ಅನಂತ ಹೆಗಡೆ ದಂತಳಿಗೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪೀಠಿಕೆ
thumb|ಅನಂತ ಹೆಗಡೆ ದಂತಳಿಗೆ
ಪೀಠಿಕೆ* ಯಕ್ಷಗಾನ ಲೋಕದಲ್ಲಿ ಭಾಗವತರಿಗೆ ಅಗ್ರಸ್ಥಾನ. ಆದ್ದರಿಂದಲೇ ಅವರಿಗೆ ಪ್ರಥಮ ವೇಷಧಾರಿ ಎಂದು ಗೌರವ ನೀಡುತ್ತಾರೆ.ಒಂದರ್ಥದಲ್ಲಿ ಭಾಗವತ ಎಂದರೆ ಯಕ್ಷಗಾನ ಪ್ರದರ್ಶನದ ನಿರ್ದೇಶಕ ಎನ್ನಲೂಬಹುದು.ಭಾಗವತರಿಗೆ ಕಲಾವಿದರ ಮತ್ತು ಪ್ರೇಕ್ಷಕರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಕೌಶಲವೂ ಇರಬೇಕಾಗಿರುವುದರಿಂದ ಕೆಲವರು ಮಾತ್ರ ಭಾಗವತಿಕೆಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹವರಲ್ಲಿ ನಮ್ಮ ಭಾಗದ ಹೆಮ್ಮೆಯ ಯುವ ಭಾಗವತ ಅನಂತ ಹೆಗಡೆ ದಂತಳಿಗೆ ಪ್ರಮುಖರು...
*ಬಾಲ್ಯ*
ಅನಂತ ಹೆಗಡೆಯವರ ಹುಟ್ಟೂರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಪ್ರಾಂತ್ಯದ ದಂತಳಿಗೆ.30/06/1976ರಲ್ಲಿ ಜನನ.ತಂದೆ ವೆಂಕಟರಮಣ ಹೆಗಡೆ,ತಾಯಿ ಕಾವೇರಿ ವೆಂಕಟರಮಣ ಹೆಗಡೆ.
*ಯಕ್ಷಗಾನ ಹಿನ್ನೆಲೆ*
ಯಲ್ಲಾಪುರ ತಾಲೂಕು ಎಂದರೆ ಯಕ್ಷಗಾನ, ಸಂಗೀತ ಮತ್ತು ಪರಿಸರ ಸಂಪತ್ತನ್ನು ಹೊಂದಿರುವ ಶ್ರೀಮಂತ ಪ್ರದೇಶ ಎನ್ನಬಹುದು. ಅನಂತ ಹೆಗಡೆಯವರ ಊರಿನ ಸುತ್ತಲೂ ಎಲ್ಲೇ ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳಿದ್ದರೆ ಅಲ್ಲಿ ಇವರ ಉಪಸ್ಥಿತಿ ಇರುತ್ತಿತ್ತು. ಮನೆಯಲ್ಲೂ ಯಕ್ಷಗಾನ ವಾತಾವರಣ ಇತ್ತು. ಅಜ್ಜ ಹವ್ಯಾಸಿ ಭಾಗವತರಾಗಿದ್ದರು.ಚಿಕ್ಕಪ್ಪ ಲಕ್ಷ್ಮೀನಾರಾಯಣ ಹೆಗಡೆಯವರು ಮದ್ದಳೆ ವಾದಕರು.ಬಡಗು ತಿಟ್ಟಿನ ಶ್ರೇಷ್ಠ ಭಾಗವತರಾದ ವಿದ್ವಾನ್ ಗಣಪತಿ ಭಟ್ಟರ ಕಟ್ಟಾಭಿಮಾನಿ ಇವರು.ಅಷ್ಟೇ ಅಲ್ಲದೇ ತಾನೂ ಅವರಂತೆಯೇ ಭಾಗವತಿಗೆ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡವರು.ಆದರೆ ಇವರ ಕನಸು ನನಸಾಗಲು ಹಲವು ವರ್ಷಗಳೇ ಬೇಕಾಯಿತು. ಯಕ್ಷಗಾನವನ್ನೇ ತನ್ನ ಜೀವನವನ್ನಾಗಿಸಿಕೊಂಡ ಯಕ್ಷಗುರು ಹೊಸ್ತೋಟ ಗಜಾನನ ಭಟ್ಟರು ದಂತಳಿಗೆಯವರ ಮೊದಲ ಯಕ್ಷಗಾನ ಗುರುವಾದರು.ನಂತರ ಕೆರೆಮನೆ ಶಂಭು ಹೆಗಡೆಯವರ ಶ್ರೀಮಯ ಯಕ್ಷಗಾನ ಕೇಂದ್ರಕ್ಕೆ ಸೇರಿದರು. ಇವರು ಕೇಂದ್ರದಲ್ಲಿ ಮೊದಲ ವರ್ಷ ಕಲಿತದ್ದು ನೃತ್ಯ ವಿಭಾಗವನ್ನ.ವಿದ್ವಾನ್ ಗಣಪತಿ ಭಟ್ಟರು, ಅನಂತ ಪದ್ಮನಾಭ ಪಾಠಕರು ಹಿಮ್ಮೇಳದ ಗುರುಗಳು. ಎರಡನೇ ವರ್ಷ ವಿದ್ವಾನ್ ಗಣಪತಿ ಭಟ್ಟರ ಶಿಷ್ಯನಾಗಿ ಭಾಗವತಿಕೆಯ ಅಭ್ಯಾಸ ಮಾಡತೊಡಗಿದರು. ತರಬೇತಿ ಮುಗಿದ ನಂತರ ಇವರನ್ನು ಕೆರೆಮನೆ ಮೇಳದ ಸಹಾಯಕ ಭಾಗವತರನ್ನಾಗಿ ನೇಮಿಸಿಕೊಳ್ಳಲಾಯಿತು.ನಂತರ ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಇಲ್ಲಿಯವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ದಂತಳಿಗೆಯವರು ಈ ಮಟ್ಟಕ್ಕೆ ಏರಲು ಅವರ ಸರಳ ಸ್ವಭಾವ ಕಾರಣ.ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ವ್ಯಾಪ್ತಿಯನ್ನು ಕರ್ನಾಟಕವನ್ನು ಹೊರತಾಗಿಯೂ ದೆಹಲಿ, ಚೆನ್ನೈ, ಭೋಪಾಲ್, ಅಗರ್ತಲ,ಪಣಜಿ, ಕೊಯಂಬತ್ತೂರು, ಮಧುರೈ, ಹೈದರಾಬಾದ್, ಚಂಡೀಘಡ...ಮುಂತಾದ ಕಡೆಗಳಲ್ಲಿ ವಿಸ್ತರಿಸಿದ್ದಾರೆ.ಇಂಡೋನೇಷ್ಯಾ, ಬಾಲಿ,ಸಿಂಗಾಪುರ್, ಅಮೇರಿಕಾ ಮುಂತಾದ ದೇಶಗಳಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.ಇವರದ್ದು ಕೇವಲ ಕಾರ್ಯಕ್ರಮ ಕೇಂದ್ರಿತ ಜೀವನವಲ್ಲ.ಮನೆಯ ತೋಟ,ಗದ್ದೆಯ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಾರೆ.ತನ್ನಿಂದ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂಬ ಭಾವನೆಯಿಂದ ಯಕ್ಷಗಾನ ಕಲಾ ಮಿತ್ರಮಂಡಳಿಯವರು ಯಲ್ಲಾಪುರದಲ್ಲಿ ನಡೆಸುತ್ತಿರುವ ಯಕ್ಷಗಾನ ತರಬೇತಿ ಕೇಂದ್ರ ಆನಗೋಡ,ವಜ್ರಳ್ಳಿ, ಹಿಲ್ಲೂರು ಮುಂತಾದ ಕಡೆಗಳಲ್ಲಿ ಶಿಬಿರಗಳನ್ನು ನಡೆಸುತ್ತಿದ್ದಾರೆ.
*ಪ್ರಶಸ್ತಿಗಳು*
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದ ಭಾಗವತಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಇವರಿಗೆ ಸ್ವರ್ಣವಲ್ಲೀ ಶ್ರೀಗಳವರು ಪುರಸ್ಕರಿಸಿದ್ದು ದೊಡ್ಡ ಸನ್ಮಾನ ಎನ್ನುತ್ತಾರೆ ದಂತಳಿಗೆಯವರು.ಇವರು ಯಕ್ಷಗಾನ ಲೋಕವೇ ಹೆಮ್ಮೆ ಪಡುವಂತೆ ಮಾಡಿದ "ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ" ಪಡೆದ ಹೆಮ್ಮೆ ಇವರದ್ದು. ಈ ಮೊದಲು ಈ ಪ್ರಶಸ್ತಿ ಯಾವ ಯಕ್ಷಗಾನ ಕಲಾವಿದರ ಮುಡಿಗೇರಿರಲಿಲ್ಲ.ಅದಲ್ಲದೇ "ಹವ್ಯಕ ಸಾಧಕ"ಪ್ರಶಸ್ತಿ ಹೀಗೆ ಮುಂತಾದ ಸಮ್ಮಾನರಾದವರು ಅನಂತ ಹೆಗಡೆಯವರು.