ವಿಷಯಕ್ಕೆ ಹೋಗು

ಅನಬಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಬಾಸ್
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಉಪಗಣ:
ಕುಟುಂಬ:
ಕುಲ:
Anabas

Cloquet, 1816

ಅನಬಾಸ್ ಪೆರ್ಸಿಪೋರ್ಮೆಸ್ ಗಣದ ಅನಬಾಂಟಿಡೆ ಕುಟುಂಬಕ್ಕೆ ಸೇರಿದ ಅಸ್ಥಿಮೀನು.ಇದು ಸಿಹಿನೀರು ಮತ್ತು ಉಪ್ಪುನೀರಿನ ಕೊಳಗಳಲ್ಲಿ ವಾಸಿಸುತ್ತವೆ.[]

ಸ್ಥಳೀಯ ಹೆಸರುಗಳು

[ಬದಲಾಯಿಸಿ]

ಇದನ್ನು ಇಂಗ್ಲಿಷಿನಲ್ಲಿ ಕ್ಲೈಂಬಿಂಗ್ ಪರ್ಚ್, ಬಂಗಾಲಿಯಲ್ಲಿ ಕೋಯ್ ಮತ್ತು ಕೋರ್ವು, ಮಲಯಾಳಿಯಲ್ಲಿ ಊಂಡಿಕೊಲ್ಲಿ, ತಮಿಳಿನಲ್ಲಿ ಸೆನ್ನಾಲ್ ಮತ್ತು ಪನೈ ಏರಿಕ್ಕೊಡಯ್ ಎಂದು ಕರೆಯುತ್ತಾರೆ.

ವಾಸಸ್ಥಾನ

[ಬದಲಾಯಿಸಿ]

ಭಾರತ, ಆಗ್ನೇಯ ಏಷ್ಯ, ಆಫ್ರಿಕಗಳ ಜೊಂಡು ತುಂಬಿದ ನದಿ, ತೊರೆ, ಕೊಳ ಮತ್ತು ನೀರು ಹಾಯಿಸಿದ ಗುಂಡಿಗಳೇ ಇದರ ವಾಸಸ್ಥಾನ.

ಪ್ರಭೇದಗಳು

[ಬದಲಾಯಿಸಿ]

ಭಾರತದಲ್ಲಿ ಅ. ಸ್ಕಾಂಡೆನ್ಸ್ ಮತ್ತು ಅ. ಟೆಸ್ಟುಡೀನೆಯಸ್ ಎಂಬ ಎರಡು ಪ್ರಭೇದಗಳಿವೆ.

ಲಕ್ಷಣಗಳು

[ಬದಲಾಯಿಸಿ]

ಸುಮಾರು 20 ಸೆಂ.ಮೀ. ಉದ್ದ ಬೆಳೆಯುವ ಈ ಮೀನನ್ನು ಬಂಗಾಳ ಮತ್ತು ಪೂರ್ವ ಕರಾವಳಿಯ ಜನ ಆಹಾರವಾಗಿ ಉಪಯೋಗಿಸುತ್ತಾರೆ. ಈ ಮೀನಿನ ಪೃಷ್ಠ ಮತ್ತು ಗುದದ ಈಜುರೆಕ್ಕೆಗಳಲ್ಲಿ ಹಲವು ಕಂಟಕಗಳಿವೆ. ಶ್ರೋಣೆಯ ಈಜುರೆಕ್ಕೆಗಳು ಮುನ್ಸರಿದು ವಕ್ಷದ ಈಜು ರೆಕ್ಕೆಗಳ ತಳಭಾಗದಲ್ಲಿ ಉಪಸ್ಥಿತವಾಗಿವೆ. ಈ ಮೀನಿನ ಶ್ವಸನದಲ್ಲಿ ಒಂದು ವೈಶಿಷ್ಟ್ಯವಿದೆ. ಇತರ ಮೀನುಗಳಂತೆ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಕಿವಿರುಗಳ ಸಹಾಯದಿಂದ ಪಡೆಯುವುದೇ ಅಲ್ಲದೆ ಗಾಳಿಯಲ್ಲಿರುವ ಆಮ್ಲಜನಕವನ್ನು ನೇರವಾಗಿ ಪಡೆಯುವ ಸಾಮರ್ಥ್ಯವನ್ನೂ ಇದು ಪಡೆದಿದೆ. ಇದರ ನೆರವಿಗೆ ಒಂದು ಅನುಷಂಗಿಕ ಶ್ವಸನಾಂಗ ಕಿವಿರುಗಳ ಮೇಲ್ಭಾಗದಲ್ಲಿ ಚಾಚಿರುವ ಗೂಡಿನಲ್ಲಿ ರೂಪುಗೊಂಡಿದೆ. ಬಾಯಿಂದ ಪಡೆದ ಗಾಳಿ ಈ ಗೂಡನ್ನು ಸೇರುತ್ತದೆ. ಆದರೆ ಈ ಮೀನು ನೀರಿನಿಂದ ಹೊರಬಂದು ನೇರವಾಗಿ ಗಾಳಿ ಸೇವಿಸಿ ಬದುಕಲಾರದು. ನೀರಿನಿಂದ ಹೊರಬಂದ 6-8 ಗಂಟೆಗಳಲ್ಲಿ ಸತ್ತುಹೋಗುತ್ತದೆ. ಅನಬಾಸ್ ಎಂಬ ಪದ ಆ ಮೀನಿನ ಚಲನೆಗೆ ಸಂಬಂಧಿಸಿದ್ದು. ಮುಂಜಾನೆಯಲ್ಲಿ ಮತ್ತು ಮಳೆ ಸುರಿಯುವ ಕಾಲದಲ್ಲಿ ಈ ಮೀನು ನೀರಿನಲ್ಲಿ ಬಿದ್ದಿರುವ ತೊಲೆ ಮತ್ತು ಬಂಡೆಗಳನ್ನು ತನ್ನ ವಕ್ಷದ ಈಜುರೆಕ್ಕೆ ಮತ್ತು ಕಿವಿರುಮುಚ್ಚಳಗಳ ನೆರವಿನಿಂದ ಹತ್ತಬಲ್ಲುದು. ನೀರಿನ ಅಂಚಿನಲ್ಲಿ ಇಳಿಜಾರಾಗಿ ಬೆಳೆದಿರುವ ಮರವನ್ನೂ ಹತ್ತಬಲ್ಲುದು. ಜಲಾಶಯ ಬತ್ತಿಹೋಗುವ ಸಂದರ್ಭಗಳಲ್ಲಿ ಮತ್ತೊಂದನ್ನು ಹುಡುಕಿಕೊಂಡು ಒಣ ನೆಲದ ಮೇಲೆ ತೆವಳಬಲ್ಲುದು. ನೀರು ತೀರಾ ಬತ್ತಿಹೋದರೆ ನೆಲವನ್ನು ಕೊರೆದು ಒಳಸೇರಿ ವಾಸಿಸಬಲ್ಲುದು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅನಬಾಸ್&oldid=1009215" ಇಂದ ಪಡೆಯಲ್ಪಟ್ಟಿದೆ