಿತೆಂದು ಹೇಳಬಹುದು. ಆದ್ದರಿಂದಲೇ ಆತ ವಾಣಿಜ್ಯವಾದದ ಅನೇಕ ಮೂಲಾಂಶಗಳನ್ನು ವಿರೋಧಿಸಿದ. ಅಂತೆಯೇ ವಿದೇಶೀ ವ್ಯಾಪಾರ ಸಂಬಂಧದಲ್ಲಿ ರಕ್ಷಣಾನೀತಿಯನ್ನು ವಿರೋಧಿಸಿ ಅನಿರ್ಬಂಧ ವಿದೇಶೀ ವ್ಯಾಪಾರವನ್ನು (ಫ್ರೀಟ್ರೇಡ್) ಪ್ರಚಲಿತಗೊಳಿಸಿದ. ಇಂಥ ವಿದೇಶೀ ವ್ಯವಹಾರನೀತಿ ಸರಕುಗಳನ್ನು ತಯಾರಿಸುವವರಿಗೆ ಹೆಚ್ಚು ಅನುಕೂಲವಾಗಿದ್ದರೂ ಅದರಿಂದ ಗ್ರಾಹಕರಿಗೇ ಹೆಚ್ಚು ಉಪಯೋಗವೆಂದು ವಾದಿಸಲಾಗುತ್ತಿತ್ತು. ಅದೇ ರೀತಿ, ದರಗಳ ಏರಿಕೆಯನ್ನು ತಡೆಹಿಡಿದು ಗ್ರಾಹಕನ ಹಿತವನ್ನು ಸಾಧಿಸುವ ದೃಷ್ಟಿಯಿಂದ, ಏಕಸ್ವಾಮ್ಯಸಂಯೋಗ ಪದ್ಧತಿಯನ್ನು (ಮೊನೊಪೊಲಿಸ್ಟಿಕ್ ಕಾಂಬಿನೇಷನ್) ವಿರೋಧಿಸಲಾಗುತ್ತಿತ್ತು. ಆದರೆ ಏಕಸ್ವಾಮ್ಯಸಂಯೋಗಪದ್ಧತಿಯನ್ನು ತಡೆಹಿಡಿಯಬೇಕಾದರೆ ಸರ್ಕಾರ ಆರ್ಥಿಕ ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚು ಕೈಹಾಕುವುದು ಅನಿವಾರ್ಯವಾಯಿತು. ವ್ಯಕ್ತಿ ಹಾಗೂ ಸಮಾಜ ಇವೆರಡರ ಹಿತಗಳೂ ಒಂದೇ ಆಗಿದೆ ಎಂದು ಹೇಳಿ, ವಿಶ್ವ ವ್ಯಾಪಕವಾಗಿದ್ದ ಈ ವಿಚಾರ ಪ್ರಣಾಲಿ, ಸಮಾಜ ಹಾಗೂ ರಾಜ್ಯ ಇವುಗಳ ಬಗ್ಗೆ ಒಂದು ವಿಶಿಷ್ಟದೃಷ್ಟಿಯನ್ನೇ ಬೆಳೆಯಿಸಿತು. ಸರ್ಕಾರ ಮುಖ್ಯವಾಗಿ ಖಾಸಗಿ ಒಡೆತನದಲ್ಲಿದ್ದ ಸಂಪತ್ತನ್ನು ಸಂರಕ್ಷಿಸುವ ಹೊಣೆಯನ್ನು ಹೊರಬೇಕಾಯಿತು. ಇಂಗ್ಲೆಂಡ್‍ದೇಶ ಪ್ರಥಮವಾಗಿ ಔದ್ಯಮಿಕಕ್ರಾಂತಿಯನ್ನು ಅನುಭವಿಸಬೇಕಾಗಿ ಬಂದದ್ದರಿಂದ, ಅಲ್ಲಿ ಲೇಸೇ ಪೇರ್ ಇಲ್ಲವೆ ವ್ಯಕ್ತಿವಾದದ ತೀವ್ರಪ್ರಚಾರ ಪಡೆಯಿತು. ಆದರೆ ಇತರ ದೇಶಗಳಲ್ಲಿ ಅದರ ಪ್ರಚಾರಕ್ಕೆ ಅನೇಕ ವರ್ಷಗಳು ಬೇಕಾದುವು.[]

ಆಲ್ಫ್ರೆಡ್ ಮಾರ್ಷಲ್ ವಿಚಾರ

[ಬದಲಾಯಿಸಿ]

ಆಲ್ಫ್ರೆಡ್ ಮಾರ್ಷಲ್ ಮತ್ತು ಇತರ ಅರ್ಥಶಾಸ್ತ್ರಜ್ಞರು ಎತ್ತಿತೋರಿಸಿದಂತೆ, ಅನಿರ್ಬಂಧಿತ ಆರ್ಥಿಕನೀತಿಯನ್ನು ಪರೀಕ್ಷಿಸಿ ನೋಡಿದಾಗ ಅದರಲ್ಲಿ ಕೆಲವು ಅಸಂಬದ್ಧತೆಗಳು ಕಾಣಿಸಿಕೊಳ್ಳುತ್ತವೆ. ಗ್ರಾಹಕವಸ್ತುವಿಗೆ ಕೊಡುವ ಬೆಲೆ ಅವನ ವರಮಾನದ ಪ್ರಮಾಣವನ್ನು ಅವಲಂಬಿಸಿರುತ್ತದೆಯಲ್ಲದೆ ಅದರ ಉಪಯುಕ್ತತೆಯನ್ನಲ್ಲ. ಆದ್ದರಿಂದ ಅವನ ವರಮಾನವನ್ನು ಹೆಚ್ಚಿಸಲಿಕ್ಕೂ ಆರ್ಥಿಕ ಅಸಮಾನತೆಗಳನ್ನು ನಿವಾರಿಸಲಿಕ್ಕೂ ಸರ್ಕಾರ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾಗುವುದು. ಅದೇ ಪ್ರಕಾರ, ಈ ಮೊದಲೇ ಕಾಣಿಸಿದಂತೆ ಸರ್ಕಾರ ಏಕಸ್ವಾಮ್ಯಸಂಯೋಗ ಪದ್ಧತಿಯನ್ನು ತಡೆಯಲಿಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಅನಿರ್ಬಂಧಿತ ಆರ್ಥಿಕಪದ್ಧತಿ ವಾಸ್ತವಿಕತೆಗೆ ವಿರುದ್ಧವಾಗಿದೆ ಎಂದು ಹೇಳಬಹುದು. ಸಾಕಷ್ಟು ಲಾಭಕ್ಕೆ ಅವಕಾಶವಿತ್ತು. ಬಂಡವಾಳವನ್ನು ಹೆಚ್ಚು ಹೆಚ್ಚಾಗಿ ತೊಡಗಿಸಲಿಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಿಸುವಲ್ಲಿ ಮಾತ್ರ ಕೆಲಮಟ್ಟಿಗೆ ಈ ನೀತಿಯ ಉಪಯುಕ್ತತೆಯನ್ನು ಕಂಡುಕೊಳ್ಳಬಹುದು.

ಆರ್ಥಿಕವ್ಯವಸ್ಥೆಯ ಬದಲಾವಣೆ

[ಬದಲಾಯಿಸಿ]

ಇನ್ನು 19ನೆಯ ಶತಮಾನದ ಉತ್ತರಾರ್ಧದಲ್ಲಿ, ತಾಂತ್ರಿಕ ಕ್ರಾಂತಿಯಿಂದಾಗಿ ಖಾಸಗೀ ಸಂಘಟನೆಯ ಪದ್ಧತಿಯಲ್ಲಿ (ಪ್ರೈವೆಟ್ ಎಂಟರ್‍ಪ್ರೈಸ್) ವಿಶೇಷ ಬದಲಾವಣೆಗಳಾದುವು. ವ್ಯವಹಾರವ್ಯವಸ್ಥೆಯ ಪ್ರಮಾಣಗಳು ಬೆಳೆದದ್ದರ ಪರಿಣಾಮವಾಗಿ ಗ್ರಾಹಕನ ಆರ್ಥಿಕಶಕ್ತಿ ಕುಗ್ಗಿತು; ಆದರೆ ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಪ್ರಭಾವದಿಂದಾಗಿ, ಅವನ ರಾಜಕೀಯ ಬಲ ಬೆಳೆದಿತ್ತು. ಕಾಬ್ಡೆನ್ ಹಾಗೂ ಬ್ರಾಯಿಟ್ ಮುಂತಾದ ಅರ್ಥಶಾಸ್ತ್ರಜ್ಞರು ರಾಜಕೀಯ ಶಕ್ತಿಯನ್ನು ಆರ್ಥಿಕಬಲದ ಸಂಪಾದನೆಗಾಗಿ ಉಪಯೋಗಿಸಬೇಕೆಂದು ಹೇಳುತ್ತಿದ್ದರು. ಅವರು ಈ ಗುರಿಗಳನ್ನು ನಿಶ್ಚಿತವಾದವುಗಳೆಂದು (ಪಾಸಿಟಿವ್) ತಿಳಿಯದೆ ನಿಷೇಧವಾದವುಗಳೆಂದು (ನೆಗೆಟಿವ್) ಅಭಿಪ್ರಾಯಪಟ್ಟರು. ಆದರೆ ಆರ್ಥಿಕಬಲ ಸುಸಂಘಟಿತವಾಗಿ ಬೆಳೆದಂತೆ ಇಂಥ ಯಾವುದೇ ನಿಬಂಧವನ್ನು ಹಾಕುವುದು ಅಶಕ್ಯವಾಯಿತು. ಈ ಕಾರಣಗಳಿಗಾಗಿ, ಆಧುನಿಕ ರಾಜ್ಯಗಳಲ್ಲಿ ಅನಿರ್ಬಂಧತೆ ತಾತ್ತ್ವಿಕವಾಗಿ ಅಸಮ್ಮತವೂ ನೈತಿಕವಾಗಿ ಅನುಪಯುಕ್ತವೂ ಆಗಿದೆ. ತಾತ್ತ್ವಿಕವಾಗಿ ಇದು ಈಗ ನಿರರ್ಥಕವಾಗಿದ್ದರೂ ಆರ್ಥಿಕರಂಗದಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿಹಿಡಿಯಲು, ಅನೇಕಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸಿಕೊಳ್ಳಲಾಗುತ್ತಿದೆ. ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರಗಳ ವಿಂಗಡಣೆಯ ಆಧಾರದ ಮೇಲೆಯೇ ನಿಂತಿದ್ದ ಈ ತತ್ತ್ವ, ರಾಜಕೀಯ ಶಕ್ತಿಯನ್ನು ಆರ್ಥಿಕಸಾಧನೆಗಳಿಗಾಗಿ ಸಾಮಾನ್ಯವಾಗಿ ಉಪಯೋಗಿಸುವ ಆಧುನಿಕಯುಗದಲ್ಲಿ ಅರ್ಥಹೀನವಾಗಿದೆ. ವ್ಯಕ್ತಿ ಪ್ರಾಧಾನ್ಯ ಹಾಗೂ ಅನಿರ್ಬಂಧಸ್ಪರ್ಧೆ ಈ ತತ್ತ್ವಕ್ಕೆ ಮೂಲವಾಗಿದ್ದು. ಬಂಡವಾಳ ಪ್ರಧಾನ ಆರ್ಥಿಕವ್ಯವಸ್ಥೆಯಲ್ಲಿ ಅದಕ್ಕೆ ಸ್ಥಾನವಿಲ್ಲದಂತಾಗಿದೆ. (ಬಿ.ಬಿ.ಕೆ.)

ಉಲ್ಲೇಖಗಳು

[ಬದಲಾಯಿಸಿ]
  1. ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ
  2. ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ